ಮಳೆಯಲಿ , ಚಳಿಯಲಿ

ಮಳೆಯಲಿ , ಚಳಿಯಲಿ



ಬೆಂಗ್ಳೂರಲ್ಲಿ ಮತ್ತೆ ಮಳೆ. ಅದ್ರಲ್ಲೇನು ವಿಶೇಷ ಅಂದ್ರಾ ? ಇಲ್ಲಿ ಯಾವಾಗ ಮಳೆ ಇರತ್ತೆ ಯಾವಾಗ ಬಿಸ್ಲಿರುತ್ತೆ ಅನ್ನೋದು ಓಸಿ ಲಾಟ್ರಿ ಹೊಡ್ಯತ್ತೆ ಅಂದಷ್ಟೇ ಗ್ಯಾರಂಟಿ ಅಂತೀರಾ? ಹೌದು ಬಿಡಿ. ಆದ್ರೂ  ಈ ಸಲ , ಈ ಮಳೆ ಏನೋ ವಿಶೇಷ ಅಂತ ಅನ್ಸಿದ್ದೆಂತೂ ಹೌದು. ಮಳೆ ದಿನ, ಬೆಳಗಿನ ಚಳೀಲಿ ಬಚ್ಚಲು ಮನೇಲಿ ಬೆಚ್ಚ ಬೆಚ್ಚಗಿನ ನೀರು ಮೈಮೇಲೆ ಬೀಳ್ತಾ ಇದ್ರೆ ಊರಿನ ಹಂಡೆಯ, ಹೊಡಸಲಿನ, ಮುಂಜಾನೆ ಮಳೆಯ ಅದೆಷ್ಟೋ ನೆನಪುಗಳ ಮೆರವಣಿಗೆ. ಅಂತದ್ದೇ ಕೆಲ ನೆನಪುಗಳನ್ನು ಇಲ್ಲಿ ಹೆಕ್ಕಿಡೋ ಪ್ರಯತ್ನದಲ್ಲಿದ್ದೇನೆ...

ಮಳೆಗಾಲ, ಚಳಿ ಅಂದ್ರೆ ಮೊದ್ಲು ನೆನ್ಪಾಗೋದು ನಮ್ಕಡೆಯ ಕಂಬಳಿ-ಚಳಿ ಅನ್ನೋ ಮಾತುಗಳು. ನಮ್ಕಡೆಗೆ ನಿನ್ನೆ ೨ ಕಂಬಳಿ ಚಳಿ ಇದ್ದೋ, ನಿಂಬದಿಗೆ ಎಷ್ಟು ಅನ್ನೋ ಮಾತು ಈಗ್ಲೂ ನಮ್ಮ ಬದಿಯ ಹಳೆ ಕಾಲದವರ ಮನೆಗಳಲ್ಲಿ ಮಾಮೂಲು. ಮಳೆಗಾಲದ ಆ ದಿನಗಳಲ್ಲಿ ಬೇಗ ಎದ್ದು ಶಾಲೆಗೆ ರೆಡಿ ಆಗೋದು ಅಂದ್ರೆ ಅದೊಂತರ ಹಿಂಸೆ. ಹಾಗಾಗಿ ಶನಿವಾರ ಬಂತದ್ರೆ , ಯಾಕಪ್ಪಾ ಅನುಸ್ತಿತ್ತು ಕೆಲ ಸಲ. ಆದ್ರೆ ಅಮ್ಮ ನಂಕಿಂತನೂ ಮುಂಚೆನೇ ಎದ್ದು ಬಚ್ಚಲು ಒಲೆಗೆ ಬೆಂಕಿ ಹಾಕ್ತಿದ್ರಿಂದ ಹಂಡೇಲಿ ಬಿಸಿ ಬಿಸಿ ನೀರು ರೆಡಿ. ಈಗೆಲ್ಲಾ ಗೀಸರು, ಸೋಲಾರು ಬಂದು ಹಂಡೆ ಅಂದ್ರೆ ಏನು ಅಂತ ಸುಮಾರು ಪೇಟೆ ಹುಡ್ಗರು ಕೇಳೋ ಹಾಗಾಗಿದೆ ಬಿಡಿ , ಆದ್ರೆ ನಂಕಡೆ ಆಗ ಹಾಗಿರ್ಲಿಲ್ಲ, ಈಗ್ಲೂ ಹಂಡೆಗಳ ಜಮಾನ ಮುಗಿದಿಲ್ಲ... ಎಲ್ಲೋ ಹೋದ್ವಿ, ಮತ್ತೆ ಫ್ಲಾಷ್ ಬ್ಯಾಕಿಗೆ.. ಸರಿ, ಸ್ನಾನ ಮಾಡಿ, ಪೂಜೆ ಮಾಡಿ, ಬಿಸಿ ಬಿಸಿ ತಿಂಡಿ ನುಂಗಿ(ತಿಂತ ಕೂತ್ರೆ ಶಾಲೆಗೆ ಲೇಟಾಗತ್ತಲ ಮತ್ತೆ :-) ) ಶಾಲೆ ಕಡೆ ದಾಪುಗಾಲು ಹಾಕ್ತಿದ್ವಿ. ಕೆಲೋರು ದಪ್ಪ ದಪ್ಪ ಸ್ವೆಟರು ಹಾಕ್ಕಂಡು ಬರೋರು. ಆದ್ರೆ ನನ್ನಂತ ಕೆಲೋರಿಗೆ ಸ್ವೆಟರು ಹಾಕೋದು ಜ್ವರ ಬಂದಾಗ, ಹುಷಾರಿಲ್ದಿದ್ದಾಗ ಮಾತ್ರ ಅಂತ ಭಾವ !! ಹಾಗಾಗಿ ಮಳೆಗೊಂದು ಛತ್ರಿ ಹಿಡಿದು , ಚಳಿಗೆ ನಿಮಿರಿ ನಿಂತಿರ್ತಿದ್ದ ಕೈ ರೋಮಗಳನ್ನ ಒಬ್ರಿಗೊಬ್ರು ತೋರಿಸ್ಕೊಂಡು ನಗಾಡ್ತಾ ಶಾಲೆಗೆ ಹೋಗ್ತಿದ್ವಿ. ಶನಿವಾರ ಶಾಲೇಲಿ ಮೊದಲೆರ್ಡು ಪೀರಿಯಡ್ ಪೀಟಿ ಇರ್ತಿತ್ತು.ಮಳೆಗಾಲದಲ್ಲಿ ಆ ಪೀರಿಯಡ್ ಬದ್ಲು ಬೇರೆ ಇರ್ತಿತ್ತು. ಚಳಿಗಾಲದಲ್ಲಿ ಅದೇ ನಮ್ಮ ಮೆಚ್ಚಿನ ಪೀರಿಯಡ್ ಆಗ್ತಿತ್ತು. ವ್ಯಾಯಾಮ ಮಾಡ್ತಾ ಆಗಾಗ ಇಣುಕ್ತಿದ್ದ ಸೂರ್ಯನ ಮುಂಜಾನೆ ಬಿಸ್ಲಿಗೆ ಮೈ ಕಾಯಿಸ್ಕೊಳೋ ಆ ಸುಖ ಇದ್ಯಲ್ಲ.. ಅದನ್ನ ಅನುಭವಿಸಿಯೇ ತಿಳಿಯಬೇಕು..

ಮಳೆಗಾಲ, ಚಳಿಗಾಲ ಅಂದಾಗ ಕಾಡೋ ಇನ್ನೊಂದು ಮಧುರ ನೆನಪು ನಮ್ಮಜ್ಜಿ ಮನೆ ಹೊಡಸಲಿನದು. ಜೋಗದ ಗುಂಡಿ.. (ಈಗಿನ ಜೋಗ ಫಾಲ್ಸು !!) ಕೇಳಿರಬೇಕಲ್ವಾ ಅದ್ರತ್ರ ನನ್ನಜ್ಜಿ ಮನೆ.
ಹೊಡಸಲು ಅಂದ್ರೆ ಅಲ್ಲಿ ಮಳೆಗಾಲದಲ್ಲಿ ಏಲಕ್ಕಿ, ಕಾಫಿ, ಲವಂಗ ಇತ್ಯಾದಿ ಬೆಂಕಿ ಶಾಖಕ್ಕೆ ಒಣಗಿಸೋಕೆ ಅಂತ ಮಾಡಿರ್ತಿದ್ದ ಜಾಗ. ಹೊಡಸಲಿನ ಮೇಲ್ಗಡೆ ಲವಂಗ ಇತ್ಯಾದಿ ಒಣ ಹಾಕಿದ್ರೆ ಕೆಳಕ್ಕೆ ಬೆಂಕಿ ಉರೀತಾ ಇರತ್ತೆ. ಹಾಗಾಗಿ ಮನೇಲಿರೋ ಮಕ್ಕಳಲ್ದೇ, ಬೆಕ್ಕು, ನಾಯಿಗಳಿಗೂ ಹೊಡಸಲು ಚಳಿ ಕಾಯಿಸೋ ಮೆಚ್ಚಿನ ಜಾಗ. ಅಲ್ಲಿ ಘೋರ ಮಳೆಗಾಲದಲ್ಲೇ ಏನಾರು ಕಾರ್ಯಕ್ರಮ ಇರ್ತಿತ್ತು. ಪ್ರತೀ ಸಲವೂ ಬಸ್ಸಿಳಿದು ಬಸ್ಟಾಂಡಿಂದ ೨ ಕಿ.ಮೀ ದೂರದ ಅವರ ಮನೆಗೆ ಹೋಗೋ ಹೊತ್ತಿಗೆ ಅದೇಗೆ ಛತ್ರಿ ಹಿಡಿದು ನಡದ್ರೂ ಅರ್ಧ ಪ್ಯಾಂಟಾದ್ರೂ ನೆಂದಿರ್ತಿತ್ತು.. ಅಡ್ಡಮಳೆಗೆ ಶಾಪ ಹಾಕ್ತಾ , ಕಾಲಿಗೆ ಹತ್ತುತ್ತಿದ್ದ ಉಂಬುಳಗಳನ್ನು ಕೀಳ್ತಾ ಮನೆಗೆ ಸಾಗ್ತಿದ್ವಿ. ತೀರಾ ನಿಧಾನ ನಡೆದಷ್ಟೂ ಉಂಬ್ಳ ಹತ್ತದು ಜಾಸ್ತಿ. ಹಂಗಂತ ತೀರಾ ಬೇಗ ನಡ್ಯಕ್ಕಾಗಲ್ಲ..ಆ ಮಣ್ಣು ರಸ್ತೆ ಎಲ್ಲಿ ಜಾರತ್ತೋ ಅನ್ನೋ ಭಯ..ಅಂತೂ ಮನೆ ಮುಟ್ಟಿ ಕಾಲಿಗೆ ಹತ್ತಿ, ನಾ ನಿನ್ನ ಬಿಡಲಾರೆ ಅಂತಿದ್ದ ಉಂಬುಳಗಳ್ನ ಸುಣ್ಣ-ಹೊಗೆಸೊಪ್ಪಿನ ನೀರಿನ ದ್ರಾವಣ ಮುಟ್ಸಿ ತೆಗದು ದೂರ ಬಿಸಾಕ್ತಿದ್ವಿ. ಕೆಲ ಉಂಬುಳ ದ್ವೇಷಿಗಳು ಅದ್ನ ಹೊಡಸಲಿನ ಬೆಂಕಿಗೆ ಹಾಕ್ತಿದ್ರು !!.. ಹಂಡೆಯ ಕುದಿ ಕುದಿ ನೀರಲ್ಲಿ ಕೈಕಾಲು ತೊಳಿವಾಗ ಮಳೇಲಿ ಮೈ ತೋಯಿಸ್ಕಂಡಾಗಿನ ಚಳಿ ಮರ್ತೇ ಹೋಗ್ತಿತ್ತು.. ಬಟ್ಟೆ ಬದಲಾಯಿಸಿದ ನಂತರ ಹೊಡಸಲೆದ್ರೇ ನಮ್ಮ ಹಾಜರಿ. ಬಿಸಿ ಬಿಸಿ ಕಾಫಿಯೋ, ಚಾವೋ ಸ್ವಲ್ಪ ಹೊತ್ತಿಗೆ ಅಲ್ಲೇ ಬರೋದು. ಮಳೆ-ಚಳಿಗಾಲದಲ್ಲಿ ಹೊಡಸಲಲ್ಲಿ ಚಳಿ ಕಾಯಿಸ್ತಾ ಇರ್ವಾಗ ಬಿಸಿ ಬಿಸಿ ಕಾಫಿ-ಚಾ ಒಳಗೆ ಇಳಿತಾ ಇದ್ರೆ..ಆ ಸುಖ ಅನುಭವಿಸಿಯೇ ತಿಳಿಯಬೇಕು..   

ಆಮೇಲಿಂದು ಹೈಸ್ಕೂಲ್ ಸೈಕಲ್ ನೆನ್ಪುಗಳು.. ಹೈಸ್ಕೂಲಿಗೆ ಬಂದ ಮೇಲೆ ಸೈಕಲ್ ಬಂತು. ಐದು ಕಿ,ಮೀ ದೂರ ಸೈಕಲ್ ಹೊಡ್ದು ಹೋಗೋದು ಖುಷೀನೆ. ಆದ್ರೆ ಮಳೆಗಾಲ ಬಂದಾಗ ಅದು ಬೇರೆ ಕಥೆ. ರೈನ್ ಕೋಟು ಹಾಕಿದ್ರೆ ಸೈಕಲ್ ತುಳ್ಯೋಕೆ ಸುಲ್ಬ. ಆದ್ರೆ ಎಷ್ಟೇ ದುಬಾರಿ ರೈನ್ ಕೋಟ್ ತಂದ್ರೂ ಅದ್ರ ಪ್ಯಾಂಟು ೧೫-೨೦ ದಿನಕ್ಕೆ ತೂತಾಗಿ ಒಳಗೆಲ್ಲಾ ನೀರು ಬರ್ತಿತ್ತು. ಹಾಗಾಗಿ ರೈನ್ ಕೋಟಿನ ಪ್ಯಾಂಟು ಹಾಕಿದ್ರೂ ಒಳಗಿರೋ ಪ್ಯಾಂಟೆಲ್ಲಾ ಹೈಸ್ಕೂಲು ಮುಟ್ಟೋವರ್ಗೆ ಒದ್ದೆ!!. ಹೈಸ್ಕೂಲಿಂದ ಮನೆಗೆ ಬರ್ತಾನೂ ಇದೆ ಕತೆ. ಆದ್ರೆ ಮನೆಗೆ ಬಂದ ತಕ್ಷಣನೇ ಆ ಹಸಿ ಪ್ಯಾಂಟು ತೆಗ್ದು ಬೇರೆ  ಬಟ್ಟೆ ಹಾಕ್ಬೋದಿತ್ತು. ಆದ್ರೆ ಹೈಸ್ಕೂಲಲ್ಲಿ ಹಂಗಲ್ವಲ್ಲ... ಆ ಹಸಿ ಪ್ಯಾಂಟು ನಂ ದೇಹದ ಬಿಸಿಗೆ ಆರೋವರ್ಗೆ ಕಾಯೋದನ್ನ ಬಿಟ್ಟು ಬೇರೆ ಏನ್ಮಾಡೋಕೂ ಆಗಲ್ಲ.  ಇನ್ನು ರೈನ್ ಕೋಟಿನ ಸಹವಾಸವೇ ಬೇಡ ಛತ್ರಿ ಹಿಡ್ಕೊಂಡು ಹೋಗನ ಅಂದ್ರೆ ಒಂದು ಕೈಯಲ್ಲಿ ಛತ್ರಿ ಹಿಡ್ದು ಸೈಕಲ್ಲು ಬ್ಯಾಲೆನ್ಸ್ ಮಾಡೋದು ಸ್ವಲ್ಪ ಕಷ್ಟನೇ..ಕ್ರಮೇಣ ಅಭ್ಯಾಸ ಆಗಿ ಹಳ್ಳೀಲೂ ಪೇಟೇಲೂ ಹಿಂಗೆ ಒಂಟಿ ಕೈ ಬ್ಯಾಲೆನ್ಸಲ್ಲೇ ಸೈಕಲ್ ಹೊಡಿತಿದ್ವಿ.ಆದ್ರೆ ಒಮ್ಮೊಮ್ಮೆ ಬೀಸ್ತಿದ ಅಡ್ಡ ಮಳೆ ಅಲ್ದೇ ಛತ್ರಿ ಜೊತೆ ಸೈಕಲ್ಲನ್ನೂ ತಳ್ಳೋ ಅಷ್ಟು ಜೋರಾಗಿ ಬೀಸ್ತಿದ್ದ ಗಾಳಿ ಮುಂದೆ ನಮ್ಮ ಪ್ರಯತ್ನಗಳೆಲ್ಲಾ ವ್ಯರ್ಥ ಆಗಿ ಮತ್ತೆ ಒಂದರ್ಧ ಪ್ಯಾಂಟಾದ್ರೂ ನೆಂದಿರ್ತಿತ್ತು. ಚಳಿಗಾಲದ ಶನಿವಾರಗಳು ಮತ್ತೆ ಮುಂಜಾನೆ ಕ್ಲಾಸು. ಮತ್ತದೇ ಸೈಕಲ್ಲು. ಮೈ ಕೊರೆಯೋ ಚಳಿಗೆ ಸೈಕಲ್ ತುಳಿತಾ ಹೈಸ್ಕೂಲ್ ಮುಟ್ಟೋ ಹೊತ್ಗೆ ಕೈ ಮೇಲಿನ ಎಲ್ಲಾ ರೋಮಗಳೂ ಎದ್ದು ನಿಂತಿರ್ತಿದ್ವು !! :-)

ಕಾಲೇಜಿಂದು ಮತ್ತೊಂದು ತರ ಕತೆ. ನಮ್ಮ ಕಾಲೇಜು ದಿನಾ ಬೆಳಗ್ಗೆ ಏಳೂವರೆಗೆ ಶುರುವಾಗ್ತಿತ್ತು ! ಅಂದ್ರೆ ಪ್ರತೀದಿನ ಒಂತರಾ ಶನಿವಾರ. ಹಂಗಾಗಿ ಚಳಿಗಾಲ , ಮಳೆಗಾಲಗಳಲ್ದೇ ಇದ್ರೂ ಮುಂಜಾನೆ ಚಳಿಯ ರುಚಿ ದಿನಾ ಸಿಗ್ತಿತ್ತು ನಂಗೆ. ಚಳಿಗಾಲದ ಮುಂಜಾನೆ ಚಳಿಗೆ  ಸೈಕಲ್ ತುಳ್ಯದು ಇರ್ಲಿ ಹ್ಯಾಂಡ್ ಗ್ಲವ್ಸು ಹಾಕಿ ಗಾಡಿ ಓಡ್ಸಬೇಕಂದ್ರೂ ಕೈನಡುಗ್ತಿತ್ತು.ಸಾಗರದ ಕಾಲೇಜು ಮುಗ್ದು ಶಿವಮೊಗ್ಗ ಕಾಲೇಜಿಗೆ ಬಂದ ಮೇಲೆ ಈ ಚಳಿಯ ದಿನಗಳು ಸ್ವಲ್ಪ ಕಡ್ಮೆ ಆದ್ವು ಅನುಸ್ತು. ಅಲ್ಲೂ ನಮ್ಮ ಕಾಲೇಜು ಬೆಳಿಗ್ಗೆ ಏಳೂವರೆಗೆ ಶುರು ಆಗ್ತಿತ್ತು. ಇಲ್ಲಿ ತೀರಾ ಮಳೆ, ಚಳಿಯ ದಿನಗಳಲ್ಲಿ ಕೈ ರೋಮ ಸ್ವಲ್ಪ ನಿಮಿರಿರ್ಬಹ್ದು ಅನ್ನೋದು ಬಿಟ್ರೆ ಹೆಚ್ಚೇನೂ ಚಳಿ-ಮಳೆ ಕಾಡಿಲ್ಲ. ಬೆಂಗಳೂರಿಗೆ ಬಂದ ಮೇಲಂತೂ ಬಿಡಿ.. ಚಳಿ ಅನ್ನೋದೆ ಮರೆತು ಹೋದಂಗಾಗಿತ್ತು. ಬಂದ ಆರು ತಿಂಗಳಲ್ಲಿ  ಒಂದು ದಿನವೂ ಸ್ವೆಟರ್ ಹಾಕಿಲ್ಲ. ಇರೋ ಸ್ವೆಟರನ್ನೂ ಊರಲ್ಲಿಟ್ಟಿದೀನಿ !!    ಅಂತದ್ರಲ್ಲಿ ಇವತ್ತು ಬೆಳಬೆಳಿಗ್ಗೆ ಯಾಕೋ ಚಳಿ ಅನುಸ್ತು. ನಿನ್ನೆ ಚನ್ನಾಗಿ ಮಳೆ ಹೊಡಿದ ಪ್ರಭಾವ ಇರ್ಬೋದೇನು. ಬೆಂಗ್ಳೂರಷ್ಟೇ ಅಲ್ದೇ ತುಮ್ಕೂರು, ಮಂಡ್ಯ ಈ ಬದಿಗೆಲ್ಲಾ ಮಳೆ ಸುರೀತಿರೋ ಪ್ರಭಾವ ಇರ್ಬೋದು.. ನಿನ್ನೆಯಿಂದ ಮೋಡ ಕಟ್ಟೇ ಇರೋದ್ರ ಪ್ರಭಾವ ಇರ್ಬೋದು..ಅಂತ ಮಳೆ-ಚಳಿ ಮುಂಜಾನೇಲಿ ಎದ್ದು ಗೀಸರಿನ ಬಿಸಿ ನೀರು ಹೊಯ್ಕಳ್ತಾ ಇದ್ದಾಗ  ಹಳೆಯ ಹಂಡೆ, ಹೊಡಸಲು, ಮಳೆಗಾಲದ ನೆನ್ಪುಗಳು ಮರುಕಳಿಸಿದ್ವು.. ಹಾಗೇ ಈರೀತಿ ಪದಗಳಾದ್ಚು. ನಿಮ್ಗೂ ಇದನ್ನ ಓದ್ತಾ ಕೆಲ ಬೆಚ್ಚನೆಯ ನೆನ್ಪುಗಳು ಮರುಕಳಿಸಿರ್ಬೋದು.. ಆ ಬೆಚ್ಚನೆಯ ನೆನಪುಗಳ್ನ ಸವೀತಾ, ಬಿಸಿ ಬಿಸಿ ಕಾಫೀನೋ, ಟೀನೋ ಹೀರ್ತಾ, ಚಳೀಗೆ ಪಕೋಡಾನೋ ಬಜೀನೋ ಸವೀತಾ ಹಾಗಾಗಿರಿ. ಶುಭದಿನ :-)

Comments

Submitted by saraswathichandrasmo Wed, 10/31/2012 - 19:50

ಮಳೆಯಲಿ ತೀರ್ಥಹಳ್ಳಿಲಿ ಸುತ್ತಾಡಿದವಳು. ಬಿಸಿ ಬಿಸಿ ಹುರುಳಿಸಾರು, ಹಲಸಿನ‌ ಹಪ್ಪಳ‌ ಗಳ‌ ನೆನಪೂ ಅಯಿತು. ಧನ್ಯವಾದಗಳು ನೆನಪನ್ನು ತಾಜಗೊಳಿಸಿದ್ದಕ್ಕೆ.
Submitted by Prakash Narasimhaiya Thu, 11/01/2012 - 11:40

In reply to by saraswathichandrasmo

ಆತ್ಮೀಯರೇ, ನಿಮ್ಮ ಮಧುರವಾದ ನೆನಪೇ ರಾಜ್ಯದಲ್ಲಿ ಮಳೆಬರಲು ಕಾರಣವೇನೋ ಎನ್ನುವ ಮಾತು ಹಾಗಿರಲಿ, ಮಳೆ ಸಾಕು ಎನ್ನುವಷ್ಟು ಹುಯ್ಯುತ್ತಿದೆ ಚೆನ್ನೈನಲ್ಲಿ. ಸುಂದರವಾದ ಮಲೆನಾಡಿನ ನೆನಪು ಮಳೆಗಾಲದಲ್ಲಿ ಬಲು ಆಪ್ಯಾಯಮಾನ. ನೆನಪಿಸಿದ್ದಕ್ಕಾಗಿ ಧನ್ಯವಾದಗಳು
Submitted by prashasti.p Mon, 03/04/2013 - 19:00

In reply to by Prakash Narasimhaiya

ತಡವಾದ ಪ್ರತಿಕ್ರಿಯಿಗೆ ಕ್ಷಮೆಯಿರಲಿ ಪ್ರಕಾಶರೇ . . ತಮ್ಮ ಮೆಚ್ಚುಗೆ ಅತಿಶಯೋಕ್ತಿಯೇ ಎಂದರೆ ತಪ್ಪಾಗಲಾರದೇನೋ, ಆದರೂ ತಮ್ಮ ಪ್ರೋತ್ಸಾಹಕರ ನುಡಿಗಳಿಗೆ ನಾನು ಆಭಾರಿ. ಚೆನ್ನೈನ ಮಳೆಯ ಬಗ್ಗೆ ನನ್ನ ಗೆಳೆಯರ ಬಗ್ಗೆ ಕೇಳಿ ತಿಳಿದಿದ್ದೇನೆ. ಪ್ರತಿಕ್ರಿಯಿಸೋ ಹೊತ್ತಿಗೆ ಮತ್ತೊಂದು ಮಳೆಗಾಲವೇ ಬರುವ ಹೊತ್ತಾಯಿತೇನೋ :-)
Submitted by prashasti.p Mon, 03/04/2013 - 18:58

In reply to by saraswathichandrasmo

ಮೆಚ್ಚುಗೆಗೆ ಧನ್ಯವಾದಗಳು ಸರಸ್ವತಿ ಅವರೆ. ಮಲೆನಾಡಿಗೂ ಮಳೆಗಾಲಕ್ಕೂ ಅದೆಂತಹ ನಂಟೋ ಗೊತ್ತಿಲ್ಲ. ಒಂದು ನೆನಪಾದೊಡನೆಯೇ ಮತ್ತೊಂದೂ ನೆನಪಾಗಿ ಹೋಗುತ್ತದೆ :-)