ಖಾರದ ಸಾರು (ಮದುವೆ ಮನೆ ಸಾರು)

ಖಾರದ ಸಾರು (ಮದುವೆ ಮನೆ ಸಾರು)

ಬೇಕಿರುವ ಸಾಮಗ್ರಿ

ಸಾರಿನ ಪುಡಿ : ಧನಿಯ – 50 ಗ್ರಾಂ., ಜೀರಿಗೆ – 1 ½ ಟೀ ಚಮಚ, ಮೆಂತೆ – ½ ಟೀ ಚಮಚ, ಕಾಳು ಮೆಣಸು – ½ ಟೀ ಚಮಚ, ಸಾಸಿವೆ – ¼ ಚಮಚ, ಒಣ ಮೆಣಸಿನ ಕಾಯಿ (ಬ್ಯಾಡಗಿ) – 25 ಗ್ರಾಂ. ಇಂಗು – 3 ಚಿಟಿಕೆ, ಎಣ್ಣೆ – ¼ ಚಮಚ.

ಸಾರು

ಬೇಕಾಗುವ ಸಾಮಗ್ರಿಗಳು: ತೊಗರಿ ಬೇಳೆ - 2 ಕಪ್, ಟೊಮ್ಯಾಟೋ – 1, ಅರಿಶಿನ – ¼ ಚಮಚ, ಎಣ್ಣೆ – 1 ಚಮಚ, ಹುಣಿಸೆ ಹಣ್ಣು – ಸಣ್ಣ ನೆಲ್ಲಿ ಗಾತ್ರ, ಬೆಲ್ಲ – ಸಣ್ಣ ನಿಂಬೆ ಗಾತ್ರ, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – 3 ಎಸಳು.

ಒಗ್ಗರಣೆಗೆ : ತುಪ್ಪ ಅಥವಾ ಎಣ್ಣೆ – 2 ಚಮಚ, ಸಾಸಿವೆ – 1 ಚಮಚ, ಕರಿಬೇವಿನ ಸೊಪ್ಪು – 5 – 6 ಎಸಳು, ಒಣ ಮೆಣಸಿನ ಕಾಯಿ – 4 ಅಥವಾ 5 ತುಂಡುಗಳು

ತಯಾರಿಸುವ ವಿಧಾನ

ಸಾರಿನ ಪುಡಿ :

ಮಾಡುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ (ಇಂಗನ್ನು ಬಿಟ್ಟು) ಕೆಂಪಗಾಗುವಂತೆ ಹುರಿಯಿರಿ. ಬಾಣಲೆ ಕೆಳಗಿಳಿಸಿದ ನಂತರ ಇಂಗನ್ನು ಹಾಕಿ ಒಮ್ಮೆ ಮೊಗೆಚಿ. ಮಸಾಲೆ ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಕೆಲವು ದಿನಗಳು ಇಟ್ಟು ಉಪಯೋಗಿಸಬಹುದು.

ಸಾರು ಮಾಡುವ ವಿಧಾನ :

ಹುಣಿಸೆ ಹಣ್ಣನ್ನು ನೆನೆಯಲು ಇಡಿ. ಕುಕ್ಕರಿನಲ್ಲಿ ನೀರು ಹಾಕಿ ತೊಗರಿ ಬೇಳೆ, ಟೊಮ್ಯಾಟೋ, ಅರಿಶಿನ ಮತ್ತು ಎಣ್ಣೆ ಹಾಕಿ ಬೇಯಲು ಇಡಿ. 3 ಅಥವಾ 4 ಕೂಗು ಬಂದೊಡನೆ ಕುಕ್ಕರನ್ನು ಇಳಿಸಿ. ಒಂದು ಅಗಲ ಬಾಯಿಯ ಪಾತ್ರೆಗೆ 3 ಚಮಚ ಸಾರಿನ ಪುಡಿ, ಬೆಲ್ಲ ಮತ್ತು ಉಪ್ಪು ಹಾಕಿ. ಕುಕ್ಕರಿನಿಂದ ಬೆಂದ ಟೊಮ್ಯಾಟೋವನ್ನು ತೆಗೆದು ಚೆನ್ನಾಗಿ ಕಿವುಚಿ ಬೆರೆಸಿ. ಹುಣಸೆ ಹಣ್ಣನ್ನು ಕಿವುಚಿ ರಸವನ್ನೂ ಸಹ ಬೆರೆಸಿ. ಈ ಮಿಶ್ರಣಕ್ಕೆ ½ ಲೀಟರ್ ನೀರನ್ನು ಹಾಕಿ. ನಂತರ ಒಗ್ಗರಣೆಗೆ ಹೇಳಿದ ಪದಾರ್ಥಗಳನ್ನೆಲ್ಲ ಹಾಕಿ ಒಗ್ಗರಣೆ ಮಾಡಿ. ಈಗ ಈ ಮಿಶ್ರಣವನ್ನು ಕುದಿಯಲು ಇಡಿ. ಒಂದು ಕುದಿ ಬಂದನಂತರ 10 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ನಂತರ ಬೆಂದ ಬೇಳೆಯನ್ನು ಸ್ಮ್ಯಾಶ್ ಮಾಡಿ ಬೆರೆಸಿ. ಅಳತೆಗೆ ತಕ್ಕಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿದ ನಂತರ ಕೆಳಗಿಳಿಸಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ. ಬಿಸಿ ಬಿಸಿ ಅನ್ನದೊಂದಿಗೆ ಸಾರು, ತುಪ್ಪ ಹಾಕಿಕೊಂಡು ಬಾಳಕದ ಮೆಣಸಿನಕಾಯಿ ನೆಂಜಿಕೊಂಡು ಊಟಮಾಡಲು ಸೊಗಸಾಗಿರುತ್ತದೆ.

Comments

Submitted by Shobha Kaduvalli Tue, 01/22/2013 - 17:39

ಪ್ರೆಮಾಶ್ರೀಯವರೇ ...... ಒಂದೊಂದು ಕಡೆ ಒಂದೊಂದು ರೀತಿ ಹೇಳುತ್ತಾರೆಂದೆನಿಸುತ್ತದೆ. ನಾವು ಮಾಡುವ ‘ಕಟ್ಟಿನ ಸಾರಿ’ನ ವಿಧಾನದಲ್ಲಿ ಸಾರಿನ ಪುಡಿ ಬಳಸುವುದಿಲ್ಲ. ಏನೇ ಇರಲಿ... ಪ್ರತಿಕ್ರಿಯೆಗೆ ಧನ್ಯವಾದಗಳು................ ಶೋಭಾ

Submitted by Shobha Kaduvalli Tue, 01/22/2013 - 18:13

In reply to by sasi.hebbar

ಯಾವ ರೀತಿಯ ಸಾರು ಅಂತ ಗೊತ್ತಾಗಲಿಲ್ಲ..... ಖಾರದ ಸಾರಾ...? ಅಥವಾ “ಚಪ್ಪೆ” ಸಾರಾ...? ನಾವು ಊರಿನಲ್ಲಿ (ನಮ್ಮ ಮನೆಯಲ್ಲೂ) ಬೇಳೆ ಕಟ್ಟಿನ ಸಾರಿಗೆ “ಚಪ್ಪೆ” (ಸಪ್ಪೆ..) ಸಾರು ಅಂತೀವಿ. ........................ಶೋಭಾ

Submitted by sasi.hebbar Tue, 01/22/2013 - 18:25

In reply to by Shobha Kaduvalli

ಹೆಂಡತಿ ತವರನ್ನು ಸೇರಿದಾಗ, ತಯಾರಾಗುವುದು ಚಪ್ಪೆ ಸಾರೇ ತಾನೆ! ಪ್ರತಿಕ್ರಿಯೆ ಸೇರಿಸುವಾಗ , ನನ್ನ ಕಡೆಯಿಂದ, ಸಾರು ಅದಲು ಬದಲಾಯಿತು!
* ಹಾಂಗೇ, ಹಪ್ಪಳದ ಸುಟ್ಟು, ಪುಡಿ ಪುಡಿ ಮಾಡಿ ಹಾಕಿ ಸಾರು ಮಾಡುದು ಹ್ಯಾಂಗೆ ಅಂತ ಬರಿನಿ!

Submitted by Shobha Kaduvalli Tue, 01/22/2013 - 18:44

ಸಾಧಾರಣವಾಗಿ ಮದುವೆ ಮನೆಗಳಲ್ಲಿ ಮತ್ತು ಯಾವುದೇ ಸಮಾರಂಭಗಳಲ್ಲಿ ಇಂತಹ ಸಾರನ್ನು ಮಾಡುತ್ತಾರೆ. ಅದಕ್ಕೆ ಆ ಹೆಸರು ಬಂದಿರಬಹುದು...........