ಉದಾರವಾದಿ (?) ಮಧ್ವಾಚಾರ್ಯರು!

ಉದಾರವಾದಿ (?) ಮಧ್ವಾಚಾರ್ಯರು!

  ಮಧ್ವನವಮಿ ಆಚಾರ್ಯ ಮಧ್ವರು ಶಿಷ್ಯರಿಗೆ ಕಾಣಿಸಿಕೊಂಡ ಕೊನೆಯ ದಿನ. ಉಡುಪಿ ಅನಂತೇಶ್ವರ ದೇವಾಲಯದ ಗರ್ಭಗುಡಿ ಹೊಕ್ಕವರು ಹೊರಬರಲಿಲ್ಲ. ಯಾರಿಗೂ ತೋರಿಸಿಕೊಳ್ಳದೆ ಅವರು ಅಂತಿಮವಾಗಿ ಬದರಿಕಾಶ್ರಮಕ್ಕೆ ಹೊರಟುಹೋದರೆಂದು ಇಂದಿನವರೆಗೂ ಶಿಷ್ಯರು ನಂಬಿದ್ದಾರೆ. ಅವರು ಎಲ್ಲಿಗೆ ಹೋದರು, ಯಾಕೆ ಹೋದರು, ಎನ್ನುವುದು ಮುಖ್ಯವಲ್ಲ. ಇಲ್ಲಿದ್ದಾಗ ಏನು ಮಾಡಿದರು ಎಂಬುದಕ್ಕಷ್ಟೇ ಗೌರವ, ಗುಣಗಾನ ಅಥವಾ ಟೀಕೆ.
 ಪ್ರಸ್ತುತದಲ್ಲಿ ಜನಸಾಮಾನ್ಯರು, ಶಿಷ್ಯೋತ್ತಮರೆಂದು ಜಾಗಟೆ ಹೊಡೆದು ಸಾರಿಕೊಳ್ಳುವವರಲ್ಲ,  ಶ್ರೀಮಧ್ವಾಚಾರ್ಯರ ಕಾಣ್ಕೆ-ದರ್ಶನಗಳಿಗೆ ತೋರಿಸುವಷ್ಟು ಪೂರ್ವಗ್ರಹ ಮತ್ತು ಅನಾದರವನ್ನು, ಬೇರೆ ಯಾವ ಶಾಸ್ತ್ರಗಳ ಬಗ್ಗೆಯೂ ತೋರುವಂತೆ ಕಂಡುಬರುವುದಿಲ್ಲ. ಮತದ ಮಹಾಮಹೋಪಾಧ್ಯಾಯರೆಂಬ ಭ್ರಮೆಯ ಶುಂಠರ ವಿಪರೀತದ ಮಡಿ-ಆಚಾರ ಮತ್ತು ಅವುಗಳಿಗೆ ನೀಡುವ ಬಾಲಿಶ ಸಮರ್ಥನೆಗಳೂ ಇದಕ್ಕೆ ಕಾರಣವಿರಬಹುದು. ಶಾಸ್ತ್ರಗಳಂತೂ ಪ್ರವಚನಕಾರರಿಗೇ ಅರ್ಥವಾಗಿರುವಂತೆನಿಸುವುದಿಲ್ಲ. ಅವತಾರ, ಪವಾಡ, ಜನ್ಮಾಂತರಗಳ ಕಾಕ-ಬೂಕಗಳಲ್ಲಿ ತಪ್ಪಿಸಿಕೊಂಡುಬಿಡುವುದರಿಂದ, ಬುದ್ಧಿಪ್ರೌಢರು ಅವರ ತಂಟೆಗೂ ಹೋಗದೆ ದೂರವಿದ್ದುಬಿಡುವುದೂ, ಮಧ್ವಾಚಾರ್ಯರು ಮತ್ತವರ ದರ್ಶನದ ಬಗ್ಗೆ ಮಹಾಜನತೆಯಲ್ಲಿ ಆಸಕ್ತಿ ಅಷ್ಟಕ್ಕಷ್ಟೇ ಆಗಿರುವುದಕ್ಕೆ ಇನ್ನೊಂದು ಕಾರಣವಿರಬಹುದು.
   ಶ್ರೀಜಗನ್ನಾಥದಾಸರ ತತ್ತ್ವಸುವ್ವಾಲಿ (ಅವರ ಹರಿಕಥಾಮೃತಸಾರವೆಂಬ ಬಹು ಆದರಣೀಯ ಗ್ರಂಥದಲ್ಲೂ ಕಗ್ಗಾಂಶಗಳು ತಿಳಿವಿನ ಸಾರವನ್ನು ಮುಚ್ಚಿಡುವುದೇ ಹೆಚ್ಚು) ಹಾಗೂ ಇತರ ದಾಸರ ಪದಗಳ ಪ್ರಭಾವದಿಂದ ಅನುಭಾವಿಸಿ ನೋಡುವ ಸ್ವಾನುಭವಿಗಳಿಗೆ, ಮಧ್ವಾಚಾರ್ಯರು ಕಂಡರಿಸಿರುವ ಸತ್ಯದ ವೈಜ್ಞಾನಿಕ, ಸಾಮಾಜಿಕ ತತ್ತ್ವದರ್ಶನ ಸ್ವಲ್ಪವಾದರೂ ಆಗಿರಬಹುದು. ಆದರೆ ಶಾಲುಪಂಡಿತರ ಜರತಾರಿ ಆರ್ಭಟದಲ್ಲಿ ಅಂತಹ ಬೆರಳೆಣಿಕೆ ಸಂಖ್ಯೆಯವರು ಕಾಣುವುದೇ ಇಲ್ಲ!
 ಮಾಡು ಮತ್ತು ಮಾಡಿದ್ದನ್ನು ಉಣ್ಣು ಎಂದು ಸರಳವಾಗಿ ಎಂದಿದ್ದಾರೆ, ಆಚಾರ್ಯರು. ಎಲ್ಲರೂ ಮಾಡುತ್ತಾರೆ; ಎಲ್ಲರೂ ಉಣ್ಣುತ್ತಾರೆ. ಎಲ್ಲವನ್ನೂ ಎಲ್ಲರೂ ಒಂದೇ ಅಳತೆಯ ದಕ್ಷತೆಯಿಂದ ಮಾಡುವುದು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಅನುಭವವೇದ್ಯ. ಯಾರು ಯಾವುದಕ್ಕೆ ಅರ್ಹರೋ, ಯಾವುದರಲ್ಲಿ ಅವರವರಿಗೆ ಪರಿಚಯ-ಪರಿಶ್ರಮಗಳಿರುತ್ತದೋ ಅದನ್ನವರು ದಕ್ಷವಾಗಿ ಮಾಡುತ್ತಾರೆ. ಮಧ್ವರಿದ್ದದ್ದು ಮಧ್ಯಯುಗೀನ ಕಗ್ಗತ್ತಲೆ ಪರ್ವದಲ್ಲಿ. ಆ ಕಾಲದ ಸಮಾಜವೇ ನಿಂತ ನೀರಾಗಿತ್ತು. ಹುಟ್ಟಿನಿಂದ ಬಂದ ಕುಲಕಸುಬಿನಲ್ಲಿ ಮಾತ್ರಾ ಆಯಾ ಜನ ಪರಿಣಿತರು; ಬೇರೆ ಕಾರ್ಯ ಕೈಗೊಂಡರೆ ಕೆಲಸ ಕೆಡುತ್ತದೆ ಎಂದು, ಆ ಕಾಲದ ಬ್ರಾಹ್ಮಣ್ಯರು, ಆಚಾರ್ಯರ ಈ ಮಾತುಗಳನ್ನು ಸುಲಭವಾಗಿ ಅರ್ಥೈಸಿದರು. ಆದರೆ ಒಂದೊಂದು ವ್ಯಕ್ತಿಗೂ (ಜೀವಿಗೂ) ಅದರದರದೇ ಗುಣಧರ್ಮ-ಸ್ವಭಾವ ಭೇದವೂ ಇರುತ್ತದೆ (ಜೀವ-ಜೀವ ಭೇದ) ಎಂದೂ ಇದೇ ಆಚಾರ್ಯರೇ ಹೇಳಿದರು. ಅದು ಹುಟ್ಟುಗುಣವೆಂಬ ಮೂಲಧಾತು; ಅದಕ್ಕೆ ತನ್ನತನವೆಂಬ ಸೂಕ್ಷ್ಮ ಸ್ವಾತಂತ್ರ್ಯ (ದತ್ತ ಸ್ವಾತಂತ್ರ್ಯ) ಇರುತ್ತದೆ ಎಂಬ ತಿಳಿವೂ ಈ ಮಾತಿನಲ್ಲಿದೆ. ಕುಲಾಚಾರದಿಂದಾಗಿ ಕಸುಬಿನ ಸಂಸ್ಕಾರ ಪಡೆದ ಆ ಜೀವಿ, ಸಾಮಾಜಿಕವಾಗಿ, ಕುಂಬಾರನೋ, ಕಮ್ಮಾರನೋ, ಚೆಮ್ಮಾರನೋ ಆಗಿದ್ದರೂ ಅದು ಅದೂ ಆಗಿರುತ್ತದೆಂಬುದು ಮಧ್ವರ ಸುಸೂಕ್ಷ್ಮವಾದ ಹೊಸ ಕಾಣ್ಕೆ.
 ಜೀವಕ್ಕೊಂದು ಕರ್ತೃತ್ವವವೂ ಇರುತ್ತದೆ. ಇದು ತನ್ನದೇ ಆ ಪರಿಪೂರ್ಣ ಸಾಮರ್ಥ್ಯಕ್ಕೆ ತಕ್ಕಷ್ಟು ಕೆಲಸ ಮಾಡಬೇಕು; ಮಿತಿ ಮೀರಿ ಹೋದರೆ ಮುಖಭಂಗ; ಹಾಗಂತ ಹಿಂಜೆರೆದುಕೊಂಡಿದ್ದುಬಿಟ್ಟರೆ, ಎಷ್ಟು ದಕ್ಕಬೇಕೋ ಅಷ್ಟು ಪೂರ್ಣವಾಗಿ ಸಿಕ್ಕುವುದಿಲ್ಲ. ಇದು ಸಾರ್ವಕಾಲಿಕ ಸತ್ಯವಲ್ಲವೇ?
 ಹೀಗೆನ್ನುವ ಮಾಧ್ವ ದರ್ಶನದ ಮೇಲೆ, ಜಾತಿಭೇದದ ಆರೋಪ!  ಯಾವ ಸಮಾಜವೇ ಆಗಲಿ, ಅದರಲ್ಲಿ ಶ್ರೇಣಿಗಳು ಇಲ್ಲದಿರುವುದು ಸಾಧ್ಯವೇ ಇಲ್ಲ. ಅತಿಸಮರ್ಥರು, ಸಮಾಜಕ್ಕೆ ಅತ್ಯಂತ ದೊಡ್ಡದಾದುದನ್ನು ಕೊಡುತ್ತಾರೆ. ಅವರು ಸಹಜವಾಗಿಯೇ ಯಾವಾಗಲೂ ಉನ್ನತ ಶ್ರೇಣಿಯಲ್ಲಿರುತ್ತಾರೆ; ನೀಚರು, ನಿಷ್ಪ್ರಯೋಜಕ ಸೋಂಬೇರಿಗಳು ಸಮಾಜದ ಕೆಳಸ್ತರದಲ್ಲೇ ಇರುತ್ತಾರೆ; ಇರಬೇಕು. ಇದು ಅನಿವಾರ್ಯ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಶುಂಠ, ಚಂಡಾಲ ಕಾರ್ಯದಲ್ಲೇ ತೊಡಗಿರುತ್ತಾನೆ. ಅವನಿಗೆ ಪೂರ್ಣ ಕುಂಭ ಸ್ವಾಗತ ನೀಡುವುದೂ, ಅಧಮ ಕುಲದಲ್ಲಿ ಹುಟ್ಟಿದ ಪ್ರತಿಭಾವಂತ, ತಡಿಕೆ ಗುಡಿಸಿಲಿನಲ್ಲಿ ಚರ್ಮ ಹದ ಮಾಡಿಕೊಂಡೇ ಜೀವನ ಸವೆಸಬೇಕೆಂಬುದು ಸಾಮಾಜಿಕ ಮೂರ್ಖತನ. ವಂಚಿತನಾಗುವುದು ಆ ವ್ಯಕ್ತಿಯಷ್ಟೇ ಅಲ್ಲ, ಇಡೀ ಸಮಾಜ ಅವನ ಉತ್ಕೃಷ್ಟ ಕೊಡುಗೆಯಿಂದ ವಂಚಿತವಾಗುತ್ತದೆ. ಅವಕಾಶ ಕೊಟ್ಟರೆ, ಆತ/ಆಕೆ ಅತ್ಯುತ್ತಮ ಆಡಳಿತಜ್ಞರೆಂದೂ ಅಥವಾ ತಂತ್ರಜ್ಞರೆಂದೂ ಸಾಬೀತುಪಡಿಸಬಲ್ಲರು. ಹೀಗೆಂದು ಮಧ್ವಾಚಾರ್ಯರು ಎಲ್ಲೂ ವಾಚ್ಯವಾಗಿ ಹೇಳಿಲ್ಲದೇ ಇರಬಹುದು. ಆದರೂ ಅವರ ಜೀವಭೇದವಾದ ಸ್ಥಾಪಿಸುವುದು ಇದನ್ನೇ ಅಲ್ಲವೇ? ಆದರೆ ಬಸವಣ್ಣನಂತೆ ಅವರು ಇದನ್ನು ಮಾಡಿತೋರಿಸಹೋಗಲಿಲ್ಲ; ಆದ್ದರಿಂದಲೇ ಮಧ್ವಮತ, ವೈದಿಕಪಥದಿಂದ ಹೊರಬರಲಿಲ್ಲ!
 ಸರ್ವಗುಣ ಸಂಪನ್ನ, ಸರ್ವತ್ರ ವ್ಯಾಪ್ತ, ಸರ್ವಭಕ್ತ ಪ್ರಸನ್ನನಾದ ಒಬ್ಬ ದೇವರಿದ್ದಾನೆ ಎಂದು ನಂಬಬೇಕೆನ್ನುವುದು ಸಾರ್ವಜನಿಕರಿಗೆ ಮಧ್ವಾಚಾರ್ಯರ ಕರೆ. ಇವರೇನೋ ಅವನನ್ನು ಹರಿ ಎಂದರು. ಬೇಕಾದರೆ ಶಂಕರ ಎಂದೂ ಅಲ್ಲಾಹ್ ಎಂದೂ ಕರೆದುಕೊಳ್ಳಬಹುದು. ಆದರೆ ಅಂಥದೊಂದು ಇದೆ ಎಂದು ನಂಬುವದರಿಂದ ನಮ್ಮ ಹೊರೆ ಎಷ್ಟೋ ಇಳಿದೀತು. ಈ ಜಗತ್ತಿನ ಏನು ಎಂಬುದೂ, ಎತ್ತ ಎಂಬುದೂ ನಮಗೆ ಪರಿಪೂರ್ಣವಾಗಿ ಗೊತ್ತಿಲ್ಲ; ಅದರ ಎಲ್ಲಾ ಆಗು-ಹೋಗಿನ ಜವಾಬ್ದಾರಿಯನ್ನು ನಾವು, ವ್ಯಷ್ಟಿಯಾಗಿ-ಸಮಷ್ಟಿಯಾಗಿ, ನಾವು ಹೊತ್ತುಕೊಳ್ಳಲು ಸಾಧ್ಯವೇ?
 ಮಾಧ್ವತತ್ವಗಳು ಸಮಾಜ ವಿರೋಧಿ ಅಲ್ಲ; ಜೀವ ವಿರೋಧಿಯಂತೂ ಅಲ್ಲವೇ ಅಲ್ಲ. ಪ್ರತಿ ಜೀವಕ್ಕೊಂದು ಮಾನ, ಸಮ್ಮಾನ, ಸ್ವಾತಂತ್ರ್ಯಗಳನ್ನಿದು ನೀಡುತ್ತದೆ. ಆದರೆ ಪಟ್ಟಭದ್ರರು ಆಚೆ ಬಾರದಂತೆ, ಅದನ್ನು ಪಟ್ಟಾಗಿ ಹಿಡಿದಿಟ್ಟುಕೊಂಡುಬಿಟ್ಟಿದ್ದಾರೆ.

Comments

Submitted by kavinagaraj Tue, 02/19/2013 - 20:25

ಮಾಧ್ವತತ್ವಗಳು ಸಮಾಜ ವಿರೋಧಿ ಅಲ್ಲ; ಜೀವ ವಿರೋಧಿಯಂತೂ ಅಲ್ಲವೇ ಅಲ್ಲ. ಪ್ರತಿ ಜೀವಕ್ಕೊಂದು ಮಾನ, ಸಮ್ಮಾನ, ಸ್ವಾತಂತ್ರ್ಯಗಳನ್ನಿದು ನೀಡುತ್ತದೆ. ಆದರೆ ಪಟ್ಟಭದ್ರರು ಆಚೆ ಬಾರದಂತೆ, ಅದನ್ನು ಪಟ್ಟಾಗಿ ಹಿಡಿದಿಟ್ಟುಕೊಂಡುಬಿಟ್ಟಿದ್ದಾರೆ. >> ಪಟ್ಟ ಭದ್ರರ ಹಿಡಿತ ಸಡಿಲಗೊಳಿಸುವ ಕೆಲಸ ಆದ್ಯತೆಯದಾಗಬೇಕು. ಧನ್ಯವಾದ, ಆರ್.ಕೆ. ದಿವಾಕರರೇ.
Submitted by ಆರ್ ಕೆ ದಿವಾಕರ Tue, 02/26/2013 - 11:49

ಅಭಿಮಾನದ ಓದಿಗಾಗಿ ಕವಿರಾಜ್ ಮತ್ತು ಮಕರ ಅವರಿಗೆ ಧನ್ಯವಾದ.. ಅದರಲ್ಲೂ ಮಕರ ಅವರು, ಲೇಖನವನ್ನು ’ವಸ್ತುನಿಷ್ಠ’ವಾಗಿ ಓದಿಕೊಂಡಿದ್ದು ಸಂತೊಷವಯಿತು. ’ವಸ್ತು’ವೇ ಮಿಥ್ಯೆ; ವಾಸ್ತವ ಜಗತ್ತು ಭ್ರಾಮಕ’ ಎನ್ನುವುದೇ ’ವೇದಾಂತ’ ಎಂಬುದು ಕೆಲವರ ಭ್ರಮೆ; ಆ ಭ್ರಮೆಯೇ ಅವರ ಪಾಲಿಗೆ ಅತ್ಯಂತಿಕ ಸತ್ಯ! ಶಾಶ್ವತ ಸಚ್ಛುಖ ’ಅಲ್ಲಿ’ ಇದೆಯಂತೆ. ಹೀಗೆನ್ನುವುದಕ್ಕೆ ಬೇಕಾದಷ್ಟು ಉದ್ಧರಣಗಳನ್ನೂ ಉದರಿಸಲಾಗುತ್ತದೆ. ಶಬ್ದಾರ್ಥ ಚಮತ್ಕಾರಗಳೇನೋ, ಅದರಲ್ಲಿ ’ವಾಹ್’ ಎನ್ನುವಷ್ಟು ದೊರಕಬಹುದು ಆದರೆ ಆ ಸುಖಾನುಭವವನ್ನು ಹೊಂದಿ ’ಬಮದವರು’ ಒಬ್ಬರೂ ಕಾಣಸಿಗರು! ಅದರ ಸ್ವರೂಪ ಎಂಥದು ಎಂದು, ಯಾರನ್ನು ತಾನೇ ಕೇಳಿ ಬಾಳುವುದು? ಹೆಚ್ಚು-ಕಮ್ಮಿ ಇಂಥದೆನಿಸಬಹುದಾದ್ದನ್ನು ಅಭಿವ್ಯಕ್ತಿ ಪಡಿಸುವ ಕಿಂಚಿತ್ ಪ್ರಯತ್ನ, ಶಿವಾದ್ವೈತವನ್ನು ಸಾರುವ ಶಿವಸರಣರಿಂದ, ಮಹಾತ್ಮಾ ಕಬಿರ್, ನರಸಿಂಹ ಮೆಹತಾದಿ ವೈಷ್ಣವ ಸಂತರಿಂದ ಪ್ರಾಮಾಣಿಕವಾಗಿ ಆಗಿದೆ. ಆದರದು, ಪದ-ವರ್ಣ-ಮಾತ್ರಾದಿ ’ವಸ್ತು’ಗಳ ಮೂಲಕವೇ ಆಗಿರುವುದು. ಅಷ್ಟರಮಟ್ಟಿಗೆ ಅದು ಸಹ ’ವಾಸ್ತವ’ವೇ! ನಾವು ಮತ್ತು ಅವರ ನಡುವೆ, ಹೇಳುವ - ಕೇಳುವ ’ಸಂಬಂಧ’ವಿರುತ್ತದೆ; ಇದು ’ಸಾಮಾಜಿಕ’. ಇದಕ್ಕೆ ಮೀರಿದ ’ನಿರ್ವಿಕಲ್ಪ ಸಮಾಧಿ’ಯೊಂದು ಇರುವುದಾದರೆ, ಇದ್ದುಕೊಂಡುಹೋಗಲಿ; ನಮಗೂ ಅದಕ್ಕೂ ’ಸಂಬಂಧ’ವಿಲ್ಲ. ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲೂ ಆಗದ ಸ್ವ-ಸ್ವಾರ್ಥದ ’ಚಿದಾನಂದ’, ’ಸತ್’ ಆದರೂ ನಮಗದರ ಗೊಡವೆ ಬೇಕಾಗಿಲ್ಲ! ಇಳಿಯಲಾಗದ ಆಳದ, ಏರಲಾಗದ ಎತ್ತರದ, ಅಲೆಯಲಾಗದ ಅಗಲದ, ತನ್ನ ಕೇವಲ ನಾಲ್ಕನೆ ಒಂದು ಭಾಗ ಮತ್ರವನ್ನೇ, ಭೂಗ್ರಹವನ್ನೂ ಒಳಗೊಳ್ಳುವ ಇಡೀ ಬ್ರಹ್ಮಾಂಡವಾಗಿ ತೋರ್ಪಡಿಸಿಕೊಳ್ಳುವ ಒಂದೇ ’ಬ್ರಹ್ಮ’ದ ಸತ್ಯ, ಹುಲುಜೀವಿಗಳ ತಾಳಿಗೆಗೆ ಬಹು-ಬಹಳಷ್ಟು ಮೀರಿದ್ದು. ಅದನ್ನು ಹಿಡಿದಿದ್ದೆವೆಂದುಕೊಂಡು, ವಸ್ತು, ವಾಸ್ತವ ಅನುಭಾವ ಮತ್ತು ವಸ್ತುನಿಷ್ಠ ಆಧಾರಗಳನ್ನೂ ’ಇಲ್ಲ’ಗಳೆಯುವ ಪ್ರವೃತ್ತಿ, ವಿವೇಕದ ವ್ಯಾಖ್ಯೆಗೆ ಬರುವಂಥದಗುತ್ತದೆಯೇ? ಇದು ನಮ್ಮ ಸಾಮಾಜಿಕಾರ್ಥಿಕ, ರಾಜಕೀಯ, ಕೌಟುಂಬಿಕ, ವೈಯಕ್ತಿಕ ಜೀವನವನ್ನೆಲ್ಲಾ ಒಳಗೊಳ್ಳುತ್ತದೆ. ’ಇಲ್ಲಿ ಸಲ್ಲುವುದಕ್ಕೆ’ ಇದೊಂದು ಸವಾಲು.’ಅಲ್ಲಿ’ ಸಲ್ಲುವುದು, ಸಲ್ಲದಿರುವುದು ನಮ್ಮ ಅಳವಿಗೆ ಮೀರಿದ್ದು.