ಬಲಿ ಪಡೆದ ಬಹಿರ್ದೆಸೆ ಸಮಸ್ಯೆ

ಬಲಿ ಪಡೆದ ಬಹಿರ್ದೆಸೆ ಸಮಸ್ಯೆ

ಮಹಿಳೆ ಸಾವಿನ ಪ್ರಕರಣ /  ಆರೋಪಿಗಳೀಗ ಪೊಲೀಸರ ಅತಿಥಿ

ಬಲಿ ಪಡೆದ ಬಹಿರ್ದೆಸೆ ಸಮಸ್ಯೆ!

 ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಮಹಿಳೆಯೋರ್ವಳ ಬಹಿರ್ದೆಸೆ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ಆಕೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ರೇಣವ್ವ ಹೊಳೆಮ್ಮನವರ್(42) ಎಂಬ ಮಹಿಳೆ ಶನಿವಾರ ಸಾವನ್ನಪ್ಪಿದ ದುರ್ದೈವಿ.

 ಆರೋಪಿಗಳಾದ ಭರಮಪ್ಪ ನೀಲಿ ಮತ್ತು ಮಗ ಹನುಮಂತ ನೀಲಿ ಎಂಬುವವರೇ ಬಂಧಿತ ಆರೋಪಿಗಳು. ಶನಿವಾರ ಹೊಲದಿಂದ ಮರಳಿದ ರೇಣವ್ವ ಬಹಿರ್ದೆಸೆಗೆಂದು ತಮ್ಮ ಹಿತ್ತಲಿಗೆ ಹೋಗಿದ್ದಾಳೆ. ಈ ವೇಳೆ, ಇಲ್ಲಿ ಬಹಿರ್ದೆಸೆಗೆ ಹೋಗುವುದರಿಂದ ದುರ್ನಾತ ಬರುತ್ತದೆಂದು ಆಕ್ಷೇಪ ವ್ಯಕ್ತಪಡಿಸಿದ ಭರಪ್ಪನೊಂದಿಗೆ ರೇಣವ್ವ ಮಾತಿಗಿಳಿದ್ದಾಳೆ ಎನ್ನಲಾಗಿದೆ.

 ಮಾತಿನ ಚಕಮಕಿ:

 ಈ ಸಂದರ್ಭದಲ್ಲಿ, ಮಾತು ವಿಕೋಪಕ್ಕೆ ತಿರುಗಿದಾಗ ಭರಮಪ್ಪ ಮತ್ತು ಆತನ ಮಗ ಹನುಮಂತ ಸೇರಿ ರೇಣವ್ವಳ ತಲೆಗೆ ಬಡಿಗೆಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಬಲವಾದ ಪೆಟ್ಟಿನಿಂದಾಗಿ ತೀವ್ರ ಅಸ್ವಸ್ಥಳಾದ ರೇಣವ್ವ ಇನ್ನೇನು ಆಸ್ಪತ್ರೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಅಸುನೀಗಿದ್ದಾಳೆ ಎನ್ನಲಾಗಿದೆ.    

 ಈ ಮಧ್ಯೆ, ಮೃತ ಮಹಿಳೆ ರೇಣವ್ವ ವಿಧವೆ. ಬಸವರಾಜ ಎಂಬ 18 ವರ್ಷದ ಮಗನಿದ್ದಾನೆ. ಮಹಿಳೆ ಸಾವನ್ನಪ್ಪಿದ ಸಂದರ್ಭದಲ್ಲಿ ಬಸವರಾಜ ಹೊಲಕ್ಕೆ ತೆರಳಿದ್ದ, ಮಗ ಬರುವಷ್ಟರಲ್ಲಿ ರೇಣವ್ವ ಕೊನೆಯುಸಿರೆಳೆದಿದ್ದಾಳೆ.

 ಕಾಮುಕರ ಕಾಟ:

 ಹೌದು, ಈ ಎಲ್ಲ ಘಟನೆಗಳ ಮೂಲ ಎಲ್ಲಿದೆ? ಇದೆಂಥ ಪ್ರಶ್ನೆ ಎನ್ನಬಹುದು. ಆದರೆ, ಜಾಗತೀಕರಣದ ನಾಗಾಲೋಟದ ಸಂದರ್ಭದಲ್ಲೂ ಎಷ್ಟೋ ಹಳ್ಳಿಗಳಲ್ಲಿ ಮಹಿಳೆಯರಿಗಾಗಿ ಶೌಚಾಲಯಗಳೇ ಇಲ್ಲ. ಬಯಲಲ್ಲಿ ಬಯಲಾಗಬೇಕೆಂದರೆ ಕಾಮುಕರ ಕಾಟ ಬೇರೆ. ಹೀಗಾಗಿ ಎಷ್ಟೋ ಮರ್ಯಾದಸ್ಥ ಹೆಣ್ಣು ಮಕ್ಕಳು ತಮ್ಮ ಹಿತ್ತಲುಗಳಲ್ಲೇ ಬಹಿರ್ದೆಸೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯನ್ನು ನಮ್ಮ ಉತ್ತರ ಕರ್ನಾಟಕದ ಎಷ್ಟೋ ಹಳ್ಳಿಗಳಲ್ಲಿ ಈಗಲೂ ಕಾಣುತ್ತೇವೆ.

 ನೂಲ್ವಿಯ ಪ್ರಕರಣವನ್ನೇ ನೋಡಿ, ನೈಸರ್ಗಿಕ ಕರೆಯ ಸಣ್ಣ ಕಾರಣಕ್ಕೆ ಜೀವ ತೆರಬೇಕಾಯಿತು. ಇದು ಇದೊಂದೇ ಗ್ರಾಮದ ಪರಿಸ್ಥಿತಿಯಲ್ಲ. ಬಹುತೇಕ ಹಳ್ಳಿಗಳಲ್ಲಿ ಇನ್ನೂ ಶೋಚನೀಯ ಸ್ಥಿತಿ ಇದೆ. ಎಷ್ಟೋ ಹೆಣ್ಣು ಮಕ್ಕಳು ಸಂಜೆಯಾಗುವುದನ್ನೇ ಕಾಯುತ್ತಿರುತ್ತಾರೆ. ವಯಸ್ಸಿಗೆ ಬಂದ ಹೆಣ್ಣುಮಕ್ಕಳು ತೀವ್ರ ಮುಜುಗರದಿಂದಾಗಿ ಹೇಳಿಕೊಳ್ಳಲಾಗದೇ ಅಸಹನೀಯ ಬದುಕನ್ನು ಸವೆಸುತ್ತಿದ್ದಾರೆ.

 ಹಣ ದುರುಪಯೋಗ:

 ಸರಕಾರ ಕೂಡಾ ಶೌಚಾಲಯಗಳ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯ್ತಿಗಳಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತದೆ. ಆದರೆ, ಎಷ್ಟೋ ಮಂದಿ ಇದರ ಸದುಪಯೋಗವನ್ನೇ ಪಡೆದುಕೊಳ್ಳುವುದಿಲ್ಲ. ನಿರ್ಮಾಣವಾದ ಯಾವುದೋ ಒಂದು ಶೌಚಾಲಯದ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಬರುವ ದುಡ್ಡನ್ನು ದುರುಪಯೋಗಪಡಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ.

 ಎಲ್ಲಿಹರು ಜನಪ್ರತಿನಿಧಿಗಳು:

 ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರಗೊಳ್ಳಬೇಕಾದರೆ, ಮೊದಲು ನಮ್ಮ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳು ಸಮಾಜದ ತೀರಾ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಎಲ್ಲರಿಗೂ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾಮ ಸ್ವರಾಜ್ಯ ಸಾಧಿಸುವ ನಿಟ್ಟಿನಲ್ಲಿ ಹಿಂದುಳಿದ ಹಳ್ಳಿಗಳು ಪ್ರಗತಿಪಥದತ್ತ ಸಾಗಬೇಕು. ಅಂದಾಗ ಅತುಲ್ಯ ಭಾರತದ ಘೋಷಣೆಗೆ ಒಂದು ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ , ಭ್ರಷ್ಟಾಚಾರದಲ್ಲಿ ತೊಡಗಿ ತಲೆಮರೆಸಿಕೊಂಡಿರುವ ಜನಪ್ರತಿನಿಧಿಗಳನ್ನು ಚಿತ್ತಹರಿಸಬೇಕಿದೆ. ಹಳ್ಳಿಗಳ ಉದ್ಧಾರದಿಂದ ದೇಶದ ಉದ್ಧಾರ ಎಂಬುದನ್ನು ಮನಗಾಣ ಬೇಕಿದೆ.

 **

ಅಲ್ಬೇ ನಿಂಗವ್ವ , ಮನ್ಯಾಗ ವಯಸ್ಸಿಗೆ ಬಂದ ಹೆಣ್ಮಕ್ಳು ಅದಾರ. ನಮ್ಮೂರಾಗ ನೋಡಿದ್ರ ಸಂಡಾಸ್ಕ ಹೋಗಾಕ ಬಯಲೇ ಗತಿ. ರಾತ್ರ್ಯಾದ್ರ ಉಡಾಳ ಹುಡುಗರ ಕಾಟ. ನಮಗ ಏನ್ ಮಾಡ್ಬೇಕಂತಾನ ಗೊತ್ತಾಗ್ವಲ್ತು. ಸರಕಾರ ಏನ್ರ ಒಂದ್ ಶೌಚಾಲಯ ಕಟ್ಸಿಕೊಟ್ರ ಈ ಸಮಸ್ಯೆ ಬಗಿಹರಿತೇತಿ ನೋಡ್. 

Comments

Submitted by kavinagaraj Thu, 02/14/2013 - 09:15

ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಈ ಸಮಸ್ಯೆ ಕಡಿಮೆಯಾಗಿದೆ. ಆದರೂ ಪ್ರಕೃತಿಯ ಕರೆಗೆ ಓಗೊಡುವುದಕ್ಕೆ ಸೂಕ್ತ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗಬೇಕಾದುದು ಅತ್ಯಗತ್ಯ. ಮನ ಕಲಕುವ ಪ್ರಸಂಗ ಪ್ರಸ್ತಾಪಿಸಿರುವಿರಿ. ಸರ್ಕಾರದ ಜೊತೆಗೆ ಜನರೂ ಕೈಗೂಡಿಸಬೇಕು.