ಎಲ್ಲೆಲ್ಲೂ ನಗುವೇ ನಗು !
ಎಲ್ಲೆಲ್ಲು ನಗುವೆ ನಗು ಈ ಲೋಕದಲ್ಲಿ
ಎಲ್ಲೆಲ್ಲೂ ನಗುವೇ ನಗು
ಕುಡಿಯುವವನಿಗೆ ಕುಡಿಯದವನ ಕಂಡು ನಗು
ಕುಡಿಯದವನಿಗೆ ಕುಡಿಸುವಾಸೆ ಕುಡಿಯುವವನಿಗೆ
ಮಾಂಸಹಾರಿಗೆ ಶಾಖಾಹಾರಿಯ ಕಂಡು ನಗು
ಒಮ್ಮೆ ರುಚಿ ತೋರಿಸುವ ಹೆಬ್ಬಯಕೆ ಮಾಂಸಹಾರಿಗೆ
ಧೂಮಪಾನಿಗೆ ಧೂಮ ಕಂಡರಾಗದವನ ಕಂಡು ನಗು
ತಾ ಕುಡಿವ ಧೂಮವ ಹಂಚಿಕೊಳ್ಳುವ ಆಸೆ ಧೂಮಪಾನಿಗೆ
ಬುದ್ದಿಜೀವಿಗೆ ಶಾಸ್ತ್ರ ಸಂಪ್ರದಾಯಸ್ತರ ಕಂಡು ನಗು
ಮೌಢ್ಯ ಪಾಲಿಸಿ, ಹಬ್ಬುವರೆಂಬ ತಾತ್ಸಾರ ಬುದ್ದಿಜೀವಿಗೆ
ಮೈಗಳ್ಳಗೆ ಮೈಬಗ್ಗಿಸಿ ದುಡಿಯುವವನ ಕಂಡು ನಗು
ತಂದಿದ್ದೇನು ತೊಗೊಂಡ್ ಹೋಗೋದೇನು ಎಂಬುವ ಮೈಗಳ್ಳ
ಲಂಚಕೋರನಿಗೆ ಲಂಚ ತಿನ್ನದವನ ಕಂಡು ನಗು
ಕೊಡುವ ಕೈ ಇರಲು ಪಡೆವ ಕೈಗೇನು ನೋವು ಎಂಬ ಲಂಚಕೋರ
ಜಾತಿ ಮತದ ಕಿಚ್ಚು ಹಚ್ಚಿ, ಕಚ್ಚಾಡುವವರ ಕಂಡಿವಗೆ ನಗು
ದಳ್ಳುರಿಯಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಂಬ ಅಧಮನಿವ
ನಾಸ್ತಿಕ ಮಹಾಪ್ರಭುವಿಗೆ ಆಸ್ತಿಕನನ್ನು ಕಂಡು ನಗು
ದೇವರಿಲ್ಲ ದಿಂಡರಿಲ್ಲವೆಂದು ಆಸ್ತಿಕನನ್ನು ಉರಿಸುವ ನಾಸ್ತಿಕ
ಐಹಿಕ ಸುಖ ಬಿಟ್ಟವನಿಗೆ ಸುಖವರಸುವವರ ಕಂಡು ನಗು
ಸುಖವಿದ್ದಷ್ಟೂ ಹೆಚ್ಚು ಸುಖವರಸುವವರಿಗೆ ನೆಮ್ಮದಿ ಅಲ್ಪಕಾಲಿಕ
ನಾಳೆಗಳ ಸುಳಿಯಲ್ಲೇ ಇಂದು ತ್ಯಜಿಸುವರ ಕಂಡು ದೇವನಿಗೆ ನಗು
ನಾಳೆಗಳೆಲ್ಲ ತಮ್ಮ ಕೈಯಲ್ಲಿರುವಂತೆ ನೆನ್ನೆ-ಇಂದು’ಗಳ ಮರೆವರೆಂದು
ಬಗೆ ಬಗೆ ನಗೆಯಲ್ಲಿ ಕಂಡವರ ನೋಡಿ ನಗುವುದೂ ಏಕೋ ಒಂದು ಬಗೆ
ಎಡವಿದನ ಕಂಡು ನಗೆ, ಎಡವುವವನ ಕಂಡು ನಗೆ, ಎಲ್ಲೆಡೆ ಕುಹಕ ನಗೆ
ಈ ದೀಪಾವಳಿಗಾದರೂ ನಿಷ್ಕಲ್ಮಷ ಬೆಳಕಿನಂತೆ ಚೆಲ್ಲಬಾರದೆ
ಮಗುವಿನ ನಗುವಿನಂತಹ ಸಹಬಾಳ್ವೆಯ ಮುಗ್ದ ನಗೆ?
Comments
ಆತ್ಮೀಯ ಭಲ್ಲೇಜಿ,
In reply to ಆತ್ಮೀಯ ಭಲ್ಲೇಜಿ, by Prakash Narasimhaiya
ಧನ್ಯವಾದಗಳು ಪ್ರಕಾಶರೆ