ಎ ಸೂಟಬಲ್ ಬಾಯ್
ನಿಮ್ಮ ಓದಿನ ಹಸಿವು ದೊಡ್ಡದಾಗಿಲ್ಲ ಎಂದು ಗೊತ್ತಿದ್ದೂ ಗೊತ್ತಿದ್ದೂ, ೧೪೭೪ ಪುಟಗಳುಳ್ಳ ಸುದೀರ್ಘ ಇಂಗ್ಲಿಷ್ ಕಾದಂಬರಿಯೊಂದನ್ನು ಓದಲು ಆರಿಸಿಕೊಂಡಿರಾದರೆ, ನೀವು ಖಂಡಿತವಾಗಿ ನರಕಯಾತನೆಗೆ ತಯಾರಾಗಿರಲೇಬೇಕು. ಎರಡು ತಿಂಗಳ ಕಾಲ, ಉಬ್ಬರ-ಇಳಿತಗಳ ಕಥಾ ಹಂದರದ ಜಾಡಿನಲ್ಲಿ ಬಿದ್ದು ಒದ್ದಾಡಿದ ಮೇಲೆ, ಇಂಥ ಒಳ್ಳೆಯ ಪುಸ್ತಕವನ್ನು ಈ ಹಿಂದೆಯೇ ಓದದ ತಪ್ಪಿಗಾಗಿಯೇ ಎರಡು ತಿಂಗಳ ಈ ಓದಿನ ಶಿಕ್ಷೆಯನ್ನು ಅನುಭವಿಸಬೇಕಾಯ್ತು ಎಂದು ನಿಮಗೆ ಅನ್ನಿಸಿದರೆ, ಆ ಕಾದಂಬರಿಗಾಗಿ ಅನುಭವಿಸಿದ ಕಷ್ಟ ಸಾರ್ಥಕವಾಯ್ತು ಎಂದು ನಿಮಗೆ ಗೊತ್ತಾಗುತ್ತದೆ. ನನಗೆ ಇಂಥ ಅನುಭವ ತಂದುಕೊಟ್ಟ ಇಂಗ್ಲಿಷ್ ಕಾದಂಬರಿ ಬಹು ಚರ್ಚಿತ, ವಿಮರ್ಶಕರಿಂದ ಸೈ ಎನಿಸಿಕೊಂಡ "ಎ ಸೂಟಬಲ್ ಬಾಯ್" (೧೯೯೩, ಫೀನಿಕ್ಸ್ ಹೌಸ್, ಯುಕೆ). ಅದರ ಕರ್ತೃ ವಿಕ್ರಂ ಸೇಥ್ (೧೯೫೨-).
೨೦೧೨ ರ ನವೆಂಬರ್ ತಿಂಗಳಿನಲ್ಲಿ ಮೋಡದಿಂದ ಕೂಡಿದ ವಾತಾವರಣವಿದ್ದ ದಿನವೊಂದರಂದು ಆ ಕಾದಂಬರಿಯ ಸಾಧಾರಣ ಆವೃತ್ತಿಯನ್ನು (೧೯೯೪, ತೃತೀಯ ಮರುಮುದ್ರಣ) ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಿಂದ ಕೊಳ್ಳಲು ಪ್ರೇರೇಪಿಸಿದ್ದು ಕಾದಂಬರಿಯ ಕಥಾವಸ್ತುವಿನ ಕಾಲ. ನನ್ನಲ್ಲಿ ಇಷ್ಟು ಸುಪ್ರಸಿದ್ಧವಾದ ಕಾದಂಬರಿಯು ಜವಾಹರ ಲಾಲ್ ನೆಹ್ರೂ ಅವರ ಕಾಲದ ಭಾರತ ದೇಶವನ್ನು (೧೯೫೦ ರ ದಶಕ) ಹೇಗೆ ಚಿತ್ರಿಸಿರಬಹುದು ಎಂಬ ಕುತೂಹಲವಿತ್ತು. ಆ ಕಾಲದ ಭಾರತದ ಬಗ್ಗೆ ನನ್ನ ತಲೆಮಾರಿನ ಬಹುತೇಕರು ತುಂಬಾ ಕೇಳಿದ್ದರೂ, ಅದನ್ನು ಇತಿಹಾಸದ ಪುಸ್ತಕಗಳ ನಿಜಾಂಶಗಳಿಂದ ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. ಇತಿಹಾಸದ ಪುಟಗಳಲ್ಲಿ ಜನ ಸಾಮಾನ್ಯರ ಕಥೆಗಳಿಗೆ ಜಾಗವಿರುವುದಿಲ್ಲ. ಅದನ್ನು ನಾವು ಕಾದಂಬರಿಗಳಲ್ಲೇ ಹುಡುಕಬೇಕು. ಕಾದಂಬರಿಕಾರರು, ಕಥೆಗಾರರು ಕಟ್ಟಿಕೊಡುವ ಇತಿಹಾಸಕ್ಕೆ ಚ್ಯುತಿ ತಾರದಂಥ ಕಲ್ಪಿತ ಕಥೆಗಳು ಇತಿಹಾಸದ ಪೂರ್ಣಾನುಭವವನ್ನು ತಂದುಕೊಳ್ಳಲು ಅನುವು ಮಾಡಿಕೊಡುತ್ತವೆ. ವಿಕ್ರಂ ಸೇಥ್ ಅವರ "ಎ ಸೂಟಬಲ್ ಬಾಯ್" ಕಾದಂಬರಿಯೂ ಇಂಥ ಕೆಲಸ ಮಾಡುತ್ತದೆ. ಈ ಕಾದಂಬರಿಯ ಇತಿಹಾಸ ಮತ್ತು ಕಾಲ ಪ್ರಜ್ಞೆ ಅತ್ಯುತ್ತಮವಾಗಿರುವ ಜೊತೆಗೆ ನನ್ನನ್ನು ಸೆಳೆದ ಮುಖ್ಯವಾದ ಇನ್ನೊಂದು ಅಂಶ ಕಥೆಯ ಭೌಗೋಳಿಕ ಹರವು. ಕಾದಂಬರಿಯ ಹಿಂಬದಿಯ ರಕ್ಷಾ ಪುಟದ ಮೇಲೆ "ಇದೊಂದು ಪ್ರೇಮ ಕಥೆ...ಆ ಕಥೆಯೊಂದಿಗೆ ಆಗ ತಾನೇ ಸ್ವಾತಂತ್ರ್ಯ ಪಡೆದಿದ್ದ ದೇಶವು ತನ್ನ ಮೊದಲ ಲೋಕಸಭಾ ಚುನಾವಣೆಯನ್ನು ಎದುರಿಸುವ ಕಥೆಯೂ ಹೊಸೆದುಕೊಂಡಿದೆ", ಎಂಬ ಪರಿಚಯ ಮಾಡಲಾಗಿದೆ. ಪ್ರೇಮದ ಎಳೆ ಇಡೀ ಕಾದಂಬರಿಯನ್ನು ವ್ಯಾಪಿಸಿಕೊಂಡಿರುವ ಮುಖ್ಯ ಬಂಧವಾಗಿದ್ದರೂ, ನನ್ನ ಪ್ರಕಾರ ಕಾದಂಬರಿಯನ್ನು ನಿಜವಾಗಿ ಬಂಧಿಸುವ ಎಳೆಯಾಗಿರುವುದು ಉತ್ತರ ಭಾರತದ ಜೀವನದಿ ಗಂಗಾ. ನಾನು ಗಂಗಾ ನದಿ ಎಂದಾಗ ನೀವು ಗಂಗೆಯನ್ನು ಅವಳ ಎಲ್ಲಾ ಉಪನದಿಗಳನ್ನೂ ಒಳಗೊಂಡ (ಗಂಗಾ- ಯಮುನಾ ನದೀ ಪಾತ್ರಗಳು) ಭಾರತೀಯ ನಾಗರಿಕತೆಯ ತೊಟ್ಟಿಲು ತೂಗುವ ತಾಯಿಯಂತೆ ಕಲ್ಪಿಸಿಕೊಳ್ಳಬೇಕು. ಗಂಗಾ-ಯಮುನಾ ಸಂಗಮದ ಸಂಸ್ಕೃತಿಯ, ಭಾರತದ ಸಂವಿಧಾನ ಕಲ್ಪಿಸುವ ಸಮಾನತೆಯ ಚಿತ್ರ ಮೂಡಬೇಕು.
" ಎ ಸೂಟಬಲ್ ಬಾಯ್" ಕಾದಂಬರಿಯ ಕಥೆ ಒಂದು ನದಿಯ ಕಥೆ, ಆ ನದಿಗೆ ಅಂಟಿಕೊಂಡ ಜನರ ಕಥೆ. ಆ ಜನ ನಗರ ವಾಸಿಗಳಾದ ಕಾರಣ ನದಿಯನ್ನು ನೇರವಾಗಿ ತಮ್ಮ ಜೀವನಕ್ಕಾಗಿ ಅವಲಂಬಿಸಿಲ್ಲ. ಆದರೆ ಅವರ ಜೀವನದ ಭೌಗೋಳಿಕ ಹರವು ಆ ನದಿಗುಂಟ ಹರಡಿಕೊಂಡಿದೆ. ಆ ನದಿಗೂ ಆ ಜನಕ್ಕೂ ಇರುವ ವ್ಯತ್ಯಾಸ ಒಂದೇ. ನದಿಯು ಎತ್ತರದ ಪರ್ವತಗಳಲ್ಲಿ ಹುಟ್ಟಿ ತಗ್ಗಿನ ಕಡೆಗೆ ಹರಿದು ಕೊನೆಗೆ ಸಮುದ್ರವನ್ನು ಸೇರುತ್ತದೆ. ಆ ಜನರ ಬದುಕನ್ನು ನದಿಯ ನಿಶ್ಚಿತ ಹರಿವಿನ ಪಾತ್ರದಂತೆ ಊಹಿಸಲು ಬರುವುದಿಲ್ಲ. ಆ ಜನರ ಪಾತ್ರಗಳು ತಮ್ಮ ದೇಶದ ಏರಿಳಿತಗಳ ಅನಿಶ್ಚಿತತೆಯ ಜೊತೆಗೇ ಮುಂದೇನಾಗುತ್ತದೆಂದು ಎಣಿಸಲಾಗದಂತೆ ಬೆಳೆಯುತ್ತವೆ. ನದಿಯನ್ನೊಳಗೊಂಡ ಕೆಲವು ಹೃದಯಸ್ಪರ್ಶಿ ಸನ್ನಿವೇಶಗಳು ಕಾದಂಬರಿಯಲ್ಲಿವೆಯಾದರೂ ಗಂಗಾ ನದಿಯು ಕಾದಂಬರಿಯಲ್ಲಿ ನೇರವಾಗಿ ಕಾಣಿಸಿಕೊಳ್ಳುವುದು ಕೆಲವೇ ಬಾರಿ. ಕಾದಂಬರಿಯನ್ನೋದುವಾಗ ನಿಮಗೆ ಅದರ ಅಗತ್ಯ ಕಾಣುವುದಿಲ್ಲ. ನಿಮ್ಮ ಒಳ-ಆಳದ ಮನಸ್ಸಿನಲ್ಲಿ ಅದು ತಾನೇ ಜಾಗೃತವಾಗಿರುತ್ತದೆ. ಕಥೆಯ ಮುಖ್ಯವಾದ ಸ್ಥಳ ಬ್ರಹ್ಮ ಪುರ. ಈ ನಗರ ವಿಕ್ರಂ ಸೇಥ್ ರ ಕಲ್ಪನೆಯ ನಗರ. ಅದು ನಿಜವಾಗಿಯೂ ಭಾರತದಲ್ಲಿದ್ದಿದ್ದರೆ ಅದನ್ನು ನೀವು ಉತ್ತರ ಪ್ರದೇಶ ರಾಜ್ಯದ ಕಾನ್ಪುರ ಮತ್ತು ಬಿಹಾರದ ಪಾಟ್ನಾ ನಗರಗಳ ನಡುದಾರಿಯಲ್ಲಿ ಗಂಗಾ ನದಿಯ ತೀರದಲ್ಲಿ ಇರಬಹುದಾದ ಸಾಮಾನ್ಯ ಪಟ್ಟಣವೆಂದು ಊಹಿಸಿಕೊಳ್ಳಬಹುದು. ಕಾದಂಬರಿಯಲ್ಲಿ ಪ್ರಸ್ತಾಪಿಸಲ್ಪಡುವ ಇತರ ಪ್ರಮುಖ ನಿಜವಾದ ಸ್ಥಳಗಳೆಳ್ಳವೂ (ಉದಾ: ದೆಹಲಿ, ಕಾನ್ಪುರ, ಕಲ್ಕತ್ತಾ) ಗಂಗಾ ನದೀ ಪಾತ್ರದಲ್ಲಿಯೇ ಇರುವ ನಗರಗಳಾಗಿರುವುದು ಗಮನಾರ್ಹ. ಕಾದಂಬರಿಯ ಪಾತ್ರಗಳ ಮನುಷ್ಯ ಸಹಜ ಬೆಳವಣಿಗೆಗಳು ಓದುಗನನ್ನು ಕುರ್ಚಿಯಂಚಿನಲ್ಲಿ ಬಿಗಿಯಾಗಿ ಕುಳಿತುಕೊಳ್ಳುವಂತೆ ಮಾಡುವಾಗ ಕೆಲವರಿಗೆ ಭಾರತೀಯ (ಅದರಲ್ಲೂ ಬಾಲಿವುಡ್) ಸಿನೆಮಾ ಕಥೆಗಳಲ್ಲಿ ಕಂಡುಬರುವ ಅತಿ-ನಾಟಕೀಯ ಪಾತ್ರ ಪೋಷಣೆಯ ನೆನಪು ಬರಬಹುದು. ೧೯೫೦ ರ ದಶಕದ ಭಾರತೀಯ ಸಮಾಜ ಇಂದಿನ ಜನತೆಯಂತೆ ಸಿನೆಮಾ ಪ್ರಭಾವಕ್ಕೆ ಒಳಗಾಗಿರಲಾರದು. ಆದರೆ, ವಿಕ್ರಂ ಸೇಥ್ ಈ ಕಾದಂಬರಿ ಬರೆದಾಗ (೧೯೯೩) ಅವರು ನಾಲ್ಕೈದು ದಶಕಗಳ ಹಿಂದಿ ಚಲನ ಚಿತ್ರ ಪರಂಪರೆಯ ಪ್ರಭಾವಕ್ಕೊಳಪಟ್ಟಿದ್ದರೆಂದು ಹೇಳಬಹುದು. ವಿಕ್ರಂ ಸೇಥ್ ತಮ್ಮ ಕಥೆಯಲ್ಲಿ ಬರುವ ಅತಿ ಸೂಕ್ಷ್ಮ ರಾಜಕೀಯ ಸನ್ನಿವೇಶಗಳನ್ನು ನಿಭಾಯಿಸುವ ರೀತಿ ಮೆಚ್ಚುವಂಥದ್ದು. ಕಾದಂಬರಿಯನ್ನು ನೀವು ಓದಲೇ ಬೇಕು.
ಜವಾಹರ್ ಲಾಲ್ ನೆಹ್ರೂ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದ ಕಾಲದ ಕಥಾವಸ್ತುವುಳ್ಳ ಈ ಕಾದಂಬರಿಯಲ್ಲಿ ನೆಹ್ರೂ ತಮ್ಮ ನಿಜ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ನಾನು ಈ ಮೊದಲು ಕಾದಂಬರಿಯ ಕಾಲದ ಬಗ್ಗೆ ಬರೆಯುತ್ತಾ "ನೆಹ್ರೂ ಅವರ ಭಾರತ" ಎಂಬ ಪದ-ಪುಂಜವನ್ನು ಬಳಸಿದ್ದೆ. ವಿಕ್ರಂ ಸೇಥ್ ನೆಹ್ರೂ ನಂತರದ ನಾಲ್ವತ್ತು ವರ್ಷಗಳ ಭಾರತದ ತಮ್ಮ ಅರಿವನ್ನು ವ್ಯರ್ಥವಾಗಲು ಬಿಟ್ಟಿಲ್ಲ. ಆ ಕಾರಣದಿಂದಲೇ "ಎ ಸೂಟಬಲ್ ಬಾಯ್" ಇಂದಿಗೂ ಪ್ರಸ್ತುತ. ಈ ಕಾದಂಬರಿಯ ಆಶಯ "ಪ್ರೇಮ"ವೇ ಆದರೂ, ಆ ಪಾತ್ರಗಳ ನೈಜ ಚಿತ್ರಣ ನಿಮ್ಮ ಮನಸ್ಸಿನ ಕದ ತಟ್ಟುತ್ತದಾದರೂ, ಕಾದಂಬರಿಯನ್ನು ಓದಿ ಮುಗಿಸಿದ ಮೇಲೆ ನಿಮ್ಮನ್ನು ಕಾಡುವ ಪ್ರಶ್ನೆ "೧೯೫೨ ರ ಭಾರತ ನೆಹ್ರೂ ಅವರ ಭಾರತದ ಕಲ್ಪನೆಗೆ ತಯಾರಾಗಿತ್ತೇ?....೬೦ ವರ್ಷಗಳಾದ ಮೇಲೆ ಆ ಕಲ್ಪನೆ ಏನಾಗಿದೆ?".
Comments
ಕಣ್ಠೀರವ (ಕಂಠೀರವ?) ಅವರೆ,
ಕಣ್ಠೀರವ (ಕಂಠೀರವ?) ಅವರೆ,
ನಿಮ್ಮ ವಿಶ್ಲೇಷಣೆಯನ್ನು ಓದುತ್ತಿರುವಂತೆ ಅದು ಆ ಸೂಟಬಲ್ ಬಾಯ್ ಪುಸ್ತಕವನ್ನು ಖಂಡಿತವಾಗಿಯೂ ಓದಲೇ ಬೇಕೆಂದು ಪ್ರೇರೇಪಿಸುತ್ತದೆ. ಆದರೆ ಇಲ್ಲಿ ಎಲ್ಲಿಯೂ ತಾವು ಪುಸ್ತಕದ ಶೀರ್ಷಿಕೆಗೂ ಅದರ ಕಥಾ ಹಂದರಕ್ಕೂ ಇರುವ ಸಂಭಂದವನ್ನು ಎಲ್ಲಿಯೂ ಚರ್ಚಿಸಿಲ್ಲ. ಅದನ್ನೂ ಒಳಗೊಂಡಿದ್ದರೆ ನಿಮ್ಮ ವಿಶ್ಲೇಷಣೆ ಇನ್ನೂ ಚೆನ್ನಾಗಿರುತ್ತಿತ್ತೆಂದು ನನ್ನ ಅಂಬೋಣ.
In reply to ಕಣ್ಠೀರವ (ಕಂಠೀರವ?) ಅವರೆ, by makara
ನಿಮ್ಮ ಮಾತು ನಿಜ. ಕಾದಂಬರಿಯ ತಲೆ
ನಿಮ್ಮ ಮಾತು ನಿಜ. ಕಾದಂಬರಿಯ ತಲೆ-ಬರಹಕ್ಕೂ ಹಣೆ-ಬರಹಕ್ಕೂ ಇರುವ ಸಂಬಂಧದ ಬಗ್ಗೆ ಎರಡು ಸಾಲು ಬರೆಯ ಬೇಕಿತ್ತು. "ಎ ಸೂಟಬಲ್ ಬಾಯ್" ಕಾದಂಬರಿಯದು ಪ್ರೇಮ ಕಥೆ ಎಂದು ಈಗಾಗಲೇ ಹೇಳಿದ್ದೇನೆ. ಮುಖ್ಯ ಹೆಣ್ಣು ಪಾತ್ರವೊಂದಕ್ಕೆ ತಕ್ಕ ವರನನ್ನು ಹುಡುಕುವ ಅವಳ ತಾಯಿ (ವಿಧವೆ) ಕಥೆಯ ಮೂಲಾಧಾರ. ಆದರೆ ಪ್ರೇಮ ಆ ಮದುವೆಯಾಗದ ಹುಡುಗಿಗಷ್ಟೇ ಸೀಮಿತವಾಗಿಲ್ಲ. ಕಾದಂಬರಿಯುದ್ದಕ್ಕೂ ಮದುವೆಯಾದ ನಂತರದ ಅನೇಕ ಹಂತಗಳಲ್ಲಿರುವ ಅನೇಕ ಜೋಡಿಗಳ ನಡುವಿನ ಪ್ರೇಮದ ವಿವಿಧ ಮಜಲುಗಳು ತೆರೆದುಕೊಳ್ಳುತ್ತವೆ. ಆ ತಾಯಿಯು ತನ್ನ (ಎರಡನೆಯ) ಮಗಳಿಗಾಗಿ ವರನನ್ನು ಶೋಧಿಸುವಲ್ಲಿ ಯಶಸ್ವಿಯಾಗುತ್ತೆಳೆಯೇ? ಆ ಹುಡುಗಿಯ ಮನಸ್ಸು ಯಾರನ್ನು ಅರಸುತ್ತದೆ...ಯಾರನ್ನು ಆರಿಸಿಕೊಳ್ಳುತ್ತದೆ? ಇವೆಲ್ಲಾ ಪ್ರಶ್ನೆಗಳಿಗೂ ನಿಮಗೆ ಉತ್ತರ ಸಿಗುತ್ತದೆ.
ಖ0ಡಿತವಾಗಿ ಓದುವೆ..
ಖ0ಡಿತವಾಗಿ ಓದುವೆ..
ವಿಮರ್ಷೆ ಸಖತ್..
ನನಗೋ ನಮ್ಮ ದೇಶದ ಇತಿಹಾಸವನ್ನು ಬರೆದ ಬಗೆ ಓದುವ ಆಶ್ಹೆ..
ಮಾಹಿತಿಗೆ ನನ್ನಿ
ಶ್ಹುಭವಾಗಲಿ
\|
ನಿಮ್ಮ ವಿಮರ್ಶೆ ತುಂಬ ಚೆನ್ನಾಗಿದೆ
ನಿಮ್ಮ ವಿಮರ್ಶೆ ತುಂಬ ಚೆನ್ನಾಗಿದೆ. ಸಾಹಿತ್ಯ ಕೃತಿ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಬಗೆ ಸೋಜಿಗದ್ದು. ೧೯ನೇ ಶತಮಾನದ ಕೊನೆ ಭಾಗದ ಮಲೆನಾಡಿನ ಜನಜೀವನದ ಸಾಮಾಜಿಕ,ಆರ್ಥಿಕ, ರಾಜಕೀಯ ಸ್ಥಿತ್ಯಂತರ,ಪಲ್ಲಟಗಳು ಕುವೆಂಪುರವರ "ಮಲೆಗಳಲ್ಲಿ ಮದುಮಗಳು" ಕಾದಂಬರಿಯಲ್ಲಿ ಬಿಂಬಿತವಾಗಿದೆ. ಅಂತೆಯೇ ಹೆಚ್ ನಾಗವೇಣಿಯವರ "ಗಾಂಧಿ ಬಂದ" ಕೃತಿಯಲ್ಲಿ ಗಾಂಧಿ ಚಳುವಳಿಯ ಪ್ರಭಾವ ಕನ್ನಡ ಜಿಲ್ಲೆಯ ಜನಜೀವನದ ಮೇಲೆ ಮಾಡಿದ ಪರಿಣಾಮ ಚಿತ್ರಿತವಾಗಿದೆ.
ಕಾರಂತರ "ನಾವು ಕಟ್ಟಿದ ಸ್ವರ್ಗ" ಕಾದಂಬರಿಯಲ್ಲಿ ನೆಹರು ಪ್ರಣೀತ ರಾಜಕೀಯ ವ್ಯವಸ್ಥೆಯ ಕಟು ವಿಡಂಬನೆಯಿದೆ. ನಾನು ಓದಿದ ಪುಸ್ತಕಗಳಲ್ಲಿ ನೆಹರು ಭಾರತದ ಸಮಗ್ರ ಐತಿಹಾಸಿಕ ವಿವರಣೆಯಿರುವುದು ರಾಮಚಂದ್ರ ಗುಹರವರ "India After Gandhi" ಪುಸ್ತಕದಲ್ಲಿ.
ನಿಮ್ಮ ಸೊಗಸಾದ ವಿಮರ್ಶೆ "ಎ ಸೂಟಬಲ್ ಬಾಯ್" ಓದಲು ಪ್ರೇರೇಪಿಸಿದೆ.
In reply to ನಿಮ್ಮ ವಿಮರ್ಶೆ ತುಂಬ ಚೆನ್ನಾಗಿದೆ by ರಾಮಕುಮಾರ್
ನಾನು ಗುಹಾರ "ಇಂಡಿಯಾ ಆಫ್ಟರ್
ನಾನು ಗುಹಾರ "ಇಂಡಿಯಾ ಆಫ್ಟರ್ ಗಾಂಧಿ" ಬಗ್ಗೆ ಕೇಳಿದ್ದೆ, ಆದರೆ ಓದಿಲ್ಲ. 'ದಿ ಹಿಂದೂ' ದಿನ ಪತ್ರಿಕೆ ಹೊರತಂದಿದ್ದ "ಮಹಾತ್ಮ ಗಾಂಧಿ, ದ ಲಾಸ್ಟ್ ೨೦೦ ಡೇಸ್" ಓದಿದ್ದೆ. ತಾರ್ಕಿಕವಾಗಿ "ಇಂಡಿಯಾ ಆಫ್ಟರ್ ಗಾಂಧಿ" ಅದರ ಮುಂದುವರಿದ ಭಾಗ. ಓದಬೇಕಾದ ಪುಸ್ತಕ. ಧನ್ಯವಾದ ರಾಮಕುಮಾರ್. ಬೆಂಗಳೂರಿನ ವಿವಿಧಭಾರತಿ ಆಕಾಶವಾಣಿ ಕೇಂದ್ರವು ಪ್ರಸಾರ ಮಾಡಿದ್ದ ನಿರಂಜನರ "ಚಿರಸ್ಮರಣೆ" ಯೂ ನೀವು ಪಟ್ಟಿ ಮಾಡಿರುವ ಪುಸ್ತಕಗಳ ಸಾಲಿಗೆ ಸೇರುತ್ತದೆ.