ಹಳ್ಳಿ ದಾರಿಯಲ್ಲಿ..

ಹಳ್ಳಿ ದಾರಿಯಲ್ಲಿ..

ಛಳಿ ಛಳಿ ತಾಳೆನು ಈ ಛಳಿಯ...ಅಹ....ಅಹ...ಎಫ್ ಎಂ ನಲ್ಲಿ ತೇಲಿಬರುತ್ತಿದ್ದ ಹಾಡಿಗೂ ನನ್ನ ಪರಿಸ್ಥಿತಿಗೂ ಹೆಚ್ಚೇನೂ ವ್ಯತ್ಯಾಸ ಇರಲಿಲ್ಲ. ರಾಜಹಂಸ(ಹಿಂಸೆ) ಬಸ್ಸಿನಲ್ಲಿ ಎಲ್ಲ ಕಿಟಕಿಗಳೂ ಮುಚ್ಚಿದ್ದರೂ ಅದೆಲ್ಲಿಂದ ಗಾಳಿ ಬರುತ್ತಿತ್ತೋ ಗೊತ್ತಾಗಲಿಲ್ಲ. ನಾನು ಸುಮಾರು ಸಲ ನನ್ನ ಮೊಬೈಲ್ ಟಾರ್ಚಿನಲ್ಲಿ ಅದೆಷ್ಟು ಸಲ ಹುಡುಕಲು ಪ್ರಯತ್ನಿಸಿದೆ ಆ ತಣ್ಣನೆ ಗಾಳಿ ಎಲ್ಲಿಂದ ಬರುತ್ತಿದೆ ಎಂದು. ಆದರೆ...ಊಹುಂ ನನ್ನ R & D ಫಲ ಕೊಡಲಿಲ್ಲ.


ನಾನು ಯಾವತ್ತೂ ನನ್ನ ಊರಿಗೆ ರಾತ್ರಿಯ ಸಮಯ ಹೋಗೇ ಇರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಹೊರಟರೆ ಸಂಜೆ ವೇಳೆಗೆಲ್ಲ ಊರು ಸೇರಿ ಬಿಡುತ್ತಿದ್ದೆ. ಆದರೆ ನನ್ನ ಮ್ಯಾನೇಜರ್ ಎಂಬ ಪೆಡಂಭೂತದ ಹಠದ ಪರಿಣಾಮವಾಗಿ ಇಂದು ಮೊಟ್ಟ ಮೊದಲ ಬಾರಿಗೆ ರಾತ್ರಿ ಪ್ರಯಾಣ ಮಾಡುತ್ತಿದ್ದೇನೆ. ಇಲ್ಲೇ ಇದ್ದು ಬೆಳಿಗ್ಗೆ ಹೊರಡಬಹುದಿತ್ತು. ಆದರೆ ಬೆಳಿಗ್ಗೆ ಹಬ್ಬ ಇದ್ದಿದ್ದರಿಂದ ರಾತ್ರಿ ಹೊರಡಲೇಬೇಕಾದ ಅನಿವಾರ್ಯತೆ ಹೊರಡುವಂತೆ ಮಾಡಿತ್ತು.


ಮಧ್ಯಾಹ್ನದ ಹೊತ್ತಿನಲ್ಲಿ ಟ್ರಾಫಿಕ್ ಹೆಚ್ಚು ಇರುವುದರಿಂದ ಬೆಂಗಳೂರಿನಿಂದ ಐದು ಆರು ಗಂಟೆ ಪ್ರಯಾಣ ಆಗುತ್ತಿತ್ತು ನಮ್ಮ ಊರಿಗೆ. ಅದೇ ಅಂದಾಜಿನಲ್ಲಿ ರಾತ್ರಿ ಹನ್ನೆರಡು ಗಂಟೆ ಬಸ್ಸನ್ನು ಹತ್ತಿದ್ದೆ. ಆದರೆ ರಾತ್ರಿ ಟ್ರಾಫಿಕ್ ಇಲ್ಲದ ಕಾರಣ, ನನ್ನ ಅಂದಾಜನ್ನು ತಪ್ಪಾಗಿಸಲು ಕೇವಲ ನಾಲ್ಕು ಗಂಟೆಯ ಪ್ರಯಾಣಕ್ಕೆ ನಮ್ಮ ಊರು ಬಂದು ಬಿಟ್ಟಿತ್ತು. ಹೈವೇಯಲ್ಲಿ ನನ್ನನ್ನು ಬಿಸಾಕಿ ಅವನ ಪಾಡಿಗೆ ಅವನು ಹೊರಟು  ಹೋದನು. ಅಲ್ಲಿಯವರೆಗೂ ಯಾವುದೇ ಯೋಚನೆ ಇರದ ನನಗೆ ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕೋ ಗೊತ್ತಾಗಲಿಲ್ಲ.


ದಿನದ ಹೊತ್ತಿನಲ್ಲೇ ಹೈವೇಯಿಂದ ನಮ್ಮ ಊರಿಗೆ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಇನ್ನು ಈ ಸಮಯದಲ್ಲಿ ಎಲ್ಲಿರಬೇಕು.....ಒಮ್ಮೆ ವಾಚನ್ನು ನೋಡಿದರೆ ನಾಲ್ಕು ಗಂಟೆ ತೋರಿಸುತ್ತಿತ್ತು. ನಮ್ಮ ಊರಿನ ರಸ್ತೆಯ ನೋಡಿದರೆ ಯಾವುದೋ ಗುಹೆಯಂತೆ ತೋರುತ್ತಿತ್ತು. ತಣ್ಣಗೆ ಬೀಸುತ್ತಿದ್ದ ಗಾಳಿ ಹಾಕಿದ್ದ ಜಾಕೆಟನ್ನು ಭೇಧಿಸಿಕೊಂಡು ಚರ್ಮದ ತೊಗಲಿಗೆ ತಗಲಿ ಬೆನ್ನ ಹುರಿಯಲ್ಲಿ ಚಳುಕು ಮೂಡಿಸುತ್ತಿತ್ತು. ಒಂದೈದು ನಿಮಿಷ ಯಾವುದಾದರೂ ವಾಹನ ಬರುವುದೇನೋ ಎಂದು ಕುಳಿತೆ. ಆದರೆ.....


ಸರಿ ಇನ್ನೇನು ಮಾಡುವುದು ಮೂರು ಕಿಲೋಮೀಟರು ಹಾದಿಯನ್ನು ನಡೆದೇ ಕ್ರಮಿಸಬೇಕು ಎಂದು ತೀರ್ಮಾನಿಸಿ ಮೊಬೈಲಿನ ಟಾರ್ಚನ್ನು ಆನ್ ಮಾಡಿದೆ. ಮೊಬೈಲ್ ಸ್ಕ್ರೀನಿನ ಮೇಲೆ ತೋರಿಸುತ್ತಿದ್ದ ಬ್ಯಾಟರಿ ಯಲ್ಲಿ ಉಳಿದಿದ್ದ ಒಂದೇ ಒಂದು ಕಡ್ಡಿ, ಇಷ್ಟು ಹೊತ್ತು ಎಫ್ ಎಂ ಕೇಳಬೇಕಿತ್ತ? ಈಗ ಹೆಂಗೆ ಎಂದು ಅಣಕಿಸುವಂತೆ ಭಾಸವಾಯಿತು. ಛೆ ಎಂದುಕೊಂಡು ಒಂದೆರೆಡು ಹೆಜ್ಜೆ ಹಾಕಿದೆ ಅಷ್ಟೇ....


ಮೊಬೈಲ್ ಆಫ್ ಆಗಿಹೋಯಿತು. ಆ ಚಳಿಯಲ್ಲೂ ಹಣೆಯ ಮೇಲೆ ಸಣ್ಣಗೆ ಬೆವರಿನ ಹನಿಗಳು ಮೂಡಿ ನಿನಗೂ ಭಯ ಆಗುತ್ತಿದೆ ಎಂದು ಸುತ್ತಲಿನ ಕತ್ತಲು ಗಹಗಹಿಸಿ ನಕ್ಕಂತಾಯಿತು. ಏನಪ್ಪಾ ಮಾಡುವುದು ವಾಪಸ್ ಹೈವೇಗೆ ಹೋಗಿಬಿಡಲ? ಛೆ ಛೆ...ನಾನೇನು ಹೇಡಿಯಲ್ಲ ನಾನ್ಯಾಕೆ ಹೆದರಬೇಕು ಎಂದು ಭಂಡ ಧೈರ್ಯ ಮಾಡಿ ಒಂದೆರಡು ಹೆಜ್ಜೆ ಹಾಕಿದೆ. ಯಾವತ್ತೂ ನೆನಪಿಗೆ ಬರದ ಎಲ್ಲ ದೆವ್ವದ ಕಥೆಗಳೂ ಈಗಲೇ ನೆನಪಿಗೆ ಬರಬೇಕ?


ಆ ನೆನಪಿನಿಂದ ಆಚೆ ಬರೋಣ ಎಂದುಕೊಂಡು ಯಾವುದಾದರೂ ಸಿನೆಮಾ ಹಾಡನ್ನು ಗುನುಗೋಣ ಎಂದುಕೊಂಡರೆ, ಅಲ್ಲೂ ತಂಗಾಳಿಯಲ್ಲಿ ತೇಲಿ ಬಂದೆ....ಇದೆ ಹಾಡು ನೆನಪಿಗೆ ಬರಬೇಕೆ? ಇದ್ಯಾವುದಪ್ಪ ಗ್ರಹಚಾರ ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ನನ್ನ ಪಕ್ಕದಲ್ಲೇ ನನ್ನ ಕಾಲನ್ನು ಸವರಿಸಿಕೊಂಡು ಏನೋ ಹೋದಂತಾಯಿತು. ಅಷ್ಟೇ ಒಂದು ಕ್ಷಣ ನನ್ನ ಎದೆಬಡಿತ ನಿಂತು ಹೋಯಿತು.


ಮರುಕ್ಷಣದಲ್ಲೇ ಅದೊಂದು ನಾಯಿಯೆಂದು ತಿಳಿದು ಹೋದ ಜೀವ ಬಂದಂತಾಯಿತು. ಒಂದೆರೆಡು ನಿಮಿಷ ಸುಧಾರಿಸಿಕೊಂಡು ಸುತ್ತಲೂ ನೋಡಲೆಬಾರದು ಸೀದಾ ನೋಡುತ್ತಾ ಸಾಗಬೇಕು ಎಂದುಕೊಂಡು ಮುಂದೆ ಸಾಗುತ್ತಿದ್ದೆ. ಜೀರುಂಡೆಗಳ ಸದ್ದು ಇನ್ನಷ್ಟು ಬೆಚ್ಚಿ ಬೀಳಿಸುತ್ತಿತ್ತು. ದೂರದಲ್ಲೆಲ್ಲೋ ನಾಯಿ ಕೂಗುತ್ತಿರುವ ಸದ್ದು...ಗೂಬೆಗಳ ಸದ್ದು....ಎಲ್ಲ ಸೇರಿಕೊಂಡು ನನ್ನ ಮೇಲೆ ನನಗೆ ಕೋಪ ಬರುವಂತಾಗಿತ್ತು.


ಒಮ್ಮೆ ಈ ದಾರಿಯಲ್ಲಿ ರಾತ್ರಿ ಬರುತ್ತಿದ್ದ ತಾತನಿಗೆ ದಾರಿಯಲ್ಲಿ ಒಬ್ಬ ಆರು ಕಾಲಿನ ಮನುಷ್ಯ ಸಿಕ್ಕಿ ತಾತನನ್ನು ತನ್ನ ಕಾಲಿನಿಂದಲೇ ಎತ್ತಿ ಊರಿನ ಕೆರೆಯಲ್ಲಿ ಅದ್ದಿ  ಎತ್ತಿತ್ತಂತೆ. ಬೆಳಿಗ್ಗೆ ಎದ್ದು ನೋಡಿದರೆ ತಾತ ಯಾವುದೋ ಮರದ ಮೇಲಿದ್ದರಂತೆ. ನಂತರ ಅದು ದೆವ್ವದ ಆಟ ಎಂದು ಗೊತ್ತಾಯಿತಂತೆ. ಈಗ ನಾನು ಸರಿಯಾಗಿ ಅದೇ ಕೆರೆಯ ಪಕ್ಕದಲ್ಲೇ ಸಾಗುತ್ತಿದ್ದೆ. ಎಲ್ಲಿ ಮತ್ತೆ ಆರು ಕಾಲಿನ ಮನುಷ್ಯ ಬರುತ್ತಾನೋ ಎಂದು ಕೆರೆಯ ಕಡೆ ನೋಡದೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೆಜ್ಜೆ ಹಾಕಿದೆ. ವಾರೆ ಕಣ್ಣಿನಲ್ಲಿ ಒಮ್ಮೆ ಕೆರೆಯ ಕಡೆ ನೋಡಿದೆ....ಅರೆ....ಅಲ್ಲಿ ದೂರದಲ್ಲಿ....ಅಯ್ಯೋ.....


ಅದೇನದು ಕೆರೆಯ ಪಕ್ಕದಲ್ಲಿ ನಿಂತಿರುವುದು!!! ಅದೇ ಆರು ಕಾಲಿನ ಮನುಷ್ಯನ?? ನನಗೆ ಜಂಘಾಬಲವೇ ಉಡುಗಿದಂತಾಯಿತು...ಕಾಲುಗಳಲ್ಲಿದ್ದ ಶಕ್ತಿಯೆಲ್ಲ ಉಡುಗಿಹೋಯಿತು. ಹೆಜ್ಜೆ ಎತ್ತಿಡಲು ಆಗುತ್ತಿಲ್ಲ. ಐದು ನಿಮಿಷ ಅಲ್ಲೇ ನಿಂತೆ. ಉಹುಂ...ಅದು ಕದಲುತ್ತಿಲ್ಲ...ಸ್ವಲ್ಪ ಧೈರ್ಯ ತಂದುಕೊಂಡು ನಿಧಾನಕ್ಕೆ ಮುಂದೆ ಸಾಗಿದೆ. ಇನ್ನೇನು ಹತ್ತು ಹೆಜ್ಜೆ ಇಟ್ಟರೆ ಅದರ ಸಮೀಪ...ಈಗಲೂ ಅದು ಕದಲುತ್ತಿಲ್ಲ. ಈಗ ಮತ್ತಷ್ಟು ಧೈರ್ಯ ಬಂದು ಮುಂದೆ ಸಾಗಿ ಅದರ ಪಕ್ಕಕ್ಕೆ ಬಂದೆ.


ಹುಶ್ಶಪ್ಪ ಅದೊಂದು ಮರ. ಮರದ ಕಾಂಡಗಳು ಆರು ಭಾಗವಾಗಿ ವಿಂಗಡಣೆಯಾಗಿ ನಿಂತಿತ್ತು. ಇದಕ್ಕೂ ಮುಂಚೆಯೂ ಈ ಮರ ಇಲ್ಲೇ ಇತ್ತು. ಆದರೆ ನಾನು ಯಾವತ್ತೂ ಗಮನಿಸಿರಲಿಲ್ಲ. ಹೋದ ಜೀವ ಬಂದಂತಾಯಿತು. ಕೆರೆ ದಾಟಿದರೆ ಅರ್ಧ ದಾರಿ ಮುಗಿಯಿತು ಎಂದರ್ಥ. ಅಂದರೆ ಇನ್ನುಳಿದಿರುವುದು ಕೇವಲ ಅರ್ಧ ದಾರಿ. ಮತ್ತೊಮ್ಮೆ ಸಮಯ ನೋಡಿದರೆ ನಾಲ್ಕು ನಲವತ್ತು ಆಗಿತ್ತು. ಇನ್ನೊಂದು ಅರ್ಧ ಗಂಟೆ ಊರು ತಲಪಬಹುದು ಎಂದು ಮುಂದಡಿ ಇಟ್ಟೆ. ರಸ್ತೆಗೆ ಪಕ್ಕದಲ್ಲೇ ಬೃಹದಾಕಾರದ ಹುಣಸೇಮರ.


ಈ ಮರದ ಬಗ್ಗೆಯಂತೂ ಪ್ರತಿನಿತ್ಯ ಒಂದೊಂದು ಕಥೆ ಕೇಳುತ್ತಿದ್ದೆ. ಅದರಲ್ಲೂ ಒಬ್ಬೊಬ್ಬರೇ ಅಂತೂ ರಾತ್ರಿಯ ಹೊತ್ತು ಈ ದಾರಿಯಲ್ಲಿ ಬಂದರೆ ಅವರು ಸತ್ತೆ ಹೋಗುತ್ತಿದ್ದರಂತೆ. ಒಮ್ಮೆ ನಡುರಾತ್ರಿ ಒಂದು ಕುಟುಂಬ ನಮ್ಮ ಹಳ್ಳಿಯಿಂದ ಪಕ್ಕದ ಹಳ್ಳಿಗೆ ಹೋಗುವಾಗ ಸುಧಾರಿಸಿಕೊಳ್ಳಲು ಇದೆ ಹುಣಸೇಮರದ ಕೆಳಗೆ ಕುಳಿತಿದ್ದಾಗ ಸಿಡಿಲು ಬಡಿದು ಆ ಇಡೀ ಕುಟುಂಬ ಅಲ್ಲೇ ಸತ್ತು ಹೋಗಿದ್ದರಂತೆ.ಅಂದಿನಿಂದ ಆ ಆ ಕುಟುಂಬದವರು ಅದೇ ಮರದಲ್ಲಿ ಬೀಡು ಬಿಟ್ಟಿದ್ದಾರಂತೆ.


ನಮ್ಮ ತಾತ ಮತ್ತು ಅವರ ಸ್ನೇಹಿತ ಒಮ್ಮೆ ರಾತ್ರಿ ಹೊತ್ತು ಬರುತ್ತಿದ್ದಾಗ ಆ ದೆವ್ವಗಳು ನಮ್ಮ ತಾತನ ಪಂಚೆಯನ್ನು ಕಿತ್ತು ಹಾಕಿದ್ದವಂತೆ. ಹಾಗೆ ಕಾಲಿನ ಮೇಲೆಲ್ಲಾ ಪರಚಿದ್ದವಂತೆ. ಹೀಗೆ ಏನೇನೋ ಅಂತೆ ಕಂತೆಗಳ ಕಥೆಯಲ್ಲ ಕೇಳಿದ್ದೆ. ಈಗ ಅದೇ ಹುಣಸೇಮರದ ಪಕ್ಕದಲ್ಲಿ ನಡೆಯುತ್ತಿದ್ದೆ. ಬೇಡ ಬೇಡ ಎಂದುಕೊಂಡರೂ ಒಮ್ಮೆ ಹುಣಸೇಮರದ ಕಡೆಗೆ ನೋಡಿದೆ. ಅಲ್ಲಿ ಏನೂ


ಕಾಣಲಿಲ್ಲ. ಹ್ಮ್ಮ್....ಒಂದು ನಿಟ್ಟುಸಿರು ಬಿಟ್ಟು ಮುಂದೆ ಸಾಗಿದೆ.


ಇನ್ನೊಂದು ಕಾಲು ಗಂಟೆ ನಡೆದರೆ ಊರು ಬಂದು ಬಿಡುತ್ತದೆ ಎಂದುಕೊಳ್ಳುವಷ್ಟರಲ್ಲಿ....ರಸ್ತೆಯ ತಿರುವಿನಲ್ಲಿ ಬೃಹದಾಕಾರದ ಒಂದು ಆಕೃತಿಯ ನೆರಳು ರಸ್ತೆಯ ಮೇಲೆ ಕಂಡಂತಾಯಿತು. ಒಂದು ಕ್ಷಣ ಏನು ಮಾಡಬೇಕೋ ಗೊತ್ತಾಗದೆ...ಆ ಕ್ಷಣಕ್ಕೆ ಮನಸಿನಲ್ಲಿ ಬಂದ ಎಲ್ಲ ದೇವರನ್ನೂ ನೆನೆದುಕೊಂಡು ಅಲ್ಲೇ ಪಕ್ಕದಲ್ಲಿದ್ದ ಬಂಡೆಯ ಪಕ್ಕದಲ್ಲಿ ಅವಿತು ಕುಳಿತೆ. ಕೆಲವೇ ಕ್ಷಣದಲ್ಲಿ ಯಾವುದೋ ಗಾಡಿಯ ಸದ್ದು ಕೇಳಿಸಿತು. ಆಗ ಅರಿವಾಯಿತು ಓ ಅದು ಗಾಡಿಯ ಹೆಡ್ ಲೈಟಿನ ಬೆಳಕಿನಲ್ಲಿ ಆ ಆಕೃತಿ ದೊಡ್ಡದಾಗಿ ಕಂಡಿತ್ತು.


ತಕ್ಷಣ ಅಲ್ಲಿಂದ ಎದ್ದು ರಸ್ತೆಗೆ ಬಂದು ಆ ಗಾಡಿಗೆ ಕಾಯುತ್ತ ನಿಂತೆ. ಗಾಡಿ ಹತ್ತಿರವಾಗುತ್ತಿತ್ತು....ಆ ಕತ್ತಲಲ್ಲಿ ಗಾಡಿ ಓಡಿಸುತ್ತಿದ್ದ ವ್ಯಕ್ತಿ ಅಸ್ಪಷ್ಟವಾಗಿ ಕಾಣುತ್ತಿದ್ದರು. ಮತ್ತೆ ಯಾಕೋ ಭಯ ಕಾಡಲು ಆರಂಭಿಸಿತು. ಆದದ್ದಾಗಲಿ ಎಂದು ನಿಂತೆ. ಅರೆ..ಅಲ್ಲಿ ಬರುತ್ತಿರುವುದು ನಮ್ಮದೇ ಗಾಡಿ...ಅಂದರೆ ಅಪ್ಪನೇ ಗಾಡಿ ಓಡಿಸಿಕೊಂಡು ಬರುತ್ತಿರುವುದು. ಅಬ್ಬಾ....ಬದುಕಿದೆಯ ಬಡಜೀವವೇ....ಎಂದುಕೊಂಡೆ.


ಅಪ್ಪ ಹತ್ತಿರ ಬಂದು ಗಾಡಿ ನಿಲ್ಲಿಸಿ...ಇಷ್ಟು ಹೊತ್ತಾದರೂ ಬರಲಿಲ್ಲವಲ್ಲ ಅದಕ್ಕೆ ನಾನೇ ಬಂದೆ ಎಂದರು. ಅಯ್ಯೋ ಆಗಲೇ ಬರುತ್ತಿದ್ದೆ ಅಪ್ಪ...ಆದರೆ ಮೊದಲ ಬಾರಿಗೆ ಈ ಸಮಯದಲ್ಲಿ ಬಂದೆ ಅಲ್ಲ ಅದಕ್ಕೆ ನಿಧಾನವಾಗಿ ಆರಾಮಾಗಿ ಊರಿನ


ವಾತಾವರಣವನ್ನು ಸವಿಯುತ್ತ ಬಂದೆ....ಎಂದು ಹಲ್ಕಿರಿದೆ....  

Rating
No votes yet

Comments

Submitted by ಮಮತಾ ಕಾಪು Fri, 11/30/2012 - 12:08

ನಗರದಲ್ಲಿ ಎಷ್ಟೇ ಸೌಕರ್ಯಗಳಿದ್ದರೂ, ಹಳ್ಳಿ ಬದುಕೇ ಚೆಂದ. ನಿಮ್ಮ ಪ್ರಯಾಣದ ಈ ಬರಹ ನನ್ನ ಹಳ್ಳಿಯನ್ನೂ ಒಮ್ಮೆ ನೆನಪಿಸಿತು. ಆದರೆ ನಮ್ಮಲ್ಲಿ ದೆವ್ವದ ಆಟ ನಡೆಯುವುದಿಲ್ಲ. ಬರಹ ಸೊಗಸಾಗಿದೆ.

Submitted by H A Patil Fri, 11/30/2012 - 12:21

ಜಯಂತ ರಾಮಾಚಾರರಿಗೆ ವಂದನೆಗಳು
" ಹಳ್ಳಿ ದಾರಿಯಲ್ಲಿ " ಬರಹ ಓದಿದೆ, ಬೆಂಗಳೂರು, ರಾಜಹಂಸ ಬಸ್ಸಿನಲ್ಲಿಯ ಪಯಣ, ಮಹಾನಗರ ಮತ್ತು ಹಳ್ಳಿಯ ವಸ್ತವವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ, ದೆವ್ವಗಳ ಬಗೆಗೆಚಿತ್ರಣ ಸೊಗಸಾಗಿದೆ, ಉತ್ತಮ ಬರಹ ಧನ್ಯವಾದಗಳು.

Submitted by spr03bt Fri, 11/30/2012 - 13:02

ಜಯ೦ತರೆ, ನಿಮ್ಮ ಲೇಖನ ಚೆನ್ನಾಗಿದೆ. ಚಿಕ್ಕ೦ದಿನಲ್ಲಿ ರಾತ್ರಿ ಹೊತ್ತು ತೋಟದ ಕಡೆ ಹೋಗುವಾಗ ನನಗಾಗುತ್ತಿದ್ದ ಭಯ, ಭಾವನೆಗಳ ನೆನಪು ತ೦ತು.. ಉತ್ತಮ ಲೇಖನಕ್ಕೆ ಅಭಿನ೦ದನೆಗಳು