ಸಂನ್ಯಾಸಿ ಮತ್ತು ವೇಶ್ಯೆ :
ಒಂದು ನಗರದಲ್ಲಿ ಒಂದು ಮಠ. ಮಠದಲ್ಲೊಬ್ಬ ಸಂನ್ಯಾಸಿ. ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಎರಡು ಸತ್ಸಂಗಗಳು ಮಠದಲ್ಲಿ ನಿಯಮಿತವಾಗಿ ನಡೆಯುತ್ತಿರುತ್ತದೆ. ಮಠಕ್ಕೆ ಸಮೀಪವೇ ಒಬ್ಬಳು ವೇಶ್ಯೆ ವಾಸವಾಗಿರುತ್ತಾಳೆ. ಈ ಸಂನ್ಯಾಸಿಗಾದರೋ ತಾನು ಆಸೆ ಕಾಮನೆಗಳನ್ನೆಲ್ಲಾ ತ್ಯಜಿಸಿರುವ ಒಬ್ಬ ಸಾಧಕನೆಂಬ ಹೆಮ್ಮೆ. ನಿತ್ಯವೂ ವೇಶ್ಯಾಗೃಹಕ್ಕೆ ಹೋಗಿಬರುವ ಪುರುಷರನ್ನೆಲ್ಲಾ ನೋಡಿ ಸಂನ್ಯಾಸಿಯು ನಿತ್ಯವೂ ಆ ವೇಶ್ಯೆಯ ಬಗ್ಗೆ ತಿರಸ್ಕಾರದ ಮಾತನ್ನಾಡುತ್ತಾ ಎಷ್ಟು ಜನರನ್ನು ಹಾಳುಮಾಡುತ್ತಾಳೆ, ಈಕೆ! ಛೇ! ಛೇ!! ಈ ವೇಶ್ಯೆ ನನ್ನ ಕಣ್ಣಿಗೆ ಬಿದ್ರೆ ಪಾಪ ಸುತ್ತು ಹಾಕಿಕೊಳ್ಳುತ್ತೆ! ಎಂತಾ ನೀಚಳು ಇವಳು!! ಎಂದು ನಿತ್ಯವೂ ವೇಶ್ಯೆಯ ನಿಂದನೆ ಮಾಡುವುದು ಋಷಿಯ ದಿನಚರಿಯಲ್ಲಿ ಸೇರಿಹೋಗಿರುತ್ತದೆ. ವೇಶ್ಯೆಯಾದರೋ ತನ್ನ ಮನೆಗೆ ಬಂದವರಿಗೆ ಸುಖವನ್ನು ಕೊಡುತ್ತಾ ಬಂದ ಹಣದಲ್ಲಿ ತನ್ನ ಜೀವನವನ್ನು ಸಾಗಿಸುತ್ತಾ ಉಳಿದ ಸಮಯದಲ್ಲಿ ಅವಳಿಗೆ ತೋಚಿದಂತೆ ತನ್ನ ಮನೆಯ ಸುತ್ತ ಮುತ್ತ ಗಿಡಮರಗಳಿಗೆ ನೀರುಣಿಸುತ್ತಾ, ಪಶು ಪಕ್ಷಿಗಳಿಗೆ ತನ್ನ ಶಕ್ತ್ಯಾನುಸಾರ ಆಹಾರ ಹಾಕುತ್ತಾ , ಪಶು-ಪಕ್ಷಿಗಳನ್ನು ಪ್ರೀತಿಸುತ್ತಾ ದಿನಕಳೆಯುತ್ತಿರುತ್ತಾಳೆ
ದಿನಗಳುರುಳಿದಂತೆ ವೇಶ್ಯೆಗೆ ತನ್ನವೃತ್ತಿಯಿಂದ ಬೇಸರ ಬಂದುಬಿಡುತ್ತದೆ. ಸಹಜವಾಗಿ ವೇಶ್ಯಾಗೃಹಕ್ಕೆ ಜನರು ಬರುವುದು ನಿಂತು ಹೋಗುತ್ತೆ. ವೇಶ್ಯೆಗೆ ಈಗ ಪೂರ್ಣ ಬಿಡುವು. ವೇಶ್ಯೆ ಒಂಟಿಯಾದರೂ ಇವಳ ಮನೆ ಸುತ್ತ ಪಶು ಪಕ್ಷಿಗಳಂತೂ ಯಾವಾಗಲೂ ಬೀಡು ಬಿಟ್ಟಿರುತ್ತವೆ. ಪ್ರಾಯದ ಕಾಲದಲ್ಲಿ ಅವಳ ಸೌಂದರ್ಯವೇ ಅವಳ ಬಂಡವಾಳವಾಗಿ ಹಣದ ಸಂಪಾದನೆ ಚೆನ್ನಾಗಿಯೇ ಆಗಿರುತ್ತದೆ. ಆ ದಿನಗಳಲ್ಲಿ ನಿತ್ಯವೂ ಹಣವನ್ನು ಶೇಖರಿಸಿಟ್ಟಿರುತ್ತಾಳೆ. ಅವಳೊಡನೆ ಸಾಕಷ್ಟು ಹಣ ಸಂಗ್ರಹವಾಗಿರುತ್ತದೆ. ವೇಶ್ಯೆಗೆ ಒಮ್ಮೆ ಹೀಗೆ ಯೋಚನೆ ಬರುತ್ತೆ ನಾನು ನನ್ನ ಪ್ರಾಯವನ್ನೆಲ್ಲಾ ವೇಶ್ಯಾವಾಟಿಕೆಯಲ್ಲೇ ಕಳೆದದ್ದಾಗಿದೆ. ಇನ್ನಾದರೂ ಭಗವಂತನ ಸ್ಮರಣೆ ಮಾಡುತ್ತಾ ಕಾಲ ಕಳೆಯೋಣವೆಂದು ಹತ್ತಿರದಲ್ಲೇ ಇದ್ದ ಮಠಕ್ಕೆ ಹೋಗುತ್ತಾಳೆ. ವೇಶ್ಯೆಯನ್ನು ಕಂಡ ಕೂಡಲೇ ಸಂನ್ಯಾಸಿಗೆ ಮೈಯೆಲ್ಲಾ ಬೆಂಕಿಯಂತಾಗಿ ಸಿಟ್ಟು ನೆತ್ತಿಗೇರುತ್ತದೆ.
ನೀನು ಇಷ್ಟು ದಿನ ನೂರಾರು ಪುರುಷರನ್ನು ಹಾಳುಮಾಡಿ ಈಗ ಇಲ್ಲಿ ಬಂದಿದ್ದೀಯಲ್ಲಾ! ನಿನಗೆ ಮಾನ ಮರ್ಯಾದೆ, ಅನ್ನೋದು ಇಲ್ವಾ? ಸಿಟ್ಟಿನಿಂದಲೇ ದುರುಗುಟ್ಟುತ್ತಾ ಸಂನ್ಯಾಸಿ ಗುಡುಗಿರುತ್ತಾನೆ.
ಸ್ವಾಮೀಜಿ ನಿಮಗೆ ಒಂದು ವಿಷಯ ಗೊತ್ತಾ?
ಏನದು?
ನಿಮ್ಮ ಆಶ್ರಮಕ್ಕೆ ಸತ್ಸಂಗಕ್ಕೆಂದು ಬರುತಿದ್ದರಲ್ಲಾ ಆ ಭಕ್ತರಲ್ಲ್ಲಿ ಅರ್ಧದಷ್ಟು ಮಹಿಳೆಯರ ಗಂಡಂದಿರು ನನ್ನ ಹತ್ತಿರ ಬರುತ್ತಿದ್ದರು!!
ಸಂನ್ಯಾಸಿಗೆ ಬೆಟ್ಟವೇ ತಲೆ ಮೇಲೆ ಬಿದ್ದಂತಾಯ್ತು. ಐದು ನಿಮಿಷ ಮೌನವಾಗುತ್ತಾನೆ.
ವೇಶ್ಯೆ ಮಾತು ಮುಂದುವರೆಸುತ್ತಾಳೆ ನಾನು ಕೆಲವರ ಹೆಸರು ಹೇಳುತ್ತೇನೆ. ಅವರನ್ನು ಪ್ರತ್ಯೇಕ ಕರೆದು ವಿಚಾರಿಸಿ, ಸತ್ಯ ನಿಮಗೇ ಗೊತ್ತಾಗುತ್ತದೆ
ಸಂನ್ಯಾಸಿ ಮೌನವಾಗೇ ಇದ್ದ. ವೇಶ್ಯೆ ನಮಸ್ಕರಿಸಿ ತನ್ನ ಮನೆಗೆ ಹಿಂದಿರುಗುತ್ತಾಳೆ.
ಮಾರನೇ ದಿನ ಬೆಳಗಿನ ಸತ್ಸಂಗ ಮುಗಿದ ನಂತರ ವೇಶ್ಯೆ ಹೇಳಿದ್ದ ಹೆಸರುಗಳಲ್ಲಿ ಸಂನ್ಯಾಸಿಯು ಒಬ್ಬ ಭಕ್ತಳನ್ನು ಕರೆದು ನೀನು ಮನೆಗೆ ಹೋಗುವಾಗ ನನ್ನನ್ನು ಕಂಡು ಹೋಗು, ಉಳಿದವರೆಲ್ಲಾ ಹೊರಡಬಹುದು ಎನ್ನುತ್ತಾನೆ.
ಆ ಭಕ್ತೆ ಸ್ವಾಮೀಜಿ ಹತ್ತಿರ ಹೋಗಿ ಕಾಣಲು ಹೇಳಿದಿರಲ್ಲಾ? ಸ್ವಾಮೀಜಿ ಎಂದು ನಮಸ್ಕರಿಸಿ ಕೇಳುತ್ತಾಳೆ
- ಮನೆಯಲ್ಲಿ ಎಲ್ಲಾ ಸೌಖ್ಯ ತಾನೇ?
- ಏನು ಹೇಳಲಿ ಸ್ವಾಮೀಜಿ, ಮನೆಯಲ್ಲಿ ಪೂರ್ಣ ನೆಮ್ಮದಿ ಇಲ್ಲಾ, ಅದಕ್ಕಾಗಿಯೇ ಸತ್ಸಂಗಕ್ಕೆ ಬರುತ್ತಿರುವೆ.
- ಯಾಕೆ ಏನಾಯ್ತು?
- ನನ್ನ ಪತಿಯ ನಡತೆ ಸರಿ ಇಲ್ಲ, ಸ್ವಾಮೀಜಿ, ಅವನಿಗೆ ಯಾವಳೋ ವೇಶ್ಯೆಯ ಸಂಪರ್ಕವಿದೆ
- ನಿನ್ನ ಹತ್ತಿರ ನಾನು ಮುಕ್ತವಾಗಿ ಮಾತನಾಡಿದರೆ ನಿನಗೆ ಬೇಸರವಾಗುವುದಿಲ್ಲಾ, ತಾನೇ?
- ಇಲ್ಲಾ ಸ್ವಾಮೀಜಿ, ನೀವಲ್ಲದೆ ಇನ್ಯಾರು ನನ್ನ ಹತ್ತಿರ ಹೀಗೆ ಮಾತನಾಡಲು ಸಾಧ್ಯ?
- ಎಷ್ಟು ದಿನಗಳಿಂದ ನಿನ್ನ ಪತಿಗೆ ವೇಶ್ಯೆಯ ಸಹವಾಸ ಇದೆ?
- ನನ್ನ ಮದುವೆಯಾಗಿ ಆರು ತಿಂಗಳು ಅವನೊಡನೆ ಸಂಸಾರ ಮಾಡಿದೆ, ಅಷ್ಟೆ ಅನಂತರ ಅವನಲ್ಲಿ ಕೆಟ್ಟಚಾಳಿ ಶುರುವಾಯ್ತು.
- ನಿನ್ನ ಮದುವೆಯಾಗಿ ಆರು ತಿಂಗಳು ನೀನು ಸುಖವಾಗಿದ್ದೆಯಾ?
- ಹೌದು ಸ್ವಾಮೀಜಿ, ಸುಖವಾಗಿದ್ದೆ. ನಾನು ಒಮ್ಮೆ ನನ್ನ ತೌರಿಗೆ ಹೋದೆ. ತೌರಿನಲ್ಲಿ ತಮ್ಮನ ಮದುವೆಗಾಗಿ ಹೆಣ್ಣು ಹುಡುಕಾಟ ಶುರುವಾಯ್ತು. ಹೆಣ್ಣು ನೋಡಿ ಮದುವೆ ಮಾಡಲು ಆರು ತಿಂಗಳಾಯ್ತು. ಮನೆಯಲ್ಲಿ ನಾನು ಹಿರಿಯವಳು. ಹಾಗಾಗಿ ನನ್ನ ಜವಾಬ್ದಾರಿ ಜಾಸ್ತಿ ಇತ್ತು. ಅಷ್ಟರಲ್ಲಿ ಮನೆಗೆ ಬಾ ಎಂದು ತುಂಬಾ ಒತ್ತಾಯ ಮಾಡಿದ್ದರು. ನಾನು ತಮ್ಮನ ಮದುವೆಯಾಗದೆ ಬರುವುದಿಲ್ಲವೆಂದು ಹಠ ಮಾಡಿದೆ. ನನ್ನ ತಮ್ಮನ ಮದುವೆಗೆ ನಮ್ಮ ಅಪ್ಪನೇ ಹೋಗಿ ಕರೆದರೂ ನನ್ನ ಪತಿ ಬರಲಿಲ್ಲ. ನಾನು ಎಲ್ಲಾ ಮುಗಿಸಿ ನನ್ನ ಪತಿಯ ಮನೆಗೆ ಬಂದಾಗ ಅವನಲ್ಲಿ ತುಂಬಾ ಬದಲಾವಣೆ ಯಾಗಿತ್ತು. ಕುಡಿದು ತಡವಾಗಿ ಮನೆಗೆ ಬರುತ್ತಿದ್ದ. ನಾನು ಅವನನ್ನು ಬೈದು ಬಾಗಿಲು ತೆರೆಯುತ್ತಲೇ ಇರಲಿಲ್ಲ. ಬರು ಬರುತ್ತಾ ಕೆಲವು ರಾತ್ರಿ ಮನೆಗೆ ಬರುವುದನ್ನೇ ನಿಲ್ಲಿಸಿದ. ಅವನು ಪೂರ್ಣ ಬದಲಾಗಿದ್ದ. ನಾನು ಅವನನ್ನು ತಿದ್ದಲು ಸಾಧ್ಯವಿಲ್ಲಾ ಎಂದು ಅವನನ್ನು ಮರೆತು ಮಠಕ್ಕೆ ಬರಲು ಆರಂಭಿಸಿದೆ. ಇದು ನನ್ನ ಕಥೆ ಸ್ವಾಮೀಜಿ
- ಅಯ್ಯೋ ಮರುಳೇ, ನಿನ್ನ ಕಥೆಯಲ್ಲೇ ನಿನ್ನ ಸಮಸ್ಯೆಗೆ ಕಾರಣ, ಪರಿಹಾರ ಎಲ್ಲಾ ಇದೆಯಲ್ಲಾ ತಂಗೀ, ಎಂತಾ ದಡ್ಡಿ ನೀನು. ಆರೇಳು ತಿಂಗಳು ಮದುವೆಯಾದ ಪತ್ನಿಯಿಂದ ದೂರ ಇರಲು ಅವನೇನು ಎಲ್ಲವನ್ನೂ ಬಿಟ್ಟ ಸಂನ್ಯಾಸಿಯೇ? ಎಂತಾ ತಪ್ಪು ಮಾಡಿಕೊಂಡು, ಇಷ್ಟು ದಿನ ಅವನನ್ನೂ ನರಕದಲ್ಲಿಟ್ಟು ನೀನೂ ನರಕದಲ್ಲಿದ್ದೀಯಲ್ಲಾ? ಇನ್ನು ನೀನು ಮಠಕ್ಕೆ ಬರಕೂಡದು. ನಿನ್ನ ಕರ್ತವ್ಯವು ಏನು ಗೊತ್ತಾ? ಇವತ್ತು ನಿನ್ನ ಪತಿ ಕುಡಿದು ಬಂದರೂ ಅವನನ್ನು ಸಹಿಸಿಕೊಂಡು ಅವನನ್ನು ಉಪಚರಿಸಬೇಕು. ಅವನು ಈಗ ರೋಗಿ. ಅವನ ರೋಗಕ್ಕೆ ಕಾರಣ ನೀನೇ. ನೀನು ಕೊಡದ ಸುಖವನ್ನು ಆ ವೇಶ್ಯೆ ನಿನ್ನ ಪತಿಗೆ ಕೊಟ್ಟಿದ್ದಾಳೆ. ಅದು ಅವಳದೂ ತಪ್ಪಲ್ಲ. ನಿನ್ನ ಪತಿಯ ತಪ್ಪೂ ಅಲ್ಲ. ಈಗ ನಿನ್ನ ಪತಿಯ ರೋಗವನ್ನು ಗುಣ ಮಾಡುವ ಹೊಣೆ ನಿನ್ನದೇ. ರೋಗ ವಾಸಿಯಾಗಲು ವೈದ್ಯರ ಮದ್ದು ಬೇಕಿಲ್ಲ. ಬೇಕಾಗಿರುವುದು ನಿನ್ನ ಮನ:ಪೂರ್ವಕ ಪ್ರೀತಿ ಮತ್ತು ಆರೈಕೆ. ನಿನಗೆ ಎರಡು ತಿಂಗಳು ಸಮಯ ಕೊಡುತ್ತೇನೆ. ಅಷ್ಟರಲ್ಲಿ ನೀನು ನಿನ್ನ ಪತಿಯನ್ನು ಸುಧಾರಿಸಿಕೊಂಡು ಅವನೊಡನೆ ಬಂದರೆ ಮಾತ್ರ ಮಠದಲ್ಲಿ ಪ್ರವೇಶ. ಇನ್ನು ಹೊರಡು ಸ್ವಾಮೀಜಿ ಮುಂದೆ ಮಾತನಾಡದೆ ಎದ್ದು ನಡೆದಿದ್ದರು.
ಮಾರನೇ ದಿನ ಮುದುಕಿ ಮತ್ತೆ ಮಠಕ್ಕೆ ಬರುತ್ತಾಳೆ. ಈಗ ಮಠದ ಭಕ್ತರು ಮುದುಕಿಗೆ ಸೂಕ್ತ ಮರ್ಯಾದೆಯಿಂದ ಸತ್ಕಾರ ನೀಡಿದ್ದಾರೆ. ಸ್ವಾಮೀಜಿ ದರ್ಶನ ವಾಗುತ್ತೆ. ಸ್ವಾಮೀಜಿ ಮುದುಕಿಗೆ ಹೇಳುತ್ತಾರೆ ತಾಯಿ ನೀನು ನನ್ನ ಕಣ್ಣು ತೆರೆಸಿದೆ. ನನ್ನ ರೋಗಿಷ್ಟ ಭಕ್ತೆಯರಿಗೆ ಉಪದೇಶವನ್ನು ಇನ್ನು ಮುಂದೆ ನೀನೇ ಮಾಡಬೇಕು
ಅಂದಿನಿಂದ ವೇಶ್ಯೆಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ. ಮಠದ ಎಲ್ಲಾ ಭಕ್ತರೊಡನೆ ಸತ್ಸಂಗದಲ್ಲಿ ಪಾಲ್ಗೊಂಡು ತನ್ನ ಒಳ್ಳೆಯ ನಡವಳಿಕೆಯಿಂದ ಮಠದ ಭಕ್ತೆಯರಿಗೆ ಬಲು ಆಪ್ತಳಾಗಿ ಸಂದರ್ಭ ಒದಗಿದಾಗಲೆಲ್ಲಾ ಕಿರಿಯರಿಗೆ ವಿವೇಕ ಹೇಳುತ್ತಾ ತನ್ನ ಬಾಳ ಸಂಜೆಯಲ್ಲಿ ಸತ್ಸಂಗದಲ್ಲಿ ಕಳೆದು ಜೀವನ ಯಾತ್ರೆ ಮುಗಿಸುತ್ತಾಳೆ. ಪ್ರತಿಯೊಬ್ಬ ಸಂತನಿಗೂ ಒಂದು ಭೂತಕಾಲವಿದ್ದು ಪ್ರತಿಯೊಬ್ಬ ಪಾಪಿಗೂ ಒಂದು ಉತ್ತಮ ಭವಿಷ್ಯ ಇರಲು ಸಾಧ್ಯ, ಎಂಬುದು ಇಲ್ಲಿ ವೇಶ್ಯೆಗೆ ಅನ್ವಯವಾದರೆ, ತನ್ನ ಭವಿಷ್ಯದ ಬಗ್ಗೆ ಚಿಂತಿಸದ ಹಠಮಾರಿ ಹೆಣ್ಣಿಗೂ ಇದೊಂದು ಉತ್ತಮ ಪಾಠ ವಲ್ಲವೇ?
Comments
hariharapurasridhar ರವರೇ,
hariharapurasridhar ರವರೇ, ಸನ್ಯಾಸಿ ಮತ್ತು ವೇಶ್ಯೆ , ಲೇಖನ ಚನ್ನಾಗಿ ಮೂಡಿದೆ. ಹೇಳಬೇಕಾದ ಸಂದೇಶ ಒಡಮೂಡಿದೆ, ಯಾವುದೇ ಸ್ಥಾನದಲ್ಲಿದ್ದರೂ, ಒಳ್ಳೆಯದು ಕೆಟ್ಟುದು ಇದ್ದುದೇ. ತನ್ನ ಕಾಯಕವನ್ನು ನಿಷ್ಠೆಯಿಂದ ಮಾಡಿದ,ವೇಶ್ಯೆ ಒಂದು ರೀತಿ ಸಮಾಜ ಸೇವಕಿಯೂ ಹೌದು. ಸಮಾಜದ ಆರೋಗ್ಯ ಕಾಪಾಡುತ್ತಾಳೆ ಎಂಬ ವಾದವಿದೆ ಈ ಲೇಖನದಲ್ಲಿ. ಅದೇ ರೀತಿ ಪ್ರಿತವಾದಗಳೂ ಇರಲುಸಾಧ್ಯ. ಮಂಥನಕ್ಕೆ ಒಳಗೊಳ್ಳುವ ವಿಚಾರವಂತೂ ಇದೆ ಲೇಖನದಲ್ಲಿ, ಧನ್ಯವಾದಗಳು.