'ಸಿನೆಮಾ' ಕಥೆ , ಭಾಗ- 8

'ಸಿನೆಮಾ' ಕಥೆ , ಭಾಗ- 8

ಚಿತ್ರ

         ರಕ್ಷಣಾ ನಿಧಿಯ ಸಹಾಯಾರ್ಥ ಸಿನೆಮಾ ಪ್ರದರ್ಶನದ ದಿನ ಸಮೀಪಿಸುತ್ತಿರುವಂತೆ ನಮ್ಮಲ್ಲಿ ಆತಂಕ ಮನೆ ಮಾಡಿತ್ತು. ನಮ್ಮೆಲ್ಲರಲ್ಲೂ ಒದು ರೀತಿಯ ಆತಂಕ ಮನೆಮಾಡಿತ್ತು. ಮನಗಳಲ್ಲಿ ನಮ್ಮ ಪರವಾಗಿ ಒತ್ತಾಯ ತೀವ್ರ ವಾಗುತ್ತ ಬರತೊಡಗಿತ್ತು. ಈ ಒತ್ತಾಯದ ಪರಿಣಾಮವಾಗಿ ನಮ್ಮ ಮನೆಗಳಲ್ಲಿ ಹಿರಿಯರು ಒಂದು ಸಂಧಾನಕ್ಕೆ ಬಂದರು. ದೇಶಭಕ್ತಿಯನ್ನು ಬಿಂಬಿಸುವ ಚಲನಚಿತ್ರವಾದರೆ ನೋಡಿ, ಇಲ್ಲವಾದರೆ ರಕ್ಷಣಾನಿಧಿಯ ಹಣ ಕೊಟ್ಟು ವಾಪಸ್ ಊರಿಗೆ ಬಂದುಬಿಡಿ ಎಂದು ಖಡಾ ಖಂಡಿತ ಅಭಿಪ್ರಾಯ ಬಂತು. ಅದು ದೇಶ ಭಕ್ತಿಯನ್ನು ಬಿಂಬಿಸುವ ಚಿತ್ರವೇ ಆಗಲಿ ಇಲ್ಲ ಬೇರೆ ಯಾವುದೆ ಚಿತ್ರವಾಗಲಿ ಅದನ್ನು ನೋಡಿಯೆ ಶತಸಿದ್ಧ ಎನ್ನುವ ತೀರ್ಮಾನಕ್ಕೆ ಬಹುತೇಕರು ಬಂದಾಗಿತ್ತು. ಇದರ ಜವಾಬ್ದಾರಿಯನ್ನು ಹೊರಲು ಒಬ್ಬ ಬಲಿಪಶು ಬೇಕಿತ್ತು ಸುಲಭಧ ಆಯ್ಕೆ ನಾನಾಗಿದ್ದೆ ಅದರ ಜವಾಬ್ದಾರಿಯನ್ನು ನನ್ನ ತಲೆಗೆ ಕಟ್ಟಿದರು. ಆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಬಹಳ ಪ್ರಯತ್ನ ಪಟ್ಟೆ ಆದರೆ ತಪ್ಪಿಸಿಕೊಳ್ಳಲು ಆಗಲಿಲ್ಲ, ಅನೇಕರದು ಒಕ್ಕೊರಲಿನ ಒಂದೇ ಮಾತು ಸ್ನೇಹಿತರಿಗಾಗಿ ಇಷ್ಟೂ ಮಾಡಲು ಆಗುವುದಿಲ್ಲವೇನೋ? ನನಗೆ ಧರ್ಮಸಂಕಟ ಎದುರಾಯಿತು. ನನ್ನ ಮೌನವನ್ನೆ ಅವರು ಒಪ್ಪಿಗೆಯೆಂದು ಭಾವಿಸಿ ಶಿವಣ್ಣನ ತಂದೆಯೆದುರು ನನ್ನನ್ನು ಒಯ್ದು ನಿಲ್ಲಿಸಿದರು. ಅವರ ವಿಬಂಧನೆಗಳಿಗೆ ಒಪ್ಪಿ ಅವರ ಮನೆಯಿಂದ ಹೊರಗೆ ಬಂದೆ. ಎಲ್ಲರೂ ಹರ್ಷಚಿತ್ತರಾಗಿದ್ದರು. ಆದರೆ ಒಂದು ಚಿಂತೆ ನನ್ನನ್ನು ಪ್ರಬಲವಾಗಿ ಕಾಡ ತೊಡಗಿತು. ದೇಶ ಭಕ್ತಿಯನ್ನುಬಿಂಬಿಸುವ 'ಹಕೀಕತ್' ಚಿತ್ರದ ಪ್ರದರ್ಶನವಾದರೆ ಸರಿ, ಇದಲ್ಲದೆ ಬೇರೆಯದೆ ಚಲನಚಿತ್ರ ಪ್ರದರ್ಶನ ಗೊಂಡರೆ ಈ ಚಂಡಾಳ ಚೌಕಳಿ ಜನರನ್ನು ನಿಭಾಯಿಸುವುದು ಹೇಗೆ ಎನ್ನುವ ಯೋಚನೆ ನನ್ನನ್ನು ಕಾಡ ತೊಡಗಿತು.

       ಅಂತೂ ಆ ಪರೀಕ್ಷಾ ದಿನ ಹತ್ತಿರ ಬಂದೇ ಬಿಟ್ಟಿತು. ಹೈಸ್ಕೂಲು ಮಕ್ಕಳಿಗಾಗಿ ದೇಶದ ರಕ್ಷಣಾ ನಿಧಿಗಾಗಿ ವಿಶೇಷ ಪ್ರದರ್ಶನ ಎಂಬ ಜಾಹೀರಾತಿನ ಬೋಡರ್ು ಟಾಕೀಸಿನ ಗೇಟೊಂದರ ಬಳಿ ತೂಗಾಡುತ್ತಿತ್ತು ಎಲ್ಲ ವಿದ್ಯಾರ್ಥಿಗಳು ಹರ್ಷಚಿತ್ತ ರಾಗಿದ್ದರು. ಆದರೆ ಟಾಕೀಸಿನ ಮುಂದೆ ನಿಲ್ಲಿಸಿದ್ದ ಬೋರ್ಡಮೇಲೆ 'ಹಕೀಕತ್' ಚಿತ್ರದ ಪೋಸ್ಟರ್ ಇರಲಿಲ್ಲ. 'ತೆರೆ ಘರಕೆ ಸಾಮನೆ' ಚಿತ್ರದ ಪೋಸ್ಟರಿನಲ್ಲಿದ್ದ ದೇವ ಆನಂದ ನೂತನರ ಪೋಸ್ಟರ್ ನನ್ನನ್ನು ನೋಡಿ ನಗುತ್ತಿತ್ತು. ಆದರೆ ಅಳುವ ಸರದಿ ನನ್ನದಾಗಿತ್ತು. ಯಾಕೆಂದರೆ ದೇಶ ಭಕ್ತಿ ಬಿಂಬಿಸುವ ಚಿತ್ರವಾದರೆ ಹೋಗುತ್ತೇವೆ ಇಲ್ಲವಾದರೆ ಮರಳಿ ಬರುತ್ತೇವೆ ಎಂದು ಶಿವಣ್ಣನ ತಂದೆಯ ಮುಂದೆ ಎಲ್ಲ ಸೇರಿ ನನ್ನಿಂದ ವಾಗ್ದಾನ ಮಾಡಿಸಿದ್ದರು. ಈಗ ನೋಡಿದರೆ ಪರಿಸ್ಥಿತಿ ಉಲ್ಟಾ. ನಾನು ಶಿವಣ್ಣನನ್ನು ಕರೆದು ರಕ್ಷಣಾನಿಧಿ ಹಣವನ್ನು ಗುರುಗಳ ಕೈಗೆ ಕೊಟ್ಟು ವಾಪಸ್ ಊರಿಗೆ ಹೋಗೋಣ ಬಾ ಎಂದು ಕರೆದೆ. ಆತ ಮುಖ ಸಪ್ಪಗೆ ಮಾಡಿದ. ಆದರೆ ನಾನೇನೂ ಮಾಡು ವಂತಿರಲಿಲ್ಲ. ನಾನು ಕಠಿಣ ನಿಲುವು ತಳೆಯದೆ ಹೋದರೆ ಶಿವಣ್ಣನ ತಂದೆಯ ಎದುರು ಹೋಗಿ ನಿಲ್ಲುವುದು ಹೇಗೆ ಎನ್ನುವುದು ನನ್ನ ಆತಂಕವಾಗಿತ್ತು. ಅದನ್ನು ನನ್ನ ಸ್ನೇಹಿತರಿಗೆ ತಿಳಿಸಿದೆ ಕೂಡ. ಅವರಾಗಲೆ ಸಿನೆಮಾ ಯಾವುದೇ ಆಗಿರಲಿ ನೋಡಿಕೊಂಡೆ ಹೋಗುವುದು ಎಂಬ ತೀರ್ಮಾನಕ್ಕೆ ಬಂದಾಗಿತ್ತು ಎನಿಸುತ್ತದೆ. ನನ್ನನ್ನು ನಾನಾ ರೀತಿ ಯಲ್ಲಿ ಪುಸಲಾಯಿಸಲು ನೋಡಿದರು. ವೈಯಕ್ತಿಕವಾಗಿ ಅವರ ನಿಲುವು ಅವರ ದೃಷ್ಟಿಯಲ್ಲಿ ಸರಿಯಿದ್ದಿರಬಹುದು, ಆದರೆ ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ, ಹೀಗಾಗಿ ನನ್ನ ನಿಲುವಿನಲ್ಲಿ ಯವುದೇ ಬದಲಾವಣೆಯಿರಲಿಲ್ಲ. ನನ್ನನ್ನು ಧರ್ಮ ಸಂಕಟಕ್ಕೆ ಸಿಲುಕಿಸಿ ಏನೂ ಆಗದಂತೆ ನಿರಾಳವಾಗಿ ತಮಗೆ ಅನುಕೂಲಸಿಂಧು ರೀತಿಯಲ್ಲಿ ಮಾತನಾಡುತ್ತಿದ್ದ ಅವರ ಮೇಲೆ ನನಗೆ ನಿಜಕ್ಕೂ ಸಿಟ್ಟು ಬಂದಿತ್ತು. ನನ್ನ ಒಂದು ಇಶಾರೆಗಾಗಿ ಅವರೆಲ್ಲ ಕಾದು ನಿಂತಿದ್ದರು. ಅಷ್ಟರಲ್ಲಿ ನಮ್ಮ ಸ್ನೇಹಿರಲ್ಲೊಬ್ಬನಾದ ಗುರುಮೂರ್ತಿ ಹೋಗಿ ಈ ವಿಷಯವನ್ನು ನಮ್ಮ ತರಗತಿಯ ಗುರುಗಳಾಗಿದ್ದ ಶೀರೂರು ಮಾಸ್ತರರಿಗೆ ತಿಳಿಸಿ ಬಂದ. ಅವರು ಬಂದು ವಿಷಯ ತಿಳಿದು ನಿಮ್ಮ ಹಿರಿಯರು ಯಾರಾದರೂ ಬಂದು ಕೇಳಿದರೆ ಅವರಿಗೆ ನಾನು ಹೇಳುವೆ. ನಿಮ್ಮ ನಿಮ್ಮ ರಕ್ಷಣಾ ನಿಧಿಯ ಮೊತ್ತವನ್ನು ಕ್ಲಾಸ್ ಮಾನೀಟರ್ ಹತ್ತಿರ ಕೊಟ್ಟು ಟಾಕೀಸ್ ಒಳಗೆ ಹೋಗಿ ಎಂದರು. ಕ್ಲಾಸ್ ಟೀಚರ್ ಹೇಳಿದ ಮಾತಿಗೆ ಗೆಲುವಾದ ನನ್ನ ಸ್ನೇಹಿತರು ಸಿನೆಮಾ ವೀಕ್ಷಿಸಿ ಬಿಡುವ ನಿರ್ಧಾರಕ್ಕೆ ಬಂದಾಗಿತ್ತು, ಅವರನ್ನು ತಡೆಯವಂತಿರಲಿಲ್ಲ. ನಾನು ಮಾತ್ರ ಒಳಗೆ ಹೋಗದೆ ರಕ್ಷಣಾನಿಧಿ ಮೊತ್ತವನ್ನು ಮಾನಿಟರ್ ಚಂದನಗೌಡರ ಕಡೆಗೆ ಕೊಟ್ಟು ಹೊರ ನಿಂತೆ, ನನ್ನ ಬರುವಿಕೆಗಾಗಿ ಶಿವಣ್ಣ ಕಾದು ನಿಂತ, ನನಗೆ ಯೋಚನೆಗಿಟ್ಟು ಕೊಂಡಿತು. 'ನಿಜಕ್ಕೂ ನನಗೆ ಶಿವಣ್ಣನ ಮೇಲೆ ಸಿಟ್ಟಿರಲಿಲ್ಲ. ಆತ ಏನೊಂದೂ ಕಪಟವರಿಯದ ಹಳ್ಳಿಗಾಡಿನ ಮುಗ್ಧ. ನನ್ನ ಅಸಮಾಧಾನವಿದ್ದುದು ತಮ್ಮ ಸಿನೆಮಾ ನೋಡುವ ಆಶೆಗೆ ನನ್ನನ್ನು ಗುರಾಣಿಯಾಗಿ ಮಾಡಿಕೊಂಡ ಆ ನನ್ನ ಉಳಿದ ಚಾಲಾಕಿ ಸ್ನೇಹಿತರ ಬಗ್ಗೆ.

     ಅದಕ್ಕೆ ನಾನು ಶಿವಣ್ಣನಿಗೆ ' ನೋಡು ಶಿವಣ್ಣ ನಿನಗೆ ಸಿನೆಮಾ ನೋಡುವ ಇಚ್ಛೆಯಿದ್ದರೆ ಹೋಗು ನನ್ನದೇನೂ ಅಭ್ಯಂತರವಿಲ್ಲ ' ಎಂದು ಹೇಳಿದೆ.

     ' ನೀನು ಬರದೆ ಹೋದರೆ ನಾನೂ ಹೋಗುವುದಿಲ್ಲ ' ಎಂದು ನನ್ನ ಜೊತೆಗೆ ನಿಂತುಕೊಂಡ.

     ಟೆಂಟ್ ಸಿನೆಮಾ ಟಾಕೀಸಿನ ಕೊನೆಯ ಗೀತೆ ' ಜಯ ಭಾರತ ಜನನಿಯ ತನುಜಾತೆ ' ಸ್ಪೀಕರ್ ನಲ್ಲಿ ಬಿತ್ತರ ಗೊಳ್ಳಲು ಪ್ರಾರಂಭಿಸಿತು. ನಮ್ಮನ್ನೆ ಗಮನಿಸುತ್ತಿದ್ದ ಗುರುಮೂರ್ತಿ ಮತ್ತೆ ನಮ್ಮ ಕ್ಲಾಸ್ ಟೀಚರ್ ಶೀರೂರ್ ಮಾಸ್ತರ ರಲ್ಲಿಗೆ ಹೋಗಿ ನನ್ನ ಬಗೆಗೆ ದೂರು ಹೇಳಿದನೆಂದು ಕಾಣುತ್ತದೆ. ಅವರು ಹೊರ ಬಂದು ನಮ್ಮ ಬೆನ್ನು ಸವರಿ ನಿಮ್ಮ ಮನೆಗಳಲ್ಲಿ ಹಿರಿಯರೇನದರೂ ಬೈದರೆ ಅವರಿಗೆ ನಾನು ಹೇಳುತ್ತೇನೆ ಎಂದು ನಮ್ಮಿಬ್ಬರನ್ನು ಬಲವಂತವಾಙಗಿ ಟಾಕೀಸಿನ ಒಳಗೆ ಕಳಿಸಿ ಸ್ವಲ್ಪಹೊತ್ತು ಗೇಟ್ ಬಳಿ ನಿಂತರು. ಆದರೂ ಅಳುಕು ನನ್ನನ್ನು ಕಾಡುತ್ತಿತ್ತು. ಕ್ಯಾಬಿನ್ನಿನ ಹೊರಗೆ ಬಿತ್ತರಗೊಳ್ಳುತ್ತಿದ್ದ ಹಾಡು ಒಳಗೆ ಸಿನೆಮಾ ಪರದೆಯ ಹಿಂದಕ್ಕೆ ಕೇಳತೊಡಗಿತು. ಆ ಹಾಡು ಕೊನೆಗೊಳ್ಳು ತ್ತಿದ್ದಂತೆ 'ಇಂಡಿಯನ್ ನ್ಯೂಸ್' ಪ್ರಾರಂಭವಾಗಿ ಮುಗಿದು 'ತೆರೆ ಘರಕೆ ಸಾಮನೆ' ಚಿತ್ರದ ಪ್ರದರ್ಶನ ಪ್ರಾರಂಭ ವಾಯಿತು. ದೇವ ಆನಂದನ ಸ್ಟೈಲ್, ನೂತನಳ ಸ್ನಿಗ್ಧ ಸೌಂದರ್ಯ, ಮಿಗಿಲಾಗಿ ಅವರ ಪಾತ್ರವರಿತ ಅಭಿನಯ, ಬರ್ಮನ್ ಅವರ ಮಧುರ ಸಂಗೀತದ ಮೋಡಿ, ಸುಂದರ ಹೊರಾಂಗಣ ದೃಶ್ಯಗಳು ರಫಿ ಲತಾರ ಮದುರ ಗಾಯನ ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿಟ್ಟಿದ್ದವು. ನಿಜಕ್ಕೂ ಚಿತ್ರ ನಮ್ಮೆಲ್ಲರನ್ನು ಮುದಗೊಳಿಸಿತ್ತು. ಚಿತ್ರ ಮುಗಿದು ಟಾಕೀಸಿನ ದೀಪಗಳು ಬೆಳಗಿದಾಗ ಮತ್ತೆ ವಾಸ್ತವ ನನ್ನೆದುರು ಧುತ್ತೆಂದು ನಿಂತಿತ್ತು. ದಾಸಪ್ಪನ ಗಾಡಿ ಲೇಟ್ ಆಗಿದ್ದು ನಮಗೆ ಊರಿಗೆ ಮರಳಲು ಅನುಕೂಲವಾಯಿತು. ಸಿನೆಮಾದ ಮಾಯಾ ಲೋಕದಿಂದ ಹೊರ ಬಂದಿದ್ದೆವು. ಸಿನೆಮಾದ ಕುರಿತು ಶಿವಣ್ಣನ ತಂದೆಗೆ ಏನೆಂದು ಹೇಳುವುದು, ಅಂತಸ್ಸಾಕ್ಷಿ ಕಾಡ ತೊಡಗಿತು. ಕ್ಲಾಸ ಟೀಚರ್ ನನ್ನನ್ನು ಒಳಗೆ ಕಳಿಸಿದ್ದರೂ ನಂತರದಲ್ಲಿಯಾದರೂ ನಾನು ಹೊರಗೆ ಬರೆಬೇಕಿತ್ತು. ಹಾಗೆ ಮಾಡಿದ್ದರೆ ಈ ದ್ವಂದ್ವ ನನ್ನನ್ನು ಕಾಡುತ್ತಿರಲಿಲ್ಲ.ಸಿನೆಮಾದ ರಸಗಳಿಗೆಯ ಆಸ್ವಾದನೆಯ ಚರ್ಚೆಯಲ್ಲಿ ಸ್ನೇಹಿತರು ಮುಳುಗಿದ್ದರು. ಅವರ ಚರ್ಚೆಯಲ್ಲಿ ಪಾಲ್ಗೊಳ್ಳುವುದು ನನ್ನಿಂದ ಆಗಲಿಲ್ಲ. ಗಾಡಿಯಿಂದಿಳಿದು ನಾವೆಲ್ಲ ನಮ್ಮ ನಮ್ಮ ಮನೆಗಳಿಗೆ ತೆರಳಿದೆವು. ಶಿವಣ್ಣನ ತಂದೆಗೆ ಮುಖ ತೋತರಿಸುವುದು ಹೇಗೆ ಎಂಬ ಆತಂಕ ನನ್ನನ್ನು ಕಾಡ ತೊಡಗಿತು. ಸುಳ್ಳು ಹೇಳಿದರೆ ಅವರನ್ನು ಭೇಟಿ ಮಾಡಿದಾಗಲೆಲ್ಲ ಅಪರಾಧಿ ಪ್ರಜ್ಞೆ ನನ್ನನ್ನು ಕಾಡ ತೊಡಗುತ್ತದೆ. ಇದಕ್ಕೊಂದು ಪರಿಹಾರ ವೆಂದರೆ ನಿಜವನ್ನು ಅವರ ಮುಂದೆ ಹೇಳಿ ಹಗುರಾಗುವುದು, ನನಗೆ ಇದೆ ಸರಿಯಾದ ಯೋಚನೆ ಎನಿಸಿತು. ಮನಸ್ಸು ನಿರುಮ್ಮಳವಾಗಿ ದೀರ್ಘ ನಿದ್ರೆಗೆ ಜಾರಿದೆ.

     ಮಾರನೆ ದಿನ ಬೆಳಿಗ್ಗೆ ಉಲ್ಲಾಸಕರ ನಿದ್ರೆಯಿಂದ ಎಚ್ಚರವಾಯಿತು. ಹಕ್ಕಿಗಳ ಕಲರವ ಕೇಳಿ ಹೊರಬಂದೆ, ಗ್ರಾಮ ತನ್ನ ದೈನಂದಿನ ಬದುಕಿಗೆ ತೆರೆದು ಕೊಂಡಿತ್ತು. ಮೂಡಣದಲ್ಲಿ ಸೂರ್ಯ ಹೊಂಬಣ್ಣದ ಮೋಡಗಳ ಹಿನ್ನೆಲೆಯಿಂದ ಮೇಲೇರುತ್ತಿದ್ದ. ದೈನಂದಿನ ಕೆಲಸ ಕಾರ್ಯಗಳನ್ನು ಪೂರೈಸಿ ಹೈಸ್ಕೂಲಿಗೆ ಹೊರಡಲು ತಯಾರಾಗಿ ನಿಂತೆ.

     ನನ್ನನ್ನು ಗಮನಿಸಿದ ಅಮ್ಮ ' ಏನೋ ! ಗಾಡಿ ಬರಲು ಇನ್ನೂ ಒಂದು ಗಂಟೆಯಿದೆ ಏನಿಷ್ಟು ಅವಸರ ' ಎಂದರು.

     ' ಶಿವಣ್ಣನ ಮನೆಗೆ ಹೋಗಿ ಹೋಗಬೇಕು ' ಎಂದು ಹೇಳಿದವನೆ ಅಂಗಳ ದಾಟಿ ಬೀದಿಗೆ ಇಳಿದೆ. ಸ್ವಲ್ಪ ದೂರ ನೇರಕ್ಕೆ ಸಾಗಿ ಎಡಕ್ಕೆ ತಿರುಗಿ ಶಿವಣ್ಣನ ಮನೆ ದಾರಿ ಹಿಡಿದೆ.

     ಶಿವಣ್ಣನ ಮನೆ ತಲುಪಿ ಪಡಸಾಲೆಯಲ್ಲಿ ಇರಿಸಿದ್ದ ಬೆಂಚ್ ಮೇಲೆ ಕುಳಿತೆ. ಶಿವಪೂಜೆ ಮುಗಿಸಿ ಗಂಟೆ ಬಾರಿಸುತ್ತ ಮಂಗಳಾರತಿಯನ್ನು ದೇವರ ಪಟಗಳಿಗೆ ಬೆಳಗುತ್ತ ಹೊರ ಬಂದ ಶಿವಣ್ಣನ ತಂದೆಯನ್ನು ನೋಡಿ ನಾನು ಎದ್ದು ನಿಂತೆ. ನಾನು ಎದ್ದು ನಿಂತುದನ್ನು ಗಮನಿಸಿದ ಅವರು ಕುಳಿತು ಕೊಳ್ಳುವಂತೆ ಸನ್ನೆ ಮಾಡಿದರು. ನಾನು ಪುನಃ ಕುಳಿತುಕೊಂಡೆ. ಒಳಗೆ ಹೋದ ಅವರು ಕೆಲ ಸಮಯದ ನಂತರ ಒಳಂಗಿಯನ್ನೇರಿಸಿ ಕೊಳ್ಳುತ್ತ ಹೊರ ನಡೆದು ಬಂದರು. ನಾನು ಮತ್ತೆ ಎದ್ದು ನಿಲ್ಲುವ ಪ್ರಯತ್ನ ಮಾಡಿದೆ. ಕುಳಿತು ಕೊಳ್ಳುವಂತೆ ಮತ್ತ ಕೈಸನ್ನೆ ಮಾಡಿದರು. ಕುಳಿತು ಕೊಂಡೆ ಆತಂಕ ನನ್ನನ್ನು ಮತ್ತೆ ಕಾಡ ತೊಡಗಿತು.

     ' ಏನು ಸಿನೆಮಾ ಚೆನ್ನಾಗಿತ್ತಾ ' ಎಂಬ ಪ್ರಶ್ನೆ ಅವರಿಂದ ತೂರಿ ಬಂತು. ತಲೆ ತಗ್ಗಿಸಿ ಕುಳಿತುಕೊಂಡೆ. ಏನೆಂದು ಉತ್ತರಿಸುವುದು, ಧರ್ಮ ಸಂಕಟ ನನಗೆ ಎದುರಾಗಿತ್ತು. ಕಣ್ಣುಗಳು ತುಂಬಿ ಬಂದವು.

     'ಏನಾಯಿತು 'ಎಂಬ ಪ್ರಶ್ನೆ ಅವರಿಂದ ತೂರಿ ಬಂತು, ಅವರ ಧ್ವನಿಯಲ್ಲಿ ಮಾರ್ದವತೆಯಿತ್ತು. ನಾನು ಎಲ್ಲ ಘಟನೆಯನ್ನು ಸವಿಸ್ತಾರವಾಗಿ ವಿವರಿಸಿ ಶಿವಣ್ಣನನ್ನು ಬಯ್ಯಬೇಡಿ ಎಂದು ವಿನಂತಿಸಿ ಕೊಂಡೆ. ನನ್ನ ಮೈದಡವಿದ ಅವರು

     ' ನೀವು ನನಗೆ ಆಶ್ವಾಸನೆ ನೀಡಿ ಅದಕ್ಕೆ ತಪ್ಪಿ ಆ ಸಿನೆಮಾ ನೋಡಿದ ಬಗ್ಗೆ ನನಗೆ ಬೇಸರವಿದೆ, ಆದರೆ ನೀನು ಮನೆಗೆ ಬಂದು ಸತ್ಯ ಸಂಗತಿ ಹೇಳಿದೆಯಲ್ಲ ಅದು ನನಗೆ ಬಹಳ ಸಂತಸ ನೀಡಿದೆ, ಇದೇ ವಿಷಯವನ್ನು ಶಿವಣ್ಣ ನನಗೆ ಹೇಳಿದ್ದರೆ ನನಗೆ ಸಂತಸವಾಗುತ್ತಿತ್ತು. ಇರಲಿ ನಾನು ಆತನಿಗೆ ಏನೂ ಹೇಳುವುದಿಲ್ಲ ' ಎಂದು ಪುನಃ ನನ್ನ ಮೈದಡವಿ ಒಳಗೆ ಹೋದರು.

     ' ಶಿವಣ್ಣ ನಿನ್ನ ಸ್ನೇಹಿತ ಬಂದಿದ್ದಾನೆ ನೋಡು ' ಎಂದರು. ನಮ್ಮಿಬ್ಬರ ಮಾತು ಕೇಳಿಸಿ ಕೊಂಡಿದ್ದೆ ಶಿವಣ್ಣನ ಮುಖ ಸಣ್ಣದಾಗಿತ್ತು. ಅವನಿಗೆ ಬೇಸರವಾಗಿದೆ ಎಂದು ನನಗನಿಸಿತು. ಆತನಿಗೆ ಆ ವಿಷಯ ತಿಳಿಸಿದೆ. ಇಬ್ಬರೂ ಮೌನವಾಗಿ ರೈಲು ನಿಲ್ದಾಣದೆಡೆಗೆ ಸಾಗಿ ಬಂದೆವು. ಗಾಡಿ ಬರಲು ಇನ್ನೂ ಹದಿನೈದು ನಿಮಿಷ ಗಳಿದ್ದವು. ಅಲ್ಲಿಯೆ ದೂರದಲ್ಲಿದ್ದ ಒಂದು ಸಿಮೆಂಟ್ ಒರಗು ಬೆಂಚಿನ ಮೇಲೆ ಕುಳಿತು ಕೊಂಡೆವು.

                                                                     (ಮುಂದುವರಿಯುವುದು)

Rating
No votes yet

Comments

Submitted by ಮಮತಾ ಕಾಪು Tue, 12/25/2012 - 14:51

ನೀವು ನನಗೆ ಆಶ್ವಾಸನೆ ನೀಡಿ ಅದಕ್ಕೆ ತಪ್ಪಿ ಆ ಸಿನೆಮಾ ನೋಡಿದ ಬಗ್ಗೆ ನನಗೆ ಬೇಸರವಿದೆ, ಆದರೆ ನೀನು ಮನೆಗೆ ಬಂದು ಸತ್ಯ ಸಂಗತಿ ಹೇಳಿದೆಯಲ್ಲ ಅದು ನನಗೆ ಬಹಳ ಸಂತಸ ನೀಡಿದೆ, ಇದೇ ವಿಷಯವನ್ನು ಶಿವಣ್ಣ ನನಗೆ ಹೇಳಿದ್ದರೆ ನನಗೆ ಸಂತಸವಾಗುತ್ತಿತ್ತು. ಸತ್ಯ ಎಲ್ಲರನ್ನೂ ಗೌರವಿಸುತ್ತದೆ. ಉತ್ತಮ ನಿರೂಪಣೆ. ಧನ್ಯವಾದಗಳು.

Submitted by partha1059 Tue, 12/25/2012 - 19:05

ಸಿನಿಮಾಕತೆ ಬಾಗ-೮ .. ಪಾಟೀಲರೆ ವಂದನೆಗಳು
ನೀವು ನನಗೆ ಆಶ್ವಾಸನೆ ನೀಡಿ ಅದಕ್ಕೆ ತಪ್ಪಿ ಆ ಸಿನೆಮಾ ನೋಡಿದ ಬಗ್ಗೆ ನನಗೆ ಬೇಸರವಿದೆ, ಆದರೆ ನೀನು ಮನೆಗೆ ಬಂದು ಸತ್ಯ ಸಂಗತಿ ಹೇಳಿದೆಯಲ್ಲ ಅದು ನನಗೆ ಬಹಳ ಸಂತಸ ನೀಡಿದೆ, ಇದೇ ವಿಷಯವನ್ನು ಶಿವಣ್ಣ ನನಗೆ ಹೇಳಿದ್ದರೆ ನನಗೆ ಸಂತಸವಾಗುತ್ತಿತ್ತು. ಇರಲಿ ನಾನು ಆತನಿಗೆ ಏನೂ ಹೇಳುವುದಿಲ್ಲ ' ಎಂದು ಪುನಃ ನನ್ನ ಮೈದಡವಿ ಒಳಗೆ ಹೋದರು.
ಮಮತಾರವರು ಹೇಳಿದಂತೆ ಅತಿ ಉತ್ತಮ ನುಡಿಗಳು ಇವು, ನಿಮ್ಮ ಸತ್ಯ ಸಂದತೆ ತೋರಿದಂತೆ ಆ ಹಿರಿಯರ, ಹಿರಿ ಮನಸ್ಸು ಸಹ ಕಾಣುತ್ತಿದೆ.