ಒತ್ತು ಶ್ಯಾವಿಗೆ (ಒಂದು ಪ್ರಬಂಧ)
ನಮ್ಮ ಹಳ್ಳಿಮನೆಯಲ್ಲಿ ಪುರಾತನ ಕಾಲದ ಒಂದು “ ಒತ್ತು ಶ್ಯಾವಿಗೆ ಮಣೆ” ಇತ್ತು. ಒಳ್ಳೆಯ ಹಲಸಿನ ಮರದಿಂದ ಅದನ್ನು ಆಚಾರಿ ಮಾಡಿಕೊಟ್ಟಿದ್ದು ಎನ್ನುತ್ತಿದ್ದರು ಅಮ್ಮಮ್ಮ, ಅದರ ಗಾತ್ರವನ್ನು ನೆನಪಿಸಿಕೊಳ್ಳುತ್ತಾ. ಅದರ ವಾಸ ಯಾವಾಗಲೂ ಅಡಿಗೆಮನೆಯ ಅಟ್ಟದ ಮೇಲೆ. ಅದನ್ನು ಕೆಳಗಿಳಿಸುವುದಕ್ಕೆ ಇಬ್ಬರು ಮೂವರ ಸಹಾಯ ಬೇಕಾಗುತ್ತಿದ್ದಾರಿಂದ, ಶ್ಯಾವಿಗೆ ತಿನ್ನುವ ಆಸೆಯಾದರೂ, ಆ ಮಣ ಭಾರವನ್ನು ಕೆಳಗಿಳಿಸುವುದು ಹೇಗಪ್ಪಾ ಎಂಬ ರೇಜಿಗೆಯಲ್ಲಿ, “ಶ್ಯಾವಿಗೆ ಮಾಡುವ, ಯಾರಾದರೂ ನೆಂಟರು ಬರಲಿ, ಆಗ ಮಾಡುವ” ಎನ್ನುತ್ತಿದ್ದರು ಅಮ್ಮಮ್ಮ. ನೆಂಟರು ಬಂದಾಗ, ಅವರಿಗೆ ಶ್ಯಾವಿಗೆ ತಿನ್ನಿಸುವ ಸಡಗರದ ನೆಪ ಒಂದಾದರೆ, ಆ ಶ್ಯಾವಿಗೆ ಮಣೆಯನ್ನು ಅಟ್ಟದ ಮೇಲಿನಿಂದ ಕೆಳಗಿಳಿಸಲು ಮತ್ತು ಒತ್ತು ಶ್ಯಾವಿಗೆಯನ್ನು ಮಾಡಲು ಅವರ ಸಹಾಯವನ್ನು ಪಡೆಯಬಹುದಲ್ಲಾ ಎಂಬ ಹುನ್ನಾರವೂ ಇತ್ತೇನೊ!
ತಾರಿಕಟ್ಟೆಯಿಂದ ಶ್ಯಾಮಲಳೋ, ಕುಚ್ಚೂರಿನಿಂದ ಜಯತ್ತಿಗೆಯೋ, ಈ ರೀತಿಯ ಹತ್ತಿರದ ಬಂಧುಗಳು ನಮ್ಮ ಮನೆಗೆ ಬಂದಾಗ, ಅಮ್ಮಮ್ಮನಿಗೆ ಸಡಗರದ ಹುರುಪು ಬಂದು, ಹಲವುದಿನಗಳಿಂದ ಮನಸ್ಸಿನಲ್ಲೇ ಬಾಕಿ ಇಟ್ಟುಕೊಂಡಿದ್ದ ಶ್ಯಾವಿಗೆ ಎಂಬ ತಿಂಡಿಯನ್ನು ನೆನಪಿಸಿಕೊಳ್ಳುತ್ತಿದ್ದರು. ಬಂದಿದ್ದ ಬಂಧುಗಳು ಸಾಮಾನ್ಯವಾಗಿ ನಾಲ್ಕೆಂಟು ದಿನ ಇರಲಿಕ್ಕೆಂದೇ ತಯಾರಾಗಿ ಬಂದಿರುತ್ತಿದ್ದರು. ಆಗಿನ ದಿನಗಳಲ್ಲಿ ಹಾಗೇ ತಾನೆ - ನೆಂಟರ, ಬಂಧುಗಳ ಮನೆಗೆ ಹೋಗುವುದೆಂದರೆ, ಹೀಗೆ ಬಂದು “ಹಲೋ” ಹೇಳಿ ಹಾಗೆ ಹೋಗುವುದಲ್ಲ - ನಾಲ್ಕು ದಿನ, ಎರಡು ವಾರ, ಒಮ್ಮೊಮ್ಮೆ ಒಂದೆರಡು ತಿಂಗಳು ಸಹಾ ಇರಲು ತಯಾರಾಗಿ ಹೋಗುವುದು. “ಒಂದೆರಡು ತಿಂಗಳು!” ಎಂದು ಅಚ್ಚರಿಯಾಗುತ್ತಾ, ನಿಮಗೆ? ಅಚ್ಚರಿ ಮಾತ್ರ ಏಕೆ, ಈಗಿನ ನಗರೀಕೃತ ವಾತಾವರಣದಲ್ಲಿ ಬೆಳೆದ ಕೆಲವರಿಗೆ, ನಂಬಲೂ ಕಷ್ಟವಾದೀತು. ನಮ್ಮ ಮನೆಗೆ ಅಂದಿನ ದಿನಗಳಲ್ಲಿ, ಆಗಾಗ “ಸವಾರಿ” ಬರುತ್ತಿದ್ದ ಚಿನ್ನಮ್ಮತ್ತೆ, ಭವಾನಿ ದೊಡ್ಡಮ್ಮ ಮೊದಲಾದವರು ಎರಡು ತಿಂಗಳುಗಳ ಕಾಲ ನಮ್ಮ ಮನೆಯಲ್ಲಿ ಇದ್ದದ್ದೂ ಉಂಟು. ಈ ರೀತಿ ಬಂಧುಗಳ ಭೇಟಿಯ ಸಮಯದಲ್ಲಿ, ಒತ್ತು ಶ್ಯಾವಿಗೆ ಮಾಡುವ “ಸಂಚನ್ನು” ಹೂಡುತ್ತಿದ್ದರು ಅಮ್ಮಮ್ಮ.
ಈ ತಿಂಡಿಯನ್ನು ಮಾಡಲು ಶುರುಮಾಡಿಕೊಂಡರೆ, ಅದಕ್ಕೆ ಎರಡು ಮೂರು ಜನರ ಸಹಕಾರ ಖಂಡಿತಾ ಬೇಕೇ ಬೇಕು! ಮೊದಲು, ಅಡಿಗೆ ಮನೆಯ ಅಟ್ಟದಲ್ಲಿದ್ದ ಶ್ಯಾವಿಗೆ ಮಣೆಯನ್ನು ಕೆಳಗಿಳಿಸುವ ಕೆಲಸ. ದಪ್ಪ ದಪ್ಪ ಮರದ ತೊಲೆಗಳಿಂದ ತಯಾರಿಸಿದ್ದ ಆ ಮಣೆಯನ್ನು ಅತ್ತಿತ್ತ ಸರಿಸಲು ಇಬ್ಬರು ಮೂವರು ಬೇಕೇ ಬೇಕಿತ್ತಲ್ಲ, ಅಟ್ಟದ ಮೇಲಿನಿಂದ ಇಳಿಸಲು ಸಾಕಷ್ಟು ಜಾಗ್ರತೆ ಅಗತ್ಯ. ಒಂದು ಸ್ಟೂಲನ್ನು ಮತ್ತು ಒಂದು ಕುರ್ಚಿಯನ್ನು ಇಟ್ಟುಕೊಂಡು, ಅವುಗಳ ಮೇಲೆ ನಿಂತಿದ್ದ ಇಬ್ಬರು ಅಟ್ಟದತ್ತ ಕೈನೀಡಿ ನಿಂತಿರುತ್ತಿರುವಾಗ, ಅಟ್ಟಾದ ಮೇಲೆ ಹತ್ತಿ ಕುಳಿತ ಮತ್ತೋರ್ವರು, ಶ್ಯಾವಿಗೆ ಮಣೆಯನ್ನು ನಿಧಾನವಾಗಿ ಇತ್ತ ಸರಿಸಿ, ಸ್ಟೂಲಿನ ಮೇಲೆ ಮತ್ತು ಕುರ್ಚಿಯ ಮೇಲೆ ನಿಂತಿದ್ದವರ ಕೈಗೆ ತಗಲುವಂತೆ ಮಾಡುತ್ತಾರೆ. ಕೆಳಗಿದ್ದ ಇವರಿಬ್ಬರು ಆ ಮಣೆಯನ್ನು ನಿಧಾನವಾಗಿ ಕೆಳಗಿಳಿಸುವಾಗ, ಅಕ್ಕಪಕ್ಕದಲ್ಲಿ ನಿಂತಿದ್ದ ಮತ್ತಿಬ್ಬರು, ಅದನ್ನು ಇಳಿಸಿಕೊಳ್ಳಲು ಸಹಕಾರ ನೀಡಿ, ನೆಲದ ಮೇಲಿಡುತ್ತಾರೆ. ಅದನ್ನು ಕೆಳಗಿಳಿಸಿದ ತಕ್ಷಣ ಮೊದಲು ಮಾಡುವ ಕೆಲಸವೆಂದರೆ, ಅದನ್ನು ಜಾಗ್ರತೆಯಿಂದ ಎತ್ತಿಕೊಂಡು ಅಂಗಳದ ತುದಿಯಲ್ಲಿದ್ದ ಬಾವಿಯ ಹತ್ತಿರ ತೆಗೆದುಕೊಂಡು ಹೋಗಿ ಇಡುವುದು. ಏಕೆಂದರೆ, ಅದನ್ನು ತೊಳೆಯದಿದ್ದರೆ, ಎಲ್ಲರ ಮೈಕೈಗೂ ಕಪ್ಪನೆಯ ಮಸಿಯ ಲೇಪನವಾದೀತು! ಅದನ್ನು ನೀರು ಹಾಕಿ ತೊಳೆಯುವುದರ ಜೊತೆಗೆ, ಅದನ್ನು ಕೆಳಗಿಳಿಸಿದವರೂ ತಮ್ಮ ಮೈ ಕೈಗೆ , ಮುಖಕ್ಕೆ ಹತ್ತಿಕೊಂಡಿದ್ದ ಮಸಿಯನ್ನು, ಜೇಡರ ಬೆಲೆಯನ್ನು ಶುದ್ದಮಾಡಿಕೊಳ್ಳಬೇಕು. ಈ ಮಣೆಯನ್ನು ಸಜ್ಜು ಗೊಳಿಸುವ ಕೆಲಸವೇ ಸಾಕಷ್ಟು ಶ್ರಮದಾಯಕವಾದ್ದರಿಂದ, ಹಿಂದಿನ ದಿನ ಸಂಜೆಯೇ ಈ ಕೆಲಸವನ್ನು ಮಾಡಿ, ಮರುದಿನ ಮಾಡಲಿರುವ ತಿಂಡಿಗೆ ಮುನ್ನುಡಿ ಹಾಕುವ ಪದ್ದತಿ!
ಈ ಪುರಾತನ ಶ್ಯಾವಿಗೆ ಮಣೆಯನ್ನು ನಮ್ಮ “ಪಾಲಿಗೆ” ಪಡೆದುಕೊಳ್ಳಲು ತಾನು ಮಾಡಿದ ಸಾಹಸವನ್ನು ಅಮ್ಮಮ್ಮ ನೆನಪಿಸಿಕೊಳ್ಳುವುದೂ ಇದೇ ಸಂದರ್ಭದಲ್ಲಿ. ನಮ್ಮ ಮನೆಯು ಪಾಲಾಗುವಾಗ, ಅಂದರೆ, ಈಗ ಸುಮಾರು ಐವತ್ತು ವರ್ಷದ ಹಿಂದಿನ ಕತೆ ಅದು, ಬೇರೆ ಬೇರೆ ವಸ್ತುಗಳನ್ನು “ಇದು ಇವರಿಗೆ, ಇದು ಅವರಿಗೆ” ಎಂದು ಪಂಚಾಯ್ತಿದಾರರು ವಿಂಗಡಿಸುವಾಗ, “ಶ್ಯಾವಿಗೆ ಮಣೆ, ನನಗೆ ಬೇಕೇ ಬೇಕು” ಎಂದು ಹಠ ಹಿಡಿದು ಅದನ್ನು ನಮ್ಮ ಮನೆಯ ಪಾಲಿಗೆ ಪಡೆದುಕೊಂಡಿದ್ದರು ಅಮ್ಮಮ್ಮ. “ಅವತ್ತು ನಾನು ಹಠ ಹಿಡಿದು ಈ ಮಣೆಯನ್ನು ತೆಗೆದುಕೊಂಡಿದ್ದರಿಂದ, ನಿಮಗೆ ಈಗ ಶ್ಯಾವಿಗೆ ತಿನ್ನುವ ಅವಕಾಶ ಆಯಿತು” ಎನ್ನುತ್ತಿದ್ದರು ಅಮ್ಮಮ್ಮ. ಆದರೆ, ಶ್ಯಾವಿಗೆ ಮಾಡುವ ಕೆಲಸ ಇನ್ನೂ ಶುರುವೇ ಆಗಿಲ್ಲವಲ್ಲ!
ದೂರದಿಂದ ನೋಡಿದರೆ, ಕಪ್ಪನೆಯ ಕಬ್ಬಿಣದ ಪುರಾತನ ಯಂತ್ರದ ರೀತಿ ಕಾಣುತ್ತಿದ್ದ ಆ ಶ್ಯಾವಿಗೆ ಮಣೆಗೆ ಆ ಬಣ್ಣ ಬರಲು ಮುಖ್ಯ ಕಾರಣವೆಂದರೆ, ಹೊಗೆ! ಯಾವಾಗಲೂ ಅಟ್ಟದ ಮೇಲೆಯೇ ಇರುತ್ತಿದ್ದ ಅದು, ಅಡುಗೆ ಮನೆಯಲ್ಲಿದ್ದ ಸೌದೆ ಒಲೆಗಳ ಹೊಗೆ ಕುಡಿದು, ಕುಡಿದು, ಕಪ್ಪಗಾಗಿತ್ತು. ಹಳೆಯ ಮರವಾಗಿದ್ದರಿಂದಲೂ ಆ ಬಣ್ಣ ಬಂದಿರಬೇಕು. ಸುಮಾರು ಎರಡರಿಂದ ಮೂರು ಅಡಿ ಎತ್ತರ, ಒಂದೂವರೆ ಅಡಿ ಅಗಲವಾಗಿದ್ದ ಆ ಮರದ ಪರಿಕರವು ನೋಡಲು ದಪ್ಪ ದಪ್ಪವಾಗಿದ್ದು, ಭಾರವಾಗಿತ್ತು. ಅದರಲ್ಲಿ ಶ್ಯಾವಿಗೆ ಹಿಟ್ಟನ್ನು ತುಂಬುವ ಜಾಗವನ್ನು ಕಬ್ಬಿಣದ ಅಚ್ಚು ತುಂಬಿಕೊಂಡಿದ್ದರಿಂದ, ಅದರ ಭಾರವೂ ಸೇರಿಕೊಂಡಿತ್ತು! ತೀರ ಹಗುರವಿದ್ದರೆ ಅಥವಾ ತೆಳ್ಳಗಿನ ಮರದಿಂದ ಅದನ್ನು ಮಾಡಿದ್ದರೆ, ಶ್ಯಾವಿಗೆ ಮಾಡುವ ಸಂದರ್ಭದಲ್ಲಿ ಮಣೆಯನ್ನು ಒತ್ತುವಾಗ, ಮುರಿದು ಹೋಗುವ ಸಂಭವವೂ ಇತ್ತು! “ಮುರಿದುಹೋದೀತಾ” ಎಂದು ಅಚ್ಚರಿ ಪಡಬೇಡಿ, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದು, ಅಮ್ಮಮ್ಮ _ ಈ ಭಾರವನ್ನು ಕಂಡು ರೇಜಿಗೆ ತೋರುತ್ತಿದ್ದ ನಮ್ಮನ್ನು ಹುರಿದುಂಬಿಸಲು ಆ ರೀತಿ ಹೇಳುತ್ತಿದ್ದರೇನೊ!
ಅಕ್ಕಿಯನ್ನು ಅರೆಯುವ ಕಲ್ಲಿನಲ್ಲಿ ಅರೆದು, ಕಡುಬಿನ ಅಟ್ಟದಲ್ಲಿ ಬೇಯಿಸಿ, ಮೆತ್ತಗಿನ ಉಂಡೆಗಳನ್ನಾಗಿ ಮಾಡಿಕೊಂಡು, ಮರದ ಮಧ್ಯ ಭಾಗದಲ್ಲಿದ್ದ ಅಚ್ಚಿನಲ್ಲಿ ಆ ಹಿಟ್ಟನು ತುಂಬಿ, ಮೇಲಿರುವ ಮರದ ಹಿಡಿಕೆಯನ್ನು ಬಿಗಿಯಾಗಿ ಕೆಳಗೆ ಒತ್ತಿದಾಗ, ಬಿಳಿ ಬಿಳಿ, ಬಿಸಿ ಬಿಸಿ ಶ್ಯಾವಿಗೆಯು ಎಳೆ ಎಳೆಯಾಗಿ ತಳದಲ್ಲಿ ಬೀಳುವ ವ್ಯವಸ್ಥೆಯನ್ನು ಹೊಂದಿತ್ತು ಆ ಮಣೆ. ಆದರೆ ಹೇಳಿದಷ್ಟು ಸುಲಭವಾಗಿ ಶ್ಯಾವಿಗೆ ತಯಾರಿಸಲು ಆಗುತ್ತಿರಲಿಲ್ಲ! ಆ ಪುರಾತನ ಶ್ಯಾವಿಗೆ ಮಣೆಯಲ್ಲಿ ಹಿಟ್ಟನ್ನು ಹಾಕಿ, ಅಮುಕಲು ಒಬ್ಬರು ಸಾಕಾಗುತ್ತಿರಲಿಲ್ಲ, ಅಷ್ಟು ಬಿಗಿಯಾಗಿತ್ತು, ಬಿರುಸಾಗಿತ್ತು, ಮೇಲ್ಭಾಗದಲ್ಲಿದ ಮರದ ಹಿಡಿ.
“ ಮಕ್ಕಳೇ, ಆ ಕಡೆಯಿಂದ ಜೋರಾಗಿ ಒತ್ತಿ!”
“ಸುಮ್ಮನೇ ನೋಡುತ್ತಾ ನಿಂತರೆ ಆಗುವುದಿಲ್ಲ, ಶಕ್ತಿ ಹಾಕಿ ಒತ್ತಿ!”
“ಆ ಮೇಲೆ ಶ್ಯಾವಿಗೆ ತಿನ್ನಬೇಕಾದರೆ, ಈಗ ಕಷ್ಟ ಪಡಲೇಬೇಕು!”
ಎಂದು ಬಾರಿ ಬಾರಿಗೂ ಹುರಿದುಂಬಿಸುತ್ತಿದ್ದರು ಅಮ್ಮಮ್ಮ. ನಾವು ಇಬ್ಬರು ಮಕ್ಕಳು ಮರದ ಹಿಡಿಯನ್ನು ಒತ್ತಲು ಪಡುತ್ತಿದ್ದ ಪ್ರಯಾಸವನ್ನು ಕಂಡು ಈ ರೀತಿಯ ಪ್ರೋತ್ಸಾಹದ ನುಡಿಗಳನ್ನು ಆಡುತ್ತಿದ್ದರು. ನಾವಿಬ್ಬರು ಮಕ್ಕಳು ನಮ್ಮಿಬ್ಬರ ಭಾರವನ್ನೂ ಆ ಮರದ ಹಿಡಿಯ ಮೇಲೆ ಹಾಕಿ, ಅದನ್ನು ಕೆಳಗೆ ಅಮುಕಲು ಯತ್ನಿಸುತ್ತಿದ್ದೆವು. ನಮಗೆ ಸುಸ್ತು ಆದಾಗ, ದೊಡ್ದವರು ಯಾರಾದರೂ ಕೈಹಾಕಿ, ಸಹಾಯ ಮಾಡುತ್ತಿದ್ದರು. ಆದರೂ, ಕ್ರಮೇಣ ಮತ್ತಷ್ಟು ಬಿಗಿಯಾಗುತ್ತಿತ್ತು ಆ ಹಿಡಿಕೆ – ಏಕೆಂದರೆ, ಅಕ್ಕಿ ಹಿಟ್ಟು ತಣ್ಣಗಾದಂತೆಲ್ಲಾ, ಬಿಗಿ ಜಾಸ್ತಿಯಾಗಿ, ಮತ್ತಷ್ಟು ಶ್ರಮದ ಅಗತ್ಯವಿತ್ತು. ಬಿಗಿಯಾಗಿ ಒತ್ತಿದಾಗ, ಅಚ್ಚಿನಲ್ಲಿದ್ದ ಹಿಟ್ಟು ನಿಧಾನವಾಗಿ, ಎಳೆ ಎಳೆಯಾಗಿ ಶ್ಯಾವಿಗೆ ಕೆಳಗೆ ಬೀಳುತ್ತಿತ್ತು. ಆ ಬಿಳಿ ಎಳೆಗಳನ್ನು ತಟ್ಟೆಯಲ್ಲಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದುದು ಅಮ್ಮ ಅಥವಾ ಜಯತ್ತಿಗೆ. ಬೇಯಿಸಿದ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ, ಶ್ಯಾವಿಗೆ ಅಚ್ಚಿನೊಳಗೆ ಇಡುವ ಕೆಲಸ ಅಮ್ಮಮ್ಮನದು. ಕನಿಷ್ಟ ಮೂರು ಅಥವಾ ನಾಲ್ಕು ಜನರ ಶ್ರಮ ಬೇಡುತ್ತಿತ್ತು, ಆ ಪುರಾತನ ಮರದ ಶ್ಯಾವಿಗೆ ಮಣೆ.
“ಅದಕ್ಕೇ ಅಲ್ವಾ, ಹಿಂದಿನ ಕಾಲದವರು ಇದಕ್ಕೆ ಒಂದು ಎದುರು ಕತೆ ಮಾಡಿದ್ದು?” ಎಂದು ನಗುತ್ತಾ ಹೇಳುತ್ತಿದ್ದರು ಅಮ್ಮಮ್ಮ. ( ಎದುರು ಕತೆ ಎಂದರೆ ಒಗಟು)
“ ಎಂತ, ಅದು ಎದುರು ಕತೆ?”
“ಹಾಕೋನು ಒಬ್ಬ,
ದೂಕೋನು ಒಬ್ಬ,
. . . . . . ಧೂಪ ತೋರಿಸೋನು ಒಬ್ಬ”
ಎಂದು ಕುಶಾಲು ಮಾಡುತ್ತಿದ್ದರು ಅಮ್ಮಮ್ಮ.
ಅಕ್ಕಿ ಹಿಟ್ಟನ್ನು ಹಾಕುವವನು ಒಬ್ಬ, ಮರದ ಹಿಡಿಯನ್ನು ದೂಡುವವನು ಒಬ್ಬ, ಕೆಳಗೆ ಎಳೆ ಎಳೆಯಾಗಿ ದಾರದಂತೆ ಬೀಳುವ ಶ್ಯಾವಿಗೆಯನ್ನು ತಟ್ಟೆಯಲ್ಲಿ ಸಂಗ್ರಹಿಸುವ ಕೆಲಸಕ್ಕೆ ಇನ್ನೊಬ್ಬ ಎಂಬ ಅರ್ಥ. ಬಿಳಿ ಎಳೆಗಳನ್ನು ತಟ್ಟೆಯಲ್ಲಿ ಸಂಗ್ರಹಿಸುವ ಕೆಲಸವನ್ನು “ಧೂಪ ತೋರಿಸುವ” ಕ್ರಿಯೆಗೆ ಹೋಲಿಸಿದ್ದರು, ಆ ಒಗಟನ್ನು ರಚಿಸಿದ್ದ ಜನಪದರು.
ಆ ಪುರಾತನ ಶ್ಯಾವಿಗೆ ಮಣೆಯನ್ನು ಉಪಯೋಗಿಸಿ, ತಿಂಡಿಯನ್ನು ತಯಾರಿಸಿದ ವಿಚಾರ, ನಮ್ಮ ಸುತ್ತ ಮುತ್ತಲಿನ ಮನೆಗಳಿಗೆಲ್ಲಾ ತಿಳಿಯುತ್ತಿದ್ದುದು ಹೇಗೆ ಗೊತ್ತಾ? ಪ್ರತಿ ಬಾರಿ,ಹಿಟ್ಟನ್ನು ಅಮುಕುವಾಗಲೂ, ಆ ಮರದ ಸಾಧನವು “ಕಂಯ್, ಕಂಯ್, ಕಂಯೋಯೋ. . . .” ಎಂದು ಸದ್ದು ಮಾಡುತ್ತಿತ್ತು. ಒಂದೆರಡು ಗಂಟೆಗಳ ಕಾಲ ಈ ರೀತಿ “ಕಂಯ್,ಕಂಯ್” ಎಂಬ ಕೀರಲು ಸದ್ದನ್ನು ಕೇಳಿದ ಕೂಡಲೆ, ನಮ್ಮೂರಿನ ಬಾಯಂದಿರು, “ಹಾಂ, ಇವತ್ ಅಮ್ಮನ ಮನೆಲಿ ಶ್ಯಾವಿಗೆ ಮಾಡಿದ್ರ್” ಎಂದು ಉದ್ಗರಿಸಿ, ಅದನ್ನು ತಯಾರಿಸುವ ಕುರಿತು ಇರುವ ಆ ತಮಾಶೆಯ ಒಗಟನ್ನು ನೆನಪಿಸಿಕೊಂಡು ಕಿಲ ಕಿಲ ನಗುತ್ತಿದ್ದರು!
ಕ್ರಮೇಣ ಆ ಮರದ ಶ್ಯಾವಿಗೆ ಮಣೆಯು, ಕುಂಬು ತಿಂದು ಲಡ್ಡಾಯಿತು. ಒಮ್ಮೆ, ಅದನ್ನು ಕೆಳಗಿಳಿಸಿ, ತಿಂಡಿ ಮಾಡಿದ ನಂತರ, ಮೇಲಕ್ಕೆ ಇಡಲು ಅವಕಾಶವಾಗದೆ ಅಥವಾ ಸೋಮಾರಿತನ ಮಾಡಿದ್ದರಿಂದ, ಅಂಗಳದ ಮೂಲೆಯಲ್ಲೇ ಅದು ಕುಳಿತುಬಿಟ್ಟಿತು. ಬಿಸಿಲು ಮತ್ತು ಮಳೆಗೆ ಒಡ್ಡಿಕೊಂಡು, ಪೂರ್ತಿ ಉಪಯೋಗಕ್ಕೆ ಬಾರದಂತಾದ ನಂತರ, ಕಂಯ್ ಕಂಯ್ ಸದ್ದು ಮಾಡುತ್ತಾ, ಶ್ಯಾವಿಗೆ ಎಳೆಗಳನ್ನು ಬೀಳಿಸುತ್ತಿದ್ದ ಆ ಪರಿಕರ ಮೂಲೆಗುಂಪಾಯ್ತು. ಆ ನಂತರ, ಕಬ್ಬಿಣದಿಂದ ತಯಾರಿಸಿದ, ತಿರುಪು ಹಿಡಿ ಹೊಂದಿದ್ದ, ಲಘು ತೂಕದ ಶ್ಯಾವಿಗೆ ಮಣೆಯನ್ನು ತಂದರು ನಮ್ಮ ಅಪ್ಪಯ್ಯ.
Comments
ನನಗೆ ಬಹಳ ಇಷ್ಟವಾದ ತಿನಿಸು ಇದು.
ನಿಮ್ಮಲ್ಲಿ ಶ್ಯಾವಿಗೆ ಮಣೆಯ ಫೊಟೋ
In reply to ನಿಮ್ಮಲ್ಲಿ ಶ್ಯಾವಿಗೆ ಮಣೆಯ ಫೊಟೋ by ಸುಮ ನಾಡಿಗ್
ಶ್ಯಾವಿಗೆ ತಿoದಷ್ಟೇ ಖುಷಿಯಾಯಿತು.
In reply to ಶ್ಯಾವಿಗೆ ತಿoದಷ್ಟೇ ಖುಷಿಯಾಯಿತು. by Shobha Kaduvalli
ಶಾವಿಗೆ ಚಿತ್ರಾನ್ನ ಹೆccಉ ರುಚಿಕರ
ಧನ್ಯವಾದಗಳು, ಸುಮಾ ನಾಡಿಗ್.
ಶ್ಯಾವಿಗೆ ನೆನಪಿಸಿ ...ಅಜ್ಜಿಯ
In reply to ಶ್ಯಾವಿಗೆ ನೆನಪಿಸಿ ...ಅಜ್ಜಿಯ by arunkumar.bengaluru
ನಿಮ್ಮ ಕುಟುಂಬದಲ್ಲಾದಂತೆಯೇ, ನಮ್ಮ
ಶ್ಯಾವಿಗೆ ಮಾಡುವ ಕಲೆ
In reply to ಶ್ಯಾವಿಗೆ ಮಾಡುವ ಕಲೆ by Manjunatha D G
<ಶ್ಯಾವಿಗೆ ಮಾಡುವ ಕಲೆ