ಸಾವು

ಸಾವು

ಗೋವರ್ಧನರಾಯರ ಮನೆಯಲ್ಲಿ ಗಲಾಟೆ ತಾರಕಕ್ಕೇರಿತ್ತು. ಸುನಂದಮ್ಮ ಒಂದು ಕಡೆ ಏನೂ ಮಾತಾನಾಡದೆ ಗಂಡನ ಕೋಪವನ್ನು ನೋಡುತ್ತಾ ಅಡಿಗೆ ಮನೆಯ ಹೊಸ್ತಿಲಲ್ಲಿ ತಮ್ಮ ಸೆರಗನ್ನು ಮುಖಕ್ಕೆ ಅಡ್ಡ ಹಿಡಿದು ಮೂಕವಾಗಿ ನಿಂತಿದ್ದರು. ಗೋವರ್ಧನರಾಯರು ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಮಗನೂ ಏನೂ ಮಾತನಾಡದೆ ಸುಮ್ಮನೆ ನಿಂತಿದ್ದ.


ರಾಯರು ಮುಂಚೆ ಹೀಗಿರಲಿಲ್ಲ. ಬಹಳ ಸಾಧು ಸ್ವಭಾವದವರಾಗಿದ್ದರು. ಕಳೆದ ವರ್ಷವಷ್ಟೇ ಅರವತ್ತು ವರ್ಷದ ಶಾಂತಿಯನ್ನು ಭರ್ಜರಿಯಾಗೇ ಮಾಡಿಕೊಂಡಿದ್ದರು. ಅದಾದ ಸ್ವಲ್ಪ ದಿನಗಳಲ್ಲೇ ಅವರ ವರ್ತನೆಯಲ್ಲಿ ಬದಲಾವಣೆಗಳು ಕಂಡು ಬಂದಿತ್ತು. ಸುಮ್ಮ ಸುಮ್ಮನೆ ಮಕ್ಕಳ ಮೇಲೆ ಸಿಡುಕುವುದು, ಹೆಂಡತಿಯ ಮೇಲೆ ಸಿಡುಕುವುದು ಮಾಡುತ್ತಿದ್ದರು


ಅದು ವಯಸಿನ ಪ್ರಭಾವವೋ ಅಥವಾ ಮಕ್ಕಳ ಮುಂದೆ ತಾನು ಕಮ್ಮಿ ಆಗಬಾರದೆಂಬ ಅಹಮಿಕೆಯಿಂದಲೋ ಒಟ್ಟಿನಲ್ಲಿ ಎಲ್ಲರ ಮೇಲೂ ಕೂಗಾಡುತ್ತಿದ್ದರು. ಎರಡು ಮೂರು ಸಲ ಸುನಂದಮ್ಮ ಯಾಕೆ ಹೀಗೆ ಸುಮ್ಮನೆ ಸಿಡುಕುತ್ತೀರಾ ಎಂದು ಕೇಳಿದ್ದಕ್ಕೆ ಅದಕ್ಕೂ ಮಂಗಳಾರತಿ ಮಾಡಿದ್ದರು. ಏನೇ ನನಗೆ ವಯಸಾಯ್ತು ಅರಳು ಮರಳು ಆಗಿದೆ ಎಂದುಕೊಂಡಿದ್ದೀರ ಎಲ್ಲರೂ? ನಾನು ಮುಂಚೆ ಹೇಗಿದ್ದೇನೋ ಈಗಲೂ ಹಾಗೆಯೇ ಇದ್ದೇನೆ. ನಾನೇನೂ ಬದಲಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದರು


ಅಂದೂ ಸಹ ಮಗ ಕೃಷ್ಣ ಯಾವುದೋ ವಿಷಯಕ್ಕೆ ರಾಯರಿಗೆ ಎದುರುತ್ತರ ಕೊಟ್ಟಿದ್ದ. ಅಷ್ಟಕ್ಕೇ ರಾಯರು ಜೋರಾಗಿ ಕೂಗಾಡುತ್ತಿದ್ದರು. ಈ ಮನೆಯಲ್ಲಿ ಯಾರಿಗೂ ನನ್ನನ್ನು ಕಂಡರೆ ಗೌರವ, ಭಯ ಭಕ್ತಿ ಇಲ್ಲ. ಎಲ್ಲರೂ ಅವರವರ ದಾರಿಯಲ್ಲಿ ಹೋಗುತ್ತೀರಾ. ಮನೆಯಲ್ಲಿ ನಾನೊಬ್ಬ ಹಿರಿತಲೆ ಇದ್ದೀನಿ, ನನ್ನ ಮಾತಿಗೆ ಸ್ವಲ್ಪ ಗೌರವ ಕೊಡಬೇಕು ಎಂದು ಯಾರಿಗೂ ಇಲ್ಲ. ಇನ್ನು ಬದುಕಿದ್ದು ಏನು ಪ್ರಯೋಜನ. ನಾನು ಸತ್ತರೆ ನಿಮಗೆಲ್ಲ ನೆಮ್ಮದಿ ಎನಿಸುತ್ತದೆ.


ಅಪ್ಪ ಯಾಕೆ ಸುಮ್ಮನೆ ಕೆಟ್ಟ ಮಾತು ಆಡುತ್ತೀರ? ಎಂದ ಮಗ ಕೃಷ್ಣ. ಅಷ್ಟರಲ್ಲಿ ಆಚೆ ಬಂದ ಸುನಂದಮ್ಮ ಏನ್ರೀ ಶುಕ್ರವಾರ ಏನು ಮಾತು ಅಂತ ಆಡುತ್ತೀರ?


ಹೌದು ಕಣೆ ನಿನಗೂ ನಾನೆಂದರೆ ಗೌರವ ಕಮ್ಮಿ ಆಗಿದೆ. ನಿನಗೆ ನಿನ್ನ ಮಕ್ಕಳೇ ಜಾಸ್ತಿ ಏನಾದರೂ ಮಾಡಿಕೊಳ್ಳಿ ಎಂದು ಮಲಗಲು ಹೋದರು.


ಸ್ವಲ್ಪ ಹೊತ್ತಿನ ನಂತರ ಎಚ್ಚರವಾಯಿತು. ಏನಿದು ಇಷ್ಟು ಬೇಗ ಬೆಳಗಾಯಿತೇ!! ಎಂದು ಆಚೆ ಬಂದರೆ ಸುನಂದಮ್ಮ ಕಸ ಬಳಿದು ರಂಗೋಲಿ ಹಾಕುತ್ತಿದ್ದರು. ಏನೇ ಸ್ವಲ್ಪ ಕಾಫಿ ಕೊಡ್ತೀಯ ಎಂದು ಕೇಳಿದರು ರಾಯರು. ರಾಯರು ಕೇಳಿದ್ದು ಕೇಳಿಸಲೇ ಇಲ್ಲವೇನೋ ಎಂದು ಸುನಂದಮ್ಮ ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಮತ್ತೊಮ್ಮೆ ಜೋರಾಗಿ ಏನೇ ಒಂದು ಸಲ ಕೇಳಿದರೆ ಕಿವಿಗೆ ಬೀಳುವುದಿಲ್ಲವ? ಊಹುಂ...ಸುನಂದಮ್ಮನಿಗೆ ಕೇಳಿಸಲೇ ಇಲ್ಲ. ರಾಯರಿಗೆ ಕೋಪ ನೆತ್ತಿಗೆ ಹತ್ತಿ ಸುನಂದಮ್ಮನ ಬಳಿ ಬಂದು ಅವರ ಕೈ ಹಿಡಿದರು....ಆಗಲಿಲ್ಲ..ಹಿಡಿಯಲು ಆಗಲಿಲ್ಲ!!!


ಮತ್ತೊಮ್ಮೆ....ಮಗದೊಮ್ಮೆ ಇಲ್ಲ ಅವರ ಕೈ ಹಿಡಿಯಲು ಆಗುತ್ತಿಲ್ಲ..ಇದೇನು ಆಶ್ಚರ್ಯ ಎಂದು ಒಳಗೆ ಬಂದರೆ ಕೃಷ್ಣ ತನಗೆ ಗುದ್ದುವಂತೆ ಬರುತ್ತಿದ್ದಾನೆ...ಇನ್ನಷ್ಟು ಹತ್ತಿರ..ಮತ್ತಷ್ಟು ಹತ್ತಿರ....ಪಕ್ಕಕ್ಕೆ ಸರಿಯೋಣ ಎನ್ನುವಷ್ಟರಲ್ಲಿ ಗುದ್ದೇ ಬಿಟ್ಟ. ಆಶ್ಚರ್ಯ!!! ಅವನಿಗೂ ಏನೂ ಆಗಲಿಲ್ಲ..ನನಗೂ ಏನೂ ಆಗಲಿಲ್ಲವಲ್ಲ ಎಂದುಕೊಂಡರು ರಾಯರು. ಪಕ್ಕದಲ್ಲೇ ಆಟ ಆಡುತ್ತಿದ್ದ ಮೊಮ್ಮಗಳನ್ನು ಎತ್ತಿಕೊಳ್ಳಲು ಹೋದರೆ ಆಗುತ್ತಿಲ್ಲ.


ಯಾಕೋ ರಾಯರಿಗೆ ಅನುಮಾನವಾಗತೊಡಗಿತು. ಒಮ್ಮೆ ಕನ್ನಡಿಯಲ್ಲಿ ಮುಖ ನೋಡಿಕೊಳ್ಳೋಣ ಎಂದು ಕನ್ನಡಿ ಮುಂದೆ ಬಂದರೆ ಅಲ್ಲಿ ಏನೂ ಕಾಣುತ್ತಿಲ್ಲ. ಅಯ್ಯೋ....ಇದೇನಾಯಿತು?? ನಾನು ಸತ್ತು ಹೋದೆನ?ಇದು ನಿಜವ? ಸುಳ್ಳ? ಏನೂ ಗೊತ್ತಾಗುತ್ತಿಲ್ಲವಲ್ಲ? ಮತ್ತೊಮ್ಮೆ ತಮ್ಮ ರೂಮಿಗೆ ಬಂದರೆ ಅಲ್ಲಿ ಸುನಂದಮ್ಮ ತನ್ನ ದೇಹದ ಮೇಲೆ ಬಿದ್ದು ಬಿದ್ದು ಅಳುತ್ತಿದ್ದರು. ಪಕ್ಕದಲ್ಲೇ ಮಗ ಕೃಷ್ಣ ಮತ್ತು ಸೊಸೆ ಇಬ್ಬರೂ ಜೋರಾಗಿ ಅಳುತ್ತಿದ್ದರು.


ಅವರೆಲ್ಲರೂ ಅಳುತ್ತಿದ್ದನ್ನ್ನು ನೋಡಿ ರಾಯರು ಛೇ ನಾನೇ ಅವರೆಲ್ಲರನ್ನೂ ಅನಾವಶ್ಯಕವಾಗಿ ಬೈಯ್ಯುತ್ತಿದ್ದೆ, ರೇಗುತ್ತಿದ್ದೆ. ಆದರೆ ಅವರೆಲ್ಲರೂ ನನ್ನನ್ನು ಎಷ್ಟು ಪ್ರೀತಿ ಮಾಡುತ್ತಾರೆ. ನೆನ್ನೆ ಸಹ ಸುಮ್ಮನೆ ಕೂಗಾಡಿದೆ. ಎಲ್ಲರ ಮನಸನ್ನೂ ನೋಯಿಸಿದೆ. ನನ್ನ ವರ್ತನೆಯಿಂದ ಅವರೆಲ್ಲರೂ ಅದೆಷ್ಟು ಬೇಸರಿಸಿ ಕೊಂಡಿದ್ದರೋ?..


ಸುನಂದ ಪಾಪ ಅವಳು ನನ್ನೊಡನೆ ನಲವತ್ತು ವರ್ಷ ಸಂಸಾರ ಮಾಡಿದವಳು. ನನ್ನ ಸುಖ ದುಃಖ ಎಲ್ಲವನ್ನೂ ಹಂಚಿಕೊಂಡವಳು. ಅವಳಿಗೂ ನಾನು ನೆಮ್ಮದಿ ಕೊಡಲಿಲ್ಲ. ಈಗ ಒಳ್ಳೆಯದೇ ಆಯಿತು. ನಾನು ಸತ್ತಿದ್ದು ಒಳ್ಳೆಯದೇ ಆಯಿತು. ಇನ್ನಾದರೂ ಅವರು ನೆಮ್ಮದಿಯಿಂದ ಇರುತ್ತಾರೆ.


ಅಷ್ಟರಲ್ಲಿ ಅಪ್ಪ...ಅಪ್ಪ..ಎಂದು ಕೃಷ್ಣ ಜೋರಾಗಿ ಕೂಗುತ್ತಿರುವುದು ಕಿವಿಗೆ ಬಹಳ ಹತ್ತಿರದಲ್ಲಿ ಕೇಳಿಸುತ್ತಿತ್ತು. ಈಗ ಇನ್ನಷ್ಟು ಹತ್ತಿರ....ಯಾರೋ ಎಳೆಯುತ್ತಿರುವಂತೆ ಭಾಸವಾಗಿ ಕಣ್ಣು ಬಿಟ್ಟರೆ  ಅರೆ ಇದೇನಿದು!! ನಾನು ಬದುಕೇ ಇದ್ದೀನಿ. ಈಗಿನ್ನೂ ಬೆಳಗಾಯಿತು...ಅಂದರೆ ಇಷ್ಟು ಹೊತ್ತು ನಾನು ಕಂಡಿದ್ದು ಕನಸು ಎಂದು ಅರಿವಾಗಿ ಪಕ್ಕದಲ್ಲಿ ನಿಂತಿದ್ದ ಕೃಷ್ಣನನ್ನು ನೋಡಿದರೆ...ಕೃಷ್ಣ ಗಳಗಳನೆ ಅಳುತ್ತಿದ್ದ.


ಯಾಕೋ ಕೃಷ್ಣ ಅಳ್ತಾ ಇದ್ದೀಯ..ನನಗೇನೂ ಆಗಿಲ್ಲ ಕಣೋ....ಇಷ್ಟೊತ್ತು ಏನೋ ಕೆಟ್ಟ ಕನಸು ಬಿದ್ದಿತ್ತು ಅಷ್ಟೇ...


ಅಪ್ಪ ಅದೂ ಅದೂ ಅಮ್ಮ ಹೋಗಿಬಿಟ್ಳು....ಎಂದು ಮತ್ತೆ ಅಳಲು ಶುರು ಮಾಡಿದ.


ರಾತ್ರಿ ಗಲಾಟೆಯ ನಂತರ ಅಲ್ಲೇ ದೇವರ ಮನೆಯಲ್ಲಿ ಮಲಗಿದ್ದ ಸುನಂದಮ್ಮ ಮಲಗಿದ್ದಲ್ಲೇ ಹೋಗಿಬಿಟ್ಟಿದ್ದರು.


ಗೋವರ್ಧನರಾಯರಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು....

Rating
No votes yet

Comments

Submitted by ಗಣೇಶ Thu, 11/08/2012 - 23:30

>>>....ಅದಾದ ಸ್ವಲ್ಪ ದಿನಗಳಲ್ಲೇ ಅವರ ವರ್ತನೆಯಲ್ಲಿ ಬದಲಾವಣೆಗಳು ಕಂಡು ಬಂದಿತ್ತು. ಸುಮ್ಮ ಸುಮ್ಮನೆ ಮಕ್ಕಳ ಮೇಲೆ ಸಿಡುಕುವುದು, ಹೆಂಡತಿಯ ಮೇಲೆ ಸಿಡುಕುವುದು ಮಾಡುತ್ತಿದ್ದರು.ಅದು ವಯಸಿನ ಪ್ರಭಾವವೋ ಅಥವಾ ಮಕ್ಕಳ ಮುಂದೆ ತಾನು ಕಮ್ಮಿ ಆಗಬಾರದೆಂಬ ಅಹಮಿಕೆಯಿಂದಲೋ ಒಟ್ಟಿನಲ್ಲಿ ಎಲ್ಲರ ಮೇಲೂ ಕೂಗಾಡುತ್ತಿದ್ದರು...
-ರಾಯರ ಪಿರಿಪಿರಿಯೊಂದಿಗೆ ಸಾಗಿದ ಕತೆ.. ಎಂಡ್ ಕಂಪ್ಲೀಟ್ ಚೇಂಜ್!
ಚೆನ್ನಾಗಿದೆ ಜಯಂತ್.

Submitted by lpitnal@gmail.com Fri, 11/09/2012 - 08:55

ಆತ್ಮೀಯ ಜಯಂತರವರೆ, ಉತ್ತಮ ಕಥೆ. ಟ್ವಿಸ್ಟ್ ಮಾದರಿಯ ಕಥೆ. ಚಿಕ್ಕ ಚೊಕ್ಕ ಹಾಗೂ ಸೀದಾ ಮರ್ಮಕ್ಕೆ ತಾಗುವ ಗಂಭೀರ ವಿಷಯವನ್ನು ಮನದಟ್ಟಾಗುವ ರೀತಿಯಲ್ಲಿ ಕೆಲವೇ ಲೈನ್್ ಗಳಲ್ಲಿ ಸೊಗಸಾಗಿ ವಿವರಿಸಿದೆ. ವಸ್ತುವಿಷಯ ಆಯ್ಕೆ, ಹಾಗೂ ಸೊಗಸಾದ ನಿರೂಪಣೆ. ಕಥೆ ಹೇಳುವ ಶೈಲಿ ನಿಮಗೆ ಕರಗತ. ಉತ್ತಮ ಕಥಾಸಾಹಿತ್ಯ ಸಂಪದಿಗರಿಗೆ ನೀಡಿದ್ದಕ್ಕೆ ಧನ್ಯವಾದಗಳು ಸರ್.