ಈ ಬೆಂಗಳೂರು ಹೀಗಾದ್ರೆ ಹೇಗೆ..?!

ಈ ಬೆಂಗಳೂರು ಹೀಗಾದ್ರೆ ಹೇಗೆ..?!

(ಸೂಚನೆ: ನಿನ್ನೆ ಗೆಳೆಯನ ಹರಸಹಾಸದಿಂದಾಗಿ ಮತ್ತೆ ಸಂಪದ ಓಪನ್ ಆಗಿದೆ ಹಾಗಾಗಿ ಹಾಲಿಡೇಯನ್ನು ಕ್ಯಾನ್ಸ್‌ಲ್ ಮಾಡಿದ್ದೇನೆ. ಕ್ಷಮೆ ಇರಲಿ)
ಮೊನ್ನೆಮೊನ್ನೆವರೆಗೆ ೧ರೂ ಇದ್ದ ಲಿಂಬೆಹಣ್ಣು ಇವತ್ತು ೩ರೂ ಆಗಿದೆ ಸಾರ್. ಅಕ್ಕಿಯಂತೂ ಮಾತನಾಡಿಸುವ ಹಾಗೇ ಇಲ್ಲ. ಅದಕ್ಕೆ ಈಗ ನಮ್ಮ ಲ್ಯಾಂಡ್ರಿಯಲ್ಲೂ ಬೆಲೆ ಏರಿಕೆ! ಹಾಗಂದವ ಲ್ಯಾಂಡ್ರಿಯೊಳಗಿನ ಅಗಸ. ಇವತ್ತು ಬಟ್ಟೆ ತೊಳೆಯಲಾರೆ ಅನ್ನಿಸಿದಾಗ, ಬಟ್ಟೆಯಲ್ಲಿ ನನ್ನಿಂದ ತೆಗೆಯಲಾಗದಷ್ಟು ಕಲೆಯಿದೆ ಅಂತಾ ಗೊತ್ತಾದಾಗ ನಾನು ಬಟ್ಟೆ ಲ್ಯಾಂಡ್ರಿಗೆ ಕೊಡೋದು. ಈಗ ಎರಡು ತಿಂಗಳಾಗಿತ್ತು ಲ್ಯಾಂಡ್ರಿ ಕಡೆ ಹೋಗದೆ ಅದ್ಯಾಕೋ ಇವತ್ತು ಹೋದ್ರೆ ರೇಟು ಒಂದು ಪ್ಯಾಂಟಿಗೆ ೨೦ರೂ ಆಗಿದೆ! ಅಲ್ಲಯ್ಯಾ ಇನ್ನೊಂದು ೪೦ರೂ ಇದಕ್ಕೆ ಸೇರಿಸಿದರೆ ಯೂಸ್‌ ಅಂಡ್ ಥ್ರೋ ಪ್ಯಾಂಟ್ ಬರತ್ತಲ್ಲಾ ಅಂತಾ ಅವನ ಹತ್ರಾ ಜಗಳ ಹೊಡೆದಿದ್ದಕ್ಕೆ ಅಂವ ಲಿಂಬೆ ಹಣ್ಣು, ಅಕ್ಕಿ ಕಥೆ ಹೇಳಿದ!ಒಂದು ಬಟ್ಟೆ ವಾಷ್ ಮಾಡಲು ಆತನಿಗೆ ತಗುಲುವ ಖರ್ಚು ಅಬ್ಬಬ್ಬಾ ಅಂದ್ರೆ ೪ರೂ. ಇನ್ನೂ ಇದು ಬೆಂಗಳೂರು ಇಲ್ಲಿ ಎಲ್ಲವೂ ಕಾಸ್ಟ್ಲಿ ಅಂತಾನೇ ಭಾವಿಸಿದರು ಆರಾಮವಾಗಿ ೬ರೂಗೆ ಅವ ಒಂದು ಬಟ್ಟೆ ಒಗೆದು ಕೊಡಬಹುದು. ಅಷ್ಟು ಕೆಲಸಕ್ಕೆ ಅವ ೨೦ರೂ ಅಂತಾನೇ ಅಂದ್ರೆ? ಅವ ಅಂತಾನೇ ಅಂದ್ರೆ ಅನ್ನೋದು ಸಮಸ್ಯೆಯೆ ಅಲ್ಲ. ಅವ ಹೇಳಿದನ್ನೇ ಕೊಟ್ಟು ನಾವು ಬಟ್ಟೆ ಒಗೆಸಿಕೊಂಡು ಬರ್ತಿವಲ್ವಾ? ಹಾಗಾಗಿಯೇ ಇವತ್ತು ಎಲ್ಲದರ ಬೆಲೆಯೂ ಏರಿಕೆ ಆಗ್ತಾ ಇರೋದು.
ಬೆಲೆ ಏರಿಕೆ ಅನ್ನೋ ಪದಕ್ಕೆ ಒಂದು ಲೆಕ್ಕಾಚಾರವೇ ಇಲ್ಲದಂತಾಗಿದೆ ಇವತ್ತು. ಬೆಂಗಳೂರು ಹೊಟೆಲ್‌ಗಳಲ್ಲಿ ರೈಸ್‌ಸೂಪ್ ಅಂತಾ ಒಂದು ಐಟಂ ಸಿಗತ್ತೆ. ಅದಕ್ಕೆ ಬೆಲೆ ಎಷ್ಟು ಗೊತ್ತಾ? ಬರೊಬ್ಬರಿ ೨೫ರೂ! ಅಂದಹಾಗೆ ಈ ರೈಸ್‌ಸೂಪ್‌ ಅಂದ್ರೆ ಏನು ಗೊತ್ತಾ? ಅಪ್ಪಟ ಅನ್ನದ ತಿಳಿ! ಅದಕ್ಕೆ ಅದೇನೋ ಕಲರ್ ಪೌಡರು, ಹಚ್ಚಹಸಿರಾದ ಒಂದಿಷ್ಟು ತರಕಾರಿ ಹಾಕಿ ಕೊಡ್ತಾರೆ. ಅಲ್ಲಾರೀ ೧೮ರೂಗೆ ಒಂದು ಕಿಲೋ ಅಕ್ಕಿ ಬರತ್ತೆ ಅಂತಹದ್ದರಲ್ಲಿ ಅನ್ನದ ತಿಳಿಗೆ ೨೫ ಅಂದ್ರೆ..ರೀ ಸ್ವಾಮಿ ಬೇಕಾದ್ರೆ ಕುಡಿರಿ ಬೇಡದೇ ಹೋದ್ರೆ ಎದ್ದು ಹೋಗಿ ಅಂತಾನೇ ಹೋಟೆಲ್‌ನವ. ಈ ಬೆಂಗಳೂರು ಸಾಪ್ಟ್‌ವೇರ್ ಮಂದಿ ಕುರಿಗಳ ತರ ತಲೆಯಾಡಿಸಿ ಅದನ್ನೆ ಕುಡಿದುಕೊಂಡು ಬರುತ್ತವೆ. ಅವು ಏನಾದ್ರು ಕುಡಿದುಕೊಂಡು ಬಂದು ಸಾಯಲಿ ಯಾಕಂದ್ರೆ ಅವು ಕುಡಿಯೋದು ಅವರು ದುಡಿದ ದುಡ್ಡಿನಲ್ಲೇ ಹೊರತು ನಮ್ಮ ಅಪ್ಪನ ಮನೆ ಗಂಟಲ್ಲೇನು ಅಲ್ಲ ಅನ್ನಬಹುದು. ಆದ್ರೆ ೧೦೦ಕ್ಕೆ ೯ ಮಂದಿ ಇರೋ ಇವು ಮಾಡಿಬರೋ ಈ ಕೆಲಸದಿಂದ ಇನ್ನುಳಿದ ೯೧ಮಂದಿ ಮಧ್ಯಮ ವರ್ಗದವರು ಕಷ್ಟ ಅನುಭವಿಸಬೇಕಲ್ಲ ಅನ್ನೋದು ನೋವಿನ ಸಂಗತಿ.
ಹೌದು ಬೆಲೆ ಏರಿಕೆಗೆ ಕಾರಣ ನಾವೇ. ಎಷ್ಟಂದ್ರೂ ಬೆಂಗಳೂರು ಪುರುಸೊತ್ತು ಇಲ್ಲದ ನಾಡು ಅಂತಾ ಫೇಮಸ್‌ ಆಗಿಬಿಟ್ಟಿದೆ! ಹಾಗಾಗಿ ಅಗಸ ಎಷ್ಟು ಹೇಳಿದರೂ ಕೊಟ್ಟು ಬಟ್ಟೆ ತೊಳೆಸಿಕೊಂಡು ಬರುತ್ತೀವಿ. ಹೋಟೆಲ್‌ನವ ಎಷ್ಟು ಬೆಲೆಗೆ ಏನೂ ಕೊಟ್ಟರೂ ತಿಂದು ಬರುತ್ತೀವಿ. ತಕರಾರು ಮಾಡ್ಲಿಕ್ಕೂ ನಮಗೆ ಪುರುಸೊತ್ತು ಇಲ್ಲ. ನಾವು ಮಾಡಿದರೂ ಅವರು ಕೇಳೋದು ಇಲ್ಲ! ಇನ್ನೂ ನಮ್ಮ ಬಟ್ಟೆ ನಾವು ಒಗೆದುಕೊಂಡರೆ ನಮ್ಮನ್ನು ನಾವು ಡೀಗ್ರೇಡ್ ಮಾಡಿಕೊಂಡತೆ ಅಂತಾ ಭಾವಿಸುವ ಮಂದಿಯೂ ಇದ್ದಾರೆ!
ನಮಗೆನೋ ತಿಂಗಳ ಕೊನೆಗೆ ಗಂಟೆ ಭಾರಿಸಿದ ಹಾಗೇ ಸ್ಯಾಲರಿ ಬರತ್ತೆ. ಆದ್ರೆ ಕೂಲಿಯವರಿಗೆ, ಹಮಾಲಿಗಳಿಗೆ, ಕೆಳವರ್ಗದ ಜನತೆಗೆ ಕೆಲಸ ಸಿಕ್ಕಿದರೆ ಮಾತ್ರ ಕಾಸು. ಆವತ್ತು ದುಡಿದು ಆವತ್ತೆ ಉಣ್ಣೋದು ಅನ್ನುವ ಬದುಕು ಅವರದ್ದು. ಹೀಗೆ ಬೆಲೆ ಏರಿಕೆಯಾದರೆ ಅವರ ಗತಿಯೇನಾಗಬಹುದು. ಅವರದ್ದು ಸಂಬಳ ಹೆಚ್ಚಾಗತ್ತೆ! ಅನ್ನೋದು ನಂತರದ ಮಾತು. ನಮ್ಮ ಜನರ ಮಜ ಅದೇ ಗಾಡಿಯಲ್ಲಿ ತರಕಾರಿಮಾರಲು ಬರುವವನ ಬಳಿ, ಕೂಲಿಗೆ ಕೆಲಸಕ್ಕೆ ಬರುವವನ ಬಳಿ ವ್ಯವಹಾರದಲ್ಲಿ ಚೌಕಾಸಿ ಮಾಡುತ್ತೇವೆ! ಅದೇ ಮಾಲ್‌ಗಳಿಗೋ, ಬಜಾರ್ಗಳಿಗೋ ಹೋದರೆ? ಛೇ ಅಲ್ಲೆಲ್ಲಾ ಚೌಕಾಸಿ ಮಾಡಿದರೆ ನಮ್ಮ ಪ್ರಿಸ್ಟೇಜ್ ಹಾಳಾಗಿಬಿಡತ್ತೆ. ಅದು ಅಲ್ಲದೇ ಅವೆಲ್ಲಾ ಇರೋದು ಚೌಕಾಸಿ ಮಾಡದ ಜನರಿಗಾಗಿಯೇ ಅಂದುಬಿಡುತ್ತೇವೆ! ಆ ಮಾರ್ವಾಡಿ ಅಷ್ಟು ದೊಡ್ಡ ಏಸಿ ಮಾಲ್ ಕಟ್ಟಿದ್ದು ನಮ್ಮಂಥ ಬಕ್ರಾಗಳಿಂದಾನೇ ಅನ್ನೋದು ಕೊನೆಯವರೆಗೂ ನಮಗೆ ಅರ್ಥವೇ ಆಗೋದಿಲ್ಲ!
ಆದ್ರೂ ಈ ಬೆಲೆ ಏರಿಕೆಗೆ ಒಂದು ಕಡಿವಾಣ ಹಾಕೋದು ಇವತ್ತು ಅನಿವಾರ್ಯವಾಗಿದೆ. ಆ ದಿಸೆಯಲ್ಲಿ ನಾವೇನು ಮಾಡಬಹುದು ಅನ್ನೋದನ್ನ ನೀವೆ ಚಿಂತಿಸಿ. ಬಟ್ಟೆಯಲ್ಲಿ ನನ್ನ ಕೈಯಿಂದ ತೆಗೆಯಲಾಗದ ಕಲೆಯಾಗಿತ್ತು ಹಾಗಾಗಿ ನಾನು ಇವತ್ತು ಅರ್ದದಿನ ಹಾಳುಮಾಡಿಕೊಂಡು ೧೦ರೂಗೆ ಪ್ಯಾಂಟ್ ತೊಳೆದುಕೊಡುವವನನ್ನು ಹುಡುಕಿ ನನ್ನ ಬಟ್ಟೆ ವಾಷ್‌ಗೆ ಕೊಟ್ಟು ಬಂದೆ.
.

Rating
No votes yet

Comments