ಒಮ್ಮೊಮ್ಮೆ ಹೀಗೂ ಆಗುವುದು...
ಯಾಕೋ ಕೈ ಚಡಪಡಿಸುತ್ತಿತ್ತು. ಏನನ್ನಾದರೂ ಬರಿ ಬರಿ ಎಂದು. ಆದರೆ ಅದ್ಯಾಕೋ ಗೊತ್ತಿಲ್ಲ!! ತುಂಬಾ ದಿನ ಆಗಿ ಹೋಗಿತ್ತು ಬರೆಯಲು ಬಿಟ್ಟು. ಮತ್ತೆ ಕೈ ಪೆನ್ ಹಿಡಿ ಎಂದು ಚಡಪಡಿಸುತ್ತಿತ್ತು. ಸತತವಾಗಿ ಕಥೆಗಳನ್ನು ಬರೆದುದರಿಂದಲೋ ಏನೋ ಮನಸಿನಲ್ಲಿ ಹೊಸ ಆಲೋಚನೆಗಳೇ ಬರುತ್ತಿರಲಿಲ್ಲ. ಇವತ್ತು ಏನಾದರೂ ಆಗಲಿ ಬರೆದೆ ಬಿಡೋಣ ಎಂದು ಕೂತರೂ ತಲೆಗೆ ಏನೂ ಹೊಳೆಯುತ್ತಿರಲಿಲ್ಲ. ಆದರೆ ಇನ್ನು ಹೀಗೆ ಬಿಟ್ಟರೆ ಸರಿ ಇರುವುದಿಲ್ಲ ಎಂದು ನಿರ್ಧರಿಸಿ ಪೆನ್ನು ಪೇಪರ್ ಹಿಡಿದು ಹೊರಟೆ.
ನನ್ನ ಸುಮಾರು ಕಥೆಗಳಿಗೆ ಸ್ಪೂರ್ತಿ ಸಿಕ್ಕಂತ ಜಾಗ ಎಂದರೆ ರೈಲ್ವೆ ನಿಲ್ದಾಣ. ಯಾಕೆಂದರೆ ಅಲ್ಲಿ ಅದೆಷ್ಟೋ ಸಾವಿರ ಜನ ಬರುತ್ತಾರೆ ಹೋಗುತ್ತಾರೆ. ಪ್ರತಿ ಬಾರಿ ರೈಲಿನಲ್ಲಿ ಪ್ರಯಾಣ ಮಾಡಿದಾಗಲೂ ಒಂದೊಂದು ಹೊಸ ಕಥೆ ಸಿಗುತ್ತದೆ. ಆದ್ದರಿಂದ ಮತ್ತೆ ಅಲ್ಲಿಗೆ ಹೋಗೋಣ ಎಂದು ನಿರ್ಧರಿಸಿ ರೈಲ್ವೆ ನಿಲ್ದಾಣಕ್ಕೆ ಬಂದೆ.
ವಾರದ ದಿನವಾಗಿರಲಿ, ವಾರಾಂತ್ಯವಾಗಿರಲಿ ಸದಾಕಾಲ ಗಿಜಿಗುಟ್ಟುವ ನಿಲ್ದಾಣ ಅಂದೇಕೋ ಸ್ತಬ್ಧವಾಗಿತ್ತು. ಹೆಚ್ಚು ಜನಸಂದಣಿ ಇರಲಿಲ್ಲ. ಸಾಯಂಕಾಲ ಮನೆಯಿಂದ ಹೊರಡುತ್ತಾ ವಾರ್ತೆಯಲ್ಲಿ ನೋಡಿದ್ದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ನೆರೆ ಬಂದು ರೈಲು ಸಂಚಾರ ಸ್ಥಗಿತಗೊಂಡಿದೆ ಎಂದು. ಓಹೋ...ಹಾಗಾಗಿ ಅಷ್ಟು ಜನ ಕಾಣಿಸುತ್ತಿಲ್ಲ. ಇನ್ನೇನು ಮಾಡುವುದು ಎಂದು ಪ್ಲಾಟ್ಫಾರ್ಮ್ ಟಿಕೆಟ್ ತೆಗೆದುಕೊಂಡು ಒಳಗೆ ಹೋದೆ. ಅಲ್ಲೂ ಅಷ್ಟಾಗಿ ಜನಸಂದಣಿ ಇರಲಿಲ್ಲ.
ಅಲ್ಲೇ ಒಂದು ಬೆಂಚಿನ ಮೇಲೆ ಕುಳಿತುಕೊಂಡು ಸುಮ್ಮನೆ ಖಾಲಿ ಟ್ರಾಕನ್ನು ನೋಡುತ್ತಾ ಪೆನ್ನು ಪೇಪರ್ ತೆಗೆದುಕೊಂಡು ಕುಳಿತೆ. ಊಹುಂ....ಏನೂ ಪ್ರಯೋಜನವಾಗಲಿಲ್ಲ. ಯಾವುದೂ ಹೊಸ ವಿಚಾರ ತಲೆಗೆ ಬರುತ್ತಿಲ್ಲ. ಅಷ್ಟರಲ್ಲಿ ತುಂಬಾ ಮೇಲು ದನಿಯಲ್ಲಿ ಯಾರೋ ಅಳುತ್ತಿರುವ ಸದ್ದು ಕೇಳಿತು. ಯಾರೆಂದು ಸುತ್ತಲೂ ಪರೀಕ್ಷಿಸಿದೆ. ನನ್ನ ಹಿಂಬದಿಯಲ್ಲಿ ಇದ್ದ ಮತ್ತೊಂದು ಬೆಂಚಿನ ಮೇಲೆ ಒಬ್ಬಳು ಯುವತಿ ಕುಳಿತಿದ್ದಳು.
ಆ ಯುವತಿ ತನ್ನ ತೊಡೆಯ ಮೇಲೆ ಬ್ಯಾಗೊಂದನ್ನು ಇಟ್ಟುಕೊಂಡು ಅದರ ಮೇಲೆ ತನ್ನ ಮುಖವನ್ನು ಇಟ್ಟುಕೊಂಡು ಅಳುತ್ತಿದ್ದಳು. ಒಮ್ಮೆಲೇ ಹೋಗಿ ಅವಳನ್ನು ಸಮಾಧಾನ ಪಡಿಸಬೇಕು ಎಂದೆನಿಸಿದರೂ ಮರುಕ್ಷಣದಲ್ಲೇ ನಾನೊಬ್ಬ ಅಪರಿಚಿತ ಎಂಬ ಭಾವನೆ ನನ್ನನ್ನು ತಡೆದು ನಿಲ್ಲಿಸಿತು. ಆದರೂ ಯಾಕೋ ಅವಳಿಗೆ ಸಮಾಧಾನ ಮಾಡಬೇಕು ಎಂಬ ಹಪಹಪಿ ನನ್ನನ್ನು ಕಾಡುತ್ತಿತ್ತು.
ಅವಳು ಯಾಕೆ ಅಳುತ್ತಿರಬಹುದು? ಬಹುಷಃ ಅವಳು ಯಾವುದೋ ಹುಡುಗನನ್ನು ಪ್ರೀತಿಸಿ ಮನೆಯಲ್ಲಿ ಅದಕ್ಕೆ ಒಪ್ಪಿಗೆ ಸಿಕ್ಕದೆ ಮನೆ ಬಿಟ್ಟು ಬಂದು ಅದಕ್ಕೆ ಮರುಕ ಪಟ್ಟು ಅಳುತ್ತಿದ್ದಾಳ? ಅಥವಾ ರೈಲ್ವೆ ನಿಲ್ದಾಣಕ್ಕೆ ಬಾ ಓಡಿ ಹೋಗೋಣ ಎಂದು ಹೇಳಿದ ಪ್ರಿಯಕರ ಕೊನೆಯ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿಕೊಂಡು ಬರುವುದಿಲ್ಲ ಎಂದಿದ್ದಾನ? ಅಥವಾ ಆ ಯುವತಿ ಯಾವುದೋ ಪರೀಕ್ಷೆ ತೆಗೆದು ಕೊಂಡು ಅದರಲ್ಲಿ ಅನುತ್ತೀರ್ಣಳಾಗಿ ಸಾಯಲು ಏನಾದರೂ ಬಂದಿದ್ದಾಳ?
ಛೆ!! ಇಲ್ಲ ಹಾಗಾಗಲು ನಾನು ಬಿಡುವುದಿಲ್ಲ. ಹೇಗಾದರೂ ಮಾಡಿ ಅವಳನ್ನು ಮಾತಾಡಿಸಿ ಅವಳನ್ನು ಸಮಾಧಾನ ಪಡಿಸಬೇಕು. ಒಂದು ಜೀವ ಉಳಿಸಬೇಕು. ಆದರೆ ಏನೆಂದು ಹೋಗಿ ಮಾತಾಡಿಸಲಿ? ಒಂದು ವೇಳೆ ಅವಳು ಸರಿಯಾಗಿ ಪ್ರತಿಕ್ರಿಯಿಸಿದರೆ ಪರವಾಗಿಲ್ಲ. ಅಕಸ್ಮಾತ್ ನಿನಗ್ಯಾಕೆ ನನ್ನ ವಿಷಯ ಎಂದು ಬೈದು ಬಿಟ್ಟರೆ? ಅಥವಾ ಪೋಲಿಸ್ ಅಂತ ಏನಾದರೂ ಕೂಗಿಬಿಟ್ಟರೆ? ಏನು ಮಾಡುವುದು ದಿಕ್ಕೇ ತೋಚುತ್ತಿಲ್ಲವಲ್ಲ.
ಸುಮ್ಮನೆ ಮತ್ತೊಮ್ಮೆ ಹಿಂದೆ ತಿರುಗಿ ನೋಡಿದೆ. ಈಗ ಅವಳು ಪಕ್ಕದಲ್ಲಿದ್ದ ಬಾಟಲಿನಿಂದ ನೀರು ಕುಡಿದು, ತನ್ನ ದುಪಟ್ಟಾದಿಂದ ಕಣ್ಣನ್ನು ಒರೆಸಿಕೊಳ್ಳುತ್ತಿದ್ದಳು. ಆಗಿದ್ದಾಗಲಿ ಹೋಗಿ ಮಾತಾಡಿಸಿ ಬಿಡೋಣ ಎಂದು ಕೊಂಡು ನನ್ನ ವಸ್ತುಗಳನ್ನೆಲ್ಲ ತೆಗೆದುಕೊಂಡು ನಿಧಾನವಾಗಿ ಅವಳ ಬೆಂಚಿನ ಕಡೆ ಹೆಜ್ಜೆ ಹಾಕಿದೆ. ಏನೂ ಅವಾಂತರ ನಡೆಯಬಾರದು ಎಂದು ಎಂದು ಮನಸಿನಲ್ಲೇ ದೇವರನ್ನು ಪ್ರಾರ್ಥಿಸುತ್ತ ಅತ್ತ ಇತ್ತ ನೋಡುತ್ತಾ ಸೀದಾ ಹೋಗಿ ಅವಳ ಬೆಂಚಿನ ಇನ್ನೊಂದು ಬದಿಯಲ್ಲಿ ಕುಳಿತೆ.
ಅವಳು ಒಮ್ಮೆ ನನ್ನ ಕಡೆ ತೀಕ್ಷ್ಣವಾಗಿ ನೋಡಿ, ಇಷ್ಟು ಹೊತ್ತು ಅಲ್ಲಿ ಕೂತಿದ್ದವನು ಈಗ ಇದ್ದಕ್ಕಿದ್ದ ಹಾಗೆ ಇಲ್ಲಿ ಯಾಕೋ ಬಂದೆ ಎಂದು ಕೇಳಿದಂತಿತ್ತು. ನಾನು ಒಮ್ಮೆ ಅವಳ ಕಡೆ ನೋಡಿ, ಹಲೋ ನನ್ನ ಹೆಸರು ಪೃಥ್ವಿ ಎಂದು ನಾನೊಬ್ಬ ಕಥೆಗಾರ ಎಂದೆ. ಅದಕ್ಕವಳು, ಸರಿ ಅದಕ್ಕೆ ಏನೀಗ? ಎಂದಳು.
ಇಲ್ಲ ಅದು ನಾನು ಇಷ್ಟು ಹೊತ್ತು ಅಲ್ಲಿ ಕುಳಿತಿದ್ದೆ. ಯಾರೋ ಅಳುತ್ತಿರುವುದು ಕೇಳಿಸಿತು ತಿರುಗಿ ನೋಡಿದರೆ ನೀವು ಅಳುತ್ತಿದ್ದಿರಿ. ಅದಕ್ಕೆ ಏನು ಕಾರಣ....ಎಂದು ಕೇಳೋಣ ಎಂದುಕೊಂಡು ಇಲ್ಲಿಗೆ ಬಂದೆ ಎಂದು ನಿಧಾನವಾಗಿ ರಾಗವಾಗಿ ಹೇಳಿದೆ. ಅದಕ್ಕವಳು ನನ್ನ ಕಡೆ ಮತ್ತೊಮ್ಮೆ ನೋಡಿ ತನ್ನ ದುಪಟ್ಟಾ ದಿಂದ ತನ್ನ ಮೂಗನ್ನು ಒರೆಸಿಕೊಂಡು ತನ್ನ ಬ್ಯಾಗನ್ನು ಎತ್ತಿಕೊಂಡು ಮೇಲೆದ್ದಳು.ಯಾಕಪ್ಪ ಇವಳು ಮೇಲೆದ್ದಳು?
ಅಪ್ಪಿತಪ್ಪಿ ಕಪಾಳಕ್ಕೆ ಬಿಗಿದರೆ? ಅಥವಾ ಜೋರಾಗಿ ಕೂಗಿ ಕೊಂಡರೆ? ಅಷ್ಟರಲ್ಲಿ ಟ್ರೈನ್ ಬಂದಿತು. ಆ ಯುವತಿ ತನ್ನ ಬ್ಯಾಗನ್ನು ಇನ್ನೊಮ್ಮೆ ಸರಿ ಮಾಡಿಕೊಂಡು, ನೀರಿನ ಬಾಟಲ ತೆಗೆದುಕೊಂಡು ಮೆಲ್ಲನೆ ನನ್ನ ಬಳಿ ಬಂದು ಒಮ್ಮೆ ನನ್ನ ನೋಡಿ ನಕ್ಕು ಮಿ.ಪೃಥ್ವಿ ನಾನು ಅಳುತ್ತಿರಲಿಲ್ಲ. ಆಚೆಯಿಂದ ಪಾರ್ಸಲ್ ತೆಗೆದು ಕೊಂಡು ಬಂದಿದ್ದ ಮೆಣಸಿನಕಾಯಿ ಬಜ್ಜಿ ತುಂಬಾ ಖಾರ ಇತ್ತು. ಅದಕ್ಕೆ ಕಣ್ಣಲ್ಲಿ ನೀರು ಬರುತ್ತಿತ್ತು ಅಷ್ಟೇ ಎಂದು ಕಣ್ಣು ಹೊಡೆದು ತನ್ನ ಭೋಗಿಯ ಕಡೆ ನಡೆದಳು
Comments
ಆತ್ಮೀಯ ಜಯನ್ತರೇ,
ಆತ್ಮೀಯ ಜಯನ್ತರೇ,
ಉತ್ತಮವಾದ ಪ್ರಸ್ತುತಿ. ಕೊನೆಯವರೆಗೂ ಒದಿಸಿಕೊನ್ದು ಹೊಗಿ, ಕೊನೆಗೆ ಇಷ್ತೆನಾ ! ಅನ್ನಿಸುತ್ತೆ. ಧನ್ಯವಾದಗಳು.
In reply to ಆತ್ಮೀಯ ಜಯನ್ತರೇ, by Prakash Narasimhaiya
ಧನ್ಯವಾದಗಳು ಪ್ರಕಾಶ್ ಅವರೇ :)
ಧನ್ಯವಾದಗಳು ಪ್ರಕಾಶ್ ಅವರೇ :)
ಸಸ್ಪೆನ್ಸ್ ಚೆನ್ನಾಗಿದೆ ... ನನ್
ಸಸ್ಪೆನ್ಸ್ ಚೆನ್ನಾಗಿದೆ ... ನನ್ ಸ್ಟೈಲಿನಲ್ಲಿ ಹೇಳಿದರೆ "ಕರುಳು ಕಿತ್ತ ಖಾರದ ಕಥೆ" ಬೊ೦ಬಾಟಾಗಿತ್ತು
In reply to ಸಸ್ಪೆನ್ಸ್ ಚೆನ್ನಾಗಿದೆ ... ನನ್ by bhalle
ಪ್ರಾರಂಭದಲ್ಲಿ ಓದುತ್ತಾ
ಪ್ರಾರಂಭದಲ್ಲಿ ಓದುತ್ತಾ ಹೋಗುತ್ತಿದ್ದಂತೆ ಕಥಾ ನಾಯಕಿ ಉದ್ಯೋಗದ ಸಲುವಾಗಿ ತನ್ನೂರನ್ನು ಬಿಟ್ಟು ಬೇರೆ ಊರಿಗೆ ಹೋಗಲಿರುವುದರಿಂದ ದುಖಿ:ಸುತ್ತಿರಬಹುದೇನೋ ಎನ್ನುವ ಯೋಚನೆ ಬಂತು. ಕೊನೆಗೆ ಕಥೆಯ ತಿರುವು ಮೆಣಸಿನಕಾಯಿ ಬಜ್ಜಿಯ ಮಹಿಮೆ ಎಂದಾಗ ನಗು ಬಂತು. ಕಥೆ ತುಂಬಾ ಚೆನ್ನಾಗಿದೆ.
In reply to ಪ್ರಾರಂಭದಲ್ಲಿ ಓದುತ್ತಾ by mamatha.k
ಮಮತಾ ಅವರೇ ನಿಮ್ಮ ಮೆಚ್ಚುಗೆಗೆ
ಮಮತಾ ಅವರೇ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು :)
In reply to ಸಸ್ಪೆನ್ಸ್ ಚೆನ್ನಾಗಿದೆ ... ನನ್ by bhalle
ಹ್ಹ ಹ್ಹ ಹ್ಹ :) ಧನ್ಯವಾದಗಳು
ಹ್ಹ ಹ್ಹ ಹ್ಹ :) ಧನ್ಯವಾದಗಳು ಭಲ್ಲೆ ಜಿ
In reply to ಹ್ಹ ಹ್ಹ ಹ್ಹ :) ಧನ್ಯವಾದಗಳು by Jayanth Ramachar
ಭಲ್ಲೇಜಿಯ"ಕರುಳು ಕಿತ್ತ ಖಾರದ ಕತೆ
ಭಲ್ಲೇಜಿಯ"ಕರುಳು ಕಿತ್ತ ಖಾರದ ಕತೆ" :) ಸೂಪರ್ ಆಗಿತ್ತು ಜಯಂತ್.
-ಗಣೇಶ.
In reply to ಭಲ್ಲೇಜಿಯ"ಕರುಳು ಕಿತ್ತ ಖಾರದ ಕತೆ by ಗಣೇಶ
ಹ್ಹ ಹ್ಹ ಹ್ಹ ಧನ್ಯವಾದಗಳು
ಹ್ಹ ಹ್ಹ ಹ್ಹ ಧನ್ಯವಾದಗಳು ಗಣೇಶಣ್ಣ :)
ಆ ಯುವತಿಯನ್ನು ನಗಿಸಿ ನಮ್ಮನ್ನೂ
ಆ ಯುವತಿಯನ್ನು ನಗಿಸಿ ನಮ್ಮನ್ನೂ ನಗಿಸಿದ್ರಿ :) :) ಸಕತ್ತಾಗಿದೆ
In reply to ಆ ಯುವತಿಯನ್ನು ನಗಿಸಿ ನಮ್ಮನ್ನೂ by Vinutha B K
ಧನ್ಯವಾದಗಳು ವಿನುತ ಅವರೇ :)
ಧನ್ಯವಾದಗಳು ವಿನುತ ಅವರೇ :)
:)))
:)))
::::))))
::::))))