ಮುಸುಕಿನ ಗುದ್ದು

ಮುಸುಕಿನ ಗುದ್ದು

 

    ಮನೆಗೆ ಬಂದಿದ್ದ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಅವಳು ಹೇಳುತ್ತಿದ್ದಳು: 'ಆ ಶ್ಯಾಮಲನ್ನ ನೋಡಿದರೆ ಖುಷಿಯಾಗುತ್ತೆ ಕಣೆ. ಯಾವಾಗಲೂ ನಗುನಗುತ್ತಾ ಇರ್ತಾಳೆ. ಮುಖ ಗಂಟು ಹಾಕಿಕೊಂಡು ಗುಮ್ ಅಂತ ಇರೋರನ್ನ ಕಂಡರೆ ಮೈ ಉರಿಯುತ್ತೆ'. ಪೇಪರ್ ಓದುತ್ತಾ ಕುಳಿತಿದ್ದ ಗಂಡನ ಕಡೆಗೆ ಕಿರುನೋಟ ಬೀರಿ ನೋಡುತ್ತಾ " ಹೀಗೆ ಹೇಳಿದಾಗ ಬೆಳಿಗ್ಗೆ ನಡೆದ ಮಾತಿನ ಚಕಮಕಿಂದ ಮುಖ ದಪ್ಪಗೆ ಮಾಡಿಕೊಂಡಿದ್ದ ಅವನ ಮುಖ ಇನ್ನೂ ದಪ್ಪಗಾಯಿತು.

     ಅದೇ ಸಮಯಕ್ಕೆ ಪಕ್ಕದ ಮನೆ ಗಿರಿಜಮ್ಮ ಬಂದವರು, "ಮನೆಗೆ ನೆಂಟರು ಬಂದಿದ್ದಾರೆ. ಹಾಲೆಲ್ಲಾ ಮುಗಿದಿದೆ. ಸಂಜೆ ತರಿಸಿಕೊಡ್ತೀನಿ. ಸ್ವಲ್ಪ ಹಾಲಿದ್ದರೆ ಕೊಡಿ" ಎಂದು ಹದಿನೈದೇ ನಿಮಿಷ ಮಾತನಾಡಿದ್ದರು. ಗಂಡ ಕೊಡಿಸಿದ್ದ ಹೊಸ ಬಂಗಾರದ ಬಳೆ ತೋರಿಸಿಹೋಗೋದು ಮುಖ್ಯ ಕಾರಣ ಆಗಿತ್ತು. ಹೋಗುವಾಗ ಅವಳಿಂದ ಹಾಲಿನ ಜೊತೆಗೆ "ನೀವು ಬಿಡ್ರೀ ಗಿರಿಜಮ್ಮ, ಪುಣ್ಯವಂತರು. ಹೇಳಿದ್ದನ್ನು ಕೇಳೋದಿರಲಿ, ಮನಸ್ಸಿನಲ್ಲಿರೋದನ್ನೂ ಅರ್ಥ ಮಾಡಿಕೊಳ್ಳೋ ಗಂಡನನ್ನು ಪಡೆದಿದ್ದೀರಿ" ಎಂಬ ಶಹಭಾಸಗಿರಿಯನ್ನೂ ತೆಗೆದುಕೊಂಡು ಹೋದರು. ಅವಳು ಮತ್ತೊಂದು ಕೊಂಕುನೋಟ ಗಂಡನೆಡೆಗೆ ಬೀರಿದ್ದಳು. ತಿಂಡಿ ಆದ ಮೇಲೆ ಕಾಫಿಗಾಗಿ ಕಾಯುತ್ತಲೇ ಇದ್ದ ಅವನ ದಪ್ಪ ಮುಖ ಈ ಮಾತಿನಿಂದ ಕೆಂಪಗೂ ಆಯಿತು. ಗೆಳತಿಯೊಡನೆ ಹರಟುತ್ತಾ ಪುರುಸೊತ್ತು ಮಾಡಿಕೊಂಡು ಕಾಫಿ ಮಾಡಿದ ಅವಳು ಗೆಳತಿಗೆ ಕೊಟ್ಟು, ಗಂಡನ ಮುಂದೆಯೂ ಒಂದು ಲೋಟ ಕುಕ್ಕಿ ಪಿಸುಗುಟ್ಟಿದ್ದಳು: "ಉರಾ ಉರಾ ಅಂತಿರಬೇಡಿ. ಬಂದವರ ಎದುರಿಗಾದರೂ ನಗುನಗುತ್ತಾ ಇರಿ." ಕಾಫಿ ಗಟಗಟ ಕುಡಿದು ಎದ್ದು ರೂಮಿಗೆ ಹೋದ ಅವನು ಕನ್ನಡಿಯಲ್ಲಿ ಮುಖ ನೋಡಿಕೊಂಡ. ಬಲವಂತದ ನಗೆ ನಕ್ಕ ಅವನ ಮುಖ ಅವನಿಗೇ ವಿಚಿತ್ರವಾಗಿ ಕಂಡಿತು.

-ಕ.ವೆಂ.ನಾಗರಾಜ್.

Comments

Submitted by venkatb83 Thu, 02/14/2013 - 17:21

In reply to by partha1059

;())))000 ಸ್ವಾಭಾವಿಕ -ಕೃತಕತೆಯ ಅರಿವು ನಮಗಿದೆ... ಇಂಥಾ ಸಂದರ್ಭಗಳಲ್ಲಿ ತೋರಿಕೆಯ ಆದರ ಪ್ರೀತಿ ನಟನೆ ಕಷ್ಟ...! ಅನ್ಸುತೆ ನಮಗಿನ್ನು ಆ ಅನುಭವ ಆಗಿಲ್ಲ ಆಗೋದು ಬೇಡ ಬಿಡಿ...! ಶುಭವಾಗಲಿ.. \।