ಹೊರಗೆ ಮೋಡ ಕವಿದ ವಾತಾವರಣ....ಹಗಲೇ ರಾತ್ರಿಯಾದಂತೆ ಕತ್ತಲಾವರಿಸಿದೆ...ರೂಮಿನ ಶೀಟಿನ ಮೇಲೆ ಬೀಳುತ್ತಿದ್ದ ಚಿಟಪಟ ಮಳೆಹನಿ...ಸುಯ್ಯನೆ ಬೀಸುತ್ತಿದ್ದ ಗಾಳಿ ಪಾದವನ್ನು ಸೋಕಿ ಅಲ್ಲಿಂದ ಮಂಡಿಗೆ ಹತ್ತಿ...ಅಲ್ಲಿಂದ ನಡುವಿಗೆ ಹತ್ತಿ...ಅಲ್ಲಿಂದ
ಬೆನ್ನ ಹುರಿಯಲ್ಲಿ ಸಣ್ಣ ಚಳುಕೊಂದನ್ನು ಉಂಟು ಮಾಡಿ ಅಲ್ಲಿಂದ ಆ ಚಳಿ ಹೃದಯಕ್ಕೆ ತಲುಪಿದಾಗ ಇಡೀ ಮೈ ಒಮ್ಮೆ ಕಂಪಿಸಿದಂತಾಯಿತು.
ಭಾನುವಾರ ಮಧ್ಯಾಹ್ನ ಸೊಂಪಾದ ನಿದ್ದೆಯಲ್ಲಿ ಮುಳುಗಿದ್ದವನಿಗೆ ಆ ಕಂಪನ ಏಳುವಂತೆ ಮಾಡಿ ಬಿಸಿ ಬಿಸಿಯಾದ ಹಬೆಯಾಡುತ್ತಿರುವ ಕಾಫಿ ಕುಡಿಯುವಂತೆ ಪ್ರೇರೇಪಿಸಿತು...
ಶನಿವಾರ ರಾತ್ರಿಯ ಹ್ಯಾಂಗೋವರ್ ಭಾನುವಾರದ ಮಧ್ಯಾಹ್ನದವರೆಗೂ ಕರೆತಂದಿತ್ತು...ಎದ್ದು ಒಮ್ಮೆ ಕಿಟಕಿ ಆಚೆ ಮುಖ ಇಟ್ಟು ಬಾನಿಂದ ಬೀಳುತ್ತಿದ್ದ ಮುತ್ತಿನ ಹನಿಗಳಿಗೆ ಒಂದು ಬೆಚ್ಚನೆಯ!! ಚುಂಬನವನ್ನು ನೀಡಿ ನನ್ನ ಅಧರಗಳನ್ನು ಒದ್ದೆ ಮಾಡಿಕೊಂಡು ಮತ್ತೆ
ಅದಕ್ಕೆ ಬಿಸಿ ಸ್ಪರ್ಶ ನೀಡಲು ಕಾಫಿ ಪಾತ್ರೆ ಹಿಡಿದುಕೊಂಡು ಗ್ಯಾಸ್ ಹೊತ್ತಿಸಿದೆ.
ನನ್ನಂಥ ಬ್ರಹ್ಮಚಾರಿಗಳಿಗೆ ಈ ಕಷ್ಟಗಳೆಲ್ಲ ತಪ್ಪಿದ್ದಲ್ಲ ಎಂದುಕೊಳ್ಳುವಷ್ಟರಲ್ಲಿ ಫೋನ್ ರಿಂಗಾಯಿತು...ಏನೋ ಮಲಗಿದ್ಯ?? ಎಂದು ಊರಿನಿಂದ ಅಮ್ಮ ಕೇಳಿದರು...ನಾನು ಆಕಳಿಸುತ್ತಲೇ ಇಲ್ಲಮ್ಮ ಹಾಗೆ ಸುಮ್ಮನೆ ಮಲಗಿದ್ದೆ. ಮತ್ತೆ ಇನ್ನೇನು ಸಮಾಚಾರ?
ಏನಿಲ್ಲ ಕಣೋ....ನೆನ್ನೆ ಆ ಶ್ರೀಧರ ಮೂರ್ತಿಗಳು ಬಂದಿದ್ದರು...ಒಂದು ಒಳ್ಳೆ ಹುಡುಗಿ ಬಂದಿದೆಯಂತೆ...ಒಳ್ಳೆ ಓದಿದ್ದಾಳೆ...ಅಲ್ಲೇ ಬೆಂಗಳೂರಿನಲ್ಲಿ ಕೆಲಸವಂತೆ....ನೋಡ್ತೀಯ?
ಅಮ್ಮ...ನಿನಗೆ ಆ ಶ್ರೀಧರ ಮೂರ್ತಿಗಳಿಗೆ ಇಬ್ಬರಿಗೂ ಬೇರೆ ಕೆಲಸ ಇಲ್ವಾ...ಯಾವಾಗ ನೋಡಿದರೂ ಇದೆ ಆಯ್ತು....ನಾನು ಹೇಳಿದ್ದೀನಲ್ಲ....ನನಗೆ ಯಾವಾಗ ಮನಸು ಬರುತ್ತದೋ ಆಗ ಆಗುತ್ತೇನೆ. ಅಲ್ಲಿಯವರೆಗೂ ಸುಮ್ಮನೆ ತಲೆ ತಿನ್ನಬೇಡಿ.
ನೋಡೋ...ನಿನಗೂ ವಯಸು ಮೂವತ್ತು ಆಯ್ತು...ಇನ್ಯಾವಾಗ ನೋಡ್ತೀಯ? ನಾವು ಜನಕ್ಕೆ ಉತ್ತರ ಕೊಡಲು ಆಗುವುದಿಲ್ಲ...ಎಲ್ಲರೂ ಯಾಕೆ ಇನ್ನೂ ಮಾಡುವೆ ಮಾಡುತ್ತಿಲ್ಲ? ಯಾರನ್ನಾದರೂ ಲವ್ವು ಗಿವ್ವು ಎನಾದಾರೂ ಮಾಡುತ್ತಿದ್ದಾನ? ಹೀಗೆ ಹತ್ತು ಹಲವಾರು
ಪ್ರಶ್ನೆಗಳನ್ನು ಕೇಳುತ್ತಾರೆ....
ಅಮ್ಮ...ಆಯ್ತು ನನಗೆ ಸ್ವಲ್ಪ ಸಮಯ ಕೊಡು...ಸರಿನಾ ನಾನು ಈಗ ಇಡ್ತೇನೆ....
ಆಯ್ತಪ್ಪ...ಹುಷಾರು...ಬೇಗ ಮನೆಗೆ ಬಂದು ಬಿಡು...ರಾತ್ರಿ ಜಾಸ್ತಿ ಹೊತ್ತು ಆಚೆ ಇರಬೇಡ...ಹಾ...ಆಮೇಲೆ ಹಬ್ಬಕ್ಕೆ ಬರ್ತಿದ್ಯ ತಾನೆ?
ಹೌದಮ್ಮ ಬರ್ತಿದೇನೆ....ಸರಿ ಬೈ ಎಂದು ಫೋನ್ ಇಟ್ಟು...ಗ್ಯಾಸ್ ಕಡೆ ನೋಡಿದರೆ ಕಾಫಿ ಮರಳುತ್ತಿತ್ತು....ಕಾಫಿಯನ್ನು ಕಪ್ಪಿಗೆ ಸುರಿದುಕೊಂಡು ಕಿಟಕಿಯ ಬಳಿ ಬಂದು ಕುಳಿತೆ.
ಒಂದು ಸಿಪ್ ಕಾಫಿ ಹೀರಿ ಮಳೆಯನ್ನು ನೋಡುತ್ತಾ ಇದ್ದ ಹಾಗೆ ಅವಳು!! ನೆನಪಿಗೆ ಬಂದಳು...
ಆವತ್ತೂ ಹೀಗೆ ಮಳೆ ಬರುತ್ತಿತ್ತು...ಹೌದು ಇಂದಿಗೆ ಸರಿಯಾಗಿ ಒಂದು ವರ್ಷ ಆಯಿತು ಅವಳು ನನ್ನನ್ನು ಬಿಟ್ಟು ಹೋಗಿ...ಅವತ್ತು ನಾನು ಎಷ್ಟು ತಡೆದರೂ ಕೇಳಲಿಲ್ಲ...ಸುರಿಯುತ್ತಿದ್ದ ಮಳೆಯಲ್ಲೇ ಹೊರಟು ಹೋದಳು.
ಅವಳಿಗೆ ಮಳೆ ಅಂದರೆ ತುಂಬಾ ಇಷ್ಟ!!...ನನಗೆ ಅವಳೆಂದರೆ ತುಂಬಾ ಇಷ್ಟ!!...ಅವಳಿಗೂ ನನ್ನ ಕಂಡರೆ ಇಷ್ಟ ಇತ್ತು ಅನಿಸುತ್ತೆ...ಆದರೆ ಅವಳು ಯಾವತ್ತೂ ನನ್ನ ಬಳಿ ಹೇಳಿರಲಿಲ್ಲ...ಹುಡುಗಿಯರು ಯಾವಾಗಲೂ ಹಾಗೆ ಅಲ್ಲವೇ?
ಆದರೆ ಅವಳು ನನ್ನ ಜೊತೆ...ಹೌದು ನನ್ನ ಜೊತೆ ಮಾತ್ರ ಬಹಳ ಸಲುಗೆಯಿಂದ ಇರುತ್ತಿದ್ದಳು. ಅವಳ ನಗು...ಮಾತು...ನನಗೆ ಬಹಳ ಆಪ್ತವಾಗಿತ್ತು. ಅದೇನೋ ಅವಳ ಜೊತೆ ಮಾತಾಡುತ್ತಿದ್ದರೆ ಮನಸೆಲ್ಲ ಬಹಳ ಹಗುರವಾಗಿರುತ್ತಿತ್ತು. ಅವಳು ಎಷ್ಟು ಮುದ್ದಾಗಿದ್ದಳು ಎಂದರೆ ಚಿಕ್ಕಮಗುವಿನ ಹಾಗೆ ಎತ್ತಿ ಮುದ್ದಾಡಬೇಕು ಎನಿಸುವಷ್ಟು ಮುದ್ದಾಗಿದ್ದಳು.
ಯಾವಾಗ ಬಿಡುವಿದ್ದಾಗಲೂ ನನ್ನೊಡನೆ ಮಾತಾಡುತ್ತಿದ್ದಳು, ಮಾತಾಡುತ್ತಿದ್ದಳು, ಮಾತಾಡುತ್ತಿದ್ದಳು...ಅವಳಿಗೆ ಮಾತಾಡುವುದೆಂದರೆ ಪಂಚ ಪ್ರಾಣ. ಜೊತೆಯಲ್ಲಿದ್ದಾಗಲೂ ಮಾತು...ಜೊತೆಯಲ್ಲಿ ಇಲ್ಲದಿದ್ದಾಗಲೂ ಮಾತು...ಫೋನ್ ಮಾಡಿ ಮಾತಾಡುತ್ತಿದ್ದಳು. ಒಮ್ಮೊಮ್ಮೆ ಗಂಟೆಗಟ್ಟಲೆ ಮಾತಾಡುತ್ತಿದ್ದಳು.
ಬೋರಾಯಿತು ಎಂದರೆ ಇಬ್ಬರೂ ಒಟ್ಟಿಗೆ ಸಿನೆಮಾ ನೋಡಲು ಹೋಗುತ್ತಿದ್ದೆವು...ಶಾಪಿಂಗ್ ಮಾಲ್ ಗಳಿಗೆ ಹೋಗುತ್ತಿದ್ದೆವು. ಸಣ್ಣ ಸಣ್ಣ ವಿಷಯಗಳಿಗೆ ಜಗಳ ಆಡುತ್ತಿದ್ದಳು...ಕೋಪ ಮಾಡಿಕೊಳ್ಳುತ್ತಿದ್ದಳು. ಆದರೆ ಕೋಪದಲ್ಲಿ ಇನ್ನೂ ಹೆಚ್ಚು ಮುದ್ದಾಗಿರುತ್ತಿದ್ದಳು. ಅವಳಿಗೆ ಅದನ್ನು ಹೇಳಿದರೆ ಮತ್ತೆ ನಗುತ್ತಿದ್ದಳು.
ಅಷ್ಟರಲ್ಲಿ...ಕೈಲಿದ್ದ ಕಾಫಿ ಖಾಲಿ ಆಯಿತು...ಮಳೆಯೂ ಜೋರಾಯಿತು...ಯಾಕೋ ಮತ್ತೊಮ್ಮೆ ಕಾಫಿ ಬೇಕೆನಿಸಿತು...ಒಳಗೆ ಹೋಗಿ ಕಾಫಿ ಬೆರೆಸಿಕೊಂಡು ಮತ್ತೆ ಬಂದು ಕಿಟಕಿಯ ಬಳಿ ಕೂತೆ.
ಈ ನೆನಪುಗಳು ಮಳೆಯ ಹಾಗೆಯೇ ಅನಿಸುತ್ತದೆ....ಬೇಕೆನಿಸಿದಾಗ ಬರದೆ...ಬೇಡದಿದ್ದಾಗ ಒಂದೇ ಸಮನೆ ಕೊರೆಯುತ್ತದೆ....ಮಳೆಗಾಲದಲ್ಲಿ ಒಂದು ಹನಿಯೂ ಹಾಕದೆ ಚಳಿಗಾಲದಲ್ಲಿ ಹೀಗೆ ಸುರಿಯುತ್ತಿದೆ.....
ಅವಳು ತುಂಬಾ ಬೋರೆನಿಸಿದಾಗ ನನ್ನ ರೂಮಿಗೆ ಬರುತ್ತಿದ್ದಳು. ಇಬ್ಬರೂ ಗಂಟೆಗಟ್ಟಲೆ ಮಾತಾಡಿಕೊಂಡು ಲ್ಯಾಪ್ಟಾಪ್ ನಲ್ಲಿ ಯಾವುದಾದರೂ ಸಿನೆಮಾ ನೋಡಿಕೊಂಡು ಆಮೇಲೆ ಅವಳಿಗೆ ನಾನೇ ಕಾಫಿ ಮಾಡಿಕೊಟ್ಟು ಕುಡಿದ ಮೇಲೆ ಹೊರಡುತ್ತಿದ್ದಳು. ನಮ್ಮಿಬ್ಬರ ನಡುವೆ ಇಷ್ಟೆಲ್ಲಾ ಒಡನಾಟ ಇದ್ದರೂ ಅವಳು ಒಮ್ಮೆಯೂ ನನ್ನನ್ನು ಇಷ್ಟ ಪಡುತ್ತಿದ್ದಾಳೆ, ಅಥವಾ ಪ್ರೀತಿಸುತ್ತಿದ್ದಾಳೆ ಎಂದು ಹೇಳಿರಲಿಲ್ಲ....
ಅವತ್ತು ಅವಳ ಹುಟ್ಟಿದ ಹಬ್ಬ...ನಾನು ಹಿಂದಿನ ದಿನವೇ ಅವಳಿಗೆ ಉಡುಗೊರೆಯನ್ನು ತಂದಿತ್ತು ಅವಳ ಹುಟ್ಟು ಹಬ್ಬವನ್ನು ನನ್ನ ರೂಮಿನಲ್ಲೇ ಆಚರಿಸೋಣ ಎಂದು ತಿಳಿಸಿದ್ದೆ. ಅವಳೂ ಸಮ್ಮತಿಸಿದ್ದಳು.
ಅವಳು ಅಂದು ಶುಭ್ರ ಬಿಳೀ ಬಣ್ಣದ ಮೇಲೆ ಕೆಂಪು ಬಣ್ಣದ ಚಿತ್ತಾರವಿರುವ ಸೀರೆಯನ್ನು ಉಟ್ಟು ಬಂದಿದ್ದಳು...ಅಬ್ಬಾ!!! ನಿಜಕ್ಕೂ ಅವಳು ದೇವತೆಯೇ!! ಅಷ್ಟು ಸುಂದರವಾಗಿದ್ದಳು. ಮೊಟ್ಟ ಮೊದಲ ಬಾರಿಗೆ ಅವಳು ಸೀರೆ ಉಟ್ಟಿದ್ದಳು. ಅವಳು ರೂಮಿನ ಒಳಗೆ ಬರುತ್ತಿದ್ದ ಹಾಗೆ ಆಚೆ ಮಳೆ ಬೀಳಲು ಶುರು ಆಯಿತು.
ಅವಳು ತಕ್ಷಣ ಕಿಟಕಿ ಬಳಿ ಹೋಗಿ ತನ್ನೆರಡು ಕೈಯನ್ನು ಮಳೆಯಲ್ಲಿ ಹಿಡಿದು ಆಟ ಆಡುತ್ತಿದ್ದಳು. ಲೋ...ಒಂದು ಬಿಸಿ ಬಿಸಿ ಕಾಫಿ ಮಾಡೋ ಎಂದಳು...ನಾನು ಆಯ್ತು ಮೇಡಂ ಎಂದು ಬಿಸಿ ಬಿಸಿ ಹಬೆಯಾಡುತ್ತಿದ್ದ ಕೇಕನ್ನು ಅಲ್ಲ ಕಾಫಿಯನ್ನು ತಂದು ಅವಳ
ಕೈಗಿಟ್ಟು ನಾನೊಂದು ಕಪ್ ಕಾಫಿಯನ್ನು ಹಿಡಿದು ಅಲ್ಲೇ ಕಿಟಕಿ ಬಳಿ ಕುಳಿತೆ. ಗಾಳಿ ಜೋರಾಗಿ ಬೀಸುತ್ತಿದ್ದಂತೆ ಮಳೆಯ ಎರಚಲು ಒಳಗೆ ಬೀಳುತ್ತಿತ್ತು.
ನಾನು ಕಾಫಿ ಕಪ್ ಕೆಳಗಿಟ್ಟು ಕಿಟಕಿ ಬಾಗಿಲು ಮುಚ್ಚಲು ಹೋದಾಗ...ಅವಳು ತಡೆದಳು ಬೇಡ ಕಣೋ ಹಾಗೆ ಇರಲಿ ಚೆನ್ನಾಗಿದೆ ಎಂದಳು....ನಿಮ್ಮ ಅಪ್ಪಣೆ ಎಂದು ಮತ್ತೆ ಕಾಫಿ ಕಪ್ ಕೈಗೆ ತೆಗೆದುಕೊಂಡೆ.
ಅವಳು ಮೆಲ್ಲನೆ ನನ್ನ ಹಿಂದೆ ಬಂದು ನನ್ನ ಕಿವಿಗೆ ತನ್ನ ಬಾಯಿಂದ ಗಾಳಿ ಬಿಟ್ಟಳು....ಆಚೆ ಮಳೆ...ತಣ್ಣನೆ ಗಾಳಿ....ಕೈಯಲ್ಲಿ ಬಿಸಿಯಾದ ಕಾಫಿ...ಪಕ್ಕದಲ್ಲೇ ಅದ್ಭುತ ಚೆಲುವೆ....ಅವಳ ಬೆಚ್ಚನೆಯ ಗಾಳಿ.....ಒಮ್ಮೆ ಇಡೀ ದೇಹ ಕುಲುಮೆಯಲ್ಲಿಟ್ಟಂತೆ ಭಾಸವಾಯಿತು. ತಕ್ಷಣ ಸುಧಾರಿಸಿಕೊಂಡು ಬಾ ಕೇಕ್ ಕತ್ತರಿಸೋಣ ಎಂದು ಕೇಕ್ ತಂದು ಅವಳ ಕೈಲಿ ಕತ್ತರಿಸಿ ಒಂದು ತುಂಡನ್ನು ಅವಳ ಬಾಯಿಗೆ ಇಟ್ಟೆ. ಸ್ವಲ್ಪ ಮಾತ್ರ ತಿಂದು ಉಳಿದ ತುಂಡನ್ನು ನನ್ನ ಬಾಯಿಗೆ ತುರುಕಿದಳು.
ಅವತ್ತು ಯಾಕೋ ಗೊತ್ತಾಗಲಿಲ್ಲ...ಅವಳು ನನ್ನ ಬಳಿ ಬಂದಾಗಲೆಲ್ಲ ನನ್ನ ಮೈ ರೋಮಾಂಚನಗೊಳ್ಳುತ್ತಿತ್ತು...ಒಂದು ಮಳೆಗೆ ಇಷ್ಟೆಲ್ಲಾ ಶಕ್ತಿ ಇದೆಯಾ??!! ಎಂದೆನಿಸಿತ್ತು...
ಸಾಧ್ಯವಾಧಷ್ಟು ಅವಳಿಂದ ದೂರ ಇರೋಣ ಎಂದುಕೊಂಡು ಮತ್ತೆ ಕಿಟಕಿ ಬಳಿ ಬಂದು ಕುಳಿತೆ....ಅವಳು ಮತ್ತೆ ಬಂದು ನನ್ನ ಕಿವಿಗೆ ಉಫ್....ಎಂದು ಗಾಳಿ ಬಿಟ್ಟಳು....ಅಷ್ಟೇ....
ಆ ಕ್ಷಣ ನನಗೆ ಏನಾಯಿತೋ ಗೊತ್ತಾಗಲಿಲ್ಲ.....ಎದ್ದು ನಿಂತು ಅವಳ ಕಡೆ ತಿರುಗಿ...ಅವಳನ್ನು ಚುಂಬಿಸಿಬಿಟ್ಟೆ....ಎರಡೂ ಅಧರಗಳು ಬೆಸೆದುಕೊಂಡಿದ್ದವು.....ಅವಳಿಗೂ ಕ್ಷಣ ಕಾಲ ಏನಾಯಿತೆಂದು ಅರಿವಿಗೆ ಬರಲಿಲ್ಲ...ಅವಳಿಗೆ ಅರಿವಿಗೆ ಬಂದ ತಕ್ಷಣ
ನನ್ನಿಂದ ಬಿಡಿಸಿಕೊಂಡು ಏನೂ ಮಾತಾಡದೆ ಹೊರಟು ಬಿಟ್ಟಳು....
ಆಚೆ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಹೊರಟು ಬಿಟ್ಟಳು....ಆ ಮಳೆಯಲ್ಲಿ ಅವಳ ಕಣ್ಣೀರು ನನಗೆ ಕಾಣಿಸಲೇ ಇಲ್ಲ...ಬಹಳ ಹೊತ್ತು ಅವಳನ್ನು ಕೂಗುತ್ತಲೇ ಇದ್ದೆ....ಆದರೆ ಏನೂ ಕೇಳಿಸಲೇ ಇಲ್ಲವೆಂಬಂತೆ ಅವಳು ಹೊರಟು ಹೋದಳು....
ಅಂದಿನಿಂದ ಇಲ್ಲಿಯವರೆಗೂ ಅವಳನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಲೇ ಇದ್ದೇನೆ...ಆದರೆ ಅದು ಸಾಧ್ಯವಾಗುತ್ತಿಲ್ಲ....ಎರಡು ಮೂರು ಬಾರಿ ನಂಬರ್ ಬದಲಾಯಿಸಿದಳು....ಅದನ್ನೂ ಸಂಪಾದಿಸಿದೆ..ಆದರೆ ನನ್ನ ಧ್ವನಿ ಕೇಳುತ್ತಲೇ ಕಟ್ ಮಾಡುತ್ತಿದ್ದಳು.
ಈಗ ತಿಂಗಳ ಹಿಂದೆ ಮತ್ತೆ ನಂಬರ್ ಬದಲಾಯಿಸಿದ್ದಾಳೆ....ಹೊಸ ನಂಬರ್ ಇನ್ನೂ ಸಿಕ್ಕಿಲ್ಲ....ಸಿಕ್ಕಿದ ಮೇಲೆ ಮತ್ತೆ ಅವಳನ್ನು ಒಲಿಸುವ ಯತ್ನ ಮಾಡುತ್ತೇನೆ....
Comments
ಜಯಂತ್, ಕತೆ ಚೆನ್ನಾಗಿದೆ. -ಗಣೇಶ.
ಜಯಂತ್,
ಕತೆ ಚೆನ್ನಾಗಿದೆ.
-ಗಣೇಶ.
In reply to ಜಯಂತ್, ಕತೆ ಚೆನ್ನಾಗಿದೆ. -ಗಣೇಶ. by ಗಣೇಶ
nimma mecchugege
nimma mecchugege dhanyavaadagalu ganeshanna.:)
@ ಜಯಂತ್...- ಚಳಿ ದೂರ ಮಾಡಲು ಬಿಸಿ ಬೇಕು ನಿಜ.ಆದ್ರೆ ...!!
ಅಲ್ಲ ಮಾರಾಯ್ರೇ ಮಳೆ ಬಂತು-ಚಳಿ ತಂತು
ಹಾಗೆ ಇದೆ ಚಾನ್ಸ್ ಅಂತ ಆಶೇನೂ ತಂದುಕೊಂಡು ಬರಸೆಳೆದು ಪಪ್ಪಿ ಕೊಟ್ರೆ...!!
ಚಳಿ ದೂರ ಮಾಡಲು ಬಿಸಿ ಬೇಕು ನಿಜ.ಆದ್ರೆ ನೀವ್...!!
ಅಲ್ಲಲ್ಲ ನಿಮ್ ಕಥಾ ನಾಯಕ ಸೀದಾ.....ಅಲ್ಲಿಗೆ ....!!
ಈ ಮಳೆಯ ಛಳಿಯ ವಾತಾವರಣದಲ್ಲಿ ಕಲ್ಪ್ಸಿಕೊಳ್ಳಲು ಒಳ್ಳೆ ಕಥೆ...!!
ನಾನೂ ಬ್ರ್ಹಮಾಚಾರಿ ನೋಡಿ...!!
ಅದ್ಕೆ ಕಲ್ಪನೆ ರಸವತ್ತಾಗಿತ್ತು..!!
ಹಳಬರು (ಸಂಪದಿಗರು)ಬರಹ ಬರೆವುದು ಕಡಿಮೆ ಮಾಡಿ ಬರೀ ಪ್ರತಿಕ್ರಿಯೆಗಳಿಗೆ ಸೀಮಿತ ಗೊಂಡಿರುವಾಗ ನೀವ್ ಈ ಪಾಟಿ ಬರಹ ಬರೆವುದು ಮೆಚ್ಚತಕ್ಕದ್ದೆ ..
ಶುಭವಾಗಲಿ..
ನನ್ನಿ
\|
In reply to @ ಜಯಂತ್...- ಚಳಿ ದೂರ ಮಾಡಲು ಬಿಸಿ ಬೇಕು ನಿಜ.ಆದ್ರೆ ...!! by venkatb83
venkatesh malegaala mugiyutta
venkatesh malegaala mugiyutta bantu...aadashtu bega maduve aagibidi...illavaadare chaligaaladalli nenapugalu innashtu kaaduttave.
In reply to venkatesh malegaala mugiyutta by Jayanth Ramachar
ಏನಿದು ಜಯ0ತ್
ಜಯ0ತ್ ನೀವು ನೀವಾಗಿಯೆ ಹೋಗಿ ಹಳ್ಳಕ್ಕೆ ಬಿದ್ದಿದ್ದು ಅಲ್ಲದೆ ಈಗ ಹಳೆಬೀಡಿನ ಗಣಪತಿಯ ಶೆಟ್ಟರ ಕತೆಯ0ತೆ ಪಾಪ, ನಮ್ಮ ಸಪ್ತಗಿರಿಯನ್ನು ಸಹ ನೀವು ಬಿದ್ದಿರುವ ಹಳ್ಳಕ್ಕೆ ಎಳೆದು ಕೊಳ್ಳಲು ನೋಡುತ್ತ ಇದ್ದೀರಿ. ಅವರ ಪಾಡಿಗೆ ಅವರು ಹಾಯಾಗಿ ಇರಲಿ ಬಿಡಿ. ಇದೆಲ್ಲ ಇದ್ದಿದ್ದೆ ಮದುವೆ ಮಕ್ಕಳು ಸ0ಸಾರ ಎಲ್ಲ . ಅವರಾಗೆ ಎ0ದೊ ಮದುವೆ ಆಗುತ್ತಾರೆ ಅವತ್ತು ವಿಷ್ ಮಾಡಿ ನಾವು ಸ0ತಸಪಟ್ಟರಾಯಿತು, ಇನ್ನೊ0ದು ಮಿಕ ಬಲೆಗೆ ಬಿದ್ದಿತು ಎ0ದು :)))
In reply to ಏನಿದು ಜಯ0ತ್ by partha1059
ಅಲ್ಲ ಪಾರ್ಥಸಾರ್ಥಿಯವರೇ
ಅಲ್ಲ ಪಾರ್ಥಸಾರ್ಥಿಯವರೇ ನಾವೊಬ್ಬರೇ ಕಷ್ಟ ಪಡಬೇಕೆ? :)
@ ಜಯ0ಥ್ ಅವ್ರೇ ,ಅಹಾ ಎ0ಥ ಮಾತು..!!
ಜಯ0ಥ್ ಅವ್ರೇ
ಹಳ್ಳಕ್ಕೆ ಬೀಳಲೇ ಬೇಕು ಆದ್ರೇ ಈಗ ಬೇಡ ಬಿಡಿ...!!
ಹುಡುಗಿಯೇ ಇನ್ನು ಸಿಕ್ಕಿಲ್ಲ ಇನ್ನು ಆದಸ್ಟು ಬೇಗ ಮದುವೆ ಹೇಗೆ ಎಲ್ಲಿ ಸಾಧ್ಯ/...
ಅನ್ವೆಷಣೆ ಮು0ದುವರೆದಿದೆ....
ನೋಡುವ...
ಒಳಿತಾಗಲಿ..
\|
In reply to @ ಜಯ0ಥ್ ಅವ್ರೇ ,ಅಹಾ ಎ0ಥ ಮಾತು..!! by venkatb83
ಆದಷ್ಟು ಬೇಗ ಸಿಹಿ ಸುದ್ದಿ ನೀಡಿ
ಆದಷ್ಟು ಬೇಗ ಸಿಹಿ ಸುದ್ದಿ ನೀಡಿ ವೆಂಕಟೇಶ್ ಅವರೇ. ನಿಮ್ಮ ಅನ್ವೇಷಣೆ ಮುಂದುವರಿಯಲಿ
ಕಿಸ್ ಕೊಟ್ಟು ಮಾನಸಿಕವಾಗಿ ಸಿಕ್
ಕಿಸ್ ಕೊಟ್ಟು ಮಾನಸಿಕವಾಗಿ ಸಿಕ್ ಆದ ಕಥೆ ಚೆನ್ನಾಗಿದೆ
ಸಿಕ್ ಅಂತ ಯಾಕೆ ಅಂದ್ರೆ, ಮದುವೆಯಾದರು ಇನ್ನು ಹುಡುಕ್ತಾನೆ ಇದ್ದಿರಲ್ಲ, ಅದಕ್ಕೆ
ಈ ಮಳೆ ಭಾರಿ ಡೇಂಜರ್ ಕಣ್ರೀ ... ತಾನು ಹೊರಗಿದ್ದುಕೊಂಡು ಬಿದ್ದು, ಒಳಗಿರುವವರನ್ನೂ ಬೀಳಿಸುತ್ತದೆ
In reply to ಕಿಸ್ ಕೊಟ್ಟು ಮಾನಸಿಕವಾಗಿ ಸಿಕ್ by bhalle
ನಿಜ ಭಲ್ಲೆ ಅವರೇ...ಮಳೆಯೇ ಹಾಗೆ..
ನಿಜ ಭಲ್ಲೆ ಅವರೇ...ಮಳೆಯೇ ಹಾಗೆ...ಹಾಡೇ ಇಲ್ಲವೇ ಮಳೆ ನಿಂತು ಹೋದ ಮೇಲೆ..
ಪಾಪ ಒಂದು ಮುತ್ತಿನಿಂದ ಬಾರೀ
ಪಾಪ ಒಂದು ಮುತ್ತಿನಿಂದ ಬಾರೀ ಒದ್ದಾಡುತ್ತಿದ್ದಾನೆ.
ಅವಳು ಮರೆತರೂ ಇವನು ಮರೆಯುವ ಹಾಗಿಲ್ಲ
ಚೆನ್ನಾಗಿದೆ ನಿರೂಪಣೆ ಜಯಂತ್