ದೊಡ್ಡವರ ದಾರಿ ..........................16

Submitted by Prakash Narasimhaiya on Wed, 12/19/2012 - 16:16

 

 

26  11  2008  ರ ದಿನವನ್ನು ನೆನಸಿಕೊಂಡರೆ ಭಯವಾಗುತ್ತೆ. ಮನಸ್ಸಿಗೆ ಒಂದು ರೀತಿಯ ಹಿಂಸೆಯಾಗುತ್ತೆ. ಅಸಹಾಯಕರ  ಮತ್ತು  ಅಮಾಯಕರ ಮೇಲೆ ತಮ್ಮ ಪೌರುಷ ತೋರಿ, ಗುಂಡಿನ ಸುರಿಮಳೆಗೈದ ಆತಂಕವಾದಿಗಳ ಘೋರ ಕೃತ್ಯದ ಮೇಲೆ ಸಹಿಸಲಾಗದ ಸಿಟ್ಟು ಬರುತ್ತದೆ.  ನಮ್ಮ ಕೈಯಲ್ಲಿ ಏನೂ ಮಾಡಲಾಗದ ಸ್ತಿತಿ ಕಂಡು ಜಿಗುಪ್ಸೆಯೂ ಕಾಡುತ್ತದೆ. ಈ ಪಾಶವೀ ಕೃತ್ಯ ಎಸಗಿ ಕೊನೆಗೆ ಸಿಕ್ಕಿಬಿದ್ದ ಏಕೈಕ ಆತಂಕವಾದಿ 'ಕಸಬ' ನನ್ನು ವಿಚಾರಣೆಗೆ ಒಳಪಡಿಸಿ ಕೋಟ್ಯಾಂತರ ರುಪಾಯಿ ಅವನ ರಕ್ಷಣೆಗೆ   ಖರ್ಚುಮಾಡಿ ನಂತರ ಗಲ್ಲಿಗೆ ಏರಿಸಿದ್ದು ಈಗ ಇತಿಹಾಸವಾಗಿದೆ.

 

ಕಸಬನನ್ನು ಗಲ್ಲಿಗೇರಿಸಿದ ದಿನ ತುಂಬಾ ಜನ ಸಂತೋಷ ಪಟ್ಟರು, ಸಿಹಿ ವಿತರಣೆ ಮಾಡಿದರು, ರಾಜಕಾರಣಿಗಳು ತಮ್ಮ ಪಕ್ಷದ ಸಾಧನೆಯೆಂದು ಕೊಚ್ಚಿಕೊಂದವು, ಪ್ರಚಾರ ಮಾಧ್ಯಮವಂತು ತಲೆಚಿಟ್ಟು ಹಿಡಿಸಿಬಿಟ್ಟವು.  ಪತ್ರಿಕೆಯವರಂತು ಕಸಬನನ್ನು ಹೀರೋ ತರಹ ಬಿಂಬಿಸಿ ಪೂರ್ಣ ಪುಟದ ಲೇಖನ ಮತ್ತು ಫೋಟೋಗಳೊಂದಿಗೆ ಪ್ರಕಟ ಮಾಡಿಬಿಟ್ಟವು.  ಇದರಿಂದ ಆದ ಪ್ರಯೋಜನದ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದೇ ಲೇಸು.  ಏಕೆಂದರೆ ಸಾರ್ವಜನಿಕರ  ಜ್ಞಾಪಕಶಕ್ತಿ ಬಹಳ ಕಡಿಮೆ. ಇಷ್ಟೊಂದು ಪ್ರಚಾರ ನೀಡುವ ಬದಲಿಗೆ,ಈ ಸಮಯದಲ್ಲಿ ಸರಕಾರ ಮಾಡಿದ ಕೆಲಸವನ್ನಾಗಲಿ,   ನೀಡಿದ ಪರಿಹಾರವನ್ನಾಗಲಿ,  ಮೃತರ ಕುಟುಂಬಗಳಿಗೆ  ನೀಡುತ್ತಿರುವ ಸವಲತ್ತನ್ನಾಗಲಿ ಜನತೆಗೆ ತಿಳಿಸುವ ಕೆಲಸ ಮಾಡಿದ್ದರೆ ಹೆಚ್ಚು ಪ್ರಯೋಜನವಾಗುತ್ತಿತ್ತು.  ಆ ಬಗ್ಗೆ ಯಾವೊಂದು ಈ ತನಕ ತಿಳಿದಿಲ್ಲ.

 

ಸರಕಾರ ಮಾಡಲಿ, ಮಾಡದೆ ಹೊಗಲಿ "ಟಾಟ ಸಂಸ್ಥೆ "ಮಾತ್ರ ಆತಂಕವಾದಕ್ಕೆ ಗುರಿಯಾಗಿ ಮೃತರಾದವರ ಕುಟುಂಬಕ್ಕೆ, ಗಾಯಗೊಂಡವರಿಗೆ ಮತ್ತು ಅವರ ಕುಟುಂಬಕ್ಕೆ ನೀಡಿದ ಪರಿಹಾರ, ಸಹಾಯ, ತೋರಿದ ಅನುಕಂಪ ಮಾತ್ರ ಅವಿಸ್ಮರಣೀಯ.  ಶ್ರೀ ರತನ್ ಟಾಟಾರವರು ಎಲ್ಲ ರೀತಿಯ ಪ್ರಶಂಸೆಗೆ ಅರ್ಹರು.  ಭಗವಂತ ಮೆಚ್ಚುವ ಕೆಲಸವನ್ನು ಮಾಡಿ, ಎಲೆಮರೆ ಕಾಯಂತೆ ಇರುವವುದು ಇವರ ದೊಡ್ಡತನವನ್ನು ತೋರಿಸುತ್ತದೆ.  ಕೇವಲ ಶ್ರೀಮಂತರಾದರೆ ಸಾಲದು, ಹೃದಯ ಶ್ರೀಮಂತಿಕೆಯು ಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಣವಿದ್ದರೆ ಸಾಲದು ಅದರ ಸದ್ವಿನಿಯೋಗವು ಆಗಬೇಕು ಎಂಬುದನ್ನು ಸಿದ್ದಮಾಡಿ ತೋರಿಸಿದ್ದಾರೆ.

 

 ಟಾಟ ಸಂಸ್ಥೆ ಕೈಗೊಂಡ ಪರಿಹಾರ ಕಾರ್ಯದ ವರದಿ ಇಲ್ಲಿದೆ.

 

1     ತಾಜ್ ಹೋಟೆಲ್ಲಿನಲ್ಲಿ ದುರ್ಘಟನೆ ನಡೆದ ದಿನ, ಕೇವಲ ಒಂದು ದಿನ ಕೆಲಸ ನಿರ್ವಹಿಸಿದ ದಿನಗೂಲಿ ನೌಕರನಿಂದ ಹಿಡಿದು ಎಲ್ಲ ವರ್ಗದ ನೌಕರರರನ್ನು ಸಂಸ್ತೆಯ ನೌಕರರೆಂದು ಘೋಷಣೆ ಮಾಡಿತು.

2     ತನ್ನ ಸಂಸ್ಥೆಯಲ್ಲಿದ್ದ ನೌಕರರು, ಹತ್ತಿರದಲ್ಲಿದ್ದ ಪಾನ್ ಬೀಡ ಅಂಗಡಿಯವರು, ಪಾವಭಾಜಿ ಅಂಗಡಿಯವರು, ರೈಲ್ವೆ ಸಿಬ್ಬಂದಿಗಳು, ಪೋಲಿಸ್ ಸಿಬ್ಬಂದಿಗಳು ಮತ್ತು ಪಾದಚಾರಿಗಳನ್ನೆಲ್ಲ ಪರಿಹಾರದ ಚೌಕಟ್ಟಿಗೆ ಸೇರಿಸಿಕೊಂಡು ಸೂಕ್ತ ಪರಿಹಾರವನ್ನು ನೀಡಿದರು.

3     ತಾಜ್ ಹೋಟೆಲ್ಲಿನ ನೌಕರರ ಸಂಬಳವನ್ನು ( ಹೋಟೆಲ್ ಮುಚ್ಚಿದ ಸಮಯದಲ್ಲಿ ) ಎಂ ಓ ಮೂಲಕ ಅವರ ಮನೆ ಬಾಗಿಲಿಗೆ ಕಳುಹಿಸಿಕೊಟ್ಟರು.

4     ದಿಗ್ಬ್ರಮೆಗೊಂಡ ಸಿಬ್ಬಂದಿಗಳಿಗೆ, ಹತ್ತಿರದ ನಿವಾಸಿಗಳಿಗೆ  ಮನೋವೈದ್ಯರ ಸಹಯೋಗ ಪಡೆದು ಟಾಟ ಸಮಾಜ ವಿಜ್ಞಾನ ಶಾಸ್ತ್ರ ವಿಭಾಗವು ಸೂಕ್ತ ಸಲಹೆ ಮತ್ತು ಸಾಂತ್ವನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿತು.

5     ದುರ್ಘಟನೆಯಲ್ಲಿ ಮೃತರಾದ ವ್ಯಕ್ತಿಗಳ ಸಂಬಂಧಿಗಳ ಸೌಕರ್ಯಕ್ಕಾಗಿ ಅಗತ್ಯ ಆಹಾರ, ನೀರು ಮತ್ತು ಶೌಚಾಲಯ ಸೌಲಭ್ಯವನ್ನು ಒದಗಿಸಲಾಯಿತು.  ಇಲ್ಲಿ 1600 ಜನ ನೌಕರ ಮತ್ತು ಸಂಬಂಧಿಕರಿಗೆ ಈ ಪ್ರಯೋಜನ ದೊರೆಯಿತು.

6     ಪ್ರತಿ ವ್ಯಕ್ತಿಯ ಕುಟುಂಬದವರ ಕಷ್ಟಗಳನ್ನು ವಿಚಾರಿಸಲು ಮತ್ತು ಸೂಕ್ತ ಪರಿಹಾರವನ್ನು ಸಕಾಲದಲ್ಲಿ ನೀಡಲು, ಒಬ್ಬೊಬ್ಬ ಮೇಲ್ವಿಚಾರಕರನ್ನು ನಿಯುಕ್ತಿ ಮಾಡಲಾಗಿತ್ತು.

7     ಶ್ರೀ ರತನ್ ಟಾಟ ರವರೆ ಸುಮಾರು 80 ಕುಟುಂಬಗಳಿಗೆ ಖುದ್ದು ಭೇಟಿನೀಡಿ ಸಾಂತ್ವನ ಹೇಳಿದರು.

8     ನೌಕರರ ಆಶ್ರಿತರು ಮುಂಬೈಗೆ ಬೇಟಿ ನೀಡಿದ ಸಂಧರ್ಭದಲ್ಲಿ ಅವರಿಗೆ ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಿಗುವಂತೆ ನೋಡಿಕೊಳ್ಳಲಾಯಿತು.  ಅವರೆಲ್ಲರಿಗೂ ಮೂರು ವಾರಗಳವರೆಗೆ  ಪ್ರಸಿಡೆನ್ಸಿ ಹೋಟೆಲ್ನಲ್ಲಿ ಎಲ್ಲಾ  ವ್ಯವಸ್ಥೆ ಮಾಡಲಾಗಿತ್ತು.

9     ಶ್ರೀ  ರತನ್ ಟಾಟ ರವರೆ ಖುದ್ದು ನಿಂತು ಪರಿಹಾರ ಕಾರ್ಯದ  ಮೇಲ್ವಿಚಾರಣೆ ನಡೆಸುತ್ತಿದ್ದರು,  ಮತ್ತೆ ಇನ್ನೇನು ಆಗಬೇಕೆಂದು ಕುಟುಂಬದವರನ್ನು ಮತ್ತು ಆಶ್ರಿತರನ್ನು ಕೇಳುತ್ತಿದ್ದರು.

10   ಕೇವಲ 20  ದಿನಗಳಲ್ಲಿ ಪರಿಹಾರದ ಟ್ರಸ್ಟ್ ಸ್ತಾಪಿಸಿ, ಪರಿಹಾರ ಕಾರ್ಯ ಕೈಗೊಳ್ಳುವಂತೆ ಮಾಡಲಾಯಿತು.

11   ರೈಲ್ವೆ ಸಿಬ್ಬಂದಿಗಳು, ಪೋಲಿಸ್ ಸಿಬ್ಬಂದಿಗಳು ಮತ್ತು ಪಾದಚಾರಿಗಳು ಟಾಟ ಸಮೂಹಕ್ಕೆ ಸೇರದೆ ಇದ್ದರು, ಅವರಿಗೂ ಪರಿಹಾರ ನೀಡುವುದರ ಜೊತೆಗೆ ಪ್ರತಿಯೊಬ್ಬ ಆಶ್ರಿತ ಕುಟುಂಬಕ್ಕೆ 10000 ರುಪಾಯಿಯಂತೆ, ಆರು ತಿಂಗಳ ಕಾಲ ನಿರ್ವಹಣಾ ವೆಚ್ಚವನ್ನು ನೀಡಲಾಯಿತು.

12   ಹತ್ತಿರದ ಅಂಗಡಿಯನ ನಾಲ್ಕು ವರ್ಷದ ಮಗುವಿಗೆ, ದುರ್ಘಟನೆಯಲ್ಲಿ  ನಾಲ್ಕು ಗುಂಡುಗಳು ದೇಹಕ್ಕೆ ಹೊಕ್ಕಿ ಜೀವನ್ಮರಣದಲ್ಲಿ ಆ ಮಗು ನರಳುತ್ತಿದ್ದಾಗ ಲಕ್ಷಾಂತರ ರುಪಾಯಿಗಳನ್ನು ಖರ್ಚುಮಾಡಿದ ಟಾಟ ಸಂಸ್ಥೆ ಆ ಮಗುವನ್ನು ಉಳಿಸಿಕೊಟ್ಟಿತು.

13   ಜೀವನಕ್ಕೆ ಆಧಾರವಾಗಿದ್ದ ತಳ್ಳು ಗಾಡಿಗಳನ್ನು ಕಳೆದುಕೊಂಡಿದ್ದ  ಹತ್ತಿರದ ವ್ಯಾಪಾರಿಗಳಿಗೆ, ಹೊಸದಾದ ತಳ್ಳುವ ಗಾಡಿಗಳನ್ನು ಉಚಿತವಾಗಿ ನೀಡಲಾಯಿತು.

14   ಈ ದುರ್ಘಟನೆಗೆ ಒಳಗಾದ ನೌಕರರ ಕುಟುಂಬದ 46 ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಟಾಟ ಸಂಸ್ಥೆ ಹೊತ್ತುಕೊಂಡಿತು.

15    ಈ ದುರ್ಘಟನೆಯಲ್ಲಿ ಮೃತರಾದವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಶ್ರೀ ರತನ್ ಟಾಟ ಮತ್ತು ಅವರ ಹಿರಿಯ ಸಿಬ್ಬಂದಿವರ್ಗದವರು ಪಾಲ್ಗೊಂಡು ತಮ್ಮ ಸಂತಾಪ ವ್ಯಕ್ತಪಡಿಸಿದರು.  ಈ ಪ್ರಕ್ರಿಯೆ ಸತತ ಮೂರು ದಿನ ನಡೆಯಿತು. ಇದು ಟಾಟ ರವರ ಜೀವನದಲ್ಲಿ ಅತ್ಯಂತ ದುಃಖದ ಕ್ಷಣಗಳು.

16     ಮುವ್ವತೈದು ಲಕ್ಷ ರುಪಾಯಿಯಿಂದ ಹಿಡಿದು ಎಂಬತ್ತೈದು ಲಕ್ಷ ರುಪಾಯಿಯವರೆಗೆ ಪರಿಹಾರವನ್ನು ಮೃತರ ಪ್ರತಿ ಕುಟುಂಬಕ್ಕೆ ಅವರವರ ಹುದ್ದೆಗೆ ಅನುಸಾರ ನೀಡಲಾಯಿತು.  ಜೊತೆಗೆ ಈ ಕೆಳಗಿನ ಸವಲತ್ತನ್ನು ಅವರ ಕುಟುಂಬಕ್ಕೆ ನೀಡಲಾಗಿದೆ.

          1.   ನೌಕರ ಕೊನೆಯ ತಿಂಗಳು ಪಡೆದ ಸಂಬಳದ ಮೊತ್ತವನ್ನು ನೌಕರನ ಪತ್ನಿ ಅಥವಾ ಆಶ್ರಿತರಿಗೆ ಬದುಕಿರುವವರೆಗೆ ನೀಡಲಾಗುತ್ತದೆ.

             2.   ಮಕ್ಕಳ ಮತ್ತು ಅವಲಂಬಿತರ ವಿದ್ಯಾಭ್ಯಾಸ ಪ್ರಪಂಚದಲ್ಲಿ  ಎಲ್ಲೇ ಮಾಡಿದರು ಟಾಟ ಸಂಸ್ಥೆ ಸಂಪೂರ್ಣ ಖರ್ಚನ್ನು ಭರಿಸುತ್ತದೆ.

            3.   ಮೃತರ ಪತ್ನಿ ಮತ್ತು ಆಶ್ರಿತರ ವೈದ್ಯಕೀಯ ಸೌಲಭ್ಯವನ್ನು ಉಚಿತವಾಗಿ ಉಳಿದ ಜೀವಮಾನದವರೆಗೆ  ಟಾಟ ಸಂಸ್ಥೆ  ನೋಡಿಕೊಳ್ಳುತ್ತದೆ.

              4.    ನೌಕರಿಯಲ್ಲಿದ್ದಾಗ ಪಡೆದ ಎಲ್ಲಾ ಬಗೆಯ ಸಾಲವನ್ನು ಸಂಸ್ತೆ ಮನ್ನಾ  ಮಾಡಿದೆ.

              5.    ಹೆಚ್ಚಿನ ಸೂಕ್ತ ಸಲಹೆ ಏನಾದರು ಬೇಕಾದಲ್ಲಿ ಉಚಿತವಾಗಿ ಸಂಸ್ತೆ ನೀಡುತ್ತದೆ.

 

ಇಷ್ಟೆಲ್ಲಾ ವ್ಯವಸ್ತೆಯನ್ನು ಅಚ್ಚುಕಟ್ಟಾಗಿ ಯಾವ ನಿರೀಕ್ಷೆಯು ಇಲ್ಲದೆ  ನಿಷ್ಕಲ್ಮಶ ಭಾವದಿಂದ ಭಗವಂತನ ಸೇವೆಯೆಂದು ಮಾಡಿ ಎಲ್ಲಾ ಪ್ರಚಾರದಿಂದ ದೂರ ಉಳಿದ ಶ್ರೀ ರತನ್ ಟಾಟ ಮತ್ತು ಅವರ ಸಿಬ್ಬಂದಿಗಳ ಸೇವೆ ಅವಿಸ್ಮರಣೀಯವಲ್ಲವೇ?  ಇಂತಹ ದೊಡ್ಡವರ ದಾರಿ ನಮಗೆ ಆದರ್ಶವಲ್ಲವೇ?

 

ಚಿತ್ರ ಮತ್ತು ಲೇಖನ: ಇಂಟರ್ನೆಟ್ 

 

ಲೇಖನ ವರ್ಗ (Category)