' ಸಿನೆಮಾ'....ಮೊದಲ ರೀಲ್ ನಲ್ಲಿ ! (ಕಥೆ)

' ಸಿನೆಮಾ'....ಮೊದಲ ರೀಲ್ ನಲ್ಲಿ ! (ಕಥೆ)

ಚಿತ್ರ

                      


     ' ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ' ಎಂದು ಮಾದೇವನ ಮೊಬೈಲ್ ರಿಂಗ್ ಟೋನ್ ರಿಂಗುಣಿಸ ತೊಡಗಿತು. ಅದನ್ನು ಹೊರತೆಗೆದು ಬಟನ್ನ್ನು ಅದುಮಿ ಸಂವಹನಕ್ಕೆ ಸಜ್ಜು ಗೊಳಿಸಿ ಕಿವಿಗೆ ಹಿಡಿದು ಹಲೋ ಎಂದ.


     'ಹಲೋ' ಎಂದು ಆ ಕಡೆಯಿಂದ ಧ್ವನಿ ಕೇಳಿಬಂತು.  ಆ ಧ್ವನಿ ಯಾರದೆಂದು ಮಾದೇವನಿಗೆ ಗೊತ್ತಾಗಲಿಲ್ಲ. ಕರೆ ಬಂದ ಮೊಬೈಲಿನ ನಂಬರ್ ನೋಡಿದ, ಅದೊಂದು ಹೊಸ ನಂಬರ್ ಆಗಿತ್ತು.


     ಕುತೂಹಲಗೊಂಡ ಆತ ' ಹಲೋ ಸಾರ್ ನಾನು ಮಾದೇವ ಮಾತಾಡ್ತಾ ಇರೋದು, ನೀವು ಯಾರು ಎನ್ನುವುದು ಗೊತ್ತಾಗಲಿಲ್ಲ ' ಎಂದು ಉತ್ತರಿಸಿದ.


     ' ಏ ಮಾದೇವ ನಾನು ಸದಾಶಿವ ಮಾತಾಡ್ತಾ ಇರೋದು, ಗೊತ್ತಾಗಲಿಲ್ಲೇನೋ ' ಎಂದು ಮಾರುತ್ತರ ಬಂತು.


     ತಕ್ಷಣಕ್ಕೆ ಮಾದೇವನಿಗೆ ಏನೂ ಹೊಳೆಯಲಿಲ್ಲ ಯಾರು ಈ ಸದಾಶಿವ ..! ನೆನಪಿಗೆ ಬರಲೊಲ್ಲದು ಎಂದು ಯೋಚಿಸಿ ' ದಯವಿಟ್ಟು ಕ್ಷಮಿಸಿ ತಾವು ಯಾವ ಸದಾಶಿವ ಎಲ್ಲಿಯವರು ? ನನಗೆ ನೆನಪಿಗೆ ಬರುತ್ತಿಲ್ಲ ಎಂದ.


     ' ಏ ನಾನೋ ದೂರ್ವಾಪುರದ ಸದಾಶಿವ, ನಾನು ನೀನು ಎಲ್ಲಾ ಇಲ್ಲಿನ ಕನ್ನಡ ಸಾಲ್ಯಾಗ ಓದ್ಯವರು ಅಲ್ಲೇನೋ, ಎಲ್ಲಾ ಮರ್ತ ಬಿಟ್ಟಿಯೇನೋ ' ಎಂಬ ಆ ಕಡೆಯಿಂದ ಕೇಳಿ ಬಂತು.


     ಮಾದೇವನ ಮಸ್ತಿಷ್ಕದ ಮೂಲೆಯಲ್ಲಿ ಹುದುಗಿದ್ದ ನೆನಪಿನ ಕಿಡಿಯೊಂದು ಹೊತ್ತಿಕೊಂಡು ಆತನ ಬಾಲ್ಯದ ನೆನಪಿನ ಬಣ್ಣ ಬಣ್ಣದ ಮತಾಪುಗಳು ಸುರಳಿ ಸುರುಳಿಗಳಾಗಿ ಬಿಚ್ಚಿ ಕೊಂಡವು. ಮಾದೇವನ ಮುಖ ಮೊರದಗಲ ಅರಳಿ ಕೊಂಡಿತು.


     ಆ ಕಡೆಗೆ ಉತ್ತರಕ್ಕಾಗಿ ಕಾಯುತ್ತಿದ್ದ ಸದಾಶಿವನಿಗೆ ' ಸಾರಿ ಕಣಯ್ಯ ಬಹಳ ವರ್ಷಗಳ ನಂತರದ ಭೇಟಿ ನಮ್ಮದು, ಅದೂ ಫೋನ್ ಮೂಲಕ ತಕ್ಷಣಕ್ಕೆ ಗುರುತಿಸಲಾಗಲಿಲ್ಲ, ಕ್ಷಮೆಯಿರಲಿ ' ಎಂದ ಮಾದೇವ.


     ' ಮಾದೇವ ನಮ್ಮ ಊರ್ನಾಗ ಹೋಬಳಿ ಮಟ್ಟದ ಕನ್ನಡ ಸಂಘ ಮಾಡೇವಿ, ಅದರ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕಂತ ಮಾಡೇವಿ ಕವಿ ಗೋಷ್ಟಿ ಬಗ್ಗೆ ನೀನು ಪ್ರಾಸ್ತಾವಿಕ ಭಾಷಣ ಮಾಡಬೇಕು ಅಂತ ತೀರ್ಮಾನ ಮಾಡ್ಯಾರ, ತಾರೀಖು ಆ ಮ್ಯಾಲ ತಿಳಸ್ತೇವಿ ನೀ ಬರಬೇಕು ಎಂದ '.ಸದಾಶಿವ.


     ' ಸದಾಶಿವ ನೀನು ವಿಶ್ವಾಸ ಇಟ್ಟು ಕರದಿ ನಾ ಬರತೇನಿ, ಆದರ ಈ ಭಾಷಣ ಗೀಷಣ ನನಗ ಬ್ಯಾಡ, ಹಂಗ ಬರ್ತೇನಿ ಕಾರ್ಯಕ್ರಮ ನೋಡ್ತೇನಿ ನಿಮ್ಮೆಲ್ಲರ ಜೊತೆ ಸಂತೋಷದಿಂದ ಕಾಲ ಕಳದ ಬರ್ತೇನಿ,  ಆವಾಗ ದೂರ್ವಾಪುರ ನೆನಪಿಗೆ ಬರ್ತಿರ್ತದ, ತಾರೀಖು ಒಂದು ತಿಳಿಸಿ ಬಿಡು ಸಾಕು' ಎಂದ ಮಾದೇವ.


                                             ***


     ಮೋಬೈಲ್ನ್ನು ಜೋಬಿನೊಳಗಿಟ್ಟು ಕೊಳ್ಳುತ್ತ ತನ್ನ ಬಾಲ್ಯದ ದಿನಗಳ ನೆನಪಿಗೆ ಜಾರಿಕೊಂಡ. ಸುಮಾರು ಐವತ್ತೇಳು ವರ್ಷಗಳ ಹಿಂದಿನ ಕಾಲ, ಮಾದೇವ ಸುಮಾರು ಆರೇಳು ವರ್ಷದ ಹುಡುಗ. ಆತನ ತಾಯಿ ಗಂಗಮ್ಮ ಅನಿವಾರ್ಯ ಕಾರಣಗಳಿಂದ ಮಾದೇವನನ್ನು ತನ್ನ ತವರು ಮನೆಯಲ್ಲಿ ತನ್ನ ಹಿರಿಯಣ್ಣ ರಂಗಯ್ಯನ ಮನೆಯಲ್ಲಿ ಬಿಟ್ಟಿದ್ದಳು. ರಂಗಯ್ಯ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿ ಬಂದಿದ್ದರು. ಮನೆಯಲ್ಲಿ ವಿಧವೆಯರಾಗಿದ್ದ ಆತನ ಚಿಕ್ಕಮ್ಮ ಮತ್ತು ತಂಗಿಯರಿದ್ದರು. ರಂಗಯ್ಯನ ಮನೆಯ ಪಕ್ಕದಲ್ಲಿಯೆ ಮಾದೇವನ ಇನ್ನೊಬ್ಬ ಸೋದರಮಾವ ಸೋಮಯ್ಯ ಇದ್ದರು. ಅವರ ಹಿರಿಯ ಮಗ ಸದಾಶಿವನ ಎರಡನೆ ತರಗತಿಯಲ್ಲಿ ಓದುತ್ತಿದ್ದ. ಆತನ ಜೊತೆಗೆ ಮಾದೇವನು ಸಹ ಅಲ್ಲಿಯ ಕನ್ನಡ ಶಾಲೆಗೆ ಸೇರಿಕೊಂಡ. ಅವರಿಬ್ಬರ ಮಧ್ಯ ಒಂದು ವರ್ಷದ ಅಂತರವಿದ್ದರೂ ಒಳ್ಳೆಯ ಒಡನಾಟ ಬೆಳೆದು ಬಂತು. ಈ ಬಾಂಧವ್ಯ ಪ್ರಾಥಮಿಕ ಇದ್ಯಾಭ್ಯಾಸ ಮುಗಿಯುವ ವರೆಗೂ ನಡೆದು ಬಂತು. ಆ ಊರಲ್ಲಿ ಹೈಸ್ಕೂಲ್ ಇಲ್ಲದ ಕಾರಣ ಏಳು ವರ್ಷಗಳ ನಂತರ ಅವರಿಬ್ಬರ ಒಡನಾಟಕ್ಕೆ ವ್ಯತ್ಯಯ ಬಂತು. ಆಗೊಮ್ಮೆ ಈಗೊಮ್ಮೆ ರಜೆಯಲ್ಲಿ ಊರಿಗೆ ಹೋದಾಗ ಪರಸ್ಪರ ಭೇಟಿಯಾಗುತ್ತಿತ್ತು. ಸ್ವಂತಕ್ಕೆ ಜಮೀನುಗಳಿದ್ದ ಸದಾಶಿವ ವ್ಯವಸಾಯವನ್ನೆ ತನ್ನ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡ. . ಆದರೆ ಜಮೀನು ಇಲ್ಲದ ಮಾದೇವ ಅನಿವಾರ್ಯವಾಗಿ ಶಾಲಾ ಮಾಸ್ತರಿಕೆಗೆ ಸೇರಿಕೊಂಡ. ತನ್ನ ಊರಿನ ಋಣವನ್ನೆ ಹರಿದು ಕೊಂಡು ಬೇರೆ ಜಿಲ್ಲೆಗೆ ವಲಸೆ ಹೋದ. ಅದನ್ನೆ ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ವೃತ್ತಿ ಜೀವನ ಮುಗಿಸಿ ಅಲ್ಲಯೆ ಗ್ರಾಮೀಣ ಪರಿಸರದ ಸಣ್ಣ ಕುಗ್ರಾಮ ಹಲಸಿನ ಕೊಪ್ಪದಲ್ಲಿ ನೆಲೆ ನಿಂತ.


     ಈಗಿನ ದುರ್ವಾಪುರ ಹೇಗಿರ ಬಹುದು ? ಮೊದಲಿನ ಸುಂದರ ಪರಿಸರ ಅಲ್ಲಿದೆಯೆ ? ಯಾವುದಕ್ಕೂ ಒಮ್ಮೆ ಅಲ್ಲಿಗೆ ಹೋಗಿ ಬರಬೇಕು. ಎಷ್ಟು ಸುಂದರವಾದ ಊರು ದುರ್ವಾಪುರ. ದಟ್ಟ ಗೊಂಡಾರಣ್ಯವೂ ಅಲ್ಲದ ಅತ್ತಕಡೆ ಬಟಾಬಯಲಿನ ಬಯಲು ಸೀಮೆಯೂ ಅಲ್ಲದ ಸುಂದರ ಪರಿಸರದ ಮಧ್ಯದ ಊರು ಅದಾಗಿತ್ತು. ಗ್ರಾಮ ಬಿಟ್ಟು ಒಂದೆರಡು ಮೈಲು ಹೋದರೆ ದಟ್ಟವಾದ ಕಾಡಿನ ಪರಿಸರ ಸಿಗುತ್ತಿತ್ತು. ಇಡೀ ಊರಿನ ಉರುವಲು ಮತ್ತು ವ್ಯವಸಾಯ ಉಪಕರಣಗಳಿಗೆ ಬೇಕಾದ ಮರ ಮುಟ್ಟುಗಳನ್ನು ಒದಗಿಸುವ ತಾಣ ಅದಾಗಿತ್ತು. ದುರವಾಪುರ ಒಂದೇ ಅಲ್ಲ ಸುತ್ತುಮುತ್ತಲಿನ ಎಲ್ಲ ಹಳ್ಳಿಗಳಿಗೂ ಅದೇ ಕಾಡು ಮರಮುಟ್ಟುಗಳ ಪೂರೈಕೆಯ ತಾಣವಾಗಿತ್ತು. ಆ ಕಾಡು ನಮ್ಮ ಮನರಂಜನೆಯ ತಾಣವಾಗಿತ್ತು. ಆ ಕಾಡು ಎಲ್ಲ ಋತುಗಳಲ್ಲಿಯೂ ಹಣ್ಣುಗಳ ಪೂರೈಕೆಯ ತಾಣವಾಗಿತ್ತು. ಕಾಡಿನಲ್ಲಿ ಕಾಡುಗೇರುಹಣ್ಣು, ತುಂಬರಿ ಹಣ್ಣು, ಸುಣಬುರಲಿ ಹಣ್ಣು, ಪರಗಿಹಣ್ಣು, ಕೌಳಿಹಣ್ಣುಗಳು, ಸಿಹಿ ನೀರಿನ ಒರತೆಗಳು, ಬಟ್ಟೆ ಒಗೆಯಲು ಮತ್ತು ಸ್ನಾನ ಮಾಡಲು ಅನುಕೂಲ ವಗುವಂತೆ ಕರಿಕಲ್ಲಿನ ಮೆಟ್ಟಿಲುಗಳನ್ನು ಮಾಡಿ ಕಟ್ಟಿದ ಬಾವಿಗಳು ನಮಗೆ ಬಟ್ಟೆದ ಒಗೆದುಕೊಳ್ಳುವ ಮತ್ತು ಈಜುವ ತಾಣಗಳಾಗಿದ್ದವು. ಬಟ್ಟೆ ಒಗೆದುಕೊಳ್ಳುವುದು ಒಂದು ನೆಪವಷ್ಟೆ, ಮನಸೋ ಇಚ್ಛೆ ಈಜುವುದು ಸ್ನಾನ ಮಾಡುವುದು ಕಾಡಿನಲ್ಲಿ ಅಂಡಲೆಯುತ್ತ ಆಯಾ ಕಾಲದಲ್ಲಿ ದೊರಕುವ ಹಣ್ಣುಗಳನ್ನು ತಿನ್ನುವುದು, ಪ್ರಕೃತಿ ಸೌಂದರ್ಯ ವೀಕ್ಷಿಸುವುದು ಹಲವು ಸಲ ನವಿಲು ನರಿ ಜಿಂಕೆ ಮತ್ತೂ ಮೊಲಗಳು ದರ್ಶನ ಕೊಡುತ್ತಿದ್ದವು, ಆವಾಗಲಂತೂ ನಮಗೆ ಖುಷಿಯೋ ಖುಷಿ..ಇನ್ನೂ ದಟ್ಟ ಕಾಡಿನ ಒಳಕ್ಕೆ ಹೋದರೆ ತೋಳ ಬರ್ಖಗಳು ಅವಕಾಶ ಒದಗಿಬಂದರೆ ಅಪರೂಪಕ್ಕೆ ಹುಲಿರಾಯರ ದರ್ಶನವೂ ಸಹ ಆಗುತ್ತಿತ್ತು. ಹೀಗಾಗಿ ಜೊತೆಗೆ ಹಿರಿಯರಿದ್ದರೆ ಮಾತ್ರ ದಟ್ಟಡವಿಯ ಪ್ರವೇಶ ಇಲ್ಲದಿದ್ದರೆ ಇಲ್ಲ. ಒಮ್ಮೆ ಹಿರಿಯರ ಜೊತೆಯಿಲ್ಲದೆ ತಾನು ದಟ್ಟಡವಿಗೆ ಹೋಗಿ ಫಜೀತಿ ಪಟ್ಟ ಸಂಗತಿ ಇನ್ನೂ ಮನದಾಳದಲ್ಲಿ ಹಸಿರಾಗಿದೆ.


     ಸದಾಶಿವ ಮುಲ್ಕಿ ಪರೀಕ್ಷೆ ಪಾಸಾಗಿ ಹೈಸ್ಕೂಲ್ಗೆ ಸೇರಿದ್ದ.  ನಾನು ಸಹ ಮುಲ್ಕಿ ಪರೀಕ್ಷೆಗೆ ಓದುತ್ತಿದ್ದೆ. ಮಳೆಗಾಲ ಮುಗಿದು ಚಳಿಗಾಲ ಬಂದಿತ್ತು. ಒಂದು ಭಾನುವಾರ ಮಾದೇವ ಮತ್ತು ಆತನ ಸಹಪಾಠಿ ರಾಮಚಂದ್ರ ದುರ್ವಾಪುರದ ಸಮೀಪದ ಕಾಡು ಅಗಸ್ತ್ಯ ವನಕ್ಕೆ ಹೋಗಿ ಬಟ್ಟೆ ಒಗೆದುಕೊಂಡು ಬರುವ ಯೋಜನೆ ಹಾಕಿ ಕೊಂಡರು. ಈ ಯೋಜನೆ ಬರಿ ಹಿರಿಯರ ದಿಕ್ಕು ತಪ್ಪಿಸುವ ಯೋಜನೆಯಷ್ಟೆ. ಅವರು ಕಾಡಿಗೆ ಹೋಗದೆ ಸುಮಾರು ಐದು ತಿಂಗಳುಗಳೆ ಸಂದು ಹೋಗಿದ್ದವು. ಅವರಿಗೆ ಮಳೆಗಾಲದಲ್ಲಿ ಅರಳಿ ನಿಂತ ಕಾನನ, ಅಲ್ಲಿ ದೊರಕ ಬಹುದಾದ ಪರಿಗೆ, ಕಾಡುಗೇರು, ಸುಣಬುರಲಿ ಹಣ್ಣುಗಳು ಅವರಲ್ಲಿ ಆಶೆಯನ್ನು ಹುಟ್ಟಿಸಿದ್ದವು. ಈಗ ಮಾದೇವನಿಗೆ ಮನೆಯಲ್ಲಿ ಯಾರೂ ಅಡ್ಡಿ ಪಡಿಸುತ್ತಿರಲಿಲ್ಲ. ದಟ್ಟ ಅಡಿವೆಯಲ್ಲಿ ಇಬ್ಬರೆ ಅಲೆಯಲು ಹೋಗಬೇಡಿ ಎಂಬ ಎಚ್ಚರಿಕೆಯ ಮಾತು ಹೇಳಿ ಕಾಡಿಗೆ ಹೊಗಲು ಅನುಮತಿ ಕೊಟ್ಟರು. ಮನೆಯಲ್ಲಿ ಕಟ್ಟಿಕೊಟ್ಟ ಚುರಮರಿ ಪಡೆದು ಬಟ್ಟೆ ಒಗೆಯಲು 501 ಸಾಬೂನಿನ ಒಂದು ಸಣ್ಣ ಬಿಲ್ಲೆಯನ್ನು ಪಡೆದು ಬಟ್ಟೆ ಬರೆ ಟಾವೆಲ್ ಗಳನ್ನು ಒಂದು ಕೈಚೀಲದಲ್ಲಿ ಹಾಕಿಕೊಂಡು ಮನೆಯಿಂದ ಹೊರಟ. ಗೌಡರ ಮತ್ತು ಕಮ್ಮಾರರ ಓಣಿಗಳನ್ನು ದಾಟಿ ಕೆರೆಯ ದಂಡೆಗುಂಟ ಸಾಗಿ ಅಗಸ್ತ್ಯ ವನಕ್ಕೆ ಹೋಗುವ ದಾರಿ ಸೇರಿ ಅಲ್ಲಿಯ ಆಲದ ಮರವೊಂದರ ಬುಡಕ್ಕೆ ನಿಂತು ರಾಮಚಂದ್ರನ ಬರುವಿಕೆಗಾಗಿ ಪ್ರವಾಸಿ ಬಂಗಲೆಯ ಕಡೆಗೆ ನೆಟ್ಟ ದೃಷ್ಟಿಯಿಂದ ನೋಡುತ್ತ ನಿಂತ.



     ಚಳಿಗಾಲದ ಚಳಿ ಮೈಯಲ್ಲಿ ನಡುಕ ಹುಟ್ಟಿಸುವಂತಿತ್ತು. ಸರ್ಕಾರಿ ತೋಟದ ದೊಡ್ಡ ದೊಡ್ಡ ಮಾವಿನ ಮರಗಳ ಹಿನ್ನೆಲೆಯಲ್ಲಿ ಕೆಂಬಣ್ಣದ ಕಡಲಲ್ಲಿ ಮಿಂದ ಸೂರ್ಯ ಕೆಂಪಗೆ ಹೊಳೆಯುತ್ತ ಮೇಲೇರುತ್ತಿದ್ದ. ಹಕ್ಕಿಗಳ ಕಲರವ ಪ್ರಕೃತಿಯ ಪರಿಸರದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿತ್ತು. ಕೆಲ ಕಾಲ ರಾಮಚಂದ್ರನ ಬರುವಿಕೆಗಾಗಿ ಕಾದ ಮಾದೇವ ಹಿಂದಿನಿಂದ ಬರಬಹುದು ಎಂದು ಯೋಚಿಸಿ ತಾನು ಮುಂದೆ ಸಾಗಿದ. ಕ್ರಮೇಣ ಕಾಡು ದಟ್ಟವಾಗುತ್ತ ಬಂದಿತು. ಅದನ್ನು ವೀಕ್ಷಿಸುತ್ತ ಬಂದ ಮಾದೇವ ಅಗಸ್ತೇಶ್ವರ ಗುಡಿಯನ್ನು ದಾಟಿ ನೀರಿನ ತೊರೆಗಳು ಸ್ವಚ್ಛಂದವಾಗಿ ಹರಿಯುತ್ತಿದ್ದ ಜಾಗವನ್ನು ತಲುಪಿ ಬಟ್ಟೆ ಒಗೆಯಲು ವ್ಯವಸ್ಥೆ ಯಿದ್ದ ಬಾವಿಗೆ ಬಂದು ತಾನು ಬಂದ ದಾರಿಯನ್ನು ಒಮ್ಮೆ ತನ್ನ ದೃಷ್ಟಿ ಹರಿಯುವ ವರೆಗೆ ದಿಟ್ಟಿಸಿ ನೋಡಿದ. ರಾಮಚಂದ್ರನ ಬರುವಿಕೆ ಕಾಣಲಿಲ್ಲ. ದಟ್ಟ ಕಾನನದ ಇಡೀ ಪರಿಸರದಲ್ಲಿ ಮನುಷ್ಯ ಜೀವಿಯೆಂದರೆ ತಾನೊಬ್ಬನೆ, ಒಂದು ಕ್ಷಣ ಹುಲಿ ಬರ್ಕಗಳ ನೆನಪು ಬಂದು ಸಣ್ಣಗೆ ನಡುಗಿದ.


    
     ಕೆರೆಯ ನೀರು ಸ್ವಚ್ಛವಾಗಿದ್ದು ಗಾಳಿಯ ಸಂಚಲನೆ ಇಲ್ಲದ ಕಾರಣ ಕೆರೆ ಪಾರದರ್ಶಕ ವಾಗಿದ್ದು ಕೆರೆಯ ತಳ ಮತ್ತು ಅಲ್ಲಲ್ಲಿ ಹರಡಿ ಕೊಂಡಿದ್ದ ಬಿಲ್ಲಿ ಚವಲಿ ಪಾವಲಿಗಳು ಕಾಣುತ್ತಿದ್ದವು. ಎಲ್ಲ ಬಟ್ಟೆಗಳನ್ನು ಕೈಚೀಲದಿಂದ ಹೊರ ತೆಗೆದು ನೀರಿನಲ್ಲಿ ತೋಯಿಸಿ ಕುಕ್ಕಿ ಇಟ್ಟು ಸಾಬೂನು ಹಚ್ಚಿ ಬಟ್ಟೆಗಳನ್ನು ಕುಸುಕಲು ತೊಡಗಿದ. ಸಿಹಿ ನೀರು ಬಟ್ಟಗಳನ್ನು ಕುಸುಕಿದಷ್ಟೂ ಒಗೆದಷ್ಟೂ ಬಿಳಿಯ ನೊರೆ ಸಮೃದ್ಧವಾಗಿ ಪಾಟಿಗಲ್ಲಿನ ಮೇಲೆ ಹರಡಿ ಕೊಂಡಿತ್ತು. ಬಟ್ಟೆಗಳನ್ನು ಒಗೆದು ಕೆರೆಯ ದಂಡೆಯ ಆಚೆಗೆ ಹರಡಿದ್ದ ವಿಶಾಲ ಹುಲ್ಲಿನ ಮೇಲೆ ಬಟ್ಟೆಗಳನ್ನು ಒಣಗಲು ಹರಡಿದ. ಕೆರೆಯ ನೀರಿನಲ್ಲಿ ಒಂದು ಮೆಟ್ಟಿಲು ಕೆಳಗಿಳಿದು ಕುಳಿತು ಕೊಂಡ. ಒಂದು ಕ್ಷಣ ತಣ್ಣಗಿನ ಕೆರೆಯ ನೀರು ಮೈಝಮಕರಿಸಿ ದಂತಾಯಿತು. ತಣ್ಣಗಿನ ನೀರು ಅಷ್ಟೆ ಅಪ್ಯಾಯಮಾನ ವೆನಿಸಿತು. ಕೆಲವು ಸುತ್ತು ಈಜಿದ. ಮಾದೇವನ ಈಜುವ ಧುಪ್ಪಳಿಗೆ ಕೆರೆಯ ತಳದಲ್ಲಿದ್ದ ರಾಡಿ ಮೇಲೆದ್ದು ಬಂತು. ಒಂದು ಕ್ಷಣ ಆ ರಾಡಿ ಆತನಲ್ಲಿ ರೇಜಿಗೆ ಉಂಟು ಮಾಡಿತು. ನೀರಿನಿಂದ ಮೇಲೆದ್ದು ಬಂದು ಸವೆದು ಸಣ್ಣವಾಗಿದ್ದ ಬಟ್ಟೆಯ ಸೋಪಿನ ತುಣುಕನ್ನು ಮೈಕೈಗಳಿಗೆ ಹಚ್ಚಿಕೊಂಡು ಉಜ್ಜಿಕೊಂಡ, ಮತ್ತೆ ಕೆರೆಯ ನೀರಿಗೆ ಇಳಿದು ಮತ್ತೊಮ್ಮೆ ಸ್ನಾನಮಾಡಿ ಮೇಲೆಬಂದು ಒಣಗ ಹಾಕಿದ್ದ ಚೊಣ್ಣಗಳ ಪೈಕಿ ಅರೆಬರೆ ಒಣಗಿದ್ದ ಚೊಣ್ಣವೊಂದನ್ನು ಧರಿಸಿ ಸ್ನಾನ ಮಾಡುವಾಗ ಹಾಕಿ ಕೊಂಡಿದ್ದ ಚೊಣ್ಣವನ್ನು ಮತ್ತೆ ಒಗೆದು ಒಣಗ ಹಾಕಿದ. ಸೂರ್ಯ ಪ್ರಖರವಾಗಿ ಬೆಳಗುತ್ತ ಮೇಲೇರುತ್ತಿದ್ದ, ಆದರೂ ಕಾನನದಲ್ಲಿ ಇನ್ನೂ ಚಳಿ ಮೈ ಕೊರೆಯುವಂತಿತ್ತು.


               ಮಾದೇವ ರಾಮಚಂದ್ರನ ಆಗಮನದ ನಿರೀಕ್ಷೆಯನ್ನು ಆಗಲೆ ಕೈಬಿಟ್ಟಿದ್ದ. ದಟ್ಟವಾಗಿ ಹರಡಿ ನಿಂತ ಕಾನು ಮಾದೇವನನ್ನು ಕೈಬೀಸಿ ಕರೆಯುತ್ತಿತ್ತು. ಅದರ ಮೋಡಿಯಿಂದ ಆತ ತಪ್ಪಿಸಿ ಕೊಳ್ಳಲಗಲಿಲ್ಲ. ಆದರೂ ದಟ್ಟ ಕಾಡಿನೊಳಕ್ಕೆ ಹೋಗಲು ಒದು ಕ್ಷಣ ಭಯವಾಯಿತು. ಹಿರಿ ಕಿರಿಯ ಲಂಬಾಣಿ ಹೆಣ್ಣು ಮಕ್ಕಳು ಕಟ್ಟಿಗೆ ಹೊರೆಗಳನ್ನು ತರಲು ಅಡವಿಯೊಳಕ್ಕೆ ಹೊರಟಿದ್ದರು. ತನಗಿಂತ ಸಣ್ಣ ವಯಸ್ಸಿನ ಹುಡುಗರು ದನಗಳನ್ನು ಮೇಯಿಸಲು ಕಾಡಿನೊಳಗಿನ ಹುಲ್ಲುಗಾವಲಿಗೆ ಹೊರಟಿದ್ದರು. ತಾನೂ ಕಾಡಿನೊಳಕ್ಕೆ ಹೋಗಿ ಅಲೆದಾಡಿ ಸಿಗುವ ಕಾಡು ಹಣ್ಣುಗಳನ್ನು ತಿಂದು ಬರಲು ನಿಶ್ಚಯಿಸಿದ. .ಚುರುಮರಿಯನ್ನು ತಿಂದು ಹೋಗುವುದೆ ಇಲ್ಲ ಬಂದು ತಿನ್ನುವುದೆ ಎಂಬ ಯೋಚನೆ ಆತನನ್ನು ಕಾಡಿತು. ಈಗ ತಿಂದು ಹೋದರೆ ಮರಳಿ ಬಂದಾಗ ಹಸಿವೆ ಯಾಗುತ್ತೆ ಎಂದು ಯೋಚಿಸಿ ಅಲ್ಲಿಗೆ ಹೋಗಿ ಬಂದ ನಂತರವೆ ತಿಂಡಿಯನ್ನು ತಿನ್ನುವುದು ಎಂದು ತೀರ್ಮಾನಿಸಿ ಚುರುಮರಿಯ ಗಂಟನ್ನು ಒಣಗ ಹಾಕಿದ ಬಟ್ಟೆಯ ಹತ್ತಿರ ಅಡಗಿಸಿಟ್ಟು ವನ ಸಂಚಾರಕ್ಕೆ ಮಾದೇವನ ಸವಾರಿ ಮೊದಲಿಟ್ಟಿತು.
 


                                                                    ( ಮುಂದುವರಿದುದು )
 

Rating
No votes yet

Comments

Submitted by swara kamath Fri, 11/30/2012 - 22:05

ಪಾಟೀಲರಿಗೆ ನಮಸ್ಕಾರಗಳು.
"ಸಿನೆಮಾ " ಮೊದಲ ರೀಲಿನಲ್ಲಿ ಗೆಳಯರಿಬ್ಬರ ಪೂರ್ವ ಪರಿಚಯ ಮಾಡಿಸುತ್ತಾ ನಮ್ಮನ್ನು ಸಹ ಗತಕಾಲದ ಜೀವನವನ್ನು ನೆನಪಿಸಿಕೊಳ್ಳುವ ಹಾಗೆ ಮಾಡಿದ್ದೀರಿ. ಕಾಡಿನಲ್ಲಿ ವಿವಿದ ಹಣ್ಣಿನ ಸವಿಯನ್ನು ಗೆಳಯರೊಂದಿಗೆ ಸವಿದ ರಸ ನಿಮಿಷಗಳನ್ನು ನೆನಪಿಸಿಕೊಂಡರೆ ಈಗಲೂ ಮನಸ್ಸಿಗೆ ಉಲ್ಲಾಸ ಆಗುತ್ತದೆ.
ವಂದನೆಗಳು.

Submitted by H A Patil Mon, 12/03/2012 - 12:56

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ಈ ಕಥಾನಕದ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ತಮ್ಮ ಅನಿಸಿಕೆ ಸರಿ ವರ್ತಮಾನದ ಜೊತೆ ಭೂತಕಾಲವು ಬಿಚ್ಚಿಕೊಳ್ಳುತ್ತ ಸಾಗುವ ಜೊತೆಗೆ ಆ ಕಾಲದ ದಿನಮಾನಗಳನ್ನು ಇಂದಿಗೆ ಹೋಲಿಸಿ ಸಾಗುವ ಕಥಾನಕವಿದು, ಪ್ರತಿಕ್ರಿಯೆಗೆ ಧನ್ಯವಾದಗಳು..