ಚೇಳು

ಚೇಳು

ಪುಸ್ತಕದ ಲೇಖಕ/ಕವಿಯ ಹೆಸರು
ವಸುಧೇಂದ್ರ
ಪುಸ್ತಕದ ಬೆಲೆ
೪೦

ಒಟ್ಟು ಏಳು ಕಥೆಗಳ ಈ ಸಂಕಲನದಲ್ಲಿ ಚೇಳು-ಕಥೆ ಬಹಳ ಪ್ರಧಾನವಾದುದು. ಹಿಡಿ ಗಾತ್ರದ ಚೇಳಿನಿಂದಾಗಿ ಬಳ್ಳಾರಿ ಜಿಲ್ಲೆಯ ಒಂದು ಪುಟ್ಟ ಊರಿನಲ್ಲಿನ ಜನರು ಪಟ್ಟ ಪಾಡು, ಅದರಿಂದಾಗುತ್ತಿದ್ದ ಫಜೀತಿಗಳನ್ನು ಈ ಕಥೆಯಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಆ ಹಳ್ಳಿಯ ಜನಸಂಖ್ಯೆಗಿಂತ ಹೆಚ್ಚೇ ಚೇಳುಗಳಿದ್ದರಿಂದ ನೆಲದ ಮೇಲೆ ಕಾಲು ಇಡಲೂ ಕಷ್ಟಕರವಾದ್ದಂತಹ ಪರಿಸ್ಥಿತಿ. ತಾರಸಿಯ ಒಳಗೆ, ಮಡಿಸಿಟ್ಟ ಅರಿವೆಗಳಲ್ಲಿ, ಬೀಸುಕಲ್ಲಿನ ಕುಣಿಯಲ್ಲಿ, ಅಕ್ಕಿ ಡಬ್ಬಿಯ ಒಳಗೆ ಹೀಗೆ ನಾನಿಲ್ಲದೆಡೆಯಿಲ್ಲ ಎನ್ನುವ ಭಗವಂತನ ಮತ್ತೊಂದು ಅವತಾರವೇನೋ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತಿತ್ತು. ಹರಿದಾಡುವ ಚೇಳನ್ನು ತೆವಲುವ ಮಕ್ಕಳು ಆಟದ ವಸ್ತುವೆಂದು ಕೈಯಲ್ಲಿ ಹಿಡಿಯದಂತೆ ಕಣ್ಗಾವಲಿರಬೇಕಿತ್ತು. ಹೊಸದಾಗಿ ಮದುವೆಯಾಗಿ ಬಂದಿರುವ ಪರಊರಿನ ಹೆಣ್ಣುಮಕ್ಕಳಿಗೆ ಇಕ್ಕಟ್ಟಿನ ಸ್ಥಿತಿ ಎದುರಾಗುತ್ತಿತ್ತು. ಇಂತಹ ಸಂದರ್ಭಲ್ಲೂ ಊರಿನ ವೆಂಕಮ್ಮ ಎನ್ನುವ ಮಹಿಳೆ ಚೇಳು ಕಡಿದಾಗ ಔಷದಿ ನೀಡುತ್ತಿದ್ದಳು. ಯಾವುದೇ ವೈಮನಸ್ಸು ಇದ್ದರೂ ಚೇಳಿನ ಕಾರಣದಿಂದಾಗಿ ಆಕೆಯನ್ನು ಎದುರುಹಾಕಿಕೊಂಡು ಬದುಕುವ ಧೈರ್ಯವನ್ನು ಯಾರೂ ಮಾಡುತ್ತಿರಲಿಲ್ಲ. ಆಕೆಯನ್ನು ಎದುರು ಹಾಕಿಕೊಂಡ ಆ ಊರಿನ ದೇವಸ್ಥಾನದ ಪೂಜೆ ಮಾಡುವ ವೆಂಕೋಬಾಚಾರ್ಯರು ಚೇಳಿನಿಂದ ಕಚ್ಚಿಸಿಕೊಂಡು ಜೀವ ಹೋಗುವಂತಹ ಸಂದರ್ಭ-ವೆಂಕಮ್ಮನಲ್ಲಿ ದೇಹೀ ಎಂದು ಹೋಗುವ ಕರಾಳ ದಿನ ಎದುರಾಗಿತ್ತು.

ಮದುವೆಯಾಗಿ ವರ್ಷ ಕಳೆದರೂ ಮಕ್ಕಳಾಗದ ವೆಂಕಮ್ಮ ತಾನು ಬೇಡವೆಂದರೂ, ತನ್ನ ಗಂಡ ಹಾಗೂ ಮನೆಯವರ ಒತ್ತಾಯಕ್ಕಾಗಿ ಬಾಬಾನೊಬ್ಬನ ಬಳಿ ಹೋಗಿ ಬಳಿಕ ಆತನಿಂದ ವಂಚಿತಳಾಗಿ ಮನೆಯವರಿಂದ ಬಹಿಷ್ಕಾರ ಹಾಕಿಸಿಕೊಂಡು ಕೊನೆಗೆ ಆ ಬಾಬಾನಿಂದಲೇ ಆ ಊರಿಗೆ ಅವಶ್ಯವಾಗಿ ಬೇಕಾಗಿದ್ದ ಚೇಳಿನ ಔಷದಿಯನ್ನು ತಿಳಿದುಕೊಂಡು ಕೊನೆಗೆ ತನ್ನ ಅನ್ನವನ್ನು ತಾನೇ ಸಂಪಾದಿಸಿಕೊಂಡು ಬದುಕುವ ಹೆಣ್ಣುಮಗಳ ಜೀವನ ಕಥೆ-ವ್ಯಥೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ.

ಹೊಟ್ಟೆಯೊಳಗಿನ ಗುಟ್ಟು ಎನ್ನುವ ಕಥೆಯಲ್ಲಿ ಮನೆಯೊಡತಿ ತೀರಿಕೊಂಡಾಗ ಶಾಸ್ತ್ರದಂತೆ ಮಾಡುವ ಕಾಗಿಪಿಂಡದಲ್ಲಿ, ಮನೆಯ ಸದಸ್ಯರೆಲ್ಲರೂ ಕೈಮುಗಿದು ಬೇಡಿಕೊಂಡರು ಪಿಂಡವನ್ನು ಮುಟ್ಟದ ಕಾಗೆಗಳು ಕೊನೆಗೆ ಮನೆ ಕೆಲಸದ ನರಸಕ್ಕಾ ಕೂಗಿ ಕರೆದಾಗ ಕಾಗೆಗಳೆಲ್ಲಾ ಒಮ್ಮೆಲೇ ಬಂದು ಇರಿಸಿದ್ದ ಆಹಾರವನ್ನು ತೆಗೆದುಕೊಂಡು ಹಾರಿ ಹೋದುವು. ತನ್ನ ರಕ್ತಸಂಬಂಧಿಗಳೇ ಬೇಡಿಕೊಂಡರೂ ಕರಗದ ಆ ತಾಯಿಯ ಮನಸ್ಸು ವರ್ಷಾನುಗಟ್ಟಲೆ ತನ್ನ ಜತೆಗೆ ಮನೆಯ ಆಳಾಗಿ ಇದ್ದುಕೊಂಡು ತನ್ನ ನೋವು ನಲಿವುಗಳಲ್ಲಿ ಸಮಭಾಗಿಯಾಗಿದ್ದ ಕೆಲಸದಾಳಿನ ಕರೆಗೆ ಓಗೊಟ್ಟಿತು. ಮಕ್ಕಳು, ಬಂದುಗಳು ಆರ್ಥಿಕವಾಗಿ, ಔಪಚರಿಕವಾಗಿ ಅದೆಷ್ಟೇ ನೋಡಿಕೊಂಡಿದ್ದರೂ ಅವರ್ಯಾರಿಗೂ ಹೇಳಿಕೊಳ್ಳಲಾಗದ ಯಾವುದೋ ಒಂದು ವಿಷಯವನ್ನು ನರಸಕ್ಕನ ಜತೆ ಮಾತ್ರ ಹಂಚಿಕೊಂಡಿದ್ದಳು. ಈ ಘಟನೆಯನ್ನು ನೋಡಿದ ಮನೆಯ ಸದಸ್ಯರು ಅದ್ಯಾವ ವಿಷಯವಾಗಿ ಆಕೆ ಅಮ್ಮನ್ನು ಬೇಡಿಕೊಂಡಳೆಂಬುದನ್ನು ಆಕೆಯ ಬಾಯಿ ಬಿಡಿಸಲು ಶತ ಪ್ರಯತ್ನ ಮಾಡಿದರು. ಆದರೆ ಯಾವ ರೀತಿಯಾಗಿ ಕೇಳಿದರೂ ತನ್ನ ಹೊಟ್ಟೆಯೊಳಗಿನ ಗುಟ್ಟನ್ನು ಬಿಟ್ಟುಕೊಡಲೇ ಇಲ್ಲ! ತನಗೆ ಆಶ್ರಯ ಕೊಟ್ಟು, ಹೊಟ್ಟೆಯ ತುತ್ತಿಗೆ ಆಧಾರವಾಗಿದ್ದ ಆ ತಾಯಿಯ ಮನಸ್ಸನ್ನು ಆಕೆ ಸತ್ತು ಹೋದ ಮೇಲೂ ನಹ ನೋವುಂಟುಮಾಡಲು ಆಕೆ ಇಚ್ಛಿಸಲಿಲ್ಲ. ಮನೆಯ ಸದಸ್ಯರು ನರಸಕ್ಕನ ಬಾಯಿ ಬಿಡಿಸಲು ಉಪಯೋಗಿಸಿದ ಸಂಭಾಷಣೆಗಳು ಬಹಳ ತೀಕ್ಷ್ಣವಾಗಿದ್ದರೂ ಆಕೆಯ ಮೌನ ಅವರಿಗೆ ಆಶ್ಚರ್ಯವನ್ನುಂಟುಮಾಡಿತ್ತು. ವಾಸ್ತವದಲ್ಲಿ ನಡೆಯುತ್ತಿರುವ ಇಂತಹ ನೂರಾರು ಘಟನೆಗಳ ಸಾಕ್ಷ್ಯವನ್ನು ಕಥೆಯ ಮೂಲಕ ಪ್ರಸ್ತುತಪಡಿಸಿದ ವಸುಧೇಂದ್ರರ ಈ ಕಥೆಯನ್ನು ಓದಿದ ಜನರ ಮನಸ್ಸು ಯೋಚಿಸುವಂತಾಗುವುದು.

ಒಂದಿಲ್ಲೊಂದು ವಿಭಿನ್ನ ಕಥೆಯನ್ನು ಹೊತ್ತಿರುವ ಈ ಸಂಕಲನದ ಇನ್ನೊಂದು ಕಥೆ ಶ್ರೀ ದೇವಿ ಮಹಾತ್ಮೆ. ದೇವಿಯ ಹೆಸರಿನಂತೆ ಕಾಣುವ ಈ ಶೀರ್ಷಿಕೆಯನ್ನು ನೋಡಿ ದೇವರ ಕಥೆಯಿರಬಹುದೆಂದು ಅಂದುಕೊಂಡರೆ ನಮ್ಮ ಊಹೆ ಸುಳ್ಳಾಗುತ್ತದೆ. ಶ್ರೀದೇವಿ ಎನ್ನುವ ಹೆಣ್ಣುಮಗಳು ಬಡತನದ ಕಾರಣದಿಂದಾಗಿ ಪಟ್ಟಣಕ್ಕೆ ಬಂದು ಅಲ್ಲಿ ಆಕೆಯ ಜಿವನದ ಸುತ್ತ ಈ ಕಥೆಯನ್ನು ಹೆಣೆದಿದ್ದಾರೆ. ಹಳ್ಳಿ ಹುಡುಗಿಯ ಮುಗ್ಧತೆ, ಆಧುನಿಕ ಸವಲತ್ತುಗಳ ಬಗೆಗಿನ ಆಕೆಯ ಕುತೂಹಲಗಳು, ಆಕೆ ಕೇಳುವ ಮುಗ್ದ ಪ್ರಶ್ನೆಗಳು, ಇಲ್ಲಿನ ಜೀವನ ಶೈಲಿಗೆ ಬೇಕಾಗುವ ಕನಿಷ್ಠ ಇಂಗ್ಲೀಷ್ ಪದಗಳನ್ನು ಕಲಿತುಕೊಂಡು ಅವುಗಳ ಉಚ್ಚರಣೆ ಮಾಡಿ ನಾಚಿಕೊಂಡು ಓಡುವ ಆ ಹುಡುಗಿಯ ಕಥೆ ಬಹಳ ಸೊಗಸಾಗಿ ಮೂಡಿ ಬಂದಿದೆ. ಶ್ರೀ ದೇವಿಗೆ ತೆಲುಗು ನಟ ವೆಂಕಟೇಶ್ ಅಂದರೆ ತುಂಬಾ ಇಷ್ಟ. ಆತನ ಎಲ್ಲಾ ಸಿನಿಮಾಗಳನ್ನೂ ಹೆಚ್ಚಾಗಿ ನೋಡುತ್ತಿದ್ದಳು. ಆತನನ್ನೇ ಮದುವೆಯಾಗಬೇಕೆಂಬುದು ಆಕೆಯ ಕನಸಂತೆ. ಅದಕ್ಕಾಗಿ ತನ್ನದೊಂದು ಸೀರೆಯುಟ್ಟ ಫೊಟೋ ಇಟ್ಟು,ಜತೆಗೆ ಪ್ರೇಮ ಪತ್ರವನ್ನೂ ರವಾನಿಸಿದ್ದಳು, ಇದ್ದಕ್ಕಿದ್ದಂತೆ ಒಮ್ಮೆ ಹಳ್ಳಿಗೆ ಹೋಗಿ ಬಂದ ಆ ಹುಡುಗಿ ಮದುವೆ ನಿಶ್ಚಿತಾರ್ಥ ಮುಗಿಸಿಕೊಂಡೇ ಬಂದಿದ್ದಳು. ಅದೂ ಅನ್ಯ ಜಾತಿಯ ಹುಡುಗನ ಜತೆಗೆ ಮನೆಯವರೇ ಗೊತ್ತಪಡಿಸಿದ ಹುಡುಗನೊಂದಿಗೆ ಆಕೆಯ ಮದುವೆಯೆಂದು ಹೇಳಿಕೊಂಡಿದ್ದಳು. ತಾನು ಮದುವೆಯಾಗುತ್ತಿರುವ ಆ ಹುಡುಗನ ಬಗ್ಗೆ ಆಕೆಗಿದ್ದ ಕನಸುಗಳು, ಸಂಭಾಷಣೆಗಳು, ಆಕೆ ದಿನಪೂರ್ತಿ ವಿವರಿಸುತ್ತಿದ್ದ ಆತನ ಗುಣಗಾನಗಳನ್ನು ಕಥೆಯಲ್ಲಿ ತುಂಬಾ ಸೊಗಸಾಗಿ ಚಿತ್ರಿಸಲಾಗಿದೆ. ಯೋವನ್ ಎನ್ನುವ ಆ ಹುಡುಗ ಹತ್ತುಸಾವಿರ ರೂಪಾಯಿಗಳನ್ನು ಯಾವತ್ತು ಶ್ರೀದೇವಿಯ ತಂದೆಗೆ ಒಪ್ಪಿಸುತ್ತಾನೋ ಅಂದೇ ಆಕೆಯ ಮದುವೆ. ಹೀಗೆ ಕೆಲಸದಾಳಗಿದ್ದರೂ ತನ್ನ ಮುಗ್ಧತೆಯಿಂದ ಮನೆಯೊಡನೆಯ ಮೆಚ್ಚುಗೆ ಹಾಗೂ ಮನಸ್ಸನ್ನು ಗಳಿಸಿದ್ದ ಆಕೆ ಕೊನೆಗೊಂದು ದಿನ ಮದುವೆಯಾಗಲೆಂದು ಊರಿಗೆ ಹೊರಟೇ ಬಿಡುತ್ತಾಳೆ.

ಬಿ.ಎ ಓದಿದ ರಮೇಶ ಯಾವುದೋ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅಲ್ಲಿ ದೊರೆತ ಡಾಟಾಬೇಸ್ ಟ್ರೈನಿಂಗ್ ನ ಆಧಾರದ ಮೇಲೆ ಸಾಫ್ಟ್ವೇರ್ ಕಂಪೆನಿಯಲ್ಲಿ ಸಂದರ್ಶಕರ ಬೇಜವಾಬ್ದಾರಿಯಿಂದಾಗಿ ಕೆಲಸ ಗಿಟ್ಟಿಸಿಕೊಂಡು ಮುಂದೆ ಆ ಕೆಲಸದಲ್ಲಿನ ಅಜ್ಞಾನದಿಂದಾಗಿ ಕೆಲಸ ಕಳೆದುಕೊಳ್ಳುವ ಸಂದರ್ಭ ಹಾಗೂ ಆತನನ್ನು ಕೆಲಸದಿಂದ ತೆಗೆದು ಹಾಕಿದವನಿಗೆ ಕಾಡುವ ಪಾಪಪ್ರಜ್ಞೆ. ಕೊನೆಗೊಂದು ಅದೇ ರಮೇಶ ತನ್ನ ಕಾರಿಗೆ ಪೆಟ್ರೋಲ್ ತುಂಬಿಸುವಾಗ ಪರಿಚಯವಿದ್ದರೂ ಆತನ ನಿರ್ಲಿಪ್ತ ಪ್ರತಿಕ್ರಿಯೆ. ಈ ಸಂಕಲನದ ಗುಳ್ಳೆ ಕಥೆ. ಹೀಗೆ ಅನಘ,ಕ್ಷಿತಿಜ ಹಿಡಿಯ ಹೊರಟವರು,ಹಲೋ ಭಾರತಿ ಈ ಎಲ್ಲಾ ಕಥೆಗಳಲ್ಲೂ ವಾಸ್ತವಿಕತೆಯ ನಿದರ್ಶನವನ್ನು ನಾವು ಕಾಣಬಹುದು.
ವಿಷಯ ಯಾವುದೇ ಇರಲಿ ಅವುಗಳಿಗೆ ಸುಂದರ ಕಥಾರೂಪವನ್ನು ನೀಡಿ ವಾಸ್ತವಕ್ಕೆ ಹತ್ತಿರವಾಗುವಂತೆ ಮಾಡುವ ವಸುಧೇಂದ್ರರ ಬರಹಗಳು ಓದುಗರನ್ನು ಸಾಹಿತ್ಯದೆಡೆಗೆ ಆಕರ್ಷಿಸುತ್ತದೆ.

Comments

Submitted by partha1059 Wed, 12/19/2012 - 08:01

<\p> ಉತ್ತಮ‌ ನಿರೂಪಣೆ ಮಮತಾರವರೆ ಕಡೆಯ‌ ಕತೆ ತು0ಬಾ ಇಷ್ಟವಾಯಿತು. <\p>
<\p> ಇಲ್ಲಿ ಪ್ಯಾರಗಳನ್ನು ಬೇರೆಮಾಡಲು ಕಷ್ಟ. ಹಾಗಾಗಿ ಒ0ದೆ ಗೊ0ಚಲಾಗುತ್ತದೆ. ಓದುವಾಗ‌ ಸ್ವಲ್ಪ ಗೊ0ದಲ‌ <\p>
<\p>ಸ0ಪದ‌ ನಿರ್ವಾಹಕ‌ ಮ0ಡಲಿಯವರ‌ ಗಮನಕ್ಕೆ ಒಮ್ಮ ಈ ವಿಷಯ‌ ತನ್ನಿ. <\p>

<\p>ಅಭಿನ0ದನೆಗಳು <\p>
ಪಾರ್ಥಸಾರಥಿ

Submitted by ಮಮತಾ ಕಾಪು Wed, 12/19/2012 - 10:25

In reply to by partha1059

ಬೇರೆ ಬೇರೆ ಪ್ಯಾರಗಳಿಲ್ಲದೆ ಓದುವಾಗ ಸ್ವಲ್ಪ ಗೊಂದಲ ಆಗುವುದು ನಿಜ. ಸಂಪದ ನಿರ್ವಾಹಕರಲ್ಲಿ ಈ ಬಗ್ಗೆ ತಿಳಿಸುತ್ತೇನೆ.

Submitted by kavinagaraj Wed, 12/19/2012 - 09:03

ಒಳ್ಳೆಯ ವಿಮರ್ಶೆ. ಪುಸ್ತಕದ ಹೂರಣವನ್ನು ಬಿಡಿಸಿಟ್ಟು ಪುಸ್ತಕವನ್ನು ಓದಲು ಪ್ರೇರಿಸುತ್ತದೆ. ಲೇಖಕರಿಗೂ, ನಿಮಗೂ ಅಭಿನಂದನೆಗಳು.

Submitted by venkatb83 Wed, 12/19/2012 - 16:01

ಬಯಲು ಸೀಮೆ -ಗಣಿ -ಕುಣಿ..:(( ಬಿಸಿಲು ಪ್ರದೇಶ ಬಳ್ಳಾರಿಯ ಬರಹಗಾರರಾದ ಶ್ರೀಯುತ ವಸುಧೇಂದ್ರ ಅವರ ಚೇಳು ಪುಸ್ತಕ ಕುರಿತ ಪರಿಚಯ ಬರಹ ಸೂಪರ್....
ಅವರ ಕೆಲವು ಬರಹಗಳನ್ನು ಅಲ್ಲಲಿ (ಲೈಬ್ರರಿ-ದಟ್ಸ್ ಕನ್ನಡ ಕೆಲವು ಮಾಸಿಕ ಪಾಕ್ಷಿಕಗಳಲಿ )ಓದಿದ್ದೆ...
ಅವರು ಫೆಸ್ಬುಕ್ಕಲ್ಲಿ ಇರುವರು..
http://www.facebook.com/pages/Vasudhendra/185189774885936

ಅವರ ಬಗ್ಗೆ ಪರಿಚಯಾತ್ಮಕ ಬರಹಗಳ ಲಿಂಕ್ ಇಲ್ಲಿವೆ.
http://en.wikipedia.org/wiki/Vasudhendra

http://kannada.oneindia.in/literature/people/2009/0410-vasudhendra-chan…

ಅವರ ಚೇಳು ಕೃತಿಯ ಇಣುಕು ನೋಟ ದಯಪಾಲಿಸಿದ ತಮಗೆ ನನ್ನಿ ..ಕುತೂಹಲ ಹೆಚ್ಚಿಸಿದ ಆ ಕೃತಿಯನ್ನ ಇಡಿಯಾಗಿ ಓದುವ ಹೆಬ್ಬಯಕೆ ಮೂಡಿದೆ...ಸ್ವಪ್ನದಲ್ಲಿ(ಬುಕ್ ಸ್ಟಾಲ್..!!) ಖರೀದಿಸಿ ಶೀಘ್ರ ಓದುವೆ...
ಶುಭವಾಗಲಿ.

\|