ನೋವ ಮರೆಯುತ ನಕ್ಕಳಾ ತಾಯಿ
ಕೋಗಿಲೆಯ ಇ೦ಚರಕೆ ತನುಮನ
ತೂಗುತಿರಲ೦ಗಳದ ಕೋಳಿಯು
ಕೂಗುತೆಬ್ಬಿಸಿತೆನ್ನ ನಸುಕಿನ ಜಾಮದೊಳು ಸೊಗದಿ|
ಮಾಗಿಯಾ ಚಳಿ ಮೈಯ ಕೊರೆಯುತ
ಬೀಗುತಿರ್ದರು ಸ೦ತಸದಿ ನಾ
ಬೇಗನೇಳುತಲೆಸೆದು ಹೊದಿಕೆಯ ಯೋಚಿಸಿದೆ ಮನದಿ||
ಇ೦ದು ತಾರೀಕೆಷ್ಟು ಭೂಮಿಗೆ
ಬ೦ದ ದಿನವಹುದೆನ್ನುತಲಿ ನಾ
ನ೦ದದೊಳು ಜಳಕವನು ಗೈದೆನು ಪದವ ಗುನುಗುನಿಸಿ|
ಚ೦ದದೊಳು ದೇವರಿಗೆ ನಮಿಸುತ
ತ೦ದೆ ಸಲೆ ಕಾಯೆ೦ದು ಭಜಿಸಿದೆ
ಮು೦ದೆಯೂ ಸುಖವಾಗಿ ಬಾಳುವ ಯೋಗವೀಯೆನುತ||
ಸಡಗರದಿ ಹೆತ್ತವ್ವೆಯೆಡೆ ನಾ
ನಡೆದೆನಡಿಗೆಯ ಕೋಣೆಯೊಳಗಡೆ
ಕಡೆಯುತಿರ್ದಳು ಮೊಸರ ಕಡೆಗೋಲನ್ನು ತಿರುಗಿಸುತಾ|
ಸೆಡಹು ತೋರದೆ ಮಾತೆಯ೦ಘ್ರಿಗೆ
ಪೊಡಮಡುತ ಪೂಸಿದೆನು ಕಾಲ್ಗಳ
ಪಿಡಿದು ನುಡಿದೆನು ತಾಯೆ ಪೊರೆಯುತಲೆನ್ನ ನೀನಡೆಸು||
ಹತ್ತು ವರುಷದ ಹಿ೦ದೆ ನನ್ನನು
ಹೊತ್ತು ಒದೆತದ ಬೇನೆ ಸಹಿಸುತ
ಹೆತ್ತು ಮುದ್ದಿನೊಳೆನ್ನ ಸಲಹಿದೆಯಮ್ಮ ನೆನೆಪಿಹುದೇ?|
ಉತ್ತರವ ಕೊಡು ನಿನ್ನ ಹೆಗಲಿನ
ಎತ್ತರಕೆ ಬೆಳೆದಿರ್ಪೆನೆನ್ನನು
ಎತ್ತಿ ಸಲಹಿದೆ ತಾಯೆ ಬ೦ದಿಹುದೆನ್ನ ಜನುಮದಿನ||
ಕೊರಳ ತು೦ಬುತಲೆನ್ನ ಮಾತೆಯ
ಕರುಳು ಮಿಡಿಯುತಲಿರಲು ಕಣ್ಣೊಳು
ಹರಿಯುವಶ್ರುವ ಸೆರಗ ತುದಿಯಲ್ಲೊರಸಿ ಪೇಳಿದಳು|
ಇರುಳು ಹುಟ್ಟಿದ ನೀನು ಗ೦ಟಲ
ಬಿರಿದು ಕೂಗುತಲಿರಲು ವೇದನೆ
ಮರೆತು ನಸುನಗೆ ಸೂಸಿದಾ ಕ್ಷಣವೆ೦ತು ಮರೆಯುವೆನು?||
ಸ್ಫೂರ್ತಿ:
ಶ್ರೀ ಅಬ್ದುಲ್ ಕಲಂ ರ ಈ ನುಡಿ --My birthday is that day when my mother smiled when I cried...
ಚಿತ್ರಕೃಪೆ :ಅಂತರ್ಜಾಲ
![](https://saaranga-aws.s3.ap-south-1.amazonaws.com/s3fs-public/mother.jpg)
Comments
ಅದ್ಭುತವಾದ ಕವಿತೆ.
ಅದ್ಭುತವಾದ ಕವಿತೆ.
ರಘು ಮುಳಿಯ ರವರಿಗೆ ವಂದನೆಗಳು
ರಘು ಮುಳಿಯ ರವರಿಗೆ ವಂದನೆಗಳು
ಅಬ್ದುಲ್ ಕಲಾಂರ ನುಡಿಯಿಂದ ಪ್ರೇರಿತರಾಗಿ ನೀವು ರಚಿಸಿದ ಕವಿತೆ " ನೋವ ಮರೆಯುತ ನಕ್ಕಳಾ ತಾಯಿ " ಒಂದು ಸೊಗಸಾದ ಅರ್ಥಗರ್ಭಿತ ಕವನ, ಧನ್ಯವಾದಗಳು.
In reply to ರಘು ಮುಳಿಯ ರವರಿಗೆ ವಂದನೆಗಳು by H A Patil
ಧನ್ಯವಾದ ಪಾಟೀಲರೆ.
ಧನ್ಯವಾದ ಪಾಟೀಲರೆ.
ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದ
ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದ ಕೃಷ್ಣ ಪ್ರಕಾಶರೆ.
ಬಹು ದಿನಗಳ ನಂತರ ಸುಂದರ " ಷಟ್ಪದಿ
ಬಹು ದಿನಗಳ ನಂತರ ಸುಂದರ " ಷಟ್ಪದಿ" .....ಸತೀಶ್
In reply to ಬಹು ದಿನಗಳ ನಂತರ ಸುಂದರ " ಷಟ್ಪದಿ by sathishnasa
ಧನ್ಯವಾದ ಸತೀಶರೇ.
ಧನ್ಯವಾದ ಸತೀಶರೇ.
ಸ0ಪದಕ್ಕೆ ಬಾರದೆ ಬಹಳ ದಿನಗಳಾದವು.
>>>ಇರುಳು ಹುಟ್ಟಿದ ನೀನು ಗ೦ಟಲ
>>>ಇರುಳು ಹುಟ್ಟಿದ ನೀನು ಗ೦ಟಲ
ಬಿರಿದು ಕೂಗುತಲಿರಲು ವೇದನೆ
ಮರೆತು ನಸುನಗೆ ಸೂಸಿದಾ ಕ್ಷಣವೆ೦ತು ಮರೆಯುವೆನು?||
-ಉತ್ತಮ ಕವಿತೆ ರಘುಜಿ.
In reply to >>>ಇರುಳು ಹುಟ್ಟಿದ ನೀನು ಗ೦ಟಲ by ಗಣೇಶ
ಪ್ರೊತ್ಸಾಹಕ್ಕೆ ಧನ್ಯವಾದ ಗಣೇಶರೇ
ಪ್ರೊತ್ಸಾಹಕ್ಕೆ ಧನ್ಯವಾದ ಗಣೇಶರೇ.
ಏನೆ ಹೇಳಿ ರಘುರವರ ಷಟ್ಪದಿಗಳಿಗೆ
ಏನೆ ಹೇಳಿ ರಘುರವರ ಷಟ್ಪದಿಗಳಿಗೆ ರಘುರವರ ಷಟ್ಪದಿಗಳೆ ಸಾಟಿ
ಆದರು ಅವರು ಪದೆ ಪದೆ ಸಂಪದಕ್ಕೆ ಕೊಡುತ್ತ ಇರುತ್ತಾರೆ ಸೂಟಿ
In reply to ಏನೆ ಹೇಳಿ ರಘುರವರ ಷಟ್ಪದಿಗಳಿಗೆ by partha1059
ಪಾರ್ಥ,ಬಹಳ ಮೆಚ್ಚಿಗೆಯೆನಗೆ
ಪಾರ್ಥ,ಬಹಳ ಮೆಚ್ಚಿಗೆಯೆನಗೆ ನಿಮ್ಮ ಧಾಟಿ !.
ಎ0ದಿನ0ತೆ.... ಸು0ದರ ಕವನ,
ಎ0ದಿನ0ತೆ.... ಸು0ದರ ಕವನ, ಮತ್ತೆ ಬ0ದಿದ್ದಕ್ಕೆ ತು0ಬಾ ಸ0ತಸವಾಗುತ್ತಿದೆ.
In reply to ಎ0ದಿನ0ತೆ.... ಸು0ದರ ಕವನ, by srimiyar
ಪ್ರೀತಿಗೆ ಧನ್ಯವಾದ ಶ್ರೀನಿವಾಸರೇ
ಪ್ರೀತಿಗೆ ಧನ್ಯವಾದ ಶ್ರೀನಿವಾಸರೇ.
ದುಡಿತ, ಬರೆವ ತುಡಿತಕ್ಕೆ ಎಡೆಗೆಡೆಗೆ ತಡೆ ಹಾಕುತ್ತಿದೆ ಅಷ್ಟೇ..
ತುಮ್ಬಾ ಚ್ಹೆನ್ನಾಗಿದೆ...
ತುಮ್ಬಾ ಚ್ಹೆನ್ನಾಗಿದೆ...
ಹಿಡಿಸಿತು..
ಒಳಿತಾಗಲಿ..
\|
In reply to ತುಮ್ಬಾ ಚ್ಹೆನ್ನಾಗಿದೆ... by venkatb83
ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದ
ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದ ವೆ0ಕಟರೇ.
In reply to ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದ by raghumuliya
ಅತ್ತ್ಯುತ್ತಮ ಕವಿತೆ.
ಅತ್ತ್ಯುತ್ತಮ ಕವಿತೆ.