ದೊಡ್ಡವರ ದಾರಿ ...........15

ದೊಡ್ಡವರ ದಾರಿ ...........15

ರಾಜೇಂದ್ರ ಆಗರ್ಭ ಶ್ರೀಮಂತರು. ಯಾವುದಕ್ಕೂ ದೇವರು ಕಡಿಮೆ ಮಾಡಿರಲಿಲ್ಲ. ಸಣ್ಣ ಕುಟುಂಬವಾದರೂ ಬಳಗ ಮಾತ್ರ ಯಾವಾಗಲು ಜಾಸ್ತಿಯೇ. ಮಗ ಶ್ರೀನಿವಾಸನಿಗೆ ಮಾಡುವೆ ಮಾಡಿದರು. ಸಂಸ್ಕಾರವಂತ ಹೆಣ್ಣುಮಗಳು ಲಕ್ಷ್ಮಿ ಈ ಮನೆ ತುಂಬಿಸಿಕೊಂಡಳು. ಈ ಕುಟುಂಬಕ್ಕೆ ದೃಷ್ಟಿಯಾಗುವುದೇನೋ ಅನ್ನುವಂತಹ ರೀತಿಯಲ್ಲಿ ಈ ಮನೆಯ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದವು.

ಸೊಸೆ ಲಕ್ಷ್ಮಿ ಒಂದು ದಿನ ತಲೆನೋವೆಂದು, ತಡೆಯಲು ಸಾಧ್ಯವಿಲ್ಲವೆಂದು ಅಳಲು ಪ್ರಾರಂಭ ಮಾಡಿದಾಗ ಮನೆಯವರಿಗೆಲ್ಲ ಗಾಭರಿ. ತಕ್ಷಣ ನುರಿತ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಲಾಯಿತು.ತಕ್ಷಣಕ್ಕೆ ತಲೆನೋವು ಕಡಿಮೆಯಾದಂತೆ ಭಾಸವಾದರೂ, ತಲೆನೋವು ಮತ್ತೆ ಮರುಕಳಿಸಿತು. ದಿನದ ಸೂರ್ಯ ಉದಯವಾದರೆ ಸಾಕು ಈಕೆಯ ತಲೆನೋವೂ ಪ್ರಾರಂಭ. ಸೂರ್ಯ ಮುಳುಗಿದ ನಂತರ ತಲೆನೋವು ಮಾಯ. ಇದೊಂದು ಬಿಡಿಸಲಾರದ ಸಮಸ್ಯೆಯಾಯಿತು. ಶ್ರೀನಿವಾಸ ಎಲ್ಲ ರೀತಿಯ ಚಿಕಿತ್ಸೆ ಕೊಡಿಸಿದ. ಹಲವಾರು ನಗರದ ಪ್ರತಿಷ್ಟಿತ ಆಸ್ಪತ್ರೆಗಳಲ್ಲೂ ತಪಾಸಣೆ ಮಾಡಿಸಿದ.  ಆದರೆ ಯಾವುದೇ ಪ್ರಯೋಜನವಾಗಲಿಲ್ಲ.  ದಿನ ಕಳೆದಂತೆ ಲಕ್ಷ್ಮಿಯು ಕೃಶವಾಗುತ್ತ ಬಂದಳು. ಎಲ್ಲರಿಗೂ ಒಂದೇ ಚಿಂತೆ, ಮುಂದೇನು? ಲಕ್ಷ್ಮಿಗಂತೂ ಸೂರ್ಯ ಉದಯವಾಗದಿದ್ದರೆ ಸಾಕು ಎನಿಸುವಂತೆ ಆಗುತ್ತಿತ್ತು. ಆದರೆ ಅದು ಸಾಧ್ಯವಾಗುವ ಮಾತೆ?  ರಾಜೇಂದ್ರರ ಸಂಸಾರದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಯಿತು. ಯಾರು ಏನು ಹೇಳುತ್ತಾರೋ ಅದೆಲ್ಲವನ್ನೂ ಮಾಡಿದರು, ಒಂದು ಚೂರು ಗುಣ ಕಾಣದೆ ಈ ಸಂಸಾರ ನಲುಗಿತು. ಲಕ್ಷ್ಮಿಯಂತು ಹಗಲಲ್ಲಿ ಮನೆಯ ಹೊರಗೆ ಬರುತ್ತಲೇ ಇರಲಿಲ್ಲ.

ಇಂತಹ ಒಂದು ಪರಿಸ್ಥಿತಿಯಲ್ಲಿ ರಾಜೇಂದ್ರ ಅವರ ಸ್ನೇಹಿತರು  ಬಂದು ಸಕಲೇಶಪುರದ ಹತ್ತಿರದ ಒಂದು ಕಾಫಿ ತೋಟಕ್ಕೆ ಒಬ್ಬರು ಸನ್ಯಾಸಿಗಳು ಬಂದಿದ್ದಾರೆ, ಅವರು ಮಹಾನ್ ಸಾಧಕರು. ಅವರಲ್ಲಿ ಏಕೆ ಒಮ್ಮೆ ಪ್ರಯತ್ನ ಮಾಡಬಾರದು?ಎಂಬ ವಿಚಾರವನ್ನು ರಾಜೇಂದ್ರ ಅವರ ಮುಂದೆ ಇಟ್ಟರು. ರಾಜೇಂದ್ರ ಬಹಳ ನಿರ್ಲಿಪ್ತರಾಗಿಯೇ  "ಈಗಾಗಲೇ ಸಾಕಷ್ಟು ಇಂತಹ ಪ್ರಯತ್ನ ಸಾಗಿದೆ, ಯಾವುದು ಪ್ರಯೋಜನಕ್ಕೆ ಬರಲಿಲ್ಲ. ಆಯಿತು ನೋಡೋಣ, " ಎಂದರು. ಆದರು ಮನಸಿನಲ್ಲಿ ಒಂದು ಆಸೆ ಚಿಗುರಿತು. ವಿಳಾಸವನ್ನು ಪಡೆದರು. ಈ ಪ್ರಸ್ತಾಪವನ್ನು ಸೊಸೆಯ ಮುಂದೆ ಇಟ್ಟಾಗ ಆಕೆಯು ಮಾವನ ಮಾತಿಗೆ ನಯವಾಗಿ ತಿರಸ್ಕಾರ ಮಾಡಿ " ನಿಮಗೆ ಗೊತ್ತು ಅದೆಷ್ಟು ಸಾರಿ ಇಂತಹ ಪ್ರಯತ್ನ ಮಾಡಿಲ್ಲಾ? ಮತ್ತೆ ಮತ್ತೆ ಈ ರೀತಿ ಮಾಡುವುದು ಬೇಡ ಮಾವ. ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗಲಿ." ಎಂದು ಕಣ್ಣೀರು ಹಾಕಿದಳು. ಆದರೆ, ಅತ್ತೆ, ಮಾವ ಮತ್ತು ಗಂಡ ಶ್ರೀನಿವಾಸ " ಇದೊಂದು ಪ್ರಯತ್ನ ಮಾಡಿಬಿಡೋಣ. ಇದೆ ಕೊನೆಯ ಪ್ರಯತ್ನ, ಇನ್ನು ಮುಂದೆ ಈ ರೀತಿಯದುಕ್ಕೆ ನಿನಗೆ ಬಲವಂತ ಮಾಡುವುದಿಲ್ಲ." ಎಂದು ಲಕ್ಷ್ಮಿಯನ್ನು ಒಪ್ಪಿಸಿದರು.

ಮಾರನೆ ದಿನ ಬೆಳಗಿನ ಮುಂಚೆಯೇ ಸಕಲೇಶಪುರಕ್ಕೆ ಬಂದು ತಲುಪಿದರು. ಮುಂಜಾವಿನ ಚಳಿಯಲ್ಲಿ ಈ ಸಾಧಕರನ್ನು ನೋಡಲು ಅವರು ಉಳಿದುಕೊಂಡಿದ್ದ ಮನೆಯಹತ್ತಿರ ಹೋದರು. ಆಗಷ್ಟೇ ನಿತ್ಯ ಅನುಷ್ಥಾನ  ಮುಗಿಸಿ ಯಾರನ್ನೋ ಕಾಯುತ್ತಿರುವಂತೆ ಈಚಿನ ವರಾಂಡದಲ್ಲಿ ಆರಾಮ ಕುರ್ಚಿಯಮೇಲೆ ಆಸೀನರಾಗಿದ್ದರು. ಈ ನಾಲ್ಕೂ ಜನ ಅವರಲ್ಲಿ ಹೋಗಿ ಪಾದಕ್ಕೆ ನಮಸ್ಕರಿಸಿದರು. ಆ ಸಾಧಕರು ಆತ್ಮೀಯವಾಗಿ ಬರಮಾಡಿಕೊಂಡು ಉಭಯಕುಶಲೋಪರಿ ವಿಚಾರಿಸಿದ ನಂತರ ಬಂದ ವಿಚಾರವೇನೆಂದು ಕೇಳಿದರು. ಎಲ್ಲವನ್ನು ವಿವರವಾಗಿ ವಿವರಿಸಿ ಈ ಸಮಸ್ಯೆಗೆ ಪರಿಹಾರ ಮಾಡಿಕೊಡಬೇಕೆಂದು ಬೇಡಿಕೊಂಡರು. ಇವರ ಸಮಸ್ಯೆಯನ್ನು ಸಮಾಧಾನವಾಗಿ ಆಲಿಸಿದ ನಂತರ ಲಕ್ಷ್ಮಿಯನ್ನು ಒಮ್ಮೆ ದಿಟ್ಟಿಸಿ ನೋಡುತ್ತಾ ಹಾಗೆ ಧ್ಯಾನಸ್ತರಾದರು.

ಕೆಲವು ಕ್ಷಣಗಳ ನಂತರ ಲಕ್ಷ್ಮಿಯನ್ನು ಉದ್ದೇಶಿಸಿ " ನೀನು ಧರಿಸಿರುವ ಆ ವಜ್ರದ ಮೂಗುತಿಯನ್ನು ಕೆಲಕಾಲ ನಂಗೆ ಕೊಡಲು ಸಾಧ್ಯವೇ? "ಎಂದು ಪ್ರಶ್ನಿಸಿದರು. ತಕ್ಷಣದಲ್ಲಿ ಎಲ್ಲರಿಗು ಒಂದು ರೀತಿಯ ಆಶ್ಚರ್ಯ ವಾಯಿತು. ಏನು ಹೇಳಬೇಕೆಂದು ತಿಳಿಯದಾಯಿತು. ಇದನ್ನು ಗಮನಿಸಿದ ಸಾಧಕರು ಎಲ್ಲರ ಮುಖವನ್ನು ನೋಡಿ " ಚಿಂತೆ ಬೇಡ. ಈ ಮೂಗುತಿಯನ್ನು ಇನ್ನೊಂದು ಘಂಟೆಯಲ್ಲಿ ನಿಮಗೆ ವಾಪಸ್ಸು ಕೊಡುತ್ತೇನೆ. ಅಲ್ಲಿಯ ತನಕ ನೀವು ನಾಲ್ಕೂ ಜನ ಹತ್ತಿರದಲ್ಲಿರುವ  ಗಣೇಶನ  ದೇವಸ್ತಾನಕ್ಕೆ ಹೋಗಿ ಅಲ್ಲಿರುವ ನೀರಿನ ಝರಿಯಲ್ಲಿ ಸ್ನಾನ ಮಾಡಿ ಪೂಜೆ ಮುಗಿಸಿ ಬನ್ನಿ. ನಿಮ್ಮ ಸಮಸ್ಯೆಗೆ ನಂತರದಲ್ಲಿ ಪರಿಹಾರ ಹುಡುಕೋಣ." ಎಂದರು. ಏನೂ ತೋಚದೆ ಲಕ್ಷ್ಮಿ ಮೂಗುತಿಯನ್ನು ಬಿಚ್ಚಿ ಸಾಧಕರ ಕೈಯಲ್ಲಿ ಇತ್ತು,ದೇವಸ್ಥಾನದ ಕಡೆಗೆ ನಾಲ್ವರೂ ಹೊರಟರು. 

ಅಷ್ಟುಹೊತ್ತಿಗಾಗಲೇ ನಿಧಾನವಾಗಿ ಸೂರ್ಯ ಮೇಲೇರುತ್ತಿದ್ದ. ಲಕ್ಷ್ಮಿಯ ಮನಸ್ಸಿನಲ್ಲಿ ಒಂದುರೀತಿಯ ತಳಮಳವಿತ್ತು. ಆ ಸಾಧಕರು ನನ್ನ ಮೂಗುತಿಯನ್ನೇಕೆ ಕೇಳಿದರು ?ಎಂಬುದೇ ಆಕೆಯನ್ನು ಕೊರೆಯುತ್ತಾ ಇತ್ತು. ಆ ಯೋಚನೆ ಅದೆಷ್ಟು ಆಳಕ್ಕೆ ಹೋಗಿತ್ತು ಎಂದರೆ ದೇವಸ್ಥಾನ ಬಂದುದೇ ತಿಳಿಯಲಿಲ್ಲ. ಶ್ರೀನಿವಾಸನಿಗೆ ತನ್ನ ಹೆಂಡತಿಯ ಮೌನವನ್ನು ತಲೆನೋವೆಂದು ಭಾವಿಸಿ " ಏನು? ಮೌನವಾಗಿಬಿಟ್ಟೆ ? ಎಲ್ಲಾ ಸರಿಹೋಗುತ್ತೆ, ಚಿಂತಿಸಬೇಡ" ಎಂದು ಸಮಾಧಾನ ಮಾಡಿದ. ಝರಿಯಲ್ಲಿ ಸ್ನಾನಕ್ಕೆ ಹೋಗುವ ಮುಂಚೆ ರಾಜೇಂದ್ರ ಮತ್ತು ಅವರ ಪತ್ನಿ ಸೊಸೆಗೆ " ನಿನ್ನ ತಲೆನೋವು ಜಾಸ್ತಿಯಾಗುವುದಾದರೆ ತಲೆಗೆ ಸ್ನಾನ ಮಾಡಬೇಡ. ಪರವಾಗಿಲ್ಲ." ಎಂದರು. ಅಲ್ಲಿಯತನಕ ಲಕ್ಷ್ಮಿ ಯಾವುದೋ ಲೋಕದಲ್ಲಿ ಮುಳುಗಿಹೊಗಿದ್ದವಳು ತಲೆನೋವು ಎಂದ ತಕ್ಷಣ ಒಮ್ಮೆ ಎಚ್ಚೆತ್ತು ಕೊಂಡಳು. " ಹೌದು ನನಗೆ ತಲೆ ನೋವೆ ಇಲ್ಲ!!!!!!!!!" ಎಂದುಕೊಂಡಳು. ಏನೂ ಮಾತನಾಡದೆ, ತಲೆಗೆ ಸ್ನಾನ ಮಾಡಿದಳು, ದೇವಸ್ಥಾನದ ಪೂಜಾ ಕಾರ್ಯಕ್ಕೆ ಕೈಜೋಡಿಸಿದಳು. ಎಲ್ಲ ಕಾರ್ಯಗಳನ್ನು ಅತ್ಯಂತ ಉತ್ಸಾಹದಿಂದ ಮಾಡಿದಳು.  ಲಕ್ಷ್ಮಿಗೆ ಆಶ್ಚರ್ಯ, ತಲೆನೋವು ಕಾಣಿಸುತ್ತಿಲ್ಲ.  ಇವಳ ಉತ್ಸಾಹ ನೋಡಿದ ಶ್ರೀನಿವಾಸ ಬೆರಗಾದ. ತನ್ನ ತಂದೆತಾಯಿಯಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ.

ಲಕ್ಷ್ಮಿಯನ್ನು ಏನೊಂದು ಕೇಳದೆ ಪೂಜಾಕಾರ್ಯ ಮುಗಿಸಿ ಸಾಧಕರಲ್ಲಿ ಬಂದರು.  ಹಸನ್ಮುಖರಾಗಿಯೇ ಇವರನ್ನು ಸ್ವಾಗತಿಸಿದರು.  ಅಲ್ಲಿಯ ಪರಿಸರದ ಬಗ್ಗೆ ಕೇಳಿದರು.  ಪೂಜಕಾರ್ಯದ ಬಗ್ಗೆ ಕೇಳಿದರು. ನಂತರ ಲಕ್ಷ್ಮಿಯ ಕಡೆಗೆ ತಿರುಗಿ "ಈಗ ನಿನ್ನ ತಲೆನೋವು ಹೇಗಿದೆ ಮಗು? " ಎಂದು ಪ್ರಶ್ನಿಸಿದರು.  ಲಕ್ಷ್ಮಿ " ನನಗೆ ಈಗ ಒಂದು ಚೂರು ತಲೆ ನೋವಿಲ್ಲ!" ಎಂದಳು. ಎಲ್ಲರಿಗೂ ಆಶ್ಚರ್ಯ.  " ಸೂರ್ಯನ ಬೆಳಕಿನ ಜೊತೆಗೆ ನಿನ್ನ ತಲೆನೋವು ಇಂದು ಬರಲಿಲ್ಲ , ಆಲ್ಲವೇ ? " ಎಂದು ಸಾಧಕರು ಮರುಪ್ರಶ್ನೆ ಹಾಕಿದರು.  " ಹೌದು!  ನಂಗೆ ಆಶ್ಚರ್ಯವಾಗುತ್ತಿದೆ.    ನಿಮ್ಮ ಕೃಪೆಯಿಂದ ನನಗೆ ಈ ತಲೆನೋವಿನಿಂದ ಮುಕ್ತಿ  ಸಿಕ್ಕರೆ ಸಾಕು. ಹೀಗೆಯೇ  ನನಗೆ  ತಲೆನೋವು ಇಲ್ಲದ ಹಾಗೆ ಮಾಡಿಬಿಡಿ. ನಂಗೆ ಅಷ್ಟು ಸಾಕು ನಾನು ಇನ್ನೇನನ್ನು ಕೇಳುವುದಿಲ್ಲ. " ಎನ್ನುತ್ತಾ ಸಾಧಕರ ಕಾಲಿಗೆ ಎರಗಿದಳು ಲಕ್ಷ್ಮಿ.  " ಏಳು ಮಗು , ಏಳು. ದೇವರು ಮನಸ್ಸು ಮಾಡಿದರೆ ಎಷ್ಟು ಹೊತ್ತಿನ ಕೆಲಸ? " ಎಂದು ಬೆನ್ನು ಸವರುತ್ತಾ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು.   ಲಕ್ಷ್ಮಿಯ ತಲೆಯ ಮೇಲೆ ಕೈ ಇಟ್ಟು " ಇಂದಿಗೆ ನಿನ್ನ ತಲೆನೋವು ಹೋಯಿತು, ಆದರೆ ನೀನು ಮಾತ್ರ ಇನ್ನು ಎಂದಿಗೂ ಈ ವಜ್ರದ ಮೂಗುತಿಯನ್ನು ಮಾತ್ರ ಧರಿಸಬೇಡ. ಈ ವಜ್ರದ ಮುಗುತಿಯ ಪ್ರಭಾವದಿಂದ ನಿನಗೆ ತಲೆನೋವು ಬರುತ್ತಿತ್ತು, ಅಷ್ಟೇ. ನಿನಗೆ ವಜ್ರದ ಯಾವುದೇ ಆಭರಣ ಆಗಿಬರುವುದಿಲ್ಲ "  ಎಂದು ಲಕ್ಷ್ಮಿಯ ಕೈಯಿಂದ ಪಡೆದ ಆ ವಜ್ರದ ಮೂಗುತಿಯನ್ನು  ವಾಪಸ್ಸು ಕೊಟ್ಟರು.

ಅತ್ಯಂತ ಸಂತೋಷದಿಂದ ರಾಜೇಂದ್ರ ಮತ್ತು ಕುಟುಂಬದವರು ಸಾಧಕರ ಕಾಲಿಗೆ ಎರಗಿದರು.  ಅವರ ಸಂತೋಷ ಹೇಳತೀರದು.  ನಾಲ್ಕೂ ಜನರು ಸಾಧಕರ ಮುಂದೆ ಕೈ ಜೋಡಿಸಿ ನಿಂತರು.  ಲಕ್ಷ್ಮಿಗೆ ಆನಂದಬಾಷ್ಪ ಧಾರಾಕಾರವಾಗಿ ಹರಿಯುತ್ತಿತ್ತು.   ಏನು ಮಾಡಬೇಕೆಂದು ತೋಚದೆ ಸುಮ್ಮನೆ ನಿಂತಿದ್ದರು.  ಸಾಧಕರು ಮಾತನ್ನು ಮುಂದುವರೆಸಿ " ಇನ್ನ್ಯಾಕೆ ಚಿಂತೆ?  ನಿಮ್ಮ ಮನೋಕಾಮನೆ ಪೂರೈಸಿತಲ್ಲಾ!  ಸಂತೋಷವಾಗಿ ಹೋಗಿಬನ್ನಿ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. " ಎಂದರು.  ಸಾವಧಾನವಾಗಿ ರಾಜೇಂದ್ರ ಅವರು ತಮ್ಮ ಕಿಸೆಯಿಂದ ೫೦೦೦ ರುಪಾಯಿಗಳನ್ನು ಹಣ್ಣಿನ ಸಮೇತ ಸಾಧಕರಿಗೆ ಅರ್ಪಿಸಲು ಮುಂದಾದರು.  ನಸುನಕ್ಕು ಸಾಧಕರು ಒಂದು ಹಣ್ಣನ್ನು ತೆಗೆದುಕೊಂಡು ನಯವಾಗಿ ಮಿಕ್ಕೆಲ್ಲವನ್ನು ತಿರಸ್ಕರಿಸಿದರು.  ಏನೂ ಹೇಳಿದರು ಒಪ್ಪಲಿಲ್ಲ.  ನಂತರದಲ್ಲಿ ಸಾಧಕರು ಎಲ್ಲಿ ಸಿಗುತ್ತಾರೆ? ಅವರನ್ನು ನೋಡಬೇಕೆನಿಸಿದರೆ ಎಲ್ಲಿ ಬಂದು ಕಾಣಬೇಕು ?  ಎನ್ನುವ ವಿವರಕ್ಕಾಗಿ ಕೇಳಿದರು.  ಸಾಧಕರು ಮಾತ್ರ ನಸುನಗುತ್ತಾ " ದೈವಕೃಪೆ ಇದ್ದಲ್ಲಿ ಮತ್ತೆ ಬೇಟಿ ಯಾಗೋಣ.   ಸನ್ಯಾಸಿಗೆಲ್ಲಿ  ಮನೆ ಮಠ? " ಎಂದು ಹೇಳುತ್ತಾ ಆತ್ಮೀಯವಾಗಿ ಬೀಳ್ಕೊಟ್ಟರು.

 

ಈಗ ಎರಡು ಮಕ್ಕಳ ತಾಯಿಯಾಗಿರುವ ಲಕ್ಷ್ಮಿಗೆ ಮತ್ತೆಂದು ತಲೆನೋವು ಭಾಧಿಸಿಲ್ಲ.  ಅತ್ಯಂತ ಸುಖಿ ಕುಟುಂಬದಲ್ಲಿ ಇರುವ ಇವರಿಗೆ   ಪುನಃ ಎಂದಾದರು ಈ ಸಾಧಕರ ಬೇಟಿ ಆಗಬಹುದೇನೋ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. 

 

(ಈಗ್ಗೆ ಸುಮಾರು 10 ವರ್ಷಗಳ ಹಿಂದೆ ನನ್ನ ಸ್ನೇಹಿತರು ಹೇಳಿದ ನೈಜ ಘಟನೆಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ.)

 

 

 

Comments

Submitted by ಮಮತಾ ಕಾಪು Thu, 12/06/2012 - 12:39

ದೊಡ್ಡವರ ದಾರಿ ..ಅನುಭವದ ಮೂಲದಿಂದಾದರೂ ಸರಿಯಾಗಿಯೇ ಇರುತ್ತವೆ. ಉತ್ತಮ ಬರಹ ,ನೈಜ ಘಟನೆಯ ನಿರೂಪಣೆ ಬಹಳ ಚೆನ್ನಾಗಿದೆ. ಶುಭಾಶಯಗಳು ಸರ್.