ನಮ್ಮ ಹೊಳಲ್ಕೆರೆ ಹೈದ, ನಮ್ಮೆಲ್ಲರ ಪ್ರೀತಿಯ ಡಾ. ಎಚ್ಚೆಸ್ವಿ !

ನಮ್ಮ ಹೊಳಲ್ಕೆರೆ ಹೈದ, ನಮ್ಮೆಲ್ಲರ ಪ್ರೀತಿಯ ಡಾ. ಎಚ್ಚೆಸ್ವಿ !

ಚಿತ್ರ

 

ಸನ್ . 2013 ರ 'ಮೈಸೂರ್ ಅಸೋಸಿಯೇಷನ್ ಮತ್ತು ಮುಂಬೈ ವಿಶ್ವ ವಿದ್ಯಾಲಯ ಜಂಟಿಯಾಗಿ ಆಯೋಜಿಸುವ'  'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ' ದಲ್ಲಿ  ಭಾಷಣ ಮಾಡಲು ಡಾ. ಎಚೆಸ್ವಿಯವರು ಬರಲಿದ್ದಾರೆ. 19-20 ನೆಯ ತಾರೀಖು  ಶನಿವಾರ-ರವಿವಾರ ಜರುಗಲಿರುವ ಕಾರ್ಯಕ್ರಮದಲ್ಲಿ ಮೊದಲನೆಯ ದಿನ 'ಆಧುನಿಕ ಕನ್ನಡ ಕವಿತೆ' ಗಳನ್ನು ಕುರಿತು ಮಾತಾಡಲಿದ್ದಾರೆ. ಇದಕ್ಕೆ ಪೂರ್ವ ಭಾವಿಯಾಗಿ ಏನ್.ಕೆ.ಇ. ಎಸ್ . ಶಾಲೆಯ ಮಕ್ಕಳಿಂದ 'ಕಾವ್ಯ ನೃತ್ಯ' ಕಾರ್ಯಕ್ರಮವಿದೆ. 20 ನೆಯ ತಾರೀಖು  ರವಿವಾರದಂದು 11 ಗಂಟೆಗೆ 'ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ. ಇದನ್ನು ಎಚೆಸ್ವಿಯರು ನಡೆಸಿಕೊಡುತ್ತಾರೆ. ಮೊದಲು 
 
ಬುಕ್ 1-  ಡಾ. ಚನ್ನವೀರ ಕಣವಿಯವರು ರಚಿಸಿದ,  'ಬೆಂದ್ರೆ ಕಾವ್ಯ , ಕುಹೂ ಕುಹೂ' (ಬೇಂದ್ರೆ ಸ್ಮಾರಕ ಟ್ರಸ್ಟ್ ಧಾರವಾಡ) 
 
ಬುಕ್ 2- ಡಾ. ಗಿರಿಜಾ ಶಾಸ್ತ್ರಿಯವರ 'ಪುಸ್ತಕ ಮತ್ತು ನವಿಲುಗರಿ' (ಅಭಿನವ ಪ್ರಕಾಶನ, ಬೆಂಗಳೂರು)
 
11-30 ಕ್ಕೆ  'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ' :  
  
ವಿಷಯ : 'ನಾನು ಮತ್ತು ನನ್ನ ಸಮಕಾಲೀನರು' 
 
(ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರಿಂದ) 
 
ನಾನು,(ಹೊರಂಲವೆಂ) ಶಂಕರ, ದಿವಾಕರ, ಓಂಕಾರಪ್ಪ, ಕೃಷ್ಣರಾವ್,  ಎಚ್. ಎಸ್ . ವೆಂಕಟೇಶ ಮೂರ್ತಿ,  ಹೊಳಲ್ಕೆರೆ ಹೈಸ್ಕೂಲ್ ನಲ್ಲಿ ಒಟ್ಟಿಗೆ  3  ವರ್ಷ ವ್ಯಾಸಂಗಮಾಡಿದವರು. ಮೊದಲನೇ ಬೆಂಚ್ ನಲ್ಲಿ ಕೂಡುತ್ತಿದ್ದ ನಾವು ಶಿಸ್ತಿನ ಸಿಪಾಯಿಗಳಾಗಿದ್ದೆವು. ಮುಖ್ಯೋ ಪಾಧ್ಯಾಯ ಸೀತಾರಾಮಯ್ಯನವರಾಗಲೀ, ಸುಬ್ಬರಾಯರು, ಅನಂತರಾಮಯ್ಯವರು, ಚಿದಾನಂದ ಮೂರ್ತಿ, ನರಸಿಂಹ ಶಾಸ್ತ್ರಿ, ರಾಮಚಂದ್ರರಾಯರಾಗಲೀ  ಬೆರಳು ತೋರಿಸದಂತೆ ನಡೆದುಕೊಂಡೆವು. ಮುನಿಸಿಪಲ್ ಶಾಲೆಯಲ್ಲಿ ಸಂಬಳ ಸರಿಯಾದ ಸಮಯಕ್ಕೆ  ಸಿಗದೇ ಇದ್ದರೂ  ಎಲ್ಲ ಶಿಕ್ಷಕರು ಅತ್ಯಂತ ಶ್ರದ್ಧೆಯಿಂದ ಪಾಠ ಹೇಳುತ್ತಿದ್ದರು. ಕೃಷ್ಣರಾವ್,ಹೋದ ವರ್ಷ ನಮ್ಮನ್ನಗಲಿ ತೀರಿಕೊಂಡನು. ಸುಮಾರು 15 ದಿನಗಳ ಹಿಂದೆ ನಾನು ಬೆಂಗಳೂರಿಗೆ ಹೋದಾಗ, ನಾನು ನನ್ನ ಗೆಳೆಯ ಶಂಕರ, ಮತ್ತೊಬ್ಬ ಗೆಳೆಯ ಶಂಕರ ಜೊತೆಗೂಡಿ  ಮೂರ್ತಿಯವರ ಮನೆಗೆ ಹೋಗಿ ಅವರ ಪರಿವಾರದವರನ್ನು ಭೆಟ್ಟಿ ಮಾಡಿದ್ದೆವು. ಎಚೆಸ್ವಿಯವರ  ತಾಯಿಯವರು ಮೂರ್ತಿಯವರ ಬಾಲ್ಯದ ದಿನಗಳ  ಹಲವಾರು ವಿಷಯಗಳನ್ನು ನಮಗೆ ವಿವರಿಸಿ ಹೇಳಿದರು. ಬೆಳಿಗ್ಯೆ ಬೇಗ ಹೋಗಿದ್ದರಿಂದ ತಿಂಡಿಯಿಂದ ಶುರುವಾಗಿ ಸುಮಾರು 1 ಗಂಟೆಗೆ ಭರ್ಜರಿ ಊಟದಿಂದ ಮುಕ್ತಾಯವಾಯಿತು. ಮಧ್ಯದಲ್ಲಿ ಎಚ್ಚೆಸ್ವಿ  ಮೊದಲೇ ನಿರ್ಧಾರವಾಗಿದ್ದ ಕಾರ್ಯಕ್ರಮಕ್ಕೆ ಹೋಗಿ ಬೇಗ ವಾಪಸ್ಸಾದರು. ಆ ಸಮಯದಲ್ಲಿ ನಾವು ನಾಗರತ್ನಮ್ಮವರ ಜೊತೆ, ಮೂರ್ತಿಯವರ ಸೊಸೆಯ ಜೊತೆ, ಲೋಕಾಭಿರಾಮವಾಗಿ ಚರ್ಚಿಸಿದೆವು. ಹೈಸ್ಕೂಲ್ ಬಿಟ್ಟನಂತರ  ನಾವೆಲ್ಲಾ ನಮ್ಮ ನಮ್ಮ ಹಾದಿಯಲ್ಲಿ ಸಾಗಿದೆವಲ್ಲ. ಅದರ ಬಗ್ಗೆ ಎಲ್ಲರೂ  ಚರ್ಚೆನಡೆಸಿದೆವು. ಹಲವಾರು  ಸಮಸ್ಯೆಗಳ ಬಗ್ಗೆ ವಿಚಾರ ವಿಮರ್ಶೆ ನಡೆಯಿತು. ನಾನು ನನ್ನ ಚಿಕ್ಕ ರೆಕಾರ್ಡರ್  ನಲ್ಲಿ ಒಂದು 'ಸಂವಾದ'ದ ಮಾದರಿಯಲ್ಲಿ ಮಾತಾಡಿ,  ಅವನ್ನೆಲ್ಲಾ ಧ್ವನಿಮುದ್ರಿಸಿಕೊಂಡೆ.  ಎಚ್ಚೆಸ್ವಿಯವರು  ಈಗೀಗ  ಪ್ರೀತಿಯ ಪತ್ನಿ ರಾಜಲಕ್ಷ್ಮಿಯವರ ನಿಧನದಿಂದ ಆದ  ಆಘಾತದಿಂದ  ಹೊರಗೆ ಬಂದು ಎಲ್ಲರೊಡನೆ ಬೆರೆಯಲು ಯತ್ನಿಸುತ್ತಿದ್ದಾರೆ. ಹಲವು ದಶಕಗಳ ಕಾಲ ಅವರ ನೆರಳಿನಂತೆ  ಹಿಂಬಾಲಿಸುತ್ತಿದ್ದ ಪ್ರಿಯ ಸಖಿ ಒಮ್ಮೆಲೇ ಇಲ್ಲದಂತಾದಾಗ ಜನ್ಮಿಸುವ ಸಂಕಟ, ಅಸಹಾಯಕತೆ, ಅಪರಾಧಿ ಭಾವನೆ, ಆಶ್ಚರ್ಯ, ದಿಭ್ರಮೆ, ಗೊಂದಲಗಳನ್ನೂ ಒಟ್ಟಾರೆಯಾಗಿ ಬಿಂಬಿಸುವ ಒಂದು ಸಂಕೀರ್ಣ ಅನುಭವವನ್ನು ಒಳಗೊಂಡ 'ಉತ್ತರಾಯಣ ಮತ್ತು ..ಎಂಬ ಕವನ ಗುಚ್ಛದಲ್ಲಿ ದಾಖಲಿಸಿದ್ದಾರೆ. ನನಗೆ ಮತ್ತು ನನ್ನ ಗೆಳೆಯನಿಗೆ ಆ ಪ್ರತಿಯನ್ನು ಮತ್ತು ಅವರ ಜೀವನ ಚರಿತ್ರೆಯನ್ನು ಸಾರುವ ಮತ್ತೊಂದು ಅತ್ಯುತ್ತಮ ಸಣ್ಣ ಕಥೆಗಳ ಮಾಲೆಯ  ಪುಸ್ತಕ, 'ಎಚ್ಚೆಸ್ವಿ ಅನಾತ್ಮ ಕಥನ'  ಬಳುವಳಿಯಾಗಿ ಕೊಟ್ಟಿದ್ದಾರೆ.  ಎರಡನ್ನು ಓದುತ್ತಿದ್ದೇನೆ. ನಾನು ಸ್ವಲ್ಪ ನಿಧಾನದ ಮನುಷ್ಯ;  ಪುಸ್ತಕದಲ್ಲಿ ಬರುವ ಸಾವು - ಅದು ಹುಟ್ಟಿಸುವ ದಿಗ್ಭ್ರಮೆ, ಸತ್ತವರ ರೂಪಕ್ಕಾಗಿ ನಡೆಯುವ ಹುಡುಕಾಟ, ಭಾರವಾದ  ಹಾಗು ಮರೆಯಲಾರದ ಸುಂದರ ನೆನಪುಗಳು, ಮೊದಲಾದವುಗಳನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೆ ಸಮಯ ಬೇಕಲ್ಲವೇ !
 
ನನ್ನ ಆಪ್ತ ಗೆಳೆಯ ಎಚ್ಚೆಸ್ವಿಯವರ ಜನ್ಮ ವೃತ್ತಾಂತ :
 
೧೯೪೪ ರ ಜೂನ್ ೨೩ ರಂದು ತಾಯಿ ನಾಗರತ್ನಮ್ಮ, ತಂದೆ ನಾರಾಯಣಭಟ್ಟರ ಚೊಚ್ಚಲ ಮಗನಾಗಿ  ಹೊದಿಗ್ಗೆರೆಯಲ್ಲಿ ಒಂದು ಸುಂದರ ಸೌರಭದ 'ಸುಮ' ಅರಳಿತು. ತಾಯಿ ಶಿಕ್ಷಕಿ.  ದುರ್ದೈವದಿಂದ  ಎಚ್ಚೆಸ್ವಿ ತಾವು  ಹುಟ್ಟುವ ಮೊದಲೇ ತಂದೆಯರನ್ನು ಕಳೆದುಕೊಂಡು ಅನಾಥರಾದರು. ನಾಗರತ್ನಮ್ಮನವರು ಆ ಚಿಕ್ಕವಯಸ್ಸಿನಲ್ಲಿ (೬ ತಿಂಗಳ ಗರ್ಭಿಣಿ) ವೈಧವ್ಯದ , ಅನಾಥ ಪ್ರಜ್ಞೆಯಿಂದ ತುಸು ಅಧೀರರಾದರು ನಿಜ. ಆದರೆ ಅದಮ್ಯ ವಿಶ್ವಾಸ, ಕರ್ತವ್ಯ ಪ್ರಜ್ಞೆ, ತಮ್ಮ ಮಗುವಿನ ಮುಂದಿನ ಜೀವನವನ್ನು ರೂಪಿಸುವ ಗುರುತರ ಜವಬ್ದಾರಿ ಮತ್ತು ತ್ಯಾಗ ಮನೋಭಾವದಿಂದ ಮಗುವನ್ನು ಲಾಲನೆ ಪಾಲನೆ ಮಾಡಿ ಬೆಳೆಸಿ ದೊಡ್ಡವನನ್ನಾಗಿ ಮಾಡಿದರು. ಅಜ್ಜ, ಶ್ಯಾನುಭೋಗರು, ಮೃದಂಗ ವಾದಕರು. ನಾಟಕದಲ್ಲಿ ಆಸಕ್ತರು. ಅಜ್ಜಿ, ಸೀತಮ್ಮ. ೧೦ ವಯಸ್ಸಿನ ಬಾಲಕನಾಗಿದ್ದಾಗಲೇ ಅಜ್ಜ ತೀರಿಕೊಂಡರು. ಅಜ್ಜಿ ಸೀತಮ್ಮನವರ ಒಬ್ಬ ಅಕ್ಕ, ಭೀಮಜ್ಜಿ (ಆಕೆಯೂ ವಿಧವೆ) ಎಚ್ಚೆಸ್ವಿ ಯವರ  ಲಾಲನೆ ಪಾಲನೆಯಲ್ಲಿ ಕೈಗೂಡಿಸಿದರು.  ಆ ಬಾಲಕ ಹೊದಿಗ್ಗೆರೆ ರಲ್ಲಿ  ಪ್ರಾಥಮಿಕ ಶಾಲೆ,  ಹೊಳಲ್ಕೆರೆಯಲ್ಲಿ  ಪ್ರೌಢ ಶಾಲೆ,  ಚಿತ್ರದುರ್ಗದಲ್ಲಿ ಕಾಲೇಜ್ ವಿದ್ಯಾಭ್ಯಾಸ ಮುಗಿಸಿ  ಮಲ್ಲಾಡಿಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್ ಆಗಿ ದುಡಿದು, ಬೆಂಗಳೂರು ಮೊದಲಾದ ಜಾಗಗಳಲ್ಲಿ ಓದಿ ತನ್ನ, ಕರ್ತವ್ಯ ನಿಷ್ಠೆ, ಸಾಹಸಮಯ ಪರಿಶ್ರಮದ ಜೀವನ, ಪ್ರತಿಭೆಗಳಿಂದ  ತ್ರಿವಿಕ್ರಮನಾಗಿ ಬೆಳೆದು ತನ್ನ ದೈತ್ಯ ಪ್ರತಿಭೆಯಿಂದ ಕರ್ನಾಟಕದ ಮನೆಮನೆಯ ಮಾತಾಗಿದ್ದಾನೆ. 
 
ಚಿತ್ರದುರ್ಗದಲ್ಲಿ ಕಾಲೇಜ್ ವಿದ್ಯಾಭ್ಯಾಸ. ಭದ್ರಾವತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮ ನಂತರ ಮಲ್ಲಾಡಿಹಳ್ಳಿಯಲ್ಲಿ ಕ್ರಾಫ್ಟ್  ಟೀಚರ್ ಆಗಿ  ನೌಕರಿ, ಕರ್ನಾಟಕ ವಿಶ್ವ ವಿದ್ಯಾಲಯದಿಂದ  ಬಿ.ಎ.ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಮ್.ಎ. ಪದವಿ. 'ಕನ್ನಡದಲ್ಲಿ ಕಥನ ಕವನಗಳು' ಎಂಬ ಮಹಾಪ್ರಬಂಧ ಮಂಡಿಸಿ,  ಪಿ.ಎಚ್.ಡಿ.ಗಳಿಸಿದರು. 'ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿ'ನಲ್ಲಿ ಸುಮಾರು ೩೦ ವರ್ಷ ಸೇವೆಸಲ್ಲಿಸಿ ಕನ್ನಡ ಪ್ರಾಧ್ಯಾಪಕರಾಗಿ ೨೦೦೦ ದಲ್ಲಿ ನಿವೃತ್ತರಾದರು. ಸಾಹಿತ್ಯ ಕೃಷಿಯ ಹಲವು ಪ್ರಕಾರಗಳಲ್ಲಿ ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ ಮಕ್ಕಳ ಸಾಹಿತ್ಯ ಚೆನ್ನಾಗಿ ಕೈಯಾಡಿಸಿದ್ದಾರೆ. ಪ್ರಶಸ್ತಿ, ಪುರಸ್ಕಾರಗಳು ಅವಾಗಿಯೇ ಅವರನ್ನು ಅರಸಿಕೊಂಡು ಬಂದವು. 'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು', 'ಕ್ರೌರ್ಯ', ಕೊಟ್ಟ, 'ಮತದಾನ', ಮೊದಲಾದ ಚಲನ ಚಿತ್ರಗಳಿಗೆ ಗೀತೆಗಳನ್ನು ಬರೆದುಕೊಟ್ಟಿದ್ದಾರೆ. ಮತ್ತೂ ಕೆಲವಕ್ಕೆ ಸಂಭಾಷಣೆ ಸಹಿತ. ದೂರದರ್ಶನಕೆ 'ಯಾವಜನ್ಮದ ಮೈತ್ರಿ', 'ಸವಿಗಾನ,' 'ಮುಕ್ತ, ಧಾರಾವಾಹಿಯೋಳಗಣ ಶೀರ್ಷಿಕೆಯ ಗೀತೆ,. 'ಮಕ್ಕಳಗೀತೆಗಳು', 'ಅನಂತ ನಮನ', 'ತೂಗುಮಂಚ', 'ಸುಳಿಮಿಂಚು', 'ಅಪೂರ್ವ ರತ್ನ', 'ಭಾವಭೃಂಗ', ಧ್ವನಿ ಸುರಳಿಗಳನ್ನು ರಚಿಸಿದ್ದಾರೆ. 
 
ನಾನು ಮೂರ್ತಿ, ಶಂಕರ, ದಿವಾಕರ,  ಓಂಕಾರಪ್ಪ ಮೊದಲಾದವರು ಹೊಳಲ್ಕೆರೆ ಹೈಸ್ಕೂಲಿನ ಮೊದಲನೆಯ ಬೆಂಚಿನಮೇಲೆ ಕುಳಿತು ಒಳ್ಳೆಯ ಹುಡುಗರೆಂದ ನಮ್ಮ ಮೇಷ್ಟ್ರುಗಳಿಂದ ಶಾಭಾಸ್ ಗಿರಿ ಪಡೆಯುತ್ತಿದ್ದೆವು. ಅದೊಂದು ಬಿಟ್ಟರೆ ಮೂರ್ತಿ ಮತ್ತು ನಮ್ಮ ಅಜಗಜಾಂತರ ವ್ಯತ್ಯಾಸ ! ಆ ಸಮಯದಲ್ಲೇ ನಮ್ಮ ಕನ್ನಡ ಪಂಡಿತರಾದ ನರಸಿಂಹಶಾಸ್ತ್ರಿಯಗಳ ಕಣ್ಣಿಗೆ ಬಿದ್ದಿದ್ದ. ಕೆಲವಾರು ಚಿಕ್ಕಪುಟ್ಟ ಪದ್ಯಗಳನ್ನು ಬರೆದು ಅವರಿಗೆ ತೋರಿಸಿದ್ದ. ಶಾಸ್ತ್ರಿಗಳು ಬಹಳ ಅಸ್ತೆಯಿಂದ ಸಾಲುಗಳನ್ನು ತಿದ್ದಿ, ರಚನೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಸಮಯಬಂದಾಗ ನೋಡಿ ನಿಮ್ಮಲ್ಲಿ ಮುಂದೆ ಯರಾದರೂ ಒಬ್ಬ 'ಬೇಂದ್ರೆ', 'ತರಾಸು', 'ಅನಕೃ' ಆಗಬಹುದು,  ಎಂದು ನಮ್ಮನ್ನು ಹುರುದುಂಬಿಸುತ್ತಾ,  'ನೋಡಿ ಮೂರ್ತಿ ಆಗಾಗಲೇ ಎಷ್ಟು ಸೊಗಸಾಗಿ ಕವನ ಬರೆಯುತ್ತಿದ್ದಾನೆ'. 'ಇದನ್ನು ಖಂಡಿತ ಮುಂದುವರೆಸು,'  ಎಂದು ಅಭಿನಂದಿಸಿ ಹರಸಿದ್ದರು. ಒಂದೇ ವಯಸ್ಸಿನ ಓರಿಗೆಯ ಗೆಳೆಯರೆಂಬ ವಿಷಯ ಬಿಟ್ಟರೆ, ನನಗೂ ಮೂರ್ತಿಗೂ ಯಾವ ಹೋಲಿಕೆಯೂ ಇಲ್ಲ. 
 
ಮೂರ್ತಿಯನ್ನು ಮಾತಾಡಿಸಿದರೆ ಸಾಕು   ಜಿ.ಎಸ್.ಎಸ್, ನಿಸ್ಸಾರ್ ಅಹ್ಮೆದ್, ಅಡಿಗ, ಕೆ.ಎಸ್.ನರಸಿಂಹಸ್ವಾಮಿ, ಬೇಂದ್ರೆ, ಕೀರ್ತಿನಾಥ ಕುರ್ತುಕೋಟಿ,ಡಾ ಚಂದ್ರಶೇಖರ ಕಂಬಾರ, ಪ್ರೊ.ಎಸ್.ಕೆ ರಾಮಚಂದ್ರ ರಾವ್, ಶಿವರಾಮ ಕಾರಂತ,ಶ್ರೀರಂಗ ಮತ್ತೂರು ಕೃಷ್ಣಮೂರ್ತಿ,ಡಾ. ಎಸ್.ಎಲ್. ಬೈರಪ್ಪ, ಎಲ್.ಎಸ್. ಶೇಶಗಿರಿರಾವ್,ಡಾ. ಚೆನ್ನವೀರ ಕಣವಿಯವರನ್ನು ಸದಾ ಜ್ಞಾಪಿಸಿಕೊಳ್ಳುತ್ತಾರೆ. ಈಗ  ಅವರಲ್ಲಿ ಹಲವಾರು ದಿಗ್ಗಜರು,  'ಮೈಸೂರು ಅಸೋಸಿಯೇಷನ್ ದತ್ತಿ ಭಾಷಣ' ಮಾಡಿ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಅಂತಹ ವೇದಿಕೆಯಲ್ಲಿ ಜನವರಿ ೧೯-20  ರಂದು ಮೂರ್ತಿ ತಮ್ಮ ಭಾಷಣ ಮಾಡುತ್ತಿರುವುದು ನಮಗೆಲ್ಲಾ ಅತ್ಯಂತ ಹೆಮ್ಮೆಯ ಸಂಗತಿ.
 
 
* ಅಕ್ಕ ನಿನಗೆ ಇದು ತಕ್ಕ' ಎಂಬ  ಸನ್.  2010 ರಲ್ಲಿ  ಅಮೇರಿಕಾದಲ್ಲಿ ಜರುಗಿದ ಅಕ್ಕ ವಿಶ್ವ ಕನ್ನಡ ಸಮ್ಮೇಳನದ  ಪ್ರಮುಖ  ಗೀತೆಯನ್ನು ಬರೆದು ಒಂದು ವಿಕ್ರಮವನ್ನೇ ಸ್ಥಾಪಿಸಿದರು. ಸ್ಟೇಜಿನ ಮೇಲೆ  ಈ ಗೀತೆಯನ್ನು ಹಾಡಿದ ಯುವತಿಯರು ಹಾಡುವಾಗ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು. ಸಭಿಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅದನ್ನು ನಾವು ಯು ಟ್ಯೂಬ್ ನಲ್ಲಿ ಇಂದಿಗೂ  ನೋಡಿ ಆನಂದಿಸಬಹುದು !
 
ಕೆಳಗೆ ಪಟ್ಟಿಮಾಡಿದ ನನ್ನ ಒಂದೆರಡು ಹಾಡುಗಳು ಅದ್ಭುತವಾಗಿವೆ ಎಂಬುವುದು ನನ್ನ ಅನಿಸಿಕೆ. ಆದರೆ ರಸಿಕರು ಬೇರೆ ಬೇರೆ ಹಾಡುಗಳನ್ನು ಪತ್ತೆಮಾದಿದ್ದಾರೆ. ಒಟ್ಟಿನಲ್ಲಿ ಎಚ್ಚೆಸ್ವಿ ಇಂದಿನ, ನಾಳೆಯ ಹಾಗು ಇಂದು-ನಾಳೆಗಳ ಯುವಕರ, ಮಕ್ಕಳ, ಹಿರಿಯರ ಮತ್ತು ಕನ್ನಡಿಗರೆಲ್ಲರ ಮನೆಯ ಕವಿ. ಅವರಿಗೆ ಮತ್ತೊಮ್ಮೆ ಸಂಪದಿಗರ ಪರವಾಗಿ ಶುಭ ಕಾಮನೆಗಳನ್ನು ಕೋರುತ್ತೇನೆ.
 
ಅದೆಷ್ಟು ಅರ್ಥ ಗರ್ಭಿತ !
 
 
* ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು  ನಮ್ಮ ಅಂತರಾಳವ ?
  ಕಡಲಮೇಲೆ ಸಾವಿರಾರು ಮೈಲಿಸಾಗಿಯೂ
  ನೀರಿನಾಳ ತಿಳಿಯಿತೇನು ಹಾಯಿದೋಣಿಗೆ 
 
ಅದೆಷ್ಟು ಸುಂದರ ಗೀತೆ  !
 
* ಅಮ್ಮ ನಾನು ದೇವರಾಣೆ ಬೆಣ್ಣೆಕದ್ದಿಲ್ಲಮ್ಮ
  ಎಲ್ಲ ಸೇರಿ ನನ್ನ  ಬಾಯಿಗೆ 
  ಬೆಣ್ಣೆ ಮೆತ್ತಿದರಮ್ಮ
 
'ಎಚ್ಚೆಸ್ವಿ'  ಪ್ರತಿಭೆಗೆ ದೊರೆತ ವಿಶೇಷ ಗೌರವ/ಪುರಸ್ಸರಗಳು :

* ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
* ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
* ರಾಜ್ಯೋತ್ಸವ ಪ್ರಶಸ್ತಿ
* ದೇವರಾಜ ಬಹದ್ದೂರ್ ಪ್ರಶಸ್ತಿ
* ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ
* ಬಿ.ಎಚ್. ಶ್ರೀಧರ ಪ್ರಶಸ್ತಿ
* ಆರ್ಯಭಟ ಸಾಹಿತ್ಯ ಪ್ರಶಸ್ತಿ
* ಮೈಸೂರು ಅನಂತಸ್ವಾಮಿ ಪ್ರಶಸ್ತಿ
* ೨ ಬಾರಿ ಅಖಿಲ ಭಾರತ ಆಕಾಶವಾಣಿ ಪ್ರಶಸ್ತಿ
* ಅರವತ್ತು ತುಂಬಿದ ಸಂದರ್ಭದಲ್ಲಿ ಶಿಷ್ಯರು, ಅಭಿಮಾನಿಗಳು ಅರ್ಪಿಸಿದ ಅಭಿನಂದನಗ್ರಂಥ ’ಗಂಧವ್ರತ
* ಸಿಂದಬಾದನ ಆತ್ಮಕಥೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೭೭
* ತಾಪಿ-ದೇವರಾಜ ಬಹಾದ್ದೂರ ಪ್ರಶಸ್ತಿ-೧೯೭೮
* ಅಮಾನುಷರು-ಸುಧಾ ಬಹುಮಾನ೧೯೮೧ 
* ಹೆಜ್ಜೆಗಳು- ರಂಗಸಂಪದ ಬಹುಮಾನ-೧೯೮೦
* ಇಂದುಮುಖಿ-ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ-೧೯೮೫
* ಹರಿಗೋಲು-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೮೫
* ಅಗ್ನಿಮುಖಿ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೮೬
* ಋತುವಿಲಾಸ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ-೧೯೮೮
* ಎಷ್ಟೊಂದು ಮುಗಿಲು ಬಿ.ಎಚ್.ಶ್ರೀಧರ ಪ್ರಶಸ್ತಿ-೧೯೯೦
* ಒಂದು ಸೈನಿಕ ವೃತ್ತಾಂತ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೩
* ಹೂವಿನ ಶಾಲೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೭
* ಸ್ವಯಂವರ(ಅಪ್ರಕಟಿತ)-ಉಡುಪಿ ರಂಗಭೂಮಿ ಪುರಸ್ಕಾರ
 

ಪ್ರಕಟಿತ ಬರಹಗಳು : 

 

* ’ಮಾಯವಾದ ಮದುಮಗಳು' ಎಂಬ ಪತ್ತೇದಾರಿ ಕಾದಂಬರಿಯನ್ನುಚಿತ್ರದುರ್ಗದ ತಮ್ಮ ಕಾಲೇಜಿನ ದಿನಗಳಲ್ಲಿ ತಮ್ಮ ಆಪ್ತಗೆಳೆಯ ಈಶ್ವರಚಂದ್ರರ ಜೊತೆ ಸೇರಿ  ಬರೆದರು.


* ಪರಿವೃತ್ತ(೧೯೬೮)- ಈ ಮೊಟ್ಟಮೊದಲ ಕವನ ಸಂಕಲನವನ್ನು ಪ್ರಕಟಿಸಿದರು. ಅದನ್ನು ತಮ್ಮ ಪ್ರೀತಿಯ ಗುರುಗಳಾದ  ಶ್ರೀ. ನರಸಿಂಹ ಶಾಸ್ತ್ರಿಗಳ  ಪಾದಕ್ಕೆ ಸಮರ್ಪಿಸಿದರು.
* ಬಾಗಿಲು ಬಡಿವ ಜನಗಳು(೧೯೭೧)
* ಮೊಖ್ತಾ(೧೯೭೪)
* ಸಿಂದಬಾದನ ಆತ್ಮಕಥೆ(೧೯೭೭)
* ಒಣ ಮರದ ಗಿಳಿಗಳು(೧೯೮೧)
* ಮರೆತ ಸಾಲುಗಳು(೧೯೮೩)
* ಸೌಗಂಧಿಕ(೧೯೮೪)
* ಇಂದುಮುಖಿ(೧೯೮೫)
* ಹರಿಗೋಲು(೧೯೮೫)
* ವಿಸರ್ಗ(೧೯೮೮)
* ಎಲೆಗಳು ನೂರಾರು(೧೯೮೯)
* ಅಗ್ನಿಸ್ತಂಭ(೧೯೯೦)
* ಎಷ್ಟೊಂದು ಮುಖ(೧೯೯೦)
* ಅಮೆರಿಕದಲ್ಲಿ ಬಿಲ್ಲುಹಬ್ಬ(೧೯೯೭)
* ವಿಮುಕ್ತಿ(೧೯೯೮)
* ಭೂಮಿಯೂ ಒಂದು ಆಕಾಶ(೨೦೦೦)
ಮೂವತ್ತು ಮಳೆಗಾಲ(೨೦೦೧)
 
ಕವನಗಳು :
* ಹಕ್ಕಿಸಾಲು(೧೯೮೭)
* ಹೂವಿನ ಶಾಲೆ(೧೯೯೭)
* ಸೋನಿ ಪದ್ಯಗಳು(೨೦೦೧)
* ನದೀತೀರದಲ್ಲಿ
 
ಮಕ್ಕಳ ಸಾಹಿತ್ಯ

* ಸಿ.ವಿ.ರಾಮನ್(೧೯೭೪)
* ಹೋಮಿ ಜಹಾಂಗೀರ ಭಾಭಾ(೧೯೭೫)
* ಸೋದರಿ ನಿವೇದಿತಾ(೧೯೯೫)
* ಬಾಹುಬಲಿ(೨೦೦೦)
 
 ಮಕ್ಕಳ ಸಾಹಿತ್ಯ

* ಸಿ.ವಿ.ರಾಮನ್(೧೯೭೪)
* ಹೋಮಿ ಜಹಾಂಗೀರ ಭಾಭಾ(೧೯೭೫)
* ಸೋದರಿ ನಿವೇದಿತಾ(೧೯೯೫)
* ಬಾಹುಬಲಿ(೨೦೦೦)
 
ನಾಟಕಗಳು :

* ಹೆಜ್ಜೆಗಳು(೧೯೮೧)
* ಒಂದು ಸೈನಿಕ ವೃತ್ತಾಂತ(೧೯೯೩)
* ಕತ್ತಲೆಗೆ ಎಷ್ಟು ಮುಖ(೧೯೯೯)
* ಚಿತ್ರಪಟ(೧೯೯೯)
* ಉರಿಯ ಉಯ್ಯಾಲೆ(೧೯೯೯)
* ಅಗ್ನಿವರ್ಣ(೧೯೯೯)
* ಸ್ವಯಂವರ(ಅಪ್ರಕಟಿತ);

ಪ್ರಕಟಗೊಂಡ ಕಥೆಗಳು :

ಬಾಣಸವಾಡಿಯ ಬೆಂಕಿ(೧೯೮೦)
ಪುಟ್ಟಾರಿಯ ಮತಾಂತರ(೧೯೯೦)

ಕಾದಂಬರಿಗಳು :

ತಾಪಿ(೧೯೭೮)

ಸಾಹಿತ್ಯಚರಿತ್ರೆ


ಕೀರ್ತನಕಾರರು(೧೯೭೫)

ವಿಮರ್ಶೆ :

ನೂರು ಮರ, ನೂರು ಸ್ವರ(೧೯೮೩)
ಮೇಘದೂತ(೧೯೮೯)
ಕಥನ ಕವನ(೧೯೯೦)
ಆಕಾಶದ ಹಕ್ಕು(೨೦೦೧)

ಅನುಭವ ಕಥನ :

* ಕ್ರಿಸ್ಮಸ್ ಮರ(೨೦೦೦)

ಸಂಪಾದನೆ :

* ಶತಮಾನದ ಕಾವ್ಯ(೨೦೦೧)


ಅನುವಾದ :

* ಋತುವಿಲಾಸ (ಕಾಳಿದಾಸನ ಋತುಸಂಹಾರದ ಅನುವಾದ: ೧೯೮೮)

ಪ್ರಬಂಧ :

ಕನ್ನಡದಲ್ಲಿ ಕಥನ ಕವನಗಳು (ಪಿ.ಎಚ್.ಡಿ ಪ್ರಬಂಧ: ೧೯೮೭)



 
 
 
 
 
 
 
 
 
 
Rating
No votes yet

Comments

Submitted by venkatesh Thu, 01/17/2013 - 06:47

In reply to by ಗಣೇಶ

’ಎಷ್ಟೊಂದು ಮುಗಿಲು’ ಎಂಬ ಕವನ ಗುಚ್ಛದಲ್ಲಿ ನನ್ನನ್ನು ಕುರಿತ ಒಂದು ಸುಂದರ ಪದ್ಯವಿದೆ ! ಅದು ಆದದ್ದು ಹೀಗೆ. ಎಚ್ಚೆಸ್ವಿ ಅವರ ಪತ್ನಿ ರಾಜಲಕ್ಷ್ಮಿ ಮೂರ್ತಿ ಒಮ್ಮೆ ಮುಂಬೈನ ಕರ್ನಾಟಕ ಸಂಘಕ್ಕೆ ಯಾವುದೋ ಕಾರ್ಯಕ್ರಮವನ್ನು ನಡೆಸಿಕೊಡಲು ಆಗಮಿಸಿದ್ದರು. ನಾನು ಮತ್ತು ನನ್ನ ಶ್ರೀಮತಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು. ಮಧ್ಯಾಂತರದಲ್ಲಿ ನಾನು ಮೂರ್ತಿ ದಂಪತಿಗಳನ್ನು ನಮ್ಮ ಮನೆಗೆ ಊಟಕ್ಕೆ ಬರಲು ಆಹ್ವಾನಿಸಿದೆ. ಬಹಳ ವರ್ಷಗಳಿಂದ ಹೇಗೋ ಅವರ ಭೇಟಿಯೂ ಆಗಿರದೆ ಅವರು ಒಪ್ಪಿಕೊಂಡರು. ಆಗ ನನ್ನನ್ನು ನೋಡಿದಾಗ ಏನನ್ನಿಸಿತೋ ಮೂರ್ತಿ ಫಕ್ಕನೆ ತಮ್ಮ ನೋಟ್ ಬುಕ್ ನಲ್ಲಿ ಏನೋ ಗೀಚಿಕೊಂಡರು. ನಮ್ಮನ್ನು ಬೆಂಗಳೂರಿಗೆ ಬಂದಾಗ ತಮ್ಮ ಮನೆಗೆ ಬರಲು ಆಹ್ವಾನಿಸಿದರು.

ಅದರಂತೆ ಬೆಂಗಳೂರಿಗೆ ನಾನು ಹೋದಾಗ ಒಂದು ವ್ಯಥೆಯ ಸುದ್ದಿ ಕಾದಿತ್ತು. ಅವರ ಪ್ರೀತಿಯ ಪತ್ನಿ ದೈವವಶವಾಗಿದ್ದ ವಿಷಯ ನನ್ನ ಅವರ ಗೆಳೆಯರಿಂದ ತಿಳಿದು ಬಹಳ ವಿಷಾದವಾಯಿತು. ಅವರ ಮನೆಗೆ ಹೋಗಿ ಅವರನ್ನು ಸಂತೈಸಿದೆ. ಆಗ ಮೂರ್ತಿ ಕಪಾಟಿನಿಂದ ಒಂದು ಪುಸ್ತಕ ತೆಗೆದು ನನ್ನ ಕೈಗಿಟ್ಟು ’ಇದನ್ನು ಓದು’ ಎಂದರು. ಅದೇ ’ಎಷ್ಟೊಂದು ಮುಗಿಲು ಪ್ರಕಟಿತ ಆವೃತ್ತಿ’. ಅದರಲ್ಲಿ ನನ್ನ ಬಗ್ಗೆ ಪ್ರೀತಿಯಿಂದ ಬರೆದ ಕವನ ಮೂಡಿಬಂದಿತ್ತು !

Submitted by kavinagaraj Thu, 01/17/2013 - 10:47

ಗೆಳೆಯನ ಬಗ್ಗೆ ಮನತುಂಬಿ ಬರೆದಿರುವಿರಿ. ಧನ್ಯವಾದ. ಹೋದಿಗ್ಗೆರೆಗೆ ಹೋಗಿ ಬರುವ ವಿಚಾರವಿದೆ. (ಕೆಲವು ಐತಿಹಾಸಿಕ ಸಂಗತಿಗಳ ಬಗ್ಗೆ ತಿಳಿಯಲು).

Submitted by venkatesh Thu, 01/17/2013 - 12:41

In reply to by kavinagaraj

Link :

http://youtu.be/cba3olVCv9I

’ಅಕ್ಕ ನಿನಗಿದು ತಕ್ಕ’... ಎನ್ನುವ ಅದ್ಭುತ ರಾಗ-ವಾದ್ಯಸಂಯೋಜನೆಯ ಗೀತೆ ಅಮೆರಿಕದ ನ್ಯೂಜರ್ಸಿಯ ಎಡಿಸನ್ ಸಭಾಂಗಣದಲ್ಲಿ ಪ್ರತಿಧ್ವನಿಸಿತು ! ಇದು ಸನ್.೨೦೧೦ ರ ವಿಶ್ವ ಕನ್ನಡ ಸಮ್ಮೇಳನದ ಮುಖಗೀತೆ ! ರಂಗಮಂಚದಿಂದ ಹೊರಹೊಮ್ಮಿದ ಯುವತಿ-ಮಹಿಳೆಯರ ಸಂಭ್ರಮ ನವೋಲ್ಲಾಸದ ಹಾಡು ಅಲ್ಲಿ ನೆರೆದಿದ್ದ ಪ್ರಚಂಡ ಕನ್ನಡ ಸಾಹಿತ್ಯಪ್ರೇಮಿಗಳ ಕಿವಿಕುರುಡಾಗಿಸುವಂತೆ ಅಬ್ಬರದ ಸನ್ನೆ ಮಾಡಿತ್ತು
ಸನ್. ೨೦೧೦ ರ, ಸೆಪ್ಟೆಂಬರ್, ೩,೪ ಮತ್ತು ೫ ರಂದು ಜರುಗಿದ ಡಾ. ಎಚ್ಚೆಸ್ವಿ ರಚಿಸಿದ ಗೀತೆಯನ್ನು ಸುನಿತ ಅನಂತ ಮೂರ್ತಿಯವರು ಈ ಸಂಧರ್ಭಕ್ಕೆಂದೇ ವಿಶೇಷ ಕಾಳಜಿವಹಿಸಿ ವಿಶ್ವ ಕನ್ನಡ ಸಮ್ಮೇಳನದ ರಚಿಸಿದ್ದ ಆರಂಭಗೀತೆಯ ಸಂಗೀತ ನಿರ್ದೇಶಿದ್ದರು. ಡಾ. ನಾಗ್ ರಾವ್ ವೀಡಿಯೋ ಚಿತ್ರೀಕರಿಸಿದ್ದರು.

Submitted by venkatesh Thu, 01/17/2013 - 13:22

In reply to by venkatesh

ಲಿಂಕ್ :
http://youtu.be/CIWNi3usRAY (ಇಷ್ಟು ದಿನ)
http://youtu.be/uowos14BngU(ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..)

Submitted by ಗಣೇಶ Thu, 01/17/2013 - 23:56

In reply to by venkatesh

ವೆಂಕಟೇಶ್ ಅವರೆ, ನೀವು ಕೊಟ್ಟ ಕೊಂಡಿಯಲ್ಲಿ ಕವಿತೆ ರಚನೆಕಾರರ ಹೆಸರು ಬೇರೆ ಬರೆದಿದೆ.(ನೀವು ಪ್ರಶ್ನಿಸಿದ್ದೀರಿ) ; ಇದೇ ಹಾಡನ್ನು ಶಂಕರ್ ಶಾನುಭಾಗ್ ಅವರು ಹಾಡಿದ್ದು, ಅದರ ಮೊದಲು ಎಚ್ ಎಸ್ ವಿಯವರು ಮಾತನಾಡಿದ್ದು ಇಲ್ಲಿದೆ- http://www.youtube.com/watch?v=ylGECugJItA

Submitted by partha1059 Thu, 01/17/2013 - 10:54

ವೆಂಕಟೇಶ ಸಾರ್, ನಿಮ್ಮ ಲೇಖನ ಚೆನ್ನಾಗಿದೆ. ಹಾಗೆ ಹೆಚ್ ಎಸ್ ವಿ ರವರು ನಮಗೆ ಹತ್ತಿರದವರು ....... ಅಂದರೆ ಬೆ೦ಗಳೂರಿನಲ್ಲಿ ಅವರ ಮನೆಯ ಹತ್ತಿರವೆ ನಮ್ಮ ಮನೆ :‍) . ಹಾಗಾಗಿ ಆಗಾಗ ನೋಡುತ್ತಿರುವೆ !

ವಂದನೆಗಳೊಡನೆ
ಪಾರ್ಥಸಾರಥಿ

Submitted by venkatesh Thu, 01/17/2013 - 12:11

In reply to by partha1059

ಇನ್ನೇನು ಬೇಕು ? ಮನೆ-ಮನಸ್ಸುಗಳೂ ಅತಿ ಹತ್ತಿರದಲ್ಲಿರುವಾಗ ಮತ್ತು ಒಂದಾಗಿರುವಾಗ, ’ಪುಷ್ಪಗಿರಿಯನ್ನು ಲಗ್ಗೆ ಹೊಡಿದಂತೆ’ ಅಲ್ಲವೇ ಸಾರ್ ?

Submitted by venkatb83 Thu, 01/17/2013 - 16:05

In reply to by partha1059

ಹಿರಿಯರೇ -
ಕಳೆದ ಒಂದು ವರ್ಷಗಳಿಂದ ಮಯೂರ ಕನ್ನಡ ಮಾಸಿಕದಲ್ಲಿ ಖ್ಯಾತ ಕವಿಗಳಾದ ಶ್ರೀಯುತ ಬೀ ಆರ್ ಲಕ್ಷ್ಮಣ್ ರಾವ್ ಅವರು ತಮಗೆ ಆಪ್ತರಾದವರ ಬಗ್ಗೆ ಸರಣಿಗಳನ್ನು ಬರೆಯುತ್ತಿದ್ದರು ,ಆ ಸರಣಿ ಬಹು ಜನಪ್ರಿಯವಾಗಿತ್ತು..
ಮತ್ತು ಸುಮಾರು 2 ತಿಂಗಳ ಹಿಂದೆ ಮುಕ್ತಾಯವೂ ಆಯ್ತು..
ಹಾಗೆ ಅವರು ತಮ್ಮ ಸ್ನೇಹಿತರ ಬಗ್ಗೆ ಬರೆದವರಲ್ಲಿ -ಜೀ ಎಸ್ ಎಸ್ (ವಯಸ್ಸಲ್ಲಿ ಹಿರಿಯರೇ )-ಸೀ ಅಶ್ವಥ್ -ಮತ್ತು ಹತ್ತು ಹಲವು ಮಹನೀಯರು-ನಮಗೆ ಅವರವರ ಸಾಹಿತ್ಯ ಸಂಗೀತ ರಚನೆ ಕಾರಣವಾಗಿ ಬಹು ಪರಿಚಿತರು -ಆದರೆ ವಯುಕ್ತಿಕ ಜೀವನ -ಅವರ ಇಷ್ಟ -ಹವ್ಯಾಸಗಳು ಇತ್ಯಾದಿ ತಿಳಿಯದ ನಮಗೆ ಈ ಸರಣಿಗಳ ಮೂಲಕ ಅವರ ಪರಿಚಯ ಮಾಡಿಕೊಟ್ಟಿದ್ದರು...
ಹಾಗೆ ಮುಕ್ತಾಯವಾಗುವ ಮೊದಲು ಬಂದ ಸಂಚಿಕೆಯಲ್ಲಿ ತಮ್ಮ ಪ್ರಿಯ ಮಿತ್ರ (ವಯಸ್ಸಲ್ಲಿ ಎಚ್ ಎಸ್ ವಿ ಅವರೇ ದೊಡ್ಡವರಂತೆ )ರ ಬಗ್ಗೆ ಬಹು ಚೆನ್ನಾಗಿ ಬರೆದಿದ್ದರು..
ಹಾಗೆ ನೀವು ಪ್ರಸ್ತಾಪಿಸಿದ ಎಚ್ ಎಸ್ ವಿ ಅವರ ಪತ್ನಿಯವರ ನಿಧನದ ಬಗ್ಗೆ ಮತ್ತು ಆ ಬಗ್ಗೆ ಬೀ ಆರ್ ಎಲ್ ಅವರು ಕವನ ಬರೆದುದರ ಬಗ್ಗೆ ಸಹಾ ಹೇಳಿದ್ದರು..

ಬೀ ಆರ್ ಎಲ್ ಅವರ ಆ ಸರಣಿಗಳ ಮೂಲಕ ಅವರ ಖ್ಯಾತನಾಮ ಸ್ನೇಹಿತರು ಮತ್ತು ಅವರ ಸಾಹಿತ್ಯ ಸಂಗೀತದ ಆಚೆ ಬೇರೊಂದು ಲೋಕದ -ಪರಿಚಯವೂ ಆಯ್ತು...
ಈಗ ನೀವುಗಳು ಎಚ್ ಎಸ್ ವಿ ಅವರ ಬಗ್ಗೆ ಬರೆದು ಅವರು ನಿಮ್ಮ ಆತ್ಮೀಯ ಸ್ನೇಹಿತರು ಎಂದು ತಿಳಿದು -ಬಹು ಖುಷಿ ಆಯ್ತು...
ಹಾಗೆಯೇ ನಿಮಗೆ ಶ್ರೀಯುತ ಬೀ ಆರ್ ಲಕ್ಷ್ಮಣ್ ರಾವ್ ಅವರೂ ಸ್ನೇಹಿತರಾಗಿರಬಹ್ದು...(ಅವರು ಎಚ್ ಎಸ್ ವಿ ಅವರಿಗೆ ತುಂಬಾ ಹತ್ತಿರವೆ .!!)
ಎಚ್ ಎಸ್ ವಿ ಅವರಿಗೆ ಶುಭವಾಗಲಿ..
ಬರಹ ಬರೆದು ನಮ್ ಗಮನ ಸೆಳೆದ ನಿಮಗೆ ನನ್ನಿ

ಶುಭವಾಗಲಿ..

\|

Submitted by H A Patil Thu, 01/17/2013 - 19:27

ಹೊರಲಂ ವೆಂಕಟೇಶ ರವರಿಗೆವಂದನೆಗಳು
ಕವಿ ಹೆಚ್.ಎಸ್.ವೆಂಕಟೇಶ ಮೂರ್ತಿಯವರ ಬಗ್ಗೆ ಬಹಳ ಅಪ್ಯಾಯಮಾನವಾಗಿ ಬರೆದಿದ್ದೀರಿ. ಬರಹ ಸೊಗಸಾಗಿದೆ, ವಿವರವಾಗಿದೆ ಜೊತೆಗೆ ಓದಿಸಿಕೊಳ್ಳುವ ಗುಣ ಪಡೆದಿದೆ. ಉತ್ತಮ ಲೇಖನ ನೀಡಿದ್ದಕ್ಕೆ ಧನ್ಯವಾದಗಳು.

Submitted by venkatesh Fri, 01/18/2013 - 06:04

In reply to by H A Patil

ಸಂಪದದಲ್ಲಿ ನಾನು ದಾಖಲು ಮಾಡಿದ ಅಂದಿನ ಕಥೆ ಮತ್ತು ವ್ಯಥೆಯನ್ನು ಮತ್ತೊಮ್ಮೆ ಮೆಲುಕುಹಾಕಿದಾಗ! :

http://sampada.net/article/1488

Submitted by venkatesh Tue, 01/22/2013 - 06:23

In reply to by venkatesh

ಮೇಲೆ ತಿಳಿಸಿದ ಕಾರ್ಯಕ್ರಮವನ್ನು 'ಡಾ. ಎಚ್ಚೆಸ್ವಿ' ಯವರು ಅತ್ಯಂತ ಸಮರ್ಥವಾಗಿ ನಡೆಸಿಕೊಟ್ಟರು. ಅದರ ಕಿರುನೋಟ ಇಲ್ಲಿದೆ. ದಯಮಾಡಿ ಕೊಂಡಿ ಒತ್ತಿ :

http://radhatanaya-devanahalli.blogspot.in