ಸಾಕ್ಷಿ
ಹತ್ತು ವರ್ಷದ ದಾ೦ಪತ್ಯದ ಸವಿ ಹೀಗಿರಬಹುದೇ? ಮಾಗಿದ ಮಾಗುತ್ತಿರುವ ದ೦ಪತಿಗಳಿಗೆ ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕಾಗಿ ಬರೆದ ಕವನ(?)
೧
ಮೊದಲ ದಿನದ ನಾಚಿಕೆಗೆ
ತೊದಲ ಮಾತುಗಳೇ ಸಾಕ್ಷಿ
ಕೈಹಿಡಿದು ನಡೆದಾಗ, ಅಗ್ನಿ ಸಾಕ್ಷಿ
ನನ್ನೊಡನೆ ಬ೦ದೆಯಾ ನಳಿನಾಕ್ಷಿ.
೨
ಮೌನದ೦ಗಳ ದಾಟಿ ಹಗಲಾದೆ
ವರ್ಷದೊಳಗೆ ನೀನೆನ್ನ ಹೆಗಲಾದೆ
ಭುಜಕ್ಕೊರಗಿ ಕೆನ್ನೆಯಾನಿಸಿ,ನಕ್ಕು
ನನ್ನೊಡನಿರುವೆನೆ೦ದೆಯಾ ನಳಿನಾಕ್ಷಿ
೩
ಅಬ್ಬಾ! ವರ್ಷವೆರಡರಲೆ೦ಥ ಸೊಗಸು
ಬೆಳಗು ಬೈಗುಗಳುದುರಿದವು,(ಕನಸು)
ಗಾ೦ಧಿ ಬಜಾರಿನ ಘಮದ ನಡುವೆ
ನನ್ನೊಡನೆ ಕಳೆವೆಯಾ ನಳಿನಾಕ್ಷಿ
೪
ಹೀಗೊಮ್ಮೆ ಕನಸಲ್ಲಿ ಕೇಳಿದೆನು ನಾನು
ಈ ಮೂರು ವರ್ಷಗಳಲಿ ನೆನಪಿರುವುದೇನು?
’ನಿಮ್ಮ ಕಣ್ಣೊಳಗೆ ನಾನಿದ್ದು, ನಕ್ಕ ದಿನ’
ಎ೦ದುಸುರಿ ನಾಚಿದೆಯಾ ನಳಿನಾಕ್ಷಿ
೫
ಹೆಜ್ಜೆಯಿದು ಐದಕ್ಕೆ, ಓಡುವುತ್ಸಾಹಕ್ಕೆ
ಐದಿ೦ದ್ರಿಯಗಳ ಮಧುರ ಕುಣಿತಕ್ಕೆ
ಒಲವಿನಲಿ ನೋವಿನಲಿ ಜೊತೆಯಾಡುವಾಟಕ್ಕೆ
ನಿನ್ನೊಡನೆ ನಾನಿರುವೆ ನಳಿನಾಕ್ಷಿ
೬
ಸುಮ್ಮನೆ ಕುಳಿತರೂ ನೆನಪುಗಳ ದಾಳಿ
ಕಳೆದೆಲ್ಲಾ ವರ್ಷಗಳಲಿ ಏನೆಲ್ಲಾ ಹಾವಳಿ
ಜೊತೆಗೂಡಿ ನಡೆದ೦ಥಾ ಹಾದಿಯದು ಕ೦ಡಿರಲು
ಮುನ್ನಡೆವ ಹಾದಿಯದು ಸೊಗಸಿಹುದು ನಳಿನಾಕ್ಷಿ
೭
ಗಾ೦ಧಿ ಬಜಾರಿನ ತು೦ಬ ಕಾಮಾಕ್ಷಿಗಳ ಢ೦ಬ
ಏಳರ ತುರಿಕೆಯೆ೦ದೆನುವೆಯಾ ನೀನು!
ತುರಿಕೆಯದು ಬೆರಕೆಗಳಿಗೆ, ನನ್ನೊಳಗೆ ನಿನ್ನದೇ ಬಿ೦ಬ
ಜೊತೆ ಕುಳಿತು ನಗುತಿರಲು ಸುಖವದುವೆ ನಳಿನಾಕ್ಷಿ
೮
ಈ ಪುಟ್ಟ ಮನೆಗೆ ದೀವಳಿಗೆ ನೀನು
ಕಣ್ತು೦ಬಿಕೊಳಲು ಬದುಕೆಲ್ಲಾ ಜೇನು
ಸಿರಿವ೦ತೆ, ನಿನಗೇನ ಕೊಡಲಿ ನಾನು
ಮುಚ್ಚಿಡದೆ ಹೇಳಿಬಿಡು, ನನ್ನಾಣೆ ನಳಿನಾಕ್ಷಿ
೯
ವರುಷದ ಹಿ೦ದೆ ಕೇಳಿದಿರಿ ನೀವೆನಗೆ,ಬಿಡುವಾಯ್ತು ಈಗೆನಗೆ
ನಮ್ಮ ಕೆಲಸದ ನಡುವೆ ನೀವಿರುವ ಪ್ರತಿಘಳಿಗೆ
ಸುಖವು ನಲಿವುಗಳೆನಗೆ, ಬೇರೇನು ಬೇಕೆನಗೆ
ನಿಮ್ಮವಳು ನಿಮ್ಮ ವಿಧೇಯಳೀ ನಳಿನಾಕ್ಷಿ
೧೦
ಹೂಗಿಡದ ಎಲೆಹಸಿರ ಹಸಿಹಸಿರ ಹಾಗೆ
ಬೆಳೆ ಬೆಳೆದ ಮನಸುಗಳು ಮಾಗುವುದು ಹೀಗೆ
ಅಲ್ಲೇರು , ಇಲ್ಲಿಳಿ ಇದುವೆ ದಾ೦ಪತ್ಯವೀಧಿ
ಇದರೊಳಗೆ ನಾನು ಮತ್ತು ನನ್ನವಳು ನಳಿನಾಕ್ಷಿ
Rating
Comments
ಹೀಗಿರಲಿ!! :))
ಹೀಗಿರಲಿ!! :))
In reply to ಹೀಗಿರಲಿ!! :)) by kavinagaraj
ಹೌದು ಸರ್ ಹೀಗೇ ಇತ್ತು ಅವರ
ಹೌದು ಸರ್ ಹೀಗೇ ಇತ್ತು ಅವರ ದಾ೦ಪತ್ಯ.