ಬೇಡದ ಅತಿಥಿ ಸ್ಯಾಂಡಿ !

ಬೇಡದ ಅತಿಥಿ ಸ್ಯಾಂಡಿ !

ಸ್ಯಾಂಡಿ ಬಂದಳು, ನಿಂತು ತಿರುಗಿದಳು, ಚೆಲ್ಲಿ ಸುರಿದು ಹೋದಳು

ಬೇಡದ ಅತಿಥಿಯಾಗೇ ಬಂದು, ಹರಡಿಹಳು ಊರಲ್ಲೆಲ್ಲ ಇರುಳು

 
ಅವಳ ಒಡಲಲ್ಲಿ  ಇನ್ನೆಷ್ಟು ತುಂಬಿತ್ತೋ ಆಕ್ರೋಶ?
ಪುಣ್ಯಕ್ಕೆ ಹೊದ್ದಲಷ್ಟೇ category ಎರಡರ ರೋಷ
 
ಬಂದು ಓಡಾಡಿ, ನುಗ್ಗಿ ಚೆಲ್ಲಾಡಿ, ಕಿತ್ತಾಡಿ ಹೋದಳವಳು ಹೆಮ್ಮಾರಿ
ನಾ ಬಂದೆ, ನಾ ನೋಡ್ದೆ, ನಾ ಗೆದ್ದೆ ಎಂದಂತೆ ಶರಪಂಜರದ  ಕಾವೇರಿ
 
ಸ್ಯಾಂಡಿಯೂ ಕಾವೇರಿಯಂತೆ, ನಿಂತು ನೋಡುತ್ತ ಹರಿಸಿಹಳು ಕಣ್ಣೀರಧಾರೆ
ತಪ್ಪಿತಸ್ತೆ ನಾನಲ್ಲ, ಏಕೆ ದೂರುವಿರಿ? ನಾ ನಿಮಿತ್ತ ಮಾತ್ರ ಸೂತ್ರದಾರನೇ ಬೇರೆ
 
ನೀರಲ್ಲಿ ಮಿಂದ ಮನೆಗಳು, ಭೀತಿಯ ಮನಗಳು, ಹೊತ್ತೊಯ್ವ ತೆಪ್ಪಗಳು
ನೆನಪಿಗೆ ತಾರದೆ ಬಿಡಲಿಲ್ಲ ಗೊರೂರರ ಅಯ್ಯನ ಸಂಸಾರದ ಕಷ್ಟಕೋಟಲೆಗಳು
 
ಹೊಟ್ಟೆಗೆ ಹಿಟ್ಟಿಲ್ಲ, ಗಾಡಿಗೆ ಗ್ಯಾಸ್ ಇಲ್ಲ, ಗ್ಯಾಸಿನ ಬೆಲೆ ನಿತ್ಯ ಏರಿಹುದಲ್ಲ?
ಸಮಸ್ಯೆಗಳೂ ಪರಿಹಾರಗಳೂ ಸೇರದ ರೇಖೆಗಳಾಗಿಯೇ ಏರಿ ಎರಿ ಹೋದವಲ್ಲ?
 
ಎಲ್ಲೆಲ್ಲೂ ಮಳೆಯ ಧಾರೆ, ಭರದಿ ಬೀಸುವ ಗಾಳಿ, ನಿಂತ ನೀರಿನ ಆವರಣ
ಮಧ್ಯದಲೆಲ್ಲೋ ಹೊತ್ತುರಿದಿತ್ತು ಕೆಲವು ಮನೆಗಳು, ಅಗ್ನಿಗೂ ಇಲ್ಲ ಕರುಣ
 
ಸ್ಯಾಂಡಿಯ ಅಬ್ಬರದಿಂದ ಆಗಿಹುದಂತೆ ಐವತ್ತು ಬಿಲಿಯನ್ ನಷ್ಟ
ಚುನಾವಣೆಯ ಬಿಸಿಯನ್ನು ಥಣ್ಣಗಾಗಿಸಿದ್ದು ಅಭ್ಯರ್ಥಿಗಳಿಗೆ ಕಷ್ಟ
 
ನೀರ ಮಧ್ಯದಿ ನಿಂತ ಮನೆಗಳೋ, ಮನೆಗಳ ಸುತ್ತಲೂ ನಿಂತ ನೀರೋ?
ನೀರೆ ತುಂಬಿದಳು ಎಲ್ಲೆಲ್ಲೂ ನೀರು, ಉಪಯೋಗ ಮಾತ್ರ ಜೀರೋ !
 
ನಿಂತ ನೀರು, ಹೆಪ್ಪುಗಟ್ಟುವ ಛಳಿಗಳಿಂದ ಹಲವು ಕಾಯಿಲೆ ಹರಡಲಿದೆಯಂತೆ
ಗಾಯದ ಮೇಲೆ ಬರೆ ಎಳೆದಂತೆ, ಮತ್ತೊಂದು ಚಂಡಮಾರುತ ಬರಲಿದೆಯಂತೆ!
 
ಕತ್ತಲೆಯೇ ತುಂಬಿಹ ನಗರದಲ್ಲಿ ಬೆಳಕು ಹರಿಯಲಿ, ಆಗಲಿ ಇಂದೇ ದೀಪಾವಳಿ
ಮನುಜರ ತಪ್ಪನು ಮನ್ನಿಸು ತಾಯೇ, ದೂರವಿರಲಿ ನಮ್ಮಿಂದ ನೆರೆ ಹಾವಳಿ
 

Comments

Submitted by partha1059 Sat, 11/03/2012 - 08:27

ಉತ್ತಮ‌ ಕವನ‌ ಶ್ರೀನಾಥ್ ಸ್ಯಾ0ಡಿ ಅಮೇರಿಕ‌ ಜನತೆಗೆ ಚ0ಡಿಯಾಗಿ ಬ0ದಳು ಅಲ್ಲಿನ‌ ನೋವು ನಲಿವನ್ನು ಕಣ್ಣಿಗೆ ಕಾಣಿಸಿದ್ದೀರಿ ಅಭಿನ0ದನೆಗಳು
Submitted by Prakash Narasimhaiya Sat, 11/03/2012 - 15:18

In reply to by partha1059

ಆತ್ಮೀಯ ಶ್ರೀನಾಥ ಭಲ್ಲೆಯವರೇ, ಸ್ಯಾಂಡಿ ಚ್ಯಾಂಡಿಯಾಗಿ ನಿಧಾನಕ್ಕೆ ಚಂಡಿಯಾಗಿ ರಚ್ಚೆ ಹಿಡಿದು, ರಂಪ ಮಾಡಿ ಗೊಳುಹುಯ್ದುಕೊಂಡು, ಕಷ್ಟ ಕೊಟ್ಟು, ಸಾಕಷ್ಟು ನಷ್ಟಮಾಡಿ ಮುಖ ತಿರುಗಿಸಿಕೊಂಡು ಹೋದ ಚಂಡಿಕಥೆಯನ್ನು ಹರಿಕಥೆಯ ರೂಪದಲ್ಲಿ ಬರೆದು ನಿಮ್ಮ ಮನದಾಳದ ಮಾತನ್ನು ಹೇಳಿದ್ದಿರಿ. ಉತ್ತಮವಾದ ಪ್ರಸ್ತುತಿ. ಧನ್ಯವಾದಗಳು.
Submitted by bhalle Sat, 11/03/2012 - 17:49

In reply to by Prakash Narasimhaiya

ಧನ್ಯವಾದಗಳು ಪ್ರಕಾಶ್ ... ಕ್ರಿಶ್ಚಿಯನ್ ನಾಡಿನಲ್ಲಿ ಆದ ದುರಂತವನ್ನು, ಮೌಲ್ವಿ ಸಾಹೇಬರ ಕಟುನುಡಿಗಳಿಂದ ಪ್ರೇರಿತನಾಗಿ, ಹರಿಕಥೆಯ ರೂಪದಲ್ಲಿ ಹೇಳಿದೆ :-) ಹರಿಕೇನ್ ಕಥೆಯನ್ನು ಹರಿಕಥೆಯ ರೂಪದಲ್ಲಿ ಹೇಳುವುದೇ ಲೇಸು. ಏನಂತೀರಿ ? ಮೌಲ್ವಿ ಸಾಹೇಬರ ಮಾತುಗಳನ್ನು ಅವರ ಜನರೇ (ಮುಸ್ಲಿಮ್) ಒಪ್ಪಲಿಲ್ಲ ... ದ್ವೇಷ ಇರಬಹುದು ಆದರೆ ಅಮೇರಿಕದ ಎಲ್ಲ ಕಟ್ಟಡಗಳೂ ನಾಶವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದಾಗ ಮನಕ್ಕೆ ಹಿಂಸೆಯಾಯಿತು ... ಹಾಗಾದಾಗ, ಅವರ ಜನರೇ ಎಷ್ಟು ಮಂದಿ ಸಾವನ್ನಪ್ಪಬಹುದು ಎಂಬ ಎಣಿಕೆ ಅವರಿಗಿದೆಯೇ?
Submitted by Prakash Narasimhaiya Sat, 11/03/2012 - 20:40

In reply to by bhalle

ಆತ್ಮೀಯ ಭಲ್ಲೇಜಿ, ನಿಮ್ಮ ಮಾತು ಖಂಡಿತ ಒಪ್ಪುತ್ತೇನೆ. ಇಸ್ಲಾಂ ಎಂದರೆ ಶಾಂತಿ ಎಂದರ್ಥ. ಆದರೆ, ಅದನ್ನು ಆಚರಿಸುವ ಕೆಲ ಜನಕ್ಕೆ, ಮೌಲ್ವಿ ಎಂಬ ಹುದ್ದೆ ಏರಿದ ಕೆಲವರಿಗೆ ಮಾನವೀಯತೆಯೇ ಇಲ್ಲದಿರುವುದು ನಿಜಕ್ಕೂ ಅಸಹ್ಯ ತರಿಸುತ್ತದೆ. ಧರ್ಮ ಬಂದ ನಂತರ ಮಾನವ ಅಲ್ಲ, ಮಾನವನ ನಂತರವೇ ಧರ್ಮ ಉದಯವಾಗಿರುವುದು ಎನ್ನುವ ವಿಚಾರ ಗೊತ್ತಿಲ್ಲದ ವಿವೇಕಶೂನ್ಯರಿಗೆ ಏನೂ ಹೇಳಲಾಗುವುದಿಲ್ಲ. ಇಲ್ಲಿ ಆಸ್ಕರ್ ವೈಲ್ಡ್ ನ ಮಾತು ಜ್ಞಾಪಕಕ್ಕೆ ಬರುತ್ತಿದೆ. " When ignorance is the bliss, It is folly to be wise ". ನಿಮ್ಮ ವಿಚಾರಪೂರ್ಣ ಮಾತುಗಳಿಗೆ ಧನ್ಯವಾದಗಳು.
Submitted by bhalle Sat, 11/03/2012 - 21:23

In reply to by Prakash Narasimhaiya

ನಿಜ ... ಏನು ಹೇಳಲಾಗುವುದಿಲ್ಲ :-( ಸಮಾಜದಲ್ಲಿ ನಾವುಗಳು ತಿಳಿಯದವರು ಏಕೆಂದರೆ ನಾವು ಆ ಪೀಠದಲ್ಲಿಲ್ಲ :-( ಧನ್ಯವಾದಗಳು ಪ್ರಕಾಶ್
Submitted by bhalle Sat, 11/03/2012 - 17:42

In reply to by partha1059

ಧನ್ಯವಾದಗಳು ಪಾರ್ಥರೇ ... ಅಮೇರಿಕದ ಮಾಧ್ಯಮ ತಮ್ಮ ಜನರನ್ನೇ ಕೇಂದ್ರೀಕರಿಸಿದರೂ, ನಮ್ಮ ಜನರೂ ಇದೇ ಕಷ್ಟಗಳಿಗೆ ಆಹುತಿಯಾಗಿದ್ದಾರೆ ಎಂಬುದಂತೂ ನಿತ್ಯಸತ್ಯ :-(
Submitted by ಗಣೇಶ Sat, 11/03/2012 - 23:19

"ಶರಪಂಜರದ ಕಾವೇರಿ" >>ಸ್ಯಾಂಡಿಯೂ ಕಾವೇರಿಯಂತೆ, ನಿಂತು ನೋಡುತ್ತ ಹರಿಸಿಹಳು ಕಣ್ಣೀರಧಾರೆ ತಪ್ಪಿತಸ್ತೆ ನಾನಲ್ಲ...,---ಹೋಲಿಕೆ, ಕವನ ಚೆನ್ನಾಗಿದೆ. -ಗಣೇಶ.