ಬದನೆ ತಳಿ ನಮ್ಮದು, ಕಾನೂನುಬಾಹಿರ ಬಳಕೆ ಕಂಪೆನಿಯದು

ಬದನೆ ತಳಿ ನಮ್ಮದು, ಕಾನೂನುಬಾಹಿರ ಬಳಕೆ ಕಂಪೆನಿಯದು

ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಕೊಯಂಬತ್ತೂರಿನ ಕೃಷಿ ವಿಶ್ವವಿದ್ಯಾಲಯ ಮತ್ತು ಮಹಿಕೋ (ಮಹಾರಾಷ್ಟ್ರ ಹೈಬ್ರಿಡ್ ಸೀಡ್ಸ್) ಕಂಪೆನಿಗಳ ನಡುವೆ ೨೦೦೫ರ ಆರಂಭದಲ್ಲಿ ಆದ ಕರಾರನ್ನು ಕೃಷಿ ಸಂಶೋಧನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯ ನಾಂದಿ ಎಂದು ಹಾಡಿ ಹೊಗಳಲಾಗಿತ್ತು.

ಅದೇನು ಕರಾರು? ಅದು ಬಿಟಿ ಬದನೆ ಬಗ್ಗೆ. ಬಾಸಿಲ್ಲಸ್ ತುರುಂಜಿಯೆನ್‍ಸಿಸ್ ಎಂಬ ಮಣ್ಣಿನ ಬ್ಯಾಕ್ಟೀರಿಯಾದ ಕ್ರಿಸ್ಟಲ್ - ಪ್ರೊಟೀನ್ - ಜೀನನ್ನು ಬದನೆಗೆ ಜೈವಿಕವಾಗಿ ಸೇರಿಸಿ ಸೃಷ್ಟಿಸಿದ ಬದನೆಯೇ ಬಿಟಿ ಬದನೆ. ಅಂದರೆ ಅದು ಜೈವಿಕವಾಗಿ ಬದಲಾಯಿಸಿದ ಬದನೆ (ಜಿಎಂ ಬದನೆ). ಕರಾರಿನ ಪ್ರಕಾರ, ಎರಡೂ ವಿಶ್ವವಿದ್ಯಾಲಯಗಳಿಗೆ  ಪೂರ್ಣವಾಗಿ ಅಭಿವೃದ್ಧಿ ಪಡಿಸಿದ ಅಥವಾ ಅರೆ - ಅಭಿವೃದ್ಧಿ ಪಡಿಸಿದ ಬದನೆ ತಳಿಗಳನ್ನು ಮಹಿಕೋ ಒದಗಿಸಬೇಕು (ಕೀಟನಿರೋಧಿ ಬದನೆ ತಳಿಗಳನ್ನು ಅಭಿವೃದ್ಧಿ ಪಡಿಸಲಿಕ್ಕಾಗಿ). ಇದಕ್ಕೆ ಬದಲಾಗಿ ವಿಶ್ವವಿದ್ಯಾಲಯಗಳು ತಮ್ಮ ಬದನೆತಳಿಗಳ ಸಂಗ್ರಹವನ್ನು ಮಹಿಕೋಗೆ ಒದಗಿಸಬೇಕು.

ಈ ಕರಾರಿನಲ್ಲಿದ್ದ ಪಾತಾಳಗರಡಿ ಹೀಗಿದೆ: "ಯಾವುದೇ ಸಂದರ್ಭದಲ್ಲಿ ಹೈಬ್ರಿಡ್‍ಗಳ ಉತ್ಪಾದನೆಗೆ (ಮಹಿಕೋದ) ಪರವಾನಗಿ ನೀಡಲಾದ ಬದನೆ ತಳಿಗಳನ್ನು "ತಾಯಿ-ತಂದೆ" (ಪೇರೆಂಟಲ್) ತಳಿಗಳಾಗಿ ಉಪಯೋಗಿಸ ಬಾರದು." ಅಂದರೆ, ಕರಾರಿನ ಪ್ರಕಾರ ಜಿಎಂ ಬದನೆಯ ಬೌದ್ಧಿಕ ಸೊತ್ತಿನ ಹಕ್ಕನ್ನು ಮಹಿಕೋ ಉಳಿಸಿಕೊಂಡಿತ್ತು.

ಅಂತೂ, ಆ ಕರಾರಿನ ಪ್ರಕಾರ, ಕರ್ನಾಟಕ ಮತ್ತು ತಮಿಳ್ನಾಡು ರಾಜ್ಯಗಳ ಜೈವಿಕ ವೈವಿಧ್ಯ ಮಂಡಳಿಗಳಿಗೆ ತಿಳಿಸದೆ, ಆಯಾ ರಾಜ್ಯಗಳ ಈ ಬದನೆ ತಳಿಗಳನ್ನು ಮಹಿಕೋ ಬಳಸಿಕೊಂಡಿತು: (ಕರ್ನಾಟಕದ ತಳಿಗಳು) ಮಾಲ್‍ಪುರ, ಮಜರಿಗೋಟ, ಕುಡಚಿ, ಉಡುಪಿ, ೧೧೨ ಜಿಓ, ರಬ್‍ಕವಿ; (ತಮಿಳ್ನಾಡಿನ ತಳಿಗಳು) ಎಂಡಿಯು ೧, ಪಿಎಲ್‍ಆರ್ ೧, ಕೆಕೆ ಎಂ ೧ ಮತ್ತು ಸಿಓ ೨.

ಐದು ವರುಷಗಳ ನಂತರ, ಈ ಕರಾರನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಹಿಕೋದ ಕರಾಮತ್ತು ಬಹಿರಂಗವಾಯಿತು! ಸ್ಥಳೀಯ ಜೈವಿಕ ತಳಿಗಳನ್ನು "ಕಳ್ಳತನ" ಮಾಡಿದ ಮೊತ್ತಮೊದಲ ವಾಣಿಜ್ಯ ಘಟಕ ಎಂಬ ಆಪಾದನೆ ಮಹಿಕೋಗೆ ಅಂಟಿಕೊಂಡಿತು.



ಯಾಕೆಂದರೆ, ಜೈವಿಕ ವೈವಿಧ್ಯ ಕಾಯಿದೆಯ ಸೆಕ್ಷನ್ ೭ ಹೀಗೆನ್ನುತ್ತದೆ: "ಭಾರತೀಯ ಮೂಲದ ಯಾವನೇ ವ್ಯಕ್ತಿ ಅಥವಾ ಕಂಪೆನಿಯು, ವಾಣಿಜ್ಯ ಬಳಕೆಗಾಗಿ ಅಥವಾ ಜೈವಿಕ ಸರ್ವೆಗಾಗಿ ಜೈವಿಕ ಸಂಪನ್ಮೂಲವನ್ನು ರಾಜ್ಯ ಜೈವಿಕ ವೈವಿಧ್ಯ ಮಂಡಳಿಯ ಪೂರ್ವಾನುಮತಿ ಪಡೆಯದೆ ಬಳಸಬಾರದು."

ಬೆಂಗಳೂರಿನ ಪರಿಸರ ಬೆಂಬಲ ತಂಡವು (ಇಎಸ್‍ಜಿ - ಎನ್‍ವೈರನ್‍ಮೆಂಟ್ ಸಪೋರ್ಟ್ ಗ್ರೂಪ್) ಮಹಿಕೋದಿಂದಾದ ಕಾಯಿದೆ ಉಲ್ಲಂಘನೆಯನ್ನು ಫೆಬ್ರವರಿ, ೨೦೧೦ರಲ್ಲೇ ಕರ್ನಾಟಕ ಜೈವಿಕ ವೈವಿಧ್ಯ ಮಂಡಳಿಯ ಗಮನಕ್ಕೆ ತಂದಿದೆ. ರಾಷ್ಟ್ರೀಯ ಜೈವಿಕ ವೈವಿಧ್ಯ ಪ್ರಾಧಿಕಾರ ಮತ್ತು ರಾಜ್ಯ ಜೈವಿಕ ವೈವಿಧ್ಯ ಮಂಡಳಿಯ ಪೂರ್ವಾನುಮತಿ ಪಡೆಯದೆ, ಕರ್ನಾಟಕ ಮತ್ತು ತಮಿಳ್ನಾಡಿನ ಕನಿಷ್ಠ ಹತ್ತು ಬದನೆ ತಳಿಗಳನ್ನು ಮಹಿಕೋ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡಿದೆ ಎಂದು ಇಎಸ್‍ಜಿ ತನ್ನ ದೂರಿನಲ್ಲಿ ತಿಳಿಸಿದೆ.

ಆ ಕಾಯಿದೆಯ ಪ್ರಕಾರ, ಸ್ಥಳೀಯ ತಳಿಗಳನ್ನು ತಲೆತಲಾಂತರದಿಂದ ರಕ್ಷಿಸುತ್ತಿರುವ ಸಮುದಾಯದ ಪೂರ್ವಾನುಮತಿ ಪಡೆಯುವುದು ಅಗತ್ಯ. ಸ್ಥಳೀಯ ತಳಿಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದಕ್ಕೆ ಸಮುದಾಯಗಳು ಸಮ್ಮತಿ ನೀಡಿದರೆ, ವಾಣಿಜ್ಯ ಲಾಭದ ಒಂದು ಪಾಲು ಸಮುದಾಯಗಳಿಗೆ ಸಲ್ಲತಕ್ಕದ್ದು. (ಇದಕ್ಕೆ ಆಕ್ಸೆಸ್ ಆಂಡ್ ಬೆನಿಫಿಟ್ ಶ್ಯಾರಿಂಗ್ ಪ್ರೊಟೊಕಾಲ್ ಎನ್ನುತ್ತಾರೆ.) ಜೈವಿಕ ವೈವಿಧ್ಯದ ಕಳ್ಳತನ ಹಾಗೂ ನಷ್ಟ ತಡೆಯಲಿಕ್ಕಾಗಿ ಈ ಪ್ರೊಟೊಕಾಲನ್ನು ಕಟ್ಟುನಿಟ್ಟಾಗಿ ಜ್ಯಾರಿ ಮಾಡುವುದು ಅವಶ್ಯ.

ರಾಷ್ಟ್ರೀಯ ಜೈವಿಕ ವೈವಿಧ್ಯ ಪ್ರಾಧಿಕಾರಕ್ಕೆ ಕರ್ನಾಟಕ ಜೈವಿಕ ವೈವಿಧ್ಯ ಮಂಡಳಿಯು ೨೦೧೧ರಲ್ಲಿ ಕಳಿಸಿದ ಒಂದು ವರದಿಯಲ್ಲಿ ಹೀಗೆ ತಿಳಿಸಿದೆ: ಮಹಿಕೋ ಮತ್ತು ಅದರ ಜೊತೆಗಾರ ಸಂಸ್ಥೆಗಳು, ಮಂಡಳಿಯ ಸಮ್ಮತಿಯಿಲ್ಲದೆ ಆರು ಸ್ಥಳೀಯ ಬದನೆ ತಳಿಗಳನ್ನು ಬಳಸಿಕೊಂಡಿದ್ದಾರೆ. ಆದರೆ, ಫೆಬ್ರವರಿ ೨೦೧೨ರಲ್ಲಿ ಕರ್ನಾಟಕ ಜೈವಿಕ ವೈವಿಧ್ಯ ಮಂಡಳಿಯು ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ - ಈ ಪ್ರಕರಣವನ್ನು ರಾಷ್ಟ್ರೀಯ ಜೈವಿಕ ವೈವಿಧ್ಯ ಪ್ರಾಧಿಕಾರ ಪರಿಶೀಲಿಸುತ್ತಿದೆ ಎಂದು ತಿಳಿಸುವ ಮೂಲಕ. ಆದರೆ, ಮಹಿಕೋ ಕಂಪೆನಿಯ ವಿರುದ್ಧ ನೀಡಲಾದ ದೂರಿನ ಬಗ್ಗೆ ಇಲ್ಲಿಯ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಕೋದ ಶೇಕಡಾ ೨೬ ಮಾಲೀಕತ್ವ ಬಹುರಾಷ್ಟ್ರೀಯ ದೈತ್ಯ ಬೀಜ ಕಂಪೆನಿ ಮೊನ್‍ಸಾಂಟೊ ಕೈಯಲ್ಲಿದೆ. ಇದಕ್ಕೂ, ಪ್ರಾಧಿಕಾರದ ವಿಳಂಬನೀತಿಗೂ ಸಂಬಂಧವಿದೆಯೇ? ಈ ಪ್ರಶ್ನೆಯ ಉತ್ತರಕ್ಕಾಗಿ ನಾವು ಕಾಯಬೇಕಾಗಿದೆ.

Comments

Submitted by CanTHeeRava Thu, 04/04/2013 - 14:07

ಸ್ಥಳೀಯ‌ ತಳಿಗಳ‌ ರಕ್ಷಣೆ ರೈತರ‌, ವಿಜ್ಞಾನಿಗಳ‌ ಮತ್ತು ಉಪಭೋಗಿಗಳೆಲ್ಲರ‌ ಜವಾಬ್ದಾರಿ. ಎ.ಕೆ.ರಾಯರೆ, ನೀವು ಸಾಕ್ಷ್ಯಾಧಾರಿತ‌ ಪತ್ರಿಕಾ ವರದಿಯ0ತೆ ಬರೆದಿರುವ‌ ಈ ಲೇಖನದೊ0ದಿಗೆ ನೀವು ಹೆಸರಿಸಿರುವ‌ ಮೂಲ‌ ದಾಖಲೆಗಳಿಗೆ, ಅ0ಕಿ ಅ0ಶಗಳಿಗೆ ಪೂರ್ಣವಾದ‌ ಆಧಾರ‌/ಉಲ್ಲೇಖವನ್ನು (ಲೇಖನದ‌ ಕೊನೆಯಲ್ಲಿ) ಕೊಡುವುದು ಸೂಕ್ತ‌. ಸ0ಪದವೂ ಗಮನಿಸುವುದೊಳ್ಳೆಯದು.
Submitted by venkatesh Sun, 04/07/2013 - 06:36

In reply to by CanTHeeRava

ಹತ್ತಿಯ ಬಗ್ಗೆ ಯು ಇದೆ ತರಹದ ತರಲೆ ತಾಪತ್ರಯಗಳು ಕೇಳಿಬರುತ್ತಿವೆ. ಸರಕಾರ ಇಂತಹ ಪಿಡುಗುಗಳನ್ನು ನಿವಾರಿಸುವಲ್ಲಿ ಅಸಮರ್ಥವಾಗಿದೆ. ಒಂದು ಹಿಂದಿ ಮೂಹಾವರ್ ಪ್ರಕಾರ, 'ಬಾಕಿ ಜೊ ಬಚಾತ ಉಸೆ ಮೆಹಂಗಾಯಿ ಲೆ ಗಯಾ' ಅನ್ನೋ ಹಾಗೆ ಆಗಿದೆ. ಉತ್ತಮ ಲೇಖನ.
Submitted by makara Wed, 04/17/2013 - 21:33

ಅಡ್ಡೂರು ಕೃಷ್ಣರಾವ್ ಅವರೇ ನಿಮಗೆ ಅನಂತ ವಂದನೆಗಳು. ನಿಮ್ಮ ಲೇಖನ ಮಾಲಿಕೆಯ ಮೂಲಕ ಜೈವಿಕ ಸಂಪತ್ತನ್ನು ಹೇಗೆ ವಿಶ್ವವಿದ್ಯಾಲಯಗಳು (ಎಚ್. ಎಂ. ಟಿ. ಭತ್ತದ ಕುರಿತಾದ ಲೇಖನ), ಖಾಸಗೀ ಕಂಪನಿಗಳು (ಈ ಲೇಖನ - ಮಹಿಕೋದ ಮೂಲಕ ಕಳ್ಳತನ ಮಾಡುತ್ತಿರುವ ಮಾನ್ಸೆಂಟೋದಂತಹ ಬಹುರಾಷ್ಟ್ರೀಯ ಕಂಪನಿಗಳು) ಕೊಳ್ಳೆ ಹೊಡೆಯುತ್ತಿವೆ ಎನ್ನುವುದನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಮತ್ತು ಈ ಕೃಷಿರಂಗದಲ್ಲಿದ್ದೂ ಅದರ ಬಗೆಗೆ ಪೂರ್ಣ ಮಾಹಿತಿ ಇಲ್ಲದ ನನ್ನಂತಹವರಿಗೆ ಬಹು ಉಪಯುಕ್ತವಾಗಿವೆ.