"ಸಿನೆಮಾ".(.ಕಥೆ)......ಭಾಗ....9

"ಸಿನೆಮಾ".(.ಕಥೆ)......ಭಾಗ....9

ಚಿತ್ರ

                     
                


ಗಾಡಿ ಬಂತು ಇಬ್ಬರೂ ಮಾತುಕತೆಯಿಲ್ಲದೆ ಗಾಡಿಯನ್ನು ಏರಿದರು. ಎಂದಿನಂತೆ ಮತ್ತೆ ರೈಲು ಪ್ರಯಾಣ ವಿದ್ಯಾಭ್ಯಾಸ ಎಲ್ಲವೂ ನಡೆದವು. ಆದರೆ ಆ ಘಟನೆ ಮಾದೇವ ಮತ್ತು ಶಿವಣ್ಣರಲ್ಲಿಯ ಅನ್ಯೋನ್ಯತೆಯನ್ನು ಕಡಿಮೆ ಮಾಡಿತು. ಆ ಒಂದು ಅಂತರ ಹಾಗೆಯೆ ಮುಂದುವರಿದುಕೊಂಡು ಹೋಯಿತು.


          ಡಿಸೆಂಬರ್ನಲ್ಲಿ ಆಸಕ್ತ ಸೈನ್ಸ್ ಕ್ಲಬ್ಬಿನ ಆಯ್ದ ವಿದ್ಯಾರ್ಥಿಗಳನ್ನು ಧಾರವಾಡಕ್ಕೆ ಪ್ರವಾಸಕ್ಕಾಗಿ ಕರೆದೊಯ್ದರು. ಆ ತಂಡದಲ್ಲಿ ಮಾದೇವ ಶಿವಣ್ಣ ಮತ್ತು ಇನ್ನುಳಿದ ಅವರ ಸ್ನೇಹಿತರೂ ಇದ್ದರು. ಆದರೆ ಈ ಸಲ ಅವರವರ ಮನೆಗಳಲ್ಲಿ ಹೆಚ್ಚಿನ ತಕರಾರು ನಡೆಯಲಿಲ್ಲ, ಎಲ್ಲರನ್ನು ಅವರವರ ಮನೆಗಳಲ್ಲಿ ಪ್ರವಾಸಕ್ಕೆ ಕಳಿಸಿ ಕೊಟ್ಟರು. ಎಲ್ಲರೂ ಬೆಳಿಗ್ಗೆ ಎಂಟರ ಗಾಡಿಗೆ ತಮ್ಮ ತಮ್ಮ ಊರುಗಳಿಂದ ಗಾಡಿಯನ್ನೇರಿದರು. ಧಾರವಾಡಕ್ಕೆ ಹೋಗಿ ಇಳಿದವರು ಕರ್ನಾಟಕ ಕಾಲೇಜಗೆ ಹೋದರು. ಆಗಿನ್ನೂ ಟೇಪ್ ರೆಕಾರ್ಡರ್ ಹೊಸದು ಸಾರ್ವಜನಿಕರ ಉಪಯೋಗಕ್ಕೆ ಬಂದಿರಲಿಲ್ಲ. ಒಂದು ವಿಶಾಲ ಕೊಠಡಿಯೊಂದರಲ್ಲಿ ತರಗತಿ ನಡೆಯುತ್ತಿತ್ತು. ಟೇಪ್ ರೆಕಾರ್ಡನ ಪ್ರಾತ್ಯಕ್ಷಿಕೆ ಅಲ್ಲಿ ಇತ್ತು. ನಮ್ಮ ಗುರುಗಳಾದ ದ್ಯಾಮಪ್ಪ ಆ ಕಾಲೇಜನ್ನು ತೋರಿಸುತ್ತ ಇಲ್ಲಿ ವಿ.ಕೃ.ಗೋಕಾಕರು ಪ್ರಿನ್ಸಿಪಾಲರಾಗಿದ್ದರು ಮತ್ತು ಇಂಗ್ಲೀಷ್ ತರಗತಿಗಳನ್ನು ತೆಗೆದು ಕೊಳ್ಳುತ್ತಿದ್ದರು, ಮತ್ತು ತಾನೂ ಸಹ ಇದೇ ಕಾಲೇಜಿನಲ್ಲಿ ಓದಿದ್ದು ಎಂದರು. ಟೇಪ ರೆಕಾರ್ಡರ್ ಪ್ರಾತ್ಯಕ್ಷಿಕೆ ನಡೆಸುತ್ತಿದ್ದ ಲೆಕ್ಚರರ್ ಹೊರಬಂದರು. ನಮ್ಮ ಗುರುಗಳಾದ ದ್ಯಾಮಪ್ಪ ಅವರಿಗೆ ನಮಸ್ಕರಿಸಿದರು. ಆ ಲೆಕ್ಚರರ್ ಗೆ ನಮ್ಮ ಗುರುಗಳ ಪರಿಚಯವಿದ್ದು ನಮ್ಮನ್ನು ಸಹ ಒಳಗೆ ಕರೆದರು. ನಾವು ಐವತ್ತು ವಿದ್ಯಾರ್ಥಿಗಳು ಒಳಗೆ ಹೋಗಿ ಕುಳಿತು ಕೊಂಡೆವು. ಐವತ್ತು ಅರವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಳಿತುಕೊಳ್ಳ ಬಹುದಾದಷ್ಟು ವಿಶಾಲ ಕೊಠಡಿ ಅದಾಗಿತ್ತು. ಇಳಿಜಾರಿನಲ್ಲಿ ಜೋಡಿಸಿದ್ದ ವಿಶಾಲ ಡೆಸ್ಕಗಳು ಅಲ್ಲಿಯ ವಿದ್ಯಾರ್ಥಿನಿ ಯರ ಶಿಸ್ತುಗಳು ನಮ್ಮಲ್ಲಿ ಬೆರಗುಂಟು ಮಾಡಿದವು. ಟೇಪ್ ರೇಕಾರ್ಡರ್ನ ಕಾರ್ಯ ವೈಖರಿಯನ್ನು ವಿವರಿಸಿ ನಮ್ಮನ್ನುದ್ದೇಶಿಸಿ ಅವರು ನಿಮ್ಮಲ್ಲಿ ಯಾರಾದರೂ ಯಾವುದೇ ವಿಷಯ ಕುರಿತು ಮಾತನಾಡುವವರಿದ್ದರೆ ಇಲ್ಲವೆ ಹಾಡು ಹಾಡುವವರಿದ್ದರೆ ಬನ್ನಿ ಅದನ್ನು ರೆಕಾರ್ಡ ಮಾಡಿ ನಿಮಗೆ ಕೇಳಿಸುತ್ತೇನೆ ಎಂದರು. ನಮ್ಮಲ್ಲಿ ಯಾರೂ ಮುಂದೆ ಬರಲಿಲ್ಲ. ಎರಡು ಮೂರು ಜನರನ್ನು ವಿಚಾರಿಸಿದರು, ಆದರೆ ಯಾರೂ ಮುಂದೆ ಬರಲಿಲ್ಲ.


     ಆಗ ನಮ್ಮ ದ್ಯಾಮಪ್ಪ ಗುರುಗಳು ' ಮಾದೇವ ಬಾ ಇಲ್ಲಿ ' ಎಂದು ಕರೆದರು. ಗುರುಗಳ ಆ ಕರೆಯಿಂದ ಕಂಗಾಲಾದ ಮಾದೇವ ಅನುಮಾನಿಸುತ್ತ ಲೆಕ್ಚರರ್ ಮತ್ತು ದ್ಯಾಮಪ್ಪ ಗುರುಗಳು ನಿಂತಿದ್ದ ಪೋಡಿಯಂ ಬಳಿಗೆ ಹೋದ.


     ಆಗ ಆ ಲೆಕ್ಚರರ್ 'ಬಾ ಮರಿ ನಿನಗೆ ಇಷ್ಟವಾದ ಯಾವುದಾದರೂ ಒಂದು ಹಾಡನ್ನು ಹಾಡು ಅದನ್ನು ರೆಕಾರ್ಡ ಮಾಡಿ ನಿನ್ನ ದನಿಯನ್ನು ನಿನಗೆ ಕೇಳಿಸುತ್ತೇನೆ' ಎಂದರು. ಎಲ್ಲರೂ ಕರತಾಡನ ಮಾಡಿದರು.


          ಒಂದು ತರಹದ ದಿಗಿಲು ಆತನನ್ನು ಕಾಡಿತು. ಆದರೂ ಧೈರ್ಯ ಮಾಡಿ ಅಂಬಿಗ ನಾ ನಿನ್ನ ನಂಬಿದೆ ಜಗದಂಬಾ ರಮಣ ನಿನ್ನ ನಂಬಿದೆ ಎಂಬ ದಾಸರ ಪದವೊಂದನ್ನು ಹಾಡಿದ. ನಂತರ ಆ ಲೆಕ್ಷರರ್ ಆ ಪದವನ್ನು ಎಲ್ಲರಿಗೂ ಹಾಕಿ ಕೇಳಿಸಿದರು, ಮತ್ತೆ ಎಲ್ಲರಿಂದ ಕರತಾಡನ. ಮಾದೇವನಿಗೆ ಒಂದು ರೀತಿಯಲ್ಲಿ ಖುಷಿಯಾಗಿತ್ತು. ಅಲ್ಲಿಂದ ಹೊರಟವರು ಕರ್ನಾಟಕ ವಿಶ್ವ ವಿದ್ಯಾಲಯ, ಕೃಷಿ ಕಾಲೇಜುಗಳನ್ನು ನೋಡಿಕೊಂಡು ಧಾರವಾಡದ ಆಕಾಶವಾಣಿ ಕೇಂದ್ರಕ್ಕೆ ಬಂದರು. ಇವರು ಒಳಗೆ ಪ್ರವೇಶ ಪಡೆಯುತ್ತಿದ್ದಂತೆ ಆ ಕೇಂದ್ರದಿಂದ ಕುಳ್ಳಗಿನ ಗೌರ ವರ್ಣದ, ಹಿಂಭಾಗದಲ್ಲಿ ಮಾತ್ರವಿದ್ದ ತಲೆಗೂದಲನ್ನು ಹಿಂದಕ್ಕೆ ಬಾಚಿ ಮೇಲೆ ಧೋತ್ರ, ಷರಟು, ಕೋಟು ಮತ್ತು ಕರಿ ಟೊಪ್ಪಿಗೆ ಧರಿಸಿದ್ದ ವ್ಯಕ್ತಿಯೊಬ್ಬರು ಹೊರ ಬರುತ್ತಿದ್ದರು. ಅವರಿಗೆ ದ್ಯಾಮಪ್ಪ ಮಾಸ್ತರರು ನಮಸ್ಕರಿಸಿದರು.


      ಆ ವ್ಯಕ್ತಿ ಪ್ರತಿ ನಮಸ್ಕರಿಸಿ ದ್ಯಾಮಪ್ಪ ಗುರುಗಳಿಗೆ ' ಯಾರಪಾ ನೀನು ಯಾವ ಸಾಲಿಯಿಂದ ಬಂದಿ ' ಎಂದರು.
 
     ದ್ಯಾಮಪ್ಪ ಮಾಸ್ತರು ತಾವು ಗುಡಿಕೆರೆ ಹೈಸ್ಕೂಲ್ನಿಂದ ಮಕ್ಕಳನ್ನು ಧಾರವಾಡ ತೋರಿಸಲು ಕರೆ ತಂದಿರುವುದಾಗಿ ನುಡಿದರು.


     ಆಗ ದ್ಯಾಮಪ್ಪ ಮಾಸ್ತರರು ' ಇವರು ಯಾರು ನಿಮಗ ಗೊತ್ತದ ಅನು ' ಎಂದು ವಿದ್ಯಾರ್ಥಿಗಳನ್ನು ಕೇಳಿದರು.


     ಅವರಿಂದ ಉತ್ತರ ಬಾರದಿದ್ದಾಗ ' ನೀವು ಮೂಡಲ ಮನೆ ಪದ್ಯ ಓತ್ತೀರಲ್ಲ ಅದನ್ನ ಬರದ ಕವಿ ಬೇಂದ್ರೆಯವರು ಇವರು ' ಎಂದರು. ಎಲ್ಲರೂ ಒಕ್ಕೊರಲಿನಿಂದ ನಮಸ್ಕಾರ ಅಂದ್ರು.


     ಅದಕ್ಕೆ ಖುಷಿಯಾಗಿ ಕೆಲವು ನಿಮಿಷಗಳ ಕಾಲ ದ್ಯಾಮಪ್ಪ ಮಾಸ್ತರರ ಜೊತೆ ಮಾತಾಡಿದ ಬೇಂದ್ರೆಯವರು ' ಏನಪಾ ಮಾಸ್ತರ ನೀನು ಏನ್ ಓದಿ ಏನು ಪಾಠಾ ಮಾಡ್ತಿ ' ಅಂದರು. ಅದಕ್ಕೆ ದ್ಯಾಮಪ್ಪ ಮಾಸ್ತರರು ತಾವು ಬಿಎ ಮಾಡಿರುವುದಾಗಿಯೂ ಕನ್ನಡ ಮತ್ತು ಇಂಗ್ಲೀಷ್ ಪಾಠಾ ಮಾಡುತ್ತಿರುವುದಾಗಿ ನುಡಿದರು.


     ಅದಕ್ಕೆ ಪ್ರತಿಕ್ರಿಯಿಸಿದ ಬೇಂದ್ರೆ ಯವರು ' ಛೊಲೋ ಆತು ಬೇಶಂಗ ಪಾಠ ಮಾಡು, ನೀವು ಎಲ್ಲ ಸರ್ಯಾಗಿ ಓದ ಬೇಕು ಗೊತ್ತಾತ ' ಎಂದು ಹೇಳಿ ' ತಮ್ಮನ್ನು ಹೊರಗೆ ಕಳಿಸಲು ಬಂದಿದ್ದ ಆಕಾಶವಾಣಿ ಕೇಂದ್ರದ ಅಧಿಕಾರಿಗೆ ' ನೋಡಪಾ ಹಳ್ಳಿ ಹೈಸ್ಕೂಲು ಹುಡಗ್ರು ಆಕಾಶವಾಣಿ ಸೋಡಾಕ ಬಂದಾರ ಅವರಿಗೆ ಎಲ್ಲ ಸರ್ಯಾಗಿ ತೋರ್ಸಿ ಕಳಸ್ರಿ ಮತ್ತ ' ಎಂದು ಆದೇಶಿಸಿ ಮುಂದೆ ಸಾಗಿ ಹೋದರು.


     ನಾವೆಲ್ಲರೂ ಆಕಾಶವಾಣಿ ಕೇಂದ್ರದೊಳಗ ಹೋಗಿ ಆ ಕೇಂದ್ರದ ಕಾರ್ಯ ವೈಖರಿಯನ್ನು ಅಲ್ಲಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ವಿವರಿಸಿದರು. ಎಲ್ಲರಲ್ಲೂ ಸಂತೃಪ್ತ ಭಾವ ಮೂಡಿತ್ತು. ಎಲ್ಲರಿಗೂ ಆರ್ ಎಲ್ ಎಸ್ ಹೈಸ್ಕೂಲ್ನಲ್ಲಿ ಇಳಿದು ಕೊಳ್ಳುವ ವ್ಯವಸ್ಥೆ ಮಾಡಿದ್ದರು. ಇವರು ಇಳಿದು ಕೊಳ್ಳಲು ವ್ಯವಸ್ಥೆ ಮಾಡಿದ್ದ ವಿಶಾಲವಾದ ಕೊಠಡಿಗೆ ಲೈಟ್ ಇರಲಿಲ್ಲ, ಕಾರಣ ಎಲ್ಲರೂ ಮೇಣದ ಬತ್ತಿಗಳನ್ನು ತಂದು ಕೊಂಡು ಬುತ್ತಿಗಂಟುಗಳನ್ನು ಬಿಚ್ಚಿ ಪರಸ್ಪರ ಹಂಚಿಕೊಂಡು ಊಟ ಮುಗಿಸಿದರು. ಆ ದೀರ್ಘ ಅಲೆದಾಟ ಯಾರಲ್ಲೂ ದಣಿವನ್ನುಂಟು ಮಾಡಿರಲಿಲ್ಲ. ಅದಕ್ಕೆ ಕಾರಣ ಧಾರವಾಡದ ಥಿಯೇಟರ್ಗಳಲ್ಲಿ ಸಿನೆಮಾ ನೋಡುವುದು. ಆಗ ಲಕ್ಷ್ಮೀ ಟಾಕೀಸಿನಲ್ಲಿ ರಾಜಕಪೂರನ ' ಸಂಗಮ್ ' ಸಿನೆಮಾ ಇನ್ನೂರು ದಿನಗಳನ್ನು ದಾಟಿ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿತ್ತು. ಉಳಿದ ಇನ್ನುಳಿದ ಎರಡು ಥಿಯೇಟರ್ ಗಳಾದ ವಿಜಯ ಮತ್ತು ರೀಗಲ್ ಟಾಕೀಸ್ ಗಳಲ್ಲಿ ' ದೊಸ್ತಿ ' ಮತ್ತು ' ಶಹನಾಯಿ ' ಚಿತ್ರಗಳು ಸಹ ಯಶಸ್ವಿ ಪ್ರದರ್ಶನ ಕಾಣುತ್ತಿದ್ದವು. ಶೇಕಡಾ ತೊಂಭತ್ತೊಂಭತ್ತರಷ್ಟು ಆಯ್ಕೆ ಆರ್ಕೆ ಬ್ಯಾನರ್ ನ ಸಂಗಂ ಆಗಿತ್ತು. ಹೋಗುವದೋ ಬಿಡುವುದೋ ಎಂಬ ದ್ವಂದ್ವ ಆತನನ್ನು ಕಾಡುತ್ತಿತ್ತು. ರಕ್ಷಣಾ ನಿಧಿ ಸಿನೆಮಾದ ಘಟನೆಯಿಂದ ಆತ ವಿವಶನಾಗಿದ್ದ. ಈ ಕಾರಣದಿಂದಾಗಿ ಆತನ ಸ್ನೇಹಿತರಾದ ಶಿವಣ್ಣ ಇನ್ನು ಕೆಲವರು ಒಂದು ಅಂತರವನ್ನು ಅವನಿಂದ ಕಾಯ್ದು ಕೊಂಡಿದ್ದರು.


     ಮಾದೇವನ ಇನ್ನೊಬ್ಬ ಸ್ನೇಹಿತ ಚಿನ್ನಪ್ಪ ' ಮಾದೇವ ನಾವೂ ಎಲ್ಲಾರ ಜೊತೆ ಸಿನೆಮಾಕ್ಕ ಹೋಗೋಣ, ಇಲ್ಲ ಅಂದ್ರ ಈ ಕತ್ತಲಿಯೊಳಗ ನಮ್ಮನ್ನ ಕಾಯಾಕ ಹಚ್ಚಿ ಎಲ್ಲ ಹೋಗಿ ಬಿಡ್ತಾರ, ನಾವೂ ಹೋಗೋಣ ನಡಿ ' ಎಂದ. ಅವನ ಸಲಹೆ ಮಾದೇವನಿಗೆ ಸರಿ ಕಂಡಿತು. ಅವರೂ ಸಹ ಎಲ್ಲರ ಜೊತೆ ಸಿನೆಮಾಗೆ ಹೊರಟರು. ಕೆಲವೆ ಜನರನ್ನು ಬಿಟ್ಟರೆ ಎಲ್ಲರ ದಂಡು ಲಕ್ಷ್ಮೀ ಟಾಕೀಸ್ ಮುಂದೆ ಬೀಡು ಬಿಟ್ಟಿತ್ತು. ರಾತ್ರಿ ಒಂಭತ್ತುವರೆಯಾದರೂ ಇನ್ನೂ ಚಿತ್ರ ಮುಗಿದಿರಲಿಲ್ಲ. ದ್ಯಾಮಪ್ಪ ಮಾಸ್ತರರು ಎಲ್ಲರಿಂದ ಹಣ ಒಟ್ಟು ಮಾಡಿ ಕೌಂಟರ್ ಆಫೀಸಿನ ಒಳಗೆ ಹೋಗಿ ಟಿಕೆಟ  ತಂದರು. ಆ ಶೋ ಬಿಡುವುದನ್ನೆ ಕಾಯುತ್ತ ಕಾರಿಡಾರ್ನಲ್ಲಿ ನಿಂತರು. ಎಲ್ಲ ಕ್ಲಾಸ್ಗಳ ಹೊರ ಹೋಗುವ ಬಗಿಲುಗಳನ್ನು ತೆಗೆದಿಟ್ಟಿದ್ದರು. ಕುತೂಹಲಭರಿತ ಅನೇಕರು ಗೇಟ್ ಬಳಿ ನಿಂತು ಸಿನೆಮಾದ ಅಂತಿಮ ದೃಶ್ಯ ನೋಡುತ್ತ ನಿಂತರು. ಗೇಟ್ ಕೀಪರ್ ಏನೂ ಹೇಳಲಿಲ್ಲ ಅದರ ದುರುಪಯೋಗ ಪಡೆದ ಅನೇಕರು ಒಳ ಹೋಗಿ ನಿಂತರು ಹಲವರು ಕುಳಿತರು ಮುಂದೆ ಹತ್ತು ಗಂಟೆಗೆ ಚಿತ್ರ ಬಿಟ್ಟಿತು. ಥಿಯೆಟರ್ ಖಾಲಿಯಗುತ್ತಿದ್ದಂತೆ ಎರಡನೆ ದರ್ಜೆಯ ಗೇಟ್ನಲ್ಲಿ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ನುಗ್ಗಿದರು. ಗೇಟ್ ಕೀಪರ್ ಎಲ್ಲರನ್ನು ಎಣಿಸಿ ಒಳಗೆ ಬಿಟ್ಟು ಗುರುಗಳು ಕೊಟ್ಟ ಟಿಕೆಟ್ಗಳನ್ನು ಎಣಿಸಿ ಹರಿದು ಕೌಂಟರೆ ಪೀಸುಗಳನ್ನು ಅವರಿಗೆ  ಹಿಂದಿರುಗಿಸಿದ. ಎರಡು ಇಂಟರ್ವಲ್ಗಳನ್ನು ಹೊಂದಿದ ಟೆಕ್ನಿಕಲರ್ ಚಿತ್ರ ಮುಗಿದಾಗ ಸರಿ ರಾತ್ರಿ ಎರಡು ಗಂಟೆ. ಆ ಚಿತ್ರ ಮಾಡಿದ್ದ ಮೋಡಿ ಮಾತ್ರ ಅಪಾರ. ಎಲ್ಲಿಯ ಟೂರಿಂಗ್ ಟಾಕೀಸ್ ಎಲ್ಲಿಯ ಜಿಲ್ಲಾ ಕೇಂದ್ರದ ಮನ ಸೆಳೆವ ಥಿಯೇಟರ್ಗಳು ಆ ಚಿತ್ರವೀಕ್ಷಣೆಯ ಸವಿ ನೆನಪಲ್ಲೆ ಎಲ್ಲರೂ ಸವಿ ನಿದ್ರೆಗೆ ಜಾರಿದ್ದರು. ಮರುದಿನ ಅದೇ ಗುಂಗಿನಲ್ಲಿಯೆ ಎಳೆಯ ಹದಿ ಹರೆಯದ ಮನಸುಗಳು ಸಂಗಮ್ ನ ಮೋಡಿಯಲ್ಲಿಯೆ ಊರಿಗೆ ಮರಳಿದ್ದವು.


     ಮರು ವರ್ಷ ಮೆಟ್ರಿಕ್ಯುಲೇಶನ್ ಮುಗಿಸಿದ ಮಾದೇವನ ಮುಂದೆ ಬದುಕಿನ ವಾಸ್ತವ ಎದುರು ನಿಂತಿತ್ತು. ಆತನ ಎಲ್ಲ ಸ್ನೇಹಿತರು ಹುಬ್ಬಳ್ಳಿಯ ಪಿಸಿ ಜಾಬಿನ್ ಸೈನ್ಸ್ ಕಾಲೇಜ್, ಕಾಡ ಸಿದ್ದೇಶ್ವರ ಆರ್ಟ್ಸ ಕಾಲೇಜ್ ಮತ್ತು ಜೆಜೆ ಕಾಮರ್ಸ ಕಾಲೇಜ್ ಸೇರಿದ್ದರೆ ಕೆಲವರು ಧಾರವಾಡದ ಕರ್ನಾಟಕ ಕಾಲೇಜ್ ಸೇರಿದ್ದರು. ಒಬ್ಬ ಹೈದರಾಬಾದಿನ ಉಸ್ಮಾನಿಯಾ ಕಾಲೇಜಿಗೆ ಸೇರಿದ್ದ. ಈ ಕಾಲ ಘಟ್ಟದಲ್ಲಿ ಹಲವು ಸ್ನೇಹಿತರ ವರ್ತನೆ ಬದಲಾಗಿತ್ತು. ರೇಲ್ವೆ ಸ್ಟೇಶನ್ ಕಡೆಗೆ ವಾಕಿಂಗ್ಗೆ ಹೋದರೆ ಕೆಲವು ಸ್ನೇಹಿತರು ಆಢ್ಯತೆಯಿಂದ ಮುಖ ಆಚೆಗೆ ತಿರುಗಿಸಿಕೊಂಡು ಹೋಗುತ್ತಿದ್ದರು.
ಯಾಕೆ ಈ ಬದಲಾವಣೆ ? ಈ ಪ್ರಶ್ನೆ ಮಾದೇವನನ್ನು ಕಾಡುತ್ತಿತ್ತು. ಕ್ರಮೇಣ ವಾಸ್ತವ ಗ್ರಹಿಸಿದ ಮಾದೇವ ಎಲ್ಲವನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಿದ. ತನ್ನನ್ನು ಉಪೇಕ್ಷೆ ಮಾಡಿದವರನ್ನು ತಾನೂ ಉಪೇಕ್ಷಿಸುತ್ತ ನಡೆದ.


     ಒಂದು ದಿನ ಗುಡಿಕೆರೆ ಹೈಸ್ಕೂಲ್ಗೆ ತನ್ನ ಮಾರ್ಕ್ಸ ಕಾರ್ಡ ತರಲು ಹೋದ. ಶಿವಣ್ಣನೂ ತನ್ನ ತಂದೆಯೊಂದಿಗೆ ಅಲ್ಲಿಗೆ ಬಂದಿದ್ದ. ಶಿವಣ್ಣ ಮೂರು ವಿಷಯಗಳಲ್ಲಿ ಫೇಲಾಗಿದ್ದ. ತಮ್ಮ ಎದುರಿಗೆ ಕುಳಿತ ಶಿವಣ್ಣನ ತಂದೆಗೆ ಹೆಡ್ ಮಾಸ್ಟರ್ ನಿಂಗಪ್ಪ ನವರು ನೋಡಿ ' ನೀವು ನಿಮ್ಮ ಮಗನನ್ನು ಕಾಲೇಜಿಗೆ ಸೇರಿಸಲು ತುದಿಗಾಲ ಮೇಲೆ ನಿಂತಿದ್ದಿರಿ, ಆದರೆ ನಿಮ್ಮ ಮಗ ನಿಮ್ಮ ಆಶೆಯನ್ನು ಹುಸಿಯಾಗಿಸಿದ್ದಾನೆ, ಆತ ದುಷ್ಟ ಹುಡುಗನೇನೂ ಅಲ್ಲ ಆದರೆ ಕಷ್ಪಪಟ್ಟು ಓದುವವನಲ್ಲ, ಆದರೆ ಈ ಮಾದೇವನ ಹಣೆ ಬರಹನೋಡಿ ಶೇಕಡಾ ಎಂಭತ್ಮೂರರಷ್ಟು ಅಂಕಗಳನ್ನು ಪಡೆದಿದ್ದಾನೆ ಈತ ಕಾಲೇಜ್ ವಿದ್ಯಾಭ್ಯಾಸ ಗಗನ ಕುಸುಮವಾಗಿದೆ '  ಎಂದರು.


     ಅದಕ್ಕೆ ಶಿವಣ್ಣನ ತಂದೆ ' ಏನು ಮಾಡುವುದು ಸ್ವಾಮಿ ಅದನ್ನೆ ವಿಧಿ ವಿಪರೀತ ' ಎನ್ನುವುದು ಎಂದರು. ಮತ್ತೆ ನನ್ನೆಡೆಗೆ ತಿರುಗಿ ಬೆನ್ನು ಸವರಿ ಚೆನ್ನಾಗಿ ಓದು ' ಎಂದರು.


      ಹೆಡ್ ಮಾಸ್ತರರಿಂದ ಮಾಕ್ರ್ಸಕಾರ್ಡ, ಲೀವಿಂಗ್ ಸರ್ಟಿಫಿಕೆಟ್ ಮತ್ತು ಕ್ಯಾರೆಕ್ಟರ್ ಸರ್ಟಿಫಿಕೆಟ್ ಪಡೆದ ಮಾದೇವ ತಾನೋದಿದ ಹೈಸ್ಕೂಲ್ ಮುಂದೆ ಮೈತುಂಬ ಹೂವರಳಿಸಿ ಕೊಂಡು ನಿಂತಿದ್ದ ಗುಲ್ ಮೊಹರ್ ಮರದ ಕೆಳಗೆ ಶಿವಣ್ಣನ ಬರುವಿಕೆಗಾಗಿ ಕಾದು ನಿಂತಿದ್ದ. ಪಶ್ಚಿಮದಲ್ಲಿ ಇಳಿಯುತ್ತಿದ್ದ ಸೂರ್ಯ ಆಗಸದಲ್ಲಿ ಹರಡಿದ್ದ ಮೋಡಗಳು ಬಿಂಬಿಸುತ್ತಿದ್ದ ವರ್ಣವೈಭವ, ಬೀಸುತ್ತಿದ್ದ ತಂಪಾದ ಗಾಳಿ ಒಂದು ರೀತಿಯ ಸಂತಸ ಮೂಡಿಸುತ್ತಿದ್ದರೆ ತನಗೆ ನಾಲ್ಕು ವರ್ಷಗಳ ಕಾಲ ಆಶ್ರಯ ನೀಡಿ ವಿದ್ಯೆಯ ಧಾರೆ ಎರೆದ ಶಾಲೆ ಬಿಟ್ಟು ಹೋಗಬೇಕಾದ ಅನಿವಾರ್ಯ ವಿರಹ ಆತನನ್ನು ಕಾಡುತ್ತಿತ್ತು. ಶಿವಣ್ಣನಿಗೆ ಸಾಂತ್ವನ ಹೇಳಬೇಕು ಎಂಬುದು ಆತನ ಉದ್ದೇಶ ವಾಗಿತ್ತು. ಆದರೆ ಮುಂದೆ ಕಾಲುಗಂಟೆಯ ನಂತರ ಹೆಡ್ ಮಾಸ್ಟರ್ ಕೊಠಡಿಯಿಂದ ಹೊರಬಂದ ತನ್ನ ತಂದೆಯ ಹಿಂದಿನಿಂದ ಸಾಗಿಹೋದ. ಆತನನ್ನು ಭೇಟಿಯಾಗುವ ತವಕದಲ್ಲಿ ಶಿವಣ್ಣ ಕೆಲ ಹೆಜ್ಜೆಗಳನ್ನು ಮುಂದಿಟ್ಟ. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಶಿವಣ್ಣ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ತೋರದೆ ಆ ಕಡೆಗೆ ಮುಖ ತಿರುಗಿಸಿಕೊಂಡು ತನ್ನ ತಂದೆಯ ಜೊತೆಗೆ ಸಾಗಿ ಹೋದ. ನಿಜಕ್ಕೂ ಮಾದೇವನ ಮನಸಿಗೆ ನೋವಾಗಿತ್ತು. ಅತನಿಗೆ ಫೇಲಾದ ಶಿವಣ್ಣನನ್ನು ಸಂತೈಸುವ ಮತ್ತೆ ಸ್ನೇಹ ಹಸ್ತ ಚಾಚುವ ಇರಾದೆ ಇತ್ತು. ಆದರೆ ಶಿವಣ್ಣನ ಮನಸಿನಲ್ಲಿ ಏನಿತ್ತು, ಅದು ಆತನಿಗಷ್ಟೆ ಗೊತ್ತಿದ್ದ ವಿಷಯ.


                                                                                                                                           ( ಮುಂದುವರಿದುದು )


                                              *


 


 


                                            



 


 


                                             



 

Rating
No votes yet

Comments

Submitted by swara kamath Sun, 12/30/2012 - 12:38

ಪಾಟೀಲರಿಗೆ ನಮಸ್ಕಾರಗಳು.
ನನ್ನ ಬಾಲ್ಯದ ಸಹಪಾಟಿಗಳು ಮತ್ತು ನನಗೆ ಗೆಳಯರಾಗಿದ್ದ ಇಬ್ಬರ ನೆನಪು ತಮ್ಮ ಈ ಲೇಖನ ಓದಿದ ನಂತರ ತುಂಬಾ ಕಾಡಿತು. ಹೈಸ್ಕೂಲ್ ಶಿಕ್ಷಣಕ್ಕಾಗಿ ಒಬ್ಬ ಗೆಳಯ ಪಟ್ಟ ಶ್ರಮ ಹಾಗೂ ತನಗಿರುವ ಉಗ್ಗುವಿಕೆಯಿಂದ ಮಾತನಾಡುವಾಗ ತಡವರೆಸುತ್ತದೆಂದು, ಉತ್ತಮದರ್ಜೆಯಲ್ಲಿ ಉತ್ತಿರ್ಣನಾಗಿದ್ದರೂ ಓದನ್ನು ಮುಂದುವರೆಸದ ಗೆಳಯ. ಈಗಲೂ ನಾವು ಆ ಗೆಳೆತನವನ್ನು ಅಷ್ಟೇ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದೇವೆ. ಸಮಯ ಸಿಕ್ಕಾಗ ಮನಸಾರೆ ಹರಟೆ ಹೊಡೆಯುತ್ತಾ ಆನಂದಿಸುತ್ತೇವೆ,ಸಿರಿತನ ಬಡತನದ ಹಂಗಿಲ್ಲದೆ.
ವಂದನೆಗಳು

Submitted by H A Patil Sun, 12/30/2012 - 15:32

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ಕಥಾನಕದ ಈ ಭಾಗಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ. ಈ ಕಥಾನಕ ತಮಗೆ ತಮ್ಮ ಬಾಲ್ಯದ ಸಹಪಾಠಿ ಮತ್ತು ಗೆಲೆಯರ ನೆನಪು ತಂದಿದ್ದು ಮತ್ತು ಆ ದಿನಮಾನಗಳ ನೆಪು ತಂದದ್ದನ್ನು ಓದಿ ಸಂತಸವಾಯಿತು.ತಾವಂದದ್ದು ನಿಜ ಗೆಳೆತನಕ್ಕೆ ಬಡತನ ಮತ್ತು ಸಿರಿತನಗಳ ಹಂಗಿಲ್ಲ. ಧನ್ಯವಾದಗಳು.