ಅಂತರ
ಅಂದು ನಿನ್ನ ಮಾತು,ಪ್ರಶ್ನೆ
ಗಳಿಗುತ್ತರಿಸಿ ವಿವರಿಸಿದ್ದೆ
ನನ್ನ ಮಾತುಗಳನು ಕೇಳಲು
ಸಮಯವಿಲ್ಲ ನಿನಗೆ ಇಂದು
ಅಂದು ಇದ್ದ ಕೆಲಸವನ್ನೆಲ್ಲ ಬಿಟ್ಟು ನಿತ್ಯ
ಸೈಕಲಲ್ಲಿ ಶಾಲೆಗೆ ಕರೆದೊಯ್ದಿದ್ದೆ
ನಾ ಜತೆಯಲೊಮ್ಮೆ ಬರುವೆನೆಂದರೆ
ಬೇರೆಕೆಲಸ ಬಹಳವಿದೆ ನಿನಗೆ ಇಂದು
ಅಂದು ಅಮ್ಮ ರಮಿಸಿದರೂ ಅತ್ತು ರಂಪ
ಮಾಡುತ್ತಿದ್ದ ನಿನ್ನ ತಟ್ಟಿತೂಗಿ ಮಲಗಿಸಿದ್ದೆ
ನಾ ಕೆಮ್ಮುವ ಸದ್ದಿಗೆ ನಿದ್ದೆ ಬರದೆಂದು
ಗೊಣಗಿ ಬಯ್ಯುತಿರುವೆ ನೀನು ಇಂದು
ಅಂದು ನಿನ್ನನೆತ್ತಿಕೊಂಡು ದವಾ
ಖಾನೆಗೊಯ್ದು ಚಿಕಿತ್ಸೆ ಕೊಡಿಸಿದ್ದೆ
ನನ್ನ ದಿನನಿತ್ಯದ ಮಾತ್ರೆಗಳನು
ತರಲು ಮರೆಯುವೆ ನೀನು ಇಂದು
ಅಂದು ನಿನಗಿಷ್ಟವೆಂದು ಎತ್ತರದ ಮರ
ವನೇರಿ ಹಣ್ಣುಗಳನು ಕಿತ್ತು ತಂದಿದ್ದೆ
ನನಗತ್ಯವೆಂದು ಹತ್ತಿರದ ಅಂಗಡಿಯಿಂದ
ಕೊಳ್ಳಲು ನೆನಪಾಗುವುದಿಲ್ಲ ನಿನಗೆ ಇಂದು
ಅಂದು ನೀ ಚಿಗುರಾಗಿದ್ದೆ
ನನ್ನಲ್ಲಿ ಬಲವಿತ್ತು, ಒಲವಿತ್ತು
ನಾ ಹಣ್ಣಾಗಿರುವೆ ಇಂದು
ನಿನ್ನಲ್ಲಿ ಬಲವಿದೆ, ಒಲವು... ?
Rating
Comments
ಇಂದಿನ ಕಾಲಕ್ಕೆ ಹಿಡಿದ ಕನ್ನಡಿ.
ಇಂದಿನ ಕಾಲಕ್ಕೆ ಹಿಡಿದ ಕನ್ನಡಿ. ಕವನ ಚೆನ್ನಾಗಿದೆ
In reply to ಇಂದಿನ ಕಾಲಕ್ಕೆ ಹಿಡಿದ ಕನ್ನಡಿ. by tthimmappa
ಧನ್ಯವಾದಗಳು ತಿಮ್ಮಪ್ಪ ಅವರೆ.
ಧನ್ಯವಾದಗಳು ತಿಮ್ಮಪ್ಪ ಅವರೆ.
ವಾಸ್ತವ! ಇದೇ ಜೀವನ ಚಕ್ರ. :)
ವಾಸ್ತವ! ಇದೇ ಜೀವನ ಚಕ್ರ. :)
In reply to ವಾಸ್ತವ! ಇದೇ ಜೀವನ ಚಕ್ರ. :) by kavinagaraj
ವಂದನೆಗಳು ಕವಿನಾಗರಾಜ್ ಅವರೆ.
ವಂದನೆಗಳು ಕವಿನಾಗರಾಜ್ ಅವರೆ.
ಇದು ದಿನ ನಿತ್ಯ ಎಲ್ಲೆಡೆ ನಾವ್
ಇದು ದಿನ ನಿತ್ಯ ಎಲ್ಲೆಡೆ ನಾವ್ ನೋಡುವ -ನಾವೇ ಒಮ್ಮೊಮ್ಮೆ ಆ ತರ್ಹದ್ದಕ್ಕೆ ಸಾಕ್ಷಿ ಆಗುವ ಘಟನೆಗಳು..
ಇದೇ ತರಹದ ವಿಷಯದ ಬಗೆಗಿನ ಚಲನಚಿತ್ರಗಳು -ಸ್ಕೂಲ್ ಮಾಸ್ಟರ್ -ಬಾಗ್ಬನ್-ಈ ಬಂಧನ ದ ಬಗ್ಗೆ ಮೊನ್ನೆ ಮೊನ್ನೆ ಬರೆದಿದ್ದೆ...
ಇಂದಿನ ಒತ್ತಡದ ಜೀವನ -ಹತ್ತು ಹಲವು ಸಮಸ್ಯೆಗಳು-ಮನುಷ್ಯನ ಸುತ್ತಿ ಮುತ್ತಿ-
ಆಪ್ತ ಸಂಬಂಧಗಳನ್ನು ಸಹಾ ಮಾಮೂಲಾಗಿ ಟ್ರೀಟ್ ಮಾಡುವ ಹಾಗೆ ಮಾಡುತ್ತಿವೆ...
ಇದು ಸರಿಯಲ್ಲ.
ಹೆತ್ತು-ಹೊತ್ತು-ಬೆಳೆಸಿದವರ ಉದಾಸೀನ ಸಲ್ಲದು-ಅವರ ದೇಖಾರೇಕಿ ನಮ್ಮ ಜವಾಬ್ಧಾರಿ- ಕರ್ತವ್ಯ-ಅವರ ಋಣ ತೀರಿಸಲು ಸಾಧ್ಯವೇ?
ಕವನ ಓದಿ ವ್ಯಥೆ ಆಯ್ತು..(ನೀವ್ ಬರೆದ ರೀತಿ ಹಿಡಿಸಿತು )
ಸಮರ್ಥ ಕವನ..
ನಮ್ಮೆಲ್ಲರ ಕಣ್ಣು ತೆರೆಸಲಿ..
ಅಂತಕರಣ ಮುಟ್ಟಿ ತಟ್ಟಲಿ ...
ಶುಭವಾಗಲಿ..
\|
In reply to ಇದು ದಿನ ನಿತ್ಯ ಎಲ್ಲೆಡೆ ನಾವ್ by venkatb83
ಬಂಧನ,ಬಾಗ್ಬನ್ ಬಗ್ಗೆ ನೀವು ಬರೆದ
ಬಂಧನ,ಬಾಗ್ಬನ್ ಬಗ್ಗೆ ನೀವು ಬರೆದ ಬರಹವನ್ನು ಓದಿದ್ದೆ. ಸಿನೆಮಾ ನೋಡುವುದು ಬಹಳ ಕಡಿಮೆಯಾದರೂ ನೀವು ಬರೆಯುವ ಸಿನೆಮಾವಿಮರ್ಶೆಗಳನ್ನು ಓದುತ್ತೇನೆ.ತುಂಬಾ ಚೆನ್ನಾಗಿ ಮೂಡಿಬರುತ್ತಿವೆ.
ತಮ್ಮ ಹೆತ್ತವರನ್ನು ಎಲ್ಲರೂ ಚೆನ್ನಾಗಿ ನೋಡಿಕೊಂಡು ಸಂತುಷ್ಟರನ್ನಾಗಿರಿಸಲಿ.
ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಯು ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದೆ. ಧನ್ಯವಾದಗಳು ಸಪ್ತಗಿರಿಯವರೆ.
:( ಅಲ್ರೀ..ತಂದೆಯ ಪುಣ್ಯ.
:( ಅಲ್ರೀ..ತಂದೆಯ ಪುಣ್ಯ..ಇದುವರೆಗೆ ತಂದೆಯನ್ನು ಮನೆಯಲ್ಲಾದರೂ ಇಟ್ಟುಕೊಂಡಿದ್ದಾನಲ್ಲಾ..ಬೆಳೆದ ಚಿಗುರಿಗೆ ಥ್ಯಾಂಕ್ಸ್.:)
ಕವನ ಚೆನ್ನಾಗಿದೆ.
In reply to :( ಅಲ್ರೀ..ತಂದೆಯ ಪುಣ್ಯ. by ಗಣೇಶ
:) ನಿಮ್ಮ ಪ್ರತಿಕ್ರಿಯೆ ಇದೇ
:) ನಿಮ್ಮ ಪ್ರತಿಕ್ರಿಯೆ ಇದೇ ರೀತಿ ಇರಬಹುದೆಂದು ಮೊದಲೇ ಊಹಿಸಿದ್ದೆ.
ಮೆಚ್ಚುಗೆಗೆ ಧನ್ಯವಾದಗಳು ಗಣೇಶ್ ಅವರೆ.