ಮಕ್ಕಳನ್ನು ತಿದ್ದುವುದು ತಪ್ಪಲ್ಲ, ಆದರೆ ತಿದ್ದುವುದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ವಿಧಾನ ಸರಿಯಾಗಿರಲಿ.
ತಾವು ಹೊತ್ತು-ಹೆತ್ತು ಸಾಕಿದ ಮಕ್ಕಳನ್ನು ಸುಸಂಸ್ಕೃತಿಯಿಂದ ಬೆಳೆಸಬೇಕೆಂಬ ಮಹತ್ವಾಕಾಂಕ್ಷೆ ಎಲ್ಲಾ ಪೋಷಕರಿಗೂ ಇದ್ದೇ ಇರುತ್ತದೆ. ಎಡವಿದ ಹೆಜ್ಜೆಯನ್ನು ಸರಿಪಡಿಸಿ ನಡೆಸುವ ತಾಯಿ ತನ್ನ ಮಗುವು ತಪ್ಪು ದಾರಿ ಹಿಡಿದಾಗ ಸರಿಯಾದ ತಿಳುವಳಿಕೆ ನೀಡಿ ಸರಿ ದಾರಿಗೆ ತರಲು ಪಡುವ ಕಷ್ಟ ಆಕೆಗೊಬ್ಬಳಿಗೆ ಗೊತ್ತು. ಮಕ್ಕಳು ತಪ್ಪು ಮಾಡುವುದು ಸಹಜ. ಅದರ ಸರಿಪಡಿಸುವಿಕೆಗಾಗಿ ಪೋಷಕರು ದೈಹಿಕವಾಗಿ ಹಿಂಸಿಸುವುದು ಸರಿಯಲ್ಲ. ಸಮಾಧಾನದಿಂದ ತಮ್ಮ ಜತೆ ಕುಳ್ಳಿರಿಸಿಕೊಂಡು ಬುದ್ದಿಮಾತು ಹೇಳಿ, ತಪ್ಪು ಮಾಡಿದರೆ ಅದರಿಂದಾಗುವ ಪರಿಣಾಮಗಳನ್ನು ತಿಳಿಹೇಳಿದಾಗ ಮಕ್ಕಳು ಪೋಷಕರ ಮಾತನ್ನು ಒಪ್ಪಿಕೊಳ್ಳುತ್ತಾರೆ. ತನಗನ್ನಿಸಿದ್ದನ್ನು ಸರಿ ಎಂದೆನಿಸಿ ಮಾಡಲು ಹೋಗಿ, ಇತರರು ಅದು ಹಾಗಲ್ಲ ಪುಟ್ಟಾ..ಹೀಗೆ ಎಂದಾಗ ಅವರ ಸಲಹೆಯೂ ಸರಿ ಎಂದು ಒಪ್ಪಿಕೊಳ್ಳುವ ಚಂಚಲ ಮನಸ್ಥಿತಿ ಮಕ್ಕಳದ್ದು. ನಾನು ಬರೆಯ ಹೊರಟದ್ದು ಅರಿಯದ ಮಗನ ತಪ್ಪನ್ನು ತಿದ್ದಿ ಬುದ್ದಿ ಕಲಿಸಲು ಹೋಗಿ ಆಂಧ್ರಪ್ರದೇಶ ಮೂಲದ ದಂಪತಿಗಳು ಜೈಲಿನಲ್ಲಿ ಕಾಲಕಳೆಯುತ್ತಿರುವ ವಿಷಯದ ಕುರಿತಾಗಿ.
ಮಕ್ಕಳು ಪ್ರಬುದ್ಧರಾದ ಮೇಲೆ ಅವರನ್ನು ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುವುದು ತಪ್ಪು. ಆದರೆ ಮಕ್ಕಳು ತೀರಾ ತಪ್ಪು ದಾರಿ ಹಿಡಿದಾಗ ಅಥವಾ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರು ಎಂದಾಗ ಪೋಷಕರು ಅವರ ಹಿತವನ್ನು ಕಾಪಾಡಿಕೊಳ್ಳಲೇಬೇಕಾಗುತ್ತದೆ. ಅದು ಯಾವ ರೀತಿಯಲ್ಲಾದರೂ ಸರಿ. ಮಾತನ್ನು ಕೇಳದಿದ್ದಾಗ,ಬೆಳೆದ ಮಕ್ಕಳ ಮೇಲೆ ಕೈ ಮಾಡುವುದು ಸರಿಯಲ್ಲ ಎಂದು ಗೊತ್ತಿದ್ದರೂ ಕೆಲವೊಂದು ಸಂದರ್ಭಗಳಲ್ಲಿ, ಕೊನೆಯ ಅಸ್ತ್ರವಾಗಿ ಇದು ಅನಿವಾರ್ಯ. ಪೋಷಕರಿಗಲ್ಲದೆ ತಮ್ಮ ಮಕ್ಕಳನ್ನು ತಿದ್ದುವ ಹಕ್ಕು ಯಾರಿಗಿದೆ ಈ ಸಮಾಜದಲ್ಲಿ? ಮಕ್ಕಳಿಂದ ಒಳ್ಳೆಯದಾದರೂ ಕೆಟ್ಟದಾದರೂ, ಅದರ ಕೀರ್ತಿ-ಅಪಕೀರ್ತಿ ಸಲ್ಲುವುದು ಪೋಷಕರಿಗೆ.
ಬಾಲ್ಯದಲ್ಲಿ ಮಕ್ಕಳು ಅತಿ ತುಂಟತನವನ್ನು ಹೊಂದಿದ್ದಾಗ ಅವರನ್ನು ಸಂಭಾಳಿಸುವುದೇ ಪೋಷಕರಿಗೆ ಕಠಿಣ ಸವಾಲಾಗಿರುತ್ತದೆ. ತಮ್ಮ ಕೆಲಸದ ಒತ್ತಡದ ಜತೆಗೆ ಮಗುವನ್ನು ನೋಡಿಕೊಳ್ಳಲು ಅಸಹಾಯಕರಾದಾಗ ಮಕ್ಕಳ ಮೇಲೆ ಸಹಜವಾಗಿ ರೇಗುವುದು ಸಾಮಾನ್ಯ. ಪರರ ಮಕ್ಕಳನ್ನು ನಿಂದಿಸಿದರೆ,ಹೊಡೆದರೆ ಅದನ್ನು ಅಪರಾಧವೆನ್ನಬಹುದು. ಆದರೆ ಸ್ವಂತ ಮಕ್ಕಳ ತಪ್ಪನ್ನು ತಿದ್ದಿ ಉತ್ತಮ ಮನುಷ್ಯರನ್ನಾಗಿಸುವ ಹಕ್ಕೂ ಪೋಷಕರಿಗಿಲ್ಲವೇ? ಮಕ್ಕಳಿಗೆ ಸರಿಯಾಗಿ ಬುದ್ದಿ ಬರುವ ತನಕ ಅವರ ಸರಿ-ತಪ್ಪುಗಳನ್ನು ನೋಡಿಕೊಳ್ಳವುದು ಹಿರಿಯರ ಕರ್ತವ್ಯ. ಆದರೆ ಈ ಹಕ್ಕನ್ನೇ ಅವರಿಂದ ಕಸಿದುಕೊಂಡು ಜೈಲು ಶಿಕ್ಷೆಯಂತಹ ಕಠಿಣ ಕ್ರಮವನ್ನು ಕೈಗೊಂಡರೆ ಮುಂದೆ ನಮ್ಮ ಸಮಾಜದ ಸ್ಥಿತಿ ಏನಾಗಬಹುದು?
ಅರಿಯದ ಮಗುವಿನ ಮಾತನ್ನು ಕೇಳಿ ಶಿಕ್ಷೆ ಕೊಟ್ಟ ಕಾನೂನು ಇಂದು ಆ ಮಗುವಿನ ಸ್ಥಿತಿಯನ್ನು ಯೋಚಿಸಿದೆಯೇ? ಇಂದು ಆ ಮಗು ತನ್ನ ಅಜ್ಜಿಮನೆಯಲ್ಲಿ ಅಪ್ಪ-ಅಮ್ಮನಿಗಾಗಿ ಅಳುತ್ತಾ ಕೂತಿದೆ. ಮನೋವೈದ್ಯರ ಪ್ರಕಾರ ಆತ ಅವಧಿಗೆ ಮೊದಲೇ ಜನಿಸಿದ ಕೂಸಾಗಿರುವುದರಿಂದ ಆತ ಹೈಪರ್ ಆಕ್ಟಿವ್ ಆಗಿರುವುದರಿಂದ ಪ್ರತಿಯೊಂದು ವಿಷಯಗಳನ್ನು ಅತಿ ರಂಜಿಸಿ ಹೇಳುವ ಸ್ವಭಾವ ಆತನದು. ಅಭಿರಾಮ್(ಬಾಲಕ) ನ ಮೈಮೇಲೆ ದೈಹಿಕವಾಗಿ ಆತನನ್ನು ಹಿಂಸಿಸಿದ ಕೆಲವು ಗುರುತುಗಳು ಕಂಡುಬಂದಿರುವುದು, ಪೋಷಕರ ಕ್ರೂರತನವನ್ನು ಹೇಳುತ್ತದೆ. ಇದು ಅಪರಾಧವೇ ಸರಿ. ಮಕ್ಕಳ ಮೇಲೆ ಈ ರೀತಿಯ ದೌರ್ಜನ್ಯವನ್ನು ಎಸಗದಂತೆ ಅವರಿಗೆ ಮಾತಿನ ಎಚ್ಚರಿಕೆಯನ್ನು ಕೊಟ್ಟು ಅವರನ್ನು ಗಮನಿಸಬಹುದಿತ್ತು. ಪೋಷಕರ ಈ ಅಪರಾಧದ ಜತೆಗೆ, ಮಕ್ಕಳನ್ನು ಪೋಷಕರಿಂದ ದೂರ ಮಾಡಿರುವ ಈ ಕಾನೂನಿನ ಕ್ರಮದಿಂದ ಕಾನೂನೇ ಅಪರಾಧ ಮಾಡಿದಂತಾಗಿಲ್ಲವೇ?
Comments
ಆತ್ಮೀಯ ಮಮತಾರವರೆ,
ಆತ್ಮೀಯ ಮಮತಾರವರೆ,
ಅರಿಯದ ಮಗುವಿನ ಮಾತನ್ನು ಕೇಳಿ ಶಿಕ್ಷೆ ಕೊಟ್ಟ ಕಾನೂನು ಇಂದು ಆ ಮಗುವಿನ ಸ್ಥಿತಿಯನ್ನು ಯೋಚಿಸಿದೆಯೇ? ಎನ್ನುವುದರ ಜೊತೆಗೆ ಮುನ್ದೆ ಸಮಾಜದಲ್ಲಿ ಆ ಮಗು ಎದುರಿಸಬೇಕಾದ ಸ0ದಿಗ್ಧ ಪರಿಸ್ಥಿತಿಯನ್ನು ಗಮನಿಸಿದೆಯೆ? ಕಾನೂನು ಶಿಕ್ಷೆಯನ್ನ ಮಗುವಿನ ಪಾಲಕರಿಗೆ ನೀಡ ಬಹುದೆ ವಿನಹ, ಮಗುವಿಗೆ ಪ್ರೀತಿಯನ್ನು ನೀಡಲಾರದು. ಇದನ್ನು ಗಮನಿಸಬೆಕಾಗುತ್ತದೆಯಲ್ಲವೆ?
ಸಮಯೊಚಿತ ಲೇಖನ. ಸು0ದರ ಪ್ರಸ್ತುತಿ. ಧನ್ಯವಾದಗಳು.
In reply to ಆತ್ಮೀಯ ಮಮತಾರವರೆ, by Prakash Narasimhaiya
ಸುಮಾರು ದಿನಗಳಿಂದ ನನ್ನ ತಲೆಯಲ್ಲಿ
ಸುಮಾರು ದಿನಗಳಿಂದ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಈ ವಿಷಯವನ್ನು ಲೇಖನವಾಗಿ ಬರೆದು ಪ್ರಕಟಿಸಬೇಕೆಂಬ ಬಯಕೆಯಿತ್ತು. ಆದರೆ ಇನ್ನೂ ಬದುಕನ್ನು ಸರಿಯಾಗಿ ಕಂಡಿರದ ನನ್ನ ಆಲೋಚನೆಗಳನ್ನು ಓದುಗರು ಯಾವ ರೀತಿಯಾಗಿ ಸ್ವೀಕರಿಸಬಹುದೆಂಬ ಗೊಂದಲದಿಂದ ಸುಮ್ಮನಿದ್ದೆ. ಈ ಲೇಖನ ಬರೆಯಲು ಅಭಿರಾಮ್ ಘಟನೆ ಪ್ರತ್ಯಕ್ಷ ಕಾರಣವಾದರೆ , ಪರೋಕ್ಷವಾಗಿ ನನ್ನ ಅಕ್ಕನ ಮಗಳು(೩ ವರ್ಷ) ಕಾರಣ. [ತುಂಬಾ ತುಂಟಿಯಾಗಿರುವ ಆಕೆ ಅಪ್ಪ-ಅಮ್ಮ ನ ಮಾತನ್ನು ಕೇಳದಿದ್ದರೂ, ನಾನು ಆಕೆಯನ್ನು ಮಡಿಲಲ್ಲಿರಿಸಿ ಆಕೆ ಮಾಡುತ್ತಿರುವ ತಪ್ಪಿನ ಪರಿಣಾಮಗಳನ್ನು ಪರಿಣಾಮಗಳನ್ನು ಬಿಡಿ-ಬಿಡಿಯಾಗಿ ವಿವರಿಸಿ ಹೇಳಿದಾಗ ಆಕೆಯೂ ಅಂತಹ ತಪ್ಪುಗಳನ್ನು ಮಾಡುವುದಿಲ್ಲ ಎಂದು ಹೇಳಿ ಅಂತೆಯೇ ನಡೆದುಕೊಳ್ಳುತ್ತಾಳೆ.] ಮಕ್ಕಳಿಗೆ ಹೊಡೆದು ಬುದ್ದಿ ಕಲಿಸುವವರಿಗೆ ಎಂದೂ ನನ್ನ ವಿರೋಧವಿದೆ. ಪ್ರೀತಿಯಿಂದ ಹೇಳಿದ ಮಾತನ್ನು ಮಕ್ಕಳು ತಡವಾಗಿಯಾದರೂ ಕೇಳಿಯೇ ಕೇಳುತ್ತಾರೆ. ಪ್ರತಿಕ್ರಿಯೆ ಹಾಗೂ ಮೆಚ್ಚುಗೆಗಾಗಿ ಧನ್ಯವಾದಗಳು ಸರ್.