ಶ್ರೀ ಲಂಕಾ ಪ್ರವೇಶ ಪ್ರಯತ್ನಂ

ಶ್ರೀ ಲಂಕಾ ಪ್ರವೇಶ ಪ್ರಯತ್ನಂ

ಕವನ

 

ಲಂಕಾನಗರಂ ನಯನ ಮನೋಹರಂ

ವಿಹಂಗಮ ದೃಶ್ಯದಿ ತಲ್ಲೀನ ಹನುಮ

ಅಭೇದ್ಯ ಲಂಕೆಯ ಅಜೇಯ ರಾವಣ

ಸಿರಿಯಲಿ ತೇಲುವ ಸುವರ್ಣ ನಗರಿ

ಉತ್ಕಟ ರಕ್ಷಿತ ನವ ದಿಕ್ತಟ  ಲಂಕೆ

ಅಷ್ಟ ಪ್ರಹರದ ಪಹರೆಯ ಪ್ರಹರಿ  

ಲಂಕಿಣಿ ಜಾಣ್ಮೆಯ ಲಂಕೆಯ ರಕ್ಷಣೆ

ನವನವ ರಕ್ಷಣ ತಂತ್ರ ಪರೀಕ್ಷಣ

ನಿತ್ಯ ನೂತನ ಪಹರೆಯ ಪರಿಯು

ನವೀನ ಚಿಂತನ ತಂತ್ರದ ಬಲದಲಿ

ನೆಲಜಲ ಗಗನದಿ ನಿತ್ಯ ಸುರಕ್ಷಿತ

ಅದ್ಭುತ ತಂತ್ರದ ವಿಸ್ಮಯ ನಗರಿ

ಮೇಘವಾಹನ ರಾವಣ ಕುಂಭಕರ್ಣ

ವಿರೂಪಾಕ್ಷಾದಿ ವೀರ ವಿಭೀಷಣ 

ಭೀಷಣ ರಾಕ್ಷಸ ಕ್ಷಾತ್ರದಿ ರಕ್ಷಿತ

ಅಷ್ಟದಿಕ್ಪಾಲಕ ಕಿಂಕರ ಸೇವೆಯ   

ಸರ್ವ ಸುಸಜ್ಜಿತ ಸಿಂಹಳ ದ್ವೀಪಂ  || 1 ||

 

ಲಂಕೆಗೆ ನುಸುಳುವ ಸುಳಿವನು ತಿಳಿಯುವ

ದಣಿಯದ ವಾಯು ಭ್ರಮಣದಿ ಹನುಮ

ರಾವಣ ವಿಭ್ರಮೆ ಭ್ರಮಣದಿ ಹರಣ

ಕನ್ನಡ ಕ್ಷಾತ್ರದ ಹನುಮನ ಮುನ್ನಡೆ

ಲಂಕೆಯ ಹಿನ್ನಡೆ ಸೂಚಿತ ಮುನ್ನುಡಿ

ಸಮರ ದುರಂಧರ ಸುಂದರ ನಾಮದ

ರಾಮ ನಾಮ ಮಹಿಮಾನ್ವಿತ ಹನುಮ  || 2 ||

 

ಕ್ಷೇಮದ ಭೂಸ್ಪರ್ಶದ ತಾಣ ತಪಾಸಣೆ

ಲಂಕೆಯ ಉತ್ತರ ತೀರದಿ ತಂಗಿದ

ಸಂಧ್ಯಾ ಸೂರ್ಯನ ನಿತ್ಯದ ನಮನದಿ

ಗಗನ ಯಾನದ ಪ್ರಯಾಸದ ಶಮನ

ಸೂಕ್ಷ ರೂಪಾಕುಂಚಿತ ಪವನಜ

ಪಡುವಣ ದಿಶೆಯಲಿ  ದಿನಕರ ದೈನ್ಯ

ಶಶಿದೆಶೆನಿಶೆಯ ನಿಶಾಪಾಶದಿ ಕಡಲು   

ಪವನಜ ನಾಮದಿ ಪಾವನ ಜೀವನ || 3 ||

 

ಅಗುಂತಕ ಆಕಾಶ ಕಾಯದ ಭ್ರಮಣ

ವಿಚಕ್ಷಣ ವ್ಯೂಹ ವಿಹಂಗಮ ರಕ್ಷಣ

ವಾನರ ಧೀರ ವೀರೋಚಿತ ಹರಣ

ಲಂಕೆಯ ವ್ಯೋಮದ ಸೀಮೋಲ್ಲಂಘನ

ದಿಗ್ಭ್ರಮಿತ ಲಂಕಾ ಪಹರೆಯ ಪ್ರಹರಿ

ಲಂಕಾ ಸುರಕ್ಷಾ ಕ್ಷೋಭಿತ ಮಾಹಿತಿ

ಚಿಂತಿತ ರಕ್ಷಣ ಕಂಕಣ ಲಂಕಿಣಿ

ರಕ್ಷಣೆ ಪಡೆಯ ಪ್ರಮುಖರ ತಿಂತಿಣಿ  

ಕಿವಿಯಲಿ ಕರ್ತವ್ಯ ಲೋಪದ ಕಿಂಕಿಣಿ 

ವಿಹಂಗಮ ಭ್ರಮಣದಿ ಲಂಕಿಣಿ ತಪಾಸಣ

ಹನುಮನ ಪತ್ತೆಯ ವ್ಯರ್ಥದ ಪ್ರಯತ್ನ

ಪಹರೆಯ ಪ್ರಮುಖರ ಸಂಪರ್ಕ ಸಭೆಯು

ಉತ್ತರ ದ್ವಾರದಿ ಶಂಕಿತ ಚಲನೆಯು

ಸದಾ ಸನ್ನದ್ಧದಿ ಸೂಚಿತ ಸೇನೆಯು        || 4 ||

 

ವಿದ್ಯುತ್ಪ್ರಭಾವಳಿ ಢಾಳಿತ ಪರದೆಯ

ಪ್ರಭಾವ ಪರಿಧಿಯ ವಿಸ್ತೃತ ಪ್ರಸರಣ

ಅಣುರೇಣು ತೃಣಕಾಷ್ಠವ ತಡೆಯುವ

ವಿದ್ಯುನ್ಮಾನದ ಮೋಡವ ಹರಡಿದ

ಅಭೇದ್ಯ ರಕ್ಷಣೆ ಗೋಡೆಯ ಕೋಟೆ

ಮಂದಪ್ರಕಾಶ ಭೇದ್ಯ ಸರ್ವಬಿಂಬ

ಗ್ರಾಹಕ ಪ್ರೇಷಕಾದಿ ತಂತ್ರಯುಕ್ತ   

ಅಂತರಿಕ್ಷ ಕ್ಷೇತ್ರ ಪರಿವೀಕ್ಷಣ ಸಮರ್ಥ

ಸೂಕ್ಷ್ಮ ಚಲನವಲನ ನಿಖರ ಗ್ರಾಹಿ

ಸರ್ವಾಕ್ಷ ಭ್ರಮಣ ಬಿಂಬಾಕ್ಷಿಯುಕ್ತ

ವಿಚಕ್ಷಣ ವೈಮಾನಿಕ ಪಹರೆಯ ಪಡೆ

ಲಂಕೆಗೆ ಕಪಟದ ಪ್ರವೇಶ ದುಸ್ತರ     || 5 ||

 

ಹನುಮನ ಮನದಲಿ ಚಿಂತನ ಮಂಥನ

ಶತೃ ಕ್ಷೇತ್ರ ಅಪಮಾರ್ಗ ಪ್ರವೇಶಕೆ

ಮಾರ್ಜಾಲ ವೇಷದಿ ಲಂಘನ ಪ್ರಯತ್ನ

ವಿದ್ಯುತ್ ಬಲೆಯ ಹೊಡೆತದ ಸಿಡಿತಕೆ

ಬೆಚ್ಚಿದ ಹನುಮ ಹಲ್ಲನು ಕಿರಿಯುತ

ಮೆಚ್ಚಿದ ರಾವಣ ರಕ್ಷಣೆ ತಂತ್ರಕೆ

ನಿಶ್ಚಿತ ದ್ವಾರದಿ ನೇರ ಪ್ರವೇಶಕೆ

ಪ್ರಚೋದಿತ ಪ್ಲವಗ ಪ್ರಯಾಸ ಪ್ರಯತ್ನ   || 6 ||  

 

ಮಾರುವೇಷದಿ ಮಾರುತಿ ಪ್ರವೇಶದ

ಪ್ರತೀಕ್ಷೆಯ ಲಂಕಿಣಿ ಬಿಂಕದ ಪಡೆಯು

ಚುಂಬಕ ಬಲೆಯಲಿ ಹನುಮನ ಬಂಧಿಸಿ

ತಡೆಯಿತು ಹನುಮನ ಪ್ರವೇಶ ದ್ವಾರದಿ

ಲಂಕೆಗೆ ನುಸುಳುವ ಹೊಂಚಿನ ಸಂಚಿಗೆ

ವಾನರ ವಿವರದ ಪ್ರವರದ ಪ್ರಶ್ನೆಗೆ

ನಗರ ಕುತೂಹಲಿ ಚಪಲ ವನಚರ

ನಗರ ದರ್ಶನ ಕಾರಣ ನಂಬದ

ಲಂಕಾ ಪ್ರವೇಶ ಪ್ರತಿಬಂಧಿತ ಹನುಮ  || 7 ||

 

ಪ್ರತಿಬಂಧನೋಲ್ಲಂಘಿತದಿಂಗಿತ           

ಕುಪಿತ ಕಪಿಕುಂಜರ ಕದನ ಕುತೂಹಲಿ

ಹನುಮ ಮನ ಮಂಡಿತ ಮುದ್ಗರಧಾರಿ

ದಗ್ಧಿತ ಘಾತದಿ ಗದ್ಗಿತ ಲಂಕಿಣಿ

ಶಪಿತ ಯಕ್ಷಿಣಿ ಶಾಪ ವಿಮೋಚನ

ಲಂಕೆಯ ರಕ್ಷಣ ಕಂಕಣ ಹರಣದಿ

ರಾವಣ ನಾಶ ವಿನಾಶದ ಮುನ್ನುಡಿ

ರಕ್ಷಣ ಪಡೆಯು ತಡೆಯದು ನಿನ್ನನು

ಇಚ್ಛಿತ ಕಾರ್ಯದ ಸ್ವಚ್ಛಂದ ಸಿದ್ಧಿಯ

ಲಂಕಾ ಪ್ರವೇಶ ಸಂಭ್ರಮ ಹನುಮ  || 8 ||

 

ಹಂಪೆಯ ಹನುಮನ ಸಾಹಸ ಕಥನದ

ಲಂಕಾ ಪ್ರವೇಶ ಪ್ರಯಾಸ ಪ್ರಯತ್ನದ

ಜಯಪ್ರಕಾಶಿತ ಕನ್ನಡ ಕವನ

ಹಂಪೆಯ ಪಂಪನು ಪವನಜ ಹನುಮನು

ದಶರಥ ರಾಮನು ಹರಸಲಿ ನಮ್ಮನು     || 9 || 

Comments