ಹಳ್ಳಿ ಮದ್ದು

ಹಳ್ಳಿ ಮದ್ದು

ಳ್ಳಿಮದ್ದು ಪೇಟೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಒಂದು ಉದಾಹರಣೆಯೊಂದಿಗೆ ಈ ಬರಹವನ್ನು ಆರಂಭಿಸಬಹುದು ಎನಿಸುತ್ತದೆ. ಭದ್ರಾವತಿಯಲ್ಲಿದ್ದ ಗೆಳೆಯ ರಾವ್ ಅವರ ಮಗನಿಗೆ ಸುಮಾರು ಎರಡರಿಂದ ಮೂರು ವರ್ಷ. ಆದರೆ ಮಾತು ಇನ್ನೂ ಸ್ಪಷ್ಟವಾಗಿ ಬರುತ್ತಿರಲಿಲ್ಲ. ಆ ಹುಡುಗ ಶಿಶುವಿಹಾರಕ್ಕೆ ಹೋಗುತ್ತಿದ್ದರೂ, ಹೆಚ್ಚಿನ ಪ್ರಗತಿ ಕಂಡಿರಲಿಲ್ಲ. ನಾಲ್ಕಾರು ಶಬ್ದಗಳಾದ ಅಮ್ಮ, ಅಪ್ಪ ಈ ರೀತಿ ನುಡಿಯುತ್ತಿದ್ದರೂ, ಕನ್ನಡ ಅಕ್ಷರ ಮಾಲೆಯಲ್ಲಿ ಅ-ಆ-ಇ-ಈ ನಂತರದ ಶಬ್ದಗಳನ್ನು ಉಸುರಲು ಆ ಹುಡುಗನಿಗೆ ಕಷ್ಟವಾಗುತ್ತಿತ್ತು. ನರರೋಗ ತಜ್ಞರ ಬಳಿ ಮತ್ತು ಸ್ಪೀಚ್ ಮತ್ತು ಹಿಯರಿಂಗ್ ತಜ್ಞರ ಬಳಿ ಹಲವಾರು ಬಾರಿ ಚಿಕಿತ್ಸೆ ಕೊಡಿಸಿದ್ದರು. ನರತಂತುಗಳು ಸಹಜವಾಗಿವೆ ಎಂಬ ವರದಿ ಬಂದಿತ್ತು. ಈ ಎಲ್ಲಾ ವಿವರಗಳನ್ನು ಆಕಸ್ಮಿಕವಾಗಿ ಮಾತಿನ ಮಧ್ಯೆ ತಿಳಿಸಿದರು. ತುಂಬಾ ಸರಳವಾಗಿ, ಹೆಚ್ಚಿನ ಗಾಂಭೀರ್ಯತೆಯನ್ನು ತೋರದೆ ನಾನು ಒಂದು ಉಚಿತ ಸಲಹೆ ಕೊಟ್ಟೆ – “ನಿಮ್ಮ ಮಗನಿಗೆ ಒಂದೆಲಗ ಅಥವಾ ಉರಗದ ಎಲೆಯನ್ನು ಜೇನುತುಪ್ಪದಲ್ಲಿ ತೇಯ್ದು ಎರಡು ವಾರ ಕೊಟ್ಟು ನೋಡಿ. ನಮ್ಮ ಹಳ್ಳಿಯಲ್ಲಿ ಮಕ್ಕಳು ಬೇಗನೆ ಮಾತನ್ನು ಕಲಿಯಲು ಉರಗನ ರಸವನ್ನು ನಾಲಗೆಗೆ ಸವರುತ್ತಾರೆ”

    ಸಲಹೆ ನೀಡುವುದು ಯಾವಾಗಲೂ ಸಲೀಸು. ಆದರೆ ಅದನ್ನು ಪಾಲಿಸಲು ತುಸು ತೊಡಕು. ಒಂದೆಲಗ ಅಥವಾ ಉರಗನ ಸೊಪ್ಪು ಆಗ ಭದ್ರಾವತಿಯಲ್ಲಿ ಸಿಗುತ್ತಿರಲಿಲ್ಲ. ಅದಕ್ಕೆ ಮತ್ತೊಂದು ಸಲಹೆ ಕೊಟ್ಟೆ – ಉಡುಪಿ ಅಥವಾ ಕುಂದಾಪುರದಿಂದ ಎಲೆಗಳನ್ನು ತರಿಸಿ, ಫ್ರಿಜ್‍ನಲ್ಲಿಟ್ಟು ಉಪಯೋಗಿಸಬಹುದು ಎಂದೆ. ಉಡುಪಿಯ ಗೆಳೆಯರ ಮೂಲಕ, ಸಾಕಷ್ಟು ಉರಗನ ಎಲೆಗಳನ್ನು ತರಿಸಿ, ಪ್ರಿಜ್‍ನಲ್ಲಿಟ್ಟು, ಅದರ ಚಟ್ನಿ ಮಾಡಿಸಿ, ಅಥವಾ ಜೇನುತುಪ್ಪದಲ್ಲಿ ಎಲೆಯನ್ನು ತೇಯ್ದು ತಿನ್ನಿಸಲು ಹೇಳಿದೆ.
    ಸುಮಾರು ಎರಡು ಮೂರು ವಾರಗಳ ನಂತರ, ಗೆಳೆಯರ ಬಳಿ ವಿಚಾರಿಸಿದೆ – “ನಿಮ್ಮ ಮಗನಿಗೆ ಉರಗನ ಎಲೆ ತಿನ್ನಿಸಿದ್ದರಲ್ಲಾ, ಏನಾದರೂ ಪರಿಣಾಮ ಉಂಟೋ?”
     “ಒಳ್ಳೆಯ ಪರಿಣಾಮ ಇದೆ, ಮಾರಾಯ್ರೆ, ಈಗ ಅವನು ಶಿಶುವಿಹಾರದಲ್ಲಿ ಅ-ಆ-ಇ-ಈ ದಿಂದ ಶುರುಮಾಡಿ ಎಲ್ಲಾ ಕನ್ನಡ ಅಕ್ಷರಗಳನ್ನೂ, ಎ-ಬಿ-ಸಿ-ಡಿ. . . . ಕೊನೆಯ ತನಕವೂ ಎಲ್ಲಾ ಅಕ್ಷರಗಳನ್ನೂ ಹೇಳ್ತಾನೆ. ಒಂದೆಲಗದ ರಸವನ್ನು ಪ್ರತಿದಿನಾ ತಿನ್ನಿಸಿದ ನಂತರ, 15 ದಿನಗಳಲ್ಲೇ ನಾಲಗೆ ತುಂಬಾ ಸ್ಪಷ್ಟವಾಗಿದೆ! ನಿಮಗೆ ಧನ್ಯವಾದ” ಎಂದರು ಗೆಳೆಯ ರಾವ್. ನಾನು ನೀಡಿದ ಮಾಮೂಲಿ ಸಲಹೆ ಅವರ ಮಗನಿಗೆ ವರದಾನವಾಗಿತ್ತು.
     ನಾನು ಅವರಿಗೆ ನೀಡಿದ ಉಚಿತ ಸಲಹೆಯ ಹಿಂದೆ, ನಮ್ಮ ಹಳ್ಳಿಯ ಪರಂಪರೆಯ ಪ್ರಭಾವವಿತ್ತು! ನೂರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಆ ಒಂದು ಪದ್ದತಿಯು ಇಲ್ಲಿ ಕೆಲಸಮಾಡಿತ್ತು. ನಮ್ಮ ಹಳ್ಳಿಯಲ್ಲಿ ಒಂದು ವರ್ಷದೊಳಗಿನ ಮಕ್ಕಳಿಗೆ ಉರಗನ ಎಲೆಯನ್ನು ನೀಡುವುದು ತೀರಾ ಸಹಜವಾದ ಒಂದು ಪರಿಪಾಠ. ಮಕ್ಕಳ ನಾಲಗೆ ಶುದ್ಧವಾಗಿ, ಬೇಗನೆ ಮಾತನಾಡುವಂತಾಗಲು ಉರಗನ ಎಲೆಯು ಸಹಕಾರಿ ಎಂಬ ನಂಬಿಕೆ ಮತ್ತು ತಿಳುವಳಿಕೆಯಿಂದ, ಉರಗನ ರಸವನ್ನು ಮಕ್ಕಳ ನಾಲಗೆಗೆ ಪ್ರತಿದಿನವೆಂಬಂತೆ ತಾಗಿಸುತ್ತಿದ್ದರು. (ಈಚೆಗಿನ ಸಂಶೋಧನೆಗಳೂ ಸಹಾ ಒಂದೆಲಗವು ಮಿದುಳಿನ ಬೆಳವಣಿಗೆಗೆ ಸಹಕಾರಿ ಎಂಬುದನ್ನು ಖಚಿತಪಡಿಸಿವೆ.)
     ನಮ್ಮ “ಹಳ್ಳಿಮದ್ದು”ಗಳು ಜನಮಾನಸದಿಂದ ಕ್ರಮೇಣ ಮರೆಯಾಗುತ್ತಿದ್ದರೂ, ಅಲ್ಲಲ್ಲಿ ಪ್ರತ್ಯೇಕವಾಗಿ ತಮ್ಮ ಪಾಡಿಗೆ ಉಳಿದುಕೊಂಡಿವೆ. ಜನರು ನಗರಗಳತ್ತ ವಲಸೆಹೋಗಿ, ಕ್ರಮೇಣ ನಗರಗಳಲ್ಲೇ ವಾಸ್ತವ್ಯ ಹೂಡುತ್ತಿದ್ದು, ಹಳ್ಳಿಯ “ಬೇರು”ಗಳನ್ನು ಮರೆಯುತ್ತಿರುವುದು ಒಂದು ಪ್ರಕ್ರಿಯೆಯಾದರೆ, ಹಳ್ಳಿಯಲ್ಲೇ ನೆಲೆಸಿರುವ ಜನರು, ಕ್ರಮೇಣ ಆಧುನಿಕ ಶಿಕ್ಷಣ ಮತ್ತು ಜೀವನ ಪದ್ದತಿಗೆ ಒಗ್ಗಿಕೊಂಡು, ತಮ್ಮಲ್ಲಿದ್ದ ಪುರಾತನ ಔಷಧೀಯ ಪದ್ದತಿಗಳನ್ನು ಮತ್ತು ಎಲೆ,ಗಿಡ, “ಬೇರು”ಗಳತ್ತ ಅವಜ್ಞೆ ತೋರುತ್ತಿರುವುದು ಅದೇ ಪ್ರಕ್ರಿಯೆಯ ಮತ್ತೊಂದು ಮುಖವಾಗಿದೆ. ಇದರಿಂದಾಗಿ, “ಹಳ್ಳಿಮದ್ದು” ಹಿಂದೆ ಪಡೆದಿದ್ದ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ.
     ನಮ್ಮ ಹಳ್ಳಿಯಲ್ಲಿ ಕಂಡುಬರುತ್ತಿದ್ದ ಹಲವಾರು ಔಷಧೀಯ ಆಹಾರ ಪದ್ದತಿಗಳಲ್ಲಿ “ದಾಸವಾಳದ ಸೊಪ್ಪಿನ” ಕಡುಬು ಸಹಾ ಒಂದು. ಬಿಳಿ ದಾಸವಾಳದ ಎಲೆಗಳನ್ನು, ಇಡ್ಲಿ ಹಿಟ್ಟಿನ ಜೊತೆ ಸೇರಿಸಿ, ಚೆನ್ನಾಗಿ ರುಬ್ಬಿ ಅದರ ಇಡ್ಲಿ ಅಥವಾ ಸೆಕೆಹಿಟ್ಟು ಮಾಡಿ ತಿನ್ನುವ  ಪರಿಪಾಠವು, ಉದರ ಸಂಬಂಧಿ ಕಾಯಿಲೆಗಳಿಗೆ ಮತ್ತು ಮಹಿಳೆಯರಿಗೆ ಅನುಕೂಲ ಎಂಬ ಅನುಭವ. ಆದರೆ, ಈ ರೀತಿ ತೀರ ಸರಳವಾಗಿ ಕಾಣುವ ಬಹುಪಾಲು ಪದ್ದತಿಗಳು, ಮೇಲೆ ಹೇಳಿದ ಉರಗನ ಎಲೆಯ ಚಿಕಿತ್ಸೆಯೂ ಸೇರಿದಂತೆ, ಕೇವಲು ಅನುಭವ ಮತ್ತು ಪರಂಪರೆಯ ಮುಂದುವರಿಕೆಯ ಹಿನ್ನೆಲೆಯಲ್ಲಿ ಮಾತ್ರ ಉಳಿದುಕೊಂಡಿವೆಯೇ ಹೊರತು, ಅವುಗಳ ಮೇಲೆ ಸಾಕಷ್ಟು ಸಂಶೋಧನೆ ಮತ್ತು ಪರಶೋಧನೆ ನಡೆದಿಲ್ಲ.
     ಈಗ ಬಹುಮಟ್ಟಿಗೆ ಮರೆಯಾಗಿರುವ ನಮ್ಮೂರಿನ ಒಂದು “ಹಳ್ಳಿಮದ್ದು” ಎಂದರೆ ಹಂಗಾರ ಕೆತ್ತೆ ಕಷಾಯ! ನಮ್ಮ ತೋಟದಾಚೆಯ ಅಂಚಿನಲ್ಲಿ ಒಂದು ಹಂಗಾರ ಮರ ಇತ್ತು (ಬೂರುಗದ ಜಾತಿಯ ಮರ) – ಕೆಂಪನೆಯ ಹೂಗಳನ್ನು ಬಿಡುತ್ತಿದ್ದರೂ, ಮರದ ಖ್ಯಾತಿ ಅದರ “ಕೆತ್ತೆ” ಅಥವಾ ತೊಗಟೆಗೆ ಮಾತ್ರ ಸೀಮಿತ. ನಾಲ್ಕಾರು ದಿನ ಬಿಡದೇ ಕಾಡುವ ಜ್ವರ ಬಂದವರಿಗೆ ಅಂದು ಇದ್ದ ಒಂದೇ ಒಂದು ಔಷಧವೆಂದರೆ, ಹಂಗಾರು ಮರದ ಕೆತ್ತೆ ಮತ್ತು ಮೆಣಸಿನ ಕಾಳು ಹಾಕಿ ಕುದಿಸಿದ ಕಷಾಯ. ಜ್ವರದ ಮಾತ್ರೆಗಳ ಬಳಕೆ ಆರಂಭವಾಗಿ, ಪ್ಯಾರಾಸೆಟಾಮಲ್ ಬಳಕೆಯು ನೀರು ಕುಡಿದದ್ದಕ್ಕಿಂತ ಸಲೀಸಾಗತೊಡಗಿದ ನಂತರ, ಹಂಗಾರಕೆತ್ತೆಯ ಕಷಾಯವು ಇತಿಹಾಸ ಪುಟಗಳನ್ನು ಸೇರಿಹೋಗಿದೆ!
     ಸುಟ್ಟಗಾಯಗಳಿಗೆ ಉಪಯೋಗಿಸುವ “ತ್ಯಾಗದ ಕುಡಿ” ಎಣ್ಣೆ ಮತ್ತೊಂದು ಹಳ್ಳಿಮದ್ದು. ಕೈಬೆರಳೂ, ಕಾಲಿನ ಭಾಗಗಳಲ್ಲಿ ಉಂಟಾಗುವು ಆಕಸ್ಮಿಕವಾದ ಸುಟ್ಟಗಾಯಗಳು, ಕೆಲವೊಮ್ಮೆ ಹಲವಾರು ದಿನ ಕಾಡುವುದುಂಟು. ತೇಗದ ಮರದ ಕುಡಿ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ, ಹಚ್ಚಿದರೆ ಅಂತಹ ಗಾಯಗಳು ಬೆಗನೆ ವಾಸಿಯಾಗುತ್ತವೆಂಬುದು ಹಳ್ಳಿಜನರ ಅನುಭವ. ಅದನ್ನು ಉಪಯೋಗಿಸಿದವರು ಗಮನಿಸಿದ ಮತ್ತೊಂದು ವಿಶೇಷವೆಂದರೆ, ಗಾಯಗಳು ಬೇಗನೆ ವಾಸಿ ಆಗುವುದರ ಜೊತೆ, ಸುಟ್ಟಗಾಯದ ಕಲೆಗಳನ್ನು ಮಾಯ ಮಾಡುವ ಶಕ್ತಿಯು “ತ್ಯಾಗದ ಕುಡಿ ಎಣ್ಣೆ”ಗೆ ಇದೆ ಎಂಬ ವಿಚಾರ.
     “ಹಳ್ಳಿಮದ್ದು”ಗಳಲ್ಲಿ ತುಂಬಾ ಪರಿಚಿತವಾದದ್ದು ಎಂದರೆ ಅಜೀರ್ಣಕ್ಕೆ ಬೆಳ್ಳುಳ್ಳಿಯ ಉಪಯೋಗ. ಹೊಟ್ಟೆಯ ಸಮಸ್ಯೆಗಳಿಗೆ ಮಜ್ಜಿಗೆಯ ಜೊತೆ ಜಜ್ಜಿಹಾಕಿದ ಬೆಳ್ಳುಳ್ಳಿಯ ಸೇವನೆಯು ರಾಮಬಾಣ ಎಂಬುದು ಎಲ್ಲರ ಅನುಭವ. ಆದ್ದರಿಂದಲೇ, ಬೆಳ್ಳುಳ್ಳಿಯು “ಹಳ್ಳಿ ಮದ್ದು” ಪಟ್ಟಿಯಿಂದ “ಮನೆ ಮದ್ದು” ಸಾಲಿಗೆ ಬಡ್ತಿ ಹೊಂದಿದೆ.
   ನಮ್ಮ ಹಳ್ಳಿಯಲ್ಲಿ, ಹಿಂದೆ ಅಕ್ಷರಶ: ನೂರಾರು ಎಲೆ, ಗಿಡ, ಬಳ್ಳಿ, ಬೇರು, ತೊಗಟೆ, ಬೀಜಗಳು ಔಷಧೀಯ ರೂಪದಲ್ಲಿ ಬಳಕೆಯಾಗುತ್ತಿದ್ದವು. ಇಂದೂ ಹಲವರು ಅವುಗಳನ್ನು ತಮ್ಮ ಶಕ್ತಯಾನುಸಾರ ನೆನಪಿನಲ್ಲಿಟ್ಟುಕೊಂಡು, ತಮ್ಮ ದಿನಚರಿಯಲ್ಲಿ ಬಳಸುತ್ತಲೂ ಇದ್ದಾರೆ ಮತ್ತು ಈ ಬರಹದಲ್ಲಿ ನಾನು ಸೂಚಿಸದ್ದಕ್ಕಿಂತ ಎಷ್ಟೋ ಹೆಚ್ಚಿನ ಪಾಲು ಔಷಧಗಳನ್ನು ತಿಳಿದವರು ನಮ್ಮ ಊರುಗಳಲ್ಲಿ ಇದ್ದಾರೆ. ಆದರೂ ಹಳ್ಳಿಮದ್ದಿಗೆ ಹಿಂದೆ ನೀಡುತ್ತಿದ್ದ ಪ್ರಾಮುಖ್ಯತೆಯನ್ನು  ಇಂದು ಕೊಡುತ್ತಿಲ್ಲ ಎನ್ನಲೇಬೇಕು. ಹಳ್ಳಿಮದ್ದಿನಲ್ಲಿ ಪಾರಂಗತರಾದ ಅಜ್ಜಿಯಂದಿರೇ ಅಂದಿನ ಕಾಲದ ವೈದ್ಯರಾಗಿದ್ದರು. ಆ ರೀತಿ ಬಳಕೆಯಲ್ಲಿದ್ದ ಹಲವಾರು ಹಳ್ಳಿಮದ್ದುಗಳು ಇಂದು ಜನಮಾನಸದಿಂದ ಮರೆಯಾಗಿರುವುದು ಒಂದು ವಾಸ್ತವ.

                                                                      -ಎಂ.ಶಶಿಧರ ಹೆಬ್ಬಾರ ಹಾಲಾಡಿ.

Comments

Submitted by ಮಮತಾ ಕಾಪು Mon, 12/03/2012 - 12:36

ಹೆಚ್ಚಿನ ಸಂದರ್ಭಗಳಲ್ಲಿ ಹಳ್ಳಿ ಮದ್ದುಗಳು ಜೀವವನ್ನು ಉಳಿಸಿದ ನಿದರ್ಶನಗಳು ನಮ್ಮಲ್ಲಿವೆ. ಇವುಗಳಿಂದ ಅಡ್ಡ ಪರಿಣಾಮಗಳೂ ಬಹಳ ಕಡಿಮೆ. ಉತ್ತಮ ಲೇಖನ.
Submitted by spr03bt Mon, 12/03/2012 - 14:06

ಶಶಿಧರರೆ, ಉತ್ತಮ ಬರಹ. ಮೂಳೆಗೆ ಹೊಡೆತವಾದಾಗ ನಮ್ಮಲ್ಲು ಜೇನುತುಪ್ಪ ಹಾಗು ಸುಣ್ಣ ಹಾಕಿ ಉಜ್ಜುವುದು ಸಾಮಾನ್ಯ. ಎಡಕಾಲಿಗೆ ಸ್ವಲ್ಪ ಗಾಯ ಮಾಡಿಕೊ೦ಡು ಆ ಔಷಧಿ ಹಚ್ಚಿರುವುಗಾಲೇ ಅದರ ಬಗ್ಗೆ ನಾನು ಬರೆಯುತ್ತಿರುವುದು ಕೇವಲ ಕಾಕತಾಳೀಯವೆ ಸರಿ
Submitted by sasi.hebbar Mon, 12/03/2012 - 16:55

In reply to by spr03bt

19-20ನೆಯ ಶತಮಾನದ ಜೇನು+ಸುಣ್ಣ (ಅಥವಾ ಬೆಲ್ಲ + ಸುಣ್ಣ+ ಅರಸಿನ) ದಂಥ ಔಷಧಿಯನ್ನು 21 ಶತಮಾನದ,ಈಗಲೂ ಉಪಯೋಗಿಸುತ್ತಿರುವ ನೀವೇ ಧನ್ಯರು. ಧನ್ಯವಾದ, ನಿಮ್ಮ ಒಳ್ಳೆಯ ಪ್ರತಿಕ್ರಿಯೆಗೆ. ಅಂದ ಹಾಗೆ, ಎಡಗಾಲು ನೋವು ಎದ್ದೋಡಿತಾ, ಹೇಗೆ?
Submitted by spr03bt Mon, 12/03/2012 - 21:51

In reply to by sasi.hebbar

ಹೌದು ಶಶಿಧರರೆ, ಮನೆಯ ಮದ್ದಿಗೆ ನೋವು ಮಾಯ. ಆದರೆ ಬಲಗಾಲಿಗೆ ಗಣೇಶ ಹಬ್ಬದ೦ದು ಆದ ಗಾಯಕ್ಕೆ ಔಷಧಿ ಕೊಡಲಿಲ್ಲವಾದ್ದರಿ೦ದ ಇನ್ನೂ ಇದೆ :)
Submitted by makara Mon, 12/03/2012 - 20:12

ಉತ್ತಮ ಲೇಖನಕ್ಕೆ ಧನ್ಯವಾದಗಳು ಶಶಿಧರ್ ಅವರೆ. ನಮ್ಮ ಬಳ್ಳಾರಿ ಸೀಮೆಯಲ್ಲೂ ಹಲವಾರು ಮನೆ ಮದ್ದುಗಳಿವೆ. ಅವುಗಳಲ್ಲಿ ಅಸಿಡಿಟಿಗೆ ನಾವು ಒಂದು ಟೇಬಲ್ ಸ್ಪೂನಿನಷ್ಟು ಸಾಸಿವೆಯನ್ನು ನೀರಿನ ಜೊತೆ ನುಂಗಿದಾಗ ಎದೆಯುರಿತ ಮತ್ತು ಹುಳಿ-ಢೇಗು (ದೇಗು/ತೇಗು) ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಕಡಿಮೆಯಾಗುತ್ತದೆ. ಒಂದು ಮುಷ್ಠಿಯಷ್ಟು ಮೆಂತೆಯನ್ನು ನುಂಗಿ ಒಂದು ಲೋಟ ಮಜ್ಜಿಗೆ ಕುಡಿದರೆ ಭೇದಿ ನಿಂತು ಹೋಗುತ್ತದೆ. ರಕ್ತಭೇದಿಯಾದರೆ ದಾಳಿಂಬೆ ಕಾಯಿಯ ರಸವನ್ನು ಕುಡಿಯಬೇಕು. ಹೀಗೆ ಹತ್ತು ಹಲವಾರು ಪದ್ಧತಿಗಳಿವೆ; ನಿಮ್ಮ ಲೇಖನ ಅವುಗಳನ್ನು ನೆನಪಿಸಿಕೊಳ್ಳುವಂತೆ ಮಾಡಿತು (ಈಗ ನಾನು ವಾಸವಾಗಿರುವುದು ಹೈದರಾಬಾದ್)
Submitted by sasi.hebbar Tue, 12/04/2012 - 12:33

In reply to by makara

ಶ್ರೀಧರ್ ಬಂಡ್ರಿಯವರೆ, ಧನ್ಯವಾದ - ಬಹುಷ: ನಮ್ಮೆಲ್ಲರ ಮನಸ್ಥಿತಿ ಹಾಗೆಯೇ ಇರಬೇಕು- ದೂರದ ಊರಿನಲ್ಲಿ ವಾಸವಾಗಿರುವಾಗ, ಸ್ವಂತ ಊರಿನ ಹಳ್ಳಿ ಮದ್ದು, ಹಳ್ಳಿ ಶಾಲೆ, ಹಳ್ಳಿ ಜನ, ಅಜ್ಜಿ ಈ ರೀತಿ ನೆನಪಾಗುತ್ತಾ, ಮನಸ್ಸನ್ನು ಕಾಡುತ್ತದೆ. ತೇಗು-ಡೇಗು-ದೇಗು - ಒಂದೇ ಕ್ರಿಯೆಗೆ ಮೂರು ಶಬ್ದಗಳಿರುವುದು ನಿಮ್ಮ ಪ್ರತಿಕ್ರಿಯೆಯಿಂದ ತಿಳಿಯಿತು.
Submitted by Shobha Kaduvalli Thu, 01/03/2013 - 23:02

ಉಪಯುಕ್ತ‌ ಮಾಹಿತಿ ನೀಡಿದ್ದೀರಿ. ತಲೆ ನೋವು ಬoದಾಗ‌ ನನ್ನ‌ ಅಪ್ಪ‌, ಬೆಳ್ಳುಳ್ಳಿ ಜಜ್ಜಿ ಅದಕ್ಕೆ ಬೆಲ್ಲ‌ ಬೆರೆಸಿ ಪೇಸ್ಟಿನ‌oತೆ ಮಾಡಿ ನೋವಿರುವ‌ ಜಾಗಕ್ಕೆ ಹಚ್ಚುತ್ತಿದ್ದುದು ನೆನಪಿದೆ. (ನೋವಿರುವ‌ ಜಾಗಕ್ಕೆ ಮಾತ್ರ‌ ಹಚ್ಚಬೇಕು. ಚರ್ಮ‌ ಸುಟ್ಟುಹೋಗುತ್ತದೆ). ಹಾಗೆಹಯೇ ಗ‌oಟಲು ನೋವಿಗೆ ಸುಣ್ಣ‌ ಬೆಲ್ಲದ‌ ಪೇಸ್ಟ್... ಈಗ‌ ಯಾರು ಇದನ್ನೆಲ್ಲ‌ ಉಪಯೋಗಿಸುತ್ತಾರೆ.... ರಸ್ತೆಗೈದು ಕ್ಲಿನಿಕ್ ಗಳಿರುವಾಗ‌...?