ಹೀಗೊಂದು ಕೆಟ್ಟ ಕನಸು

ಹೀಗೊಂದು ಕೆಟ್ಟ ಕನಸು

ಮನೆಯ ಮುಂದೆ ಎರಡು ಸಾಲು ಜಗುಲಿಗಳು. ಮೊದಲನೆಯದರಲ್ಲಿ ನಾನು ಮಲಗಿದ್ದೇನೆ. ಇನ್ನೊಂದರಲ್ಲಿ ಯಾರೋ ಮಲಗಿದ್ದಾರೆ. ಯಾರು ಅಂತ ನೆನಪಿಲ್ಲ. ನನ್ನ ಬಲಗೈ ಮಧ್ಯದ ಬೆರಳಿಗೆ ಹಾಗು ಬಲ ತೊಡೆಗೆ ಗುಂಡೇಟು ಬಿದ್ದಿದೆ. ಮಧ್ಯದ ಬೆರಳು ಊದಿಕೊಂಡಿರುವುದನ್ನು ನೋಡಿ, ಆ ಗುಂಡು ಅಲ್ಲೇ ಸಿಕ್ಕಿಹಾಕಿಕೊಂಡಿದೆಯೇನೋ  ಅನಿಸಿತು. ತೊಡೆಗೆ ಬಿದ್ದಿರುವ ಗುಂಡೇಟಿಗೆ ಯಾರೋ ಪುಣ್ಯಾತ್ಮರು ಬಟ್ಟೆ ಕಟ್ಟಿದ್ದಾರೆ, ಆದರೂ ರಕ್ತ ಹರಿಯುತ್ತಿದೆ. ನಾನು ಬೋರಲು ಬಿದ್ದಿದ್ದೇನೆ. ಅಲುಗಾಡಲು ಆಗುತ್ತಿಲ್ಲ. ಬೆಳಗ್ಗೆ ಆರರ ಸುಮಾರಿಗೆ ನಾಕಾರು ಜನ ನನ್ನ ಸುತ್ತ ಸೇರಿದ್ದಾರೆ. ಅವರು ಮಾತನಾಡುತ್ತಿರುವುದು ನನಗೆ ಕೇಳಿಸುತ್ತಿದೆ. ಏನಾದರಾಗಲಿ ಒಮ್ಮೆ ಡಾಕ್ಟರು ಬಂದು ಪರೀಕ್ಷಿಸಿ ಬಿಡಲಿ ಎನ್ನುತ್ತಿದ್ದಾರೆ. ಅವರೆಲ್ಲರೂ ನಾನು ಸತ್ತಿದ್ದೇನೆಂದೆ ತೀರ್ಮಾನಿಸಿ ಆಗಿದೆ. ನಾನು ನಿಶ್ಯಕ್ತನಾಗಿ ಕೈ ಕಾಲು ಅಲುಗಾಡಿಸಲಾಗದೆ ಬಿದ್ದಿದ್ದೇನೆ. ಅಷ್ಟರಲ್ಲಿ ಯಾರೋ ಡಾಕ್ಟರು ಬಂದರು ಅಂದರು. ಅವರು ಬಂದು ನನ್ನನ್ನು ಮುಟ್ಟಿ, ಇವ ಹೋಗಿ ಬಹಳ ಹೊತ್ತಾಗಿದೆ ಅಂದರು. ಇಲ್ಲವೋ ನಾನು ಸತ್ತಿಲ್ಲ ಬದುಕಿದ್ದೇನೆ ಎಂದು ನಾನು ಅರಚುವಂತೆ ಭಾಸವಾಯಿತು, ಆದರೆ ನಾನು ಏನೂ ಹೇಳಿರಲ್ಲಿಲ್ಲ.  ಅಷ್ಟೊತ್ತಿಗಾಗಲೇ ಆ ಜನರೆಲ್ಲಾ ಇನ್ನೊಂದು ಜಗುಲಿಯ ಮೇಲೆ ಮಲಗಿದ್ದವನ ಕಡೆ ಹೋಗಿದ್ದಾರೆ ಮತ್ತು ಡಾಕ್ಟರನ್ನು ಕರೆಯುತ್ತಿದ್ದಾರೆ ಅವನನ್ನೂ ಪರೀಕ್ಷಿಸಿ ಎಂದು. ಆ ಡಾಕ್ಟರ  ಬಂದೆ ಬಂದೆ ಎನ್ನುತ್ತಾ ಅತ್ತ ಕಡೆ ಸಾಗುತ್ತಲೇ ನಾನು ಮಲಗಿದ್ದ ಜಗುಲಿ ಮುಂದಕ್ಕೆ ವಾಲಿ (ಮಂಚವನ್ನು ಒಂದು ಕಡೆ ಹಿಡಿದು ಎತ್ತಿದ ಹಾಗೆ) ಕೆಳಗೆ ಬಿದ್ದು ಬಿಡುತ್ತೇನೆಂದು ಅಂದುಕೊಳ್ಳುತ್ತಿರುವಾಗಲೇ, ಆಶ್ಚರ್ಯವಾಗಿ ನಾನು ಕುಕ್ಕರಗಾಲಿನಲ್ಲಿ ನೆಲದ ಮೇಲೆ ಕೂತಿರುತ್ತೇನೆ ಮತ್ತು ಆಗಲೇ ವಾಕರಿಕೆ ಬಂದಂತಾಗಿ ಬಾಯಿಂದ ಗೀಜುಗದ ಬೀಜವೊಂದು ಆಚೆ ಬೀಳುತ್ತದೆ. ಇಷ್ಟಾದರೂ ನನ್ನ ಕಡೆ ಯಾರು ಸುಳಿಯುವುದಿಲ್ಲ. ಅತ್ತ ಕಡೆ ಆ ಡಾಕ್ಟರು ಅವನನ್ನು ಪರೀಕ್ಷಿಸಿ ಇವನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಎನ್ನುತ್ತಿದ್ದಾಗಲೇ, ಅವ ಮಲಗಿದ್ದವ ಸೀದಾ ಎದ್ದು ಅತ್ತ ಕಡೆ ಇದ್ದ ದೊಡ್ಡ ಚರಂಡಿ ಕಡೆ ಧಾವಿಸಿ ಉಚ್ಚೆ ಹೊಯ್ಯಲು ಕೂತ. ಅವ ಎದ್ದು ನಡೆದಾಡಿದ್ದು ನೋಡಿ ಡಾಕ್ಟರು ದಂಗಾಗಿ ಹೋದ. ಅರ್ಧ ಜನ ಹೆದರಿ ಓಡಿ ಹೋದರು.

ನಾನು ಮನೆಯ ಗೇಟಿನ ಸಮೀಪ ಬರುತ್ತಿದ್ದೆ. ಸುಮಾರು ಹತ್ತು ಅಡಿ ಉದ್ದದ ದೊಡ್ಡ ನಾಗರ ಹಾವೊಂದು ಎರಡು ಗೇಟಿನ ಸಂದಿಯಲ್ಲಿ ನುಗ್ಗಲು ಪ್ರಯತ್ನಿಸುತ್ತಿತ್ತು. ಅದರ ತಲೆ ಆಗಲೇ ಒಳಗೆ ತೂರಿತ್ತು. ನಾನು ಎರಡು ಗೇಟನ್ನು ಸಂದಿ ಬೀಳದಂತೆ ಒಂದಕ್ಕೊಂದು ಕೂಡುವಂತೆ ಬಲವಾಗಿ ಹಿಡಿದು ನಿಂತಿದ್ದೆ. ಆದರೂ ಆ ಹಾವು ಒಳಗೆ ನುಸುಳಿಬಿಟ್ಟಿತು. ಗೇಟನ್ನು ದಾಟಿ ಮನೆಯೊಳಗೇ ನುಗ್ಗಿದ ಹಾವನ್ನು ನೋಡಿ, ಮನೆಯ ಹಿಂಬದಿಯ ಅಂಗಳದಲ್ಲಿ ಆಡುತ್ತಿದ್ದ ಮಗುವಿನ ನೆನಪಾಗಿ ನಾನು ಅತ್ತ ಕಡೆ ಓಡಿದೆ. ಹಿತ್ತಲ ಬಾಗಿಲು ಭದ್ರ ಮಾಡಿ, ಕಿಟಕಿಗಳನ್ನು ಮುಚ್ಚಿ, ಗೆಳೆಯನ ಜೊತೆ ಆಡುತ್ತಿದ್ದ ಪುಟ್ಟನಿಗೆ ನೀನು ಇಲ್ಲೇ ಆಟವಾಡುತ್ತಾ ಇರು, ಒಳಗೆ ಬರಬೇಡ, ನಾನೇ ಮತ್ತೆ ಬಂದು ಕರೆದೊಯ್ಯುತ್ತೇನೆ ಎಂದು ಹೇಳಿ ಸರ ಸರನೆ ಮನೆಯೊಳಗೇ ಬಂದೆ. ಅಷ್ಟರಲ್ಲಾಗಲೇ ಅಪ್ಪ ಒಂದು ದೊಡ್ಡ ಕೋಲನ್ನು ಹಿಡಿದು ಹಾವಿನ ಹಿಂದೆ ಹಿಂದೆ ಹೋಗುತ್ತಿದ್ದರು. ಹಾವು ರೂಮು ಸೇರಿತ್ತು. ಅಪ್ಪ ಹಾವನ್ನು ಆಚೆ ತೊಳ್ಳಲು ಯತ್ನಿಸುತ್ತಿದ್ದರೆ ವಿನಃ ಅದಕ್ಕೆ ಒಂದು ಏಟನ್ನೂ ಕೊಡುತ್ತಿರಲ್ಲಿಲ್ಲ. ನಾನು ಒಂದು ಕೋಲಿಗೆ ಚಾಕುವನ್ನು ಕಟ್ಟಿ ಆ ಹಾವನ್ನು ಕಚ ಕಚ ಎನಿಸಿಬಿಡಲೇ ಎಂದು ಯೋಚಿಸುತ್ತಿದ್ದೆ. ಯಾಕೋ ಹಾಗೆ ಮಾಡಲು ಮನಸ್ಸು ಬರಲ್ಲಿಲ್ಲ ಅಥವಾ ಹಾಗೆ ಮಾಡಲು ಅಪ್ಪನೂ ಬಿಡುತ್ತಿರಲ್ಲಿಲ್ಲವೇನೋ.

ಆಮೇಲೆ ಆ ಹಾವಿಗೆ ಏನಾಯಿತೋ ನೆನಪಿಲ್ಲ. ಸ್ವಲ್ಪ ಹೊತ್ತಿನ ನಂತರ ಕಾಲು ತೊಳೆಯಲು ಬಚ್ಚಲು ಮನೆಗೆ ಹೋದೆ. ನೀರು ತುಂಬಿಕೊಳ್ಳಲು ತೊಟ್ಟಿಗೆ ಬೋಸಿ ಹಾಕಿದೆ. ಬೋಸಿಗೆ ಸರಾಗವಾಗಿ ನೀರು ತುಂಬದೆ ಏನೋ ಅಡ್ಡ ಬಂದಂತೆ ಅನಿಸಿ ಬಗ್ಗಿ ನೋಡಿದೆ. ಅಲ್ಲಿ ನೋಡಿದರೆ ಮತ್ತೊಂದು ಹಾವು, ಪಂಚರ್ ಅಂಗಡಿಯ ಮುಂದೆ ಟೈರನ್ನು ಒಂದರ ಮೇಲೊಂದರಂತೆ ಜೋಡಿಸಿಟ್ಟಿರುವ ಹಾಗೆ ಸುರುಳಿ ಸುತ್ತಿಕೊಂಡು ಬಿದ್ದಿತ್ತು. ನಾನು ಕಿಟಾರನೆ ಕಿರುಚಿ ಅಣ್ಣನ್ನನ್ನು ಕರೆದೆ. ಅಣ್ಣ ಬಂದು ತೊಟ್ಟಿಯೊಳಗೆ ಇಣುಕಿ, ಕೈ ಹಾಕಿ ಒಂದರ ಮೇಲೊಂದು ಬಿದ್ದಿದ್ದ ನಾಕು ಟೈರಿನ ಟ್ಯೂಬನ್ನು ಆಚೆ ತೆಗೆದು, ಲೋ ಪುಟ್ಟ ಇದನ್ನು ಮತ್ತೆ ಇಲ್ಲಿ ಕಂಡ್ರೆ ನಿನ್ನ ಕೈಗೆ ಸಿಗದ ಹಾಗೆ ಅಟ್ಟಕ್ಕೆ ಎಸೆಯುತ್ತೇನೆ ಎಂದು ಹೊರನಡೆದ. ನಾನು ಕಾಲು ತೊಳೆದು ಹೊರಬಂದೆ.

ಹಾವಿನ ಕನಸು ಮುಂದುವರೆದಿತ್ತು. ಆದರೆ ಯಾವುದೂ ನೆನಪಿಲ್ಲ. 

 

ಬೆಳಗ್ಗೆ ಎದ್ದು ಅಮ್ಮನಿಗೆ ಕನಸಿನ ವಿಚಾರ ಫೋನ್ ಮಾಡಿ ವಿವರವಾಗಿ ಹೇಳಿದೆ. ಎಲ್ಲವನ್ನು ಕೇಳಿಸಿಕೊಂಡ ಅಮ್ಮ, ನೆನ್ನೆ ಫಾಲ್ಗುಣ ಷಷ್ಠಿ, ಪುಷ್ಯದ ಶಿರಿಯಾಳ ಷಷ್ಠಿ ದಿನ ಮನೆಗೆ ಬಾರೋ  ಹಬ್ಬ ಮಾಡುತ್ತಿದ್ದೇವೆ ಎಂದರೆ ಬರಲ್ಲಿಲ್ಲ. ಅಂದು ನಾಗರನಿಗೆ ತೆನೆ ಹಾಕಿ ಮನೆಯಲ್ಲಿ ಬ್ರಹ್ಮಚಾರಿಗಳಿಗೆ ದಕ್ಷಿಣೆ ಕೊಟ್ಟು ಊಟ ಮಾಡಿಸಿದ್ದೆವು. ಮಾಘದ ಷಷ್ಠಿಯಾದರೂ ಬಂದು ತೆನೆ ಹಾಕು ಎಂದರೂ ನೀನು ಬರಲ್ಲಿಲ್ಲ, ಉಳಿದ್ದದ್ದು ಫಾಲ್ಗುಣ ಷಷ್ಠಿ, ನನಗೂ ಹೇಳಲು ಮರೆತು ಹೋಯಿತು. ಈಗಲಾದರೂ ಹೊರಟು ಬಾ. ಬಂದು ನಾಗರನಿಗೆ ತೆನೆ ಹಾಕು. ನಾವು ಮರೆತರೂ ದೇವರು ಬಿಡೋದಿಲ್ಲ. ಏನು ಬರುತ್ತೀಯೋ ಇಲ್ಲವೋ ? ಎಂದರು. ಈಗಲೇ ಹೊರಟೆನಮ್ಮ ಎಂದು ಹೇಳಿ ಸ್ನಾನ ಮಾಡದೆ ಮುಖ ತೊಳೆದು ಕಾಫಿಯನ್ನೂ ಕುಡಿಯದೆ ಮನೆಯಲ್ಲಿ ಹೇಳಿ ಊರಿನ ಕಡೆ ಓಡಿದೆ.

                                           ***************************************

Rating
No votes yet

Comments

Submitted by ಗಣೇಶ Wed, 04/03/2013 - 23:45

ಸುಧೀಂದ್ರರೆ, ಟಿ.ವಿ.ಯಲ್ಲಿ ನ್ಯೂಸ್ ಮತ್ತು ಡಿಸ್ಕವರಿಯಲ್ಲಿ ಹಾವಿನ ಬಗ್ಗೆ ನೋಡಿ ಮಲಗಿದರೆ ಈ ತರಹ ಕನಸು ಬೀಳುವುದು.:)

Submitted by lpitnal@gmail.com Sat, 04/06/2013 - 09:36

ಸುಧೀಂದ್ರರವರಿಗೆ, ಕನಸು 'ನೆನಕೆ' ಕೊಟ್ಟು ಹೋಗುವುದು ಒಂದು ರೀತಿ ನಮ್ಮ ಮನಸ್ಸಿನ ಆಳದ ಹುದುಗಿದ, ಯೋಚನೆಗಳನ್ನು ಪ್ರತಿಬಿಂಬಿಸುವುದಕ್ಕೆ ಒಳ್ಳೆಯ ಉದಾಹರಣೆಯಾದೀತು ನಿಮ್ಮೀ ಕನಸು. ಚನ್ನಾಗಿ ಬರೆದಿದ್ದೀರಿ ಕೂಡ. ಧನ್ವವಾದಗಳು.

Submitted by ಸುಧೀ೦ದ್ರ Thu, 05/23/2013 - 12:42

In reply to by lpitnal@gmail.com

ಮನಸಿನಾಳದ ಯೋಚನೆಗಳು ಕನಸಾಗಿ ಹೊಮ್ಮುವುದು ಸಾಮಾನ್ಯ ಸಂಗತಿ. ಆದರೆ ಅದು ನಾವು ಎಚ್ಚರವಾದ ಮೇಲೂ ನೆನಪಿನಲ್ಲಿ ಉಳಿಯುವುದು ವಿರಳ. ಎಷ್ಟೋ ಸಲ ನಾನು ಕನಸಲ್ಲಿ ಕಂಡಿದ್ದನ್ನು ನೆನಪಿಸುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅದು ಪೂರ್ತಿಯಾಗಿ ನೆನಪಿಗೆ ಎಂದೂ ಬಂದಿಲ್ಲ. ನಿಮಗೆ ಅಭಿವಂದನೆಗಳು ಲಕ್ಷ್ಮೀಕಾಂತರೆ,
ಸುಧೀಂದ್ರ