ಬುಡ್ಡಿ ದೀಪ

ಬುಡ್ಡಿ ದೀಪ

“ಜಾಸ್ತಿ ಹೊತ್ತು ಆ ಹೊಗೆ ಕಾರುವ ದೀಪದ ಹತ್ತಿರ ಕೂತುಕೊಂಡು ಓದಬೇಡಿ, ಮಕ್ಕಳೆ, ಆ ಚಿಮಿಣಿ ಎಣ್ಣೆ ದೀಪ ಭಾಳ ಗರ್ಮಿ. ಅಷ್ಟು ಓದಿದ್ರೆ ಕಣ್ಣಿನ ಕತೆ ಎಂತ ಆತ್?” ಎಂದು ನಮ್ಮ ಅಮ್ಮಮ್ಮ ಗದರಿಸುತ್ತಿದ್ದ ಸಂದರ್ಭವೆಂದರೆ, ನಾವೆಲ್ಲಾ ಪರೀಕ್ಷೆಯ ತರಾತುರಿಯಲ್ಲಿ ರಾತ್ರಿ ಕುಳಿತು ಪಾಠಗಳನ್ನು ಮನನ ಮಾಡುತ್ತಿದ್ದಾಗ. ಆಗೆಲ್ಲಾ ಹಳ್ಳಿಗಳಲ್ಲಿ ಹಾಗೇ ತಾನೆ, ಮಕ್ಕಳು ಪರೀಕ್ಷೆಗೆ ಓದುವುದು ಯಾವಾಗ ಎಂದರೆ, ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿ, ಇನ್ನೇನು ನಾಳೆನೋ ನಾಳಿದ್ದೋ ಪರೀಕ್ಷೆ ಬರೆಯಬೇಕು , ಆಗ ನಮ್ಮ ಓದು ತುರುಸಾಗುತ್ತದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ನಡೆಸಿದಂತಹ ಸೈನಿಕರು ನಾವು! ರಾತ್ರಿ ಹತ್ತು ಗಂಟೆಯಾದರೂ, ಪುಸ್ತಕಗಳನ್ನು ಹರಡಿಕೊಂಡು, ನೋಟ್ಸ್‍ಗಳನ್ನು ತಿರುವಿಹಾಕುತ್ತಾ ನಾಳೆಯ ಪರೀಕ್ಷೆಯಲ್ಲಿ ಈ ಪ್ರಶ್ನೆ ಬರಬಹುದೋ, ಅಥವಾ ಇನ್ನೊಂದು ಕಷ್ಟದ ಪ್ರಶ್ನೆ ಬರಬಹುದೋ ಎಂದು ಊಹೆ ಮಾಡುತ್ತಾ, ಯಾವುದು ಹೆಚ್ಚು ಸುಲಭವೋ ಅದನ್ನು ಸಾಧ್ಯವಾದಷ್ಟು ಬಾಯಿಪಾಠ ಮಾಡುವುದು. ಅದ್ಯಾವುದೋ “ಬಂಧು” ಎಂಬ ಗೈಡನ್ನೋ, ಇನ್ಯಾವುದೋ ಗೈಡನ್ನೋ ಕೈಯಲ್ಲಿ ಹಿಡಿದುಕೊಂಡು ಓದುವುದು. ಬೇರೆ ಸಹಪಾಠಿಗಳ ಜೊತೆ ಚರ್ಚಿಸೋಣ ಎಂದರೆ, ನಮ್ಮ ಆ ಹಳ್ಳಿಯಲ್ಲಿ ಮತ್ತೊಂದು ಮನೆ ಇದ್ದದ್ದೇ ಅರ್ಧ ಕಿಲೋ ಮೀಟರ್ ದೂರದಲ್ಲಿ, ಇನ್ನು ನನ್ನದೇ ಕ್ಲಾಸಿನ ಸಹಪಾಠಿ ಇರುವ ಮನೆ ಇದ್ದದ್ದು ಒಂದೆರಡು ಕಿಲೊಮೀಟರ್ ದೂರದಲ್ಲಿ. ಪ್ರಶ್ನೆಯ ಕುರಿತು ಅಥವಾ ಉತ್ತರದ ಸಹಾಯಕ್ಕಾಗಿ ಕೇಳೋಣವೆಂದರೆ, ರಾತ್ರಿ ಹೊತ್ತಿನಲ್ಲಿ ಅದೆಲ್ಲಾ ಆಗದ ಮಾತು. ಇರುವ ಪುಸ್ತಕ ಅಥವಾ ನೋಟ್ಸ್‍ಗಳನ್ನು ಮತ್ತೆರಡು ಬಾರಿ ತಿರುವು ಹಾಕುವಾಗ ರಾತ್ರಿ ಹತ್ತು ಗಂಟೆಯೋ ಹನ್ನೊಂದು ಗಂಟೆಯೋ ಆಗುತ್ತಿತ್ತು. ಬೆಳಕಿಗಾಗಿ, ಪುಸು ಪುಸು ಹೊಗೆ ಬಿಡುವ ಚಿಮಿಣೆ ಬುಡ್ಡಿ ದೀಪ!

     ಅದಕ್ಕೂ ಮುಂಚೆ, ಶಾಲೆಗೆ ಹೋಗುವ ಮಕ್ಕಳು ಬುಡ್ಡಿ ದೀಪದಲ್ಲಿ ಓದಬಹುದು ಎಂಬ ಪರಿಕಲ್ಪನೆಯೇ ಇಲ್ಲದ ಕಾಲ್ಯದಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದ ಅಮ್ಮಮ್ಮನಿಗೆ, ನಾವು ಆ ಮಿಣಿ ಮಿಣಿ ಬೆಳಕಿನಲ್ಲಿ ಓದಲು ತಿಣಿಕಾಡುತ್ತಿದ್ದುದನ್ನು ಕಂಡಾಗ ಅಸಹಾಯಕತೆ, ಕೋಪ ಒಟ್ಟಿಗೇ ಬರುತ್ತಿತ್ತು ಎಂದು ಕಾಣುತ್ತದೆ. “ನಾವೆಲ್ಲಾ ಮಕ್ಕಳಾಗಿದ್ದಾಗ, ರಾತ್ರಿ ಊಟ ಆದ ಕೂಡಲೇ, ದೀಪ ಆರಿಸಿ, ಮಲಗುತ್ತಿದ್ದೆವು – ಕತ್ತಲಾದ ಕೂಡಲೇ ಊಟ, ನಂತರ ನಿದ್ರೆ. ಬೆಳದಿಂಗಳು ಇದ್ದರೆ, ಆಟ, ಜೂಟಾಟ. ನಿಮ್ಮ ಥರಾ ಆ ಹೊಗೆ ದೀಪಕ್ಕೆ ಕಣ್ಣನ್ನು ಬಿಟ್ಟುಕೊಂಡು ಓದುವುದಕ್ಕೆ ನಮ್ಮ ಮನೆಯಲ್ಲ್ಪಿ ಬಿಡುತ್ತಿರಲಿಲ್ಲ” ಎನ್ನುತ್ತಾ, ಬೇಗ ದೀಪ ಆರಿಸಿ ಎಂದು ಅವಸರಮಾಡುತ್ತಿದ್ದರು. ತಮ್ಮ ಬಾಲ್ಯದ ಅನುಭವಗಳನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದ್ದ ಅವರ ವಶೀಲಿ ನಮಗೆ ಕಿರಿ ಕಿರಿ ಅನಿಸಿದರೂ, ಮರುದಿನ ಪರೀಕ್ಷೆಗೆ ತಯಾರಿ ಮಾಡಬೇಕಲ್ಲಾ ಎಂಬ ದಿಗಿಲಿನಿಂದಲೇ, ಆ ಚಿಮಿಣಿ ಬುಡ್ಡಿ ಬೆಳಕಿನಲ್ಲಿ ಕಣ್ಣು ಕಿರಿದು ಮಾಡಿಕೊಂಡು ಓದುತ್ತಿದ್ದೆವು. ನಮ್ಮ ಪರೀಕ್ಷೆಯ ಅಧ್ಯಯನಕ್ಕಾಗಿ, ಬುರುಡೆ ಇದ್ದ ಬುಡ್ಡಿ, ಲಾಟೀನು, ಹೊಸರೀತಿಯ ಗಾಜಿನ ಬುರುಡೆ ಇದ್ದ ದೀಪಗಳು _ ಈ ರೀತಿ ಒಂದೊಂದಾಗಿ ಸೇರ್ಪಡೆಯಾಗುತ್ತಿದ್ದವು - ನಮ್ಮ ಅಪ್ಪಯ್ಯ ಊರಿಗೆ ಬಂದಾಗಲೆಲ್ಲಾ, ಹೆಚ್ಚು ಬೆಳಕು ಬೀರುವ ಬುರುಡೆಗಳಿದ್ದ ದೀಪಗಳನ್ನು ತಂದು ಕೊಡುತ್ತಿದ್ದರು. ನಾಲ್ಕಾರು ವಾರ ಉರಿಸುವುದರಲ್ಲಿ, ಅವುಗಳ ಗಾಜಿನ ಬುರುಡೆಯು ಕೈಜಾರಿ ಒಡೆದು ಹೋಗುತ್ತಿದ್ದುದರಿಂದಾಗಿ, ಮತ್ತೆ ಪುಟ್ಟ ಪುಟ್ಟ ಬುಡ್ಡಿಗಳೇ ನಮ್ಮ ಪುಸ್ತಕಗಳೆದುರು ವಿರಾಜಮಾನವಾಗುತ್ತಿದ್ದವು ಮತ್ತು ಅವು ಕಾರುವ ಪುಸು ಪುಸು ಹೊಗೆ ಮನೆ ತುಂಬಾ! ಇದ್ದರಲ್ಲಿ ಲಾಟೀನೇ ಪರವಾಗಿರಲಿಲ್ಲ, ಭದ್ರವಾಗಿ ತಂತಿ ಬಿಗಿದ ಅದರ ಗಾಜಿನ ಬುರುಡೆಗಳು ಸ್ವಲ್ಪ ಕಾಲ ಬಾಳಿಕೆ ಬರುತ್ತಿದ್ದವಾದರೂ,  ಅದ್ಯಾಕೋ ಲಾಟೀನು ಹಚ್ಚಿಕೊಂಡು ಓದುವುದೆಂದರೆ ನಮಗೆಲ್ಲಾ ಒಂದು ರೀತಿಯ ಅಲರ್ಜಿ. ಅದು ಜಾಸ್ತಿ ಚಿಮಿಣಿ ಎಣ್ಣೆ ಕುಡಿಯುತ್ತದೆಂಬ ಆರೋಪವೂ ಒಳಗೊಳಗೇ ಕೊರೆಯುತ್ತಿತ್ತು ಅಂತ ಕಾಣುತ್ತೆ – ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ, ಎಲ್ಲಾ ದೈನಂದಿನ ವ್ಯವಹಾರಗಳಿಗೂ, ಅವರು ಬಡವರಾಗಲೀ, ಶ್ರೀಮಂತರಾಗಲೀ, ಎಲ್ಲರಿಗೂ ಮಿತವ್ಯಯವೇ ಮೂಲಮಂತ್ರ ತಾನೆ?

     “ಮೊದಲೆಲ್ಲಾ ಈ ರೀತಿ ಚಿಮಿಣಿ ಎಣ್ಣೆ ದೀಪ ಎಲ್ಲಿತ್ತು? ಹೊನ್ನೆ ಎಣ್ಣೆ ಸೊಡರು ಮಾತ್ರ ಆಗ ಇದ್ದವು” ಎನ್ನುತ್ತಾ ಅಮ್ಮಮ್ಮ, ಮನೆ ಎದುರಿನ ಗದ್ದೆಯಾಚೆ ಇದ್ದ ತೋಡಿನ ಅಂಚಿನಲ್ಲಿ ಬೆಳೆದಿದ್ದ ಹೊನ್ನೆ ಮರಗಳನ್ನು ತೋರುತ್ತಿದ್ದರು. ಘಮಘಮಿಸುವ ಹೂವುಗಳನ್ನು ಬಿಡುತ್ತಿದ್ದ ಆ ಹೊನ್ನೆ ಮರಗಳಲ್ಲಿ ನಿಂಬೆಗಾತ್ರ ಕಾಯಿಗಳು ಜೋತಾಡುತ್ತಿದ್ದವು. ಆ ಕಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ, ಒಳಗಿನ ಬೀಜಗಳನ್ನು ಚೆನ್ನಾಗಿ ಜಜ್ಜಿ, ದೊಡ್ಡ ಪಾತ್ರೆಗೆ ಹಾಕಿ, ನೀರಿನಲ್ಲಿ ನಾಲ್ಕಾರು ಬಾರಿ ಚೆನ್ನಾಗಿ ಬೇಯಿಸಿದಾಗ, ಮೇಲ್ಭಾಗದಲ್ಲಿ ಹೊನ್ನೆ ಎಣ್ಣೆ ತೇಲುತ್ತಿತ್ತಂತೆ. ಹೊನ್ನೆ ಕಾಯಿಗಳು ಸಿಗುವ ಕಾಲದಲ್ಲಿ ಈ ಶ್ರಮದಾಯಕ ಕೆಲಸ ಮಾಡಿ, ಉತ್ಪತ್ತಿಯಾಗುವ ಹೊನ್ನೆಎಣ್ಣೆಯನ್ನು ಸಂಗ್ರಹಿಸಿಟ್ಟುಕೊಂಡು, ವರ್ಷಪೂರ್ತಿ ಮನೆಯ ಬೆಳಕಿಗಾಗಿ ಉಪಯೋಗಿಸುತ್ತಿದ್ದ ಕಾಲವನ್ನು ಅಮ್ಮಮ್ಮ ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಪೇಟೆಯಿಂದ ತರುವ ಚಿಮಿಣಿ ಎಣ್ಣೆ ಗರ್ಮಿ ಅಥವಾ ಉಷ್ಣ ಎನ್ನುವ ಅವರ ಹೇಳಿಕೆಗೆ ಈ ಹೊನ್ನೆ ಎಣ್ಣೆಯ ತಂಪು ದೀಪವೇ ಆಧಾರವಿರಬೇಕು. ಕಾಡಿನಲ್ಲಿ ಬೆಳೆಯುವ ಮುಳ್ಳು ಹರಳಿನ ಗಿಡದಿಂದ ಇದೇ ರೀತಿ ತಯಾರಿಸುವ ಎಣ್ಣೆಯನ್ನು ದೀಪ ಉರಿಸಲು ಉಪಯೋಗಿಸುವದರ ಜೊತೆ, ತಲೆಗೂ ಹಾಕುತ್ತಿದ್ದರಂತೆ, ನಮ್ಮ ಹಳ್ಳಿಗಳಲ್ಲಿದ್ದ ಕುಡುಬಿ ಜನಾಂಗದವರು. ಕಾಡಿನ ಕಿಬ್ಬದಿಯಲ್ಲಿ ಬೆಳೆಯುವ ಬೃಹದಕಾರದ ಹೆಬ್ಬಲಸು ಮರದ ಪುಟ್ಟ ಪುಟ್ಟ ಬೀಜಗಳನ್ನು ಜಜ್ಜಿ ಕುದಿಸಿದಾಗ ಸಿಗುವ ಎಣ್ಣೆಯನ್ನು ಸಹಾ ಉಪಯೋಗಿಸುವ ಪರಿಪಾಠವಿತ್ತು. ಸೀಮೆ ಎಣ್ಣೆ ಬಂದ ನಂತರ, ಆ ರೀತಿಯ ದೇಸಿ ಎಣ್ಣೆಗಳ ತಯಾರಿಕೆ, ಬಳಕೆ ನಿಂತು ಹೋಗಿತ್ತು.
     “ರೇಷನ್ ಕಾರ್ಡ ತೆಗೆದುಕೊಂಡು ಹೋಗಿ ಚಿಮಿಣೆ ಎಣ್ಣೆ ತಕಂಡು ಬಾ” ಎಂದು ರೇಷನ್ ಕಾರ್ಡನ್ನು ಕೊಟ್ಟು ಕಳುಹಿಸುತ್ತಿದ್ದರು, ತಿಂಗಳಿಗೊಮ್ಮೆ. ಆಗಿನ ಕಾಲದಲ್ಲಿ ನಮ್ಮ ಹಳ್ಳಿಯಲ್ಲಿ ಚಿಮಿಣಿಎಣ್ಣೆಯನ್ನು ತರುವುದೆಂದರೆ ಹರಸಾಹಸ. ಎಲ್ಲರ ಮನೆಯಲ್ಲೂ ಅಡುಗೆಗೆ ಸೌದೆಯ ಒಲೆಯಾದ್ದರಿಂದ, ರಾತ್ರಿ ದೀಪ ಉರಿಸಲು ಮಾತ್ರ ಚಿಮಿಣಿ ಎಣ್ಣೆ ಬೇಕಾಗುತ್ತಿತ್ತು. ಅರ್ಧ ಲೀಟರೋ, ಒಂದುಲೀಟರೋ ಎಣ್ಣೆಯನ್ನು ತಂದರೆ, ನಾಲ್ಕಾರುವಾರ ದೀಪ ಉರಿಸಬಹುದಿತ್ತು. ಆದರೆ, ಅದನ್ನು ಕೊಡಲು ಸತಾಯಿಸುತ್ತಿದ್ದರು ಅಂದು ನ್ಯಾಯ ಬೆಲೆ ನಡೆಸುತ್ತಿದ್ದ ಮಹಾನುಭಾವರು. ರೇಷನ್ ಸಕ್ಕರೆ  ಮತ್ತು ರೇಷನ್ ಸೀಮೆ ಎಣ್ಣೆಯನ್ನು ಒಬ್ಬರೇ ಹಂಚುವ ಕಾಯಕ ಮಾಡುತ್ತಿದ್ದರು ಮತ್ತು ಪೇಟೆಯಿಂದ ಸಾಕಷ್ಟು ದೂರದಲ್ಲಿದ್ದ ನಮ್ಮಂತಹ ಮನೆಗಳವರಿಗೆ ರೇಷನ್ ಹಂಚುವುದಕ್ಕಿಂತಾ, ಅದಾಗಲೇ ಖಾಲಿ ಆಗಿದೆ ಎಂಬ ಉತ್ತರವೇ ಜಾಸ್ತಿ. ಯಾಕೆ ಎಂದು ಕೇಳಿದರೆ, ಸರಕಾರದಿಂದ ಬಂದಿಲ್ಲ ಎನ್ನುತ್ತಾ ಅರ್ಧ ಅಥವಾ ಒಂದು ಲೀಟರ್ ಸೀಮೆ ಎಣ್ಣೆ ಕೊಡುತ್ತಿದ್ದರು. ಈ ತಿಂಗಳು ಅದ್ಯಾವುದೋ ಶುಭಕಾರ್ಯ ಇದೆ, ಸ್ವಲ್ಪ ಜಾಸ್ತಿ ಕೊಡಿ ಎಂದು ಗೋಗರೆದಾಗ, ಅರ್ಧ ಲೀಟರ್‍ಜಾಸ್ತಿ ಕೊಡುತ್ತಿದ್ದರು. ಅದನ್ನು ತಂದು, ಮಿತವ್ಯಯದಿಂದ ಬಳಸಿ, ಮನೆಯ ಮಕ್ಕಳು ಎಲ್ಲರೂ ಬುಡ್ಡಿದೀಪದಲ್ಲಿ ಓದಿ, ಪರೀಕ್ಷೆ ಪಾಸು ಮಾಡಬೇಕಿತ್ತು!
     ಸಣ್ಣ ಸಣ್ಣ ಬುಡ್ಡಿ ದೀಪಕ್ಕಿಂತ ಲಾಟೀನು ಮತ್ತು ದೊಡ್ಡ ಗಾಜಿನ ಬುರುಡೆಯ ದೀಪಗಳು ಸ್ವಲ್ಪ ಹೆಚ್ಚು ಬೆಳಕು ನೀಡುತ್ತಿದ್ದವು. ಕುಂದಾಪುರ ಪೇಟೆಯಲ್ಲಿ ಹೊಸ ಹೊಸ ರೀತಿಯ ಗಾಜಿನ ಬುರುಡೆ ಇದ್ದ ದೀಪಗಳನ್ನು ಕಂಡಕೂಡಲೆ, ಆಸೆಯಿಂದ ನಮ್ಮ ಅಪ್ಪಯ್ಯ ಮನೆಗೆ ತರುತ್ತಿದ್ದರು. ಸ್ವಲ್ಪವಾದರೂ ಪ್ರಖರವಾದ ಬೆಳಕಿನಲ್ಲಿ ಮಕ್ಕಳು ಓದಲಿ ಎಂಬ ಅಭಿಲಾಷೆ ಅವರದ್ದು. ಆದರೆ, ಅವುಗಳನ್ನು ನಾಜೂಕಿನಿಂದ ಬಳಸಬೇಕಿತ್ತು. ಚಿಕ್ಕದಾದ ತಳಕ್ಕೆ, ದೊಡ್ಡದಾದ ಬುರುಡೆ ಇದ್ದುದರಿಂದ, ಆ ದೀಪಗಳಿಗೆ ಸಮತೋಲನದ ಸಮಸ್ಯೆ ಇತ್ತು ಎಂದು ಕಾಣುತ್ತದೆ. ದೀಪಗಳು ಮಗುಚಿಕೊಂಡು, ಬುರುಡೆ ಒಡೆದುಹೋಗುವ ಸುದ್ದಿ ತೀರಾ ಸಮಾನ್ಯ. ಅಥವಾ ವಾರಕ್ಕೊಮ್ಮೆ ಆ ಬುರುಡೆಗಳಿಗೆ ಅಂಟಿದ್ದ ಮಸಿಯನ್ನು ಚೊಕ್ಕ ಮಾಡುವ ಸಂದರ್ಭದಲ್ಲಿ, ಕೈತಪ್ಪಿ ನೆಲಕ್ಕೆ ಬಿದ್ದು ಒಡೆದು ಹೋಗುತ್ತಿದ್ದುದು ಮತ್ತಷ್ಟು ಸಾಮಾನ್ಯ.

     ಸೀಮೆ ಎಣ್ಣೆಯನ್ನೇ ಬಳಸಿ ಪ್ರಖರವಾದ ಬೆಳಕನ್ನು ನೀಡುವ ಸಾಧನಗಳನ್ನು ಅಂದು ಕಂಡುಹಿಡಿದ ವಿಚಾರ ನಿಜಕ್ಕೂಒಂದು ಕೌತುಕ. ಶಾಲೆಗಳಲ್ಲಿ ವಾರ್ಷಿಕೋತ್ಸವ ನಡೆಸುವಾಗ ಬಳಸುತ್ತಿದ್ದ ಪೆಟ್ರೊಮ್ಯಾಕ್ಸ್ ದೀಪವು ನಿಮಗೆಲ್ಲಾ ಸಾಕಷ್ಟು ಪರಿಚಿತವೇ ಇರಬೇಕು. ಇಂದು ಮರೆಯಾಗಿರುವ ಪೆಟ್ರೊಮ್ಯಾಕ್ಸ್  ಬೆಳಕು ಅಂದಿನ ಶಾಲಾ ವಾರ್ಷಿಕೋತ್ಸವ, ನಾಟಕ ಮತ್ತು ಯಕ್ಷಗಾನಗಳಿಗೆ ಅಗತ್ಯವಾಗಿ ಬೇಕಿತ್ತು. ಸೀಮೆ ಎಣ್ಣೆ ತುಂಬಿ, ಗ್ಯಾಸ್ ಹೊಡೆದು, ಬೆಂಕಿ ಕಡ್ಡಿ ಗೀರಿದಾಗ, ಪೆಟ್ರೊಮ್ಯಾಕ್ಸ್ ದೀಪದ ಮ್ಯಾಂಟಲ್ ಭಗ್ ಎಂದು ಹತ್ತಿಕೊಂಡು ಉರಿಯಿತೆಂದರೆ, ವಿದ್ಯುತ್ ದೀಪದ ಪ್ರಖರತೆ. ಗುಸ್ ಎಂದು ಸದ್ದು ಮಾಡುತ್ತಾ, ನಾಟಕದ ಪ್ರದರ್ಶನಕ್ಕೆ ಹೊಳಪನ್ನು ನೀಡುತ್ತಿದ್ದ ಆ ದೀಪಗಳ ಸದ್ದು, ನಾಟಕದ ಮಾತು ಮತ್ತು ಹಾಡುಗಳಿಗೆ ಒಂದು ರೀತಿಯ ಶೃತಿ ಇದ್ದಂತೆ. ವಿದ್ಯುತ್ ದೀಪದ ಬಳಕೆ ಜಾಸ್ತಿಯಾದಂತೆಲ್ಲಾ, ಚಿಮಿಣಿ ಎಣ್ಣೆ ಬಳಸಿ ಬೆಳಕು ನೀಡುವ ಸಾಧನಗಳು ದೀಪಗಳು ಮರೆಯಾಗಿವೆ.
                                                                               -ಶಶಿಧರ ಹಾಲಾಡಿ

Comments

Submitted by Shobha Kaduvalli Sun, 01/20/2013 - 11:48

ನಿಮ್ಮ ಈ ಪ್ರಬಂಧ ನನ್ನ ಬಾಲ್ಯವನ್ನು ನೆನಪಿಸುತ್ತದೆ. ಚಿಮಣಿ ದೀಪದ ಬೆಳಕಿನಲ್ಲಿ ರಾತ್ರಿಎಲ್ಲ ಓದಿ ಬೆಳಿಗ್ಗೆ ಮೂಗಿನ ಹೊಳ್ಳೆಯ ಸುತ್ತ ಕಪ್ಪು ಮಸಿ ಕಂಡು ನಗುತ್ತಿದ್ದುದು ನೆನಪಾಗುತ್ತದೆ.
Submitted by sasi.hebbar Mon, 01/21/2013 - 11:35

In reply to by Shobha Kaduvalli

ಮೂಗಿನ ಹೊಳ್ಳೆಯ ಸುತ್ತ ಕಪ್ಪು ಮಸಿ! ನಗು ಬಂತು. ನಿಮ್ಮ ಅಡುಗೆ ರುಚಿಗಳು, ಪುನ: ಬಾಲ್ಯದ ತಂಬುಳಿಗಳನ್ನು ನೆನಪಿಸುತ್ತಿವೆ. ಏಕೆಂದರೆ, "ಕಾಕಿ" ಕೊಡಿ, "ಕಿಸ್ಕಾರ ಹೂ" ಮೊದಲಾದವು ಬೆಂಗಳೂರಿನಲ್ಲಿ ಸರಿಯಾಗಿ ಸಿಗುತ್ತಿಲ್ಲ!
Submitted by venkatb83 Sun, 01/20/2013 - 16:38

ನಿಮ್ಮ ಈ ಬರಹ ನನ್ನ ಆ ದಿನಗಳನ್ನು ನೆನಪಿಸಿತು.... ನೀವ್ ಹೇಳಿದ ರೀತಿಯ ದೀಪಗಳು -ಅವುಗಳನ್ನು ಉರಿಸುತ್ತಿದ್ದ ವಿಧಾನ ಎಲ್ಲವೂ ಮರೆಯಾಗಿ ಸುಮಾರು ಹತ್ತು ವರ್ಷಗಳು ಆಗಿರಬೇಕು... ಆಮೇಲೆ ಯವ್ಯಾವ್ದೋ ಯೋಜನೆಗಳ ಮೂಲಕ ಹಳ್ಳಿ ಹಳ್ಳಿಗೂ ಹಗಲು ಇಲ್ಲದಿದ್ದರೂ ರಾತ್ರಿ ಕರೆಂಟ್ ಬಂತು-ಈಗಲೂ ಹಳ್ಳಿಗಳಲಿ ಕೆಲವರು ಆ ದೀಪಗಳನ್ನು ಉಪಯೋಗಿಸುವುದು ನೋಡಿರುವೆ.... ನಮ್ಮ ಅಣ್ಣ ಆ ಬುಡ್ಡಿ ದೀಪದ ಕೆಳಗಡೆ ಓದುತ್ತಿದ್ದ ದೃಶ್ಯ ಇನ್ನೂ ನೆನಪಿದೆ..\ನಾ ಸಹಾ ಕೆಲವು ದಿನ ಆ ರೀತಿ ಓದಿದ್ದೆ- ಬೆಳಗ್ಗೆ ಎದ್ದಾಗ ಮೂಗಲ್ಲಿ ಅದರ ಕಪ್ಪು ಕೂತಿರುವುದು..!! ಆಮೇಲೆ ಕರೆಂಟ್ ಬಂದು ಅದರ ಬೆಳಕಲ್ಲಿ ಓದುವದು ಶುರು ಆಯ್ತು.. ಆಗೆಲ್ಲ ಬುಡ್ಡಿ ದೀಪ-ಮತ್ತು ಬೀದಿ ದೀಪದ ಕೆಳಗಡೆ ಓದಿ ಹಲವು ಸಾಧನೆ ಮಾಡಿದ ಹಲವು ಮಹಾತ್ಮರ ಬಗ್ಗೆ ಮೇಸ್ಟ್ರು -ಮನೆಯವರು ಕಥೆ ಹೇಳುತ್ತಿದ್ದುದು ನೆನಪಿದೆ... ಈಗಲೂ ಸೀಮೆ ಎಣ್ಣೆ ಸಿಗುತ್ತೆ -ಬುಡ್ಡಿ ದೀಪವೂ... ಈ ತರಹದ ಸವಿ ನೆನಪುಗಳ ಬರಹ ಸಂಪದದಲ್ಲಿ ಆಗಾಗ ಬರುತ್ತಿರಲಿ... ಒಳ್ಳೆಯ ಬರಹಕ್ಕೆ ನನ್ನಿ .. ಶುಭವಾಗಲಿ.. \|
Submitted by sasi.hebbar Mon, 01/21/2013 - 12:00

In reply to by venkatb83

ಈಗಲೂ ಸೀಮೆ ಎಣ್ಣೆ, ಬುಡ್ಡಿ ಗಳು ಸಿಗುತ್ತಿದ್ದರೂ, ವಿದ್ಯುತ ಕಡಿತ ಉಂಟಾದಾಗ ಅವುಗಳನ್ನು ಉಪಯೋಗಿಸಲು ಈಗಿನ ತಲೆಮಾರು ಹಿಂಜರಿಯುತ್ತದೆ - ಸೋಮಾರಿತನವೋ, ರೇಜಿಗೆಯೋ ಗೊತ್ತಿಲ್ಲ. ಈಗಿನವರು ಮೊಂಬತ್ತಿ ಹಚ್ಚುವರೇ ಹೊರತು ಬುಡ್ಡಿ ದೀಪ ಹಚ್ಚಲು ಹಿಂಜರಿಕೆ - ಪೇಟೆಗಳಲ್ಲಿ ಮತ್ತು ಹಳ್ಳಿಗಳಲ್ಲೂ ಎಮರ್ಜೆನ್ಸಿ ದೀಪಗಳು ಬಂದಿರುವುದರಿಂದ, ಬುಡ್ಡಿ ದೀಪದ ಪ್ರಾಮುಖ್ಯತೆ 20 ನೆ ಶತಮಾನಕ್ಕೇ ಕೊನೆಗೊಂಡಿತು ಎನ್ನಬಹುದು.
Submitted by Shobha Kaduvalli Mon, 01/21/2013 - 12:05

In reply to by sasi.hebbar

ಸೀಮೆ ಎಣ್ಣೆ ಬುಡ್ಡಿ ದೀಪಗಳನ್ನು ಬಿಡಿ, ದೀಪಾವಳಿಯಲ್ಲಿ ಹಣತೆ ದೀಪಗಳನ್ನು ಹಚ್ಚುವ‌ ಬದಲಿಗೆ ಮೊoಬತ್ತಿ ಹಚ್ಚುವವರೂ ಇದ್ದಾರೆ!
Submitted by sasi.hebbar Mon, 01/21/2013 - 12:12

In reply to by Shobha Kaduvalli

ನಿಮ್ಮ ಗಮನಿಕೆ ಸಕಾಲಿಕವಾಗಿದೆ. ನಿಜ, ದೀಪಾವಳಿಯ ದಿನ ಮೊಂಬತ್ತಿ ಹಚ್ಚುವುದು , ಹಣತೆಯ ಬದಲಿಗೆ , ಈಚೆಗೆ ಬಳಕೆಗೆ ಬರುತ್ತಿದೆ! ಇಲ್ಲಿ ಪುನ: ಈಗಿನ ಜನಾಂಗಕ್ಕೆ ಎಣ್ಣೆ ಹಾಕಿ, ಹಣತೆಯನ್ನು ಜಾಗರೂಕತೆಯಿಂದ ಇರಿಸುವುದಕ್ಕೆ ರೇಜಿಗೆಯೋ, ಬೇಸರವೋ, ಸೋಮಾರಿತನವೋ, ಏನೋ ಕಾಡುತ್ತದೆ. ಅದಕ್ಕೆ, ಸುಲಭದಲ್ಲಿ ಅಂಗಡಿಯಲ್ಲಿ ಸಿಗುವ ಮೊಂಬತ್ತಿಯನ್ನು ಹಚ್ಚುತ್ತಾರೆ! ಕೇಳಿದರೆ, "ಅದೂ ದೀಪವೇ ಅಲ್ಲವೇ?" ಎಂದು ಬಾಯಿ ಮುಚ್ಚಿಸುತ್ತಾರೆ. ದೀಪಾವಳಿಯ ಮೆರುಗು ಹೆಚ್ಚಾಗಲು, ಹಣತೆಯ ದೀಪಗಳ ಸಾಲು ಚೆನ್ನಾಗಿರುತ್ತದೆ. ಧನ್ಯವಾದ, ನಿಮ್ಮ ಪ್ರತಿಕ್ರಿಯೆಗೆ.
Submitted by partha1059 Sun, 01/20/2013 - 18:48

ಮೊದಲೆಲ್ಲ ಬುಡ್ಡಿ ದೀಪಗಳ‌ ಉಪಯೋಗ‌ ಜಾಸ್ತಿಯಿತ್ತು. ಕೆಲವು ಸಾರಿ ಸಣ್ಣ ದೀಪ‌ ಸತತವಾಗಿ ಉರಿಯುತ್ತಿದ್ದು ಅದರಿ0ದ‌ ಒಲೆ ಹಚ್ಚುವುದು ಮು0ತಾದವು ಮಾಡುತ್ತಿದ್ದರು (ಬೆ0ಕಿಕಡ್ಡಿ ಉಳಿಸಲು) , ಮೂಡಿಗೆರೆ ಹತ್ತಿರದ‌ ಗೆ0ಡೆಹಳ್ಳಿ ಎ0ಬಲ್ಲಿ ನಮ್ಮ ತ0ದೆಯವರು ಹೈಸ್ಕೂಲಿನಲ್ಲಿ ಕೆಲಸ‌ ಮಾಡುತ್ತಿದ್ದರು ಆಗ್ಯೆ ನಾವೆಲ್ಲ ಮಕ್ಕಳು. ಒ0ದು ಘಟನೆ ಹೇಳಿದರೆ ಸ್ವಲ್ಪ ಉದ್ದವಾದಿತು, ನಮ್ಮ ಅಣ್ಣನಿಗೆ ಚಿಮಿಣಿ ಒರೆಸಿ ದೀಪ‌ ಹಚ್ಚಲು ಹೇಳಿದರು (ಕರೆ0ಟ್ ಹೋಗಿತ್ತು) , ಆದರೆ ಅದನ್ನು ಮಾಡಲು ಹೋದ‌ ನಮ್ಮ ಅಣ್ಣ ಚಿಮಿಣಿ ಒಡೆದು ಹಾಕಿದ‌, ನಮ್ಮ ಅಪ್ಪ ,ಐವತ್ತು ಪೈಸೆ ಕೊಟ್ಟು ಮತ್ತೊ0ದು ಚಿಮಿಣಿ ತರಲು ಹೇಳಿದರು, ನಾನು ಹಾಗು ಅವನು ಅ0ಗಡಿಗೆ ಹೋಗಿ ಹಣ ಕೊಟ್ಟು ಹೊಸ‌ ಗಾಜಿನ ಚಿಮಿಣಿ ತೆಗೆದುಕೊ0ಡೆವು, ಮನೆಗೆ ಬ0ದು ಒಳಗೆ ಮೆಟ್ಟಿಲು ಹತ್ತುತ್ತಿದ್ದೆವು , ಅದೇನು ಆಯ್ತೊ, ಬಾಗಿಲ‌ ಹತ್ತಿರ‌ ಚಿಮಿಣಿ ಕೈ ಜಾರಿತು 'ಪಳಾರ್ ' ಮತ್ತೆ ಒಡೆದು ಹೋಯ್ತು. 'ಏನಪ್ಪ ನೀವು ಹುಡುಗರು..' ಎನ್ನುತ್ತ , ಮತ್ತೆ ಹಣ‌ ಕೊಟ್ಟು ಮತ್ತೊ0ದು ಚಿಮಿಣಿ ತರಲು ಕಳಿಸಿದರು. ಇ0ದಿಗು ಒಮ್ಮೆಮ್ಮೆ ನನಗೆ ಅವರ‌ ಸಹನೆ ಅಚ್ಚರಿ ತರಿಸುತ್ತದೆ. ನಮಗಾದರೆ ಅಷ್ಟು ಸಹನೆ ಇಲ್ಲ, ಅನ್ನಿಸುತ್ತೆ ಇದು ನನ್ನ ಗಾಜಿನ‌ ಬುಡ್ಡಿ ಯ‌ ಪ್ಲಾಶ್ಹ್ ಬ್ಯಾಕ್
Submitted by sasi.hebbar Mon, 01/21/2013 - 12:03

In reply to by partha1059

ಇದೇ ರೀತಿಯ ಒಂದು ಘಟನೆ ನನ್ನ ಬಾಲ್ಯದಲ್ಲೂ ನಡೆದಿತ್ತು - ನಮ್ಮ ಅಪ್ಪ ಹೊಸಾ ಲಾಟೀನು ಮತ್ತು ಅದಕ್ಕೊಂದು ಹೊಸ ರೀತಿಯ ದೊಡ್ಡ ಗಾಜಿನ ಬುರುಡೆ ತಂದಿದ್ದರು - ನಾವು ಮಕ್ಕಳು ಒಳ್ಳೆಯ ಬೆಳಕಿನಲ್ಲಿ ಓದಲಿ ಎಂದು. ತಂದು ಮರುದಿನ, ಅದರ ಬುರುಡೆಯನ್ನು ಚೆನ್ನಾಗಿ ಒರೆಸಲು ಹೇಳಿದರು - ನಾನು ಕೈಗೆ ಹಿಡಿದುಕೊಂಡಕೂಡಲೇ, ಜಾರಿ ನೆಲಕ್ಕೆಬಿದ್ದು ಅದು ಪುಡಿ ಪುಡಿ ಆಯಿತು! ಬುರುಡೆ ಇಲ್ಲದ ಆ ಲಾಟೀನು ಮೂಲೆ ಸೇರಿತು!
Submitted by spr03bt Sun, 01/20/2013 - 22:23

ನಿಮ್ಮ ಲೇಖನ ನನ್ನ ಬಾಲ್ಯವನ್ನು ನೆನಪಿಸಿತು. ನಾವು ಓದಲು (೨೦ನೇ ಶತಮಾನದ ಕೊನೆಯ ದಶಕ) ಶುರು ಮಾಡುವ ಹೊತ್ತಿಗೆ ನಮ್ಮ ಮನೆಗೆ ವಿದ್ಯುತ್ ದೀಪದ ವ್ಯವಸ್ಥೆಯಾಗಿತ್ತು. ಆದರೆ ಕರೆ೦ಟ್ ಹೋಗುವುದು ಸಾಮಾನ್ಯ ವಿಷಯವಾದ್ದರಿ೦ದ ಬುಡ್ಡಿ ಮತ್ತು ಲ್ಯಾ೦ಪ್ ಉಪಯೋಗ ಇತ್ತು. ಹೀಗೆ ಒಮ್ಮೆ ಬುಡ್ದಿಯ ಬೆಳಕಿನಲ್ಲಿ ಓದುತ್ತಿದ್ದಾಗ ನಾನು ಕೂದಲು ಸಹ ಸುಟ್ಟುಕೊ೦ಡಿದ್ದೆ . :)
Submitted by sasi.hebbar Mon, 01/21/2013 - 12:06

In reply to by spr03bt

ನಿಜ, ನೀವು ಸೂಚಿಸಿದಂತೆ ಬುಡ್ಡಿದೀಪಗಳು 20ನೆಯ ಶತಮಾನದಲ್ಲಿ ಬೆಳಕು ನೀಡುವ ಪ್ರಮುಖ ಸಾಧನಗಳಾಗಿದ್ದವು. ಈಗ,ಅಂದರೆ ಈ ಶತಮಾನದಲ್ಲಿ, ಅವುಗಳು ಹೆಚ್ಚು ಕಮ್ಮಿ ಮೂಲೆಗುಂಪಾಗಿ, ನೆನಪಿನಿಂದ ಮರೆಯಾಗುವ ಸ್ಥಿತಿ ತಲುಪಿವೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.
Submitted by Shobha Kaduvalli Mon, 01/21/2013 - 12:02

ಪ್ರತಿಕ್ರಿಯೆಗೆ ಧನ್ಯವಾದಗಳು.... "ಕಾಕಿ ಕೊಡಿ"ಗೆ ಬೆoಗಳೂರಿನಲ್ಲಿ "ಗಾಣಿಕೆ ಸೊಪ್ಪು" ಎನ್ನುತ್ತಾರೆ... ಕಿಸ್ಕಾರ್ ಹೂವು ಸಿಗುತ್ತದೋ ಇಲ್ಲವೋ ತಿಳಿದಿಲ್ಲ‌. .....