ಮುಂಜಾವಿನ ಹೊಸ ಕಂಗ್ಲಿಷ್ ಹಾಡು

ಮುಂಜಾವಿನ ಹೊಸ ಕಂಗ್ಲಿಷ್ ಹಾಡು

 

 

ಮಿಲ್ಪಿಟಸ್ಸೆನುವೂರಿನೊಂದು  ಫಾಲ್ಬೆಳಗಿನಲಿ

ಕಲ್ಪಿಸಿದೆ ಕಂಗ್ಲೀಷು  ಚೌಪದಿಗಳ

ಜಲ್ಪಿಸುತ್ತಿಹೆಯೆನದೆ ಸುಮ್ಮನೇ ಓದಿಬಿಡಿ

ಸೊಲ್ಪ ನಾನ್ಸೆನ್ಸಾದರೂ ಲೈನ್ಗಳ      ||1||

 

ಮುಂದೆ ಮುಂಜಾವಿನಲಿ ಮೂಡು ಕೆಂಪೇರುತಿದೆ

-ಯೆಂದು ಬಣ್ಣಿಸುವುದೆಲ್ಲ   ಹಳೆಯದಾಯ್ತು

ಸಂದುಗೊಂದಿಯಪಾರ್ಟುಮೆಂಟಿನಲಿ ವಾಸಿಸಿರ

-ಲಿಂದು ಕವಿಕಣ್ಣುಗಳೆ ಮಾಯವಾಯ್ತು  ||2||

 

ಉದಯದಲಿ ಗಿರಿಮೇಲೆ ರವಿಯ ಹೊಂಗಿರಣಗಳು

ಹದವಾದ ಲಾನಿಗಿರೆ ಮಂಜು ಹೊದಿಕೆ

ಚದುರಿಹವು ಬಣ್ಣದೆಲೆ ತುಸುಕುಳಿರ ಗಾಳಿಯಲಿ

ಮುದದ ಮುಂಜಾವಗಳು ಫಾಲಿನಲ್ಲೆ  ||3||

 

ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ

ಒಳಿತಾದ ಸ್ಟಾರ್ಬಕ್ಸು ಕಾಫಿಯನ್ನು

ಗಳಹುತ್ತ ಫೇಸ್ಬುಕ್ಕಿನಲ್ಲಪ್ಟೇಡಿಸುವುದನು 

ಸುಳುವಾಗಿಸಿದ ಮಾರ್ಕು ಜ಼ುಕರ್ಬರ್ಗನು ||4||

 

-ಹಂಸಾನಂದಿ

 

ಕೊ: ಪದ್ಯಪಾನದಲ್ಲೊಂದು ಹಳೆಯ ಪ್ರಶ್ನೆ ನೋಡಿದೆ- ಮುಂಜಾವಿನ ಸೊಬಗನ್ನು ಚೌಪದಿಯಲ್ಲಿ ವರ್ಣಿಸಿ, ಕಲ್ಪನೆಗಳು ಹೊಸದಾಗಿರಲಿ ಅಂತ. ಅದನ್ನು ನೋಡಿ, ಕಂಗ್ಲಿಷ್ ನಲ್ಲಿ ಇವತ್ತು ಬರೆದ ನಾಲ್ಕು ಚೌಪದಿಗಳಿವು. ತಲೆಬರಹ ಸೂಚಿಸಿದ್ದು ಗೆಳೆಯ ಸುಬ್ರಹ್ಮಣ್ಯ ಅವರು.

 

ಕೊ.ಕೊ: ಮಿಲ್ಪಿಟಸ್ ಎಂಬುದು ನಾನಿರುವ ಊರಿನ ಹೆಸರು; ಸ್ಯಾನ್ ಹೊಸೆ, ಕ್ಯಾಲಿಫೋರ್ನಿಯ ಪಕ್ಕದಲ್ಲಿರುವ ಊರಿದು. ಊರಿನ ಪೂರ್ವಕ್ಕಿರುವ ಮಾನ್ಯುಮೆಂಟ್ ಬೆಟ್ಟದಲ್ಲಿ ಪ್ರತಿದಿನ ನಮ್ಮ ಕಿಟಕಿಯಲ್ಲಿ ಕಾಣುವ ಸೂರ್ಯೋದಯದಿಂದ ಸ್ವಲ್ಪ ಪ್ರಭಾವಿತವಾದ ಚೌಪದಿಗಳಿವು ಎಂದರೂ ತಪ್ಪಿಲ್ಲ. 

 

Rating
No votes yet

Comments