ಕವಿಶೈಲ -ಒಂದು ಅಪೂರ್ವ ಅನುಭೂತಿ

ಕವಿಶೈಲ -ಒಂದು ಅಪೂರ್ವ ಅನುಭೂತಿ

ವಿಲು ದನಿ ಎತ್ತರಿಸಿ ಕೂಗುತ್ತಿತ್ತು, ಅದರ ಕೂಗು ಬಂದ ದಿಕ್ಕಿನೆಡೆ ದಿಟ್ಟಿಸಿದರೆ, ಇಳಿಜಾರಿನ ಗಿಡಗಳ ಮಧ್ಯೆ ತನ್ನ ನೀಲಿ ಕೊರಳನ್ನು ಬಾನಿನತ್ತ ಚಾಚಿ, ಬಾಯ್ದೆರೆದು “ಕೇಂ, ಕೇಂ” ಎನ್ನುತ್ತಿದ್ದ ನವಿಲಿನ ನೋಟ – ಸಹ್ಯಾದ್ರಿಯ ನಿಬಿಡಾರಣ್ಯ ತುಂಬಿದ ನಸು ನೀಲಿ ಬಣ್ಣದ ಪರ್ವತ ಶ್ರೇಣಿಯು ಅಲೆಅಲೆಯಾಗಿ ಹರಡಿಕೊಂಡಿದ್ದು, ಆ ಕಾಡಿನ ಮಧ್ಯೆ ತೆರವುಗೊಂಡಿದ್ದ ಕುರುಚಲು ಗಿಡಗಳ ನಡುವೆ ಹಾಡುತ್ತಿದ್ದ ನವಿಲಿನ ಕೂಗು ಕಾಡಿನಿಂದ ತುಂಬಿದ ಆ ಕಣಿವೆಯಲ್ಲಿ ತೇಲಿಹೋಗಿತ್ತು. ಪಿಕಳಾರವೊಂದು ಸನಿಹದ ಗಿಡದ ಮೇಲೆ ಕುಳಿತು, ನವಿಲಿನ ದನಿಗೆ ತನ್ನದೇ ರಾಗದ ಹಾಡನ್ನು ಶೃತಿಗೂಡಿಲು ಯತ್ನಿಸುತ್ತಿತ್ತು. ಸಂಜೆ ರಂಗು ಮೂಡುತ್ತಿದ್ದ ಆ ಸಂಕ್ರಮಣ ಸಮಯದಲ್ಲಿ ಕೇಳಿಬರುತ್ತಿದ್ದ ಈ ಯುಗಳಸಂಗೀತವನ್ನು ಆಸ್ವಾದಿಸಲು, ಆ ತಾಣವೂ ಹೆಚ್ಚಿನ ಮನಸ್ಪೂರ್ತಿಯನ್ನು ತುಂಬಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿರಲಿಲ್ಲ. ನಾನು ನಿಂತಿದ್ದು ಕುಪ್ಪಳಿಯ ಆ ಪ್ರಸಿದ್ಧ “ಕವಿಮನೆ”ಯ ಎದುರಿನ ಇಳಿಜಾರಿನಲ್ಲಿ.

    “ಹೇ, ಬನ್ರೋ, ನವಿಲು ಕೂಗ್ತಾ ಐತೆ ! ಇಲ್ಲೇ ಇಲ್ಲೇ!!” ಎನ್ನುತ್ತಾ ನಾಲ್ವರು ಧಿಡ ಧಿಡ ಎನ್ನುತ್ತಾ, ನಾನು ನಿಂತ ಬಳಿಗೆ ಓಡಿ ಬಂದರು. ಕವಿಶೈಲ ನೋಡಲು ಬಂದಿದ್ದ ಪೇಟೆಯ ಯುವಕರು ಅವರು, ಅವರ ಗಲಾಟೆ ಕೇಳಿ ನವಿಲೂ ತನ್ನ ದನಿಯನ್ನು ಅಡಗಿಸಿ, ಗಿಡಗಳ ಮರೆಯಲ್ಲಿ ಅಡಗಿತು, ಪಿಕಳಾರನೂ ಪುರು ಪುರು ಎಂದು ರೆಕ್ಕೆಬೀಸುತ್ತಾ ಇಳಿಜಾರಿನ ತಳದ ಕಣಿವೆಯತ್ತ ಹಾರಿ ಹೋಯಿತು. ಅವುಗಳನ್ನು ಅನುಸರಿಸೋಣ ಎಂದರೆ, ವಿದ್ಯುತ್ ಸಂಪರ್ಕ ಹೊಂದಿದ್ದ ತಂತಿಬೇಲಿಯೊಂದು  ಕವಿಶೈಲದ ಎದುರಿಗಿರುವ ಆ ಇಳಿಜಾರನ್ನು ರಕ್ಷಿಸಿತ್ತು. ಬೆಟ್ಟ, ಕಾಡು, ಕಣಿವೆ, ಪರ್ವತ, ಸಂಜೆಯ ಸೂರ್ಯ, ಹಸಿರುಗಿಡಗಳ ಮಧ್ಯೆ ಇದ್ದ ನವಿಲು, ಕುರುಚಲು ಗಿಡದ ಮೇಲೆ ಕುಳಿತಿದ್ದ ಪಿಕಳಾರ, ಅವುಗಳ ಹಾಡು – ಇವುಗಳು ನನ್ನ ಮನದಾಳದಲ್ಲಿ ಸೃಜಿಸಿದ್ದ ಅಪೂರ್ವ ಅನುಭೂತಿಯ ಪ್ರಪಂಚದಿಂದ “ಧಡಕ್ಕೆಂದು” ಹೊರಬಂದು, ಗಲಾಟೆ ಮಾಡುತ್ತಾ ಸುಳಿದಾಡುತ್ತಿದ್ದ ಆ ಪೇಟೆಯ ಪ್ರವಾಸಿಗರ ವರ್ತನೆಗೆ ಮುಜುಗರಪಟ್ಟು, ಕವಿಶೈಲದ ಬೆಟ್ಟ ಏರುವ ಸನ್ನಾಹಕ್ಕೆ ತೊಡಗಿದೆ - ಕುವೆಂಪು ಅವರು ಪ್ರಕೃತಿ ಕುರಿತು ಬರೆದ ಹಲವಾರು ಗೀತೆಗಳ ಕೆಲವು ಸಾಲುಗಳನ್ನು ನೆನಪಿಸಿಕೊಳ್ಳುತ್ತಾ :

    “ಮಲೆಗಳಲುಲಿಯುವ ಓ ಕೋಗಿಲೆಯ,
     ಬಲು ಚೆಲುವು ನಿನ್ನೀಗಾನ. . . . . ”

    “ಹಸುರಿತ್ತಲ್, ಹಸುರತ್ತಲ್, ಹಸುರೆತ್ತಲ್, ಕಡಲಿನಲಿ. . . . . ”
    
     ಅದಕ್ಕೂ ಮುಂಚೆ, ಕವಿಮನೆಯೊಳಗೆ ಒಂದು ಸುತ್ತು ಹಾಕಿದ್ದೆವು. ಕುವೆಂಪು ಜನಿಸಿದ ಕುಪ್ಪಳಿ ಮನೆಯನ್ನು ನೋಡುವುದೇ ಒಂದು ವಿನೂತನ ಅನುಭವ. ಹಸಿರಿನ ವಿವಿಧ ರೂಪಗಳನ್ನು ಮೈಗೂಡಿಸಿಕೊಂಡಿದ್ದ ಸಾವಿರಾರು ಮರಗಳನ್ನು ಹೊತ್ತ ಹಲವು ಬೆಟ್ಟಗಳ ತಪ್ಪಲಿನಲ್ಲಿ ತನ್ನದೇ ಧೀಮಂತ ನಿಲುವಿನಲ್ಲಿ ವಿಶೇಷವಾಗಿ ಕಾಣುತ್ತಿತ್ತು ಕವಿಮನೆ. ಸಾಕಷ್ಟು ಮುತುವರ್ಜಿಯಿಂದ ಆ ಹಳೆಯ ಮನೆಯನ್ನು ಮರು ನಿರ್ಮಾಣ ಮಾಡಿದ್ದು, ಕುವೆಂಪುಗೆ ಸಂಬಂಧಿಸಿದ ಹಲವಾರು ವಸ್ತುಗಳು, ಅಪರೂಪದ ಪುಸ್ತಕಗಳು, ಪೀಠೋಪಕರಣಗಳು ಮೊದಲಾದವುಗಳನ್ನು ಆ ಮನೆಯ ವಿವಿಧ ಮಹಡಿಗಳಲ್ಲಿ ಸಂಗ್ರಹಿಸಿದ್ದಾರೆ.  ಸಂಪೂರ್ಣ ಪುನರ್ ನಿರ್ಮಾಣಗೊಂಡಿರುವ ಆ ಕಟ್ಟಡ ಸಂಕೀರ್ಣದಲ್ಲಿ, ಹುಲ್ಲಿನ ಛಾವಣಿ ಹೊಂದಿರುವ ಹಿಂದಿನ ಕಾಲದ ಬಚ್ಚಲುಮನೆಯು ಕಾಲಗರ್ಭದಿಂದ ಈಚೆಗೆ ಬಂದು ನಿಂತ ಪಳಿಯುಳಿಕೆಯಂತೆ ತನ್ನ ಛಾಪನ್ನು ತೋರಿಸುತ್ತಿತ್ತು – ಕುವೆಂಪು ಅವರು ಬರೆದಿರುವ ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿಯಲ್ಲಿ ಬರುವ ವರ್ಣನೆಗಳನ್ನು ಸಮರ್ಥವಾಗಿ ಬಿಂಬಿಸುತ್ತಿದ್ದುದು ಆ ಬಚ್ಚಲುಹೊಂಡವೊಂದೇ! ಕುಪ್ಪಳಿಯ ಸುತ್ತಲೂ ಹಿಂದೆ ಹರಡಿದ್ದ ಕಾಡಿನ ಬಹುಭಾಗವು ಈಗ ಅಡಿಕೆತೋಟಗಳಾಗಿ ಪರಿವರ್ತನೆ ಹೊಂದಿದ್ದರೂ, ಹಸರಿನಿಂದ ದೂರಾಗಿಲ್ಲ ಎಂಬುದು ಮನಕ್ಕೆ ನೆಮ್ಮದಿ ನೀಡುವ ವಿಷಯ.

     ಕುಪ್ಪಳಿಯ ಕವಿಮನೆಯನ್ನು ನೋಡಿ, ಅಲ್ಲಿ ಮಾರಲು ಇಟ್ಟಿದ್ದ ಕುವೆಂಪು ಅವರ ಪುಸ್ತಕಗಳನ್ನು ಖರೀದಿಸಿ, ಪಕ್ಕದ ಪುಟ್ಟಾತಿಪುಟ್ಟ ಕ್ಯಾಂಟೀನ್‍ನಲ್ಲಿ ನೀಡುವ ಕಾಫಿ ಎಂಬ ದ್ರವವನ್ನು ಕುಡಿದು, ಚಾಕಲೆಟ್ ತಿಂದು, ಕವಿಶೈಲದತ್ತ ಹೊರಟೆವು. ಕವಿಮನೆಯ ಹಿಂದಿನ ಬೆಟ್ಟದಲ್ಲಿ ಹರಡಿದ್ದ ಮರಗಳ ಮಧ್ಯೆ ಸಾಗಿ ಹೋಗಿರುª,À ಪಾವಟಿಗೆ ಹೊಂದಿದ ಏರುದಾರಿಯ ನಡುಗೆಯು ಕಾಡಿನ ನಿಗೂಢ ವಾತಾವರಣದ ಕಿರು ಅನುಭವವನ್ನು ನೀಡಬಲ್ಲದು. ಕಾಲುನಡುಗೆಯ ದಾರಿಯು, ಬೆಟ್ಟದ ತುದಿಯಲ್ಲಿ ಟಾರು ರಸ್ತೆಯನ್ನು ಕೂಡಿಕೊಂಡು, ಅನತಿ ದೂರದಲ್ಲೇ ಇರುವ ಕವಿಶೈಲಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ.

     ಕುವೆಂಪು ಅವರ ಅತಿ ಪ್ರೀತಿಯ ಪ್ರಕೃತಿ ತಾಣಗಳಲ್ಲಿ ಕವಿಶೈಲವೂ ಒಂದೆಂದು ಅವರು ಹಲವೆಡೆ ಬರೆದುಕೊಂಡಿದ್ದಾರೆ. ಬಿಡುವಿದ್ದಾಗ, ಕವಿಶೈಲಕ್ಕೆ ಬಂದು, ಅಲ್ಲಿ ನಿಸರ್ಗವೇ ಹಾಸಿದ್ದ ವಿಶಾಲವಾದ ಹಾಸುಗಲ್ಲಿನ ಬಳಿ ಕುಳಿತು, ಸಹ್ಯಾದ್ರಿಯೊಡನೆ ಬೆರೆಯುತ್ತಿದ್ದರು. ಮೈಸೂರಿನಿಂದಲೋ, ಇತರ ಊರುಗಳಿಂದಲೋ ಬಂದಿದ್ದ ತಮ್ಮ ಗೆಳೆಯರನ್ನು ಸಹಾ ಅಲ್ಲಿಗೆ ಕರೆತಂದು, ಕುಳಿತಿರುತ್ತಿದ್ದರು. ಆಗಿನ ದಿನಗಳಲ್ಲಿ ಅವರು ಅಲ್ಲಿನ ಬಂಡೆಯೊಂದರ ಮೇಲೆ ಕೊರೆದಿರುವ ಅವರ ಮತ್ತು ಅವರ ಗೆಳೆಯರÀ ಹೆಸರಿನ ಇನಿಶಿಯಲ್ಸ್‍ಗಳನ್ನು ಕಾಪಿಟ್ಟಿದ್ದಾರೆ. ಆ ಕಪ್ಪು ಬಂಡೆ ಹಾಸಿನ ಹತ್ತಿರವೇ ಕುವೆಂಪು ಅವರ ಸಮಾಧಿ ಇದೆ. ಜೊತೆಗೆ ಬೃಹದಾಕಾರದ ಕಲ್ಲುಗಳನ್ನು ನೆಟ್ಟಗೆ ನಿಲ್ಲಿಸಿ, ವಿವಿಧ ಸರಳರೇಖೆಯ ಆಕಾರಗಳನ್ನು ಆ ಕಲ್ಲುಗಳಿಂದಲೇ ನಿರ್ಮಿಸಿ, ಕುವೆಂಪು ಅವರಿಗೆ ಸ್ಮಾರಕ ರೂಪದಲ್ಲಿ ವಿನ್ಯಾಸಗೊಳಿಸಿದ್ದಾರೆ. ಕವಿಶೈಲದ ಆ ಬೆಟ್ಟದ ತುದಿಯನ್ನು ಕಾಯಲು ನೇಮಕಗೊಂಡಿರುವ ಸಿಬ್ಬಂದಿಯು ತನ್ನ ಕೈಲಾದಷ್ಟು ವಿಚಾರಗಳನ್ನು ಪ್ರವಾಸಿಗರಿಗೆ ವಿವರಿಸುತ್ತಾರೆ. 

    ಆ ಎತ್ತರದಿಂದ ಕಾಣುವ ನಿಸರ್ಗ ದೃಶ್ಯ ಸುಂದರ. ಮಲೆನಾಡಿನ ಬೆಟ್ಟ ಶ್ರೇಣಿಯು ಅಲೆ ಅಲೆಯಾಗಿ ಸಾಗಿ ಹೋಗಿ, ದೂರದ ಪರ್ವತದೊಡನೆ ಸಮ್ಮಿಳನಗೊಳ್ಳುವ ದೃಶ್ಯವೊಂದೆಡೆಯಾದರೆ, ಆ ತಪ್ಪಲಿನುದ್ದಕ್ಕೂ ಹರಡಿದ್ದ ಕಾಡಿನಲ್ಲಿ ವಿವಿಧರೂಪ ಹೊಂದಿದ ಮರಗಳ ನೋಟ ಇನ್ನೊಂದೆಡೆ. ಆಗಸದಲ್ಲಿ ಸೂರ್ಯನ ಆಟದೊಡನೆ ಮೋಡಗಳ ಕಣ್ಣಾಮುಚ್ಚಾಲೆಯೊಂದೆಡೆಯಾದರೆ, ಗಳಿಗೆ ಗಳಿಗೆಗೂ ಬದಲಾಗುವ ಆ ನೀಲಾಗಸದ ಬಣ್ಣ ಇನ್ನೊಂದೆಡೆ. ಆ ವಿಶಾಲ ಹರವಿನ ಕಾಡಿನಲ್ಲಿ ತಮ್ಮದೇ ಮಧುರ ಧ್ವನಿ ಹೊರಡಿಸುವ ಕಾಮಳ್ಳೀ, ಕಾಜಾಣ, ಪಿಕಳಾರಗಳ ಹಾಡಿನ ಪರಿ ಒಂದೆಡೆಯಾದರೆ, ಹತ್ತಿರದ ಗಿಡಮರಗಳಲ್ಲಿನ ಹೂವಿನ ಮಕರಂದ ಹೀರಲು ಬರುವ ದುಂಬಿ, ಜೇನ್ನೊಣ, ಬಂಬಲ್ ಬೀ, ಕೀಟಗಳ ಗುಂಯ್‍ಗುಡುವಿಕೆಯ ಅನುರಣನ ಇನ್ನೊಂದೆಡೆ. ಕುವೆಂಪು ಅವರ ಕಾಲದಲ್ಲಿದ್ದ ಅಲ್ಲಿನ ನಿಸರ್ಗಾನುಭವವನ್ನು, ಇಂದೂ ನಮ್ಮ ಮನದೊಳಗೆ ತುಂಬಿಕೊಳ್ಳುವ ಅವಕಾಶಕ್ಕಾಗಿ ನಾವು ಹಾತೊರೆಯುವುದಾದರೆ, ಅಂತಹ ಅಪರೂಪದ ಅದೃಷ್ಟ ಅಲ್ಲಿ ಇನ್ನೂ ದೊರೆಯುತ್ತದೆ ಎಂದೇ ಹೇಳಬೇಕು.
 
     ನಾವು ಹೋಗಿದ್ದು ಸಂಜೆಯ ಸಮಯ. ಅತ್ತ ಪಡುವಣ ಬಾನಿನಲ್ಲಿ ಕೆಂಪನೆಯ ಸೂರ್ಯ ದೂರದಿಗಂತದ ರೇಖೆಯಲ್ಲಿ ಮರೆಯಾಗುವ ಸನ್ನಾಹ ನಡೆಸಿದ್ದು, ತನ್ನ ಬಿರುಸನ್ನು ಕಳೆದುಕೊಂಡು, ಬರಿಗಣ್ಣಿಗೆ ಸುಂದರ ವರ್ಣಮಯ ಗೋಳದಂತೆ ಕಾಣುತ್ತಿದ್ದ. ಹಕ್ಕಿಗಳು ತಮ್ಮದೇ ಭಾಷೆಯಲ್ಲಿ ಆ ಸುಂದರ ಸಂಜೆಗೊಂದು ಭಾಷ್ಯವನ್ನು ನುಡಿಯುತ್ತಾ ಹಾರಿಹೋಗುತ್ತಿದ್ದವು. ಪುಟ್ಟ ಗಿಡವೊಂದರಲ್ಲಿ ಮೊಗ್ಗುಗಳ ರೂಪದಲ್ಲಿದ್ದ ನೂರಾರು ಹೂವುಗಳು, ಆಗತಾನೆ ಅರಳುತ್ತಿದ್ದು, ಸುವಾಸನೆಯನ್ನು ಬೀರುತ್ತಿತ್ತು. ಆ ಹೂವಿನ ಮಕರಂದವನ್ನು ಹೀರಲು ದುಂಬಿ, ಜೇನುಗಳು ಅತ್ತಿತ್ತ ಚಟುವಟಿಕೆಯಿಂದ ಹಾರುತ್ತಿದ್ದವು. ಅವುಗಳ ಮಧ್ಯೆ, ಸುಮಾರು ಒಂದು ಇಂಚು ಉದ್ದದ ದುಂಬಿಯೊಂದು ಗಮನ ಸೆಳೆಯಿತು – ಮಕರಂದ ಹೀರಲು ಆ ದುಂಬಿಯ ಬಳಿ ಪುಟ್ಟ ಕೊಕ್ಕಿನ ರೂಪದ ನಳಿಕೆ ಇತ್ತು. ತನ್ನ ರೆಕ್ಕೆಗಳನ್ನು ಅದೆಷ್ಟೋ ವೇಗವಾಗ ಬೀಸುತ್ತ, ಒಂದು ಹೂವಿನಿಂದ ಇನ್ನೊಂದು ಹೂವಿಗೆ ಪಾದರಸದಂತೆ ಹಾರುತ್ತಾ, ಮಕರಂದವನ್ನು ಹೀರುತ್ತಿದ್ದ ಆ ರೀತಿಯ ದೊಡ್ಡ ದುಂಬಿಯನ್ನು ಇದುವರೆಗೆ ನಾವೆಲ್ಲೂ ಕಂಡಿದ್ದಿಲ್ಲ. ನಮ್ಮ ಬಳಿ ಇದ್ದ ಕೆಮರಾದಲ್ಲಿ ಅದನ್ನು ಸೆರೆಹಿಡಿಯಲು ಯತ್ನಿಸಿದೆವಾದರೂ, ಅದು ಹಾರಾಡುತ್ತಿದ್ದ ವೇಗ, ಒಂದು ಹೂಗುಚ್ಛದಿಂದ ಇನ್ನೊಂದು ಹೂಗುಚ್ಚಕ್ಕೆ ಅದು ಸಾಗುತ್ತಿದ್ದ ಅದರ ಚಂಚಲತೆಯಿಂದಾಗಿ, ಸ್ಪಷ್ಟ ಚಿತ್ರ ಸೆರೆಹಿಡಿಯಲು ಅಸಾಧ್ಯವಾಯಿತು. ಒಂದೆರಡು ಗಂಟೆಗಳ ಕಾಲ ಅಲ್ಲಿ ಪ್ರವಾಸಿಗರ ರೂಪದಲ್ಲಿ ಬಂದಿದ್ದ ನಮಗೆ ಇಂತಹ ಅಪರೂಪದ ದುಂಬಿಯ ಚುರುಕಾದ ಹಾರಾಟದ ನೋಟದ ಅನುಭವ ದೊರೆತಿರಬೇಕಾದರೆ, ಆ ಪ್ರದೇಶದಲ್ಲಿ ಹೆಚ್ಚಿನ ಗಮನ ನೀಡಿ ಹುಡುಕಾಡುವವರಿಗೆ ಇನ್ನಷ್ಟು ಅಪರೂಪದ ಅನುಭೂತಿಗಳು ದೊರೆಯುವ ಅವಕಾಶ ಹೇರಳ.
 
    ಮುಸ್ಸಂಜೆ ಹೊತ್ತಿನಲ್ಲಿ ಕವಿಶೈಲದಿಂದ ವಾಪಸಾಗುತ್ತಿದ್ದಾಗ, ದಾರಿಯುದ್ದಕ್ಕೂ ಕುವೆಂಪು ಕಾದಂಬರಿಗಳಲ್ಲಿ ಬರುವ ಹುಲಿಮಂಡೆ, ಇಂಗ್ಲಾದಿ, ದೇವಂಗಿ ಮೊದಲಾದ ಊರುಗಳ ನಾಮಫಲಕಗಳು ಕಂಡು ಬಂದು, ಆ ಕಾದಂಬರಿಗಳನ್ನು ಓದಿದ ನೆನಪು ಮರುಕಳಿಸಿತು. ಕವಿಶೈಲವನ್ನು ನೋಡುವ ನಮ್ಮ ಆಸೆ ಹಲವು ವರ್ಷಗಳದ್ದು; ಕಾರಣಾಂತರದಿಂದ ಸಮಯ ಹೊಂದಿಸಿಕೊಂಡು ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಕೊನೆಗೂ, ಸಮಯ ಹೊಂದಿಸಿಕೊಂಡು ಅಲ್ಲಿಗೆ ಹೋಗಿದ್ದು, ನಮಗೆ ಮುಂದಾಗಿ ಅರಿವಿರಲಿಲ್ಲದಿದ್ದರೂ, ಕುವೆಂಪು ಪುಣ್ಯತಿಥಿಯಂದು! ಕುವೆಂಪು ಬರಹಗಳನ್ನು ತುಂಬಾ ಇಷ್ಟಪಡುತ್ತಿದ್ದ ನನಗೆ, ಕವಿಶೈಲದ ಈ ಭೇಟಿಯು ಒಂದು ಯೋಗಾಯೋಗದಂತೆ ಕಾಣಿಸಿತು.  
        
                                       -ಎಂ.ಶಶಿಧರ ಹೆಬ್ಬಾರ ಹಾಲಾಡಿ

‍ಚಿತ್ರ: ಹರಿ ಪ್ರಸಾದ್ ನಾಡಿಗ್

Comments

Submitted by ಮಮತಾ ಕಾಪು Fri, 12/07/2012 - 12:38

ಕವಿಶೈಲ ಸುಂದರ ನಿರೂಪಣೆ. ಕುಪ್ಪಳಿಗೆ ಹೋಗಲು ಎರಡು ಬಾರಿ ಅವಕಾಶ ಒದಗಿದ್ದರೂ ಕಾರಣಾಂತರಗಳಿಂದ ಹೋಗಲಾಗಿರಲಿಲ್ಲ. ಅಲ್ಲಿನ ವೈವಿಧ್ಯತೆಗಳ ವರ್ಣನಾ ಬರಹಗಳನ್ನು ಓದುತ್ತಾ ಹೋಗುತ್ತಿದ್ದಂತೆ ಅಲ್ಲಿನ ಭೇಟಿಗಾಗಿ ಮನಸ್ಸು ಕಾಯುತ್ತಿದೆ.. ಕವಿಶೈಲದ -ಅಪೂರ್ವ ಅನುಭೂತಿಯ ವಾಸ್ತವಿಕ ನಿರೂಪಣೆಗೆ ಧನ್ಯವಾದಗಳು ಶಶಿ ಹೆಬ್ಬಾರರಿಗೆ.
Submitted by hpn Sun, 12/09/2012 - 22:05

ಸಂಪದಿಗ ಮಿತ್ರರಾದ ರಮೇಶ್ ಬಾಲಗಂಚಿಯವರ ಜೊತೆ ಸುಮಾರು ಎರಡು ವರ್ಷಗಳ ಹಿಂದೆ ಅಲ್ಲಿಗೆ ಹೋಗಿದ್ದೆವು. ಚಿತ್ರ ಆಗ ತೆಗೆದದ್ದೇ. ಆಗ ಕುಪ್ಪಳ್ಳಿಯ ಮನೆಯಲ್ಲಿರುವ ಪುಸ್ತಕದಂಗಡಿಯಿಂದ ಕೆಲವು ಸಿಡಿಗಳನ್ನು ಕೊಂಡು ತಂದಿದ್ದೆ. ನೀವು ಬರೆದ ಲೇಖನದಿಂದ ಅವುಗಳ ನೆನಪಾಯಿತು! ಇಷ್ಟೂ ದಿನ ಆ ಹಾಡುಗಳನ್ನು ಕೇಳಲು ಪುರುಸೊತ್ತು ಹೇಗೆ ಆಗಲಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡಿತು. ಜೊತೆಯಲ್ಲೇ ಎಷ್ಟು ಬೇಗ ದಿನಗಳು ಉರುಳಿಹೋದುವು ಎಂಬುದರ ಅರಿವು ತಟ್ಟನೆ ಆಯಿತು. ನೀವು ಬರೆದ ಲೇಖನಗಳನ್ನೆಲ್ಲ ತಪ್ಪದೆ ಓದುತ್ತಿರುತ್ತೇನೆ. ಈ ಬಾರಿ ಪ್ರತಿಕ್ರಿಯೆಯೊಂದನ್ನು ಸೇರಿಸಬೇಕೆಂದರೂ ಭಾನುವಾರದವರೆಗೂ ಕಾಯಲೇಬೇಕಾಯಿತು. ಬೆಂಗಳೂರು ಜೀವನದ ಈ ಮಗ್ಗುಲಲ್ಲಿ ಇದ್ದುಕೊಂಡು ತೀರ್ಥಹಳ್ಳಿಯಲ್ಲಿ ಕಳೆದ ನೆಮ್ಮದಿಯ ಕೆಲವು ತಾಸುಗಳು ತುಂಬ ನೆನಪಾಗುತ್ತದೆ.
Submitted by sasi.hebbar Sun, 12/09/2012 - 22:55

ನಾಡಿಗರೆ, ನನ್ನ ಲೇಖನಗಳನ್ನು ನೀವು ತಪ್ಪದೇ ಓದುತ್ತಿರುವಿರೆಂದು ತಿಳಿದು ಎಷ್ಟು ಖುಷಿ ಆಯ್ತು ಗೊತ್ತಾ? ನೀವೇ ಬರೆದುಕೊಂಡಂತೆ, ಬಿಡುವಿಲ್ಲದ ಕೆಲಸದ ಮಧ್ಯೆ, ನಿಮಗೆ ಅಷ್ಟು ಪುರಸೊತ್ತು ಸಿಗುವುದಾದರೂ ಹೇಗೆ ಎಂಬುದೇ ನನ್ನ ಅಚ್ಚರಿ. ನನ್ನ ಬರಹ ಓದಿ ಕುವೆಂಪು ಬರೆದ ಹಾಡುಗಳನ್ನು ನೆನಪಿಸಿಕೊಂಡು ಕೇಳಿದಿರಲ್ಲಾ, ಅದೇ ಸಂತಸ, ವಿಶೇಷ. ಕವಿಶೈಲದ ಭೇಟಿ ನನಗೆ ವೈಯಕ್ತಿಕವಾಗಿ ತುಂಬಾ, ತುಂಬಾ ಖುಷಿ ಕೊಟ್ಟಿದೆ. ಲೇಖನವೂ ಅಷ್ಟೆ. ಅಲ್ಲಿಗೆ ಹತ್ತಿರದ ಸಿಬ್ಬಲುಗುಡ್ಡದ ಭೇಟಿ, ಬೇರೊಂದೇ ಆಯಾಮದ ಅನುಭವ ನೀಡಿದೆ. ಆ ಕುರಿತು ಮುಂದಿನ ವಾರ ಬರೆಯುವ ಇರಾದೆ ಇದೆ - ಇದೆಲ್ಲದಕ್ಕೂ, ನಿಮ್ಮ "ಸಂಪದ"ವೇ ವೇದಿಕೆ, ಕೃಪೆ, ಅವಕಾಶ. ಧನ್ಯವಾದ.