ಹುಬ್ಬಳ್ಳಿಯ ಧೀಮಂತ ಕನ್ನಡಿಗ ನಮ್ಮ ವೆಂಕಟೇಶ ಮರೆಗುದ್ದಿಯವರು.
ಹುಬ್ಬಳ್ಳಿಯ ಧೀಮಂತ ಕನ್ನಡಿಗ ನಮ್ಮ ವೆಂಕಟೇಶ ಮರೆಗುದ್ದಿಯವರು.
(ಇದೇ ತಿಂಗಳ 10,11,12 ರಂದು ವಿಜಾಪೂರದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಲಿರುವ ಶ್ರೀಯುತ ವೆಂಕಟೇಶ ಕೃಷ್ಣಾಜಿ ಮರೆಗುದ್ದಿಯವರ ಕುರಿತಾದ ಕಿರು ಪರಿಚಯ)
ಇಂದು ಕೇವಲ ಹೆಸರು,ಹಣ,ಅಧಿಕಾರಕ್ಕಾಗಿ ಕ್ಷಣಕ್ಕೊಂದು ಸೋಗುಹಾಕಿಕೊಂಡು, ನಾಡು, ನೆಲ, ಜಲಗಳಕುರಿತು ಉದ್ದುದ್ದ ಭಾಷಣ ಬಿಗಿಯುತ್ತ, ಜನಸಾಮಾನ್ಯರ ಕಣ್ಣಿಗೆ ಮಣ್ಣೆರೆಚುವ ಆಷಾಡಭೂತಿಗಳೇ ತುಂಬಿರುವ ಈ ಸಮಾಜದಲ್ಲಿ, ಇದಕ್ಕೆ ಅಪವಾದವೊ ಎಂಬಂತೆ, ಕೆಲ ವ್ಯಕ್ತಿಗಳು ಸದ್ದಿಲ್ಲದೇ ತನ್ನ ನೆಲ, ನುಡಿಗಳ ರಕ್ಷಣೆಗಾಗಿ ತಮ್ಮ ಇಡೀ ಆಯಸ್ಸನ್ನೇ ಮುಡಿಪಾಗಿಟ್ಟಿದ್ದಾರೆ.ಅವರಿಗೆ ಯಾವ ಪ್ರಚಾರದ ಹಂಬಲವಿಲ್ಲ. ಕುರ್ಚಿಯ ದಾಹವಿಲ್ಲ. ಸದಾಕಾಲ ಅವರದೊಂದೇ ಬಯಕೆ. ನನ್ನ ನಾಡು, ನನ್ನ ಭಾಷೆ ಬೆಳೆದು ಬೆಳಗಲಿ.
ಇಂಥ ಅಗ್ರರ ಪಂಕ್ತಿಯಲ್ಲಿ ಶೋಭಿಸುವವರು ನಮ್ಮ ವೆಂಕಟೇಶ ಮರೆಗುದ್ದಿಯವರು. ಹಾಗಂತ ಇವರು ದೊಡ್ಡ ಸಾಹಿತಿಯೊ ಉದ್ಯಮಿಯೋ ಅಲ್ಲವೇ ಅಲ್ಲ. ಕನ್ನಡವನ್ನು ತಮ್ಮ ಉಸಿರಿನಷ್ಟೇ ಪ್ರೀತಿಸುವ ಇವರೊಬ್ಬ ಅಪ್ಪಟ ಕನ್ನಡಾಭಿಮಾನಿ. ವೃತ್ತಿಯಲ್ಲಿ ಬಂಗಾರದ ಆಭರಣ ತಯಾರಕರಾದ ಇವರು, ತಮ್ಮ ಅಂಗಡಿಗೆ `ಮರೆಗುದ್ದಿ ಚಿನ್ನಾಭರಣ ತಯಾರಕರು' ಎಂದು ಅಚ್ಚಕನ್ನಡದಲ್ಲಿ ಹೆಸರು ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ,ಇವರು ಮಾತನಾಡುವಾಗ ಒಂದೂ ಆಂಗ್ಲ ಶಬ್ಧ ಬಳಸದೇ ಶುದ್ಧ ಕನ್ನಡದಲ್ಲಿ ಮೃದುವಾಗಿ ಮಾತಾಡುತ್ತಾರೆ.``ಕನ್ನಡವೇ ಅನ್ನ ಕಲಿಯಬೇಕು ತಿನ್ನುವ ಮುನ್ನ ಅದನ್ನ'' ಎನ್ನುವ ಘೋಷ ವಾಕ್ಯವನ್ನು ಪಾಲಿಸುವ ಇವರು ಕನ್ನಡದ ಬಗ್ಗೆ ತಾತ್ಸಾರ ಇರುವವರನ್ನು ಮರೆಯದೇ ಗುದ್ದಿ ಎಂದೇ ಕರೆನೀಡುತ್ತಾರೆ.
ಇವರಮನೆಯಿರುವ ರಸ್ತೆಯ ಹೆಸರು `ಲಕ್ಷೀಶಕವಿ ಮಾರ್ಗ'ವಾದರೆ,ಮನೆಯ ಹೆಸರು `ಸರ್ವಜ್ನ'.ಇನ್ನು ಮನೆಯ ಒಳಗೆ ಹೋದರೆ ನಿಮಗೆ ಇನ್ನಷ್ಟು ಅಚ್ಚರಿ ಹುಟ್ಟಿಸುವ ವಿಷಯಗಳಿವೆ. ಮನೆಯ ಹಜಾರದ ಗೋಡೆಗಳ ಮೇಲೆ ದೇವರ ಚಿತ್ರದ ಬದಲು ಕನ್ನಡದ ಪ್ರಸಿದ್ಧ ಸಾಹಿತಿಗಳ ಚಿತ್ರಗಳು ಇವರ ಕನ್ನಡತನವನ್ನು ತೋರಿಸಿದರೆ, ಮನೆಯ ಪ್ರತಿಯೊಂದು ಕೋಣೆಯೂ ಪಂಪ, ರನ್ನ, ಅಲ್ಲಮಪ್ರಭು, ಅಕ್ಕಮಹಾದೇವಿ ಎಂಬ ಶಿರೋನಾಮೆಗಳನ್ನು ಹೊತ್ತು, ಕನ್ನಡ ಸಾಹಿತ್ಯದ ಕುರಿತಾದ ಅವರ ನಿಷ್ಟೆ ಗೌರವಗಳನ್ನು ಎತ್ತಿ ತೋರಿಸುತ್ತದೆ. ಇವರ ಗೃಹ ಪ್ರವೇಶದಲ್ಲಿ ಕೂಡಾ ಇವರು ಶಿವರಾಮ ಕಾರಂತರ ಹಾಗೂ ಕುವೆಂಪು ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರವೇಶಮಾಡಿದ್ದಾರೆ. ಮನೆಯ ಕಪಾಟಿನ ತುಂಬ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಹೀಗೆ ಎಲ್ಲ ಕಾಲಘಟ್ಟಗಳ ಸಾಹಿತ್ಯಕೃತಿಗಳನ್ನು ಜೋಪಾನವಾಗಿರಿಸಿದ್ದಾರೆ.ಇದೇ ಅವರ ಆಸ್ತಿಕೂಡಾ.ಈ ರೀತಿ ಸಂಪೂರ್ಣ ಕನ್ನಡತನವನ್ನು ಮೈಗೂಡಿಸಿಕೊಂಡ ಇವರ ಹಿನ್ನಲೆ ಕೂಡಾ ತುಂಬಾ ಸ್ವಾರಸ್ಯಕರವಾಗಿದೆ.
ಮೂಲತಃ ಜಮಖಂಡೀಯವರಾದ ಶ್ರೀಯುತ ವೆಂಕಟೇಶ ಕೃಷ್ಣಾಜಿ ಮರೆಗುದ್ದಿಯವರು 1953 ರಲ್ಲಿ ಜನಿಸಿದರು. ಅಲ್ಲೇ ಬಾಲ್ಯಕೂಡಾ ಕಳೆದರು. ಆಗಿನ ಕಾಲಕ್ಕೆ ಜಮಖಂಡಿ ಮರಾಠಾ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದು, ಅಲ್ಲಿಯ ಕನ್ನಡಿಗರ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಶಾಲೆಯಲ್ಲಿ ಕೂಡಾ ತುಂಬಾ ತಾರತಮ್ಯವಿತ್ತು. ಮರಾಠರ ಮಕ್ಕಳು ಎತ್ತರದ ಬೆಂಚಿನಲ್ಲಿ ಕುಳಿತರೆ, ಕನ್ನಡಿಗರ ಮಕ್ಕಳಿಗೆ ಮಾತ್ರ ಹಲಿಗೆಯೇ ಗತಿಯಾಗಿತ್ತು.ಇವೆಲ್ಲ ಅವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರತೊಡಗಿದವು. ಈ ಅಸಹನೆ, ಪ್ರತಿಭಟನೆಯ ರೂಪತಾಳಿದ್ದು ಕೂಡಾ ಆಕಸ್ಮಿಕವೇ ಆಯಿತು. ಒಮ್ಮೆ ಶಾಲೆಯ ಮೈದಾನದಲ್ಲಿ ಘೋರ ಘಟನೆ ನಡೆಯಿತು. ನೂರಾರು ಜನ ಮಾನಮುಚ್ಚುವಷ್ಟು ಬಟ್ಟೆ ಕೂಡಾ ಮೈಮೇಲಿಲ್ಲದೇ ಎಲ್ಲಿಂದಲೋ ಬಂದ ಲಾರಿಯಿಂದ ದಬ್ಬಿಸಿಕೊಂಡು ಕೆಳಗೆಬಿದ್ದುಚೀರಾಡ ತೊಡಗಿದರು. ಆ ಲಾರಿಗಳೆಲ್ಲ ಬರ್ರನೆ ಹೊರಟು ಹೋದವು. ವಿಷಯ ವೇನೆಂದರೆ, ಅವರೆಲ್ಲಾ ಮಹಾರಾಷ್ಟ್ರಕ್ಕೆ ದುಡಿಯಲು ಹೋದ ಬಡ ಕನ್ನಡಿಗರಾಗಿದ್ದರು. ಅವರನ್ನು ಮರಾಠಿಗರು ಹಿಂಸಿಸಿ ಹೊರದಬ್ಬಿದ್ದರು. ಆಗತಾನೆ 11 ನೇ ಈಯತ್ತೆ ಸೇರಿದ ಯುವರಕ್ತದ ಮರೆಗುದ್ದಿಯವರ ಸಹನೆ ಮೀರಿತು. ತನ್ನ ಸಮವಯಸ್ಕರ ಗುಂಪು ಕಟ್ಟಿ ಉಗ್ರ ಪ್ರತಿಭಟನೆ ಆರಂಭಿಸಿಯೇ ಬಿಟ್ಟರು. ಹೇಗಾದರೂ ಸರಿ ನಮ್ಮ ಕನ್ನಡಿಗರಿಗಾಗುತ್ತಿರುವ ಅನ್ಯಾಯ ತಡೆಯಬೇಕು ಎಂದು ಅಂದೇ ನಿರ್ಧರಿಸಿದರು. ಇದರ ಫಲಸ್ವರೂಪವಾಗಿ ಮುಂದೆ ಹುಬ್ಬಳ್ಳಿಯಲ್ಲಿ 1971ರಲ್ಲಿ ``ವೀರಪುಲಕೇಶಿ ಕನ್ನಡ ಸಂಘ'' ಕಟ್ಟಿದರು. ಅದರ ಮೂಲಕ ಗೋಕಾಕ ಚಳುವಳಿಯಲ್ಲಿ ಧುಮುಕಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ, ಕಿರುತೆರೆಯಲ್ಲಿ ರಾಜ್ಯದಾದ್ಯಂತ ಕನ್ನಡವಾಹಿನಿಯ ಪ್ರಸಾರವಾಗಬೇಕೆಂದು `ಲಕ್ಷಪತ್ರ ಚಳುವಳಿ' ಮಾಡಿ ಗೆಲುವು ಸಾಧಿಸಿದರು ಕೂಡಾ. ಆದರೆ ಇದಕ್ಕೆಲ್ಲಾ ಅವರು ಯಾರಿಂದಲೂ ಒಂದು ಬಿಡಿಗಾಸನ್ನೂ ತೆಗೆದು ಕೊಳ್ಳದೇ ಸ್ವತಃ ದುಡಿದ ಸಂಪಾದನೆಯನ್ನೇ ವಿನಿಯೋಗಿಸಿದ್ದಾರೆ. ತಮ್ಮ ಸಂಪಾದನೆಯ 10 ಪ್ರತಿಶತ ಭಾಗವನ್ನು ಕನ್ನಡದ ಕೈಂಕರ್ಯಕ್ಕಾಗಿ ವಿನಿಯೋಗಿಸುವ ಇವರು, ಪ್ರತೀ ನವೆಂಬರ್ ತಿಂಗಳಿನಲ್ಲಿ ಮಕ್ಕಳಿಗೆ, ಕನ್ನಡ ಪ್ರಬಂಧ, ರಸಪ್ರಶ್ನೆಯಂತಹ ಕಾರ್ಯಕ್ರಮ ಏರ್ಪಡಿಸಿ ಬಹುಮಾನ ನೀಡುತ್ತಾರೆ. ಅಷ್ಟೇ ಅಲ್ಲ ಕನ್ನಡದಲ್ಲಿ ಸಂಪೂರ್ಣವಾಗಿ ನಾಮ ಫಲಕ ಬರೆಸಿದ ಅಂಗಡಿಕಾರರಿಗೆ ಛತ್ರಿ, ಚಾಮರ ಸಮೇತ, ಸಿಂಹಾಸನದಲ್ಲಿ ಕೂಡ್ರಿಸಿ ಸನ್ಮಾನಿಸುತ್ತಾರೆ. `ಕನ್ನಡದ ಬಗ್ಗೆ ಜನಸಾಮಾನ್ಯರಿಗೂ ತಿಳುವಳಿಕೆ ಕೊಡುವದಕ್ಕೋಸ್ಕರ, `ಮನೆ ಮನೆಯಲ್ಲಿ ಕನ್ನಡದ ಕಂಪು' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಜನಸಾಮಾನ್ಯರ ಮನೆಗಳಲ್ಲೇ ಸುಮಾರು 205 ಕಾರ್ಯಕ್ರಮಗಳನ್ನು ಮಾಡಿ ಅನೇಕ ಗಣ್ಯರಿಂದ ಕನ್ನಡದ ಉಪನ್ಯಾಸ ಏರ್ಪಡಿಸಿ ಜನಜಾಗೃತಿ ಮೂಡಿಸಿದ್ದಾರೆ.2005ರಲ್ಲಿ ಉತ್ತರಕರ್ನಾಟಕದಲ್ಲಿ ಮೊಟ್ಟ ಮೊದಲಬಾರಿ ಕನ್ನಡದ ಅಂಕೆಗಳುಳ್ಳ ಗಡಿಯಾರ ತಯಾರಿಸಿ, ಅದನ್ನು ಶ್ರೀಮತಿ ಗಂಗೂಬಾಯಿ ಹಾನಗಲ್ ಅವರಿಂದ ಬಿಡುಗಡೆಮಾಡಿಸಿ, ಎಷ್ಟೊ ಗಣ್ಯರಿಗೆ ಕಾಣಿಕೆಯಾಗಿ ನೀಡಿದ್ದಾರೆ.
ಮರೆಗುದ್ದಿಯವರ ಮೇಲೆ ಇಬ್ಬರು ವ್ಯಕ್ತಿಗಳ ಪ್ರಭಾವವಿದೆ. ಕನ್ನಡಪರ ಹೋರಾಟದ ಕೆಚ್ಚು ಮೂಡಿಸಿದ್ದು ಅವರ ಅಣ್ಣನಾದ ಶ್ರೀ ಗೋವಿಂದ ಕೃ.ಮರೆಗುದ್ದಿಯವರು. ಪೂಣೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಅವರು, ನೋಟು ಎಣಿಸುವಾಗ, ಕನ್ನಡ ಅಂಕೆ ಬಳಸಿದ್ದಕ್ಕೆ ಅಲ್ಲಿಯ ಜನ ವಿರೋಧಿಸಿದಾಗ ಸೊಪ್ಪು ಹಾಕದೇ ರಾಜಿನಾಮೆಕೊಟ್ಟು ಹೊರಬಂದು ತಮ್ಮ ಭಾಷಾಭಿಮಾನ ಮೆರೆದರು. ಮುಂದೆ ಸೇನೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿದಾಗ, ಗೋಕಾಕದ ಹುಡುಗನೊಬ್ಬ ಸೇನೆಯಲ್ಲಿ ಭರ್ತಿಯಾಗಲು ಬಂದು ತನ್ನ ಪರಿಚಯ ಹೇಳುವಾಗ, ತಾನು ಮಹಾರಾಷ್ಟ್ರ ರಾಜ್ಯದವನೆಂದು ಹೇಳಿದ್ದಕ್ಕೆ ಕೆನ್ನೆ ಬಾಯುವ ರೀತಿ ಹೊಡೆದು ಕರ್ನಾಟಕ ರಾಜ್ಯವೆಂದು ಹೇಳಿಸಿ ತಪ್ಪು ತಿದ್ದಿದರು. ಇನ್ನು ಕನ್ನಡದ ಕುರಿತು ಅಪಾರ ಅಭಿಮಾನ ಮೂಡಿಸಿದವರು, ಡಾ.ರಾಜ್ ಕುಮಾರ್ ಅವರು. ಅವರ ಚಲನಚಿತ್ರಗಳನ್ನು ನೋಡುತ್ತಲೇ ಬೆಳೆದ ಇವರು, ಅವರ ವ್ಯಕ್ತಿತ್ವದ ಅನೇಕ ಉತ್ತಮ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ. ಡಾ.ರಾಜ್ ಕುಮಾರ್ ಅವರ ಕುರಿತು ಬರೆದ ಸುಮಾರು ಇಪ್ಪತ್ತಕ್ಕೂ ಮೇಲ್ಪಟ್ಟ ಕೃತಿಗಳು, ಹಾಗೂ ತುಂಬಾ ಅಪರೂಪವಾದ ಛಾಯಾ ಚಿತ್ರಗಳು ಇವರ ಸಂಗ್ರಹದಲ್ಲಿವೆ. ಒಳ್ಳೆಯ ಕಂಠಸಿರಿಯನ್ನು ಹೊಂದಿದ ಇವರು ಅನೇಕ ಸುಮಧುರ ಕನ್ನಡ ಧ್ವನಿಸುರಳಿಗಳನ್ನು ಕೂಡಾ ಸಂಗ್ರಹಿಸಿದ್ದಾರೆ.
ವೆಂಕಟೇಶ್ ಮರೆಗುದ್ದಿಯವರ ಇಡೀ ಕುಟುಂಬ ಅಪ್ಪಟ ಕನ್ನಡ ಕುಟುಂಬವಾಗಿದೆ. ಹೆಂಡತಿ ಶ್ರೀಮತಿ ಗೀತಾ, ಮಗಳು ವಾಣಿ, ಮಗ ಮಯೂರ್ ಇವರೆಲ್ಲಾ ಕನ್ನಡವನ್ನು ಬಹಳ ಪ್ರೀತಿಸುತ್ತಾರೆ. ಮಗಳ ಮದುವೆಯ ಕರೆಯೋಲೆಯಲ್ಲಿ ಕುವೆಂಪು ಅವರ ಉಕ್ತಿ ಮುದ್ರಿಸಿದ್ದಾರೆ. ಬಂದವರಿಗೆ ಉಡುಗೋರೆಯ ರೂಪವಾಗಿ ``ಸಾಹಿತ್ಯ ತಾಂಬೂಲ'' ಎಂಬ ಕಿರು ಹೊತ್ತಿಗೆ ನೀಡಿದ್ದಾರೆ.ಅದರ ತುಂಬಾ ಕನ್ನಡದ ಕವಿ ಪುಂಗವರ ನುಡಿ ಮುತ್ತುಗಳಿವೆ. ಮನೆಯಲ್ಲಿ ಕವಿಗೋಷ್ಟಿ ಏರ್ಪಡಿಸಿದಾಗ ಸ್ವತಃ ಗೀತಕ್ಕನೇ ನಿಂತು ಎಲ್ಲರಿಗೂ ನೆಂಟರಂತೇ ಉಪಚರಿಸುತ್ತಾರೆ. ಯಾವುದೇ ಕನ್ನಡ ಕಾರ್ಯಕ್ರಮವಿರಲಿ ಪತಿಯೊಡನೆ ತಾವೂ ಪಾಲ್ಗೊಳ್ಳುತ್ತಾರೆ. `ನಮ್ಮ ತಾಯಿಕನ್ನಡ ನಮ್ಮರಕ್ತ ಕನ್ನಡ ಎಂದು ಭಾವುಕರಾಗಿ ಹಾಡುತ್ತಾರೆ.
ಇಂಥಹ ವೀರಕನ್ನಡಿಗ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರೆ. ಅವು ಇಂತಿವೆ.
1) 2002ರಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ `ಧೀಮಂತ ಕನ್ನಡಿಗ ಪ್ರಶಸ್ತಿ.
2) 2007ರಲ್ಲಿ ಧಾರವಾಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ `ಸುವರ್ಣ ಶ್ರೇಷ್ಠ' ಪ್ರಶಸ್ತಿ.
3) 2011ರಲ್ಲಿ ಹುಬ್ಬಳ್ಳಿ ತಾಲೂಕಾ ಪ್ರಥಮ ಸಾಹಿತ್ಯ ಸಮ್ಮೇಳನ ಪ್ರಶಸ್ತಿ.
ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಆದರೆ ಅವರುಮಾತ್ರ ಯಾವುದಕ್ಕೂ ಹಿಗ್ಗದೇ ಕುಗ್ಗದೇ ತಮ್ಮ ಕಾಯಕ ಮುಂದುವರಿಸಿದ್ದಾರೆ.`ಕನ್ನಡ ಅಪಾರ ಸಾಹಿತ್ಯ ಸಂಪತ್ತು ಹೊಂದಿದ ವಿಸ್ತೃತವಾದಭಾಷೆ. ಆದರೆ ಕನ್ನಡಿಗರ ಸ್ವಾಭಿಮಾನ ಮಾತ್ರ ತುಂಬಾ ಚಿಕ್ಕದು ಎಂದು ನೋವಿನಿಂದ ನುಡಿಯುತ್ತಾರೆ.`ನಮ್ಮ ಕನ್ನಡದ ಬಗ್ಗೆ ನಮಗೆ ಅಭಿಮಾನವಿರಬೇಕು. ಅಂದರೆ ಬೇರೆ ಭಾಷೆಯನ್ನು ದ್ವೇಷಿಸಬೇಕೆಂದಲ್ಲ. ಮೊದಲು ನಮ್ಮ ಕನ್ನಡ. ನಂತರ ಇತರ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡ ಜನಾಂಗ ಭಾರತವನ್ನು ಅತಿಯಾಗಿ ಪ್ರೀತಿಸುವ ಜನಾಂಗ. ಆದರೆ ದೆಹಲಿಯಿಂದ ಕನ್ನಡಿಗರಿಗೆ ದೊರೆತ ಮನ್ನಣೆ ಇತರರಿಗೆ ಹೋಲಿಸಿದರೆ ಶೂನ್ಯ'. ಹೀಗೆ ತಮ್ಮ ಅಂತರಂಗದ ಅಳಲನ್ನು ತೋಡಿಕೊಳ್ಳುತ್ತಾರೆ. ವರ್ಷದ 365 ದಿನಗಳೂ ಕನ್ನಡದ ಕನಸುಕಾಣುವ ಅವರ ಕನಸನ್ನು ನನಸಾಗಿಸಲು ನಾವೆಲ್ಲ ಅವರ ಜೊತೆ ಕೈಜೋಡಿಸಿ ಮತ್ತಷ್ಟು ಹುರಿದುಂಬಿಸೋಣ. ಕನ್ನಡತಾಯಿ ಅವರನ್ನು ಹರಸಲೆಂದು ಪ್ರಾರ್ಥಿಸೋಣ.
ಸಹೃದಯ ಕನ್ನಡಿಗ ಓದುಗರೇ ಒಬ್ಬ ಯೋಗ್ಯ ವ್ಯಕ್ತಿಗೆ ಕನ್ನಡ ಅಧಿವೇಶನದಲ್ಲಿ ಸನ್ಮಾನ ದೊರೆಯುತ್ತಿರುವುದು ನಮ್ಮ ನಿಮ್ಮೆಲ್ಲರ ಹೆಮ್ಮೆ. ಅವರಿಗೆ ಶುಭಾಶಯ ಹೇಳುವ ಆಸೆ ನಿಮಗಿದ್ದರೆ,ಇದೊ ಈ ದೂರವಾಣಿ ಸಂಖ್ಯೆಯನ್ನು ಉಪಯೋಗಿಸಿ.9945114335.
ಜೈ ಕರ್ನಾಟಕಮಾತೆ.
Comments
ಮೇಡಂ ವಂದನೆಗಳು
In reply to ಮೇಡಂ ವಂದನೆಗಳು by H A Patil
ಒಳ್ಳೆ ಕೆಲಸ ಮಾಡಿದಿರ. ನಾನು ಇಂತಹ