ಲಾಟರಿ ! ಲಾಟರಿ !!

ಲಾಟರಿ ! ಲಾಟರಿ !!

ರವಿತೇಜ ನಿಸ್ತೇಜನಾಗಿ ಶೂನ್ಯ ದೃಷ್ಟಿ ಬೀರುತ್ತ ಗೋಡೆಯತ್ತ ನೋಡುತ್ತಿದ್ದ ... ಗೋಡೆಯ ಮೇಲೆ ನೇತುಹಾಕಿದ್ದ ಅ ಬಣ್ಣದ ಕಾಗದದ ಚಿತ್ರವನ್ನೇ ನೋಡುತ್ತಿದ್ದ ... ಆ ಚಿತ್ರದ ಫ್ರೇಮ್ ಕಿತ್ತು ಹೋಗಿತ್ತು, ಗಾಜು ಒಡೆದಿತ್ತು .... ಮನೆಯ ಎಲ್ಲೆಡೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ... ಅನಾಥವಾಗಿ ನೆಲಕ್ಕೆ ಬಿದ್ದಿದ್ದ ಒಂದೊಂದು ವಸ್ತುಗಳು ತಮ್ಮ ಮೇಲಾದ ದೌರ್ಜನ್ಯವನ್ನು ಕೂಗಿ ಸಾರುತ್ತಿದ್ದವು ... ಪ್ರತಿ ಮುರಿದ ವಸ್ತುವೂ ತಮ್ಮ ಮೇಲೆ ದೌರ್ಜನ್ಯವೆಸಗಿದವರ ಆಕ್ರೋಶವನ್ನೋ / ಹೊಟ್ಟೆಕಿಚ್ಚನ್ನೋ ಸಾರುತ್ತಿದ್ದವು ... ದೇಹಕ್ಕಾಗುತ್ತಿದ್ದ ನೋವಿಗಿಂತ ಮಾನಸಿಕ ಆಘಾತ ಹೆಚ್ಚಾಗಿತ್ತು !!

 
ಆ ತುಂಡು ಕಾಗದ ಕೆಲವು ದಿನಗಳ ಹಿಂದೆ ರವಿತೇಜನ ಕೈ ಸೇರಿತ್ತು ... ಆ ತುಂಡು ಕಾಗದ ಒಂದು ಶುಭದಿನ ಅವನ ಜೀವನಗತಿಯನ್ನೇ ಬದಲಿಸಿತ್ತು ... ಕಪ್ಪು-ಬಿಳುಪಿನಂತಿದ್ದ ರವಿತೇಜನ ಜೀವನಕ್ಕೆ ತನ್ನಂತೆಯೇ ಬಣ್ಣ ತುಂಬಿತ್ತು ... ಬಂಧು-ಮಿತ್ರರನ್ನು, ಹೊಟ್ಟೆಗೆ ಹಿಟ್ಟುಕೊಡುತ್ತಿದ್ದ ಕಂಪನಿಯನ್ನು ದೂರ ಮಾಡಿ, ಕೇಡಿಗರನ್ನು, ಭಯವನ್ನು, ದೇಹಿ ಎನ್ನುವವರನ್ನೂ, ಕರ್ತವ್ಯ ವಂಚಿತ ಪೋಲೀಸರು ಎಂತೆಲ್ಲ ವರ್ಗದವರನ್ನು ಹತ್ತಿರವಾಗಿಸಿತ್ತು ....
 
ನಿಟ್ಟುಸಿರು ಬಿಡುತ್ತ "ದರಿದ್ರ .... ಶತ ದರಿದ್ರ ... ನನ್ನ ನೆಮ್ಮದಿ ದೂರ ಮಾಡಿದ ಹಾಳು ಲಾಟರಿ ಟಿಕೆಟ್" ಎಂದು ಇದು ಎಷ್ಟನೇ ಬಾರಿಯೋ ರವಿತೇಜ ಹಲುಬಿದ್ದು !!!!
 
ಇಷ್ಟಕ್ಕೂ ನೆಡೆದದ್ದೇನು ?
 
ತಿಂಗಳಿಗೆ ಸಾವಿರ ರೂಪಾಯಿ ಲಾಟರಿ ಟಿಕೆಟ್ ಖರೀದಿಸಲೇ ಪಕ್ಕಕ್ಕೆ ಎತ್ತಿಡುತ್ತಿದ್ದ ರವಿತೇಜ, ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮೆಷೀನ್ ಆಪರೇಟರ್. ಅದೇ ದುಡ್ಡು ತನ್ನದಲ್ಲ ಅಂತ ಎತ್ತಿಟ್ಟರೆ ಸಮಯಕ್ಕೆ ಆಗುವುದಿಲ್ಲವೇ ಎಂದು ಕೇಳಿದವರಿಗೆ ಲೆಕ್ಕವೇ ಇಲ್ಲ. 
 
"ನೋಡ್ತಾ ಇರಿ ... ಒಂದು ದಿನ ನನಗೆ ದೊಡ್ಡ ಮೊತ್ತ ಬಂದ ಮೇಲೆ ನಿಮಗೇ ತಿಳಿಯುತ್ತೆ. ಮೊದಲು ಪಿತ್ರಾರ್ಜಿತವಾಗಿ ಬಂದಿರೋ ಸಾಲ ಎಲ್ಲ ಮೊದಲು ತೀರಿಸಿ, ದೊಡ್ಡ ಮನೆ -ಕಾರು ಅಂತ ಮಾಡಿಕೊಂಡು, ದೇಶಗಳನ್ನ ಸುತ್ತಾಡಿಕೊಂಡು ಆರಾಮವಾಗಿ ಜೀವನ ಕಳೀತೀನಿ ... ಈ ಆಪರೇಟರ್ ಕೆಲಸ ಯಾರಿಗೆ ಬೇಕು" ಎಂಬುದು ಅವನ ಸಿದ್ದ ಉತ್ತರ.  ಅವನ ಮುಂದೆ ಯಾರೂ ಏನೂ ಆಡದಿದ್ದರೂ ಅವನ ಹಿಂದೆ ಕೆಲವರು ಕುಹಕವಾಡಿದೂ ಇದೆ, ಅನುಕಂಪ ತೋರಿದ್ದೂ ಇದೆ ...
 
ಹೀಗೆ ಒಂದೆರಡು ವರ್ಷ ಕಳೆಯಲು, ಅವನ ಹುಚ್ಚಾಟವೂ ಏರಿತು. ಇಂದು ತಿಂಗಳಿಗೆ ಎರಡು ಸಾವಿರ ಲಾಟರಿ ಟಿಕೆಟ್ ಮೇಲೆ ಹೂಡುತ್ತಾನೆ. ಅವನಿಗೀಗ ಮನದಟ್ಟಾಗಿ ಹೋಗಿದೆ ... ತನ್ನೆಲ್ಲ ಕಷ್ಟಗಳನ್ನು ಕೊನೆಗಾಣಿಸುವ ಶಕ್ತಿ ಇರುವುದು ದುಡ್ಡಿಗೆ ಮಾತ್ರ ಎಂದು !!
 
ಲಾಟರಿ ಅನ್ನೋ ಒಂದು ದುರ್ಬಲತೆ ಬಿಟ್ಟರೆ ಮಿಕ್ಕಾವ ಚಟವೂ ಇರಲಿಲ್ಲ ರವಿತೇಜನಿಗೆ. ಕೆಲಸ ಇತ್ತು, ರೂಪ ಇತ್ತು, ಅಪ್ಪ ಸಾಲಸೋಲ ಮಾಡಿ ಕಟ್ಟಿದ್ದ ಪುಟ್ಟ ಮನೆ ಇತ್ತು. ಚಿಕ್ಕ ಸಂಸಾರ ಮಾಡಿಕೊಂಡು ಹೋಗುವ ಎಲ್ಲ ಯೋಗ್ಯತೆಯೂ ಇದ್ದು, ಹೆಣ್ಣು ಕೊಡಲು ಮುಂದುಬರುವವರೂ ಇವನ ಲಾಟರಿ ಚಟಕ್ಕೆ ಹೆದರಿ  ಹಿಂಜರಿಯುತ್ತಿದ್ದರು.
 
ಅಪ್ಪ-ಅಮ್ಮ ಇಹಲೋಕದ ವ್ಯಾಪರ ಮುಗಿಸಿದ್ದರೂ, ಇಬ್ಬರ ಕಡೆಯ ಸಂಬಂಧಗಳ ಪಡೆಯೇ ಇದ್ದುದರಿಂದ, ಬಂಧುಗಳಿಗೆ ಕೊರತೆ ಇರಲಿಲ್ಲ. ಮನೆ-ಕೆಲಸ ಬಿಟ್ಟರೆ ಮಿಕ್ಕ ಘನಂಧಾರಿ ಕೆಲಸ ಏನೂ ಇಲ್ಲದ ಇವನಿಗೆ ಸಮಯ ಕಳೆಯಲು ಮಿತ್ರರೂ ಸಾಕಷ್ಟಿದ್ದರು. 
 
ಒಂದು ಸಂಜೆ ಕೆಲಸ ಮುಗಿಸಿ ಬರುತ್ತಿದ್ದ ರವಿತೇಜ ತನ್ನ ಮಾಮೂಲಿ ಲಾಟರಿ ಟಿಕೆಟ್ ಅಂಗಡಿಗೆ ನುಗ್ಗಿದ. ಖಾಯಂ ಗಿರಾಕಿಗೆ ದೇಶಾವರಿ ನಗೆಬೀರುತ್ತ ಸ್ವಾಗತಿಸಿದ್ದ, ಪೆಟ್ಟಿಗೆ ಅಂಗಡಿಗೂ ಸ್ವಲ್ಪ ದೊಡ್ಡದಾದ ಅಂಗಡಿಯ ಮಾಲೀಕ ... 
 
"ಸ್ವಾಮೀ ಶೆಟ್ಟರೇ, ಒಂದು ಒಳ್ಳೇ ಮನಸ್ಸಿನಲ್ಲಿ ಆ ಐವತ್ತು ಕೋಟಿ’ದು ಟಿಕೆಟ್ ಕೊಡ್ರೀ ಮತ್ತೆ ... " ಅಂದ. "ನಿಮಗೆ ಯಾವಾಗ ಕೆಟ್ಟ ಮನಸ್ಸಿನಲ್ಲಿ ಟಿಕೆಟ್ ಕೊಟ್ಟಿದ್ದೀನಿ ತೇಜಪ್ಪನೋರೇ ... ಮೊದಲು ಈ ಸಿಹಿ ತಿನ್ನಿ ... ನೆನ್ನೆ ನಾನು ಗಂಡು ಮಗು ತಂದೆ ಆಗಿದ್ದೀನಿ ... ನಿಮಗೆ ಅದೇ ಖುಷೀನಲ್ಲಿ ಲಾಟರಿ ಟಿಕೆಟ್ ಕೊಡ್ತೀನಿ" ಅಂತಂದು ಪೇಡದ ಡಬ್ಬ ಅವನ ಮುಂದೆ ಹಿಡಿದು, ಒಂದು ಪೇಡವನ್ನು ಸ್ವಲ್ಪ ಮುಂದೆ ನೂಕಿ, ಅವನು ತೆಗೆದುಕೊಂಡ ಕೂಡಲೆ, ಭದ್ರವಾಗಿ ಮುಚ್ಚಿಟ್ಟು, ನಂತರ ಟಿಕೆಟ್ ಹರಿದು, ಕಣ್ಣಿಗೆ ಒತ್ತಿಕೊಂಡು ರವಿತೇಜನಿಗೆ ಕೊಟ್ಟ, ಅವನು ಟಿಕೆಟ್ ದುಡ್ಡು ಕೊಟ್ಟ ಮೇಲೆ.
 
ಅದೇಕೋ ಕೈಯಲ್ಲಿ ಟಿಕೆಟ್ ಹಿಡಿದ ರವಿತೇಜನಿಗೆ ಮೈ ಜುಮ್ಮೆಂದಿತು ... ಅಲ್ಲಾ, ಇದು ಮೊದಲಾ ತಾನು ಟಿಕೆಟ್ ಕೊಳ್ಳುತ್ತಿರುವುದು? ಏಕಿಂತಹ ಅನುಭವ? ಆಮೇಲೆ ಅವನಿಗೇ ನಗು ಬಂತು. ಮನುಷ್ಯನ ಮೂಢನಂಬಿಕೆಗಳಿಗೆ ಕೊನೆಯೇ ಇಲ್ಲ ಎಂದು. ಇರಲಿ ಎಂದು ತಾನೂ ಅದನ್ನು ಕಣ್ಣಿಗೆ ಒತ್ತಿಕೊಂಡು, ಪರ್ಸ್’ನಲ್ಲಿ ಭದ್ರವಾಗಿಟ್ಟುಕೊಂಡು ಹೊರನೆಡೆದ.
 
ಮತ್ತೆರಡು ದಿನಕ್ಕೆ ತಾನು ಸಿರಿವಂತನಾಗುವುದು ಖಚಿತ ಎನ್ನಿಸಿತು. ತಾನು ಕೊಂಡ ಮೊದಲ ಟಿಕೆಟ್’ನಿಂದ ಹಿಡಿದು ಇಲ್ಲಿಯವರೆಗೂ ಇದೇ ಭಾವನೆಯಲ್ಲೇ ತೊಳಲಾಡುತ್ತಿದ್ದ ... ಪರೀಕ್ಷೆ ಬರೆದ ಪ್ರತಿ ವಿದ್ಯಾರ್ಥಿ ತೊಂಬತ್ತು ಪರ್ಸೆಂಟ್ ಗ್ಯಾರಂಟಿ ಎಂದುಕೊಳ್ಳುವಂತೆ ! ಈ ಬಾರಿಯೂ ಟಿಕೆಟ್’ನ ಒಂದು ಜೆರಾಕ್ಸ್ ಕಾಪಿ ತೆಗೆದುಕೊಂಡು ಎತ್ತಿಟ್ಟುಕೊಂಡಿದ್ದ. ಕನಸಿನಲ್ಲಿ, ಮನಸ್ಸಿನಲ್ಲಿ, ಎತ್ತತ್ತ ನೋಡೀದರೂ ಐವತ್ತು ಕೋಟಿಯೇ ಕಾಣುತ್ತಿತ್ತು. ಪ್ರತಿ ಬಾರಿ ಒಂದು ಟಿಕೆಟ್ ಖರೀದಿಸಲ್ಪಟ್ಟಾಗಲೂ ಅಷ್ಟು ಜನರಲ್ಲಿ ಒಬ್ಬ ಗೆಲ್ಲುವ ಸಾಧ್ಯತೆ ಕಡಿಮೆಯಾಗುತ್ತಲೇ ಹೋಗುತ್ತದೆ.
 
ಫಲಿತಾಂಶದ ದಿನ ಬಂದೇ ಬಿಟ್ಟಿತು .... ದೇಶಾದ್ಯಂತ ಎಷ್ಟು ಕೋಟಿ ಜನರು ಟಿಕೆಟ್ ಖರೀದಿಸಿದ್ದರೋ ಗೊತ್ತಿಲ್ಲ ... ಅವರೆಲ್ಲರ ಅದೃಷ್ಟವನ್ನೂ ಧೂಳೀಪಟ ಮಾಡಿ ಪ್ರಕಾಶಮಾನವಾಗಿ ಬೆಳಗಿದ್ದ ರವಿತೇಜ !!! ಐವತ್ತು ಕೋಟಿ ರುಪಾಯಿ ತನ್ನದಾಗಿಸಿಕೊಂಡಿದ್ದ !! ಉದ್ವೇಗದಿಂದ ಹೊಡೆದುಕೊಳ್ಳುತ್ತಿದ್ದ ಅವನ ಹೃದಯ ಬಡಿತ ನಗಾರಿ ಬಡಿತದಂತಿತ್ತು. ಕೈಗಂತೂ ದುಡ್ಡು ಬಂದಾಗಿತ್ತು. ಎಷ್ಟು ಬಾರಿ ತನ್ನನ್ನು ತಾನೇ ಚಿವುಟಿಕೊಂಡಿದ್ದನೋ ಅವನಿಗೇ ಗೊತ್ತಿಲ್ಲ. ಹೌದು, ಇದು ಖಂಡಿತ ಸತ್ಯ.
 
ಜೀವನಮಾನದಲ್ಲೇ ಸ್ವೀಕರಿಸಿದಷ್ಟು ಕರೆಗಳನ್ನು ಅವನು ಅರ್ಧ ದಿನದಲ್ಲೇ ಸ್ವೀಕರಿಸಿದ್ದ. ಅಭಿನಂದಗೆನಗಳ ಮಹಾಪೂರವೇ ಹರಿದಿತ್ತು. ದೂರದರ್ಶನದಲ್ಲೂ ಕಾಣಿಸಿಕೊಂಡಿದ್ದ. ನೂರಾರು ಸಂಘ-ಸಂಸ್ಥೆಗಳು ಅವನಿಗೆ ಕರೆ ಮಾಡಿ ತಮಗೆ ದೇಣಿಗೆ ನೀಡಿರೆಂದು ಕೇಳಿಕೊಂಡಿದ್ದರು. 
 
ತನ್ನ ಕೈಯಲ್ಲಿರುವುದು ಒಂದೇ ಎರಡೇ ... ಐವತ್ತು ಕೋಟಿ ... ಅದರಲ್ಲಿ ಒಂದಿಷ್ಟು ಕೊಟ್ಟರೆ ತಪ್ಪೇನು ಎಂದುಕೊಂಡು ಕೇಳಿದವರಿಗೆಲ್ಲ ಕೊಟ್ಟ. ಅದರಲ್ಲಿ ಹೆಚ್ಚಾಗಿ ಆಗಿದ್ದು ಅಪಾತ್ರದಾನವೇ ! ದೊಡ್ಡ ಮನೆ ಖರೀದಿಸಿದ .. ಜೊತೆಗೆ ಐಷಾರಾಮಿ ಕಾರು ... ಆಪರೇಟರ್ ಕೆಲಸಕ್ಕೆ ರಾಜೀನಾಮೆ ... ಕಂಪನಿಗೆ ಹೋಗಿ ಕೆಲಸ ಬಿಡುತ್ತಿರುವುದಾಗಿಯೂ ಹೇಳುವ ಔಚಿತ್ಯ ತೋರದೆ, ಅಭಿನಂದಿಸಲು ಕರೆ ಮಾಡಿದ ಬಾಸ್’ಗೆ ರಾಜೀನಾಮೆಯ ಉತ್ತರ ಕೊಟ್ಟ. 
 
ಕಪ್ಪು ಗಾಜಿನ ಐಶಾರಾಮಿ ಕಾರಿನಲ್ಲಿ ಕುಳಿತು ಸ್ನೇಹಿತರೊಂದಿಗೆ ದಿನವೂ ಪಾರ್ಟಿ ಮಾಡುತ್ತಿದ್ದ. ಹಿಂದೆಂದೂ ಇರದ ಅಭ್ಯಾಸಗಳು ನಾ ಮುಂದು ತಾ ಮುಂದು ಎಂದು ಅಪ್ಪಿಕೊಂಡವು. ಹತ್ತಾರು ಲಕ್ಷಗಳನ್ನು ತನ್ನ ಕಾರಿನಲ್ಲೇ ಇಟ್ಟುಕೊಂಡು ತಿರುಗುತ್ತಿದ್ದ. 
 
ಒಂದೆರಡು ಬಾರಿ ಅತೀ ಕುಡಿದು ಡ್ರೈವ್ ಮಾಡುತ್ತಿದ್ದ ಎಂದು ಪೋಲೀಸಿನವರು ಹಿಡಿದಿದ್ದರು. ಅವನನ್ನು ಹಿಡಿದವರ ಕೈಗೆ ಸಾವಿರಾರು ರುಪಾಯಿಗಳನ್ನು ತುರುಕಿ  ದೂರ ಅಟ್ಟಿದ್ದ. ಒಂದೆರಡು ಬಾರಿ ಹಾಗಾದ ಮೇಲೆ ಪೋಲೀಸರು ಸುಮ್ಮನೆ ಅವನನ್ನು ತಡೆ ಹಿಡಿಯುತ್ತಿದ್ದರು. 
 
ಒಮ್ಮೆ ಪಾರ್ಟಿ ಮುಗಿಸಿ ತೂರಾಡುತ್ತ ಹೊರಬಂದವನಿಗೆ ದೊಡ್ಡ ಆಘಾತ ಕಾದಿತ್ತು ! ಮಿರಿ ಮಿರಿ ಮಿಂಚುತ್ತಿದ್ದ ಅವನ ಕಾರಿನ ಗಾಜುಗಳನ್ನು ಒಡೆದು ಪುಡಿ ಮಾಡಿ, ಬಾಗಿಲು ಕಿತ್ತು ಹಾಕಿ, ಒಳಗಿರುವುದನ್ನೆಲ್ಲ ದೋಚಿ ಹೋಗಿದ್ದರು. ಸ್ನೇಹಿತರೊಂದಿಗೆ ಪೋಲೀಸ್ ಕಂಪ್ಲೇಂಟ್ ಕೊಡಲು ಹೋದವನಿಗೆ, ಕಾರಿನಲ್ಲಿ ಏನೇನು ವಸ್ತುಗಳಿದ್ದವು, ಎಷ್ಟು ಹಣ ಇತ್ತು ಎಂದೇ ಗೊತ್ತಿರಲಿಲ್ಲ್ಲ.
 
ಬಗ್ಗೆ ಸ್ವಲ್ಪ ಭಯ ಮೂಡಿತ್ತು ಆದರೆ ಆ ಭಯವನ್ನು ನೆಡೆಸಿಕೊಂಡ ಬಗ್ಗೆ ಮಾತ್ರ ಕೆಟ್ಟದಾಗಿತ್ತು. ಹಣ ಕೈಗೆ ಬಂದ ಮೊದಲಲ್ಲಿ ಹಲವಾರು ಕರೆ ಸ್ವೀಕರಿಸಿ ಬೇಸತ್ತು ಮುಂದೆ ಕರೆಗೆ ಉತ್ತರ ಕೊಡುವುದನ್ನೇ ಮರೆತಿದ್ದ. ಆ ಕರೆಗಳಲ್ಲಿ ಹೆಚ್ಚಿನವು ಬಂಧುಗಳದ್ದೇ ಆಗಿತ್ತು. ದುಡ್ಡಿನ ಬಗ್ಗೆ ಭಯ ಹುಟ್ಟಿ, ಮಾತನಾಡಿಸಿದರೆ ಎಲ್ಲಿ ಬಡ ದೊಡ್ಡಪ್ಪ ಹಣ ಕೇಳುತ್ತಾರೋ, ಚಿಕ್ಕಪ್ಪನ ಮಗಳಿಗೆ ಹಣ ನೀಡಬೇಕಾಗುತ್ತೋ ಎಂದು ಹೆದರಿ ಬಂಧು ಜನರಿಂದ ದೂರವೇ ಉಳಿದ. ಬ್ಯಾಂಕಿನಲ್ಲಿಡಲು ಹೆದರಿ, ಬಂಡವಾಳ ಹೂಡಲು ಬೆದರಿ, ದೊಡ್ಡ ಮನೆಯಲ್ಲೇ ಎಲ್ಲೆಂದರಲ್ಲಿ ಅವಿತಿಟ್ಟ.
 
ಒಂದು ದಿನವಿಡೀ ಮನೆಯಲ್ಲಿ ಉಳಿದ. ಮತ್ತೊಂದು ಐಷಾರಾಮಿ ಕಾರನ್ನು ಬುಕ್ ಮಾಡಿದ. ತಿರುಗಾಡಲು ಹೋಗುವ ಮನಸ್ಸಿದ್ದರೂ ನೆಡೆದು ಹೋಗುವುದು ಹೇಗೆ ಎಂದು ಸುಮ್ಮನಾದ. ಇರುವ ಬೆಲೆಗಿಂತ ಹೆಚ್ಚಾಗಿಯೇ ಹಣ ನೀಡಲು ತಯಾರಿದ್ದ ಗಿರಾಕಿಗೆ ಮರು ದಿನವೇ ಕಾರು ಸಿದ್ದವಾಗಿತ್ತು. ಅದನ್ನು ಪಡೆಯಲು ಟ್ಯಕ್ಸಿ ಕರೆದ. ಅಷ್ಟು ಹಣ ಸುರಿದಿದ್ದವನು ಟ್ಯಕ್ಸಿ ಬದಲಿಗೆ ಡೀಲರ್’ಗೆ ಬಂದು ಕರೆದುಕೊಂಡು ಹೋಗು ಎನ್ನಬಹುದಿತ್ತು ! ಆದರೆ ಯೋಚನೆ ಬರಲಿಲ್ಲ. ವಿನಾಶ ಕಾಲೇ ವಿಪರೀತ ಬುದ್ದಿ !
 
ಟ್ಯಾಕ್ಸಿ ಬಂತು. ಹತ್ತಿ ಕುಳಿತವನನ್ನು ಬರಮಾಡಿಕೊಂಡಿದ್ದು ಅವನಿಗಿಂತ ಮುಂಚೆಯೇ ಒಳಗೆ ಮುಸುಕು ಹಾಕಿ ಕುಳಿತಿದ್ದ ಮಂದಿ.... ಕಣ್ಣು ಬಿಟ್ಟಾಗ ಮನೆ ಮುಂದೆಯೇ ಬಿದ್ದಿದ್ದ ... ಮೈ-ಕೈಯೆಲ್ಲ ಯಾತನೆ .... ಮನೆಯ ಮುಂದೆ ದೊಡ್ಡದಾದ ಗೇಟು ಹಾಕಿತ್ತು ... ಹೊರಗಿನವರಿಗೆ ಒಳಗೆ ಕಾಣಬಾರದೆಂದು ತಡಿಕೆ ಹೊತ್ತ ಗೇಟಿನ ಹಿಂದೆ ತನ್ನನ್ನು ಯಾರಾದರೂ ನೋಡಿ ಸಹಾಯ ಮಾಡಬಾರದೇ ಎಂದು ನೋಡುತ್ತಿದ್ದ ಮಾಲೀಕ ....
 
ಕಷ್ಟಪಟ್ಟು ಮನೆಯ ಒಳಗೆ ಅಡಿ ಇಡಲು ಹೊರಟವನ ಜೇಬಿನಲ್ಲಿ ಮನೆಯ ಬೀಗದ ಕೀಲಿ ಇರಲಿಲ್ಲ !!! ಆದರೆ ಮನೆಯ ಬಾಗಿಲು ತೆರೆದಿತ್ತು !!! ಏನಾಗಿರಬಹುದು ಎಂದು ಊಹಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ ... ಕಾಲೆಳೆದುಕೊಂಡೇ ಒಳ ಹೋದವನಿಗೆ ಕಂಡಿದ್ದು ಮನೆ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯ .... ಕಪಾಟು, ಹಾಸಿಗೆ, ಕಾರ್ಪೆಟ್ ಎಂದು ಯಾವುದೂ ಬಿಡದೆ ಜಾಲಾಡಿ ಹೋದವರು ತನ್ನೆಲ್ಲ ಹಣ ಒಯ್ದಿದ್ದಾರೆ ಎಂದು ಅರ್ಥೈಸಿಕೊಂಡ ರವಿತೇಜ ನಿಸ್ತೇಜನಾಗಿ ಶೂನ್ಯ ದೃಷ್ಟಿ ಬೀರುತ್ತ ಗೋಡೆಯತ್ತ ನೋಡುತ್ತಿದ್ದ ...
 
{ಅಮೇರಿಕದಲ್ಲಿ ಇಂದು ೫೦೦ ಮಿಲಿಯನ್ ಡಾಲರ್ ಲಾಟರಿ ಡ್ರಾ ಎಂದು ಕೇಳಿದಾಗ ಹುಟ್ಟಿದ ಕಥೆ}
 

 

Comments

Submitted by ಮಮತಾ ಕಾಪು Thu, 11/29/2012 - 16:50

ಕಥೆ ಚೆನ್ನಾಗಿದೆ. ಕಥಾ ನಾಯಕ ಬಡತನದ ಬೇಗೆಯಿಂದ ಬೇಸತ್ತು ತಾನು ಶ್ರೀಮಂತನಾಗಬೇಕೆಂದು ಆಸೆ ಪಟ್ಟಿದ್ದು ಸಹಜ. ಆದರೆ ಅದಕ್ಕಾಗಿ ಆಯ್ದು ಕೊಂಡ ಮಾರ್ಗ ಅಥವಾ ನಿರ್ಧಾರ ಸರಿಯಾದುದಲ್ಲ. ಲಾಟರಿ ಡ್ರಾದ ಮೂಲಕ ವಾಸ್ತವದಲ್ಲಿ ಬದುಕು ಸುಖಾಂತ್ಯ ಕಾಣುವುದು ಬಹಳ ಅಪರೂಪ. ಕತೆಯಲ್ಲಾದರೂ ಬದುಕಿನ ಸುಖಾಂತ್ಯ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅಭಿಪ್ರಾಯ.
Submitted by bhalle Thu, 11/29/2012 - 19:44

In reply to by ಮಮತಾ ಕಾಪು

ಎರಡೂ ವಸ್ತುಗಳು ನನ್ನ ಮುಂದೆ ಇತ್ತು .. ನಾನು ಆಯ್ಕೆ ಮಾಡಿಕೊಂಡಿದ್ದು ಇದು ... ಸುಖಾ೦ತ್ಯ ನೀವೆಂದಂತೆ ಅಪರೂಪ, ಅದನ್ನು ಓದುಗರಾರಾದರೂ ಹಂಚಿಕೊಳ್ಳುತ್ತಾರೋ ನೋಡಬೇಕು ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
Submitted by sathishnasa Fri, 11/30/2012 - 13:04

ಅಷ್ಟೊಂದು ಹಣ ಕೈಸೇರಿದರೆ ಸುಖಾಂತ್ಯ ಆಗಲು ಸಾಧ್ಯವೇ ಇಲ್ಲ ಅದು ದುಖಾಂತ್ಯವೇ ಒಳ್ಳೆಯ ಕಥೆ ಭಲ್ಲೆಯವರೇ .....ಸತೀಶ್
Submitted by bhalle Fri, 11/30/2012 - 20:09

In reply to by sathishnasa

ಸತ್ಯವಾದ ಮಾತು ... ಮೊದಲಿಗೆ ತಲೆಯೆಲ್ಲ ಶೂನ್ಯವಾಗುತ್ತೆ ... ತಲೆಯಲ್ಲಿ ಹೇಗೆ ಖರ್ಚು ಮಾಡಬೇಕು ಎಂದು ಬರುತ್ತದೆಯೇ ವಿನಃ ಬೇರೇನೂ ಬರಲಾರದು, ಹೆಚ್ಚಿನವರಿಗೆ ... ಒಂದು ಸತ್ಯಕತೆ ಇದೆ ... ಎಂಟು ಜನ ಒಟ್ಟಾಗಿ ಟಿಕೆಟ್ ಖರೀದಿಸಿದರ0ತೆ ... ಬಹುಮಾನ ಅವರದಾಯಿತು ... ಎಲ್ಲರೂ ಕೂಡಿ ಕಟ್ಟಬೇಕಾದ ತೆರಿಗೆ ಕಟ್ಟಿ, ಹಣವನ್ನು ಹ0ಚಿಕೊಂಡರು .. ಒಬ್ಬಾಕೆಯ ಕಥೆಯು ತನಗಿದ್ದ ಸಾಲವೆಲ್ಲ ತೀರಿಸಿ ಮಿಕ್ಕ ಹಣವನ್ನು ಒಂದಷ್ಟು ಬ್ಯಾಂಕಿನಲ್ಲಿ, ಒಂದಷ್ಟು ಬಂಡವಾಳ, ಒಂದಷ್ಟು ಮಕ್ಕಳ ಹೆಸರಿನಲ್ಲಿ ಹೀಗೆ ಹಂಚಿ ಇಂದು ನೆಮ್ಮದಿಯಾಗಿ ಜೀವನ ನಡೆಸಿದ್ದಾಳೆ .. ಇಂತಹ ಕೇಸ್ ಅಪರೂಪ