ಹುಲ್ಲಿನ ಮನೆಯ ಹಳವಂಡ

ಹುಲ್ಲಿನ ಮನೆಯ ಹಳವಂಡ

   “ಹುಲ್ಲಿನ ಮನೆ ಮೇಲೋ, ಹಂಚಿನ ಮನೆ ಮೇಲೋ?” ಎಂಬ ಒಂದು ಚರ್ಚಾ ಸ್ಪರ್ಧೆ ನಮ್ಮ ಶಾಲಾ ದಿನಗಳಲ್ಲಿ ನಡೆಯುತ್ತಿತ್ತು ಮತ್ತು ನಾವು ಶಾಲಾ ಮಕ್ಕಳು ತಮ್ಮ ತಮ್ಮ ಮನೆಯ ಛಾವಣಿಗನುಗುಣವಾಗಿ, ತಮ್ಮ ತಮ್ಮ ಮನೆಯೇ ಶ್ರೇಷ್ಠ ಎಂದು ಆವೇಶಭರಿತವಾಗಿ ಚರ್ಚೆಯನ್ನು ಮಂಡಿಸುತ್ತಿದ್ದೆವು ಎಂಬುದನ್ನು ನೆನಪಿಸಿಕೊಂಡರೆ ಈಗ ನಗು ಬರುತ್ತದೆ. ನಮ್ಮ ಹಳ್ಳಿಯಲ್ಲಿ ಅಂದು ಬಡವರು ಶ್ರೀಮಂತರೆನ್ನದೇ, ಬಹುಪಾಲು ಮನೆಗಳವರು ಹುಲ್ಲಿನ ಛಾವಣಿ ಹೊಂದಿದ ಮನೆಗಳಲ್ಲೇ ವಾಸಿಸುತ್ತಿದ್ದರು. ಆ ವಾತಾವರಣದಲ್ಲೇ, ಅಲ್ಲಲ್ಲಿ ಹುಲ್ಲಿನ ಮನೆಗಳು ಕ್ರಮೇಣ ಮರೆಯಾಗಿ, ಒಂದೊಂದೇ ಹಂಚಿನ ಮನೆಗಳ ನಿರ್ಮಾಣವಾಗುತ್ತಿದ್ದ ಕಾಲ ಅದು. ಒಂದು ಹಳ್ಳಿಯಲ್ಲಿ ಇಪ್ಪತ್ತು ಹುಲ್ಲಿನ ಮನೆಗಳಿದ್ದರೆ, ಆರೋ ಹತ್ತೋ ಹಂಚಿನ ಮನೆಗಳಿರುತ್ತಿದ್ದವು. ಹುಲ್ಲಿನ ಮನೆಗಳಲ್ಲೂ ಸಂತೃಪ್ತರಾಗಿದ್ದ ಅಂದಿನ ಜನ, ಹುಲ್ಲಿನ ಛಾವಣಿ ಹೊಂದಿದ ಮನೆಗಳನ್ನು ಬಡತನದ ಸಂಕೇತ ಎಂದು ತಿಳಿದಿರಲಿಲ್ಲ. 
     ಸ್ಥಳೀಯವಾಗಿ ದೊರಕುವ ಪರಿಕರಗಳಿಂದ ಮನೆ ನಿರ್ಮಾಣ ಎಂಬ ತತ್ವಕ್ಕನುಗುಣವಾಗಿ ನಿರ್ಮಾಣಗೊಳ್ಳುತ್ತಿದ್ದ ಹುಲ್ಲಿನ ಮನೆಗಳಿಗೆ ಛಾವಣಿಯಾಗಿ ಬತ್ತದ ಒಣ ಹುಲ್ಲನ್ನು ಹೊದೆಸುತ್ತಿದ್ದರು. ಒಂದೂವರೆ – ಎರಡು ಅಡಿ ದಪ್ಪನೆಯ ಮಣ್ಣಿನ ಗೋಡೆ ಸಹಾ, ಮನೆ ಸುತ್ತ ಮುತ್ತ ಸಿಗುತ್ತಿದ್ದ ಮಣ್ಣನ್ನು ಕಲಸಿ ಮಾಡಿದಂತಹದ್ದು. ಮಣ್ಣನ್ನು ರಾಶಿಹಾಕಿ, ನೀರು ಮಿಶ್ರಣ ಮಾಡಿ ನಾಲ್ಕಾರು ದಿನ ಕೊಳೆಸಿ, ದೊಡ್ಡ ದೊಡ್ಡ ಮುದ್ದೆ ಮಾಡಿ ಗೋಡೆಗಳನ್ನು ಕಟ್ಟುತ್ತಿದ್ದರು. ಗೋಡೆ ಎರಡು ಅಡಿ ಎತ್ತರಕ್ಕೆ ಬರುತ್ತಿದ್ದಂತೆ, ಆ ಭಾಗದ ಗೋಡೆಗೆ ವಿರಾಮ. ಅದು ಬಿಸಿಲಿಗೆ ನಾಲ್ಕಾರು ದಿನ ಒಣಗಿ, ಭದ್ರಗೊಂಡನಂತರ ಅದರ ಮೇಲೆ ಪುನ: ಮಣ್ಣಿನ ಉಂಡೆಗಳನ್ನು ಇಟ್ಟು ಎರಡು ಅಡಿ ಏರಿಸುತ್ತಿದ್ದರು. ಈ ರೀತಿ ಆರೆಂಟು ಅಡಿ ಎತ್ತರವಾದ ಗೋಡೆಗಳ ಮೇಲೆ ಮರದ ದಿಮ್ಮಿಗಳನ್ನಿಟ್ಟು, ಛಾವಣಿಗಾಗಿ ಬಿದಿರಿನ ಗಳಗಳನ್ನು ಹಾಸುತ್ತಿದ್ದರು. ಅದರ ಮೇಲೆ, ತೆಂಗಿನ ಗರಿಗಳನ್ನು ಹೆಣೆದು ಚಾಪೆಯ ರೀತಿ ಮಾಡಿ ಹಾಸಿದ ನಂತರ, ಅದರ ಮೇಲೆ ಹುಲ್ಲಿನ ದಪ್ಪನೆಯ ಹೊದಿಕೆ. ಮನೆಯ ಸುತ್ತ ಮುತ್ತ ಗದ್ದೆಗಳಲ್ಲಿ ಬೆಳೆದ ಪಯಿರಿನಿಂದ, ಬತ್ತವನ್ನು ಪ್ರತ್ಯೇಕ ಮಾಡಿದ ನಂತರ ದೊರಕುವ ಆರು ಅಡಿ ಉದ್ದದ ಬತ್ತದ ಹುಲ್ಲನ್ನು ಓರಣವಾಗಿ, ಸಾಕಷ್ಟು ದಪ್ಪನಾಗಿ ಹೊದಿಸಿದಾಗ ಮನೆಯ ಮಾಡು ತಯಾರು. ದೂರದಿಂದ ಕಂಡರೆ, ತಿಳಿ ಹಳದಿ ಬಣ್ಣದ ಒಣ ಹುಲ್ಲು ಹೊದಿಸಿಕೊಂಡ ಆ ಛಾವಣಿಯು, ಬಿಸಿಲಿಗೆ ಲಕ ಲಕ ಹೊಳೆಯುತ್ತಿದ್ದುದಂತೂ ನಿಜ. ಸಂಜೆಯ ಹೊತ್ತಿನಲ್ಲಿ ಸೂರ್ಯನ ಕೇಸರಿ ಬಣ್ಣವನ್ನು ಪ್ರತಿಫಲಿಸುವ ಹುಲ್ಲಿನ ಮನೆಗಳು, ಸುತ್ತಲಿನ ಮರ,ಗಿಡ,ಗದ್ದೆಗಳ ನಡುವೆ ಒಂದು ರೀತಿಯಲ್ಲಿ ಚಂದವಾಗಿ ಕಾಣಿಸುತ್ತಿದ್ದವು. ನಾಲ್ಕಾರು ತಿಂಗಳು ಕಳೆದ ನಂತರ, ಮುಖ್ಯವಾಗಿ ಮಳೆಗಾಲ ಬಂದ ನಂತರ, ತಿಳಿ ಹಳದಿ ಬಣ್ಣದ ಹುಲ್ಲಿನ ಮಾಡು, ಮಸುಕಾಗಿ, ಕ್ರಮೇಣ ಕಪ್ಪಗಾಗುತ್ತದೆ. ಮಳೆಗಾಲ ಮುಗಿದು, ಮಾಗಿಯ ಬಿಸಿಲು ಕಾದಾಗ, ಆದ ಹುಲ್ಲಿನ ಮಾಡು ಪೂರ್ತಿ ಕಪ್ಪು ಬಣ್ಣ ಪಡೆಯುವ ಪರಿ ಒಂದು ಕೌತುಕ.
     ತಮ್ಮ ತಮ್ಮ ಮನೆಗಳ ಸುತ್ತಲೂ ಇದ್ದ ಗದ್ದೆಗಳಲ್ಲಿ ಬೆಳೆಯುವ ಬತ್ತದ ಹುಲ್ಲನ್ನು ಬಳಸಿದ ಮನೆಗಳು ಒಂದು ರೀತಿಯಲ್ಲಿ ನೆಮ್ಮದಿಯ ಸಂಕೇತವೆಂದು ಹೇಳಿದರೆ ತಪ್ಪಾಗದು. ಏಕೆಂದರೆ, ಸ್ವಂತಕ್ಕೆ ಬತ್ತ ಬೆಳೆಯುವ ಗದ್ದೆ ಇರುವ ಜನರು ಸುಲಭವಾಗಿ ಬತ್ತದ ಹುಲ್ಲನ್ನು ಪಡೆಯಬಲ್ಲವರಾಗಿದ್ದರು; ಅಥವಾ ಹಣ ಕೊಟ್ಟೋ ಅಥವಾ ಸೂಕ್ತ ಬೆಲೆ ಕೊಟ್ಟೋ ಅಂತಹ ಒಣಹುಲ್ಲನ್ನು ಖರೀದಿಸುವ ಶಕ್ತಿ ಉಳ್ಳವರಿಗೆ ಮಾತ್ರ ಸಾಧ್ಯವಿತ್ತು ಅಂತಹ ಛಾವಣಿ ಪಡೆಯಲು. ಸ್ವಂತಕ್ಕೆ ಗದ್ದೆ ಹೊಂದಿಲ್ಲದ ಕೃಷಿ ಕಾರ್ಮಿಕರು ಬಳಸುತ್ತಿದ್ದುದು ಇನ್ನೊಂದು ರೀತಿಯ ಹುಲ್ಲು –  ಅದೇ ಕರಡ ಅಥವಾ ಕೆದಲು!
     ನಮ್ಮೂರನ್ನು ಸುತ್ತುವರಿದಿದ್ದ ಬತ್ತದ ಗದ್ದೆಗಳು, ಹಾಡಿ, ಹಕ್ಕಲು ಮೊದಲಾದವುಗಳನ್ನು ದಾಟಿದರೆ, ಎತ್ತರದಲ್ಲಿ ಹರನ ಗುಡ್ಡ ಎಂಬ ಬರಡು ಭೂಮಿ ಇತ್ತು. ಅಲ್ಲಲ್ಲಿ ಮರಗಿಡಗಳು, ಕುರುಚಲು ಕಾಡು ಇದ್ದರೂ, ಆ ಗುಡ್ಡವು ಹೆಚ್ಚು ಕಮ್ಮಿ ವಿಶಾಲವಾದ ಹುಲ್ಲುಗಾವಲು ಎಂದೇ ಹೇಳಬಹುದು. ಮುರಕಲ್ಲುಗಳು ಅಲ್ಲಲ್ಲಿ ತಲೆ ಎತ್ತಿದ್ದ ಆ ಬಯಲಿನಲ್ಲಿ ಬೆಳೆಯುತ್ತಿದ್ದುದೇ ಕರಡ. ಕರಡ ಎಂಬ ಹುಲ್ಲು ಎತ್ತರವಾಗಿ ಬೆಳೆದು ಒಣಗಿದ ನಂತರ ಅದಕ್ಕೆ ದೊರೆಯುವ ಇನ್ನೊಂದು ಹೆಸರು ಕೆದಲು. ಮಳೆಗಾಲ ಆರಂಭವಾದ ಕೂಡಲೇ, ಅದುವರೆಗೆ ಬರಡಾಗಿದ್ದ ಆ ಹರನಗುಡ್ಡವು  ಪೂರ್ತಿಯಾಗಿ ತಿಳಿಹಸಿರು ಬಣ್ಣದ ಹಚ್ಚಡವನ್ನು ಹೊದೆಯುತ್ತದೆ. ಬಿರು ಬೇಸಗೆಗೆ ಒಣಗಿ ಬೆಂಗಾಡಾಗಿದ್ದ ಆ ಬಯಲು, ಮಳೆಬಿದ್ದ ಕೂಡಲೆ ತನ್ನ ಗರ್ಭದಲ್ಲಿ ಅಡಗಿದ್ದ ಹುಲ್ಲುಬೀಜಗಳಿಗೆ ಜನ್ಮನೀಡುವುದು ಒಂದು ನೈಸರ್ಗಿಕ ವಿಸ್ಮಯ. ಶ್ರಾವಣದ ಸಮಯದಲ್ಲಿ ಹರನಗುಡ್ಡಕ್ಕೆ ಹೋದರೆ, ನಾಲ್ಕಾರು ಇಂಚು ಎತ್ತರದ ಹಸಿರು ಹುಲ್ಲು ತುಂಬಿದ ಆ ಪೂರ್ತಿ ಗುಡ್ಡವು ಹಸಿರು ಹಾಸಿಗೆಯಂತಿರುತ್ತದೆ. ಆ ಚಂದದ, ಮೆತ್ತನೆಯ ನೆಲದ ಮೇಲೆ ಕುಳಿತು ಒಂದೆರಡು ನಿಮಿಷ ಆನಂದಿಸುವ ಬಯಕೆ ಮೂಡುತ್ತದೆ. ಗುಡ್ಡದ ಕೆಳಗಿನ ರೈತರ ದನ ಕರುಗಳಿಗಂತೂ ಆ ಹುಲ್ಲು ಪ್ರತಿದಿನವೂ ಮೃಷ್ಟಾನ್ನ ಭೋಜನವೇ ಸರಿ. ನಾಲ್ಕೆಂಟು ಪಶುಮಂದೆ ಆ ಗುಡ್ಡದ ಸುತ್ತಲೂ ಅಡ್ಡಾಡುತ್ತಾ, ಬೆಳಗಿನಿಂದ ಸಂಜೆಯ ತನಕ ಅಲ್ಲಿನ ಹುಲ್ಲನ್ನು, ಕುರುಚಲು ಗಿಡದ ಚಿಗುರನ್ನು ಮೇದು ವಾಪಸಾಗುತ್ತವೆ. ಆ ರೀತಿ ಮೆಂದ ದನಗಳು ನೀಡುವ ಹಾಲು ರುಚಿ ರುಚಿಯಾಗಿರುವುದಲ್ಲದೇ, ಸೂರ್ಯನ ಬೆಳಕನ್ನು ಹೀರಿ ಬೆಳೆದ ತನ್ನಷ್ಟಕ್ಕೇ ತಾನು ಆ ಗುಡ್ಡದ ಹುಲ್ಲಿನ ಪಾಕೃತಿಕ ಶಕ್ತಿಯನ್ನೂ ಹೊಂದಿರುವುದು ಸಹಜ. ಅದಿರಲಿ, ಈ ರೀತಿ ದನಕರುಗಳು ಹಲವಾರು ವಾರಗಳ ತನಕ ಉಂಡರೂ, ಮಿಕ್ಕಿರುತ್ತದೆ ಅಲ್ಲಿನ ಹುಲ್ಲುಹಾಸು. ದೀಪಾವಳಿಯ ಸಮಯಕ್ಕೆ ಆ ಹುಲ್ಲು ಸುಮಾರು ಒಂದೆರಡು ಅಡಿ ಎತ್ತರವಾಗಿದ್ದು, ಬೂದು ಬಣ್ಣದ ಪಡೆಯುತ್ತವೆ. ಚಳಿಗಾಲದ ಮುಗಿಯುವ ಸಮಯದಲ್ಲಿ ಪ್ರತಿವರ್ಷ ಬೀಸುವ ಫಲಗಾಳಿಗೆ ತೊನೆದಾಡುವ ಆ ಹುಲ್ಲು, ಇಡೀ ಹರನಗುಡ್ಡದ ನೆಲವು ಅತ್ತಿತ್ತ ನಲುಗುತ್ತಾ, ಸಣ್ಣಗೆ ನೃತ್ಯಮಾಡುವಂತೆ ಅನಿಸುವುದೂ ಉಂಟು.
     ಎರಡರಿಂದ ನಾಲ್ಕು ಅಡಿ ಎತ್ತರಕ್ಕೆ ಬೆಳೆದಿರುವ ಈ ಹುಲ್ಲು, ಆಗ ಪಡೆಯುವ ಹೆಸರು ಕರಡ. ಪ್ರತಿದಿನ ಅದನ್ನು ಕತ್ತರಿಸಿ ತಂದು ಸಂಗ್ರಹಿಸಿ ಒಂದು ರಾಶಿ ಮಾಡಿದಾಗ, ಅದನ್ನು  “ಕುತ್ರಿ” ಎನ್ನುವುದುಂಟು. ಸ್ವಲ್ಪ ಚೆನ್ನಾಗಿ ಬೆಳೆದ ಈ ಕಾಡು ಹುಲ್ಲನ್ನು ಕಟ್ಟುಗಳನ್ನಾಗಿ ಮಾಡಿ, ಸಂಗ್ರಹಿಸಿ ಇಡುತ್ತಿದ್ದರು. ಈ ಕರಡವನ್ನು ಅಥವಾ ಕೆದಲನ್ನು ಮನೆಯ ಛಾವಣಿಗೆ ಹೊದೆಸುವ ಪರಿಪಾಠ, ಆ ಸುತ್ತಲಿನ ಹಳ್ಳಿಗಳಲ್ಲಿ. ಬತ್ತದ ಹುಲ್ಲಿನಂತೆಯೇ, ಕರಡದ ಹುಲ್ಲನ್ನೂ ಮನೆಯ ಛಾವಣಿಗೆ ಹೊದೆಸುವುದು, ನಂತರದ ಮಳೆಗಾಲದಲ್ಲಿ ದನಕರುಗಳಿಗೆ ಮೇವನ್ನಾಗಿ ಉಪಯೋಗಿಸುವುದು ನಡೆಯುತ್ತಿತ್ತು. 
     ಹುಲ್ಲಿನ ಮನೆಯ ಅನುಭವಗಳು ವಿಶಿಷ್ಟ. ಪ್ರತಿವರ್ಷ ಬೇಸಗೆಯಲ್ಲಿ, ಅಂದರೆ ಮಳೆಗಾಲ ಆರಂಭವಾಗುವ ಮುಂಚೆ, ಮನೆಯ ಛಾವಣಿಗೆ ಹುಲ್ಲನ್ನು ಹೊದೆಸುವುದೇ ಒಂದು ಸಂಭ್ರಮ. ಆ ದಿನ ಪಾಯಸ ಮಾಡಿ ಸಂತಸಪಡುತ್ತಿದ್ದರು. ಅದಾಗಿ, ಒಂದೆರಡು ವಾರಗಳಲ್ಲಿ ಗುಡುಗು ಮಿಂಚಿನೊಂದಿಗೆ ಆರಂಭವಾಗುವ ಮಳೆಯು, ಮತ್ತೆ ಒಂದೆರಡು ವಾರಗಳಲ್ಲಿ ಜಿರಾಪತಿ ಮಳೆಯಾಗಿ ದಿನವಿಡೀ ಸುರಿಯುವಾಗ, ಬೆಚ್ಚಗೆ ಕುಳಿತಿರಲು ಹುಲ್ಲಿನ ಮನೆಯೇ ಉತ್ತಮ ಎಂಬ ಅಭಿಪ್ರಾಯ ನಮ್ಮ ಊರಿನಲ್ಲಿತ್ತು. ಹಂಚಿನ ಮನೆಯಲ್ಲಾದರೆ, ಮಳೆಯ ಸಿಬರು ಛಾವಣಿಯ ಸಂದಿಯಲ್ಲಿ ಮನೆಯೊಳಗೆ ಬಂದು, ಥಂಡಿಯಾಗುತ್ತಿತ್ತು. ದಪ್ಪನಾಗಿ ಹುಲ್ಲನ್ನು ಹೊದಿಸಿದ ಛಾವಣಿಯು ಒಂದು ರೀತಿಯಲ್ಲಿ ಸ್ವೆಟರ್ ಇದ್ದ ಹಾಗೆ. ಆದರೆ ಆ ಛಾವಣಿಯಲ್ಲಿ ಸಣ್ಣಪುಟ್ಟ ಕ್ರಿಮಿ ಕೀಟಗಳು, ಇರುವೆಗಳು, ಕಯಿಲುಎರು ಎಂಬ ಉಪದ್ರವಕಾರಿ ಇರುವೆಗಳು ವಾಸಿಸುತ್ತಿದ್ದುದರಿಂದ, ಅಂತಹ ಮನೆಯಲ್ಲಿ ವಾಸ ಎಂದರೆ, ಸಕಲೆಂಟು ಜೀವಿಗಳೊಂದಿಗೆ ಸಮರಸದ ಜೀವನ ಎಂದೇ ಅರ್ಥ!
     ಹುಲ್ಲಿನ ಮನೆಗೆ ಸಂಬಂಧಿಸಿದಂತೆ ಇದ್ದ ಒಂದು ಅಪಾಯವೆಂದರೆ, ಅಗ್ನಿ ಅವಗಢ. ಬೇಸಗೆಯ ದಿನಗಳಲ್ಲಿ, ಒಂದು ಕಿಡಿ ತಗುಲಿದರೆ, ಇಡೀ ಮನೆ ಉರಿದುಹೋಗುವ ಸಂಭವ. ಕೇವಲ ಸಂಭವ ಮಾತ್ರವಲ್ಲ, ಪ್ರತಿ ವರ್ಷ ಒಂದೆರಡು ಮನೆಗಳಾದರೂ ಈ ರೀತಿ ಬೆಂಕಿಗೆ ಆಹುತಿಯಾಗುತ್ತಿದ್ದವು ನಮ್ಮ ಹಳ್ಳಿಯಲ್ಲಿ. ನಮ್ಮೂರಿನಿಂದ ಹರದಾರಿ ದೂರದಲ್ಲಿದ್ದ, ಕಲ್ಮರ್ಗಿಯಲ್ಲಿ ಹತ್ತೆಂಟು ಹುಲ್ಲಿನ ಮನೆಗಳು ಈ ರೀತಿ ಸುಟ್ಟು ಹೋದುದು ಅಂದು ಒಂದು ಸುದ್ದಿಯಾಗಿತ್ತು. ಕೂಡು ಕುಟುಂಬದ ಕುಡುಬಿ ಜನರು ಗುಂಪಾಗಿ ಕಟ್ಟಿಕೊಂಡು ವಾಸಿಸುತ್ತಿದ್ದ ಮನೆಗಳು ಅವು. ದುರಂತವೆಂದರೆ, ಕೆಲವೇ ವರ್ಷಗಳಲ್ಲಿ ಎರಡನೆಯ ಬಾರಿ ಅಷ್ಟೂ ಮನೆಗಳಿಗೆ ಪುನ: ಬೆಂಕಿ ತಗುಲಿತು. ಹುಲ್ಲಿನ ಛಾವಣಿಗೆ ತಗುಲಿದ ಬೆಂಕಿಯ ಬೇಗೆಯಿಂದ ಅವರಲ್ಲಾ ಸಾಕಷ್ಟು ನಷ್ಟ ಅನುಭವಿಸಬೇಕಾಯಿತು. 
     ಇಂತಹ ಘಟನೆಗಳು, ಹೆಂಚಿನ ಮನೆಗಳ ಜನಪ್ರಿಯತೆಗೆ ನಾಂದಿ ಹಾಡಿತು. ಕಷ್ಟವಾದರೂ ಪರವಾಗಿಲ್ಲ, ಹೆಂಚಿನ ಛಾವಣಿಯನ್ನು ಹೊಂದಬೇಕು ಎಂಬುದು ಬಡವ ಬಲ್ಲಿದರೆನ್ನದೆ ಎಲ್ಲರ ಬಯಕೆಯಾಯಿತು. ತೋಟ, ಕಾಡು, ಗದ್ದೆಗಳ ನಡುವೆ ಕೆಂಪು ಬಣ್ಣದ ಹೆಂಚಿನ ಮನೆಗಳು ಶೋಭಿಸತೊಡಗಿದವು. 
     ಕಾಲ ಬದಲಾಗುತ್ತಲೇ ಇರುತ್ತದೆ. ಮೇಲೆ ಹೇಳಿದ ವಿಚಾರಗಳು ಇಪ್ಪತ್ತನೆಯ ಶತಮಾನದ ಅನುಭವಗಳು. ಈಗ, ಅಂದರೆ, ಇಪ್ಪತ್ತೊಂದನೆಯ ಶತಮಾನದಲ್ಲಿ, ನಮ್ಮ ಹಳ್ಳಿಯಲ್ಲಿ ಹೆಂಚಿನ ಮನೆಗಳು ಕ್ರಮೇಣ ಮರೆಯಾಗುತ್ತಾ, ಸಿಮೆಂಟ್ ಮತ್ತು ಕಬ್ಬಿಣ ಬಳಸಿ ನಿರ್ಮಿಸಿದ ಛಾವಣಿಯ, ದುಬಾರಿ ಮನೆಗಳು ಜನಪ್ರಿಯತೆ ಪಡೆಯುತ್ತಿವೆ! ಕಾಲಾಯ ತಸ್ಮೈ ನಮ:!!
(ಚಿತ್ರಕೃಪೆ : ಕಾಮನ್ಸ್.ವಿಕಿಮೀಡಿಯಾ.ಆರ್ಗ್)
 

Comments

Submitted by sasi.hebbar Wed, 04/03/2013 - 16:25

In reply to by CanTHeeRava

ನೀವು ಹೇಳಿದ ಗೀತೆಯ ಸಾಲುಗಳು, ಈ ಬರಹದ ಶೀರ್ಷಿಕೆಯಾಗಿದ್ದರೆ ಇನ್ನೂ ಚೆನ್ನಿತ್ತೇನೋ! ನನಗೆ ಆಗ ಹೊಳೆದಿರಲಿಲ್ಲ. ಧನ್ಯವಾದಗಳು.
Submitted by Manjunatha D G Wed, 04/03/2013 - 20:24

ಕರಾವಳಿಯಲ್ಲಿ ಕರಡ‌ ಅಥವ‌ ಹುಲ್ಲಿನ‌ ಮಾಡುಗಳಿದ್ದ0ತೆ ನಮ್ಮ‌ ಮಲೆನಾಡಿನಲ್ಲಿ ಅಡಿಕೆ ಸೋಗೆಯ‌ ಮೇಲ್ಚಾವಣಿಯ‌ ಮನೆಗಳನ್ನು 2000 ನೇ ಇಸವಿ ವರೇಗೂ ನೋಡಬಹುದಿತ್ತು. ಈಗ‌ ನಮ್ಮ‌ ಹಳ್ಳಿಗಳಲ್ಲಿ ಮನೆ ಪಕ್ಕದ‌ ದನದ‌ ಕೊಟ್ಟಿಗೆಗಳನ್ನು ಕೆಲಾವರು ಅಡಿಕೆ ಸೋಗೆಯಿ0ದ‌ ಹೊದಿಸಿರುತ್ತಾರೆ. ಸರಕಾರದ‌ ಗುಡಿಸಿಲು ರಹಿತ‌ ನಾಡನ್ನು ಕಟ್ಟುವ‌ ಅಬ್ಬರದಲ್ಲಿ ಮಳೆಗಾಲದಲ್ಲಿ ಬೆಚ್ಚಗೆ, ಸೆಕೆಗಾಲದಲ್ಲಿ ತ0ಪಾಗಿರುತ್ತಿದ್ದ‌ ಈ ವ್ಯವಸ್ಥೆ ಮರೆಯಾಗುತ್ತಿದೆ. ಕಬ್ಬಿಣ‌, ಕಲ್ಲು, ಸಿಮೆ0ಟ್ ಗಳ‌ ಜೋಡಣೆಯಲ್ಲಿ ಜೀವಮಾನದ‌ ದುಡಿಮೆಯನ್ನೆಲ್ಲಾ ಸುರಿದು ವಾಸ್ತು ವಿಗನುಗುಣವಾಗಿ ಮನೆ ನಿರ್ಮಿಸಿಕೊ0ಡು ಬದುಕುವ‌ ನಾವು ಗುಡಿಸಿಲು ಮನೆಗಳಿ0ದ‌ ಬಹು ದೂರ‌ ಸಾಗಿದ್ದೇವೆ. ಒಳ್ಳೆಯ‌ ಲೇಖನಕ್ಕಾಗಿ ದನ್ಯವಾದಗಳು.
Submitted by sasi.hebbar Wed, 04/10/2013 - 10:31

In reply to by ಗಣೇಶ

ನೀವಂದಂತೆ "ಮುಡಿ" ಮಾಯ! "ತಿರಿ" ಅಂತರ್ಧಾನ. "ಕಳಸಿಗೆ" ಕದ್ದುಹೋಗಿದೆಯಾ? "ಸಿದ್ದೆ" ಸೀದ ಹೋಗಿದೆ ಪರಲೋಕಕ್ಕೆ! ನೀವು ಕೊಟ್ಟ ಲಿಂಕ್ ಸಹಾ ಚೆನ್ನ. ಧನ್ಯವಾದ.