ಮದುವೆ ಮಂಟಪದಲ್ಲಿ ನಿನ್ನೆ… ಒಂದು ಮದುವೆಯ ನೈಜ ಘಟನೆ...
ಆ ಕಲ್ಯಾಣ ಮಂಟಪದ ವೇದಿಕೆಯ ಎಡಗಡೆಗೆ ಹುಡುಗಿಯ ಕೊಠಡಿ ಮತ್ತು ಬಲಗಡೆಗೆ ಹುಡುಗನ ಕೊಠಡಿಯಿತ್ತು. ಹುಡುಗಿಯ ಕಡೆಯವನಾದ ನಾನು, ಸ್ನಾನಕ್ಕೆಂದು ಹುಡುಗನ ಕೊಠಡಿಯಲ್ಲಿರುವ ಸ್ನಾನದ ಮನೆ ಕಡೆ ಹೊರಟೆ. ಅಷ್ಟಕ್ಕೇ ಹುಡುಗನ ಗೆಳೆಯ 'ಹೆಲೋ, ನಾನು ಸ್ನಾನಕ್ಕೆ ಹೋಗ್ಬೇಕು' ಎಂದ.
'ಓಹ್ ಸಾರಿ, ಹೊರಡಿ' ಎಂದು ಸೌಜನ್ಯ ತೋರಿಸಿ ಕುಳಿತುಕೊಂಡೆ. ಒಬ್ಬ ಹೊರಟ, ಅಷ್ಟಕ್ಕೇ ಹೊರಡಲು ಮತ್ತೊಬ್ಬ ತಯಾರಾದ, ಅವನ ಹಿಂದೆ ಇನ್ನೊಬ್ಬ. ನಾನು ಹೆಣ್ಣಿನ ಕಡೆಯವನಲ್ಲವೇ ಎಂದು ಸುಮ್ಮನೆ ಕುಳಿತುಕೊಂಡೆ! ಮಧುಮಗನನ್ನೊಮ್ಮೆ ತಿರುಗಿ ನೋಡಿದೆ. ಮಂಚದ ಮೇಲೆ ಏನೋ ವಿಶಿಷ್ಟ ಗತ್ತು ಅನ್ನುವುದಕ್ಕಿಂತಲೂ ಅಹಂಕಾರದಲ್ಲಿಯೇ ಕಾಲಮೇಲೆ ಕಾಲನಿಟ್ಟು ಕುಳಿತಿದ್ದ. ಪಕ್ಕದಲ್ಲಿಯೇ ಇದ್ದ ಅವನ ಗೆಳೆಯ 'ಲೋ ಮಚ್ಚಾ, ಛತ್ರ ಮಾತ್ರ ಸೂಪರ್, ಎಲ್ಲಾ ರೂಮ್ಸು ಒಳ್ಳೇ ಫೈವ್ ಸ್ಟಾರ್ ಹೋಟೆಲ್ ರೂಂ ರೀತಿನೇ ಇವೆ, ತುಂಬಾ ದೊಡ್ಡದಾಗಿವೆ, ಎಷ್ಟೋ ಬಾಡಿಗೆ?' ಎಂದ.
'ಬರೆ ಐವತ್ತು ಸಾವಿರ ರೂ ಕಣೋ', ಐವತ್ತು ಸಾವಿರವೆಂದರೆ ಬಿಡಿಗಾಸೇನೋ ಎಂಬಂತೆ ನುಡಿದನಾತ.
ಅಷ್ಟಕ್ಕೆ, ಅಲ್ಲಿಗೆ ಬಂದ ಮತ್ತೊಬ್ಬಳು ಹೆಂಗಸು, ಹುಡುಗನ ತಾಯಿಯ ಬಳಿ 'ಬೆಳಗ್ಗೆಗೆ ಟೀ ಮಾತ್ರ ಮಾಡಿದ್ದಾರೆ, ಬಜ್ಜಿ ಮಾಡಿಸುವುದಲ್ಲವೇ?' ಎಂದಳು.
ಕೆಂಡಮಂಡಲನಾದಂತೆ ಕಂಡ ಹುಡುಗ ಕೂಡಲೇ ಹೆಣ್ಣಿನ ಕಡೆಯವರಿಗೆ ಫೋನಾಯಿಸಿ ಬಜ್ಜಿ ಮಾಡಿಸಲೇಬೇಕೆಂದು ಹಠ ಹಿಡಿದ. ಹಲ್ಲು ಕಚ್ಚಿಕೊಂಡು ಕೇಳಿಸಿಕೊಂಡ ಹೆಣ್ಣು ಹೆತ್ತವರು, ಈ ಸಮಯದಲ್ಲಿ ಆಗುವುದಿಲ್ಲ, ಅದು ಇದು ಎಂಬ ಸಬೂಬು ಹೇಳಿದರೂ, ಕೊನೆಗೆ ಸೋತು ಬಜ್ಜಿಗೆ ತಯಾರು ಮಾಡಲಾಯಿತು. ಗುಂಡಣ್ಣ ಎಣ್ಣೆ ಕಾಯಿಸುವಷ್ಟರಲ್ಲಿ ಹೆಣ್ಣಿನಪ್ಪ ಓಡಿಹೋಗಿ ಬಾಳೆಕಾಯಿ ತಂದ, ಒಂದಷ್ಟು ಜನ ಸರಸರನೆ ಬಾಳೆಕಾಯಿಯನ್ನು ಕೂಯ್ದರು. ಕೊನೆಗೂ ಬಜ್ಜಿ ಮಾಡಿ ಕೊಡಲಾಯಿತು. ಮತ್ತೆ ಚಟ್ನಿ ಇಲ್ಲವೆಂದು ತಗಾದೆ ತೆಗೆದರು. ಅದನ್ನೂ ಮಾಡಲಾಯಿತು. ಹುಡುಗನ ಕಡೆ ಒಮ್ಮೆ ನೋಡಿದೆ. ಮತ್ತೂ ಧಿಮಾಕಿನವನಂತೆ ಕಾಣುತ್ತಿದ್ದ. ಜೊತೆಗಾರರಿಗೆ ತಾನೂ, ತನ್ನತನವೆಂದರೆ ಮೇಲ್ಮಟ್ಟದ್ದು, ಬಹಳ ಶ್ರೇಷ್ಟದ್ದು, ಎಂದು ತೋರಿಸಿಕೊಳ್ಳುವುದರಲ್ಲಿಯೇ ಮಗ್ನನಾಗಿದ್ದ. ಅವನ ಪಕ್ಕದಲ್ಲಿದ್ದ ಹೆಂಗಸರೂ ತಾವೂ ಮಹಾನ್ ಸುಶಿಕ್ಷಿತರು, ತಮ್ಮ ಸಂಬಂಧ ಬೆಳೆಸುವುದಕ್ಕೆ, ಹೆಣ್ಣಿನ ಕಡೆಯವರು ವಿಶೇಷ ಪುಣ್ಯ ಹೊತ್ತು ಬಂದಿರಬೇಕು ಎಂಬಂತೆ ನಾಟಕವಾಡುತ್ತಿದ್ದರು. ಬಂದ ನೆಂಟರಿಷ್ಟರಿಗೆ ತಮ್ಮ ಪಂಚತಾರಾ ಮಾದರಿಯ ಆತಿಥ್ಯ ನೀಡುತ್ತಿದ್ದದ್ದು ನನಗೆ ಆ ಕ್ಷಣದ ಹಾಸ್ಯವಾಗಿತ್ತು.
ಈ ಅರ್ಧಬೆಂದ ಮಡಕೆಗಳ ಶಬ್ದವನ್ನು ಸಾವಧಾನವಾಗಿ ಕೇಳಿಸಿಕೊಂಡು, ಕೊನೆಗೂ ಸ್ನಾನ ಮುಗಿಸಿ ಹೊರಗೆ ಬಂದು ಅಲ್ಲೇ ಇದ್ದ ಚೇರಿನಲ್ಲಿ ಕುಳಿತು ಸುತ್ತಲಿನ ಪಿಸುಗುಟ್ಟುವಿಕೆಯನ್ನು ಕೇಳಿಸಿಕೊಳ್ಳತೊಡಗಿದೆ.
'ಹುಡುಗನಿಗೆ ಕೆಲಸವೇ ಇಲ್ಲ, ಜೊತೆಗೆ ಅದೆಷ್ಟೋ ಲಕ್ಷ ಸಾಲ ಮಾಡಿಕೊಂಡಿದ್ದಾನೆ'
'ಹುಡುಗನಿಗೆ 60 ಸಾವಿರದ ಬೈಕೊಂದನ್ನು ಕೊಡಿಸಿದ್ದಾರೆ, ಜೊತೆಗೆ 30 ಗ್ರಾಂ ಚಿನ್ನ, ಮೂರು ಮೂರು ಸಾವಿರದ ಐದು ಜೊತೆ ಬಟ್ಟೆ ಹೊಲೆಸಿದ್ದಾರೆ, ಆತ ಕಾರನ್ನೇ ಕೊಡಿಸಬೇಕೆಂದು ಬೊಬ್ಬೆ ಹೊಡೆದನಂತೆ'
'ಪಾಪ, ಅವರು ಅವರ ಮನೆ ಮುಂದೆಯೇ ಮದುವೆ ಮಾಡಿಕೊಡಲು ತಯಾರಿದ್ದರಂತೆ, ಹುಡುಗ ಮತ್ತು ಆತನ ತಾಯಿ ಇಷ್ಟು ದೊಡ್ಡ ಛತ್ರವೇ ಬೇಕು ಎಂದು ಹಠ ಹಿಡಿದರಂತೆ'
'ನಮ್ಮೂರಿನಿಂದ ಸಾವಿರ ಜನ ಬರ್ತಾರೆ ಎಂದು ಹೇಳಿ ಎರಡು ಬಸ್ಸು ಮಾಡಿಸಿಕೊಂಡಿದ್ದರಂತೆ, ಇಲ್ಲಿ ನೋಡಿದರೆ ಇಷ್ಟು ದೊಡ್ಡ ಛತ್ರ ಬಣಗುಡುತ್ತಿದೆ, ನೂರು ಜನರೂ ಬಂದಿಲ್ಲ, ಪಾಪ ಸಾಲ-ಸೋಲ ಮಾಡಿ ಸಾವಿರ ಜನರ ಮೇಲೆ ಅಡುಗೆ ಮಾಡಿಸಿದ್ದಾರೆ, ಎಲ್ಲವನ್ನೂ ಸುರಿಯುವುದೊಂದೇ ಬಾಕಿ'
'ಅಯ್ಯೋ, ಕೊನೆ ಕೊನೆಗೆ ಮದುವೆ ನಿಂತು ಹೋಗುವ ಹಂತಕ್ಕೆ ಬಂದುಬಿಟ್ಟಿತ್ತು. ಹುಡುಗನ ಕಡೆಯವರು ಮದುವೆ ಮುಂದಿನ ವರ್ಷಕ್ಕೆ ದೂಡಿ, ಸದ್ಯ ದುಡ್ಡು ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು, ಛತ್ರಕ್ಕೆ ಕೊಟ್ಟಿದ್ದ 30 ಸಾವಿರ ಅಡ್ವಾನ್ಸ್ ದುಡ್ಡು ಕೂಡ ಕೈ ತಪ್ಪುವುದಿತ್ತು, ಎಷ್ಟೇ ಹೇಳಿದರೂ ಒಪ್ಪದಿದ್ದಾಗ, ಕೊನೆಗೆ ಹುಡುಗನ ತಾಯಿಯೇ ಚಿನ್ನ ಅಡವಿಗಿಟ್ಟು ದುಡ್ಡು ಹೊಂದಿಸಿಕೊಟ್ಟಳಂತೆ'
'ಬಡವರಿಗೆ ಸಿರಿವಂತರ ಮದುವೆ ವ್ಯಾಪಾರ ತಿಳಿಯದು, ಆದರೂ ಹುಡುಗನ ತಾಯಿ ಬಂದವರಿಗೆಲ್ಲಾ ಫೋಟೋ ವಿಡಿಯೋ ತೆಗೆಸಲೇಬೇಕೆಂದು ಹಠ ಹಿಡಿದಳು, ಆಕೆಯೋ ಸಿಡುಕುಮೂತಿಯವಳು, ಸೊಸೆ ಅದೆಷ್ಟು ದಿನ ಬಾಳುತ್ತಾಳೋ? ಒಟ್ಟಿನಲ್ಲಿ ಹುಡುಗಿಯ ಮನೆಯವರು ಸಾಯುವವರೆವಿಗೂ ಸುಲಿಗೆ ಇದ್ದದ್ದೆ. ಮದುವೆ ನಂತರ ಹುಡುಗಿ ನೆಮ್ಮದಿಯಾಗಿರುತ್ತಾಳೆ ಎಂಬ ನಂಬಿಕೆ ನನಗಿಲ್ಲ’
'ಇಷ್ಟೆಲ್ಲಾ ಹೇಳಿದವರು ಮುಂದೆ ಕಾಟ ಕೊಡದಿರುವರೇ? ಅವರು ಮದುವೆ ನಿಲ್ಲಿಸಿ ಎಂದು ಹೇಳಿದಾಗ ನಿಲ್ಲಿಸಿಬಿಟ್ಟಿದ್ದರೆ ಆಗುತ್ತಿತ್ತು. ಹೆಣ್ಣು ಹೆತ್ತವರು ಎಲ್ಲಿ ಮದುವೆ ನಿಂತುಹೋಗುವುದೋ ಎಂಬ ಆತಂಕದಲ್ಲಿ ಎಲ್ಲದಕ್ಕೂ ತಲೆ ಬಾಗಿಸಿಕೊಂಡು ಬಂದಿದ್ದಾರೆ, ಪಾಪ’
'ಅಯ್ಯೋ! ಆ ಹುಡುಗಿ ಸರಿ ಇದ್ದಿದ್ದರೆ ಇಷ್ಟೆಲ್ಲಾ ಆಗುತ್ತಿತ್ತೆ. ಮದುವೆ ನಿಶ್ಚಯಕ್ಕಿಂತ ಒಂದು ವಾರ ಮುಂಚೆಯೇ ಎದುರು ಮನೆ ಹುಡುಗನ ಜೊತೆ ಹೊರಟುಹೋಗಲು ತಯಾರಿದ್ದಳಂತೆ! ಆ ಸಮಯದಲ್ಲಿ ಈ ಹುಡುಗ ಸಿಕ್ಕಿದ್ದಾನೆ, ಈಗ ಒಂದು ರೂಪಾಯಿಯೂ ಖರ್ಚು ಮಾಡದೆ ಆಟ ಆಡಿಸುತ್ತಿದ್ದಾರೆ ಅಷ್ಟೆ!'
ನನ್ನೊಳ ಶಾಂತ ಮನಸ್ಸು ಒಳಗೊಳಗೆ ನಗುತ್ತಿತ್ತು. ಆಕೆ ಪ್ರೀತಿಸಿದವನಿಗೆ ಕೊಟ್ಟು ಮದುವೆ ಮಾಡಿದ್ದರೆ ಇಷ್ಟೆಲ್ಲಾ ರಾದ್ಧಾಂತವಾಗುತ್ತಿರಲಿಲ್ಲವಲ್ಲವೇ? ಎಂದುಕೊಳ್ಳುವಷ್ಟರಲ್ಲಿ 'ಆ ದರಿದ್ರ ಜಾತಿಯವನ ಜೊತೆ ಓಡಿಹೋಗಲು ತಯಾರಿದ್ದ ಇವಳು ಮಿಟಕಲಾಡಿಯೇ ಸರಿ, ಈ ಸಂಬಂಧವೂ ಸರಿಬರುತ್ತಿಲ್ಲ, ಜನರ ಬಾಯಿ ತಪ್ಪಿಸಲು ಗಾಬರಿಯಲ್ಲಿ ಒಪ್ಪಿಕೊಂಡಿದ್ದು, ಮದುವೆ ನಿಲ್ಲಿಸೋಣ ಎಂದಾಗ ಇವಳು ಮತ್ತೆ ಒಪ್ಪಿಕೊಳ್ಳಲಿಲ್ಲ' ಎಂದಳೊಬ್ಬಳು.
ಬೇಸರಗೊಂಡ ನಾನು ಒಮ್ಮೆ ಕಲ್ಯಾಣ ಮಂಟಪ ಸುತ್ತಿ ಬಂದೆ. ತುಂಬಾ ವಿಸ್ತಾರವಾಗಿತ್ತು. ಜನಗಳೇ ಇರಲಿಲ್ಲ. ಅರೆಬೆಂದ ಗಂಡಿನ ಕಡೆಯವರ ದೌಲತ್ತು ನೋಡಿ ಹೇಸಿಗೆಯಾಯಿತು. ತಿಂದು ಬೀಸಾಡಿದ ಎಲೆಗಳ ಮೇಲೆ ಮೃಷ್ಟಾನ್ನ ಭೋಜನ ಕಸದೊಳಗೆ ಕಸವಾಗಿ ಕೊಳೆಯುತ್ತಿತ್ತು. ಮದುವೆ ಮುಗಿಯುವವರೆವಿಗೂ ಟೀ-ಕಾಫಿ ಸಿಗಲೆಂದು ಅಲ್ಲಲ್ಲಿ ಡ್ರಂ ಗಳಲ್ಲಿ ತುಂಬಿಸಿಟ್ಟಿದ್ದರು.
-
ಒಂದು ಮಗು ಜನಿಸುವ ಖುಷಿಯಲ್ಲಿಯೇ ಗಂಡ ಹೆಂಡತಿ ಅರಳಿಬಿಟ್ಟಿರುತ್ತಾರೆ. ನಂತರ ಅದರ ಹೇಸಿಗೆ ತೊಳೆದು, ಎದೆ ಹಾಲು ಕುಡಿಸಿ, ಮೈ ಹುಷಾರು ತಪ್ಪಿದರೆ ಆಸ್ಪತ್ರೆ-ದೇವಾಸ್ಥಾನವೆಂದು ಸತ್ತಾಡಿ, ಅದಕ್ಕೊಂದಷ್ಟು ಆಸ್ತಿ ಮಾಡಿ, ಹೆಜ್ಜೆ ಹೆಜ್ಜೆಗೂ ಕಾವಲು ನಿಂತು, ಓದಿಸಿ ಮುದ್ದಿಸಿ ಲಾಲಿಸಿ ಪಾಲಿಸಿ ಬೆಳೆಸುತ್ತಾರೆ. ಆ ಮಗು ತಂದೆ ತಾಯಿಯ ಸ್ವತ್ತು. ಹೆಣ್ಣು ಮಗುವಾಗಿದ್ದರೆ ಅದನ್ನು ಮತ್ತೊಬ್ಬ ಹುಡುಗನಿಗೆ ಧಾರೆ ಎರೆದುಕೊಡುವಾಗ ಆ ಕ್ಷಣಕ್ಕೆ ತಮ್ಮ ಆಸ್ತಿಯನ್ನು ವ್ಯಾಪಾರದ ದೃಷ್ಟಿಯಲ್ಲದಿದ್ದರೂ ಲೌಕಿಕ ಜಗತ್ತಿನಲ್ಲಿ ಮತ್ತೊಬ್ಬನ ಸುಪರ್ದಿಗೆ ಕೊಟ್ಟಂತೆ. ಕಾಲು ತೊಳೆದುಕೊಡುವುದೇ ಯಾರೋ ಹದುಗಿದ ವಿಷಬೀಜ. ಆ ಮನೆಗೆ ಧಾವಿಸಿದಾಕೆ ಗಂಡನೆನಿಸಿಕೊಂಡವನಿಗೆ, ಅತ್ತೆ ಮಾವ, ಮೈದುನ ನೆಂಟರಿಗೆ ಪ್ರತಿದಿನ ಬೇಯಿಸಿ ಉಣ್ಣಿಸಬೇಕು. ಸಾಕಿ ಸಲಹಿ ಬೆಳೆಸಿದವರು ಎಲ್ಲೋ ಇರಲು, ಅವಳು ಹೊಸಬರೆನಿಸಿಕೊಂಡವರಿಗೋಸ್ಕರ ದುಡಿಯಬೇಕು. ಕಾರಣವೇ ಇಲ್ಲದೆ ಅವರ ಖುಷಿಗೋಸ್ಕರ ಜೀವ ಸವೆಸಬೇಕು.
ಅವರ ಕೊಳಕು ಬಟ್ಟೆಗಳನ್ನು ಸ್ವಚ್ಛಗೊಳಿಸಬೇಕು, ಮನೆ ಗುಡಿಸಬೇಕು, ತಾರಿಸಬೇಕು, ಪಾತ್ರೆ-ಪದಾರ್ಥ ತೊಳೆಯಬೇಕು, ಎಷ್ಟೋ ದೂರದಿಂದ ನೀರು ಹೊತ್ತು ತರಬೇಕು. ಹಸಿದಿರದಿದ್ದರೂ ಅಡುಗೆ ಮಾಡಬೇಕು. ಇದೆಲ್ಲದರ ಜೊತೆಗೆ ಗಂಡನ ಮಗ್ಗುಲಲ್ಲಿ ಮಲಗಿಕೊಂಡು ಅವನ ಆಸೆ ನೀಗಿಸಬೇಕು. ಮಗುವನ್ನು ಹೊಟ್ಟೆಯಲ್ಲಿ ಹೊತ್ತು ನೋವು, ಸಂಕಟ ತಾಳಬೇಕು. ಪ್ರಸವ ವೇದನೆ ಸಹಿಸಿ ಹೆರಬೇಕು, ಕಂದನ ಮಗ್ಗುಲಲ್ಲಿಯೇ ಮಲಗಿ ಸರಿಹೊತ್ತಿನಲ್ಲಿಯೂ ಎಚ್ಚರವಿದ್ದು ಹಾಲುಣಿಸಬೇಕು. ಅತ್ತರೆ ಸಂತೈಸಬೇಕು. ಅದೇ ಮಕ್ಕಳಿಗೋಸ್ಕರ ಮತ್ತೆ ದುಡಿಯಬೇಕು.
ಮದುವೆ ಮಾಡಿಕೊಟ್ಟ ಹುಡುಗಿಯಿಂದ ಹೆತ್ತವರು ಇಷ್ಟೆಲ್ಲಾ ಕೆಲಸ ಮಾಡಿಸುವ ಪರಿಸ್ಥಿತಿ ಬಂದೊದಗುವಾಗ, ಹುಡುಕಿ ಹುಡುಕಿ ಹುಡುಗಿಯನ್ನು ಗೊತ್ತು ಮಾಡಿಕೊಳ್ಳುವವರೇ ಪ್ರತಿ ಖರ್ಚನ್ನು ನೋಡಿಕೊಳ್ಳಬೇಕೆಂಬುದೇ ಸಾರ್ವಕಾಲಿಕವೆನಿಸುತ್ತದೆ. ಹೆಣ್ಣು ಹೆತ್ತವರೇ ಗಂಡಿನ ಪಾದ ತೊಳೆದು ಮದುವೆ ಮಾಡಿಕೊಡುವುದೆಂತು ಸರಿ...? ಎಂದುಕೊಳ್ಳುವಷ್ಟರಲ್ಲಿಯೇ ಹುಡುಗನ ಮನೆಯವರು ಮತ್ತೆ ಏನೋ ವಿಚಾರಕ್ಕೆ ಜಗಳ ತೆಗೆದಿದ್ದರು.
Comments
ಮೊಹನ್ ಅವ್ರೇ ಮೀಸೆ ಹೊತ್ತ
In reply to ಮೊಹನ್ ಅವ್ರೇ ಮೀಸೆ ಹೊತ್ತ by venkatb83
ಧನ್ಯವಾದಗಳು ಸರ್.. ನನ್ನ ಒಟ್ಟು