ಕೊಡು ಶಿವನೇ ಕೊಡು ವರವ

ಕೊಡು ಶಿವನೇ ಕೊಡು ವರವ

ಕೊಡು ಶಿವನೇ ಕೊಡು ವರವ
ಕುಡುಕನಲ್ಲದ ಗಂಡನ
ಕೊಡು ಶಿವನೇ ಕೊಡು ವರನ
ಕೆಡುವ್ಯಸನಗಳಿರದ ಗಂಡನ

ನಿಡುಚಡ್ಡಿಗಳ ತೊಟ್ಟಡುಗೆಗುಪಕರಿಸುತ್ತ
ಮನೆಯ ಕೆಲಸಗಳ ಕೂಡೆ ಮಾಡುತ್ತಿರಲಿ
ಕೂರ್ಮೆಯಲಿ ಗಲವನ್ನೊತ್ತಿ ಹಿಡಿಯುತ್ತ
ಸವಿಮುತ್ತುಗಳ ಮೞೆಯ ಸುರಿಯಿಸುತ್ತಿರಲಿ

ಕೂಡಿಕೞೆದಾದ ಬೞಿಕ ಕೂಡೆ ಮಲಗುತ್ತ
ಸವಿಮಾತುಗಳ ಕಿವಿಯೊಳೊರೆಯುತ್ತಿರಲಿ
ಕೂಡುಬಾೞ್ವೆಯ ಬಲು ಗುಟ್ಟುಗಳ ತಿಳಿಯಿಸುತ್ತ
ಸಗ್ಗಸೊಗಗಳ ನಿತ್ಯ ತೋಱುತ್ತಿರಲಿ

ಮಾಡಿದುಪವಾಸಗಳ ಮುಂದಿಟ್ಟ ಬೇಡಿಕೆಯ ನೆರವೇಱಿಸಿಕೊಡಪ್ಪಾ ತಂದೆಯೇ ಶಿವಪ್ಪಾ

ಹೆಚ್ಚು ಕಲಿತಿರಲಿ ಕೆಚ್ಚು ತುಂಬಿರಲಿ
ತಾಯಿತಂದೆಯರ ನೆರಳಾಗಿ ಬಾೞದಿರಲಿ
ಕೂಡಿಟ್ಟ ನಿಧಿಯಿರಲಿ ಹೂತಿಟ್ಟ ಹಣವಿರಲಿ
ಬೇಂಕ್ ಖಾತೆಗೆ ನಿತ್ಯ ಜಮೆಯಾಗುತ್ತಿರಲಿ
ಬಿಂಕದಲಿ ಓಡಾಡೆ ನಲುಗಾಲಿ ವಾಹನವೊಂದಿರಲಿ

ಮನೆಯೊಳಗೆ ಲಚುಮಿಯಿರೆ ಸವತಿಯರ ಬಯಸದ
ನಲ್ನಡತೆಯುಳ್ಳಾತ ತಾನಾಗಿರಲಿ
ಮುದದಿಂದ ಬತ್ತಿಯನ್ನನುದಿನವೂ ಉರಿಯಿಸಿಡುವ
ಭಕ್ತಿಯುಳ್ಳವನವನಾಗಿರಲಿ
 
ತನ್ನ ಕಾರ್ಯಗಳ ತಾನೇ ಮಾಡುವ
ಬಲು ಜಾಣ ತಾನಾಗಿರಲಿ
ವ್ಯಕ್ತಿಸ್ವಾತಂತ್ರ್ಯಕ್ಕಡ್ಡಿಗಳ ಮಾಡದ
ಬಲು ಉದಾರಿ ಅವನಾಗಿರಲಿ

ಇಂತಿಪ್ಪ ಗಂಡನನ್ನೆಂತಾದರೂ ಒದಗಿಸಿ ಕೊಡಪ್ಪಾ ಶ್ರೀ ಚೆನ್ನಸೋಮೇಶ್ವರಾ!

Rating
No votes yet

Comments