ಕರ್ವಾಲೊ
ಯಾವುದೇ ಪುಸ್ತಕವನ್ನಾದರೂ ಒಮ್ಮೆ ಸಂಪೂರ್ಣ ಓದಿ ನಂತರ ಜೋಪಾನವಾಗಿ ಅದರ ಮೂಲ ಸ್ಥಾನದಲ್ಲಿಟ್ಟುಕೊಳ್ಳುವುದು ರೂಢಿ. ಆದರೆ ಈ ಬಾರಿ ಹಾಗಾಗಲಿಲ್ಲ. ಒಮ್ಮೆ ಓದಿ ಮುಗಿಸಿದ ಬಳಿಕವೂ ಮತ್ತೆ ,ಮತ್ತೆ ಓದಬೇಕೆಂದನಿಸಿದ್ದು, ಪೂರ್ಣಚಂದ್ರತೇಜಸ್ವಿಯವರ "ಕರ್ವಾಲೋ" ಪುಸ್ತಕ. ಹಾರುವ ಓತಿಕ್ಯಾತನ ಬೆನ್ನತ್ತಿ ಹೋಗುವ ಹೆಸರಾಂತ ವಿಜ್ಞಾನಿ ಕರ್ವಾಲೋ ತೀರಾ ಹಳ್ಳಿಯಲ್ಲಿ ನಡೆಯುವ ಈ ಘಟನೆಯ ಸುತ್ತ ಸುತ್ತುವ ಕಥೆ. ಹಳ್ಳಿಯ ಮಂದಣ್ಣ, ಎಂಗ್ಟ, ಕರಿಯಪ್ಪ, ಮುಂತಾದ ಆ ಹಳ್ಳಿಯ ತೀರಾ ಸಾಮಾನ್ಯ ಜನರೊಂದಿಗೆ ಮಾತ್ರ ಬೆರೆಯುವ ವಿಜ್ಞಾನಿ ಕರ್ವಾಲೋ ಹಳ್ಳಿಯ ಕೆಲವು ಪ್ರಮುಖ ಕುಳಗಳಿಗೆ ಅಂದರೆ ದೊಡ್ಡ ಮನುಷ್ಯರಿಗೆ ಒಗಟಾಗಿಯೇ ಉಳಿಯುತ್ತಾರೆ. ಜೇನುಹುಳಗಳನ್ನು ಹಿಡಿದುಕೊಂಡು ಅವುಗಳನ್ನು ಪೆಟ್ಟಿಗೆಯಲ್ಲಿ ಕೂರಿಸಿ ವಯಸ್ಸಾಗಿದ್ದರೂ ಬುದ್ದಿ ಬೆಳೆಯಲಿಲ್ಲ ಎಂಬಂತೆ ಅಲೆದಾಡಿಕೊಂಡಿದ್ದ ಮಂದಣ್ಣನ ಜತೆ ಸ್ನೇಹ ಸಂಪಾದಿಸಿದ್ದ ಕರ್ವಾಲೋ ಅವರನ್ನು ಕಂಡು ಹಳ್ಳಿಯ ಜನರೆಲ್ಲಾ ತಲೆಗೊಂದರಂತೆ ಮಾತನಾಡಿಕೊಳ್ಳುತ್ತಿದ್ದರು. ಅವರ ಈ ನಡವಳಿಕೆಯನ್ನು ಕಂಡು ಅಪಹಾಸ್ಯ ಮಾಡುತ್ತಿದ್ದರು. ಆದರೆ ಕರ್ವಾಲೋ ಈ ಜನರ ಮಾತನ್ನು ಕೇಳಿಯೂ ಕೇಳದವರಂತೆ ಇದ್ದರು. ಹಳ್ಳಿಗರಿಗೆ ಮಂದಣ್ಣನ ಮೇಲಿದ್ದ ಅಭಿಪ್ರಾಯ ಆತ ಉಂಡಾಡಿಯಾಗಿ ತಿರುಗಾಡಿಕೊಂಡಿರುವವನು, ಎಂಬುದೇ ಹೊರತು ಯಾವುದೇ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಹೀಗಿದ್ದರೂ ಎಲ್ಲರೊಂದಿಗೂ ಅಷ್ಟಾಗಿ ಬೆರೆಯದ ಕರ್ವಾಲೋ ಮಾತ್ರ ಯಾಕೆ ಮಂದಣ್ಣನೊಂದಿಗೆ ಈ ರೀತಿ ಹೊಂದಿಕೊಂಡಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಮಂದಣ್ಣನ ಮಂಗಾಟಗಳನ್ನು ಕಂಡಿದ್ದ ತೇಜಸ್ವಿಯವರೂ ಇವರಿಬ್ಬರ ಸ್ನೇಹದ ಗುಟ್ಟೇನು ಎಂಬಂತೆ ಯೋಚಿಸುಂತಾಗಿದ್ದು ಸುಳ್ಳಲ್ಲ.
ಮಂದಣ್ಣನಲ್ಲಿರುವ, ಪ್ರಾಣಿಗಳ ಬಗೆಗಿನ ವಿಶಿಷ್ಟ ಗ್ರಹಿಕೆಯನ್ನು ನೋಡಿದ ಕರ್ವಾಲೋ ಆತನೊಬ್ಬ ಹುಟ್ಟಾ ಪ್ರಕೃತಿಶಾಸ್ತ್ರಜ್ಞ ಎಂಬ ಅಭಿಪ್ರಾಯ ಹೊಂದಿದ್ದರು. ಹಾರಾಡುವ ಓತಿಯನ್ನೂ ಮೊದಲ ಬಾರಿಗೆ ಕಂಡು ಕರ್ವಾಲೋರಿಗೆ ತಿಳಿಸಿದ್ದೇ ಮಂದಣ್ಣ. ಪ್ರಾಣಿಗಳನ್ನು ಅಷ್ಟೇ ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ ಹೀಗಾಗಿ ಅವನ ಮಾಹಿತಿಯಂತೆ ವಿವರಗಳನ್ನು ಸಂಗ್ರಹಿಸಿದ್ದರೂ ಕೂಡಾ. ಅವನಿಗೇ ಅರಿವಿಲ್ಲದ ಅವನ ಪ್ರತಿಭೆಯನ್ನು ಗುರುತಿಸಿದ ಕರ್ವಾಲೋ ಆತ ಕಚೇರಿಯಲ್ಲಿನ ಪ್ಯೂನ್ ಕೆಲಸ ತನಗೆ ಕೊಡಿರೆಂದು ಕೇಳಿದಾಗ ಅಂತಹಾ ಪ್ರತಿಭಾವಂತ ಪ್ಯೂನ್ ಕೆಲಸ ಮಾಡುವುದೇ ಎಂದು ನಿರಾಕರಿಸಿದ್ದರು. ಕೈಯಲ್ಲಿ ಕೆಲಸವೊಂದಿಲ್ಲದಿದ್ದರೆ ತನಗೆ ಯಾರೂ ಹೆಣ್ಣು ಕೊಡಲು ತಯಾರಿಲ್ಲವೆಂಬ ಕಾರಣದಿಂದಾಗಿ ಕೆಲಸ ನಿರಾಕರಿಸಿದ ಕರ್ವಾಲೋ ಜತೆಗೆ ಬೇಸರ ಪಟ್ಟುಕೊಂಡು ತನ್ನೂರಿಗೆ ಹೋಗಿ ಕುಳಿತಿದ್ದ.
ತೇಜಸ್ವಿಯವರ ಪುಸ್ತಕಗಳೇ ಹಾಗೆ ಓದುಗನನ್ನು ಸರಾಗವಾಗಿ ಓದಿಸಿಕೊಂಡು ಹೋಗಿ ಅದರದ್ದೇ ಆದ ಒಂದು ಲೋಕದಲ್ಲಿ ಸುತ್ತು ಹಾಕಿಸಿಕೊಂಡು, ಆ ಲೋಕವನ್ನು ಪರಿಚಯಿಸುತ್ತಾ ಬರುತ್ತದೆ. ಇಲ್ಲಿಯೂ ಹಾಗೆ ಮಲೆನಾಡಿನ ಜೀವನದ, ಜೇನುಸಾಕಾಣಿಕೆಯ, ಕಳ್ಳಭಟ್ಟಿಯ ವ್ಯವಸ್ಥೆ-ಅವ್ಯವಸ್ಥೆ, ವಿಜ್ಞಾನಿಗಳ ಅನ್ವೇಷಣೆಯನ್ನರಿಯದ ಪೋಲೀಸರೂ ಅವರ ಜತೆ ಯಾರ್ಯಾರು ಕೆಲಸ ಮಾಡುತ್ತಿದ್ದಾರೆಂಬುದನ್ನು ಪತ್ತೆಹಚ್ಚಲು ಮುಂದಾಗುವ ಸಂದರ್ಭ, ಅದಕ್ಕಾಗಿ ಜೇನು ಹುಳಿ ಬಂದ ಮಡಕೆಯನ್ನು ತನ್ನದೇ ಎಂದುದಕ್ಕಾಗಿ ಈತ ಕಳ್ಳಭಟ್ಟಿಯನ್ನು ತಯಾರಿಸುತ್ತಿದ್ದನೆಂದು ಕೇಸು ಹಾಕಿ ಮಂದಣ್ಣನನ್ನು ಬಂಧಿಸುವ ಸಂದರ್ಭ, ಏನೇನೋ ಮಾಡಿ ಕಷ್ಟಪಟ್ಟು ಆತನನ್ನು ಬಿಡಿಸಿಕೊಂಡು ಬರುವ ಯೋಜನೆ ಹಾಕಿದ ಕರ್ವಾಲೋ, ಈ ವಿಜ್ಞಾನಿ ಯಾವುದೋ ಒಂದು ಮಹಾತ್ಕಾರ್ಯದ ಸಲುವಾಗಿಯೇ ಆತನನ್ನು ಬಿಡಿಸಿಕೊಂಡು ಬರಲು ಹರಸಾಹಸಪಡುತ್ತಿದ್ದಾರೆ ಎಂಬುದನ್ನರಿತ ತೇಜಸ್ವಿ ತಾನೂ ಧೈರ್ಯಗೊಂಡು ಆತನನ್ನು ಬಿಡಿಸಲು ಕೋರ್ಟಿನಲ್ಲಿ ಸಾಕ್ಷಿ ಹೇಳುವುದಕ್ಕಾಗಿ ಒಪ್ಪಿಕೊಂಡದ್ದು. ಆತನ ಬಿಡುಗಡೆಯ ನಂತರ ಆತ ಮೊದಲೇ ವಿವರಿಸಿದ್ದ ಹಾರುವ ಓತಿಯ ಪ್ರಬೇಧವನ್ನರಸಿಕೊಂಡು ಮಲೆನಾಡಿನ ದಟ್ಟ ಕಾಡಿನಲ್ಲಿ ಹೊರಟರು. ಮಂದಣ್ಣ, ಛಾಯಾಚಿತ್ರಕಾರ ಪ್ರಭಾಕರ, ಮರ ಹತ್ತುವುದರಲ್ಲಿ ನಿಪುಣನಾಗಿದ್ದ ಕರಿಯಪ್ಪ, ಕರ್ವಾಲೋ, ತೇಜಸ್ವಿ, ಪ್ರಾಣಿಯಾದರೂ ಮನೆಯ ಸದಸ್ಯನಂತೆ ಇದ್ದ ಅವರ ನಾಯಿ ಕಿವಿ, ತಪ್ಪಿಸಿಕೊಂಡ ಎಮ್ಮೆಯನ್ನು ಹುಡುಕುತ್ತಾ ಬಂದು ಇವರ ಜತೆ ಸಿಕ್ಕಿಹಾಕಿಕೊಂಡ ಎಂಗ್ಟ ಹೀಗೆ ಪುಟ್ಟದಾದ ಹಾರುವ ಓತಿಯ ಬೆನ್ನಟ್ಟಿ ಒಂದು ತಂಡವೇ ಹೋಗಿತ್ತು.
ಇವರ ಜೊತೆಗೆ ತೇಜಸ್ವಿಯ 'ಮಂದಣ್ಣ' ಒಬ್ಬ ಅತ್ಯದ್ಭುತ ವ್ಯಕ್ತಿ. ನಿಗೂಢ ಕಾಡಿನ ಸಮಸ್ತ ಹೊಳಪುಗಳನ್ನು ತಿಳಿದುಕೊಂಡು ಕೂಡಾ, ತನ್ನ ಅರಿವಿನ ಬಗ್ಗೆ ಗೊತ್ತೇ ಇರದ ಮಂದಣ್ಣ, ಕರ್ವಾಲೋರ ಶಿಷ್ಯನಾಗಿ ಕರ್ವಾಲೋರಿಗೆ ಹಾರುವ ಓತಿಯ ಸಂಶೋಧನೆಯಲ್ಲಿ ಸಹಕರಿಸಿದ್ದು, ತೇಜಸ್ವಿಯವರು ಅದನ್ನು ನಿರೂಪಿಸುವ ಹಾಸ್ಯಮಯ ಶೈಲಿ, ಎಲ್ಲವೂ ಒಂದು ಸುಂದರ ಪ್ರಕೃತಿಯ ತಾಣವೊಂದರಲ್ಲಿ ಪ್ರಯಾಣ ಮಾಡಿದ ಅನುಭವ ನೀಡುತ್ತದೆ. ಕಾದಂಬರಿಯ ಆರಂಭದಲ್ಲಿ 'ಜೇನುನೊಣ'ದ ಬಗ್ಗೆಯೇ ಹೆಚ್ಚಿನ ಕುತೂಹಲಕಾರಿ ಮಾಹಿತಿ ದೊರಕಿದರೂ, ನಂತರ ಪ್ರಭಾಕರ ಕರ್ವಾಲೋರ ಸಖ್ಯದಿಂದ ಜೀವಜಗತ್ತಿನ ವಿಸ್ಮಯಗಳನ್ನು ಅನಾವರಣಗೊಳಿಸುತ್ತದೆ. ಜೀಪಿಗೆ ಮುತ್ತಿಗೆ ಹಾಕಿದ ಜೇನು ನೊಣಗಳ ಪ್ರಸಂಗ, ಮಂದಣ್ಣ ಡೋಲು ಶಬ್ಧ ಮಾಡಿದ ಕೆಲಸ, ಮಂದಣ್ಣನ ಮದುವೆ, ದಪ್ಪಗಾಜಿನ ಕನ್ನಡಕದ ಗೂಬೆ ಮೊರೆಯಾತ, ಬಿರ್ಯಾನಿ ಕರಿಯಪ್ಪ, ನಾಯಿ ಕಿವಿ, ಪ್ಯಾರಾ, ದಟ್ಟವಾದ ಈಚಲು ಬಯಲು, ಕಾಡಿನ ವರ್ಣನೆ ಎಲ್ಲವೂ ಮನಸ್ಸಲ್ಲಿ ಅಚ್ಚಳಿಯದಂತೆ ಚೆನ್ನಾಗಿ ನಿರೂಪಿಸಿದ್ದಾರೆ ತೇಜಸ್ವಿ. ಕೊನೆಗೂ ಹಾರುವ ಓತಿ ಇವರ ಕೈಗೆ ಸಿಗೋದೇ ಇಲ್ಲ. ಪ್ರಕೃತಿ ಮಾತೆ, ತನ್ನ ನಿಗೂಡತೆಯನ್ನು ಯಾವತ್ತೂ ಅಲ್ಪನಾದ ಮನುಷ್ಯನಿಗೆ ಬಿಟ್ಟುಕೊಡುವುದೇ ಇಲ್ಲ ಎಂದನಿಸಿತ್ತು ನನಗೆ. ಜತೆಗೆ ಆ ಓತಿ ಕರಿಯಪ್ಪನ ಕೈಯಿಂದ ತಪ್ಪಿಸಿಕೊಂಡು ಹೋಗಿ ಸ್ವತಂತ್ರವಾಗಿದ್ದು ಒಳ್ಳೆಯದೇ ಆಯಿತೆಂದು ನನಗನಿಸಿತ್ತು. ಅದನ್ನು ಹುಡುಕುವ ಸಂದರ್ಭದಲ್ಲಿ, ಮೊಲ, ಕಾಡುಕೋಳಿ, ಹಂದಿ ಮುಂತಾದ ಕಾಡು ಪ್ರಾಣಿಗಳಿಗೆ ಗುರಿ ಇಟ್ಟು ಸಾಯಿಸಿ ಅದನ್ನು ತಿನ್ನುತ್ತಿದ್ದ ಅವರ ಕೈಗೆ ಸಿಕ್ಕಿದರೆ ಅವರ ಕಾರ್ಯವಾದ ನಂತರ ಇದನ್ನೂ ಬಿಡುತ್ತಿರಲಿಲ್ಲವೇನೋ ಎನಿಸಿ, ತಪ್ಪಿಸಿಕೊಂಡಿದ್ದೇ ಸಮಾಧಾನವಾಯಿತು.
Comments
ಮಮತಾ ಅವರೇ
ಮಮತಾ ಅವರೇ
ಕರ್ವಾಲೋ ಪುಸ್ತಕವನ್ನು ಈ ಹಿಂದೆ ಓದಿದ್ದೆ ..
ಭಲೇ ಕಥಾ ವಸ್ತು-
ಅದು ಓದಿ ಮುಗಿಸುವವರೆಗೆ ನೆಮ್ಮದಿ ಇರಲಿಲ್ಲ ..
ಒಳ್ಳೇ ವಿಮರ್ಶೆ ...
ಶುಭವಾಗಲಿ ..
\।
In reply to ಮಮತಾ ಅವರೇ by venkatb83
ಕರ್ವಾಲೋ ನನ್ನ ಇಷ್ಟದ ಪುಸ್ತಕ.ಬರೀ
ಕರ್ವಾಲೋ ನನ್ನ ಇಷ್ಟದ ಪುಸ್ತಕ.ಬರೀ ಪತ್ತೇದಾರಿ ಕಾದಂಬರಿಗಳು ಮಾತ್ರ ಓದಲು ಇರುವ ಪುಸ್ತಕಗಳು ಎಂದುಕೊಂಡಿದ್ದ ಕಾಲದಲ್ಲಿ ಆಕಸ್ಮಿಕವಾಗಿ ಸಿಕ್ಕ ಕರ್ವಾಲೋ, ಕನ್ನಡದ ಸಾಹಿತ್ಯಲೋಕ ಎಂಬ ಅಧ್ಬುತ ಅಕ್ಷಯ ಕಣಜವನ್ನೇ ನನ್ನ ಮುಂದೆ ತೆರೆದಿಟ್ಟಿತ್ತು.ಆ ನಂತರ ಕುವೆಂಪು,ತರಾಸು.ಅನಂತಮೂರ್ತಿ,ಬೊಳವಾರು,ಶಿವರಾಂ ಕಾರಂತ-ಹೀಗೆ ಓದಿದಷ್ಟು ತೆರೆದುಕೊಳ್ಳುವ ನದಿಯಂತೇ ಎಂದಿಗೂ ತೀರದೇ ಇರುವಷ್ಟು ಓದಿನ ಆಕರ್ಷಣೆ ಬೆಳೆಯಿತು.ಒಟ್ಟಿನಲ್ಲಿ ಕರ್ವಾಲೋ ನನ್ನ ಪಾಲಿಗೆ ಸಾಹಿತ್ಯಲೋಕದ ಕೀಲಿಕೈ ಎನ್ನಬಹುದು.ನಿಮ್ಮ ವಿಮರ್ಶೆ ಇಷ್ಟವಾಯಿತು
In reply to ಕರ್ವಾಲೋ ನನ್ನ ಇಷ್ಟದ ಪುಸ್ತಕ.ಬರೀ by ನಂದೀಶ್ ಬಂಕೇನಹಳ್ಳಿ
ವಿಮರ್ಶೆಯನ್ನು ಮೆಚ್ಚಿ,
ವಿಮರ್ಶೆಯನ್ನು ಮೆಚ್ಚಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದ ವೆಂಕಟೇಶ್ ಹಾಗೂ ನಂದೀಶ್ ಅವರಿಗೆ ಧನ್ಯವಾದಗಳು. ಜೀವಜಗತ್ತಿನ ಸಾಕಷ್ಟು ವಿಸ್ಮಯಗಳನ್ನು ಒಳಗೊಂಡಿರುವ ಒಂದು ಉತ್ತಮ ಪುಸ್ತಕ. ಓದಿದ ಮೇಲೆ ನಮ್ಮ ಸುತ್ತಮುತ್ತಲೂ ಇರುವ ಅತಿ ಸೂಕ್ಮ್ಷ ವಿಚಾರಗಳನ್ನು ನೋಡಿ, ಓ ಹೀಗೂ ಇತ್ತಲ್ವಾ ಅನಿಸುತ್ತದೆ.
ಮಮತಾ ಅವ್ರೆ, ತೇಜಸ್ವಿಯವರ
ಮಮತಾ ಅವ್ರೆ, ತೇಜಸ್ವಿಯವರ ಕಾರ್ವಾಲೊ ಕಾದ೦ಬರಿಯ ಬಗ್ಗೆ ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು. ಈಗಾಗಲೇ ಒಮ್ಮೆ ಓದಿರುವೆಯಾದರೂ ಈಗ ಮತ್ತೆ ಓದಬೇಕೆನ್ನಿಸುತ್ತಿದೆ. ಮೊನ್ನೆ ತಾನೆ ತೇಜಸ್ವಿಯವ ಮಿಲಿನಿಯಮ್ ಸರಣಿಯ ೫ ಪುಸ್ತಕ, ಚಿದ೦ಬರ ರಹಸ್ಯ ಮತ್ತು ಪರಿಸರದ ಕಥೆ ಪುಸ್ತಕಗಳನ್ನು ಕೊ೦ಡು ತ೦ದೆ. ಇವನ್ನು ಓದಿ ಮುಗಿಸಿದ ನ೦ತರ ಕಾರ್ವಾಲೊ ಮತ್ತೆ ಓದುವೆ !
In reply to ಮಮತಾ ಅವ್ರೆ, ತೇಜಸ್ವಿಯವರ by spr03bt
ಧನ್ಯವಾದಗಳು ಶಿವಪ್ರಕಾಶ್. ನೀವು
ಧನ್ಯವಾದಗಳು ಶಿವಪ್ರಕಾಶ್. ನೀವು ತೆಗೆದುಕೊಂಡ ಪುಸ್ತಕಗಳ ವಿಮರ್ಶೆಗಳ ನಿರೀಕ್ಷೆಯಲ್ಲಿರುವೆ. ನನಗೂ ಕರ್ವಾಲೋ ಇನ್ನೊಮ್ಮೆ ಓದಬೇಕು ಅನ್ನಿಸಿದೆ.
ಗುಂಡೂರಾಯರು ಮುಖ್ಯ
ಗುಂಡೂರಾಯರು ಮುಖ್ಯ ಮಂತ್ರಿಗಳಾಗಿದ್ದಾಗ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಸಾಹಿತ್ಯ ಮಾಲೆಯಲ್ಲಿ ಪ್ರಕಟವಾಗಿದ್ದಾಗ ತೇಜಸ್ವಿಯವರ ‘ಕರ್ವಾಲೋ’ ಪುಸ್ತಕ ಕೊಂಡು ತಂದಿದ್ದೆವು. ಆಗ ಓದಿದ್ದು. ಪುನ; ಇತ್ತೀಚಿಗೆ ಟೌನ್ ಹಾಲ್ ನಲ್ಲಿ ನಡೆದ ಪುಸ್ತಕ ಮೇಳಕ್ಕೆ ಹೋದಾಗ ಕಣ್ಣಿಗೆ ಬಿತ್ತು. ಕೊಂಡು ತಂದೆ. ಬಹಳ ಸರಳ, ಸುಂದರ ಮತ್ತೆ ಮತ್ತೆ ಓದಬೇಕೆನ್ನಿಸುವ ಕಾದಂಬರಿ. ಮಮತಾ ಅವರೇ ನಿಮ್ಮ ಎಲ್ಲ ಲೇಖನಗಳನ್ನು ಆಸಕ್ತಿಯಿಂದ ಓದುತ್ತೇನೆ.
In reply to ಗುಂಡೂರಾಯರು ಮುಖ್ಯ by Shobha Kaduvalli
ಧನ್ಯವಾದಗಳು ಶೋಭಾ ಅವರೆ. ನೀವೂ
ಧನ್ಯವಾದಗಳು ಶೋಭಾ ಅವರೆ. ನೀವೂ ಲೇಖನಗಳನ್ನು ಬರೆದು ಸಂಪದದಲ್ಲಿ ಸೇರಿಸಿ, ಶಾಲೆಯಲ್ಲಿ ಪಾಠ ಮಾಡುವಾಗಿನ ಅನುಭವಗಳು ತುಂಬಾ ಇರುತ್ತವಲ್ಲಾ ಅವುಗಳನ್ನೇ ಬರೆಯಿರಿ. ರುಚಿಯಲ್ಲಿ ಒಳ್ಳೊಳ್ಳೆಯ ಅಡುಗೆ ವಿಧಾನಗಳನ್ನು ಸೇರಿಸುತ್ತಿದ್ದೀರಿ..ಮನೆಗೆ ಹೋದಾಗ ಅವುಗಳ ಪ್ರಯೋಗ ಮಾಡಬೇಕೆಂದಿರುವೆ. ಶುಭವಾಗಲಿ
ನಿಜ ಮಮತಾ್ ಅವರೇ ಅದೊಂದು ಅದ್ಭುತ
ನಿಜ ಮಮತಾ್ ಅವರೇ ಅದೊಂದು ಅದ್ಭುತ ಕತೆ, ನೆನಪಿಸಿದಕ್ಕೆ ಧನ್ಯವಾದಗಳು
In reply to ನಿಜ ಮಮತಾ್ ಅವರೇ ಅದೊಂದು ಅದ್ಭುತ by gopinatha
ಹೌದು ಸರ್. ಮತ್ತೆ ಮತ್ತೆ
ಹೌದು ಸರ್. ಮತ್ತೆ ಮತ್ತೆ ಓದಬೇಕೆನಿಸುವ ಕಥೆ. ಧನ್ಯವಾದಗಳು ಪ್ರತಿಕ್ರಿಯೆಗಾಗಿ