ಆ 'ಸಿನೆಮಾ' ಕಥಾನಕದ ಟ್ರೈಲರ್....
.
ಟೆಲಿವಿಜನ್ ಭಾರತಕ್ಕೆ ಬರುವ ಮೊದಲು ಸಿನೆಮಾ ತಕ್ಷಣ ವಿಕ್ಷಣೆಗೆ ಒದಗುವ ಒಂದು ಮನರಂಜನಾ ಮಾಧ್ಯಮವಾಗಿತ್ತು. ಅದಕ್ಕೂ ಮೊದಲು ನಾಟಕ, ಬಯಲಾಟ, ಸಣ್ಣಾಟ, ಯಕ್ಷಗಾನ ಕಿಳ್ಳಿಕ್ಯಾತರ ಆಟ ಮತ್ತು ತೊಗಲುಗೊಂಬೆಯಾಟಗಳು ಜನ ಸಾಮಾನ್ಯರ ಮನರಂಜನಾ ಮಾಧ್ಯಮಗಳಾಗಿದ್ದವು. ಮೂಕಿಯಿಂದ ಟಾಕಿಗೆ ಸಾಗಿದ ಚಲನಚಿತ್ರ ಮಾಧ್ಯಮ ಭಾರತದಲ್ಲಿ ವಿಶೇಷ ಜನಮನ್ನಣೆ ಪಡೆದು ರಂಜನೆಗೆ ತೊಡಗಿತು. ಯಾಕೆಂದರೆ ಜನ ಸಾಮಾನ್ಯರ ಜೋಬಿಗೆ ಭಾರವಲ್ಲದ ಪ್ರತಿದಿನವೂ ಲಭ್ಯವಾಗುವ ವಿಷಯ ವೈವಿಧ್ಯತೆಯ ರಂಜನಾ ಮಾಧ್ಯಮ. ಇದು ಬಹುಬೇಗ ಮಹಾನಗರಗಳಿಂದ ಹಿಡಿದು ಕುಗ್ರಾಮಗಳ ತನಕ ಶರವೇಗದಲ್ಲಿ ಜನಪ್ರಿಯತೆಯನ್ನು ಪಡೆಯಿತು. ಹೀಗಾಗಿ ದೇಶದಲ್ಲಿ ಶಾಶ್ವತ ಅರೆಶಾಶ್ವತ ಮತ್ತು ಸಂಚಾರಿ ಚಲನ ಚಿತ್ರ ಮಂದಿರಗಳು ತಲೆ ಎತ್ತಿದವು. ಟೆಲಿವಿಜನ್ ಜಾಲ ಗ್ರಾಮಾಂತರ ಪ್ರದೇಶಕ್ಕೆ ಹಬ್ಬುತ್ತಿದ್ದಂತೆ ಹೆಚ್ಚಿದ ಮನರಂಜನಾ ಚಾನಲ್ಗಳು ಸಿನೆಮಾ ಮಂದಿರಗಳ ಅವನತಿಗೆ ಕಾರಣವಾದವು. ಕ್ರಮೇಣ ಬಹುತೇಕ ಸಂಚಾರಿ ಚಿತ್ರ ಮಂದಿರಗಳು ಮುಚ್ಚಿದವು.
ಪ್ರಾರಂಭದಲ್ಲಿ ಭಕ್ತಿಪ್ರಧಾನ ನಂತರದಲ್ಲಿ ಕ್ರಮೇಣ ಪೌರಾಣಿಕ, ಐತಿಹಾಸಿಕ ಮತ್ತು ಜಾನಪದ ಚಿತ್ರಗಳು ಜನ ಸಾಮಾನ್ಯರನ್ನು ರಂಜಿಸಿದವು. ನಂತರದಲ್ಲಿ ಸಾಮಾಜಿಕ ಚಿತ್ರಗಳೆಡೆಗೆ ಹೊರಳಿದ ಚಲನಚಿತ್ರ ರಂಗ ನಮ್ಮ ಗ್ರಾಮೀಣ ಸಮಾಜದಲ್ಲಿ ಒದು ಸಂಚಲನೆಯನ್ನೆ ಉಂಟು ಮಾಡಿತು. ಈ ಸಾಮಾಜಿಕ ಚಿತ್ರಗಳು ವಿಶೇಷವಾಗಿ ಯುವ ಪೀಳಿಗೆಯನ್ನು ಆಕರ್ಷಿಸಿತು. ವಿಧವಾ ವಿವಾಹ, ಹೆಣ್ಣುಮಕ್ಕಳ ಮರುವಿವಾಹ ಮತ್ತು ಪ್ರೇಮವಿವಾಹಗಳು ಯುವ ಪೀಳಿಗೆಯನ್ನು ಆಕರ್ಷಿಸಿದರೆ ಹಿರಿಯ ತಲೆಮಾರಿನವರಿಗೆ ಒಂದು ತಲೆನೋವಾಗಿ ಪರಿಣಮಿಸಿತು. ಅಲ್ಲಿ ಉಂಟಾದದ್ದೆ ಹಿರಿ ಮತ್ತು ಕಿರಿತಲೆಗಳ ಮಧ್ಯೆ ಒಂದು ತರಹದ ಶೀತಲ ಸಂಘರ್ಷ ಪ್ರಾರಂಭವಾಯಿತು. ಆ ಕಾಲದ ಈ ಸಂಘರ್ಷವನ್ನು ಅಲ್ಪ ಪ್ರಮಾಣದಲ್ಲಿ ಕಥಾನಕದ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ.
ಇದರಲ್ಲಿ ಬಾಲ್ಯದಲ್ಲಿ ಸಿನೆಮಾ ವ್ಯಾಮೋಹವಿದ್ದು ಬೆಳೆದಂತೆ ಅದರ ವ್ಯಾಮೋಹದಿಂದ ಹೊರಬಂದು ತನ್ನದೆ ಮಿತಿಯಲ್ಲಿ ಬದುಕು ಕಟ್ಟಿಕೊಳ್ಳುವ ಮಾದೇವನ ಪಾತ್ರ ಒಂದಾದರೆ, ಇನ್ನೊಂದು ಪಾತ್ರ ಆತನ ಸಿನೆಮಾ ವ್ಯಾಮೋಹದಿಂದ ಹೊರಬರಲಾಗದ ಸಹಪಾಠಿ ದೀಪಕನದು. ದೀಪಕ ಮತ್ತು ಮಾದೇವ ಜೀವನದಿಯ ಎರಡು ದಂಡೆಗಳಾದರೆ ಸಿನೆಮಾ ಆ ನದಿಯ ಜೀವದ್ರವ. ಅದು ತನ್ನ ಎಲ್ಲ ವೈಭವ ಲಾಸ್ಯಗಳೊಡನೆ ರಂಜಿಸುತ್ತ ಒಮ್ಮೆ ಆ ದಂಡೆಗೆ ಒಮ್ಮೆ ಈ ದಂಡೆಗೆ ಸಾಗುತ್ತ ಚಲಿಸುವ ರಂಜಕ ಗಂಗೆ. ಈ ಮೂವರನ್ನು ಒಳಗೊಂಡು ಫ್ಲಾಶ್ ಬ್ಯಾಕ್ನಲ್ಲಿ ಬಿಚ್ಚಿಕೊಳ್ಳುತ್ತ ಹೋಗುವ ಒಂದು ಕಥಾನಕ. ಇದನ್ನು ಸಂಪದಿಗರ ಮುಂದಿಡುತ್ತಿದ್ದೇನೆ. ಅದರ ಸೋಕ್ಷ ಮೋಕ್ಷ ಓದುಗರು ನಿರ್ಧರಿಸುತಾರೆ, ಇಷ್ಟು ಸಾಕು ಎಂದು ಈ ಪೀಠಿಕೆ ಮುಗಿಸುವೆ.
ತಮ್ಮ ವಿಶ್ವಾಸಿ
ಹನುಮಂತ ಅನಂತ ಪಾಟೀಲ
ರಿಪ್ಪನಪೇಟೆ.
Comments
ಪಾಟೀಲರಿಗೆ ನಮಸ್ಕಾರಗಳು
ಪಾಟೀಲರಿಗೆ ನಮಸ್ಕಾರಗಳು
ಸಿನೆಮಾ ಮಾದ್ಯಮ ಉಪಯೋಗಿಸಿ ಇಬ್ಬರು ಸ್ನೇಹಿತರ ಕಥೆಯನ್ನು ಹೇಳಲು ಹೊರಿಟ್ಟಿದ್ದೀರಿ.ಬೆಷ್ಟ ಆಫ್ ಲಕ್ಕ್! ಸಿನೆಮಾದ ರೀಲುಗಳೆಷ್ಟು ?ತಿಳಿಸಿ.ಅಂತು ತಮ್ಮ ಹಳೆಯ ನೆನಪನ್ನು ಕೆದಕಲಿದ್ದೀರಿ.
ವಂದನೆಗಳು
In reply to ಪಾಟೀಲರಿಗೆ ನಮಸ್ಕಾರಗಳು by swara kamath
ರಮೇಶ ಕಾಮತರಿಗೆ ವಂದನೆಗಳು
ರಮೇಶ ಕಾಮತರಿಗೆ ವಂದನೆಗಳು
" ಸಿನೆಮಾ " ಟ್ರೇಲರ್ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ತಮ್ಮ ಪ್ರೋತ್ಸಾಹಕ್ಕೆ ಧನ್ಯವದಗಳು.