ಭಟ್ಟರ ಸಂಧ್ಯಾಕಾಲ ಪಯಣ!

ಭಟ್ಟರ ಸಂಧ್ಯಾಕಾಲ ಪಯಣ!

ಪುರೋಹಿತ ರಾಮಭಟ್ಟರು ಬಿಸಿಲಿನಲ್ಲಿ ಬಸವಳಿದು ’ರಾಮ ರಾಮ’ ಎನ್ನುತ್ತ ತಣ್ಣನೆಯ ನೆಲದ ಮೇಲೆ ಕುಳಿತರು. ಧರ್ಮಪತ್ನಿ ತಂದಿಟ್ಟ ತಂಪಾದ ಪಾನಕ ಸ್ವೀಕರಿಸಿ ’ಅದೇನು ಬಿಸಿಲು ಅಂತೀ. ಅಬ್ಬಬ್ಬ .. ಬಸ್ಸಿಳಿದು ನೆಡೆದು ಬರುವಷ್ಟರಲ್ಲಿ ಸಾಕಾಯ್ತು’.
ಹೆಂಡತಿ ಮೂದಲಿಸಿದರು ’ಆಟೋ ಚಾರ್ಜ್ ಕೊಟ್ಟಿರ್ತಾರೆ ತಾನೇ. ಆರಾಮವಾಗಿ ಬರೋದು ಬಿಟ್ಟು, ಬಸ್’ನಲ್ಲಿ ಜೋತುಬಿದ್ಗೊಂಡ್ ಬಂದು, ಅದರ ಮೇಲೆ ನೆಡೆದುಕೊಂಡು ಬರೋ ಅಂಥಾದ್ದು ಏನಿದೆ?". ಭಟ್ಟರು ’ಅವನಿಗ್ಯಾಕೆ ದುಡ್ಡು ಸುರೀ ಬೇಕು ? ಕೈಕಾಲು ಗಟ್ಟಿ ಇರಬೇಕಾದರೆ ನೆಡೆಯೋದು. ಹತ್ತು ರೂಪಾಯಿಯಲ್ಲಿ ಆಗೋ ಕೆಲಸಕ್ಕೆ ನೂರು ರೂಪಾಯಿ ಯಾರು ಕೊಡ್ತಾರೆ’ ಎಂದು ನುಡಿದು ತಮ್ಮೊಂದಿಗೆ ತಂದಿದ್ದ ಗಂಟು ಬಿಚ್ಚಿದರು.
ಪೌರೋಹಿತ್ಯವೇ ಉದ್ಯೋಗವಾಗಿರುವ ರಾಮಭಟ್ಟರು ಮುಂಜಾನೆ ನಾಲ್ಕಕ್ಕೇ ಎದ್ದು, ಬಸ್ ಹಿಡಿದು ಹೋಗಿ, ಗೃಹಪ್ರವೇಶ ಮಾಡಿಸಿ ಮನೆಗೆ ಬರುವ ಹೊತ್ತಿಗೆ ಗಂಟೆ ನಾಲ್ಕಾಗಿತ್ತು. ದೇಹ ದಣಿದಿದ್ದರೂ, ತಮ್ಮ ಅಂದಿನ ಸಂಪಾದನೆಯನ್ನು ಎಣಿಸಿ ಗಂಟು ಕಟ್ಟಿಡೋ ತನಕ ಜೀವಕ್ಕೆ ಸಮಾಧಾನವಿಲ್ಲ.
ಗಂಟನ್ನು ಬಿಚ್ಚಿ ಹಣ್ಣು, ತೆಂಗು, ಅಕ್ಕಿ, ಕಂಚಿನ ಪಾತ್ರೆ ಹಾಗೂ ಹಣ ಎಲ್ಲವನ್ನೂ ಒಪ್ಪ ಓರಣವಾಗಿ ವಿಂಗಡಿಸಿ, ಒಳ್ಳೆಯ ಸಂಪಾದನೆ ಎಂದು ಮನದಲ್ಲೇ ಸಂತೋಷಿಸಿ ಎಲ್ಲವನ್ನೂ ನಿಗದಿತ ಸ್ಥಳಗಳಲ್ಲಿ ಜೋಡಿಸಿ ಇಡುವಷ್ಟರಲ್ಲಿ ಗಂಟೆ ಐದಾಗಿತ್ತು.
ಎಲ್ಲ ಆಯ್ತು ಎಂದು ’ನಾರಾಯಣ’ ಎಂದೇಳುವಷ್ಟರಲ್ಲಿ ಅವರ ಸೆಲ್ ಫೋನು ರಿಂಗಾಯಿಸಿತು. ಕರೆ ಸ್ವೀಕರಿಸಿದರು ಭಟ್ಟರು. ಮಾತನಾಡುತ್ತಲೇ ತಮ್ಮ ಡೈರಿಯನ್ನು ಒಮ್ಮೆ ಪರಿಶೀಲಿಸಿ ’ಆಯ್ತು’ ಎಂದು ಫೋನಿರಿಸಿ, ಡೈರಿಯಲ್ಲಿ ನೋಂದಾಯಿಸಿಕೊಂಡರು.
’ಏನು’ ಎಂಬ ಮುಖಭಾವ ಹೊತ್ತ ಪತ್ನಿಗೆ "ಮುಂದಿನ ಭಾನುವಾರ ಮುನಿಯಪ್ಪ ಪಾಳ್ಯದಾಚೆಗೆ ಇರೋ ಹೊಸಾ ಲೇ ಔಟ್’ನ ಒಂದು ಮನೆ ಗೃಹಪ್ರವೇಶ ಮಾಡಿಸಬೇಕಂತೆ" ಅಂದರು.
ಆಕೆ ಸಿಡುಗುಟ್ಟುತ್ತ "ಎಲ್ಲೋ ಊರಾಚೆ ಹೋಗಿ ಪೂಜೆ ಪುನಸ್ಕಾರ ಮಾಡಿಸಿ ಸಂಪಾದಿಸೋ ಅವಶ್ಯಕತೆ ಏನಿದೆ ಅಂತ ನಾ ಕೇಳೋದು. ಮಕ್ಕಳಿಲ್ಲ ಮರಿ ಇಲ್ಲ. ಯಾರಿಗೆ ಗಂಟು ಕಟ್ಟಿಡೋದು? ಸುತ್ತುಮುತ್ತಲೂ ಇದ್ದರೆ ಪರವಾಗಿಲ್ಲ. ಅಷ್ಟಕ್ಕೂ ಈ ಮುನಿಯಪ್ಪನ ಪಾಳ್ಯ ಎಲ್ಲಿದೆ? ನೀವೇ ಅಲ್ಲಿಗೆ ಹೋಗಬೇಕೆ? ಅಥವಾ ಯಾರಾದರೂ ಬಂದು ಕರೆದುಕೊಂಡು ಹೋಗ್ತಾರಾ?" ಎಂದು ಬಡಬಡಾಯಿಸಿದರು.


ಭಟ್ಟರು ನುಡಿದರು "ಅಬ್ಬಬ್ಬ ... ಈ ಪಾಟಿ ಪ್ರಶ್ನೆಗಳ ಸುರಿಮಳೇನೇ ಸುರಿಸಿದರೆ ಉತ್ತರಿಸೋದಾದ್ರೂ ಹ್ಯಾಗೆ? ಶನಿವಾರ ಸಂಜೆ ಅವರ ಕಡೆಯವರು ಬಂದು ಕಾರಿನಲ್ಲಿ ಕರೆದುಕೊಂಡು ಹೋಗ್ತಾರೆ. ಭಾನುವಾರ ಬೆಳಿಗ್ಗೆ ಆರು ಘಂಟೆಗೆ ಮುಹೂರ್ತ. ಊಟ ಆದ ಮೇಲೆ ಅವರ ಕಡೆಯವರು ಮನೆಗೆ ಬಂದು ಬಿಟ್ಟು ಹೋಗ್ತಾರೆ. ನೀನೇನೂ ಚಿಂತಿ ಮಾಡಬೇಡ".
ಸ್ವಲ್ಪ ಸಮಾಧಾನವಾದರೂ ಇನ್ನೂ ಮನದ ಮೂಲೆಯಲ್ಲಿ ಅನುಮಾನ ಇದ್ದೇ ಇತ್ತು ಭಟ್ಟರ ಪತ್ನಿಗೆ. ಪುರೋಹಿತರನ್ನು ಒಪ್ಪಿಸಬೇಕಾದರೆ ಪುಷ್ಪಕವಿಮಾನದಲ್ಲೇ ಕರೆದುಕೊಂಡು ಹೋಗ್ತೀವಿ, ಕುಡಿದ ನೀರು ಅಲ್ಲಾಡ ಹಾಗೆ ಕರೆದುಕೊಂಡು ಬರ್ತೀವಿ ಅಂತೆಲ್ಲ ಅಂಗೈಯಲ್ಲೇ ಆಕಾಶ ತೋರಿಸಿ ಕೊನೆಗೆ ಕೈಕೊಟ್ಟಿರೋದು ಇವರ ಅನುಭವದಲ್ಲಿ ಹೊಸದೇನಲ್ಲ.
ಶನಿವಾರ ಬಂತು.
ರಾತ್ರಿ ಮಲಗೋದು ಎಷ್ಟು ತಡವಾಗುತ್ತದೋ ಎಂದುಕೊಂಡು, ಮಧ್ಯಾನ್ನವೇ ಸ್ವಲ್ಪ ನಿದ್ದೆ ಮಾಡಿ ಸುಧಾರಿಸಿಕೊಳ್ಳುವ ಉದ್ದೇಶದಿಂದ ಹಾಗೇ ಫ್ಯಾನ್ ಗಾಳಿಗೆ ಮೈ ಒಡ್ಡಿ ಅಡ್ಡಾದರು ಭಟ್ಟರು. ಮಲಗಿ ಹತ್ತು ನಿಮಿಷವಾಯ್ತು. ಒಳ್ಳೇ ಗಡದ್ದಾಗಿ ನಿದ್ದೆ ಬಂದಿತ್ತು.
ಅವರ ಸೆಲ್ ಫೋನ್ ಹೊಡೆದುಕೊಳ್ಳಲಾರಂಭಿಸಿತು ... ಧಿಗ್ಗನೆ ಎದ್ದು ಕುಳಿತರು ... ಥತ್! ನಿದ್ದೆ ಮಾಡಲೂ ಬಿಡೋದಿಲ್ಲ ಈ ಹಾಳಾದ ಫೋನ್ ಎಂದು ಬೈದುಕೊಳ್ಳುತ್ತ ಕರೆ ಸ್ವೀಕರಿಸಿದರು. ಆ ಕಡೆಯವರು ಹೇಳಿದ್ದಕ್ಕೆಲ್ಲ ಹೂಗುಟ್ಟಿ, ಜೋಲು ಮೋರೆ ಹಾಕಿಕೊಂಡು ಹಾಗೇ ಕುಳಿತರು. ಇಷ್ಟು ಹೊತ್ತಿಗಾಗಲೇ ಪತ್ನಿಗೂ ಎಚ್ಚರವಾಗಿತ್ತು.
ಇವರ ಮುಖ ನೋಡಿ ಕೇಳಿದರು "ನಮ್ಮ ಮನೆ ಕಾರು ಸರಿಯಾದ ಸಮಯಕ್ಕೆ ಕೈಕೊಟ್ಟಿದೆ. ದಯವಿಟ್ಟು ದೊಡ್ಡ ಮನಸ್ಸು ಮಾಡಿ ಬಸ್ ಹಿಡಿದು ಬಂದುಬಿಡಿ. ಚಾರ್ಜ್ ನಾವೇ ಕೊಡ್ತೀವಿ ಅಂತ ಹೇಳಿದ್ರಾ?". ಭಟ್ಟರು ಏನೂ ಮಾತಾಡದೆ ಹೌದು ಎನ್ನುವಂತೆ ತಲೆದೂಗಿದರು. "ಇವರ ಯೋಗ್ಯತೇನೇ ಇಷ್ಟು. ಆಡಿದ ಮಾತಿಗೆ ಬೆಲೆ ಇಲ್ಲ. ಒಂದು ಸಾರಿ ಕೈಕೊಡಿ ಆಗ ನಿಮ್ಮ ಬೆಲೆ ತಿಳಿಯುತ್ತೆ ಜನಕ್ಕೆ ಅಂತ ನಿಮಗೆ ಹೇಳಿದರೆ ನೀವು ಕೇಳೋಲ್ಲ" ಎಂದು ಸಿಡುಗುಟ್ಟುತ್ತಲೇ ಹೊರಗೆ ಜೋರಾಗಿ ಬಿಸಿಲಿದ್ದರೂ ಭಟ್ಟರಿಗೆ ಬಿಸೀ ಕಾಫಿ ಮಾಡಿ ಕೊಟ್ಟರು.
ಸಾವಕಾಶವಾಗಿ ಕಾಫಿ ಕುಡಿದ ಭಟ್ಟರು ನಂತರ ಎದ್ದು ಸಿದ್ದವಾಗಿ, ತಮ್ಮ ಕೈ ಚೀಲ ತೆಗೆದುಕೊಂಡು ಹೊರಟರು. ಹೆಸರಿಗೆ ಕೈ ಚೀಲವಾದರೂ ಅದೊಂದು ಉಗ್ರಾಣ. ಪೂಜಾ ಸಾಮಾಗ್ರಿಯ ಒಂದು ಸೆಟ್ ಸದಾ ಆ ಚೀಲದಲ್ಲಿ ರೆಡಿ. ಹಾಗೇ ಒಂದು ಪೂಜೆಗೆ ಆಗುವಷ್ಟು ಸಾಮಾಗ್ರಿಗಳೂ ಕೂಡ. ಪೂಜೆಗೆ ಜನ ಕರೆಯುತ್ತಾರೇನೋ ನಿಜ. ಆದರೆ ಎಷ್ಟೋ ಸಾರಿ ಭಟ್ಟರ ಮುಖ ನೋಡಿದ ಮೇಲೆ ಅಡಿಕೆ, ವಿಳೇದೆಲೆ, ಹೂವು, ಹಣ್ಣು ನೆನಪು ಮಾಡಿಕೊಳ್ಳುತ್ತಾರೆ !
ಹೊರಡೋ ಮುನ್ನ ತಾವು ಬರೆದಿಟ್ಟುಕೊಂಡಿದ್ದ ಚೀಟಿಯನ್ನೊಮ್ಮೆ ನೋಡಿದರು.
ಅವರ ಮನೆಯಿಂದ ಸಿಟಿ ಮಾರ್ಕೆಟ್ ಬಸ್ ಹಿಡಿದು ಹೋಗಿ ಅಲ್ಲಿ ಮತ್ತೊಂದು ಬಸ್ ಹಿಡಿದು ಮುನಿಯಪ್ಪನ ಪಾಳ್ಯಕ್ಕೆ ಹೋಗಿ, ಅಲ್ಲಿಂದ ಸೇತುವೆ ದಾಟುತ್ತ ಒಂದೂವರೆ ಕಿಲೋಮೀಟರ್ ನೆಡೆದು ಬಲಬದಿಯಲ್ಲಿ ಕಚ್ಚಾ ರಸ್ತೆಯಲ್ಲಿ ಸಾಗಿ ಅರ್ಧ ಕಿಲೋಮೀಟರ್ ಸಾಗಿ ಎಡಕ್ಕೆ ತಿರುಗಿ ನೆಡೆದರೆ ಗೃಹಪವೇಶಕ್ಕೆ ಸಿದ್ದವಾಗಿರೋ ಮನೆ ಸಿಗುತ್ತದೆ.
ಅರ್ಥವಾಯಿತು ಎಂದುಕೊಂಡು ಜೇಬಿನಲ್ಲಿ ಚೀಟಿ ಭದ್ರವಾಗಿ ಇಟ್ಟುಕೊಂಡರು.
ಬಸ್ಸಿಳದ ಮೇಲೆ ಮೊದಲು ಯಾವ ದಿಕ್ಕಿನಲ್ಲಿ ಬರಬೇಕೆಂದು ಹೇಳಲು ಆ ಕಡೆಯವರು ಮರೆತಿದ್ದರು. ಅದರೊಂದಿಗೆ ನಿದ್ದೆಗಣ್ಣಿನಲ್ಲಿ ಎಡಕ್ಕೆ ಬಲ, ಬಲಕ್ಕೆ ಎಡ ಎಂದು ಭಟ್ಟರು ಬರೆದುಕೊಂಡರೆ ಅದಕ್ಕೆ ಯಾರು ಹೊಣೆ?
ಸಿಟಿ ಮಾರ್ಕೆಟ್ ತಲುಪಿ, ಮುನಿಯಪ್ಪನ ಪಾಳ್ಯದ ಬಸ್ ಕಡೆ ಹೋದರು.
ಅಲ್ಲೇ ಮೂಲೆಯಲ್ಲಿ ಅನಾಥವಾಗಿ ನಿಂತಿತ್ತು ಮುನಿಯಪ್ಪನ ಪಾಳ್ಯದ ಕಡೆ ಹೋಗುವ ಬಸ್ಸು.
ಶನಿವಾರವಾದ್ದರಿಂದ ರಷ್ ಇರಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಅಂತ ಜನ ಕೂತಿದ್ದರು ಅಷ್ಟೇ. ಮೊದಲೇ ಪ್ರೈವೇಟ್ ಬಸ್ಸು. ಜನ ತುಂಬೋ ತನಕ ಅಲ್ಲಾಡೋಲ್ಲ. ಅಲ್ಲೇ ಬಲಭಾಗದಲ್ಲಿ ಒಂದು ಸೀಟು ಹಿಡಿದು ಕುಳಿತರು. ಕೈ ಚೀಲದಿಂದ ಹಣ ತೆಗೆದುಕೊಂಡು ಜೇಬಿನಲ್ಲಿ ಇಟ್ಟುಕೊಂಡರು. ಕಂಡಕ್ಟರ್ ಬಂದಾಗ ಮುನಿಯಪ್ಪ ಪಾಳ್ಯಕ್ಕೆ ಚೀಟಿ ಪಡೆದರು. ಇನ್ನು ಊರು ಬರೋ ತನಕ ಬೇರೆ ಕೆಲಸ ಇಲ್ಲ.
ಆದರೆ ....
ಜೇಬಿನಿಂದ ಹಣ ತೆಗೆದುಕೊಡುವ ಭರದಲ್ಲಿ ಚೀಟಿ ಉದುರಿ ಅವರ ಕಾಲ ಬಳಿ ಬಿದ್ದದ್ದು ಅವರ ಚಪ್ಪಲಿಗಲ್ಲದೆ ಬೇರೆ ಯಾರಿಗೂ ಗೊತ್ತಾಗಲಿಲ್ಲವೇ !!!
ಮುಸ್ಸಂಜೆ ಬೇರೆ. ಸೂರ್ಯನ ಬೆಳಕು ಒಳ್ಳೇ ಬೆಡ್ ಲೈಟ್ ಇದ್ದಾ ಹಾಗೆ ಇತ್ತು. ಹಾಗೇ ಕಣ್ಣು ಎಳೀತಿತ್ತು. ಹಾಗೇ ಕಣ್ಣು ಮುಚ್ಚಿದರು. ನಿದ್ದೆ ಬಂದೇ ಬಿಟ್ಟಿತು.
ಎಷ್ಟು ಹೊತ್ತಿಗೆ ಬಸ್ ಹೊರಟಿತೋ ಏನೋ, ಒಂದು ಘಂಟೆ ಪ್ರಯಾಣ ಆದ ಮೇಲೆ, ಮುನಿಯಪ್ಪನ ಪಾಳ್ಯ ಸೇರಿತು. ಕಂಡಕ್ಟರ್ ಕೆಳಗಿಳಿದು ಇಬ್ಬರನ್ನು ಇಳಿಸಿ ಹತ್ತು ಜನರನ್ನು ಏರಿಸಿಕೊಂಡು ಸೀಟಿ ಹೊಡೆದಾಗ ಬಸ್ ಮುಂದಕ್ಕೆ ಹೊರಟಿತು.
ಇಳಿದ ಇಬ್ಬರಲ್ಲಿ ಭಟ್ಟರು ಒಬ್ಬರಾಗಿರಲಿಲ್ಲ !!
ಅವರು ಆರಾಮವಾಗಿ ತಂಗಾಳಿಗೆ ಮುಖ ಒಡ್ಡಿ ಇನ್ನೂ ನಿದ್ದೆ ಹೊಡೀತಿದ್ದರು. ಪುಣ್ಯಕ್ಕೆ ಹತ್ತು ನಿಮಿಷ ಮುಂದೆ ಹೋಗುತ್ತಿದ್ದಂತೆಯೇ, ಗಾಡಿಗೆ ಏನು ಅಡ್ಡ ಬಂತೋ ಏನೋ, ಡ್ರೈವರ್ ಗಕ್ಕನೆ ಬ್ರೇಕ್ ಹಾಕಿದ.
ಅವನು ಹಾಕಿದ ಬ್ರೇಕಿಗೆ, ಹೆಣಕ್ಕೂ ಜೀವ ಬರುತ್ತಿತ್ತೋ ಏನೋ ! ಏನಾದರೇನು ಭಟ್ಟರಿಗೆ ಎಚ್ಚರಿಕೆಯಾಗಿ, ಅಕ್ಕ ಪಕ್ಕದವರನ್ನು ಕೇಳಿದಾಗ ತಮ್ಮ ಸ್ಟಾಪಿನಿಂದ ದೂರ ಬಂದಿರುವ ಅರಿವಾಗಿ, ಸರ ಸರ ಎದ್ದು, ಕಂಡಕ್ಟರ್’ಗೆ ದಮ್ಮಯ್ಯದ ಗುಡ್ಡೆ ಹಾಕಿ, ಬಸ್ ಮತ್ತೆ ನಿಲ್ಲಿಸಿಕೊಂಡು,  ಇಳಿದರು.
ಎಲ್ಲೆಲ್ಲೂ ಕತ್ತಲು. ತಮ್ಮ ನಿಲುವಂಗಿ ಜೇಬಿಗೆ ಕೈ ಹಾಕಿ ಸೆಲ್ ಫೋನ್ ತೆಗೆದರು. ಘಂಟೆ ಒಂಬತ್ತೂವರೆ. ನೋಡು ನೋಡುತ್ತಿದ್ದಂತೆಯೇ ಎರಡು ದಿನದಿಂದ ಬ್ಯಾಟರಿ ಚಾರ್ಜ್ ಆಗದ ಕಾರಣ, ಸೆಲ್ ಫೋನ್ ಕಣ್ಣು ಮುಚ್ಚಿಯೇ ಬಿಟ್ಟಿತು.
ಎಲ್ಲೋ ಒಂದೆಡೆ ನಾಯಿ ಬೊಗಳಿತು. ನಾಲ್ಕಾರು ನಾಯಿಗಳು ಲೊಳ್ ಲೊಳ್ ಎಂದು ಅದಕ್ಕೆ ಉತ್ತರ ಕೊಟ್ಟಿತು. ಸ್ವಲ್ಪ ಹೊತ್ತು ಬರೀ ಲೊಳ್ ಲೊಳ್ ಸಂಭಾಷಣೆಯೇ ಎಲ್ಲೆಲ್ಲೂ.
ಕ್ರಿಮಿಕೀಟಗಳ ಕ್ರೀಚ್ ಕ್ರೀಚ್ ಸದ್ದು ನಿರಂತರವಾಗಿ ಬರುತ್ತಿತ್ತು ! ಅಲ್ಲಲ್ಲೇ ಪೊದೆಗಳು ... ಏನೋ ಹರಿದಾಡಿದ ಸದ್ದು. ಹಾವೋ, ಹೆಗ್ಗಣವೋ ಯಾರಿಗೆ ಗೊತ್ತು !!
ಜೇಬಿನಿಂದ ಚೀಟಿ ತೆಗೆದು ನೋಡಿದರು. ಆ ಕತ್ತಲಲ್ಲಿ ಏನು ಕಂಡೀತು. ಥತ್! ಎಂದುಕೊಂಡು ಚೀಟಿ ಎಸೆದರು ! ಅವರಿಗೇನು ಗೊತ್ತು .. ಚೀಟಿ ಅನಾಥವಾಗಿ ಬಸ್ಸಿನಲ್ಲಿ ಯಾರ ಕಾಲ ಕೆಳಗೋ ನಲುಗುತ್ತಿದೆ ಮತ್ತು ಅವರು ಮುದುರಿ ಎಸೆದದ್ದು ನೂರರ ನೋಟೆಂದು !!!
ಅಲ್ಲೊಂದು ಇಲ್ಲೊಂದು ಚಿಮಣಿ ದೀಪ ಮಾತ್ರ ಕಾಣಿಸುತ್ತಿತ್ತು. ಈ ಕಾಲದಲ್ಲೂ ಇಂತಹ ಹಳ್ಳಿಗಳು ಇದೆಯೇ ಎಂದು ಅಚ್ಚರಿಯಿಂದ ಕತ್ತಲಲ್ಲೇ ಸಾಗಿದರು. ಬಸ್ ಹೋದ ವಿರುದ್ದ ದಿಕ್ಕಿನಲ್ಲೇ ಸಾಗಿದರು. ಎರಡು ದಿನದ ಹಿಂದೆ ಹರಿದಿದ್ದ ಚಪ್ಪಲಿಗೆ ನೂರನೇ ಹೊಲಿಗೆ ಹಾಕಿಸಿದಾಗ, ಚಪ್ಪಲಿ ಹೊಲೆಯುವವನು ’ಸ್ವಾಮಿ, ಈ ಚಪ್ಪಲಿ ಮತ್ತೆ ನನ್ನ ಬಳಿಗೆ ತಂದರೆ ನಾನು ಹೊಲೆಯುವುದಿಲ್ಲ’ ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟಿದ್ದ.
ಅರ್ಧ ಘಂಟೆ ನೆಡೆದ ಮೇಲೆ ಸೇತುವೆ ಸಿಕ್ಕಿತು. ಯಾವುದೋ ಒಂದು ಸಣ್ಣ ಮೋರಿ ಮೇಲೆ ಕೆಲವು ಹಲಗೆ ಇಟ್ಟಿದ್ದರು. ಬಹುಶ: ಇದೇ ಅವರು ಹೇಳಿದ ಸೇತುವೆ ಇರಬೇಕು. ಕನಿಷ್ಟ ಊರಿನ ಹೆಸರಿನ ಬೋರ್ಡ್ ಆದರೂ ಇದೆಯೋ ಎಂದು ನೋಡಿದರು. ಯಾವುದೋ ಮುರಿದ ಕಲ್ಲು ಅಲ್ಲಿತ್ತು. ಅದರ ಮೇಲೆ ಏನು ಬರೆದಿದೆ ಎಂದು ನೋಡಲು ಒಂದು ಸಣ್ಣ ದೀಪವೂ ಗತಿ ಇರಲಿಲ್ಲ.
ದೇವರು ಮಾಡಿಸಿದ್ದು ಆಗಲಿ ಎಂದುಕೊಂಡು ಮನದಲ್ಲಿ ನೆನಪಿದ್ದಂತೆ ಎಡಕ್ಕೆ - ಬಲಕ್ಕೆ ತಿರುಗಿಕೊಂಡು ಸಾಗುತ್ತಿದ್ದಂತೆ ದೂರದಲ್ಲಿ ಒಂದು ಕಡೆ ದೀಪ ಕಾಣಿಸಿತು. ಮನೆಯೇ ಇರಬೇಕು. ಅದೇ ದಿಕ್ಕಿನಲ್ಲಿ ಮುಂದೆ ನೆಡೆಯಲು ಕಾಲು ಜಾರಲು, ಕೊನೇ ಗುಟುಕು ಜೀವವಿದ್ದ ಚಪ್ಪಲಿ ಹರಿಯಿತು. ಅದನ್ನು ಅಲ್ಲೇ ಮೂಲೆಯಲ್ಲಿ ಬಿಸುಟು ನೆಡೆದರು. ಕಾಲಿಗೆ ಕಲ್ಲು, ಮುಳ್ಳು ಚುಚ್ಚಿ ಬಾಧಿಸುತ್ತಿತ್ತು.
ಕೊನೆಗೂ ಆ ಮನೆ ಸಮೀಪವಾಯ್ತು. ಒಳಗೆಲ್ಲ ಗಲ ಗಲ ಅಂತ ಗಲಾಟೆ ಇದ್ದರೂ ಕೆಲವು ದೀಪ ಮಾತ್ರ ಇತ್ತು. ಅಷ್ಟೆಲ್ಲ ಜನ ಇದ್ದರೂ ಮನೆ ಹೊರಗೆ ಒಂದು ಮುರುಕಲು ಗಾಡಿಯೂ ಇರಲಿಲ್ಲ. ಕಾರನ್ನು ರಿಪೇರಿಗೆ ಕೊಟ್ಟಿರಬೇಕು. ಅವರು ಕಾರು ಕೆಟ್ಟಿದೆ ಎಂದಿದ್ದು ನಿಜ. ಸುಮ್ಮನೆ ಅವಳು ಹಾರಾಡಿದಳು ಎಂದುಕೊಂಡು ಒಳ ನೆಡೆದರು.
ಇವರು ಒಳಗೆ ಅಡಿ ಇಟ್ಟ ಕೂಡಲೆ  ಯಾರೋ ’ಶಾಮ್ ಭಟ್ಟರು ಬಂದ್ರು’ ಅಂತ ಕೂಗಿದರು. ಇವರಿಗೆ ರಾಮ, ಶ್ಯಾಮ ವ್ಯತ್ಯಾಸವೇ ಇಲ್ಲವೇ?
ಒಳಗೆ ಹೋಗಿ ’ಉಸ್ಸಪ್ಪ’ ಅಂತ ಕುಳಿತರು. ಯಾರೋ ನೀರು ತಂದಿಟ್ಟರು. ಸಣ್ಣ ಲೋಟ. ಗಂಟಲಿಗೆ ನೀರು ಹೋಗುತ್ತಿದಂತೆಯೇ ಆರಿ ಹೋಯ್ತು. ಲೋಟ ಕೆಳಗಿಟ್ಟು "ಇನ್ನೂ ಸ್ವಲ್ಪ ನೀರು ಕೊಡ್ತೀರಾ" ಎಂದರು. ಯಾರಿಗೆ ಕೇಳಿಸಿತೋ ಇಲ್ಲವೋ ನೀರಂತೂ ಬರಲಿಲ್ಲ. ಲೋಟ ತೆಗೆದುಕೊಂಡು ತಾವೇ ಒಳಗೆ ಹೋಗಿನೀರು ಬಗ್ಗಿಸಿಕೊಂಡು ಕುಡಿಯೋಣ ಎಂದು ನೋಡಿದರೆ, ಲೋಟವೇ ಇಲ್ಲ !!
ಅಷ್ಟು ಜನ ಇದ್ದಾರೆ, ಒಬ್ಬರಿಗಾದರೂ ನನ್ನ ಮಾತು ಕಿವಿಗೆ ಬೀಳಬೇಡವೇ? ಏನು ಜನವೋ ಏನೋ ಎಂದುಕೊಂಡು ತಾವೇ ಎದ್ದು ಹೋಗಿ ಮತ್ತೊಂದು ಲೋಟ ತೆಗೆದುಕೊಂಡು ಮೂಲೆಯಲ್ಲಿದ್ದ ಪಾತ್ರೆ ಇಂದ ನೀರು ತುಂಬಿಕೊಂಡು ಕುಡಿದರು.
ವಿಚಿತ್ರವಾಗಿತ್ತು ನೀರು ! ಎಂದೂ ಇಂತಹ ನೀರು ಕುಡಿದಿರಲಿಲ್ಲ !!
ಅಷ್ಟರಲ್ಲಿ ಹಿಂದಿನಿಂದ ಬಂದವರು ಧಡ ಧಡ ಎಂದು ನುಗ್ಗಿಕೊಂಡೇ ಹೋದರು. ಅಷ್ಟು ಪಕ್ಕದಲ್ಲೇ ಹೋದರೂ ಅವರ ಕೈ ಅಥವಾ ದೇಹ ಇವರಿಗೆ ತಾಕಲೇ ಇಲ್ಲ !!
ಅಷ್ಟು ಜನರ ಗಲಾಟೆ ಇದ್ದರೂ ಇವರನ್ನು ಮಾತನಾಡಿಸುವವರು ಯಾರೂ ಗತಿ ಇರಲಿಲ್ಲ. ಮೊದಲೇ ಕತ್ತಲು ಯಾರು ಏನು ಎತ್ತ ಎಂದೂ ತಿಳಿಯುತ್ತಿರಲಿಲ್ಲ. ಒಂದೋ ಎರಡೋ ಮೊಂಬತ್ತಿ ಬಿಟ್ಟರೆ ಎಲ್ಲೆಡೆ ಗಾಡಾಂಧಕಾರ.
ಮನೆ ಯಜಮಾನ ಎಂಬ ಪುಣ್ಯಾತ್ಮ ಎಲ್ಲಿದ್ದಾನೋ ಗೊತ್ತಿಲ್ಲ. ಎಲ್ಲರೂ ಬಿಳೀ ಬಟ್ಟೆ ತೊಟ್ಟಿದ್ದಾರೇನೋ ಎನಿಸುತ್ತಿತ್ತು. ಯಾರು ಏನು ತೊಟ್ಟರೆ ನನಗೇನು ಎಂದುಕೊಂಡರು.
ಯಾರೋ ’ಲೇ, ಗಾಯಿ, ಬಾರೇ ಇಲ್ಲಿ’ ಅಂತ ಜೋರಾಗಿ ಕೂಗಿದರು. ಭಟ್ಟರಿಗೆ ನಗು ಬಂತು. "ಗಾಯತ್ರಿ ಅನ್ನೋ ಹೆಸರನ್ನು ಹಾಗೇ ಕರೆಯೋದು ಬಿಟ್ಟು ಅದೇನು ಗಾಯಿ ಅನ್ನೋದು" ಅಂತ.
ಇದ್ದಕ್ಕಿದ್ದಂತೆ ತಲೆಯಲ್ಲಿ ಕೋಳ್ಮಿಂಚು ಹೊಡೆದಂತೆ ಆಯಿತು !!
ಸಂಜೆ ಸಂಧ್ಯಾವಂದನೆ ಆಗಲಿಲ್ಲ ಎಂದು ನೆನಪಿಗೆ ಬಂತು. ಎಂಥಾ ಅನರ್ಥ ಆಯ್ತು ... ತಕ್ಷಣವೇ ತಮ್ಮ ಕೈಚೀಲದಿಂದ ಅರ್ಘ್ಯ ಪಾತ್ರೆ ಸಹಿತ ಮಿಕ್ಕೆಲ್ಲ ಪಾತ್ರೆ ತೆಗೆದುಕೊಂಡು ನೀರು ತುಂಬಿಸಿಕೊಂಡರು. ಅಲ್ಲೇ ಇದ್ದ ಮಣೆ ಎಳೆದುಕೊಂಡು ಕುಳಿತರು.
ತುಂಬಾ ಹೊತ್ತಾದ್ದರಿಂದ, ಹತ್ತು ಗಾಯಿತ್ರಿ, ಮೂವತ್ತು ನಾರಾಯಣ ಜಪ ಮಾಡಿದರೆ ಸಾಕು ಎಂದುಕೊಂಡು, ಶುರು ಮಾಡಿದರು .....
"ಓಂ ಭೂರ್ ಭುವ ಸ್ವಹ ತತ್ ಸವಿತುರ್ ವರೇಣ್ಯಂ" ......
ಮೊದಲ ಸಾರಿ ಮುಗಿಯುತ್ತಿದ್ದಂತೆ ... ಎಲ್ಲೆಡೆ ನೀರವತೆ ...
ಎರಡನೇ ಬಾರಿ .... ಮೂರನೇ ಬಾರಿ ....
ಎಲ್ಲೆಲ್ಲೂ ನೀರವತೆ .... ನಾಯಿ ಬೊಗಳುವಿಕೆ ಬಿಟ್ಟರೆ ಬೇರೇನೂ ಸದ್ದಿಲ್ಲ ....
ಮೂಗು ಹಿಡಿದು ಕುಳಿತರೆ ಜಪ್ಪಯ್ಯ ಅಂದರೂ ಕಣ್ಣು ಬಿಡೋಲ್ಲ ನಮ್ಮ ಭಟ್ಟರು.
ಹತ್ತನೇ ಬಾರಿ ಆಯಿತು .... ಕಣ್ಣು ಬಿಟ್ಟರು ...
ತಮ್ಮ ಮುಂದಿನ ದೃಶ್ಯ ನೋಡಿ ಕಣ್ಣು ಕಣ್ಣು ಬಿಟ್ಟರು ...
ಹಾಗೇ ಕುಳಿತಿದ್ದರು ! ಏಳಲಿಕ್ಕೇ ಆಗುತ್ತಿಲ್ಲ !!
ಎದುರಿಗೆ ..... ಬಿಳೀ ಪಂಚೆ ಉಟ್ಟ, ಬಿಳೀ ಶರಟು ತೊಟ್ಟ, ಬಿಳೀ ತಲೆಗೂದಲು ಉಳ್ಳ, ಬಿಳೀ ಗಿರಿಜಾ ಮೀಸೆಯ ಆ ವ್ಯಕ್ತಿ ...
ಇವರನ್ನೇ ದುರು ದುರು ನೋಡುತ್ತಿದ್ದರು ....
ಆ ಕಣ್ಣಿನ ತೀಕ್ಷ್ಣತೆಗೆ ತತ್ತರಿಸಿದರು ಭಟ್ಟರು ...
ಕೈಕಾಲು ನಡುಗುತ್ತಿತ್ತು ...
ಕಂಚಿನ ಕಂಠದಿಂದ ಹೊರ ಬಂದ ದನಿ ಹೀಗಿತ್ತು "ನೋಡೋಕ್ಕೆ ಬ್ರಾಹ್ಮಣ ತರಹ ಕಾಣಿಸ್ತೀರ ... ಕಾಪಾಲಿಗಳ ತರಹ ಸ್ಮಶಾಣದಲ್ಲಿ ಏನ್ರೀ ಮಾಡ್ತಿದ್ದೀರಾ ?"
ಚಿಲಿ ಪಿಲಿ ಹಕ್ಕಿಗಳ ಕಲವರ, ಎಳೆ ಬಿಸಿಲಿನಲ್ಲೂ ಹಣೆಯ ಮೇಲಿಂದ ಬೆವರು ಧಾರಾಕಾರವಾಗಿ ಸುರಿಯುತ್ತಿತ್ತು ... ಬಾಯಿ ತೆರೆಯಲು ಹೋದರೂ ದನಿ ಬರಲಿಲ್ಲ ... ಉತ್ತರ ಕೇಳಿಸಿಕೊಳ್ಳಲು ಆ ವ್ಯಕ್ತಿ ಈಗ ಕಾಣಿಸುತ್ತಿಲ್ಲ .... ಕಣ್ಣು ಕತ್ತಲಿಟ್ಟು ಹಾಗೇ ಒರಗಿದರು ಭಟ್ಟರು.
 

Comments

Submitted by ಗಣೇಶ Tue, 04/02/2013 - 23:00

In reply to by bhalle

ಭಲ್ಲೇಜಿ, ಸಿಟಿಯಿಂದ ಹೊರಗೆ...ರಾತ್ರಿ ಪವರ್ ಕಟ್ ಬೇರೆ...ನಾಯಿ ಬೊಗಳುವುದು..ಇತ್ಯಾದಿ ಇತ್ಯಾದಿ ನಾನು ಬರುವ ಬೀದಿಯಲ್ಲೂ ಆಗುತ್ತಿರುತ್ತದೆ. ಅಕ್ಕಪಕ್ಕ ಜನಗಳನ್ನು ನೋಡಿ ಸಮಾಧಾನದಲ್ಲಿ ಬರುತ್ತಿದ್ದೆ. ಈಗ.... ನಾನಂತೂ ಗಾಯತ್ರಿ ಮಂತ್ರ ಹೇಳುವುದಿಲ್ಲ. ಜತೆಯಲ್ಲಿದ್ದ ಜನಗಳೆಲ್ಲಾ ಮಾಯವಾದರೆ ದೆವ್ವಗಳೆಂದು ಪ್ರೂವ್ ಆಗಿ....
Submitted by lpitnal@gmail.com Mon, 04/01/2013 - 22:10

ಭಲ್ಲೆ ಯವರೇ, ಭಟ್ಟರ ಸಂಧ್ಯಾ ಕಾಲ ಪಯಣ' ಚನ್ನಾಗಿ ಮೂಡಿ ಬಂದಿದೆ, ಪೌರೋಹಿತ್ಯ ಎಷ್ಟೊಂದು ಕಷ್ಟಮಯ ಅನ್ನೋದನ್ನೂ ಕೂಡ ಸೂಕ್ಷ್ಮವಾಗಿ ಎಳೆ ಎಳೆಯಾಗಿ ಬಿಡಿಸುತ್ತ , ಮನತಟ್ಟುತ್ತದೆ.ಉತ್ತಮ ಬರಹ. ಧನ್ಯವಾದಗಳು
Submitted by bhalle Tue, 04/02/2013 - 16:23

In reply to by lpitnal@gmail.com

ಲಕ್ಷ್ಮೀಕಾಂತರಿಗೆ ಅನಂತ ಧನ್ಯವಾದಗಳು ಹೌದು, ಪೌರೋಹಿತ್ಯವನ್ನು ಬಹಳ ಹತ್ತಿರದಿಂದ ಕಂಡಿರುವ ಪ್ರಭಾವ ಬರಹದಲ್ಲೂ ಕಂಡಿದೆ
Submitted by bhalle Thu, 04/04/2013 - 16:47

In reply to by neela devi kn

ನಮಸ್ಕಾರ ನೀಳಾದೇವಿಯವರೇ ಪ್ರತಿಕ್ರಿಯೆಗೆ ಧನ್ಯವಾದಗಳು ... ಭಟ್ಟರದು ಜೀವನದ ಸಂಧ್ಯಾಕಾಲ ಪಯಣ ... ಹಾಗಾಗಿ "ಕಣ್ಣು ಕತ್ತಲಿಟ್ಟು ಒರಗಿದರು" ಅಂದರೆ :-((( ಇಂತಹ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿ ಪಾಪ ಅವರಿಗೆ ಇರಲಿಲ್ಲ :-(
Submitted by venkatb83 Thu, 04/04/2013 - 17:09

ನಾ ಇನ್ನೂ ಹೆಚ್ಹಾಗಿ ಪ್ರತಿಕ್ರಿಯಿಸಬೆಕಿತ್ತು ಆದರೆ ಸಮಯದ‌ ಅಭಾವ್ದ ಕಾರಣವಾಗಿ ;())) ಮಾತ್ರ ಹಾಕಿದೆ...! ಆ ವಾಕ್ಯವನ್ನು ಅಲ್ಲಿ ಕೋಟ್ ಮಾಡಲು ಕಾರಣ‌?? ನಾ ಬೀ ಎಮ್ ಟಿ ಸಿ ನಲ್ಲಿ ಬರುವಾಗ‌ ಅವರು ಬ್ರೇಕ್ ಹಾಕೊದೆ ಇಲ್ಲ‌....!! ಆಗ‌ ಅವರು ಬ್ರೆಕ್ ಹಾಕದಿದದರೆ ನಾವ್ ಕುಳೀತಲ್ಲೆ ಮಾರು ದೂರ‌ ಎದ್ದು ಬಿದ್ದು ಸೊ0ಟ‌ ಮುರಿದುಕೊ0ಡು ಅರೆ ಜೀವ‌ ಆಗ್ತೀವಿ... ಅದ್ಕೆ...!! ನೀವ್ ದೆವ್ವಗಳ‌ ಬೆನ್ನು ಬಿದ್ದಿರ‌??? ದೆವ್ವಗಳೀಗೆ ಭಲೇ ಡಿಮ್ಯಾ0ಡ್ ಇರೊ ಹಾಗಿದೆ...!! \|
Submitted by bhalle Thu, 04/04/2013 - 18:15

ಅಡ್ಡಿಯಿಲ್ಲ ಸಗಿ'ಯವರೇ ... ನಿಮ್ಮ ಮೇಲೆ ಸಿಟ್ಟು ಮಾಡಿಕೊಂಡೂ ನಿಮ್ಮನ್ನೇನಾದರೂ ಮಾಡ್ಲಿಕ್ಕೆ ನಾನು ದೆವ್ವ ಅಲ್ಲ :-)))) ಹಾಗೇನೇ, ದೆವ್ವಗಳಿಗೆ ಡಿಮ್ಯಾಂಡು ಸದಾ ಇದ್ದೇ ಇರುತ್ತೆ ... "ದೇವನಾಗಿ ಬಾಳದವ ದೆವ್ವನಾಗಿ ಬಾಳುವ" !
Submitted by Shreekar Thu, 04/04/2013 - 20:41

ದೇವನಾಗಿ ಬಾಳದವ ದೆವ್ವನಾಗಿ ಬಾಳುವ" ತುಳು ನಾಡ ದೆವ್ವಗಳು ತುಳು ನಾಡಿನ ಜನರ ಹಾಗೆ -- ಯಾರಿಗೂ ವಿನಾ ಕಾರಣ ತೊಂದರೆ ಕೊಡಲುಹೋಗುವುದಿಲ್ಲ. ವರುಷಕ್ಕೊಮ್ಮೆ ಭಕ್ತಾದಿಗಳು ಕೊಡುವ ಕೋಳಿ, ಪೂಜೆ, ಇತ್ಯಾದಿಗಳಲ್ಲೇ ತೃಪ್ತಿ ಪಟ್ಟುಕೊಳ್ಳುತ್ತವೆ. :-)))
Submitted by ಗಣೇಶ Thu, 04/04/2013 - 23:22

In reply to by Shreekar

ಶ್ರೀಕರ್‌ಜಿ, >>>ತುಳು ನಾಡ ದೆವ್ವಗಳು ತುಳು ನಾಡಿನ ಜನರ ಹಾಗೆ -- ಯಾರಿಗೂ ವಿನಾ ಕಾರಣ ತೊಂದರೆ ಕೊಡಲುಹೋಗುವುದಿಲ್ಲ. +೧; ತುಳುನಾಡುದ "ದೈವೊ"ಳೆನು ಈರ್ "ದೆವ್ವ" ಮಲ್ತರತ್ತಾ!? http://www.youtube…
Submitted by Shreekar Fri, 04/05/2013 - 13:07

In reply to by ಗಣೇಶ

ಕುತೂಹಲಕಾರೀ ಪದಗಳು - ದೈವ ವರ್ಸಸ್ ದೆವ್ವ. ಮೊದಲನೆಯದು ಸಂಸ್ಕ್ರತ ! ಎರಡನೆಯದು ತದ್ಭವ ? ಕನ್ನಡದಲ್ಲಿ ನಾ ಪಾಸು, ಎರಡನೆಯ ಪ್ರಯತ್ನದಲ್ಲಿ. :-))) ಕೊಂಡಿ ಚೆನ್ನಾಗಿದೆ, ಆದರೆ ತುಳು ಬಾರದವರಿಗೆ ನಿರೂಪಣೆ ಅರ್ಥವಾಗದು. ಕನ್ನಡ ಯಾ ಇಂಗ್ಲೀಷ್‌ ಆಯ್ಕೆ/ಆಪ್ಷನ್ ಸೇರಿಸಲಾಗಬಹುದೇ, ಒಂಚೂರು ತೂಲೆ !
Submitted by bhalle Fri, 04/05/2013 - 18:12

In reply to by Shreekar

ಶ್ರೀಕರ್, ಗಣೇಶ್’ಜಿ ಖಂಡಿತ ಈ ಕಥೆಯ ದೆವ್ವಗಳು ತುಳು ನಾಡಿನಿಂದ ಬಂದವೇ ಆಗಿದೆ ... ಇಲ್ಲದಿದ್ದರೆ, ಅಷ್ಟು ಹೊತ್ತು ಅವರೊಂದಿಗೆ ಇದ್ದ ಭಟ್ಟರನ್ನು ಹರಿದು ಮುಕ್ಕದೆ ಬಿಟ್ಟಿರುತ್ತಿತ್ತೇ? ದೆವ್ವಗಳು ಕೆಡುಕು ಮಾಡಬೇಕು ಎಂದೇನೂ ಇಲ್ಲ ನೋಡಿ. ಈ ಕಥೆಯಲ್ಲಿ, ದೆವ್ವಗಳ ಬದಲಾಗಿ ಯಾರೋ ಕೆಟ್ಟ ಮಾನವರೇ ಇದ್ದು ಎಂದುಕೊಳ್ಳಿ, ಭಟ್ಟರ ಬಳಿ ಇದ್ದುದೆಲ್ಲ ಕಸಿದುಕೊಂಡು ಹೋಗಿರುತ್ತಿದ್ದರು. "ದೇವನಾಗಿ ಬಾಳದವ ದೆವ್ವವಾಗಿ ಒಳ್ಳೆಯ ಬದುಕು ಬಾಳಬಹುದು"
Submitted by Shreekar Fri, 04/05/2013 - 20:04

In reply to by bhalle

"ದೆವ್ವಗಳು ಅಷ್ಟು ಹೊತ್ತು ಅವರೊಂದಿಗೆ ಇದ್ದ ಭಟ್ಟರನ್ನು ಹರಿದು ಮುಕ್ಕದೆ ಬಿಟ್ಟಿರುತ್ತಿದ್ದವೇ?" ಗಾಯತ್ರೀ ಮಂತ್ರದ ಮಹಿಮೆ ಅಂದುಕೊಂಡಿದ್ದೆ.
Submitted by ಗಣೇಶ Sat, 04/06/2013 - 23:30

In reply to by bhalle

:) :) ಶ್ರೀಕರ್‌ಜಿ,ಭಲ್ಲೇಜಿ, >>>ಗಾಯತ್ರೀ ಮಂತ್ರದ ಮಹಿಮೆ ಅಂದುಕೊಂಡಿದ್ದೆ. :) ದೆವ್ವಗಳಿಗೆ ಗಾಯತ್ರಿ ಮಂತ್ರದ ಮಹಿಮೆ ಗೊತ್ತಿದೆಯೋ ಇಲ್ಲವೋ ಪಾರ್ಥರೇ ಹೇಳಬೇಕು. :) ಆಂಡ ತುಳುನಾಡ ದೈವೊಳುನ ತುಳು ಭಾಷೆ. ಕನ್ನಡಗು ಒಂತೆ ರಿಯಾಯಿತಿ ಇಪ್ಪು. ಸಂಸ್ಕೃತ-ಇಂಗ್ಲೀಷ್ no-no.:)
Submitted by ಕೀರ್ತಿರಾಜ್ ಮಧ್ವ Tue, 04/16/2013 - 22:10

ಶ್ರೀನಾಥ್‌ರವರೇ, ನಿಮ್ಮ ಕಥೆ ಇಷ್ಟವಾಯಿತು. ಕಥೆಯ ಆರಂಭ ಸಾಮಾನ್ಯವಾಗಿದ್ದರೂ ಭಯಾನಕವಾಗಿ ಅಂತ್ಯಗೊಳಿಸಿದ್ದು ವಿಶೇಷ. ಇಂಥ ಕಥೆಗಳೆಂದರೆ ನನಗೆ ತುಂಬಾ ಇಷ್ಟ.
Submitted by makara Wed, 04/17/2013 - 07:24

@ಶ್ರೀಕರ್...ಜೀ & ಗಣೇಶ್..ಜೀ ಕರಾವಳಿಯ ಭೂತಗಳು ಪಂಚಭೂತಗಳ ಮೂರ್ತರೂಪಗಳು. ಉಳಿದೆಡೆಯ ಭೂತಗಳು ಕರ್ಮಶೇಷ ಕಳೆಯದೇ ಸತ್ತ ಮಾನವರದು. ಆದ್ದರಿಂದ ಕರಾವಳಿಯ ಭೂತಗಳು ದೈವಗಳು ಮತ್ತು ಉಳಿದೆಡೆಯ ಭೂತಗಳು ದೆವ್ವಗಳು. ಖಂಡಿತಾ ಇದು ತಮಾಷೆಯಲ್ಲ. @ಭಲ್ಲೇಜೀ ಬಹಳ ದಿನಗಳ ಸಂಪದಕ್ಕೆ ಬಂದು ನಿಮ್ಮ ಲೇಖನವನ್ನು ಓದಿದ್ದಕ್ಕೂ ಸಾರ್ಥಕವೆನಿಸಿತು, ನಿಮ್ಮ ಲೇಖನ ಮನಸ್ಸಿಗೆ ಮುದ ನೀಡುವುದಷ್ಟೇ ಅಲ್ಲದೇ ಪುರೋಹಿತರ ಕಷ್ಟ ಸುಖಗಳ ಮೇಲೂ ಬೆಳಕು ಚೆಲ್ಲಿ ಅವರ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ. ಒಳ್ಳೆಯ ಬರಹಕ್ಕೆ ಅಭಿನಂದನೆಗಳು ಭಲ್ಲೇಯವರೆ.
Submitted by Shreekar Thu, 04/18/2013 - 15:56

In reply to by makara

ಶ್ರೀಧರ್ ಜೀ, ಸಂಪದಕ್ಕೆ ನೀವು ಮರಳಿದ್ದು ಕರಾವಳಿಯ ಕಡುಬೇಸಿಗೆಯಲ್ಲಿ ಮಳೆ ಸುರಿದು ತಂಪಾದ ಹಾಗಾಯಿತು. -))) ದೈವ, ದೆವ್ವ ಗಳ ವ್ಯತ್ಯಾಸದ ವಿವರಣೆ ತುಂಬ ಹಿಡಿಸಿತು. ಧನ್ಯವಾದಗಳು.