ತಿಥಿ-ತರ್ಪಣ ಬಗ್ಗೆ ಒಂದು ಲಘು ಹರಟೆ !
ವ್ಯಾಟಿಕನ್ ಸಿಟಿಯಲ್ಲಿ ಕರಿಹೊಗೆ ಬಿಳಿಹೊಗೆ ಬಗ್ಗೆ ಮಾತನಾಡುತ್ತಿರುವ ಈ ಶುಭವೇಳೆಯಲ್ಲಿ, ನಾವು ನಮ್ಮೂರಿನ ಹೊಗೆ ಹಾಕಿಸಿಕೊಳ್ಳುವ ಬಗ್ಗೆ ಸ್ವಲ್ಪ ಮಾತನಾಡುವ ...
ಗ್ರಂಧಿಗೆ ಅಂಗಡಿಗೆ ಹೋಗಿದ್ದೆ ... ತುಂಬಾ ರಷ್ ಇತ್ತು ... ಅಂಗಡಿ ಹೊರಗೆ ಬೋರ್ಡ್ ಬೇರೆ ... "ಇಂದಿಡದಿದ್ದಲ್ಲಿ ಪಿಂಡ, ನಿಮ್ಮ ಬಾಳೇ ದಂಡ" ಅಂತೇನೂ ಅಲ್ಲ ... ಅಷ್ಟು ಕನ್ನಡ ನಮ್ಮ ಕನ್ನಡ ನಾಡಿನಲ್ಲಿ ಬರೆದಲ್ಲಿ ಯಾರಿಗೆ ಅರ್ಥವಾದೀತು? ಅವನು ಬೋರ್ಡ್ ಹಾಕಿದ್ದು "ಇನ್ನೂರು ಗ್ರ್ಯಾಂ ಕರಿ ಎಳ್ಳಿಗೆ ಐವತ್ತು ಗ್ರ್ಯಾಂ ಬಿಳಿ ಎಳ್ಳು ಫ್ರೀ" ಅಂತ ... ಸಂಕ್ರಾಂತಿಗೆ ತರಿಸಿದ್ದ ಬಿಳೀ ಎಳ್ಳು ಹುಳು ಹಿಡಿದಿತ್ತು ಅಂತ ಈ ನಾಟಕ !
ಇಷ್ಟಕ್ಕೂ ಅಂಗಡಿಯಲ್ಲಿ ರಷ್ ಯಾಕೆ ಅಂದಿರಾ? ನಾಳೆ ಮಹಾಲಯ ....
ಮಹಾಲಯ ಅಮಾವಾಸ್ಯೆಯ ದಿನ, ಸತ್ತವರಿಗೆ (ಇದ್ದವರಿಗೆ ಅಲ್ಲ) ತರ್ಪಣ ನೀಡಿದಲ್ಲಿ ಪಿತೃದೇವತೆಗಳು ಲೈನಾಗಿ ನಿಂತು ಆಶೀರ್ವಾದ ಮಾಡುತ್ತಾರೆ ಅನ್ನೋ ಬಲವಾದ ನಂಬುಗೆಯಿಂದ ಎಳ್ಳು ನೀರು ಬಿಡುವ ಪದ್ದತಿ. ತರ್ಪಣ ಕೊಡುವ ಎಲ್ಲರೂ ಈ ಪೈಕಿಗೆ ಸೇರದಿದ್ದರೂ, ನಾ ಕಂಡಂತೆ, ಇದ್ದಾಗ ಕಡೆಗಣ್ಣಿನಿಂದಲೂ ನೋಡದೆ, ಹೋದಾಗ ಲೀಟರ್’ಗಟ್ಟಲೇ ಕಣ್ಣೀರು ಸುರಿಸಿ, ನೋಡುವರ ಕಣ್ಣಿಗೆ ದು:ಖಿಗಳು ಎಂದು ತೋರ್ಪಡಿಸಲು ತಲೆಬೋಳಿಸಿಕೊಂಡು, ಹದಿನೈದು ದಿನಗಳೂ ತಣ್ಣೀರು ಸ್ನಾನ ಮಾಡಿ, ತಮಗೆ ಬೇಕಾದ ಅಡುಗೆಯನ್ನು ಸತ್ತವರ ಹೆಸರಲ್ಲಿ ಉಂಡು, ಸಮೀಪದ ಬಂಧುಗಳಿಗೇ ದಾನ ಧರ್ಮಗಳ ಮಾಡುವ ಹಲವಾರು ಮಂದಿ, ಇದ್ದಾರೆ.
ಹೋಗಲಿ ಬಿಡಿ, ಒಟ್ಟಿನಲ್ಲಿ ಅಂಗಡಿಯಲ್ಲಿ, ವಾರ್ಷಿಕ virtual ದರ್ಶನಕ್ಕೆ ಅನುವಾಗಲು ನೂಕು ನುಗ್ಗಲು ...
ಅದೇನೋ ಸರಿ .. ಊರಲ್ಲೆಲ್ಲ ನಾಯಿಕೊಡೆಗಳಂತೆ ತಲೆ ಎತ್ತಿರೋ ಮಾಲ್’ಗಳು, ಬಣ್ಣ ಬಣ್ಣದ ಪ್ಯಾಕೆಟ್’ಗಳಲ್ಲಿ ತುಂಬಿಟ್ಟ ಫಳ ಫಳ ಹೊಳೆವ ನೈಲಾನ್ ಎಳ್ಳು ಸಿಗುವ ಅಂಗಡಿ ಬಿಟ್ಟು, ಹುಳುಕು ಹಿಡಿದಿರಬಹುದಾದ ಅಲ್ಪ ಮಟ್ಟಿಗೆ ಕಂದು ಬಣ್ಣಕ್ಕೆ ತಿರುಗಿರುವ ಕರಿ ಎಳ್ಳು ಕೊಂಡೊಯ್ಯಲು ಇದೇ ಅಂಗಡಿ ಆಗಬೇಕೇ? ಅಲ್ಲೇ ಇರೋದು ಪಾಯಿಂಟು. ಮಹಾಲಯಕ್ಕೆ ಗ್ರಂಧಿಗೆ ಅಂಗಡಿಯಿಂದ ತಂದ ಎಳ್ಳೇ ಶೇಷ್ಟವಂತೆ ! ಹಾಗಂತ ಅಂಗಡಿ ಶೆಟ್ಟರೇ ತಮ್ಮ ಸ್ವಂತ ಬಾಯಿಂದ ಉವಾಚಿಸಿದ್ದರು. ಬೇರೆ ಅಂಗಡಿಯದಾದರೆ ಇತರೆ ಪದಾರ್ಥಗಳೊಂದಿಗೆ ಬೆರೆತು ಮೈಲಿಗೆ ಆಗಿರುವ ಸಂಭವನೀಯತೆ ಹೆಚ್ಚು ಅಂತ.
ರಷ್ ಇತ್ತು ಅಂತ ನನಗೆ ಹೇಗೆ ಗೊತ್ತು ಅಂದಿರಾ? ನಾನೂ ಅಂಗಡಿಗೆ ಹೋಗಿದ್ದೆ. ಇಪ್ಪತ್ತೈದು ಗ್ರ್ಯಾಂ ಎಳ್ಳು ಕೊಂಡೆ. ನಾ ಕೊಂಡ ಇಪ್ಪತ್ತೈದು ಗ್ರ್ಯಾಂ ಎಳ್ಳನ್ನು ಕಂಡು ನಾನೇನೋ ನಾಸ್ತಿಕ ಎಂಬಂತೆ ಒಂದು ಪ್ರಾಣಿಯಂತೆ ಕಂಡ ಜನರನ್ನು ಕಂಡು, ಇನ್ನೊಂದಿಪ್ಪತ್ತೈದು ಗ್ರ್ಯಾಂ ಎಳ್ಳು ಕೊಂಡು, ಸ್ಪಾಟ್’ನಲ್ಲೇ ಅವರೆಲ್ಲರಿಗೂ ತರ್ಪಣ ಕೊಡುವ ಮನದಲ್ಲಿ ಮೂಡಿದರೂ ಸುಮ್ಮನಿದ್ದೆ.
ಮರುದಿನ ಮುಂಜಾನೆ ಎದ್ದು, ನಿತ್ಯೋಪಕರ್ಮಗಳನ್ನು ಮುಗಿಸಿ, ನನಗೆ ತಿಳಿದ ಅತಿ ಸಮೀಪದ ಬಂಧುಗಳಿಗೆ ಅಂದರೆ ತೀರಿಕೊಂಡಿದ್ದ ಬಂಧುಗಳಿಗೆ ಮಾತ್ರ ತರ್ಪಣ ಕೊಟ್ಟು ಕಾಫಿ ಕುಡಿಯೋಣ ಎಂದು ಅಂದುಕೊಳ್ಳುವಷ್ಟರಲ್ಲಿ, ಹಿಂದಿನ ಬೀದಿ ಮುರುಗೇಶ ಬಂದರು. ಮುರುಗೇಶ ಮೂಲತ: ಚೆನ್ನೈ ಕಡೆಯವರು. ಪ್ರತಿ ವರ್ಷ ಮಹಾಲಯಕ್ಕೆ ನಮ್ಮ ಮನೆಗೆ ಬರುತ್ತಾರೆ. ಅವರಿಗೆ ತರ್ಪಣ ಕೊಡಿಸುವುದು ನನ್ನ ಕೆಲಸ. ಹಸುವಿನಂಥಾ ಗುಣದ ಆತ ನಿಷ್ಟೆಯಿಂದ ಮಾಡುತ್ತಾರೆ. ಇಂಥವರು ವಿರಳ. ಅಂದರೆ, ತರ್ಪಣ ಕೊಡಿಸಿಕೊಂಡರೆ ಇಂಥವರಿಂದ ಕೊಡಿಸಿಕೊಳ್ಳಬೇಕು ಅಂತ ನಾನೇನೂ ಮಾರ್ಕೆಟಿಂಗ್ ಮಾಡುತ್ತಿಲ್ಲ. ಅವರ ಬಗ್ಗೆ ಒಂದು ಒಳ್ಳೆಯ ಮಾತು ಆಡಿದೆ ಅಷ್ಟೆ. ಅವರ ಕೈಯಲ್ಲಿ ಒಂದು ಮಹಾಲಯದ ಬ್ಯಾಗು. ಅರ್ಥಾತ್, ನಾನು ಕಂಡ ದಿನದಿಂದಲೂ ಮಹಾಲಯದ ದಿನ ನಮ್ಮ ಮನೆಗೆ ಅವರು ಅದೇ ಬ್ಯಾಗು ತರುತ್ತಿದ್ದರು. ಇವರು ಕೊಡುವ ತರ್ಪಣದ ನೀರು ಅದರ ಮೇಲೆ ಸಿಡಿದೂ ಸಿಡಿದೂ, ಜಿಪ್ ತುಕ್ಕಾಗಿತ್ತು. ಇದ್ದಬದ್ದ ಬಲವೆಲ್ಲ ಬಿಟ್ಟು ಎಳೆದರೂ, ಸೀಟಿಗಂಟಿದ ರಾಜಕಾರಣಿಯಂತೆ ಬೇರ್ಪಡಿಸಿಕೊಳ್ಳಲೇ ಮುಷ್ಕರ ಹೂಡಿತ್ತು. ’ನಿಮ್ಮ ಬ್ಯಾಗಿಗೂ ಎಳ್ಳು-ನೀರು ಬಿಟ್ಟುಬಿಡಲೇ?’ ಅಂದೆ ... ಅವರಿಗೆ ಅರ್ಥವಾಗಲಿಲ್ಲ.
ಅಂತೂ ಇಂತೂ ಸೀತಾದೇವಿಯನ್ನು ತನ್ನೊಡಲಿಗೆ ಸೇರಿಸಿಕೊಳ್ಳಲು ಬಾಯ್ತೆರೆದ ಭುವಿಯಂತೆ ಆ ಬ್ಯಾಗು ಬಾಯಿ ಬಿಟ್ಟಿಕೊಂಡಿತು. ಅದರೊಳಗೆ ಇಟ್ಟಿದ್ದ ಒಂದು ಚೀಟಿ ತೆರೆದರು. ಏನಿಲ್ಲ ಅಂದರೂ ಹದಿನೈದು ಜನರ ಹೆಸರಿತ್ತು. ಆ ಹಾಳೆಯಲ್ಲಿ ಹೆಸರು, ಗೋತ್ರ ಮತ್ತು ಸಂಬಂಧದ ವಿಷಯವನ್ನು ಬರೆದಿಟ್ಟುಕೊಂಡಿದ್ದರು. ಕೆಲವು ಹೆಸರು ಸಲೀಸಾಗಿತ್ತು ಮತ್ತೆ ಕೆಲವು ಕಷ್ಟವಾಗಿತ್ತು. ಯಾರದೋ ಹೆಸರು ಓದಿ ಹೇಳುವಾಗ, ಹೇಳಲು ಬಾರದೆ ಇನ್ನೇನೋ ಹೇಳಿದೆ. ತಕ್ಷಣ ಅವರು "ಇಲ್ಲೆಪ್ಪ ... ಅವರ್ ಎನ್ನ ಸೋದರಮಾವ. ಇನ್ನೂ ಜೀವಂತ ಇದ್ದಾರೆ ಆದರೆ ಹುಷಾರಿಲ್ಲ ಅಂತ ಹಾಸ್ಪಿಟಲಲ್ಲಿ ಇರ್ತಾರೆ. ಅವರಿಗೆ ತಿಳ್ ಬೇಡ" ಅಂದರು. "ಸಾರಿ ಮುರುಗೇಶ್, ಅವರನ್ನು ನೆಕ್ಸ್ಟ್ ಟೈಮ್ ನೋಡೋಣ ... ಈಗ ಆ ಹೆಸರು ಇನ್ನೊಮ್ಮೆ ಹೇಳಿ" ಅಂದೆ. ಅವರ ಚೀಟಿಯಲ್ಲಿ ಎಲ್ಲರಿಗೂ ತರ್ಪಣ ಕೊಡಿಸಿ ಅವರನ್ನು ಕಳಿಸಿಕೊಟ್ಟೆ. ಅಲ್ಲಿಗೆ ಮಹಾಲಯ ಮುಗೀತು. ಇವರ ಸಂಪ್ರದಾಯ ಏನೋ ಗೊತ್ತಿಲ್ಲ. ವರ್ಷಕ್ಕೊಮ್ಮೆ ಮಹಾಲಯ ಮಾತ್ರ ಮಾಡುತ್ತಾರೆ, ತಿಥಿ ಪದ್ದತಿ ಇಲ್ಲ.
ತಿಥಿ ಅಂದಾಗ ಈ ವಿಷಯ ನೆನಪಿಗೆ ಒದ್ದುಗೊಂಡು ಬರುತ್ತೆ ನೋಡಿ. ಕರಿಗಿರಿ ರಾಯರು ಬಹಳ ಮಡಿ. ಒಂದು ರೀತಿ ನೋಡಿದರೆ ಬೂಟಾಟಿಕೆ ಮಡಿ ಎನ್ನಬಹುದೇನೋ. ಪ್ರತಿ ವರ್ಷ ಅವರ ತಂದೆ ತಿಥಿಯನ್ನು ಭರ್ಜರಿಯಾಗಿ ಮಾಡುತ್ತಿದ್ದರು. ಅಡಿಗೆಗೆ ಅಡುಗೆಯವರನ್ನು ಕರೆಸುತ್ತಿದ್ದರು. ಆದರೆ, ಒಮ್ಮೆ ಬಂದವರು ಮತ್ತೊಮ್ಮೆ ಅಪ್ಪಿತಪ್ಪಿ ಕೂಡ ಬರುತ್ತಿರಲಿಲ್ಲ. ಹೀಗೆ ಒಮ್ಮೆ ಅವರ ಮನೆಗೆ ತಿಥಿ ಊಟಕ್ಕೆ ಹೋಗಿದ್ದೆ. ಸಣ್ಣಗೆ ತಲೆನೋಯುತ್ತಿತ್ತು ಅಂತ ಮಾರ್ಗದಲ್ಲೇ ಸಿಕ್ಕ ಸಣ್ಣ ಹೋಟಲ್ಲಿಗೆ ಹೋಗಿ ಕಾಫಿ ಬಸಿದುಕೊಂಡು ಅವರ ಮನೆಗೆ ಹೋದೆ. ಅವರು ಇವರು ಅಂತ ಮಾತುಕತೆಯಾಗುವ ಹೊತ್ತಿಗೆ ಅಡುಗೆಯವರು ಬಂದರು ಅಂದರಾರೋ. ಅದೇ ಸಂಭ್ರಮ. ಸದ್ಯ ಬಂದರಲ್ಲ ಅಂತ. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲೆ. ಯಾಕೆ ಅಂತ ಕೇಳಬೇಡಿ. ಅಡುಗೆಯವರು ಬಂದ ಸುಳಿವರಿತ ಹಲವರು ಇಲ್ಲದ ಕೆಲಸ ಹವಣಿಸಿಕೊಂಡು ಮೆಲ್ಲಗೆ ಜಾಗ ಖಾಲಿ ಮಾಡಿದ್ದರು. ಸುಮ್ನೆ ನಿಂತು ಹಲ್ಕಿಸಿಯುತ್ತಿದ್ದ ನನ್ನ ತಲೆ ಮೇಲೆ ಆ ಜವಾಬ್ದಾರಿ ಬಿತ್ತು.
ಅಡುಗೆಯವರಿಗೆ ಅನುವು ಮಾಡಿಕೊಳ್ಳಲು ಮನೆಯೊಳಗೆ ನೆಡೆದೆ. ಸಂಧ್ಯಾವಂದನೆ ಮಾಡುತ್ತಿದ್ದ ರಾಯರು ಕೂತಲ್ಲೇ "ಅವರಿಗೆ ನೆಲ್ಲಿ ನೀರಿನಲ್ಲಿ ಸ್ನಾನ ಮಾಡ್ಲಿಕ್ಕೆ ಹೇಳೋ ಗೋವಿಂದಾ ಅಂದರು" ... ಅವರು ಯಾರಿಗೆ ಹೇಳಿದರೋ ಗೊತ್ತಿಲ್ಲ, ಯಾಕೆಂದರೆ ನಾ ಗೋವಿನ್ಂದ ಅಲ್ಲ ! ಪಾಪ ಡಿಸೆಂಬರ್ ಚಳಿಯ ದಿನ ಅಡುಗೆಗೆ ಬಂದಿರೋ ಅವರು ತಣ್ಣೀರಿನಲ್ಲಿ ಸ್ನಾನ ಮಾಡಿ ಅವರೇ ಗೋವಿಂದ ಆದರೆ? ಅವರ ಮನೆಯಲ್ಲಿ ನನ್ನದೇನು ಕಾರ್ಯಭಾರ ನೆಡೆಯೋದಿಲ್ಲ ಅಲ್ಲವೇ? ಅಡುಗೆಯವರಿಗೆ ಅದನ್ನೇ ಹೇಳಿದೆ. ಅವರನ್ನು ಎಲ್ಲೋ ನೋಡಿದ ಹಾಗೇ ಇದೆ ಅಂತ ಅನ್ನಿಸಿತು. ನಾನು ತಣ್ಣೀರಿನ ವಿಷಯ ಹೇಳಿದ ಕೂಡಲೇ ಕೆಕ್ಕರಿಸಿ ನೋಡಿ ’ಸರಿ’ ಅಂದವರು, ರಪ್ ಅಂತ ಬಾಗಿಲು ಜಡಿದುಕೊಂಡರು. ’ಸರಿ’ ಎಂದಾಗ ಹೊರಹೊಮ್ಮಿದ ಸೊಗಸಾದ ಬೆಳ್ಳುಳ್ಳಿ ವಾಸನೆ ನನ್ನ ನೆನಪಿನ ಶಕ್ತಿಯನ್ನು ಬಡಿದೆಬ್ಬಿಸಿತ್ತು. ಹೋಟಲ್’ನಲ್ಲಿ ಕಾಫೀ ಕುಡಿಯುವಾಗ ನನ್ನ ಪಕ್ಕದಲ್ಲೇ ನಿಂತಿದ್ದ ಮುಖ ಅಂತ !
ನೀರಿನ ಶಬ್ದ ಜೋರಾಗೇ ಬರುತ್ತಿತ್ತು. ಸ್ವಲ್ಪ ಹೊತ್ತಾದ ಮೇಲೆ, ಮೈ ಕೈ ಒರೆಸಿಕೊಂಡು ಹೊರಬಂದವರು ಮತ್ತೊಂದು ಟವಲನ್ನು ಅಲ್ಲೇ ಎಸೆದು ಆ ಕಡೆ ಹೋದರು. ಎಂಥಾ ಚಮತ್ಕಾರ. ಒಳಗೆ ಹೋದಾಗ ಉಟ್ಟಿದ್ದ ಟವಲ್ಲೇ ಇನ್ನೂ ಉಟ್ಟಿದ್ದರು, ಉಟ್ಟ ವಸ್ತ್ರವಾಗಲಿ, ಅತ್ಲಾಗೆ ಎಸೆದ ವಸ್ತ್ರವಾಗಲಿ ಎರಡೂ ಒದ್ದೆಯಾಗಿರಲಿಲ್ಲ !! ನಾನೇನಾದರೂ ಈಗ ಮಾತನಾಡಲು ಹೋದರೆ ಬಂದಿರೋ ಅಡುಗೆಯವರೂ ರೈಟ್ ಹೇಳಿ, ನಾವೇ ಅಡುಗೆ ಮಾಡುವಂತಾಗಿ ತಡವಾದರೆ, ಊಟಕ್ಕೆ ಬಂದಿರೋ ವಯಸ್ಸಾದವರ ಗತಿ ಏನು? ನಾನೇನೂ ನೋಡಲಿಲ್ಲ, ನನಗೇನೂ ಗೊತ್ತಿಲ್ಲ ಅಂತ ತೆಪ್ಪಗಾದೆ.
ಸರಿ, ಅಂತ ಅವರ ಹಿಂದೇನೇ ಹೋದೆ. ಅಡುಗೆಯವರ ಜೊತೆಗಾರನ ಟಾಪ್ಲೆಸ್ ಶರೀರ ನೋಡಿದಾಗ, ಒಂದು ಕ್ಷಣ ಏನೋ ತೋಚದೆ ಹೋಯ್ತು. ಜನಿವಾರವೇ ಇಲ್ಲ ಮಾರಾಯ್ರೇ! ಆತ ತಲೆ ಬಗ್ಗಿಸಿಕೊಂಡು ವಡೆಗೆ ಹಿಟ್ಟು ರುಬ್ಬುತ್ತಿದ. ಏನಾದರೂ ಮಾಡಬೇಕೀಗ, ಇಲ್ದೆ ಇದ್ರೆ ರಾಯರು ಈ ದೃಶ್ಯ ಕಂಡು ರಾದ್ದಾಂತ ಮಾಡಿಬಿಡ್ತಾರೆ. ಅಷ್ಟರಲ್ಲೇ, ಹಿರಿಯ ಅಡುಗೆಯವರು ಆ ಕಡೆ ಬಂದು, "ಲೇಯ್! ತೊಗೊಳ್ಳೋ ಹಾಕ್ಕೋ" ಅಂತ ಜನಿವಾರ ಕೊಟ್ಟರು. ಆ ಪುಣ್ಯಾತ್ಮ ಅದನ್ನು ಬಲದಿಂದ ಎಡಕ್ಕೆ ಬರುವಂತೆ ಹಾಕಿಕೊಂಡ. "ಏ! ಥತ್!ಸರಿಯಾಗಿ ಹಕ್ಕೋಳ್ಳೋ" ಅಂತ ಬೈದು ಸರಿ ಮಾಡಿದರು. ನಾನು ಮರೆಯಲ್ಲಿ ಇದ್ದುದರಿಂದ ಅವರಿಗೆ ನಾನು ಕಾಣಲಿಲ್ಲ.
ಸುಮ್ಮನೆ ಹಾಗೇ ಮನೆಯೊಳಗೆ ಹೋಗಿ ಒಂದೈದು ನಿಮಿಷವಾದ ಮೇಲೆ ಮತ್ತೆ ಬಂದೆ. ಹಿರಿಯ ಅಡುಗೆಯವ ಕಿರಿಯನು ರುಬ್ಬಿದ್ದ ಹಿಟ್ಟನ್ನೇ ತೆಗೆದುಕೊಂಡು ಗೋಪಿಚಂದನದಂತೆ ಹಚ್ಚುತ್ತಿದ್ದ ! ಪಿತ್ರುದೇವತೆಗಳು ಪುನೀತರಾದರು ಎಂದುಕೊಂಡೆ !
Comments
ಒಂದು ಸೋತೋಷದ ವಿಷಯವೆಂದರೆ ನಮ್ಮ
In reply to ಒಂದು ಸೋತೋಷದ ವಿಷಯವೆಂದರೆ ನಮ್ಮ by kavinagaraj
ಸೋತೋಷವನ್ನು ಸಂತೋಷ ಎಂದು
In reply to ಸೋತೋಷವನ್ನು ಸಂತೋಷ ಎಂದು by kavinagaraj
ಹತ್ತು ಬಾರಿ ಆಲೋಚನೆ ಮಾಡಿದೆ ...
In reply to ಹತ್ತು ಬಾರಿ ಆಲೋಚನೆ ಮಾಡಿದೆ ... by bhalle
ಫತ್ವಾ ಹೊರಡುತ್ತಿತ್ತು!!
ವೈಚಾರಿಕತೆ ಚಚಿ೯ಸುವುದರಿಂದ