ಕ್ಲಿಕ್ ಆದ ಸುದ್ದಿ ಸಾರಾಂಶ ಒದಗಿಸುವ ಆಪ್

ಕ್ಲಿಕ್ ಆದ ಸುದ್ದಿ ಸಾರಾಂಶ ಒದಗಿಸುವ ಆಪ್

 

ಐಫೋನ್ 5:ಭಾರೀ ಬೇಡಿಕೆ


ಐಫೋನ್5ನ ಮಾರಾಟವು ಭಾರತದಲ್ಲೂ ಆರಂಭವಾಯಿತು.ಮಾರಾಟ ಆರಂಭವಾದ ಗಂಟೆಯೊಳಗೆ ಹಲವು ಅಂಗಡಿಗಳು ತಮಗೆ ಮೊದಲ ಭಾರಿಗೆ ಲಭ್ಯವಾಗಿದ್ದ ಐಫೋನುಗಳು ಖಾಲಿಯದುವೆಂದು,ಮುಂದಿನ ಮಾರಾಟಕ್ಕೆ ಹತ್ತು ಸಾವಿರದ ಬುಕಿಂಗ್ ಆರಂಭಿಸಿದುವು.ಹದಿನಾರು ಜೀಬಿಯ ಐಫೋನ್ ನಲುವತ್ತೈದು ಸಾವಿರ,ಮೂವತ್ತೆರಡು ಜೀಬಿಯದ್ದಕ್ಕೆ ಐವತ್ತೆರಡು ಸಾವಿರ ಮತ್ತು ಅರುವತ್ತನಾಲ್ಕು ಜೀಬಿ ಐಫೋನ್ ಐವತ್ತೆರಡೂವರೆ ಸಾವಿರ ಬೆಲೆಗೆ ಲಭ್ಯವಿವೆ.ಈ ಭಾರಿ ಐಫೋನ್ ಚೀನಾದ ಮೊದಲು ಭಾರತದಲ್ಲೇ ಮಾರಾಟಕ್ಕೆ ಒದಗಿಸಲಾಗುತ್ತಿದೆ.ಮೊದಲ ಬಾರಿಗೆ ಐಫೋನ್ ಮಾರಾಟ ಸೇವಾದಾತೃಗಳ ಮೂಲಕ ಆಗುತ್ತಿಲ್ಲ.ಹಿಂದಿನ ಸಾಧನಗಳು ಸೇವಾದಾತೃಗಳ ಮೊಬೈಲ್ ಸಂಪರ್ಕದ ಜತೆ ಮಾರಾಟ ಮಾಡುತ್ತಿದ್ದರು.ಈ ಬಾರಿಯದ್ದು ನೇರ ಮಾರಾಟ.
----------------------------------------
ಮೇಟ್ರೋ:ಕೇಬಲ್ ಟಿವಿ ಡಿಜಿಟೈಸೇಷನ್‌ಗೆ ನಾಂದಿ
ಭಾರತದ ನಾಲ್ಕು ಮಹಾನಗರಗಳಾದ ಮುಂಬೈ,ದೆಹಲಿ,ಚೆನ್ನೈ,ಕೊಲ್ಕತ್ತಾಗಳಲ್ಲಿ ನವಂಬರ್ ಒಂದರಿಂದ ಕೇಬಲ್ ಟಿವಿಯ ಸಂಕೇತಗಳ ವಿತರಣೆ ಡಿಜಿಟಲ್  ಸಂಕೇತಗಳ ಮೂಲಕ ಮಾತ್ರಾ ಮಾಡಬೇಕಿದೆ.ಹಾಗಾಗಿ,ಪ್ರತಿ ಬಳಕೆದಾರನು ಸೆಟ್‌ಟಾಪ್ ಬಾಕ್ಸ್ ಎನ್ನುವ ಸಾಧನವನ್ನು ಖರೀದಿಸಿ,ಅದರ ಮೂಲಕ ಕೇಬಲ್ ಟಿವಿಯ ಸಂಕೇತಗಳನ್ನು ಪಡೆಯಬೇಕಿದೆ.ಇದನ್ನು ಮಾಡಲು ಅಕ್ಟೋಬರ್ ಮೂವತ್ತೊಂದರ ಗಡುವು ವಿಧಿಸಲಾಗಿತ್ತು.ಚೆನ್ನೈಯಲ್ಲಿ ಈ ದಿನಾಂಕವನ್ನು ಮತ್ತೈದು ದಿನ ವಿಸ್ತರಿಸಲಾಯಿತು.ಆದರೆ ಉಳಿದ ಮಹಾನಗರಗಳಲ್ಲಿ ಕೊನೆಯ ದಿನಾಂಕ ಮುಂದೆ ಹೋಗಿಲ್ಲ.ಸೆಟ್‌ಟಾಪ್ ಬಾಕ್ಸ್ ಖರೀದಿಸಿದವರಿಗೆ ಕೇಬಲ್ ಸಂಪರ್ಕ ಕಡಿತವಾಗಲಿದೆ.ಪ್ರಾಯಶ: ಎರಡು ದಶಲಕ್ಷ ಮನೆಗಳಲ್ಲಿ ಕೇಬಲ್ ಟಿವಿಯ ಸಂಕೇತಗಳು ಸದ್ಯಕ್ಕೆ ಲಭ್ಯವಾಗಲಿಕ್ಕಿಲ್ಲ.
ಅಂದ ಹಾಗೆ ಈ ಡಿಜಿಟಲ್ ಪ್ರಕ್ರಿಯೆ ಯಾಕಾಗಿ ಎನ್ನುವುದು ನಿಮ್ಮ ಪ್ರಶ್ನೆಯೇ?ಮುಖ್ಯವಾಗಿ,ಟಿವಿ ಸಂಕೇತಗಳು ಹೆಚ್ಚು ಸ್ಪಷ್ಟವಾಗಿ ಬರುತ್ತವೆ.ಅತ್ಯಂತ ಗುಣಮಟ್ಟದ ಪ್ರಸಾರವು ಗ್ರಾಹಕರಿಗೆ ಲಭ್ಯವಾಗುತ್ತವೆ.ಹೆಚ್ಚಿನ ಸಂಖ್ಯೆಯ ಚಾನೆಲ್‌ಗಳನ್ನು ಒದಗಿಸಲು ಸಾಧ್ಯವಾಗುತ್ತದೆ.ಗ್ರಾಹಕ ನೋಡಿದ ಚಾನೆಲ್‌ಗಳಿಗೆ ಮಾತ್ರಾ ಚಂದಾ ತೆತ್ತರೆ ಸಾಕು.ಅಲ್ಲದೆ ಹಲವು ಮೌಲ್ಯವರ್ಧಿತ ಸೇವೆಗಳು ಗ್ರಾಹಕನಿಗೆ ಲಭ್ಯವಾಗುತ್ತವೆ.ಬೇಕಾದ ಚಿತ್ರ ಅಥವಾ ಸೀರಿಯಲ್ ನೋಡುವ,ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಸವಲತ್ತು ಸಿಗುತ್ತದೆ.ಇಂಟರ್ನೆಟ್ ಸಂಪರ್ಕವನ್ನೂ ಒದಗಿಸಲು ಸಾಧ್ಯವಾಗುತ್ತದೆ.ಇನ್ನು ಗ್ರಾಹಕರು ನೋಡುವ ಕಾರ್ಯಕ್ರಮಗಳಲ್ಲಿ ಜನಪ್ರಿಯತೆಯ ಬಗ್ಗೆ ನಿಖರವಾದ ಮಾಹಿತಿಯನ್ನು ಕಲೆ ಹಾಕಲು ಸಾಧ್ಯವಾಗುತ್ತದೆ.
-------------------------------------
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಪಡಪೋಶಿಯೇ?
ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ಪುನಾರಚಿಸಲ್ಪಟ್ಟಿತು.ಈ ವೇಳೆ ಪೆಟ್ರೋಲಿಯಂ ಮತ್ತು ಆನಿಲ ಖಾತೆಯನ್ನು ಹೊಂದಿದ್ದ ಜೈಪಾಲ್‌ರೆಡ್ಡಿ ಅವರ ಖಾತೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗೆ ವರ್ಗಾಯಿಸಲಾಯಿತು.ರಿಲಾಯೆನ್ಸ್ ಕಂಪೆನಿಗೆ ಬೇಕಾದಂತೆ ಅನಿಲ ಇಂಧನದ ದರ ಪರಿಷ್ಕರಿಸದ್ದಕ್ಕೆ ಜೈಪಾಲ್ ರೆಡ್ಡಿ ಖಾತೆ ಬದಲಾಯಿತು.ಯಾರಿಗೂ ಬೇಡದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನವರಿಗೆ ನೀಡಲಾಯಿತು ಎಂದು ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದರು.ಇಂದಿನ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯವು ಅತಿ ಮುಖ್ಯವಾದ ವಿಷಯವಾಗಿದೆ.ಹೀಗಿರುವಾಗ,ಆ ಖಾತೆಯು ಪಡಪೋಶಿ,ಅದು ಯಾರಿಗೂ ಬೇಡದ ಖಾತೆ ಎನ್ನುವ ಅಭಿಪ್ರಾಯ ಕೇಳಿ ಬಂದಾಗ ಆಶ್ಚರ್ಯವಾಗುತ್ತದೆ.ವಿಜ್ಞಾನ ಮತ್ತು ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮಾಡಲು ಪ್ರೋತ್ಸಾಹ ನೀಡುವ ಹೊಣೆಗಾರಿಕೆ ಈ ಖಾತೆಯ ಮೇಲಿದೆ.ಹಾಗೆಯೇ ಹೊಸ ತಂತ್ರಜ್ಞಾನಗಳು ಲಭ್ಯವಾದಾಗ,ಅದನ್ನು ಜನರಿಗೆ ತಲುಪಿಸಿ,ಅಭಿವೃದ್ಧಿ ಸಾಧ್ಯವಾಗಿಸುವುದೂ ಈ ಖಾತೆಯ ಹೊಣೆಯೇ ಹಾಗಿದೆ.ಹಾಗಿರುವಾಗ,ಇದೊಂದು ಕೆಲಸಕ್ಕೆ ಬಾರದ ಖಾತೆ ಎನ್ನುವುದು ಸರಿಯೇ?
------------------------------------------
ಟ್ವೀಟ್ ಮಾಡುವುದು ಜನ್ಮಸಿದ್ಧ ಹಕ್ಕೇ?
ಬಾಲಗಂಗಾಧರ ತಿಲಕರು ಸ್ವರಾಜ್ಯ ತನ್ನ ಜನ್ಮ ಸಿದ್ಧ ಹಕ್ಕು ಎಂದಂತೆ,ಈಗಿನ ಯುವಕರು ಟ್ವೀಟ್ ಮಾಡಿ,ಟ್ವಿಟರ್ ತಾಣದಲ್ಲಿ ಸಂದೇಶ ಹಾಕುವುದು ತನ್ಮ ಜನ್ಮ ಸಿದ್ಧ ಅಧಿಕಾರ ಎಂದು ಬಗೆಯುತ್ತಿದ್ದಾರೆ.ತಮ್ಮ ಗಮನಕ್ಕೆ ಬಂದ ಸಂಗತಿಗಳ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಜನಪ್ರಿಯ ಹವ್ಯಾಸವಾಗಿದೆ.ಆದರೆ ಸಾರ್ವಜನಿಕರು ತಮ್ಮ ಖಾಸಗಿತನದ ಬಗ್ಗೆಯೂ ಎಚ್ಚೆತ್ತು ಕೊಂಡು,ಇಂತಹ ಸಂದೇಶಗಳಲ್ಲಿ ತಮ್ಮ ಬಗ್ಗೆ ಉಲ್ಲೇಖವಿದ್ದಾಗ,ಅದರ ಬಗ್ಗೆ ದೂರು ದಾಖಲಿಸುವಂತಹ ಕ್ರಮಗಳನ್ನು ಕೈಗೊಳ್ಳುವುದೂ ಹೆಚ್ಚಿದೆ.ರಾಜಕೀಯವಾಗಿ ಪ್ರಭಾವಶಾಲಿಯಾದವರ ದೂರುಗಳಿಗೆ ಸ್ಪಂದನ ಸಿಕ್ಕಿ,ಟ್ವೀಟ್ ಸಂದೇಶಗಳನ್ನು ಹಾಕಿದವರು ಕಂಬಿ ಎಣಿಸುವುದು ಅಥವಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುವುದೂ ಇದೆ.ಟ್ವೀಟ್ ಮಾಡುವವರು ತಮಗೆ ಅಭಿಪ್ರಾಯ ವ್ಯಕ್ತ ಪಡಿಸುವ ಸ್ವಾತಂತ್ರ್ಯ ಇದೆಯಲ್ಲ,ಅದು ಹೇಗೆ ತಮ್ಮ ವಿರುದ್ಧ ಕ್ರಮ ಕೈಗೊಳ್ಳುವುದು ನ್ಯಾಯ ಎಂದು ಪ್ರಶ್ನಿಸುವಂತಾಗಿದೆ.ಹಣಕಾಸು ಸಚಿವ ಪಿ ಸಿ ಚಿದಂಬರಂ ಅವರ ಪುತ್ರ ದೂರು ದಾಖಲಿಸಿದಾಗ ಸಿಕ್ಕಿದ ಸ್ಪಂದನ,ಸಾಮಾನ್ಯರ ಮಾನಹಾನಿಗೈಯ್ಯುವ ಟ್ವೀಟ್ ಸಂದೇಶ ಪ್ರಕಟವಾದರೂ ಸಿಗದು ಎನ್ನುವುದು ಮಾತ್ರಾ ವಾಸ್ತವ.
-------------------------------------------
ಕ್ಲಿಕ್ ಆದ ಸುದ್ದಿ ಸಾರಾಂಶ ಒದಗಿಸುವ ಆಪ್
ಎಳೆಯ ಹೂಡುಗ ನಿಕ್ಕ್ ಡಿಅಲಿಶಿಯೋನ ಐಫೋನ್ ತಂತ್ರಾಂಶವು ಭಾರೀ ಸುದ್ದಿ ಮಾಡಿದೆ.ಸುದ್ದಿ ಸಾರಾಂಶವನ್ನು ಐಫೋನಿನಲ್ಲಿ ತಿಳಿಸುವ ಈ ತಂತ್ರಾಂಶವನ್ನು ದಶಲಕ್ಷ ಡಾಲರು ಪ್ರಾಯೋಜಿತ ಹಣದಲ್ಲಿ ನಿಕ್ಕ್ ಅಭಿವೃದ್ಧಿ ಪಡಿಸಿ,ಐಸ್ಟೋರ್ಸ್ ಮೂಲಕ ಒದಗಿಸುತ್ತಿದ್ದಾನೆ.ತಂತ್ರಾಂಶವನ್ನು ಇಳಿಸಿಕೊಂಡು ತಮ್ಮ ಐಫೋನುಗಳಲ್ಲಿ ಬಳಸಿದವರು,ತಂತ್ರಾಂಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ಇದಕ್ಕೆ ಉತ್ಸಾಹದ ಪ್ರತಿಕ್ರಿಯೆ ಲಭ್ಯವಾಗಿದೆ.ಪ್ರಾಯೋಜಕರು ಜನಪ್ರಿಯರಾದದ್ದು,ತಂತ್ರಾಂಶವು ಜನಪ್ರಿಯವಾಗಲು ಇನ್ನೊಂದು ಕಾರಣವಾಗಿದೆ.ಕೆಲವರು ಇದರ ಬಳಕೆ ತುಸು ಗಲಿಬಿಲಿ ಮಾಡುತ್ತದೆ,ಇನ್ನೂ ಇದನ್ನು ಉತ್ತಮ ಪಡಿಸಬೇಕು ಎನ್ನುವ ಪ್ರತಿಕ್ರಿಯೆ ನೀಡಿದ್ದಾರೆ.ಸಮ್ಲಿ ಎನ್ನುವ ಈ ಆಪ್ ಉಚಿತವಾಗಿ ಲಭ್ಯ.ಇದು ಹಲವು ಮೂಲಗಳಿಂದ ಲಭ್ಯವಾದ,ಸುದ್ದಿಯ ಸಾರಾಂಶವನ್ನು ಒದಗಿಸಿ,ಓದುಗರಿಗೆ ಸಹಾಯ ಮಾಡುತ್ತದೆ.ಆಸಕ್ತರು ಪೂರ್ಣ ಸುದ್ದಿಯನ್ನೂ ಓದಲು ಸಾಧ್ಯವಿದೆ.ಹದಿನೇಳು ವರ್ಷದ ನಿಕ್ಕ್,ಲಂಡನ್‌ನ ಹುಡುಗ.ಶಾಲೆಯ ಬಿಡುವಿನ ಅವಧಿಯನ್ನು ಬಳಸಿಕೊಂಡು,ತಂತ್ರಾಂಶ ಅಭಿವೃದ್ಧಿ ಪಡಿಸಿದ್ದಾನೆ.
----------------------------------------
ಚಂಡಮಾರುತ;ಮೊಬೈಲ್ ಸೇವೆಯೂ ನಾಸ್ತಿ
ಮೊಬೈಲ್ ಸೇವೆಗಳು ನಿಸ್ತಂತುವಾದರೂ ವಿದ್ಯುತ್ ಪೂರೈಕೆಯು ಸ್ಥಗಿತವಾಗಿ,ಅಮೆರಿಕಾದ ಚಂಡಮಾರುತಗ್ರಸ್ತ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವು ಸಿಗುತ್ತಿರಲಿಲ್ಲ.ವಿದ್ಯುತ್ ಕೈಕೊಟ್ಟಾಗ,ಮೊಬೈಲ್ ಗೋಪುರಗಳ ಸಂಕೇತಗಳನ್ನು ಪ್ರಸಾರ ಮಾಡಲಾಗುವುದಿಲ್ಲ.ಜತೆಗೆ ಜನರೇಟರ್ ಬಳಸೋಣವೆಂದರೆ,ಗೋಪುರಗಳು ನೀರಿನಡಿಯಲ್ಲಿ ಮುಳುಗಿರುವುದು,ಇಂಧನ ಪೂರೈಕೆ ಇಲ್ಲದಿರುವ ಸಮಸ್ಯೆಗಳಿವೆ.ಈಗ ನಿಧಾನವಾಗಿ ಮೊಬೈಲ್ ಸೇವೆಗಳನ್ನು ನೇರ್ಪುಗೊಳಿಸಲಾಗುತ್ತಿದೆ.ಜನರೂ ತಮ್ಮಮನೆಗಳಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ,ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಪರದಾಡಬೇಕಿದೆ.ಲ್ಯಾಪ್‌ಟಾಪ್‌ಗಳನ್ನು ಕೂಡಾ ಚಾರ್ಜ್ ಮಾಡಲು ಹೆಚ್ಚಿನವರು,ಸಂತ್ರಸ್ತರುಗಳಿಗಾಗಿ ವ್ಯವಸ್ಥೆಗೊಳಿಸಲಾಗಿದ್ದ ಕೇಂದ್ರಗಳ ವಿದ್ಯುತ್ ಪೂರೈಕೆಯನ್ನು ಅವಲಂಭಿಸಿರುವುದು ಸಾಮಾನ್ಯ ದೃಶ್ಯವಾಗಿತ್ತು.
--------------------------------
ಸ್ಪೆಕ್ಟ್ರಮ್ ಹರಾಜು:ನಿರುತ್ಸಾಹ
ಟೂಜಿ ಸ್ಪೆಕ್ಟಂ ಹರಾಜು ಪ್ರಕ್ರಿಯೆ ಮುಂದುವರಿದಿದೆ.ಸಿಡಿಎಂಎ ಸ್ಪೆಕ್ಟ್ರಂಗೆ ಟಾಟಾಟೆಲಿ ಸರ್ವೀಸಸ್ ಮತ್ತು ವಿಡಿಯೋಕೋನ್ ಮಾತ್ರಾ ಉತ್ಸಾಹ ತೋರಿಸಿದ್ದುವು.ಈಗ ವಿಡಿಯೋಕೋನ್ ಹರಾಜಿನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದು,ಮೂರು ವೃತ್ತಗಳ ಹರಾಜಿನಲ್ಲಿ ಭಾಗವಹಿಸಲು ಅರ್ಜಿ ಹಾಕಿದ್ದ ಟಾಟಾಟೆಲಿ ಸರ್ವೀಸ್ ಮಾತ್ರಾ ಕಣದಲ್ಲಿ ಉಳಿದಿದೆ.ಹಾಗಾಗಿ, ಅದು ಸ್ಪರ್ಧೆಯೇ ಇಲ್ಲದೆ ತನಗೆ ಬೇಕಾದ ಮೂರು ವೃತ್ತಗಳ ಲೈಸೆನ್ಸ್ ಅನ್ನು ಮೂಲ ಬೆಲೆಯಲ್ಲೇ ಪಡೆಯಲಿದೆ.ಇನ್ನು ಜಿಎಸ್‌ಎಂ  ವಿಭಾಗದಲ್ಲಿ ಐದು ಸೇವಾದಾತೃಗಳು ಕಣದಲ್ಲಿದ್ದಾರೆ.ಏರ್‌ಟೆಲ್,ಐಡಿಯಾ,ಟೆಲ್‌ನೋರ್,ವಿಡಿಯೋಕಾನ್ ಮತ್ತು ವೊಡಾಪೋನ್ ಕಂಪೆನಿಗಳು ಹರಾಜಿನಲ್ಲಿ ಭಾಗವಹಿಸುವ ಉತ್ಸಾಹ ತೋರಿಸಿವೆ.ಸೋಮವಾರ ಅಂತಿಮ ಗಡುವು ಮುಗಿಯುವ ಮುನ್ನ ಕೆಲವು ಕಂಪೆನಿಗಳು ಅರ್ಜಿ ಹಿಂದೆಗೆದರೂ ಆಶ್ಚರ್ಯವಿಲ್ಲ.
UDAYAVANI 
udayavaniepaper
*ಈ ಅಂಕಣ ಬರಹಗಳು http://ashok567.blogspot.comನಲ್ಲೂ ಲಭ್ಯವಿವೆ.
*ಅಶೋಕ್‌ಕುಮಾರ್ ಎ

 

Comments

Submitted by ಗಣೇಶ Thu, 11/08/2012 - 23:59

ಪಡಪೋಶಿ ಖಾತೆ! >>>ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಪಡಪೋಶಿಯೇ? :) -ಉತ್ತಮ ಪ್ರಶ್ನೆ. ಸರಕಾರ ಮತ್ತು ಮಾಧ್ಯಮಗಳು ಉತ್ತರಿಸಬೇಕು. -ಗಣೇಶ.
Submitted by lpitnal@gmail.com Fri, 11/09/2012 - 08:45

ಪ್ರಚಲಿತ ವಿಷಯಗಳ ಅದರಲ್ಲೂ ಗೆಡ್ಜೆಟ್ ವಿಷಯಗಳ ಮಾಹಿತಿ ಬಹುಮೂಲ್ಯ. ನಮ್ಮಂಥವರಿಗೆ ಅದರ ಗಂಧ ಗಾಳಿಯೂ ದೂರ. ಆದರೂ ಸಂಪೂರ್ಣವಾಗಿ ಅರ್ಥವಾಗುವಂತೆ ವಿವರಿಸುವುದರಿಂದ ನಮಗೆ ಹೆಚ್ಚು ಅನುಕೂಲ. ವಿಜ್ಞ್ನಾನ ಮತ್ತು ತಂತ್ರಜ್ಞಾನ ದ ಮಂತ್ರಿ ಪದವಿಗೆ ಹೆಚ್ಚು ಬೆಲೆ ಇಲ್ಲದ್ದನ್ನು, ಅದನ್ನು ಸಾದಾ ಖಾತೆಯೆಂದು ಬಗೆಯುವುದನ್ನು ಚನ್ನಾಗಿ ಪಿನ್ ಪಾಯಿಂಟ್ ಮಾಡಿದ್ದೀರಿ. ಹೀಗಾದರೆ ಆ ಖಾತೆಯಲ್ಲಿ ಅವರ ಸೇವೆ ಎಷ್ಟರಮಟ್ಟಿಗೆ ಬಳಕೆಯಾದೀತು. ಹೆಚ್ಚು ವಿವರಿಸಬೇಕಾದ ಅವಶ್ಯಕತೆ ಇಲ್ಲ ಅನುಸುತ್ತದೆ.