ದುರ್ಗಾಸ್ತಮಾನ

ದುರ್ಗಾಸ್ತಮಾನ

ಪುಸ್ತಕದ ಲೇಖಕ/ಕವಿಯ ಹೆಸರು
ತ.ರಾ.ಸು.
ಪ್ರಕಾಶಕರು
ಹೇಮಂತ ಸಾಹಿತ್ಯ ಪ್ರಕಾಶನ
ಪುಸ್ತಕದ ಬೆಲೆ
350

ಚಿತ್ರದುರ್ಗ ಎಂದಾಕ್ಷಣ ನೆನಪಿಸಿಕೊಳ್ಳುವುದು, ಗಂಡೆದೆಯ ಭಂಟ ವೀರ ಮದಕರಿ ನಾಯಕ. ತ.ರಾ.ಸು ಅವರ ಕಾದಂಬರಿ -ದುರ್ಗಾಸ್ತಮಾನದಲ್ಲಿ ಈತನ ಐತಿಹಾಸಿಕ ದಾಖಲೆಯನ್ನು ಕಣ್ಣ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಂತಿದೆ. ಈ ಕಾದಂಬರಿಯ ಆದಿಯಿಂದ ಅಂತ್ಯದವರೆಗಿನ ಸರಳ ಭಾಷಾ ಶೈಲಿಯು ಓದುಗನನ್ನು ಎಲ್ಲಿಯೂ ನೀರಸವಾಗುವಂತೆ ಮಾಡದೆ ಸರಾಗವಾಗಿ ಓದಿಸಿಕೊಂಡೇ ಹೋಗುತ್ತದೆ. ಮುಖ್ಯವಾಗಿ ನಾಯಕನಲ್ಲಿನ ದೊರೆಯ ಲಕ್ಷಣಗಳ ಜೊತೆಗೆ ಅವನಲ್ಲಿರುವ ಮನುಷ್ಯತ್ವವೂ ಹೊರ ಹೊಮ್ಮುತ್ತದೆ. ಇದೇ ಗುಣ ದುರ್ಗದಲ್ಲಿನ ಜನರಲ್ಲಿದ್ದು, ಧರ್ಮದ ಹಿನ್ನಲೆಯಲ್ಲಿ ನ್ಯಾಯ, ನಿಷ್ಟೆ, ನೀತಿಗಳನ್ನು ಮರೆತ     ಜನರಿಂದಲೇ ದುರ್ಗದ ಅಂತ್ಯವಾದುದ್ದು, ದುರ್ಗದ ದೌರ್ಭಾಗ್ಯವೇ ಸರಿ.  ವೀರಾವೇಶ ಗುಣಗಳನ್ನು ಹೊಂದಿದ್ದ ಮದಕರಿನಾಯಕನನ್ನು ಸೆರೆಯಾಗಿಸದೇ ವೀರಾವೇಶದಿಂದ ಹೋರಾಡಿ ಮರಣ ಹೊಂದುವಂತೆ ಮಾಡಿರುವುದು ಪಾತ್ರಕ್ಕೆ ಶೋಭಾಯಮಾನವಾಗಿದೆ. ಪ್ರತಿಯೊಂದು ಪಾತ್ರದಲ್ಲಿನ ಮನೋಭಿಲಾಷೆಯನ್ನು ಓದುಗನ ಮನಕ್ಕೆ ನಾಟುವಂತೆ ಚಿತ್ರಿಸಿದ್ದಾರೆ. ಮದಕರಿ ನಾಯಕನ ಕೊನೆಯ ದಿನಗಳು ಅಥವಾ ದುರ್ಗದ ಜನತೆಯ ಕೊನೆಯ ದಿನಗಳನ್ನು ದುರ್ಗಾಸ್ತಮಾನದಲ್ಲಿ ಅತ್ಯದ್ಭುತವಾಗಿ ಚಿತ್ರಿಸಲಾಗಿದೆ.  
 
ದುರ್ಗಾಸ್ತಮಾನ ಓದುವುದು ತುಂಬಾ ಸಂತೋಷದಾಯಕವಾದ, ಅಷ್ಟೇ ಫಲಪ್ರದ ಅನುಭವ. ಕಾರಣವೆಂದರೆ ಅಂತಃಕರಣ, ಬುದ್ಧಿಶಕ್ತಿಗಳೆರಡೂ ಸದಾ ಎಚ್ಚರಿಕೆಯಿಂದಿರುವಂತೆ ಮಾಡುತ್ತದೆ.  ಅಂತಃಕರಣಕ್ಕೆ ರೋಮಾಂಚನವಾಗುವ ಅನುಭವಗಳೊಂದಿಗೆ ಅತ್ಯಂತ ಸೂಕ್ಷ್ಮ ರಾಜಕಾರಣದ ಬೌದ್ಧಿಕ ಸಮಸ್ಯೆಗಳು ವ್ಯಕ್ತಿ-ಸಮಷ್ಟಿ ಜೀವನಗಳು ಹಾಸುಹೊಕ್ಕಾಗಿ ಹೆಣೆದುಕೊಳ್ಳುವಾಗ ಉದ್ಭವಿಸುವ ಧರ್ಮಸೂಕ್ಷ್ಮಗಳು ಎಲ್ಲ ಸೇರಿ ಇದನ್ನೊಂದು ಅಪೂರ್ವ ಕೃತಿಯನ್ನಾಗಿ ಮಾಡಿವೆ. ಇದು ಶ್ರೇಷ್ಠ ಕಾದಂಬರಿ ಅಷ್ಟೇ ಅಲ್ಲ, ಕನ್ನಡದ ಒಂದು ಶ್ರೇಷ್ಠ ಪುಸ್ತಕವೂ ಹೌದು. ಈ ಐತಿಹಾಸಿಕ ಕಾದಂಬರಿಯಲ್ಲಿ ತರಾಸು ತೋರಿರುವ ರಾಜಕೀಯ ವ್ಯವಹಾರಗಳ ಕುಶಲತೆ ತುಂಬ ಅಪರೂಪವಾದದ್ದು. ಕಾವ್ಯಮಯ ಭಾಷೆಯಲ್ಲಿ ಬದುಕಿನ ವಾಸ್ತವಿಕತೆಗಳನ್ನು ಪರಿಣಾಮಕಾರಿಯಾಗಿ ಕಡೆದು ನಿಲ್ಲಿಸುವ ಶಕ್ತಿ ತರಾಸು ಅವರಲ್ಲಿ ಅದ್ವಿತೀಯವಾದುದು. ತಮ್ಮ ಅನಾರೋಗ್ಯದ ತೀವ್ರ ಪರಿಸ್ಥಿತಿಯಲ್ಲಿ ಇಂಥದೊಂದು ಕಾದಂಬರಿಯನ್ನು ಬರೆದು ತರಾಸು ಒಂದು ಪವಾಡವನ್ನು ತೋರಿದ್ದಾರೆ ಎಂದೇ ಹೇಳಬಹುದು.

ಕಾದಂಬರಿಯ ಮುನ್ನುಡಿಯಲ್ಲೇ ತ.ರಾ.ಸು. ಬರೆದಿರುವ "ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ, ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು - ಮದಕರಿನಾಯಕನೆಂದರೂ ಅಷ್ಟೆ ಇತಿಹಾಸದ ಇದ್ದುಹೋದ ಒಬ್ಬ ಅರಸನಲ್ಲ, ತಮ್ಮ ಜೀವಂತ ಆಪ್ತನೆಂಟ. ಹಾಗೆಯೇ ಚಿತ್ರದುರ್ಗ - ಮದಕರಿನಾಯಕ ಎನ್ನುವುದು ಬೇರೆ ಬೇರೆಯಲ್ಲ, ಒಂದೇ ಎಂಬ ಅವಿನಾಭಾವ; ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ " ಎಂಬ ಮಾತುಗಳು ಅತ್ಯಂತ ಪ್ರಭಾವೀ ವಾಕ್ಯಗಳಾಗಿ, ನಾವು ಪುಸ್ತಕ ಓದಲು ತೊಡಗುವ ಮೊದಲೇ ನಮ್ಮ ಮನಸ್ಸನ್ನು ದುರ್ಗ-ಮದಕರಿ ಎಂಬ ಮೋಡಿಯಲ್ಲಿ ಸಿಲುಕಿಸುತ್ತದೆ. ನಾಯಕ ವಂಶದಲ್ಲಿ ಹಲವಾರು ಮದಕರಿನಾಯಕರು ಅಳಿದಿದ್ದರೂ ಚಿತ್ರದುರ್ಗದ  ಜನತೆ ಮದಕರಿ ನಾಯಕ ಎಂದ ಕೂಡಲೇ ನೆನಪಿಸಿಕೊಳ್ಳುವುದು ಈ ಚಿಕ್ಕಮದಕರಿನಾಯಕನನ್ನೇ. ಅದಕ್ಕೆ ಕಾರಣ ಆತನ ಜೀವನದ ದುರಂತ ಮತ್ತು ಆತನ ಶೌರ್ಯ, ಸಾಹಸ, ಕ್ರೌರ್ಯ, ಕಾಮಲೋಲುಪತೆಯ ಬಗ್ಗೆ ಜನಜನಿತವಾಗಿರುವ ಹಲವಾರು ದಂತಕತೆಗಳು, ನಾಡಹಾಡುಗಳು.

ದುರ್ಗಾಸ್ತಮಾನ ತ.ರಾ.ಸು ಅವರ ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಕನಸಾಗಿತ್ತು. ಈ ನಾಯಕ ವಂಶದ ಬಗ್ಗೆ ಉಪಲಬ್ಧವಿದ್ದ ಎಲ್ಲಾ ದಾಖಲೆಗಳನ್ನೂ ಸಂಗ್ರಹ ಮಾಡಿ ಸತತವಾಗಿ ಅಧ್ಯಯನ ಮಾಡಿದ ಬಳಿಕ  ಸಂಗ್ರಹಕ್ಕೆಲ್ಲಾ ಆಧಾರ ತೋರಿಸಿಯೇ ದುರ್ಗಾಸ್ತಮಾನದಲ್ಲಿ ದೊರೆ ಮದಕರಿ ನಾಯಕನನ್ನು ಮೆಚ್ಚಬೇಕಾದ ಶೂರ ಎಂದೇ ಚಿತ್ರಿಸಿದ್ದಾರೆ. ದುರಂತ ಕಾದಂಬರಿಗೆ ಅರ್ಹನಾದ ಧೀರೋದ್ಧಾತ ನಾಯಕ ಎನ್ನುವಂತೆಯೂ ಚಿತ್ರಿಸಿದ್ದಾರೆ. ತನ್ನ ದುರ್ಗದ ಜನರೇ ತನಗೆ ದ್ರೋಹ ಮಾಡಿ, ಹೈದರಾಲಿಯ ಸೇನೆ ಕೋಟೆ ಮುತ್ತಿದಾಗ, ವೀರಾವೇಶದಿಂದ ಕಾದಾಡುತ್ತಾ, ಕೊನೆಯ ಉಸಿರು, ಒಡಲು ಬಿಡುವ ಮುನ್ನ ಮದಕರಿ, ಹೈದರನ ಧ್ವಜ ಸ್ಥಂಭವನ್ನು ಹೊಡೆದುರಿಳಿಸಿದ್ದನ್ನು ಓದುವಾಗ, ರೋಮಾಂಚನದಿಂದ ಮೈ ನವಿರೇಳುತ್ತದೆ. ಹೈದರಾಲಿಯ ಕಡೆಯವರ ಹತ್ತಾರು ಗುಂಡುಗಳು ಮದಕರಿಯನ್ನು ಹೊಡೆದುರುಳಿಸಿದಾಗ, ದುರ್ಗದ ಗಂಡುಗಲಿ ವೀರ ಮದಕರಿನಾಯಕ ತನ್ನ ಪ್ರಾಣಪ್ರಿಯವಾದ ದುರ್ಗದ ಮಣ್ಣಿಗೆ ರಕ್ತ ತರ್ಪಣ ನೀಡುತ್ತಾ, ಕೋಟೆಯ ಮೇಲಿಂದ ಕೆಳಗುರುಳುತ್ತಾನೆ. ಮತ್ತೇಳುವುದಿಲ್ಲ - ಅಲ್ಲಿಗೆ ದುರ್ಗದ ಇತಿಹಾಸದಲ್ಲಿ ಪ್ರಜ್ವಲಿಸುವ ಸೂರ್ಯ ಅಸ್ತನಾಗಿದ್ದ, ದುರ್ಗಾಸ್ತಮಾನವಾಗಿ ಹೋಗುತ್ತದೆ, ಆ ಕ್ಷಣ. ದುರ್ಗವೇ ಹಂಬಲಿಸಿ ತನ್ನ ದೊರೆಯನ್ನು ಕರೆಯುವಂತಿರುವಾಗ, ಎಲ್ಲವನ್ನೂ ನುಂಗಿ ದುರ್ಗವನ್ನು ಕತ್ತಲಾವರಿಸುತ್ತದೆ ಮತ್ತೆ ಹಗಲಾಗುವುದಿಲ್ಲ. ಜನರ ಅಭಿಮಾನಕ್ಕೆ ಕಾರಣನಾದ ಮದಕರಿನಾಯಕ ಅತಿ ಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ ಮತ್ತು ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡಿದ್ದ ನತದೃಷ್ಟ ಎಂದು ಚಿತ್ರದುರ್ಗ ಸಂಸ್ಥಾನದ ಚಪ್ಪೇ ಚಾವಡಿ ದಳವಾಯಿಗಳ ನೇರ ವಂಶಸ್ಥರಾದ, ಭದ್ರಾವತಿಯ ಉಕ್ಕಿನ ಕಾರ್ಖಾನೆಯ ನಿವೃತ್ತ ವರ್ಕ್ಸ್ ಮ್ಯಾನೇಜರ್ ಶ್ರೀ ಸಿ ಪರಶುರಾಮನಾಯಕ್ ರವರು ಹೇಳಿದ್ದನ್ನೂ, ಈ ಕೃತಿ "ದುರ್ಗಾಸ್ತಮಾನ" ಬರೆಯಲು ಸ್ಫೂರ್ತಿಯಾದದ್ದನ್ನೂ ಲೇಖಕರು ಸ್ಮರಿಸಿದ್ದಾರೆ.

ದುರ್ಗದ ವೈಭವ, ಮದಕರಿ ನಾಯಕನ ಧೀಮಂತ ವ್ಯಕ್ತಿತ್ವ ನಮ್ಮನ್ನು ಪೂರ್ತಿಯಾಗಿ ಆವರಿಸಿಕೊಂಡು ಬಿಡುತ್ತದೆ. ಅರಿವು ಬೇಕೆಂದರೂ ಮನವು ಗುಂಗಿನಿಂದ ಹೊರಬರಲು ನಿರಾಕರಿಸುತ್ತದೆ. ಆರಂಭದಿಂದ ಅಂತ್ಯದವರೆಗೂ ನಡೆದ ಐತಿಹಾಸಿಕ ಘಟನೆಗಳ ವಿವರಣೆ, ಅರಮನೆ - ಗುರುಮನೆಯ ಅವಿನಾಭಾವ ಸಂಬಂಧ, ಯುದ್ಧದ ಚಿತ್ರಣ, ಎಲ್ಲವೂ ತರಾಸುರವರ ಪದಗಳ ಪ್ರಯೋಗ ಮತ್ತು ಭಾಷೆಯ ಸೊಗಡಿನಲ್ಲಿ ನಮ್ಮನ್ನು ಬಂಧಿಸಿಬಿಡುತ್ತದೆ. ಮದಕರಿ ಕೊನೆಯ ದಿನದ ಯುದ್ಧಕ್ಕೆ ಹೊರಟ ತಕ್ಷಣ, ನಾಗತಿಯರು ಹೊಂಡದಲ್ಲಿ ಆತ್ಮಾಹುತಿ ಮಾಡಿಕೊಳ್ಳುತ್ತಾರೆ. ಕೊನೆಯದಾಗಿ ಮದಕರಿ ನಾಯಕನ ಅಂತ್ಯ ಅತ್ಯಂತ ಸೂಕ್ಷ್ಮವಾದ, ನವಿರಾದ ಭಾವನೆಗಳಿಂದ ದುರ್ಗಾಸ್ತಮಾನದಲ್ಲಿ ಹೇಳಲ್ಪಟ್ಟಿದೆ. ಅವನ ಅದಮ್ಯ ದೇಶಪ್ರೇಮ, ಅವನನ್ನು ಕೊನೆಯ ಘಳಿಗೆಯವರೆಗೂ ವೀರಾವೇಶದಿಂದ ಹೋರಾಡಿಸಿ ಹೈದರಾಲಿಯ ಹಸಿರು ಧ್ವಜ ಹಾರಾಡುತ್ತಿದ್ದ ಧ್ವಜಕಂಬವನ್ನೇ ಕತ್ತರಿಸಿ ತುಂಡು ಮಾಡಿ, ದುರ್ಗದ ಮಣ್ಣಿಗೆ ಮುತ್ತಿಟ್ಟು, ಕೊನೆಯುಸಿರೆಳೆಯುಂತೆ ಮಾಡುತ್ತದೆ. ವೀರ ಮರಣ ಅಪ್ಪುತ್ತಾನೆ ವೀರ ಮದಕರಿ.

ಕಾದಂಬರಿಯಲ್ಲಿ ಆತನ ಕೊನೆಯ ಕ್ಷಣ-

" ಮುನ್ನುಗ್ಗುತ್ತಲೇ ಇದ್ದ ಮದಕರಿ ನಾಯಕ, ಆತನ ಎಡತೋಳು ಕತ್ತರಿಸಿ ರಕ್ತಕಾರುತ್ತಾ ನೆಲಕ್ಕುರುಳಿತು. ಕತ್ತಿಯ ಹೊಡೆತಗಳಿಂದ ಮೈ ಕ್ಷತವಿಕ್ಷತವಾಯಿತು. ಗಾಯಗೊಂಡ ಕಾಲುಗಳು ಕುಸಿಯುತ್ತಿದ್ದವು. ಆದರೆ
ಪರಿಘಾಯುಧ  ಬೀಸುವ ಆತನ ಕೈ ಸೋಲಲಿಲ್ಲ; ಸುಂಟರಗಾಳಿಗೆ ಸಿಕ್ಕಿದಂತೆ ಸುತ್ತುತ್ತಲೇ ಇತ್ತು. ಸುತ್ತ ಸಾವು ಸಾವಿರ ಕತ್ತಿಬಾಯಿ ಬಿರಿದು ಹಲ್ಮೊರೆಯುತ್ತಿರಲು, ಮದಕರಿನಾಯಕನಿಗೆ ಕಾಣುತ್ತಿದ್ದುದೊಂದೇ
"ಸಿದ್ದಯ್ಯನ ಬಾಗಿಲ ಮೇಲೆ ಹಾರುತ್ತಿದ್ದ ಹೈದರಾಲಿಯ ಧ್ವಜ"
ಕೊಚ್ಚುತ್ತಾ, ಕಡಿಯುತ್ತಾ, ಏಳುತ್ತಾ, ಬೀಳುತ್ತಾ, ರಕ್ತದಲ್ಲಿ ಜಾರಿ ಮುಗ್ಗರಿಸುತ್ತಾ, ಸನಿಹ ಬಂದವರನ್ನು ಸದೆಬಡಿಯುತ್ತಾ, ಮೆಟ್ಟಲಿಗೆ ಹತ್ತು ಜನರ ಬಲಿಗೊಡುತ್ತಾ, ಸಿದ್ದಯ್ಯನ ಬಾಗಿಲ ಪಕ್ಕದ ಮೆಟ್ಟಿಲುಗಳನ್ನು ಒಂದೊಂದನ್ನಾಗಿ ಏರಿದ ಆ ವೇಳೆಗೆ ಆತನ ಕಾಲಿಗೆ ನಡೆಯುವ ಶಕ್ತಿಯೂ ಇಲ್ಲದೆ ತೆವಳುತ್ತಾ..
ಮುನ್ನುಗ್ಗಿದ, ಪೆಟ್ಟು ತಿಂದರೂ ಸಿಟ್ಟುಬಿಡದೆ ಹೊಡೆವ ಕೈಯನ್ನೇ ಕಡಿಯಲೆತ್ನಿಸಿ ಬುಸುಗುಡುತ್ತಾ ಹರಿವ ಕಾಳೋರಗನಂತೆ ಬುಸುಗುಡುತ್ತಾ ತೆವಳಿ, ಶತಶರಾಘಾತದಿಂದ ಜರ್ಝರಿತವಾಗಿ, ರಕ್ತ ಬಸಿದು ಹೋಗಿ ದೇಹಬಲ ಕುಂದಿದರೂ ಛಲ ಬಿಡದೆ ಮುನ್ನಗ್ಗುವ ವನವರಾಹನಂತೆ ಸಿದ್ಧಯ್ಯನ ಬಾಗಿಲನ್ನೇರಿ, ಹೈದರಾಲಿಯ ಧ್ವಜ ಹಾರುತ್ತಿದ್ದ ಕಂಬದ ಬಳಿ ಸಾರಿ, ತನ್ನ ಮೈಯಲ್ಲಿ ಅಳಿದುಳಿದ ಶಕ್ತಿಯೆಲ್ಲವನ್ನೂ  ಪ್ರಯೋಗಿಸಿ ಪರಿಘಾಯುಧವನ್ನು ಬೀಸಿದ.
ಆ ಸಿಡಿಲೇಟಿಗೆ ಧ್ವಜಸ್ತಂಭ ಮುರಿದು, ಹಾರುತ್ತಿದ್ದ ಹೈದರಾಲಿಯ ಹಸಿರು ನಿಶಾನೆ ರೆಕ್ಕೆ ಕತ್ತರಿಸಿದ ಹಕ್ಕಿಯಂತೆ ಕೆಳಗುರುಳಿತು. ಆ ಧ್ವಜವನ್ನು ಮೆಟ್ಟಿನಿಂತು ವಿಕಟಾಟ್ಟಹಾಸ ಮಾಡಿದ ಮದಕರಿನಾಯಕ.
ಸದ್ದಡಗಿದ ಗಂಟಲಿನಲ್ಲೇ "ಉತ್ಸವಾಂಬೆಗೆ ಜಯವಾಗಲಿ"
ಎಂದು ಘೋಷಿಸುತ್ತಾ.
ಶವದ ಮೇಲಿರುವ ಹದ್ದುಗಳಂತೆ, ನೆಲಕ್ಕುರುಳಿದ ಮದಕರಿನಾಯಕನ ದೇಹದ ಮೇಲೆರಗಿದವು-ನವಾಬನ ಸೈನಿಕರ ಕತ್ತಿಗಳು.
ತಾಯ ತೊಡೆಯ ಮೇಲೆ ಮಲಗಿದಂತೆ ದುರ್ಗದ ನೆಲದ ಮೇಲೊರಗಿತ್ತು-ಮದಕರಿನಾಯಕನ ದೇಹ ಹತ್ತಾರು ಕಡೆಯಿಂದ ರಕ್ತ ಪುಟಿದು ಚಿಮ್ಮುತ್ತಿರಲು.
ಕೆಳಗೆ ಬಿದ್ದ ಮದಕರಿನಾಯಕ, ತನ್ನ ರಕ್ತಸಿಕ್ತ ತುಟಿಗಳಿಂದ -
"ಅವ್ವಾ"
-ಎಂದು ಮುತ್ತಿಟ್ಟ, ದುರ್ಗದ ಭೂಮಿಯನ್ನು.
ಮತ್ತವನ ದೇಹ ಅಲುಗಾಡಲಿಲ್ಲ-

ರಕ್ತ ನೆಲವನ್ನು ತೋಯಿಸುತ್ತಿತ್ತು. 'ನನ್ನ ರಕ್ತದ ಕೊನೆಯ ಹನಿಯೂ ನಿನ್ನ ಚರಣವನ್ನು ತೊಳೆಯಲು ಮೀಸಲು ಎಂಬಂತೆ' .
ದುರ್ಗದಲ್ಲೀಗ ಮಸಣ ಮೌನ.
ಬೆಳಕನ್ನು ಕಬಳಿಸುತ್ತಿರುವ ಕತ್ತಲು, ಕತ್ತಲಿನೊಂದಿಗೆ ದಟ್ಟವಾಗಿ ಹೆಣೆದ ಮೌನವನ್ನು ಕಣ್ಣೀರಾಗಿ ಹಿಂಡಿ ಮಾತುಗಳನ್ನು ಹನಿಹನಿಯಾಗಿ ಕರೆದಂತೆ ಆ ರಣಬಯಲಿನಲ್ಲೆಲ್ಲೋ ಪರಶುರಾಮನಾಯಕನ ಧ್ವನಿ- "ಅಣ್ಣಾ...ಅಣ್ಣಾ..ಮದಕೇರಣ್ಣಾ.." ಎಂದು ಕೂಗಿಕೊಂಡು ಪ್ರೇತದಂತೆ ಅಲೆಯುತ್ತಿತ್ತು- ದುರ್ಗದ ಹೃದಯವೇ ಹಂಬಲಿಸಿ ಕರೆದಂತೆ. ಆ ಕೂಗನ್ನೂ ನುಂಗಿ ದುರ್ಗವನ್ನು ಕತ್ತಲಾವರಿಸಿತು.
ಕತ್ತಲಾಯಿತು
ಮತ್ತೆ ಹಗಲಾಗಲಿಲ್ಲ>

Comments

Submitted by partha1059 Wed, 02/20/2013 - 18:48

ತರಾಸು ರವರು ಚಿತ್ರದುರ್ಗದ‌ ಇತಿಹಾಸದ‌ ಬಗ್ಗೆ ಮದಕರಿನಾಯಕ‌ ಹಾಗು ವ0ಶದ‌ ಬಗ್ಗೆ ಸರಣಿ ಪುಸ್ತಕಗಳನ್ನು ಬರೆದರು ನನಗೆ ನೆನಪಿರುವಮ್ತೆ ಎ0ಟು ಅದರಲ್ಲಿ ದುರ್ಗಾಸ್ತಮಾನ‌ ಕೊನೆಯದೇನೊ. ಎದೆ ನಡುಗಿಸುವ‌ ಘಟನೆಗಳನ್ನು ಒಳಗೊ0ಡಿದೆ. ಹಾಗೆ ತರಾಸು ರವರ‌ ಹಲವು ಕಾದ0ಬರಿಗಳು ಚಲನಚಿತ್ರವಾಗಿವೆ ಚ0ದವಳ್ಳಿಯ‌ ತೋಟ‌, ನಾಗರಹಾವು , ಆಕಸ್ಮಿಕ‌ , ಗಾಳಿಮಾತು, ಚ0ದನದ‌ ಬೊ0ಬೆ, ಚಕ್ರತೀರ್ಥ‌, ತಿರುಗುಬಾಣ‌, ಮಸಣದ‌ ಹೂವು , ಮಾರ್ಗದರ್ಶಿ ಹೀಗೆ ಮು0ದುವರೆಯುತ್ತದೆ. ಉತ್ತಮ‌ ಕಾದ0ಬರಿ ಹಾಗೆ ದೊಡ್ಡ ಲೇಖಕರು. ಹಿ0ದಿನ‌ ಕೆಲವರಲ್ಲಿ ಮತ್ತೆ ಒ0ದು ವಿಶೇಷವಿದೆ. ಇವರು ಬರಹವನ್ನೆ ವ್ಱುತ್ತಿಯನ್ನಾಗಿ ಸ್ವೀಕರಿಸಿದವರು. ಈಗಿನವರಲ್ಲಿ ಎಷ್ಟು ಜನಕೆ ಈ ದೈರ್ಯವಿದೆ ?

Submitted by ರಾಮಕುಮಾರ್ Thu, 02/21/2013 - 12:23

In reply to by partha1059

ಹಿ0ದಿನ‌ ಕೆಲವರಲ್ಲಿ ಮತ್ತೆ ಒ0ದು ವಿಶೇಷವಿದೆ. ಇವರು ಬರಹವನ್ನೆ ವ್ಱುತ್ತಿಯನ್ನಾಗಿ ಸ್ವೀಕರಿಸಿದವರು. ಈಗಿನವರಲ್ಲಿ ಎಷ್ಟು ಜನಕೆ ಈ ದೈರ್ಯವಿದೆ
ಈ ಅಂಶ ಕುತೂಹಲಕಾರಿಯಾಗಿದೆ. ಇದಕ್ಕೆ ಇನ್ನೊಂದು ಮುಖವೂ ಇರುವ ಸಾಧ್ಯತೆಯಿದೆ. ಬರಹವನ್ನೇ ವೃತ್ತಿಯಾಗಿ ಸ್ವೀಕರಿಸಿದ್ದ ಅನಕೃ ಬರೆದೇ ತೀರಬೇಕಾದ ಒತ್ತಡದಿಂದ ಅವರು ಬಹಳಷ್ಟು ಕಾದಂಬರಿಗಳನ್ನು ಬರೆದಿದ್ದರೂ "ಸಂಧ್ಯಾರಾಗ"ದ ಔನತ್ಯವನ್ನು ಎಲ್ಲದರಲ್ಲು ಸಾಧಿಸಲಾಗಲಿಲ್ಲ ಅನಿಸುತ್ತೆ...

Submitted by tthimmappa Wed, 02/20/2013 - 19:51

ಮಮತಾರವರೇ ತಮ್ಮ ವಿಮರ್ಶೆಯನ್ನು ಓದಿ ಕಾದಂಬರಿಯ ಚಿತ್ರಣ ಕಣ್ಣು ಮುಂದೆ ನಿಂತಂತಾಯಿತು. ಚಿಕ್ಕಂದಿನಲ್ಲಿ ಓದಿದ್ದ ದುರ್ಗಾಸ್ತಾಮಾನ
ಕಾದಂಬರಿಯನ್ನು ಕಳೆದ ವರ್ಷ ಮತ್ತೆ ಓದಿದೆ. ಮತ್ತೆ ಮತ್ತೆ ಓದಬೇಕೆನ್ನುವ, ಚಿತ್ತ ಕಲಕುವ ಮೇರುಕೃತಿ ಎಂದೇ ನನ್ನ ಅನಿಸಿಕೆ. ಒಂದು ಐತಿಹಾಸಿಕ ಕಾದಂಬರಿಯನ್ನು ನೋವು ನಲಿವುಗಳನ್ನೊಳಗೊಂಡ ಸಾಮಾಜಿಕ ಕಾದಂಬರಿಯಂತೆ ಚಿತ್ರಿಸಿರುವುದು ಮಹತ್ವದ ಕೌಶಲ್ಯಗಾರಿಕೆಯಾಗಿದೆ.ಕನ್ನಡದ ಕಾದಂಬರಿಕಾರರಲ್ಲಿ ತರಾಸು ಒಬ್ಬ ಅಗ್ರಗಣ್ಯರು. ಕಾದಂಬರಿಯ ಬಗ್ಗೆ ಒಂದು ಉತ್ತಮ ವಿಮರ್ಶೆಯನ್ನು ನೀಡಿರುವುದಕ್ಕೆ ಧನ್ಯವಾದಗಳು.

Submitted by CanTHeeRava Thu, 02/21/2013 - 06:19

"ಮದಕರಿನಾಯಕ ಅತಿ ಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ..... ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡಿದ್ದ ನತದೃಷ್ಟ" ಎಂದೆಲ್ಲಾ ಹೇಳಿ ಮುಂದಿನ ವಾಕ್ಯದಲ್ಲೇ ಅವನದು ಧೀಮಂತ ವ್ಯಕ್ತಿತ್ವ ಎಂದು ನೀವು ಹೇಳಿರುವುದು ಸೋಜಿಗದ ಸಂಗತಿ. ಪುಸ್ತಕ ಓದಿ ಅವನ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ.

Submitted by ಮಮತಾ ಕಾಪು Thu, 02/21/2013 - 11:41

In reply to by CanTHeeRava

ಕಂಠೀರವ ಅವರೆ ವಿಮರ್ಶೆಯನ್ನು ಸರಿಯಾಗಿ ಗಮನಿಸಿ, ವಿಮರ್ಶೆಯಲ್ಲಿನ ನೀವು ಹೇಳಿದ ವಾಕ್ಯ ಲೇಖಕರ ಸ್ಮರಣೆ ಎಂದು ಆ ವಾಕ್ಯದಲ್ಲೇ ಉಲ್ಲ್ಲೇಖಿಸಿದ್ದೇನೆ. ತರಾತುರಿಯಲ್ಲಿ ಓದಿದ್ದೀರಿ ಎಂದೆನಿಸುತ್ತದೆ, ಧನ್ಯವಾದಗಳು ಪ್ರತಿಕ್ರಿಯೆಗಾಗಿ

Submitted by CanTHeeRava Thu, 02/21/2013 - 12:07

In reply to by ಮಮತಾ ಕಾಪು

ನಿಮ್ಮ ಉಲ್ಲೇಖ ನನ್ನ ಗಮನದಲ್ಲಿತ್ತು (ನಾನು ಉಲ್ಲೇಖದ ಚಿಹ್ನೆ ಬಳಸಿದ್ದೆ). ತರಾಸು ತಮ್ಮ ಗ್ರಹಿಕೆಯನ್ನು ವ್ಯಕ್ತಪಡಿಸಿರುವ ರೀತಿಗೂ, ನಿಮ್ಮ ವಿವರಣೆಯಲ್ಲಿ ವ್ಯಕ್ತವಾಗಿರುವ ಗ್ರಹಿಕೆಗೂ ಅಂತರವಿದೆ ಎಂದು ನಿಮ್ಮ ಹಿಂದಿನ ಮಾತುಗಳಿಂದ ನೀವೇ ಒಪ್ಪಿರುವೆಂದು ತೋರುತ್ತದೆ. ಆ ಅಂತರಕ್ಕೆ ಕಾರಣ ಕೇಳ ಬಹುದೇ? ತರಾಸು ತಮ್ಮ ಕಾದಂಬರಿಯಲ್ಲಿ ಮದಕರಿಯ ವ್ಯಕ್ತಿತ್ವದ (ಧಿಮಂತವಲ್ಲದ) ಭಾಗಗಳ ಗೋಜಿಗೆ ಹೋಗಿಲ್ಲವೇ?

Submitted by makara Sat, 02/23/2013 - 19:48

ಮಮತಾ ಅವರೆ,
ಒಂದು ಅದ್ಭುತ ಕಾದಂಬರಿಯ ಅದ್ಭುತ ವಿಶ್ಲೇಷಣೆ ನಿಮ್ಮದು ಎಂದು ಒಂದೇ ಮಾತಿನಲ್ಲಿ ಹೇಳಬಹುದು.
ಈ ಐತಿಹಾಸಿಕ ಕಾದಂಬರಿಯಲ್ಲಿ ತರಾಸು ತೋರಿರುವ ರಾಜಕೀಯ ವ್ಯವಹಾರಗಳ ಕುಶಲತೆ ತುಂಬ ಅಪರೂಪವಾದದ್ದು. ಕಾವ್ಯಮಯ ಭಾಷೆಯಲ್ಲಿ ಬದುಕಿನ ವಾಸ್ತವಿಕತೆಗಳನ್ನು ಪರಿಣಾಮಕಾರಿಯಾಗಿ ಕಡೆದು ನಿಲ್ಲಿಸುವ ಶಕ್ತಿ ತರಾಸು ಅವರಲ್ಲಿ ಅದ್ವಿತೀಯವಾದುದು. ...+೧.

ಕಂಠೀರವ ಅವರು ಪ್ರಶ್ನಿಸಿರುವಂತೆ ತ.ರಾ.ಸು. ಅವರು ಆ ಕಾದಂಬರಿಯಲ್ಲಿ ಮದಕರಿ ನಾಯಕನ ಕಾಮುಕತೆ, ಶೌರ್ಯ, ಮದಾಂದತೆ (ಮುರುಘಾ ಮಠದ ಸ್ವಾಮಿಗಳನ್ನು) ಎದುರು ಹಾಕಿಕೊಳ್ಳುವುದು ಮತ್ತು ಹೈದರಾಲಿಗೆ ಸಹಾಯ ಮಾಡಿದ ಎನ್ನಲಾದ ಬ್ರಾಹ್ಮಣ ದಿವಾನನ ಬಗ್ಗೆ ಎಲ್ಲವನ್ನೂ ಚಿತ್ರಿಸಿದ್ದಾರೆ. ಈ ಚಿತ್ರಣದಲ್ಲಿಯೇ ತ.ರಾ.ಸು. ಅವರ ಜಾಣ್ಮೆಯಿರುವುದು. ಅವರು ಇತಿಹಾಸಕ್ಕೆ ಚ್ಯುತಿ ಬಾರದಂತೆ ಅದೇ ವಿಧವಾಗಿ ಮದಕರಿ ನಾಯಕನ ಮತ್ತು ಅವನ ದಿವಾನನ ವ್ಯಕ್ತಿತ್ವಕ್ಕೆ ಹಾಗೂ ಮುರುಘ ರಾಜೇಂದ್ರ ಸ್ವಾಮಿಗಳ ವ್ಯಕ್ತಿತ್ವಕ್ಕೆ ಚ್ಯುತಿ ಬಾರದಂತೆ ಕಾದಂಬರಿಯನ್ನು ಚಿತ್ರಿಸುವುದು ತ.ರಾ.ಸು ಅಂತಹ ಅಸಾಮಾನ್ಯರಿಗೇ ಸಾಧ್ಯ.
"ನಿಮ್ಮ ಶಸ್ತ್ರಕ್ಕಿರುವಂತೆ ನಮ್ಮ ಶಾಸ್ತ್ರಕ್ಕೂ ಯಾವುದೇ ವಿಧವಾದ ಭೇದವಿಲ್ಲ" ಎನ್ನುವ ಮುರುಘ ರಾಜೇಂದ್ರ ಸ್ವಾಮಿಗಳ ಮಾತುಗಳು ಧರ್ಮದ ಹಾಗೂ ರಾಜಕೀಯ ಸೂಕ್ಷ್ಮಗಳನ್ನು ಬಹಳ ಚೆನ್ನಾಗಿ ಚಿತ್ರಿಸುತ್ತವೆ. ಇಂತಹ ಕಾದಂಬರಿಯನ್ನು ನಾನು ಓದಿದ್ದು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ. ಅದನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದ ನಿಮ್ಮ ಟಿಪ್ಪಣಿಗೆ ಧನ್ಯವಾದಗಳು. ಮತ್ತೊಂದು ಮಾತು, ಈ ಕಾದಂಬರಿಯನ್ನು ನಾನು ಓದಲು ಎರವಲು ಪಡೆದದ್ದು ಚಿತ್ರದುರ್ಗದ ಒಬ್ಬ ಮಿತ್ರನಿಂದ ಅವನು ಆ ಕಾದಂಬರಿಯ ಮುಖಪುಟದಲ್ಲಿ ಹೀಗೆ ಬರೆದಿದ್ದ. "ಅಣ್ಣಾ ಈ ಕಾದಂಬರಿಯ ಒಂದು ಹಾಳೆಯನ್ನು ಕೆಡಿಸಿದರೆ ಅದು ದುರ್ಗದ ಒಂದು ಕಲ್ಲನ್ನು ಹಾಳು ಮಾಡಿದಂತೆ" --ಹೀಗಿದೆ ದುರ್ಗದ ಜನರಿಗೆ ಚಿತ್ರದುರ್ಗದ ಬಗೆಗಿನ ಅಭಿಮಾನ. ನನಗೂ ಅದರ ಬಗ್ಗೆ ಅಭಿಮಾನವಿದೆ ಏಕೆಂದರೆ ನಾನು ನನ್ನ ಬಾಲ್ಯದ ದಿನಗಳನ್ನು ಕಳೆದದ್ದು (೧೯೬೯-೭೭ರವರೆಗೆ) ಅದೇ ಚಿತ್ರದುರ್ಗದಲ್ಲಿ ಮತ್ತು ನಾನು ನಾಗರಹಾವು ಚಿತ್ರದ ಷೂಟಿಂಗನ್ನೂ ನೋಡಿದ್ದೇನೆ.