ಕೆಳದಿ ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'ದಲ್ಲಿ ವಿಜಯನಗರದ ಅರಸರ ವಿವರ

ಕೆಳದಿ ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'ದಲ್ಲಿ ವಿಜಯನಗರದ ಅರಸರ ವಿವರ

     ವಿಜಯನಗರ ಸಂಸ್ಥಾಪನೆಗೆ ಕಾರಣಕರ್ತರಾದ ವಿದ್ಯಾರಣ್ಯರ ಕುರಿತು 'ದೇಶ ಮತ್ತು ಧರ್ಮರಕ್ಷಕ ವಿದ್ಯಾರಣ್ಯ' ಎಂಬ ಲೇಖನದಲ್ಲಿ ವಿವರವಾಗಿ ಬರೆದಿರುವುದರಿಂದ ಈ ಲೇಖನದಲ್ಲಿ ಅವರ ಕುರಿತು ಸಂಕ್ಷಿಪ್ತವಾಗಿ ಉಲ್ಲೇಖಿಸುವೆ. ಸುರಾಜ್ಯ ಸ್ಥಾಪನೆಗೆ ಯೋಗ್ಯ ವ್ಯಕ್ತಿಗಳ ಆಗಮನಕ್ಕಾಗಿ ಕಾಯುತ್ತಿದ್ದ ವಿದ್ಯಾರಣ್ಯರ ಆಶಯಕ್ಕೆ ತಕ್ಕಂತೆ ಹರಿಹರ ಬುಕ್ಕರೆಂಬ ಬಡ ಕ್ಷತ್ರಿಯರು ದಕ್ಷಿಣ ರಾಜ್ಯಕ್ಕೆ ಬಂದು ಕುರುಬರಲ್ಲಿ ಬಾಂಧವ್ಯ ಬೆಳೆಸಿ ವಿವಾಹ ಮಾಡಿಕೊಂಡು ಸುಖವಾಗಿದ್ದರೆಂದು 'ಕೆಳದಿನೃಪ ವಿಜಯ'ದಲ್ಲಿ ಹೇಳಲಾಗಿದೆ. ಕಮ್ಮಟದುರ್ಗದ ಅರಸ ಕಂಪಿಲರಾಯನ ಅಳಿಯನೂ, ಸಂಸ್ಥಾನದ ಕೋಶಾಧಿಕಾರಿಯೂ ಆಗಿದ್ದ ಸಂಗಮದೇವನ ಮಕ್ಕಳೇ ಆ ಹರಿಹರ ಮತ್ತು ಬುಕ್ಕರು. ಮಹಮದ್ ಬಿನ್ ತುಘಲಕ್ ರಾಜ್ಯವನ್ನು ಆಕ್ರಮಿಸಿ ಅಲ್ಲಿನ ನಿವಾಸಿಗಳನ್ನು ನಿರ್ದಯವಾಗಿ ಮತ್ತು ಬರ್ಬರವಾಗಿ ಹತ್ಯೆಗೈದು, ಅರಸೊತ್ತಿಗೆಯಲ್ಲಿ ಉಳಿದ ಹರಿಹರ, ಬುಕ್ಕರೂ ಸೇರಿದಂತೆ ಹನ್ನೊಂದು ಜನರನ್ನು ಸೆರೆ ಹಿಡಿದು ಡೆಲ್ಲಿಗೆ ಕರೆದೊಯ್ದು ಸೆರೆಮನೆಯಲ್ಲಿರಿಸಿದ್ದ. ತುಘಲಕ್ ದರ್ಬಾರಿನಿಂದ ಅವನ ರಾಜ್ಯದಲ್ಲಿ ಅರಾಜಕತೆಯುಂಟಾದಾಗ ಸೆರೆಮನೆಯಲ್ಲಿದ್ದ ಯುವಕರನ್ನು ಬಿಡುಗಡೆಗೊಳಿಸಿ ತನ್ನ ಸೈನ್ಯಕ್ಕೆ ಸೇರಿಸಿಕೊಂಡು, ದಕ್ಷಿಣ ಭಾಗದಲ್ಲಿ ಮೂಡಿದ್ದ ಅಶಾಂತಿಯನ್ನು ಶಮನಗೊಳಿಸುವ ಪ್ರಯತ್ನವಾಗಿ ಸೈನ್ಯದೊಂದಿಗೆ ದಕ್ಷಿಣಕ್ಕೆ ಕಳಿಸಿದ ಸಂದರ್ಭವನ್ನು ಉಪಯೋಗಿಸಿಕೊಂಡು, ಹರಿಹರ ಮತ್ತು ಬುಕ್ಕರು ತಪ್ಪಿಸಿಕೊಂಡು ವಿದ್ಯಾರಣ್ಯರಲ್ಲಿ ರಕ್ಷಣೆ ಬಯಸಿ ಬಂದಿದ್ದರು. ಹರಿಹರ, ಬುಕ್ಕರನ್ನು ಇಸ್ಲಾಮ್ ಮತಕ್ಕೆ ಮತಾಂತರಿಸಲಾಗಿತ್ತೆಂದೂ, ವಿದ್ಯಾರಣ್ಯರು ಅವರನ್ನು ಮರಳಿ ಮಾತೃಧರ್ಮಕ್ಕೆ ಸೇರಿಸಿದರೆಂದೂ ಐತಿಹ್ಯವಿದೆ. ಈ ವಿಚಾರ ಲಿಂಗಣ್ಣನ ಕಾವ್ಯದಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ. ಬದಲಾಗಿ ಹಿರಿಯನಾದ ಹರಿಹರನಿಗೆ ಪಂಪಾಕ್ಷೇತ್ರದಲ್ಲಿದ್ದ ವಿದ್ಯಾರಣ್ಯರನ್ನು ಆಸ್ರಯಿಸಿದರೆ ಮಹದೈಶ್ವರ್ಯ ಪ್ರಾಪ್ತಿಯಾಗುವ ಹಾಗೆ ಒಂದು ಕನಸು ಬಿದ್ದು, ಆ ಕನಸಿನ ಅಭಿಪ್ರಾಯ ತಿಳಿಯಲು ವಿದ್ಯಾರಣ್ಯರಲ್ಲಿಗೆ ಸೋದರರು ಹೋಗುತ್ತಾರೆಂದು ಹೇಳಲಾಗಿದೆ. ವಿದ್ಯಾರಣ್ಯರ ಸೂಚನೆ ಅನುಸರಿಸಿ, ಹರಿಹರ, ಬುಕ್ಕರು ಕೆಲವು ದೇಶಪ್ರೇಮಿ ಯುವಕರನ್ನು ಜೊತೆ ಮಾಡಿಕೊಂಡು ಜಾಣತನದಿಂದ ತುಘಲಕನ ವಶದಲ್ಲಿದ್ದ ಆನೆಗೊಂದಿಯ ಅರಮನೆ ಪ್ರವೇಶಿಸಿ ತುಘಲಕನ ಪರವಾಗಿ ಆಡಳಿತ ನಡೆಸುತ್ತಿದ್ದ ಮಲಿಕ್ ನಾಯಬ್ ಪಾನಮತ್ತನಾಗಿದ್ದ ಸಂದರ್ಭ ಉಪಯೋಗಿಸಿಕೊಂಡು, ಅವನನ್ನೇ ಸೆರೆಹಿಡಿದು ರಾಜ ಜಂಬುಕೇಶ್ವರರಾಯನನ್ನು ಬಂಧಮುಕ್ತಗೊಳಿಸಿದುದರ ಉಲ್ಲೇಖ ಸಹ ಈ ಕಾವ್ಯದಲ್ಲಿ ಬರುವುದಿಲ್ಲ. ಯಾವುದೇ ರಕ್ತಪಾತವಿಲ್ಲದೆ ಆನೆಗೊಂದಿ ಸ್ವತಂತ್ರವಾಯಿತು. ಅರಮನೆಯ ಮೇಲೆ ಪುನಃ ವರಾಹಧ್ವಜ ಹಾರಾಡಿತು. ಲಿಂಗಣ್ಣನ ಈ ಐತಿಹಾಸಿಕ ಕಾವ್ಯದಲ್ಲಿ ಕೆಳದಿ ಅರಸರ ಇತಿಹಾಸಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದರಿಂದ ಕಥಾ ಸಂದರ್ಭಕ್ಕನುಗುಣವಾಗಿ ಮಾತ್ರ ಪೂರಕವಾದ ವಿಚಾರಗಳನ್ನು ಸೂಕ್ಷ್ಮ ಮತ್ತು ಸಂಕ್ಷಿಪ್ತವಾಗಿ ಹೇಳಿರುವುದು ಇದಕ್ಕೆ ಕಾರಣವಾಗಿದೆ. ಕೆಳದಿ ಸಂಸ್ಥಾನವು ವಿಜಯನಗರದ ಸಾಮಂತ ಸಂಸ್ಥಾನವಾಗಿ ಪ್ರಾರಂಭವಾದರೂ, ಕೆಲವೇ ದಶಕಗಳ ನಂತರ ವಿಜಯನಗರ ಸಾಮ್ರಾಜ್ಯ ಪತನ ಹೊಂದಿದ್ದರಿಂದ ಸ್ವತಂತ್ರ ಸಂಸ್ಥಾನವಾಗಿ, ಕರ್ನಾಟಕದ ಹೆಮ್ಮೆಯ ಸಂಸ್ಥಾನವಾಗಿ ಮೆರೆದಿದ್ದುದು, ವಿಜಯನಗರದ ಪರಂಪರೆಯನ್ನು ಮುಂದುವರೆಸಿದುದು ಈಗ ಇತಿಹಾಸ.

     ನಂತರ ವಿದ್ಯಾರಣ್ಯರು ಪಂಪಾಕ್ಷೇತ್ರದಲ್ಲಿ ಒಂದು ಸೂಕ್ತ ಸ್ಥಳವನ್ನು ಆರಿಸಿ ಹರಿಹರ, ಬುಕ್ಕರಿಂದ ಒಂದು ಪಟ್ಟಣವನ್ನು ನಿರ್ಮಿಸಿದರು. ಹರಿಹರ ಬುಕ್ಕರು ಆ ನಗರಕ್ಕೆ ವಿದ್ಯಾನಗರವೆಂದು ಹೆಸರಿಟ್ಟಿದ್ದರೂ, ವಿದ್ಯಾರಣ್ಯರ ಅಪೇಕ್ಷೆಯಂತೆ ಮುಂದೆ ಅದು ವಿಜಯನಗರವೆಂದೇ ಪ್ರಖ್ಯಾತವಾಯಿತು. ಆ ಸ್ಥಳದ ಮಹಿಮೆ ಕುರಿತು ಕವಿ ಹೇಳಿರುವುದು ಹೀಗೆ: 'ಪೂರ್ವದೊಳ್ ಸೂರ್ಯವಂಶಜನಾದ ತ್ರಿಶಂಕು ಮಹಾರಾಯಂ ಪಂಪಾಕ್ಷೇತ್ರಕ್ಕೆ ಬಂದು ಈ ವಿರೂಪಾಕ್ಷಲಿಂಗಂ ಪ್ರಾದುರ್ಭವಲಿಂಗವೋ ಪ್ರತಿಷ್ಠಾಲಿಂಗವೋ ಯೆಂದು ಕೇಳಿದಲ್ಲಿ ಈ ಲಿಂಗಂ ಜ್ಯೋತಿರ್ಮಯವಾದ ಲಿಂಗಂ, ಈ ಲಿಂಗದ ಮಹಿಮೆಯಂ ಪೇಳ್ವುದಕ್ಕೆ ಬ್ರಹ್ಮದೇವರಿಗಾದರೂ ಅಸಾಧ್ಯಮೆಮ್ಮಪಾಡೇನೆನಲಾಗಿ ಆ ಮಾತಂ ಕೇಳ್ದು, ಆ ತ್ರಿಶಂಕು ಮಹಾರಾಯಂ ಪ್ರತಿಷ್ಠಾಲಿಂಗವೋ ಯೆಂದು ಕೇಳ್ದ ದೋಷನಿವೃತ್ತಿಗೋಸುಗಂ ಕೃಷ್ಣವೇಣೀ ನದೀತೀರಮಾರಭ್ಯ ಸೇತುಪರ್ಯಂತಂ ಮೂರುವರೆ ಕೋಟಿರಾಜ್ಯವನೀ ವಿರೂಪಾಕ್ಷದೇವರ್ಗೆ ಧಾರೆಯನೆರೆದನೆಂದು ಸ್ಥಳದವರ್ಪೇಳಲ್ ಆ ಮಾತಂ ಕೇಳ್ದಾ ವಿದ್ಯಾರಣ್ಯರ್ ಹರಿಹರಬುಕ್ಕರಂ ಕರೆದು ಈ ರಾಜ್ಯಕ್ಕೆಲ್ಲಂ ವಿರೂಪಾಕ್ಷಸ್ವಾಮಿಯೇ ಕರ್ತಂ, ನೀಂ ಆ ದೇವರ ಭಕ್ತರಾಗಿ ವರ್ತಿಸುತ್ತುಂ ಶ್ರೀ ವಿರೂಪಾಕ್ಷನೆಂದೊಪ್ಪವಂ ಹಾಕಿ ನಡೆಕೊಂಡು ಸದ್ಧರ್ಮದಿಂ ರಾಜ್ಯವನಾಳಿಕೊಂಡಿರ್ಪುದೆಂದು ಕಟ್ಟಳೆಯಂ ರಚಿಸಿ ಆ ಹರಿಹರಗೆ ಹರಿಹರರಾಯನೆಂದು ಪೆಸರಿಟ್ಟು ವಿದ್ಯಾನಗರಮೆಂಬ ಪಟ್ಟಣಮಂ ನಿರ್ಮಾಣಂ ಮಾಡಿಸುವ ಕಾಲದಲ್ಲಿ. . '  ಈ ನಗರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡುವ ಸಂದರ್ಭದಲ್ಲಿ ದಾಸಯ್ಯನೊಬ್ಬ ಊದಿದ ಶಂಖಧ್ವನಿಯಿಂದಾಗಿ ಮುಹೂರ್ತ ವ್ಯತ್ಯಾಸವಾಯಿತೆನ್ನಲಾಗಿದೆ. ಇದರಿಂದಾಗಿ ಕೆಲವು ವರ್ಷಗಳ ನಂತರ ಈ ನಗರವು ತುರುಕರ ಅಧೀನಕ್ಕೊಳಪಡುವುದೆಂದು ವಿದ್ಯಾರಣ್ಯಾತ್ಮಕ ಕಾಲಜ್ಞಾನವೆಂದು ಗ್ರಂಥ ರಚಿಸಿದರೆನ್ನಲಾಗಿದೆ. ವಿದ್ಯಾರಣ್ಯರು ಶಾಲಿವಾಹನಶಕ ೧೨೫೮ರಲ್ಲಿ (ಕ್ರಿ.ಶ. ೧೩೩೬) ಹರಿಹರರಾಯನಿಗೆ ವಿದ್ಯಾನಗರಿಯ ರತ್ನಸಿಂಹಾಸನದಲ್ಲಿ ಕೂರಿಸಿ ಪಟ್ಟಾಭಿಷೇಕ ಮಾಡುವುದರೊಂದಿಗೆ ವಿಜಯನಗರ ಸಾಮ್ರಾಜ್ಯದ ಉದಯವಾಯಿತು.

     ರಾಯ ಸಂಸ್ಥಾನವೆಂದೇ ಪ್ರಖ್ಯಾತವಾಗಿದ್ದ ವಿಜಯನಗರ ಸಂಸ್ಥಾನದ ಆಳ್ವಿಕೆ ೨೩೨ ವರ್ಷಗಳ ಕಾಲ ನಡೆದು ೧೩ ಅರಸರುಗಳು ಆಳಿದ್ದು, ಅವರ ವಂಶ ಪರಂಪರೆಯನ್ನು 'ಹಬುಹೋವಿಬುದೇವಿಮಾರಾವಿ' ಎಂದು ಸಂಕೇತಾಕ್ಷರದಲ್ಲಿ ಕವಿ ವಿವರಿಸಿರುವುದು ಹೀಗೆ:     

ಆ ರತ್ನಸಿಂಹಾಸನವನಾಳ್ದ ರಾಯರ ವಂಶ ಪರಂಪರಾವಿವರಣಂ-

ಶ್ಲೋ || ಹಬುಹೋವಿಬುದೇರವದೇವಿಮಾರಾವಿಸಂಸ್ಥಿತಾಃ |

ತ್ರಯೋದಶ ಮಹಿಪಾಲಾ ರತ್ನ ಸಿಂಹಾಸನಾಧಿಪಾಃ ||

ದ್ವಾತ್ರಿಂಶದುತ್ತರಾನೇತೇ ದ್ವಿಶತಾಬ್ದಾನ್ ಕ್ಷಿತೌಸ್ಥಿತಾಃ ||

     ನಂತರದಲ್ಲಿ, ಪ್ರೌಢರಾಯ ೧೨ ವರ್ಷ, ವೀರನರಸಿಂಹರಾಯ ೧೦ ವರ್ಷ, ಆಮೇಲೆ ಸಾಳುವ ನರಸಿಂಹ ೧೨ ವರ್ಷ, ಅಚ್ಯುತ ೩ ವರ್ಷ, ಸದಾಶಿವ ೨ ವರ್ಷ, ಕೃಷ್ಣ ೪೦ ವರ್ಷ, ರಾಮರಾಜ ೨೪ ವರ್ಷ - ಈ ಏಳು ಮಂದಿ ರಾಜರು ರತ್ನಸಿಂಹಾಸನಾಧೀಶ್ವರರಾಗಿದ್ದರೆಂದು ಕವಿ ಹೇಳಿದ್ದಾನೆ.      

ಶ್ಲೋ|| ಪ್ರೌಢೋದ್ವಾದಶ ವರ್ಷಾಣಿ ದಶ ವೀರನೃಸಿಂಹರಾಟ್

ತತಸ್ಸಾಳ್ವನೃಸಿಂಹಾಖ್ಯೋ ದ್ವಾದಶ ತ್ರಿಸ್ತತೋಚ್ಯುತಃ ||

ಚತ್ವಾರಿಂಶತ್ತತಃ ಕೃಷ್ಣಸ್ತತೋ ದ್ವೇ ಚ ಸದಾಶಿವಃ

ಚತುರ್ವಿಂಶತಿ ವರ್ಷಾಣಿ ರಾಮರಾಜೋ ಮಹೀಪತಿಃ

ಏತೇ ಸಪ್ತ ಮಹಿಪಾಲಾ: ರತ್ನಸಿಂಹಾಸನೇಶ್ವರಾಃ ||

     ಈ ರಾಮರಾಯ ರಾಜ್ಯವಾಳುತ್ತಿದ್ದ ಸಂದರ್ಭದಲ್ಲಿ ಬಿಜಾಪುರ, ಭಾಗಾನಗರ ಮತ್ತು ಅಹಮದ್ ನಗರಗಳ ಬಾದಶಹರುಗಳು ಒಂದಾಗಿ ಮೋಸದಿಂದ ದಾಳಿ ಮಾಡಲಾಗಿ ವಿದ್ಯಾನಗರಿ ವಿಸ್ಖಲಿತವಾಯಿತು. ರಾಮರಾಯನ ಅಂತ್ಯದ ನಂತರ ಅಲ್ಪ ಸ್ವಲ್ಪ ಭೂಮಿ ಮತ್ತು ಸೈನ್ಯದೊಂದಿಗೆ ವೆಂಕಟಪತಿರಾಯ ೩ ವರ್ಷ, ಶ್ರೀರಂಗರಾಯ ೫ ವರ್ಷ ಆಳಿ ನಂತರ ಅಲ್ಲಿ ನಿಲ್ಲಲಾರದೆ ಪೆನುಗೊಂಡೆಗೆ ಹೋಗಿ ರಾಮರಾಯನ ಮಕ್ಕಳು ಅಲ್ಲಿ ಆಳ್ವಿಕೆ ನಡೆಸಿದರು. ಶ್ರೀರಂಗರಾಯ ೫ ವರ್ಷ, ವೆಂಕಟಪತಿರಾಯ ೭ ವರ್ಷ, ರಾಮದೇವರಾಯ ೬ ವರ್ಷ, ಮುದ್ದುವೆಂಕಟಪತಿರಾಯ ೫ ವರ್ಷ, ಶ್ರೀರಂಗರಾಯ ೨೭ ವರ್ಷ ಆಳಿದ್ದು, ಈ ಪೀಳಿಗೆ ಇಲ್ಲಿಗೆ ಸಮಾಪ್ತವಾಯಿತೆನ್ನಲಾಗಿದೆ.

 

Comments

Submitted by ಗಣೇಶ Thu, 03/14/2013 - 00:15

ಹಬುಹೋವಿಬುದೇರವದೇವಿಮಾರಾವಿಸಂಸ್ಥಿತಾಃ |ತ್ರಯೋದಶ ಮಹಿಪಾಲಾ ರತ್ನ ಸಿಂಹಾಸನಾಧಿಪಾಃ || ಕವಿನಾಗರಾಜರೆ, ನೆನಪಿಡಲು ಉತ್ತಮ ಶ್ಲೋಕ.. ಆದರೆ ವಿಜಯನಗರದ ಅರಸರ ಪಟ್ಟಿಗೂ ಇದಕ್ಕೂ ವ್ಯತ್ಯಾಸ ಕಾಣಿಸುವುದು. http://hampi.in/his… Harihara Raya I, Bukka Raya I,Harihara Raya II, Virupaksha Raya, Bukka Raya II, Deva Raya I, Ramachandra Raya,Vira Vijaya Bukka Raya, Deva Raya II, Mallikarjuna Raya, Virupaksha Raya II, Praudha Raya >>>ಶ್ರೀರಂಗರಾಯ ೨೭ ವರ್ಷ ಆಳಿದ್ದು,...ಶ್ರೀರಂಗ ರಾಯ೩ -೧೬೪೨-೧೬೪೬ ಎಂದು ವಿಕೀಪೀಡಿಯಾದಲ್ಲಿದೆ.
Submitted by kavinagaraj Thu, 03/14/2013 - 08:33

In reply to by ಗಣೇಶ

ನಿಜ ಗಣೇಶರೇ. ನಾನೂ ಇದನ್ನು ಗಮನಿಸಿರುವೆ. 17ನೆಯ ಶತಮಾನದ ಕವಿಲಿಂಗಣ್ಣ ಸಾಂದರ್ಭಿಕವಾಗಿ ವಿಜಯನಗರದ ಅರಸರ ಪ್ರಸ್ತಾಪ ಮಾಡಿದ್ದು, ನೀವು ಹೇಳಿದಂತೆ ಸ್ವಲ್ಪ ವ್ಯತ್ಯಾಸವಿದೆ. ಹರಿಹರ, ಬುಕ್ಕರು ಕುರುಬರಲ್ಲಿ ನೆಂಟಸ್ತನ ಮಾಡಿದ ವಿಷಯ ಹೊಸದಾಗಿದೆ. ಈ ಕುರಿತು ಇತರ ಮೂಲಗಳಲ್ಲಿ ಮಾಹಿತಿ ಪರಿಶೀಲನೆಗೆ ಸಿಗಲಿಲ್ಲ. ಪ್ರತಿಕ್ರಿಯೆಗೆ ವಂದನೆಗಳು.