ಟ್ರಾಫಿಕ್ ಹರಟೆ

ಟ್ರಾಫಿಕ್ ಹರಟೆ


ಅಮ್ಮಾ, ಲೇಟಾಯ್ತು ತಿಂಡಿ ಕೊಡು..ಕ್ಲಾಸಿಗೆ ಐದು ನಿಮಿಷ ತಡವಾದರೂ ಮಿಸ್ ಬೈಯ್ತಾರೆ. ದಿನಾ ಸರಿಯಾದ ಸಮಯಕ್ಕೆ ಹೋಗುತ್ತಿದ್ದು ಒಂದು ದಿನ ತಡವಾದರೆ ಸ್ನೇಹಿತರಿಗೆ ತಮಾಷೆ ವಿಷಯವಾಗಿಬಿಡ್ತೀನಮ್ಮಾ, ಹೀಗೆ ಅಮ್ಮನ್ನ ಗೋಳು ಹೊಯ್ಕೊಂಡು ಎಲ್ಲವನ್ನೂ ಅಮ್ಮನಿಂದ ಸಿದ್ದಪಡಿಸಿಕೊಳ್ಳುತ್ತಿದ್ದ ಕಾಲ ಮುಗಿಯಿತು. ಈಗ ಏನಿದ್ದರೂ ಬಸ್ಸು, ಆಫೀಸು, ಕೆಲಸ ಇವುಗಳಲ್ಲೇ ಬದುಕು. ನಿರ್ದಿಷ್ಟ ಸಮಯಕ್ಕೆ ಆಫೀಸಿಗೆ ಹಾಜರಾಗಲೇಬೇಕು. ಬೇಗ ಎದ್ದು ಆಫೀಸಿನ ತಯಾರಿ ಮಾಡ್ಕೊಂಡು ಹೊರಟರೆ ಮನೆ ಸೇರೋದು ರಾತ್ರಿಯೇ. ಈ ನಡುವೆ ಅದೆಷ್ಟು ಘಟನೆಗಳು, ಸಿಹಿ-ಕಹಿ ನೆನಪುಗಳು ನಿಜಜೀವನದಲ್ಲಿ ಹಾದುಹೋಗುತ್ತವೆ. ಅದರ ಒಂದು ಅನುಭವ ಇಲ್ಲಿದೆ.

ಎಂದಿನಂತೆ ಆಫೀಸಿನ ಕೆಲಸಗಳನ್ನು ಮುಗಿಸಿಕೊಂಡು ಬೇಗನೆ ಮನೆ ಸೇರಬೇಕೆಂದುಕೊಂಡು ಬಸ್‌ನಿಲ್ದಾಣಕ್ಕೆ ಹೋದೆ. ಆಗಲೇ ಆರು ಗಂಟೆ ಕಳೆದಿತ್ತು. ಬೀದಿ ದೀಪಗಳು, ಅಂಗಡಿಗಳ ದೀಪಗಳು ಬೆಳಕನ್ನು ಅಲಂಕರಿಸಿದ್ದವು. ಇನ್ನೂ ಎಷ್ಟು ಹೊತ್ತು ಕಾಯಬೇಕಾಗುವುದೋ ಎಂದು ಯೋಚಿಸುತ್ತಿರುವಾಗಲೇ ಒಂದು ಬಸ್ ಬಂತು. ಹೇಗೋ ನೂಕುನುಗ್ಗಲಿನಲ್ಲೇ ಹತ್ತಿಕೊಂಡೆ. ಒಳಗೂ ನಿಂತುಕೊಳ್ಳುವ ಯೋಗವೇ ಒದಗಿ ಬಂತು. ಸ್ವಲ್ಪ ದೂರ ಕ್ರಮಿಸಿದ ನಂತರ ಪ್ರಯಾಣಿಕೆಯೊಬ್ಬರು ಇಳಿದುದರಿಂದ ಕುಳಿತುಕೊಳ್ಳಲು ಜಾಗ ಸಿಕ್ಕಿತು. ಅಷ್ಟರಲ್ಲೇ ಮೊಬೈಲ್ , ಸ್ನೇಹ ಕಾಲಿಂಗ್.. ಎಂದು ಸೂಚಿಸುತ್ತಿತ್ತು. ಸಹಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಮೆಲ್ಲನೆ ಸ್ವರದಲ್ಲಿ ಮಾತನಾಡಿ ಕಾಲ್ ಕಟ್ ಮಾಡಿ ಕುಳಿತುಕೊಂಡೆ. ಆಗಲೇ ನನ್ನ ಸೀಟಿನಲ್ಲಿದ್ದ ಮಹಿಳೆಯೊಬ್ಬರು ತುಂಬಾ ಹತ್ತಿರದ ಪರಿಚಯಸ್ಥರಂತೆ ನಗುಮುಖದಿಂದ ಮಾತನಾಡಲು ಶುರು ಮಾಡಿದರು. ಅಪರಿಚಿತ ಊರಿನಲ್ಲಿ ಇವರ್ಯಾರಪ್ಪ ಅಂದುಕೊಳ್ಳುತ್ತಿರುವಾಗಲೇ ಆಕೆ ನಾನು ಫೋನಿನಲ್ಲಿ ಮಾತನಾಡಿದುದನ್ನು ಕೇಳಿ ನಮ್ಮ ಭಾಷೆಯಲ್ಲೇ ಮಾತನಾಡಿಸಿದರು. ಕಾರಣ ಅವರ ಮತ್ತು ನನ್ನ ಭಾಷೆ ಒಂದೇ ಆಗಿತ್ತು. ಹೀಗೆ ಶುರುವಾದ ಮಾತುಕತೆ ಸುಮಾರು 2 ಗಂಟೆಗಳ ಕಾಲ ನಿರಂತರವಾಗಿ ಸಾಗಿತ್ತು ನಿಲ್ದಾಣ ಬರುವವರೆಗೆ. ಕಾರಣ ದಿನಾ ಮುಕ್ಕಾಲು ಗಂಟೆ ಪ್ರಯಾಣಿಸುತ್ತಿದ್ದ ದಾರಿ ಟ್ರಾಫಿಕ್ ನಿಂದಾಗಿ ಅಂದು, ಒಂದೂ ಕಾಲು ಗಂಟೆ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು. ಬಸ್ ಐದು ನಿಮಿಷ ಪ್ರಯಾಣಿಸಿ ಹತ್ತು ನಿಮಿಷ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು. ಮಾತನಾಡುತ್ತಾ ಹೋದಂತೆ ಆ ಪ್ರಯಾಣಿಕೆಯ ಭಾಷೆ ಮಾತ್ರವಲ್ಲ ಊರು ಕೂಡಾ ನಮ್ಮದೇ ಎಂದು ತಿಳಿದು ಆಕೆಗೂ, ನನಗೂ ಖುಷಿಯಾಯಿತು. ಈ ಊರಿಗೆ ಉದ್ಯೋಗಕ್ಕಾಗಿ ನಾನು ಬಂದು ಇನ್ನೂ ಒಂದು ತಿಂಗಳಾಗಿಲ್ಲ, ಆದರೆ ಆಕೆಯದು ಸುಮಾರು ಹದಿನೆಂಟು ವರ್ಷಗಳ ಅನುಭವ. ಒಂದೊಂದನ್ನೇ ನನ್ನ ಜತೆ ಹರಟುತ್ತಿದ್ದರು. ಆಗ ಈ ರೀತಿಯಾದ ಟ್ರಾಫಿಕ್‌ ಸಮಸ್ಯೆ ಇರಲಿಲ್ಲ. ನಗರವೂ ಇಷ್ಟೊಂದು ಕೆಟ್ಟದಾಗಿರಲಿಲ್ಲ. ಈಗ ಮನೆಯಿಂದ ಹೊರಗಡೆ ಕಾಲಿಡುವಾಗಲೇ ಭಯವಾಗುತ್ತಿದೆ, ಯಾವ ಕ್ಷಣದಲ್ಲಿ ಯಾವ ಮೂಲೆಯಿಂದ ಕೆಟ್ಟ ವಾಸನೆಗಳು ಬಂದು ಮೂಗಿಗೆ ಅಪ್ಪಳಿಸುವುದೋ ಒಂದೂ ಗೊತ್ತಾಗುವುದಿಲ್ಲ. ತಂತ್ರಜ್ಞಾನ ಮುಂದುವರಿದಷ್ಟು ಹೊಸ ಹೊಸ ಕಾಯಿಲೆಗಳೂ ನಮ್ಮನ್ನು ಹುಡುಕಿಕೊಂಡು ಬರುತ್ತಿವೆ ಎಂದರು.
ಟ್ರಾಫಿಕ್ ನ ಬಗ್ಗೆ ಮಾತನಾಡುತ್ತಾ ಈ ಸಮಸ್ಯೆಯಿಂದಾಗಿ ಅದೆಷ್ಟೋ ಮಕ್ಕಳು, ಮಹಿಳೆಯರು,ವೃದ್ದರು ಅದೆಷ್ಟು ತೊಂದರೆಗಳನ್ನು ಎದುರಿಸಬೇಕಾಗುವುದು ಎಂದೆಲ್ಲಾ ಹೇಳುತ್ತಿದ್ದರು. ಇಂದು ಮನೆಯ ಸದಸ್ಯರಲ್ಲೆಲ್ಲಾ ಪ್ರತ್ಯೇಕ ವಾಹನಗಳಿರುವುದೇ ಇದಕ್ಕೆ ಕಾರಣ ಎಂಬುದು ಆಕೆಯ ಅಭಿಪ್ರಾಯ. ಬೆಂಗಳೂರಿನಲ್ಲಿರುವ ಜನಸಂಖ್ಯೆಗಿಂತಲೂ ಹೆಚ್ಚು ವಾಹನಗಳೇ ಇರುವಾಗ ಹೀಗಾಗದೆ ಇರುತ್ತದೆಯೇ? ಇಲ್ಲಿನ ಮನೆಯ ಕೇವಲ ಒಂದೇ ಸದಸ್ಯನಿಗೆ ಮಾತ್ರ ವಾಹನ ಪಡೆಯಲು ಪರವಾನಗಿ  ಕೊಡಬೇಕು. ಆಗ ಸ್ವಲ್ಪಮಟ್ಟಿಗಾದರೂ ಈ ಟ್ರಾಫಿಕ್‌ ಸಮಸ್ಯೆ ಕಡಿಮೆ ಮಾಡಬಹುದು. ಆದರೆ ಅದಕ್ಕಾಗಿ ಈಗ ಹೊಸ ಯೋಜನೆ ಮೆಟ್ರೋ ತಯಾರಿ ಆಗ್ತಾ ಇದೆಯಲ್ವಾ? ಇನ್ನು ಅದರಿಂದಾಗಿ ಯಾವ ಯಾವ ತೊಂದರೆಗಳು ಉಂಟಾಗಲಿವೆಯೋ ಕಾದು ನೋಡಬೇಕು. ಮನೆಯ ಮೆಟ್ಟಿಲು ಹತ್ತಲು ಆಗದೇ ಇರುವವರು ಅಷ್ಟು ಎತ್ತರದ ಮೆಟ್ರೋ ಮೆಟ್ಟಿಲುಗಳನ್ನು ಹೇಗೆ ಹತ್ತುವುದು ಎಂದೆನ್ನುತ್ತಿದ್ದರು. ಆಕೆಯೂ ವಯಸ್ಕರಾದರೂ ಮೆಟ್ರೋದಲ್ಲಿ  ಪ್ರಯಾಣಮಾಡಬೇಕೆಂಬ ಆಸೆಯೂ ಇದೆ ಎಂದರು. ಈ ರೀತಿಯಾಗಿ ಅನೇಕ ವಿಷಯಗಳು ನಮ್ಮ ನಡುವೆ ಬಂದು ಹೋದವು. ನಿಲ್ದಾಣ ಬಂದಾಗ, ಆಕೆ ಬಿಡುವಿದ್ದಾಗ ಮನೆಗೆ ಬನ್ನಿ ಎಂದು ಆಹ್ವಾನವನ್ನೂ ಕೊಟ್ಟರು. ಆಕೆ ಇಷ್ಟೆಲ್ಲಾ ಆದರ,ಪ್ರೀತಿ ತೋರಿಸಲು ಕಾರಣ ನಮ್ಮ ಭಾಷೆ ,ಊರು,ಅಭಿಮಾನ, ಇವು ಎಂಥವರನ್ನೂ ಬೆಸೆಯುತ್ತದೆ ಅಲ್ವಾ?

Comments

Submitted by venkatb83 Sun, 12/02/2012 - 17:01

ಮಮತಾ ಅವ್ರೆ-ಟ್ರಾಫಿಕ್ ಬಗ್ಗೆ ಆಗಲೇ ಬೇಜಾನ್ ಬರಹಗಳು ಸಂಪದದಲ್ಲಿ ಬಂದಿವೆ ...ಅವಕ್ಕೆ ಬಹಳ ಪ್ರತಿಕ್ರಿಯೆಗಳು ತಮಾಷೆಯಾಗಿ ಬಂದಿವೆ.ಸಮಯ ಸಿಕ್ಕಾಗ ಗಮನಿಸಿ..ಹಾಗೆ ಬರೆದವರಲ್ಲಿ ರಾಮ ಮೋಹನರ ಒಂದು ಕವನವು ಇದೆ..ಹಾಗೆಯೇ ಇನ್ನಿತರರು ಬರೆದಿರುವರು... ಟ್ರಾಫಿಕ್ ಹೆಚ್ಚಳಕ್ಕೆ ಹಲವು ಕಾರಣ-ಆದ್ರೆ ಸಮಸ್ಯೆಗೆ ನಾವೇ ಕಾರಣ..:(( ಮೆಟ್ರೋ ಮತ್ತೊಂದು ಬಂದರೂ ಸಮಸ್ಯೆ ನೀಗೋಲ್ಲ ಅನ್ಸುತ್ತೆ..ನೋಡುವ... ಸಮೂಹ ಸಾರಿಗೆ ಬಳಸಿ ವಾಯು ಮಾಲಿನ್ಯ ತಪ್ಪಿಸಿ ಎಂದು ಜಾಹೀರಾತು ಕೊಟ್ಟು ರಸ್ತೆಗೆ ಡಬ್ಬ ಬಸ್ ಬಿಡುವ ಕೆಲವೊಮ್ಮೆ ತುಂಬಿದ ಗರ್ಭಿಣಿ ರೀತಿಯ ಬಸ್ಸು ಬಂದಾಗ ಅದರಲ್ಲಿ ಹತ್ತಿ (ಹತ್ತುವುದಕ್ಕೆ ಮೊದಲೇ ಒಮ್ಮೆ ಹೋಗಿಬಿಡುತ್ತೆ) ಆಫೀಸಿಗೆ ಮನೆಗೆ ಕಾಲೇಜಿಗೆ ಹೋದಾಗ ಪ್ರಸನ್ನವದನರಾಗಿರಲು ಸಾಧ್ಯವೇ?? ಶುಭವಾಗಲಿ.. \|