………….ಮೊದಲ ವಿದೇಶಿ ಪಯಣದ ಗಮ್ಮತ್ತು!
————————————————————-
ನೋಡ ನೋಡುತಲೆ ಹದಿನೈದು ವರ್ಷಗಳು ಉರುಳಿಹೋದವೆ?
1998 ರ ಆರಂಭದಲ್ಲಿ ಶುರುವಾದ ಈ ಚೈತ್ರ ಯಾತ್ರೆ ಒಂದೂವರೆ ದಶಕದ ನಂತರವೂ ಇನ್ನು ಕುಸಿಯದೆ, ಕುಗ್ಗದೆ ಮುನ್ನಡೆದಿದೆ. ಆ ದಿನ ಮೊಟ್ಟ ಮೊದಲ ಬಾರಿಗೆ ವಿದೇಶದ ವಿಮಾನ ಹತ್ತುವಾಗ, ಇಷ್ಟು ಧೀರ್ಘಕಾಲದ ಜೀವನ ಪಯಣಕ್ಕೆ ಅದು ನಾಂದಿಯಾಗಬಹುದೆಂಬ ಇನಿತು ಕಲ್ಪನೆಯೂ ಮನದಲ್ಲಿ ಮೂಡಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಆ ಪಯಣವೆ ಕೇವಲ ಒಂದೆರೆಡು ವರ್ಷದ ಪ್ರಾಜೆಕ್ಟ್ ಡೆಪ್ಯೂಟೇಶನ್ ಕೆಲಸದ ಮೇಲೆ ಬಂದದ್ದಾಗಿತ್ತು. ಆ ಮೊದಲ ಪಯಣದಲ್ಲೆ ‘ಅನನುಭವ’ ಹಾಗೂ ‘ಮೊದಲ ಸಲದ ಆತಂಕ’ಗಳು ಸೇರಿ, ಸಾಕಷ್ಟು ‘ರಸಮಯ’ ಅನುಭವಗಳನ್ನು ಸೃಷ್ಟಿಸಿ ಮರೆಯದ ನೆನಪಾಗಿಸಿದ್ದು ಒಂದು ಕಡೆ. ಅದರ ಬೆನ್ಹಿಂದೆ ಕಳೆದ ಹದಿನೈದು ವರ್ಷಗಳಲ್ಲಿ ಆಗಿರುವ ಬದಲಾವಣೆ, ಕೈಗೊಂಡ ಪಯಣಗಳ ಚಿತ್ರಣ ಮತ್ತೊಂದು ಕಡೆ!
ಇಷ್ಟು ದಿನಗಳಾದರೂ ಆ ಮೊದಲ ಪಯಣದ ರಾತ್ರಿ ಚೆನ್ನಾಗಿ ನೆನಪಿದೆ. ಮೊಟ್ಟ ಮೊದಲ ವಿದೇಶ ಪ್ರಯಾಣ – ಅದೂ ನಮ್ಮ ಹತ್ತಿರದ ಪರಿವಾರದಲ್ಲಿ ಇದೆ ಮೊಟ್ಟ ಮೊದಲ ವಿದೇಶ ಯಾತ್ರೆ. ಏರಿಂಡಿಯಾದಲ್ಲಿ ಬೆಂಗಳೂರಿಂದ ಹೊರಡುವ ವಿಮಾನ ಹಿಡಿಯಬೇಕಿತ್ತು. ಆಗ ಇನ್ನು ಹಳೆಯ ಎಚ್.ಎ.ಎಲ್. ನ ನಿಲ್ದಾಣವೆ ಬಳಕೆಯಲ್ಲಿದ್ದ ಕಾಲ. ಹೊಸದಾಗಿ ಮದುವೆಯಾಗಿದ್ದ ಬಿರುಸು ಬೇರೆ. ಜತೆಗೆ ಒಂದಿಬ್ಬರು ಗೆಳೆಯರು ಮತ್ತು ಮನೆಯವರ ಜತೆ ಏರ್ಪೋರ್ಟಿಗೆ ಬಂದಾಗ ಸಂಜೆ ಸಮಯ. ಇಳಿದಿದ್ದೆ ಒಳಹೋಗುವ ಬಾಗಿಲ ಹತ್ತಿರ ಬರುತ್ತೇವೆ – ಅಲ್ಲೇಲ್ಲಿದೆ ಒಳಹೋಗಲಿಕ್ಕೆ ಜಾಗ? ಬಾಗಿಲು ತುಂಬ ಜನವೋ ಜನ! ಅದರಲ್ಲೇನು ವಿಶೇಷ, ಅಲ್ಲಿ ಜನಜಂಗುಳಿ ಯಾವಗಲೂ ಗಿಜಿಗುಟ್ಟುತ್ತಿರಲೇಬೇಕಲ್ಲ ಅನ್ನುತ್ತಿರಾ? ಅದೆ ನೋಡಿ ಗಮ್ಮತ್ತಿನ ವಿಷಯ..! ಅಲ್ಲಿದ್ದ ಜನರಲ್ಲಿ ಮುಕ್ಕಾಲು ಪಾಲು, ನನಗೆ ಗೊತ್ತಿದ್ದ ಜನರೆ! ನಾನು ವಿದೇಶಕ್ಕೆ ಹೊರಡುತ್ತಿದೇನೆಂದು ಹೇಗೊ ಪತ್ತೆ ಹಚ್ಚಿ, ಮೈಸೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿದ್ದ ಹತ್ತಿರದ ಹಾಗೂ ದೂರದ ನೆಂಟರಿಷ್ಟರೆಲ್ಲಾ ನಾನು-ತಾನೆಂದು ಉಟ್ಟ ಬಟ್ಟೆಯಲ್ಲೆ ಬಸ್ಸು, ಟ್ರೈನ್ ಹಿಡಿದು ಓಡಿ ಬಂದಿದ್ದರು! ಇದು ಸಾಲದೆಂಬಂತೆ ನಮ್ಮ ಮನೆಗಳ ಕಡೆಯಿಂದಲೂ ಬಂದ ಬೆಂಗಳೂರಿನ ಒಂದಷ್ಟು ಜನವೂ ಸೇರಿ, ಅಲ್ಲಿ ದೊಡ್ಡ ದೊಂಬಿಯೆ ನೆರೆದಂತಿತ್ತು!
ನನಗೆ ಏನು ಮಾಡಲಿಕ್ಕೂ ತೋಚಲಿಲ್ಲ, ಏನು ಹೇಳಬೇಕೆಂದೂ ಗೊತ್ತಾಗಲಿಲ್ಲ. ಇದು ಕೊಂಚ ಅನಿರೀಕ್ಷಿತ ಬೆಳವಣಿಗೆಯಾಗಿದ್ದರಿಂದ, ನಾನಿದಕ್ಕೆ ಸಿದ್ದನಾಗೂ ಇರಲಿಲ್ಲ. ವಿಮಾನ ಹೊರಡುವ ನಾಲ್ಕು ಗಂಟೆಗೆ ಮುನ್ನವೆ ಒಳಗಿರಬೇಕೆಂಬ ಆತುರ ಬೇರೆ; ಮೊದಲೆ ಗೊತ್ತಾಗಿದ್ದರೆ ಒಂದೆರಡು ಗಂಟೆ ಮೊದಲೆ ಬಂದು ಎಲ್ಲರನ್ನು ಮಾತಾಡಿಸಿಯಾದರೂ ಹೋಗಬಹುದಿತ್ತು. ಈಗೇನು ಮಾಡಲೂ ಕೊನೆಗಳಿಗೆಯ ಹೊತ್ತು. ಯಾರಿಗೆ ನಮಸ್ಕಾರ ಹೇಳುವುದು, ಯಾರಿಗೆ ‘ಚೆನ್ನಾಗಿದ್ದೀರಾ?’ ಎಂದು ಕೇಳುವುದು ಯಾ ‘ಚೆನ್ನಾಗಿದ್ದೀನಿ’ ಅಂತ ಹೇಳುವುದು? ಜತೆಗೆ, ಆ ಗಳಿಗೆಯಲ್ಲಿ ಬಂದವರಲ್ಲಿ ಕೆಲವರ ಮುಖಗಳಷ್ಟೆ ದಾಖಲಾಗಿ ಮಸುಕಾಗಿ ನೆನಪಲ್ಲಿ ಉಳಿದದ್ದು ಬಿಟ್ಟರೆ ಯಾರಾರು ಬಂದರೊ, ಹೋದರೊ ಅನ್ನುವುದು ಗೊತ್ತಾಗಲಿಲ್ಲ. ಯಾರೊ ದೊಡ್ಡ ರಾಜಕಾರಣಿಯೊ, ಸಿನಿಮಾತಾರೆಯ ಬಂದಾಗ ಸೇರುವ ಜನಸಂದಣಿಯಂತೆ ಬಂದಿದ್ದ ಗುಂಪನ್ನು ಕಂಡಾಗ ಅಚ್ಚರಿಗಿಂತ ಹೆಚ್ಚಾಗಿ ಮುಜುಗರ, ದಿಗಿಲಾಗಿದ್ದೂ ನಿಜವೆ. ಆದರೂ ಬೇರೇನೂ ದಾರಿಯಿಲ್ಲದೆ ಎಲ್ಲರಿಗೂ ಕೈಯೆತ್ತಿ ಬೀಸಲಷ್ಟೆ ಸಾಧ್ಯವಾಗಿದ್ದು!
ಅದೇ ಹೊತ್ತಿನಲ್ಲೆ ಮತ್ತೊಂದು ತಮಾಷೆಯೂ ನಡೆಯಿತು. ಬಂದಿದ್ದವರೆಲ್ಲಾ ತಾವು ಬಂದಿದ್ದು ಮಾತ್ರ ಸಾಲದೆ, ಜತೆಗೊಂದೊಂದು ತಿಂಡಿಯ ಗಂಟು ಪೊಟ್ಟಣ ಬೇರೆ ಹೊತ್ತು ತಂದಿದ್ದರು, ನನಗೆ ಕೊಟ್ಟು ಕಳಿಸುವ ಸಲುವಾಗಿ! ಚಕ್ಕುಲಿ, ನಿಪ್ಪಿಟ್ಟು, ಒಬ್ಬಟ್ಟಿನಿಂದಿಡಿದು ಏನೆಲ್ಲಾ ಇತ್ತಂತೆ ಅಲ್ಲಿ. ಫ್ಲೈಟಿನಲ್ಲಿ ಅದನ್ನೆಲ್ಲ ಹಾಕಲು ಸಾಧ್ಯವಿಲ್ಲವೆಂದು ಅವರನ್ನೊಪ್ಪಿಸಿ ನಿಭಾಯಿಸುವಷ್ಟರಲ್ಲಿ ಸಾಕುಬೇಕಾಗಿ ಹೋಯ್ತು. ಕೊನೆಗೆ, ಹೇಗೊ ಸಮಾಧಾನಿಸಿ ಒಂದೊಂದು ಕೆಜಿಗೂ ಸಾವಿರಗಟ್ಟಲೆ ರೂಪಾಯಿ ಕಟ್ಟಬೇಕೆಂದು ವಿವರಿಸಿದ ಮೇಲೆಯೆ, ಅವರ ಒತ್ತಾಯ ನಿಂತಿದ್ದು. ಆದರೂ ಅವರಿಗೆ ಬೇಸರವಾಗದಿರಲೆಂದು, ಮನೆಯವರ ಕೈಯಲ್ಲಿ ಕೊಟ್ಟುಬಿಡುವಂತೆ ಹೇಳಿದೆ, ನಾಳೆಯೇ ವಾಪಸ್ಸು ಬಂದು ತಿನ್ನುವವನ ಹಾಗೆ! ಅವರೂ ಅದೆ ಭಾವದಲ್ಲಿ ಕೊಡಲಾರಂಭಿಸಿದಾಗ, ಒಂದು ಸಣ್ಣ ಯುದ್ಧ ಗೆದ್ದ ಭಾವನೆ. ಈ ಗಡಿಬಿಡಿಯ ಜತೆ, ಬಂದವರೆಲ್ಲಾ ಹೇಗಾದರೂ ಮಾಡಿ ತಾವು ಬಂದಿದ್ದು ಗೊತ್ತಾಗುವಂತೆ ಮಾಡಲು ಎಲ್ಲಾ ತರದ ಸರ್ಕಸ್ಸು ಮಾಡಾಟ ಬೇರೆ. ಬೇರೆಯ ಜನಗಳೆಲ್ಲಾ ದಾರಿಗಡ್ಡ ನಿಂತಿದ್ದ ನಮ್ಮವರನ್ನೆಲ್ಲಾ ಆಗಲೆ ಬೈದುಕೊಳ್ಳಲು ಶುರುಮಾಡಿದ್ದರು. ಇನ್ನು ನಾನು ಇಲ್ಲೆ ನಿಂತಿದ್ದಷ್ಟೂ ಹೆಚ್ಚು ಅಪಾಯಕಾರಿ ಎನಿಸಿ ಮೊದಲು ಒಳಹೋಗಿಬಿಡಲು ನಿರ್ಧರಿಸಿದೆ.
ಒಳ ಹೋಗುವುದೂ ಒಂದು ಹರಸಾಹಸವೆ ಆಯ್ತೆನ್ನಿ. ಆಷ್ಟೊಂದು ಜಂಗುಳಿಯ ನಡುವೆ ಬರಿ ನಾವೆ ಹೋಗುವುದಿದ್ದರೆ, ಹೇಗೊ ನಿಭಾಯಿಸಿಬಿಡಬಹುದಿತ್ತು. ಆದರೆ, ನಮ್ಮ ಜತೆ ನಮಗಿಂತಲೂ ಭೀಮಕಾಯದ ನೂರಾನಲವತ್ತು ಕೇಜಿ ಲಗ್ಗೇಜು ಬೇರೆ ಇತ್ತಲ್ಲ? ಅದನ್ನೂ ಸಂಭಾಳಿಸಿಕೊಂಡು, ನಮ್ಮನ್ನೂ ತೂರಿಸಿಕೊಂಡು, ಹಾಗೂ ಹೀಗೂ ಪ್ರವೇಶ ದ್ವಾರ ತಲುಪುವಷ್ಟರಲ್ಲಿ ಬಟ್ಟೆಯೆಲ್ಲಾ ಬೆವರಿನ ಮುದ್ದೆ…ಆದರೂ ಸದ್ಯ, ತಲುಪುದೆವಲ್ಲ ಎಂಬ ಸಮಾಧಾನ. ಎರಡು ಟ್ರಾಲಿಗಳ ತುಂಬ ನಮಗಿಂತಲೂ ಎತ್ತರವಾದ ಲಗ್ಗೇಜನ್ನು ತಳ್ಳಿಕೊಂಡೆ ಚೆಕ್-ಇನ್ ಕೌಂಟರಿನತ್ತ ಮುನ್ನಡೆದೆವು ; ಆದರೂ ಆ ‘ದ್ವಾರ ಪಾಲಕರು’ ನಮ್ಮನ್ನೆ ಯಾಕೆ ಹಾಗೆ ಎಡಬಿಡದೆ ನೋಡುತ್ತಿದ್ದರೆಂದು ಅರ್ಥವಾಗಲೆ ಇಲ್ಲ (ಅದು ನಮ್ಮನ್ನಲ್ಲ, ನಮ್ಮ ಲಗೇಜನ್ನ ಅಂತ ಆಮೇಲೆ ಅರಿವಾಯ್ತು. ದೊಡ್ದ ಲಗ್ಗೇಜಿನ ತಾಪತ್ರಯಗಳು ಈಗ ಚೆನ್ನಾಗಿ ಅರಿವಾಗಿವೆ – ಆಗ ಇನ್ನು ಅಷ್ಟೊಂದು ವಿಮಾನಯಾನ ಪ್ರಬುದ್ದತೆ ಬಂದಿರಲಿಲ್ಲವಲ್ಲ!)
ಆ ಸಾಮಾನಿನದೆ ಮತ್ತೊಂದು ಕತೆ ಬಿಡಿ. ವಿದೇಶದ ಮೊಗವೆ ನೋಡಿರದೆ ಮತ್ತು ಕೇಳಿರದೆ ಮೊದಲಬಾರಿಗೆ ಹೊರಟಿದ್ದ ನಾವು ಅವರಿವರಿಂದ ಏನೇನೊ ಕೇಳಿ ಇನ್ನು ಹೆಚ್ಚಿನ ಗೊಂದಲಕ್ಕೆ ಸಿಕ್ಕಿಕೊಂಡಿದ್ದೆವು. ಎಲ್ಲಾ ಕೇಳಿದ್ದರಲ್ಲಿ ತಲೆಗೆ ನಿಂತಿದ್ದು ಮುಖ್ಯವಾಗಿ ಒಂದೆರಡು ಮಾತ್ರ – ‘ನಮ್ಮ ಊಟ ತಿಂಡಿ ಅಲ್ಲಿ ಸಿಕ್ಕೋಲ್ವಂತೆ, ಪಾತ್ರೆ ಪಗಡಿನೂ ನಮ್ತರದ್ದಿರಲ್ವಂತೆ..’ ಇನ್ನೊಂದು ಹೆಚ್ಚುಕಮ್ಮಿ ಟಿಕೆಟ್ಟಿನಲ್ಲೆ ಬರೆದುಬಿಟ್ಟಿತ್ತು – ಪ್ರತಿ ಪ್ರಯಾಣಿಕರಿಗೆ ಬರಿ 20 ಕೇಜಿ ಲಗೇಜಷ್ಟೆ ಬಿಡುತ್ತಾರೆ, ಮಿಕ್ಕಿದ್ದಕ್ಕೆ ಸಿಕ್ಕಾಪಟ್ಟೆ ಛಾರ್ಜ್ ಮಾಡುತ್ತಾರೆ ಅಂತ. ಆದರೆ, ಅದೆ ಹೊತ್ತಿಗೆ ವರ್ಷಕ್ಕಿಂತ ಹೆಚ್ಚು ದಿನ ವಿದೇಶಕ್ಕೆ ಹೊರಟರೆ ಕಂಪನಿಯ ವತಿಯಿಂದ ನೂರು ಕೇಜಿಯ ತನಕ ಕೊಂಡೊಯ್ಯುವ ಅವಕಾಶವಿದೆ ಎಂದು ಗೊತ್ತಾಯ್ತು – ಅಲ್ಲಿಗೆ, ಒಟ್ಟು 140 ಕೇಜಿ ಲೆಕ್ಕ. ಸರಿ ಕೇಳಬೇಕೆ? ಕುಕ್ಕರು, ಮಿಕ್ಸಿ, ತರತರ ಗಾತ್ರದ ಪಾತ್ರೆಗಳಿಂದಾ ಹಿಡಿದು, ಸೌಟು, ಚಮಚ, ಚಾಪೆಗಳು ಸೇರಿದಂತೆ ಎಲ್ಲಾ ತರದ ಕಾರದ ಪುಡಿ, ಮೆಣಸಿನ ಪುಡಿಯಷ್ಟೆ ಅಲ್ಲದೆ ಎಲ್ಲ ತರದ ಕಾಳುಗಳು, ಆಟ್ಟಾ ಪ್ಯಾಕೇಟ್ಟು, ಲೆಕ್ಕವಿಲ್ಲದಷ್ಟು ಎಂಟೀಆರ ಸಿದ್ದ ತಿನಿಸಿನ ಪ್ಯಾಕೇಟುಗಳು, ಒಂದಷ್ಟು ಹೊರೆ ಬಟ್ಟೆಗಳು, ಕನ್ನಡ ಪುಸ್ತಕಗಳು, ರೇಷ್ಮೆ ಸೀರೆಗಳು, ಜತೆಗೆ ಮನೆಯಲಿ ಮಾಡಿಕೊಟ್ಟಿದ್ದ ತಿಂಡಿಗಳು..ಹೀಗೆ, ಎಲ್ಲಾ ಸೇರಿ 140 ಕೇಜಿ ತಲುಪಿಸಿಬಿಟ್ಟೆವು! ಇದಲ್ಲದೆ ಕೈಯಲ್ಲಿ ಹತ್ತತ್ತು ಕೇಜಿಯ ಹ್ಯಾಂಡ್ ಲಗ್ಗೇಜು ಬೇರೆ!!
ಇನ್ನು ಅದನ್ನೆಲ್ಲ ಪ್ಯಾಕು ಮಾಡಿದ ಬಗೆ ನೋಡಿದರೆ, ಅದೆ ಒಂದು ರೊಮ್ಯಾಂಟಿಕ್ ಕಥೆ! ಫ್ಲೈಟಿನಲ್ಲಿ ಯಾವುದೂ ನಜ್ಜುಗುಜ್ಜಾಗಿ ಹಾಳಾಗಬಾರದೆಂದು, ತುಂಬಾ ಜತನದಿಂದ, ಪ್ರೀತಿಯಿಂದ ಒಳ-ಪ್ಯಾಕಿಂಗು, ಹೊರ-ಪ್ಯಾಕಿಂಗು ಅಂತೆಲ್ಲ ಹೇಳಿ ಅದರಲ್ಲೆ ಒಂದು ಹತ್ತು ಕೇಜಿ ಹೆಚ್ಚಿಸಿಬಿಟ್ಟೆವೆಂದು ಕಾಣುತ್ತದೆ. ಬಹುಶಃ ಫ್ಲೈಟಿನಲ್ಲೂ, ನಮ್ಮ ಹಳ್ಳಿ ಬಸ್ಸುಗಳ ಹಾಗೆ ಲಗ್ಗೇಜೆಲ್ಲ ಎತ್ತಿ ಟಾಪಿಗೆಸೆದು, ಟಾರ್ಪಾಲ್ ಸುತ್ತಿ ಹಗ್ಗ ಕಟ್ಟಿಬಿಡುತ್ತಾರೆಂದೆ ಅಂದುಕೊಂಡಿದ್ದೆವೆಂದು ಕಾಣುತ್ತದೆ – ಕೊನೆಗದು ಎಷ್ಟು ಗಟ್ಟಿಮುಟ್ಟಾಗಿ ತಯಾರಾಯಿತೆಂದರೆ, ಎತ್ತಿ ಕುಕ್ಕಿದರು ಒಳಗಿನದೇನೂ ಅಲುಗಾಡುವಂತಿಲ್ಲ – ಅಷ್ಟರಮಟ್ಟಿಗೆ ಜಬರದಸ್ತಾಗಿ ಕೂತುಬಿಟ್ಟಿತ್ತು!
ನಮ್ಮನ್ನು ವಿಚಿತ್ರವಾಗಿ ನೋಡುವ ಆಟ ಚೆಕ್-ಇನ್ ನಲ್ಲೂ ಮುಂದುವರೆಯಿತು – ಬಹುಶಃ ಯಾರೂ ಸಾಮಾನ್ಯ, ಇಷ್ಟೊಂದು ಲಗ್ಗೇಜ್ ತರುವುದಿಲ್ಲವೆಂದೊ ಏನೊ?..ನಾವಂತೂ ಹೆಚ್ಚುವರಿ ಲಗೇಜ್ ಹಣ ಕಟ್ಟುವಾಗ ಬೇರೆತ್ತಲೊ ನೋಡುವವರಂತೆ ಮುಖ ಮಾಡಿಕೊಂಡು ನಿಂತುಬಿಟ್ಟಿದ್ದೆವು, ಆ ಕ್ಯಾಷ್ ಕೌಂಟರಿನವರ ದೃಷ್ಟಿ ತಪ್ಪಿಸಲು! ಕೊನೆಗೂ ಬರಿ ಹ್ಯಾಂಡ್ ಲಗ್ಗೇಜು ಹೊತ್ತು ಒಳನಡೆದಾಗ ನೆಮ್ಮದಿಯ ನಿಟ್ಟುಸಿರು; ಇನ್ನು ಸಿಂಗಪೂರ ತಲಪುವ ತನಕ ಅದರ ಚಿಂತೆ ಮಾಡುವಂತಿಲ್ಲವೆಂದು. ಆದರೆ, ಅದಕ್ಕೂ ಮುನ್ನವೆ ನಮ ಲಗ್ಗೇಜಿಗೆ ಇನ್ನೊಂದು ಗ್ರಹಗತಿ ಕಾಡಲಿದೆಯೆಂದು ಆಗಿನ್ನೂ ಗೊತ್ತಿರಲಿಲ್ಲ…
ಮುಂದೆ ಇಮ್ಮಿಗ್ರೇಷನ್, ಕಸ್ಟಂಗೆ ಕಾಯುವ ಸಮಯ. ಇನ್ನೂ ಸುಮಾರು ಹೊತ್ತು ಕಾಯಬೇಕಿದ್ದುದರಿಂದ ಅಲ್ಲೆ ಇದ್ದ ಕುರ್ಚಿಯ ಮೇಲೆ ಕಾಫಿ ಹೀರುತ್ತಾ ಕುಳಿತು , ಸುತ್ತಲ್ಲು ದೃಷ್ಟಿ ಹರಿಸಿದಾಗ ಬೆಚ್ಚಿಬಿದ್ದೆ! ಕೆಳಗೆ ಬಿಟ್ಟು ಬಂದಿದ್ದ ನಮ್ಮವರ ಸೈನ್ಯವೆಲ್ಲಾ ಗಾಜಿನ ಆಚೆ ಬದಿಯ ಗ್ಯಾಲರಿಯಲ್ಲಿ! ಗ್ಯಾಲರಿಗೆ ತೆರಬೇಕಾದ ಶುಲ್ಕವನ್ನು ತೆತ್ತು ಎಲ್ಲರೂ ಒಳಗೂ ಬಂದುಬಿಟ್ಟಿದ್ದಾರೆ…ನನಗೆ ಏನು ಹೇಳಲೂ ತಿಳಿಯದೆ ಬರಿ ಕಣ್ಣು ತುಂಬಿ ಬಂತು. ಇಂತಹ ಪ್ರೀತಿ, ಆದರಗಳಿಗ್ಹೇಗೆ ಬೆಲೆ ಕಟ್ಟಲು ಸಾಧ್ಯ? ಆ ಗ್ಯಾಲರಿಯಲ್ಲು ಬರಿ ನೋಡಲಷ್ಟೆ ಸಾಧ್ಯವಿದ್ದಂತೆ ನೆನಪು; ಮಾತಾಡುವ ಸಾಧ್ಯತೆಯಿತ್ತೊ, ಇಲ್ಲವೊ ಮರೆತುಹೋಗಿದೆ (ಇದ್ದರೆ ಖಂಡಿತ, ಒಳಬರುವಾಗ ಆಡಲಾಗದ ಸ್ವಲ್ಪ ಮಾತನ್ನಾದರೂ ಆಡಿಯೆ ತೀರಿರುತ್ತೇನೆ). ಅಂತೂ ವಲಸೆ ವಿಭಾಗದ ದ್ವಾರ ತೆಗೆಯುವ ತನಕ ಆ ಕಾಂಡ ಮುಂದುವರೆಯಿತು. ಆಮೇಲೂ, ನಮ್ಮ ವಿಮಾನ ಮೇಲೇರುವ ತನಕ ವೀಕ್ಷಕರ ಗ್ಯಾಲರಿಯಿಂದ ಎಲ್ಲಾ ನೋಡುತ್ತಲೆ ಇದ್ದರಂತೆ. ಅಲ್ಲಿಯತನಕ, ಅವರೆಲ್ಲ ವಿಮಾನ ಹಾರುವುದನ್ನು ಬರಿ ಪಿಕ್ಚರುಗಳಲ್ಲಿ ಮಾತ್ರ ನೋಡಿದ್ದವರು. ಈಗ ನಿಜ ಜೀವನದಲ್ಲಿ ನೋಡುವ ‘ಥ್ರಿಲ್ಲು’ ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ನಮಗಂತೂ ದೊಡ್ಡ ವಿ.ಐ.ಪಿ ಗಳಾದ ಅನುಭವ!
ಸುಂಕ ಮತ್ತು ವಲಸೆ ವಿಭಾಗಗಳನ್ನು ದಾಟಿದ ಮೇಲೆ ನಾವು ಪೂರ್ತಿ ಒಳಗೆ ಸೇರಿಕೊಂಡು ಹೊರಗಿನವರಾರು ಕಾಣಲಾಗದ ಕೊನೆಯ ಬೋರ್ಡಿಂಗ್ ಜಾಗಕ್ಕೆ ಬಂದು ಕುಳಿತಾಗ – ಒಂದು ಆತಂಕದ ಹೊರೆ ಇಳಿದ ಭಾವ. ಅಲ್ಲಿ ಏನು ಕೇಳಿ ಮತ್ತಷ್ಟು ತಡೆಯೊಡ್ಡುತ್ತಾರೊ ಏನು ಕಥೆಯೊ ಅಂದುಕೊಂಡು ಕೊಂಚ ದಿಗಿಲಿತ್ತು. ಸದ್ಯ, ಏನು ಕಿರಿಕಿರಿಯಿಲ್ಲದೆ ತಲುಪಿದೆವಲ್ಲ ಅಂದುಕೊಂಡು ನಿರಾಳವಾಗಿ ಮತ್ತೊಂದು ಕಾಫಿ ಕೈಗೆತ್ತಿಕೊಂಡೆ. ಬೋರ್ಡಿಂಗ್ ಕೂಡ ಸರಾಗವಾಗಿ ನಡೆದು ಕ್ಯಾಬಿನ್ನಿನ ಒಳಸೇರಿ ಕುಳಿತು ಸೀಟಿನ ಬೆಲ್ಟು ಬಿಗಿದಾಗ ಸದ್ಯಕ್ಕೆ ಹೊರಡುವುದು ಹೆಚ್ಚು ಕಮ್ಮಿ ಖಾತ್ರಿಯಾಯ್ತು – ಎಂದುಕೊಂಡೆ ಮನದಲ್ಲೆ! ಅದರೆ ಅಲ್ಲೆ ಮತ್ತೊಂದು ‘ಸೀನ್’ ಕಾದಿದೆಯೆಂದು ಆಗಿನ್ನೂ ಗೊತ್ತಾಗಿರಲಿಲ್ಲ!
ರನ್ ವೇನಲ್ಲಿ ಸಿದ್ದವಾಗಿ ನಿಂತಿದ್ದ ವಿಮಾನ ಹೊರಡುವ ಹೊತ್ತಾಗಿ ಕೆಲ ಗಳಿಗೆ ಕಳೆದರೂ ಯಾಕೊ ಇನ್ನು ಹೊರಟಿರಲಿಲ್ಲ. ಒಳಗೆ ಎಲ್ಲಾ ಪ್ರಯಾಣಿಕರೂ ಬಂದು ಕೂತೂ ಆಗಿತ್ತು; ಕ್ಯಾಬಿನ್ನಿನ ಬಾಗಿಲೆಲ್ಲ ಮುಚ್ಚಿಯೂ ಆಗಿತ್ತು. ಎಂಜಿನ್ನೂ ಸಹ ಹೋಗಲಿಕ್ಕೆ ಸಿದ್ದವಾಗಿರುವಂತೆ ಗಡಗಡ ಸದ್ದು ಮಾಡುತ್ತ ‘ಇದೋ, ಈಗ ಹೊರಟೆ’ ಎನ್ನುವಂತಿತ್ತು. ಆದರೆ ಯಾಕೊ ವಿಮಾನವೆ ಮುಂದಡಿಯಿಡುವಂತೆ ಕಾಣುತ್ತಿಲ್ಲ…. ಏನಾಗಿದೆಯೊ, ಇನ್ನೇನು ಪುರಾಣವೊ ಅಂದುಕೊಳ್ಳುತ್ತಿದ್ದಂತೆ ಕ್ಯಾಬಿನ್ನಿನ ಬಾಗಿಲು ಹೊರಗಿನಿಂದ ತೆರೆದುಕೊಂಡಿತು. ಅಲ್ಲಿ ವಿಮಾನ ಸಿಬ್ಬಂದಿಯೊಬ್ಬರು ಕೈಯಲ್ಲೊಂದು ಲಿಸ್ಟ್ ಹಿಡಿದು ಒಳಬಂದವರೆ, ನನ್ನ ಸೀಟ್ ನಂಬರು ಮತ್ತು ಹೆಸರನ್ನು ಕೂಗುತ್ತಾ ನನ್ನ ಹತ್ತಿರವೇ ಬರುವುದೇ? ನನಗೊ, ಎದೆ ಧಸಕ್ಕೆಂದಿತು! ಮೊದಲೆ, ಮೊಟ್ಟ ಮೊದಲ ವಿದೇಶ ಪ್ರಯಣದ ಆತಂಕ; ಜತೆಗೆ ಇನ್ನೇನು ಹೊರಡುವ ಹೊತ್ತಿಗೆ, ಆಗಲೆ ತಡವಾಗಿದ್ದ ಸಮಯದಲ್ಲಿ, ಯಾರೊ ಭಯೋತ್ಪಾದಕನನ್ನು ಹುಡುಕುವಂತೆ, ಇವರ್ಯಾಕೆ ಲಿಸ್ಟ್ ಹಿಡಿದು ನನ್ನ ಹೆಸರನ್ನೆ ಕರೆಯುತ್ತಾ ಬರುತ್ತಿದ್ದಾರೊ ಅನ್ನುವ ಗಾಬರಿ. ಅದಕ್ಕೆ ಮತ್ತಿಷ್ಟು ಸಸ್ಪೆನ್ಸು ಸೇರಿಸುವಂತೆ, ಲಿಸ್ಟಿನಲ್ಲಿ ನನ್ನೊಬ್ಬನನ್ನು ಮಾತ್ರವೆ ಕರೆದಿದ್ದು – ಹಾಗಾಗಿ , ಎಲ್ಲರು ಕುತೂಹಲದಿಂದ ನಮ್ಮತ್ತಲೆ ನೋಡತೊಡಗಿದರು. ಆತ ನೇರ ನನ್ನ ಪಕ್ಕ ಬಂದವನೆ ‘ಸಾರಿ ಸಾರ್, ಒಂದೆ ನಿಮಿಷ, ಸ್ವಲ್ಪ ಕೆಳಗೆ ಬರ್ತೀರಾ’ ಎಂದ. ವಿಮಾನದೊಳಗಿನ ಏಸಿಯಲ್ಲೆ ಬೆವರೊರೆಸಿಕೊಳ್ಳುತ್ತ ಬೆಲ್ಟ್ ಬಿಚ್ಚಿ ಮೇಲೆದ್ದೆ. ಆಗಲೆ ಒಂದಷ್ಟು ಜನ ತಡವಾಗಿದ್ದಕ್ಕೆ ಗೊಣಗುತ್ತಿದ್ದುದು ಬೇರೆ ಕೇಳಿಸುತ್ತಿತ್ತು. ನಾನು ಸರಸರನೆ ಕೆಳಗಿಳಿದು ಬಂದೆ.
ಕೆಳಗೆ ಬಂದರೆ, ಅಲ್ಲೊಂದು ನಾಲ್ಕೈದು ಜನಗಳ ಗುಂಪು. ಚೆಕ್ ಇನ್ ಲಗ್ಗೇಜುಗಳನಿಡುವ ಬಾಗಿಲಿನ ಹತ್ತಿರ ಏನೊ ಚರ್ಚೆ ನಡೆಸುತ್ತಾ ನಿಂತಿದ್ದರು. ನಾವೂ ಅಲ್ಲಿಗೆ ಸೇರಿಕೊಂಡೆವು. ಅವರಲ್ಲಿ ಸೂಟುಬೂಟಿನಲ್ಲಿದ್ದಾತ ಕಸ್ಟಂ ಅಧಿಕಾರಿಯೆಂದು ತಿಳಿಯಿತು. ಸದ್ಯಕ್ಕೆ, ಆತನೆ ವಿಮಾನದ ಹೊರಡುವಿಕೆಗೆ ಹಸಿರುದೀಪ ಕೊಡದೆ ಹಿಡಿದು ನಿಲ್ಲಿಸಿದ್ದ! ಹಾಗೆ ನಿಲ್ಲಿಸಿದ ಕಾರಣ, ನನ್ನ ಅಗಾಧ ಲಗ್ಗೇಜಿನೊಳಗೇನೊ ಇದೆಯೆಂಬ ಬಲವಾದ ಅನುಮಾನ! ನಮ್ಮ ಲಗ್ಗೇಜು ಗಾತ್ರ, ಪೊಟ್ಟಣ ಕಟ್ಟಿದ್ದ ರೀತಿ ಎಲ್ಲವು ಸೇರಿ – ಆತನಲ್ಲಿ ಏನೊ ಅನುಮಾನ ಹುಟ್ಟಿಸಿರಬೇಕು…ವಿಮಾನ ಸಿಬ್ಬಂದಿ, ಏನೇನೊ ಹೇಳಿ ಆತನನ್ನು ಒಪ್ಪಿಸಲು ಯತ್ನಿಸಿದ್ದರೂ ಫಲಕಾರಿಯಾಗಲಿಲ್ಲವೆಂದು ಕಾಣುತ್ತದೆ – ಅದಕ್ಕೆ, ಬೇರೆ ದಾರಿಯಿಲ್ಲದೆ ನನ್ನನ್ನೆ ಕೆಳಗಿಳಿಸಬೇಕಾಗಿ ಬಂದಿತ್ತು.
ಆ ಅಧಿಕಾರಿ ಕೂಡ ಕಾಕತಾಳೀಯವಾಗಿ ನನ್ನ ಹೆಸರಿನವರೆ ಆಗಿದ್ದರು. ಆತನ ಮುಖದ ಮೇಲೆ ಅನುಮತಿ ಕೊಡಬಹುದೊ ಬಿಡುವುದೊ ಎಂಬ ಅನುಮಾನ , ಗೊಂದಲ ಎದ್ದು ಕಾಣುತ್ತಿತ್ತು …
“ಒಳಗೆ ಏನಿದೆ ಈ ಲಗ್ಗೇಜಿನಲ್ಲಿ?”
ಸುಮಾರು ಹತ್ತು ಪ್ಯಾಕೇಟ್ , ಮೂರುದಿನ ತುಂಬಿಟ್ಟ ಸರಕು; ಎಲ್ಲೆಲ್ಲಿ ಏನೇನಿದೆಯೆಂದು ಹೇಗೆ ಹೇಳುವುದು? ಪ್ರತಿ ಪೊಟ್ಟಣದ ಸರಕಿನ ಪಟ್ಟಿ ಮಾಡಿರಲಿಲ್ಲ,ಬೇರೆ…
“..ಎಲ್ಲಾ ಪಾತ್ರೆ, ಪಗಡಿ, ಕುಕ್ಕರು, ಮಿಕ್ಸಿ, ಬಟ್ಟೆಗಳು ಸಾ…ಅದನ್ನು ಬಿಟ್ಟರೆ ಒಂದಷ್ಟು ದಿನಸಿ , ತಿಂಡಿಗಳು..”
- ಯಾಕೊ ಆತನಿಗೆ ಬರಿ ಇವೆ ಸರಕುಗಳೆಂದು ನಂಬಿಕೆ ಬರಲಿಲ್ಲವೆಂದು ಕಾಣುತ್ತದೆ…
” ಬರಿ ನಾರ್ಮಲ್ ಐಟಮ್ಸ್ ಅಂತ ಹೇಳ್ತಾ ಇದಾರಲ್ಲಾ ಸಾ..ಕ್ಲಿಯರೆನ್ಸ್ ಕೊಟ್ಭಿಡಿ..ಈಗಾಗ್ಲೆ ಹದಿನೈದು ನಿಮಿಷ ಲೇಟ್ ಆಗಿದೆ..” ಅಂತ ರಾಗವೆಳೆದರು ಒಬ್ಬ ವಿಮಾನದ ಸಿಬ್ಬಂದಿ.
” ಲೇಟ್ ಆಯ್ತಂತ ರೂಲ್ಸ್ ಬಿಡೋಕಾಗಲ್ಲಾರಿ..ಚೆಕ್ ಮಾಡ್ದೆ ಹೆಂಗ್ರಿ ಕ್ಲಿಯರೆನ್ಸ್ ಕೊಡೋದು?” ಎನ್ನುತ್ತ ಮತ್ತಷ್ಟು ಬಿಗಿಯಾದರು ಆ ಆಫೀಸರು.
ನನ್ನ ಪಕ್ಕದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ – “ಅವರೇನು ಬಿಡೊ ಹಾಗೆ ಕಾಣೋದಿಲ್ಲ ಸಾ.. ಆ ಕಡೆ ತೆಗೆದು ತೋರಿಸಿಬಿಡಿ…”
ಸರಿ , ಪ್ಯಾಕೆಟ್ಟು ಬಿಚ್ಚೆ ತೋರಿಸುವುದೆಂದಾಯ್ತು. ಈಗ ಬಿಚ್ಚುವ ಸರದಿಯು ನನ್ನ ಪಾಲಿಗೆ.
ಆದರೆ ಬಿಚ್ಚಿ ತೋರಲು ಅಲ್ಲಿ ಮತ್ತೊಂದು ಪೀಕಲಾಟ ಶುರುವಾಯ್ತು. ನಾವು ‘ಸಕತ್ತಾಗಿ’ ಪ್ಯಾಕು ಮಾಡುವ ಉತ್ಸಾಹದಲ್ಲಿ ಎಷ್ಟೊಂದು ಬಂದೋಬಸ್ತಾಗಿ ಪೊಟ್ಟಣಿಸಿದ್ದೆವೆಂದರೆ ಅಲ್ಲಿದ್ದವರೆಲ್ಲ ಯತ್ನಿಸಿದರೂ ಆ ಪ್ಯಾಕೇಟ್ಟುಗಳನ್ನು ಬಿಚ್ಚಲು ಆಗಲೇ ಇಲ್ಲ. ನಾನು, ಕತ್ತರಿ, ಚಾಕೂ ಹಾಗೂ ಮತ್ತೆ ರೀಪ್ಯಾಕ್ ಮಾಡಲು ಹೊಸ ಟೇಪು ಸಿಗುವುದೆ ಎಂದು ಕೇಳಿದೆ. ಯಾರೊ, ಓಡಿ ಹೋಗಿ ಚಾಕು ತಂದಿತ್ತರು. ಅದರಿಂದ ಒಂದೊಂದಾಗಿ ಎಲ್ಲಾ ಪೊಟ್ಟಣಗಳನ್ನು ದಯಾದಾಕ್ಷಿಣ್ಯವಿಲ್ಲದೆ ಹರಿಯತೊಡಗಿದರು! ತೆರೆದಂತೆ ಎಲ್ಲಾ, ಪಾತ್ರೆ, ಪಗಡಿ, ದಿನಸಿ, ಬಟ್ಟೆಗಳೆಲ್ಲಾ ಒಂದೊಂದಾಗಿ ಕಾಣಿಸಿಕೊಳ್ಳತೊಡಗಿದವು. ಎರಡು ಮೂರು ಪೊಟ್ಟಣ ತೆಗೆದರೂ ಅದೆ ಕಥೆ…ಅವನ್ನು ನೋಡಿದ ಮೇಲೆ ಆ ಆಫೀಸರನಿಗು ಕೊಂಚ ನಂಬಿಕೆ ಬಂತೆಂದು ಕಾಣುತ್ತದೆ.. ಆದರೂ ಮುಖದಲ್ಲಿ ಇನ್ನು ಅರ್ಧ ಸಮ್ಮತಿ, ಅರ್ಧ ಅಸಮ್ಮತಿ ಸುಳಿದಾಡಿದ ಭಾವ ಕಾಣುತ್ತಿತ್ತು.
ಕೊನೆಗೆ ಮತ್ತೊಬ್ಬ ಸಿಬ್ಬಂದಿ, ” ಎಲ್ಲಾ ಅವರೇಳಿದ್ದೆ ಇದೆಯಲ್ಲಾ ಸಾ.. ಎಲ್ಲಾ ಪ್ಯಾಕ್ ತೆಗೆಯೋದು ಬೇಡಾ ಸಾ..” ಎಂದು ತುಸು ಕೋರಿಕೆಯ ದನಿಯಲ್ಲಿ ಕೇಳಿದ. ಅಷ್ಟೊತ್ತಿಗಾಗಲೆ ಮೂರು ಪ್ಯಾಕೆಟ್ ಬಿಚ್ಚಿದ್ದರಿಂದ ಮತ್ತಷ್ಟು ತೆರೆಸಬೇಕೊ, ಬೇಡವೊ ಎಂದು ಆತನ ಮನವೂ ಡೋಲಾಯಮಾನದಲಿತ್ತೇನೊ? ಅರೆಮನಸಿನಿಂದಲೆ ತಲೆದೂಗಿಸಿ ಒಪ್ಪಿಗೆ ಸೂಚಿಸಿದರಾತ. ಕೊನೆಗೂ ಮುಗಿಯಿತಲ್ಲ ಎಂಬ ನಿರಾಳ ಎಲ್ಲರದು. ಆ ಆಫೀಸರು ಅಂಗಿಕಾರದ ಸಹಿ ಹಾಕಿ ಹೊರಟು ಹೋದ ಮೇಲೆ, ಇನ್ನು ನಾವಿನ್ನು ಹೊರಡಬಹುದೆಂಬ ಇಶಾರೆಯೊಡನೆ ಎಲ್ಲಾ ನಿರಾಳವಾಗುತ್ತಿದ್ದಂತೆ, ಮತ್ತೊಂದು ಸಮಸ್ಯೆ ಎದುರಾಯ್ತು. ಪರೀಕ್ಷಿಸಲೆಂದು ಬೇಕಾಬಿಟ್ಟಿ ತೆಗೆದು ಹರಡಿ ಇಟ್ಟಿದ್ದ ಸಾಮಾನೆಲ್ಲ ಮತ್ತೆ ತುಂಬಬೇಕಾಗಿತ್ತು. ಅದನ್ನು ಮತ್ತೆ ಮೊದಲಿನ ಹಾಗೆ ಕಟ್ಟಲು ಬೇಕಾದ ಟೇಪು, ದಾರಗಳು ಇರಲಿಲ್ಲ. ಏನು ಮಾಡುವುದೆಂದು ತಲೆ ಕೆರೆಯುತ್ತಿದ್ದಾಗ, ತಟ್ಟನೆ ಕ್ಯಾಬಿನ್ ಬ್ಯಾಗೇಜಿನಲ್ಲಿ ಇಟ್ಟ ಟೇಪೊಂದರ ನೆನಪಾಗಿ, ಮೇಲೋಡಿ ಹೋಗಿ ಅದನ್ಹೊತ್ತು ತಂದು ‘ಮರು ಪ್ಯಾಕಿಂಗು’ ಶುರು ಹಚ್ಚಿದೆವು. ಆಗ ಜತೆಗೆ ಸಹಾಯ ಮಾಡುತ್ತಿದ್ದ ವಿಮಾನ ಸಿಬ್ಬಂದಿಯವ -
“ಈಗಾಗಲೆ ತುಂಬಾ ತಡವಾಗಿ ಹೋಗಿದೆ ಸಾ…ಹೇಗೊ ಮೂಟೆ ಕಟ್ಟಿ ಹಾಕಿಬಿಡೋಣ..ತೀರಾ ಮೊದಲಿನ ಹಾಗೆಂದರೆ ಇನ್ನೂ ತಡವಾಗುತ್ತೆ..ನಾನು ಏನು ಆಗದ ಹಾಗೆ ಸರಿ ಜಾಗದಲ್ಲಿಡುತ್ತೇನೆ ಒಳಗೆ..” – ಎಂದ ತುಸು ಯಾಚನೆಯ ದನಿಯಲ್ಲಿ. ಈಗಾಗಲೆ ನನ್ನಿಂದಲೆ ಇಷ್ಟು ತಡವಾಯ್ತಲ್ಲ ಎಂದು ನಾನೂ ತುಸು ‘ಗಿಲ್ಟಿ’ಯಾಗುತ್ತಿದ್ದುದರಿಂದ, ಆಗಲೆಂದು ಒಪ್ಪಿಕೊಂಡೆ. ಆತ ಎಲ್ಲಿಂದಲೊ ಒಂದೆರಡು ಸುತ್ತಲಿ ದಾರ ಹುಡುಕಿ , ತೆರೆದ ಮೂತಿಯ ಪೊಟ್ಟಣಗಳ ಬಾಯ್ತುದಿ ಸೇರಿಸಿ ಅಕ್ಕಿಮೂಟೆ ಕಟ್ಟುವ ಹಾಗೆ ಗಂಟು ಹಾಕಿದ. ಅಲ್ಲಿಗೆ, ಆ ಕಾಂಡ ಮುಗಿದಂತಾಗಿ, ಎಲ್ಲರು ಸರಸರನೆ ವಾಪಸ್ಸು ಹತ್ತತೊಡಗಿದೆವು. ನಾನಂತು ಆ ಪೊಟ್ಟ ಕಟ್ಟಲು ನಾವ್ಪಟ್ಟ ಶ್ರಮ ಹಾಗೂ ಅದನ್ನು ಇಲ್ಲಿ ಮೂರೆ ಚಣದಲ್ಲಿ ಕಿತ್ತು ಹರಿದು ಉಡಾಯಿಸಿದ ರೀತಿಯನ್ನೆ ಕುರಿತು ಚಿಂತಿಸುತ್ತಿದ್ದೆ! ಅಂತೂ ಕೊನೆಗೂ ಸುಮಾರು 30 ನಿಮಿಷಕ್ಕು ಹೆಚ್ಚು ತಡವಾಗಿ ವಿಮಾನ ಮೇಲೆದ್ದಾಗ , ಕ್ಯಾಬಿನಿನ್ನಲಿದ್ದವರೆಲ್ಲ ಬಿಟ್ಟ ನಿಟ್ಟುಸಿರು ಎಲ್ಲರಿಗೂ ಕೇಳುವಂತಿತ್ತು!
ನನಗಂತೊ ಈ ಮೊದಲ ಪಯಣದ ವಿಶಿಷ್ಟ ಅನುಭವಗಳಿಂದ ರೋಸಿ ಹೋದಂತಾಗಿತ್ತು. ಇಲ್ಲೆ ಇಷ್ಟು ಪಾಡಾದ ಮೇಲೆ, ಊರು, ಕೇರಿ ಕಾಣದ ಪರದೇಶಿ ಜಾಗದಲ್ಲಿ ಇನ್ನೇನು ಕಾದಿದೆಯೊ ಎಂದು ಭಯವೂ ಆಯ್ತು. ಆ ಮನಸ್ಥಿತಿಯಲ್ಲೆ ಪ್ರಯಾಣದ ಪೂರ್ತ ಒಂದು ನಿಮಿಷವೂ ಕಣ್ಮುಚ್ಚಲಿಲ್ಲ!
ಅದೆ ಆಯಾಸ, ಅರೆಬರೆ ಎಚ್ಚರದ ಸ್ಥಿತಿಯಲ್ಲಿ ಸಿಂಗಪೂರ ತಲುಪಿದಾಗ ಬೆಳಗಿನ ಏಳು ಗಂಟೆ, ಸ್ಥಳೀಯ ಕಾಲಮಾನದ ರೀತ್ಯ. ಅಲ್ಲಿ ಕಸ್ಟಂಸಿನಲ್ಲಾಗಲಿ, ಇಮಿಗ್ರೇಷನ್ನಿನಲ್ಲಾಗಲಿ ಅಂದುಕೊಂಡಂತೆ ಏನೂ ತಕರಾರೆ ಆಗಲಿಲ್ಲ. ಹದಿನೈದೆ ನಿಮಿಷದಲ್ಲಿ ಹೊರಬಂದು ನಮ್ಮನ್ನು ಕರೆದೊಯ್ಯುವವರಿಗಾಗಿ ಕಾಯುತ್ತಿದ್ದೆವು.
ಸದ್ಯ! ಇಲ್ಲಿ ಏನೂ ಹರಿಕಥಾ ಪ್ರಸಂಗ ನಡೆಯಲಿಲ್ಲಾ ಅಂದುಕೊಳ್ಳುತ್ತಲೆ, ಕಾಯುವ ಜಾಗಕ್ಕೆ ಬಂದರೆ ಇಲ್ಲಿ ಕರೆದೊಯ್ಯುವ ಆಸಾಮಿಗಳೆ ನಾಪತ್ತೆ! ಅಯ್ಯೊ ಶಿವನೆ! ಎಂದು ತಲೆಯ ಮೇಲೆ ಕೈಹೊತ್ತು ಲಗೇಜಿನ ಪಕ್ಕ ಕುಳಿತೆವು. ಸಾಲದ್ದಕ್ಕೆ, ಎಂತಹ ಎಡವಟ್ಟು ಮಾಡಿಕೊಂಡಿದ್ದೆವೆಂದರೆ, ಹೊರಡುವ ಅವಸರದಲ್ಲಿ ಏರ್ಪೋರ್ಟಿಗೆ ಬರುವವರ ಪೋನ್ ನಂಬರು ಕೇಳಿ ತೆಗೆದುಕೊಳ್ಳಲು ಮರೆತುಬಿಟ್ಟಿದ್ದೆವು! ಹೀಗಾಗಿ ಪೋನೂ ಮಾಡುವಂತಿರಲಿಲ್ಲ. ಅಲ್ಲಿ ಕೂತಿದ್ದಾಗ ಅಲ್ಲೆ ಇದ್ದ ಸರ್ದಾರ್ಜಿ ವೃದ್ದರೊಬ್ಬರು ನಮ್ಮ ಪರದಾಟ ನೋಡಿ, ಗಾಬರಿಯಾಗದಂತೆ ಧೈರ್ಯ ಹೇಳಿದರು. ಅಲ್ಲದೆ, ಅಲ್ಲಿನ ಬೆಳಗಿನ ಬಸ್ಸು / ಟ್ರೈನುಗಳು ಹೊರಡುವ ಸಮಯ ಮತ್ತು ದೂರದಿಂದಾಗಿ ತಡವಾಗಿರಬಹುದೆಂದರು. ನಾವು ‘ಹಾಗೆ ಅಗಿರಲಪ್ಪ’ ಎಂದು ಪ್ರಾರ್ಥಿಸುತ್ತ ಸಿಂಗಪುರದ ಮೋಹಕ ಏರ್ಪೋರ್ಟಿನ ಸುಂದರ ಕಾಯುವ ತಾಣದಲ್ಲಿ ಚಡಪಡಿಸುತ್ತಾ ಕುಳಿತೆವು.
ಹಾಗೂ ಹೀಗೂ ಎಂಟರ ಹತ್ತಿರವಾಯ್ತು. ಯಾರ ಸುಳಿವೂ ಇಲ್ಲಾ , ಸುದ್ದಿಯೂ ಇಲ್ಲ…! ಎಂಟೂವರೆಯಾಗುವ ಹೊತ್ತಿಗೆ, ನಾನು ಇನ್ನು ಕಾದು ಸುಖವಿಲ್ಲ , ಯಾವುದಾದರು ಹೋಟೆಲಿಗೆ ಮೊದಲು ಹೋಗಿ ನಂತರ ಇವರಿಗೆ ಹುಡುಕೋಣ ಅಂದುಕೊಂಡು, ಟ್ಯಾಕ್ಸಿ ಸ್ಟಾಂಡಿನತ್ತ ಸಾಮಾನಿನ ಟ್ರಾಲಿ ತಳ್ಳಲು ಸಿದ್ದನಾಗುತ್ತಿದ್ದೆ. ಆಗ ದೂರದಲ್ಲಿ ಯಾರೋ ಇಬ್ಬರು ನಮ್ಮವರು ಬರುತ್ತಿರುವಂತೆ ಕಾಣಿಸಿತು. ಇವರೆ ಆಗಿರಲಪ್ಪ ಎಂದು ಮನದಲ್ಲೆ ಅಲವತ್ತುಗೊಳ್ಳುತ್ತಿದ್ದ ಹಾಗೆ, ಪ್ರಸಾದರ ಮತ್ತು ಮುತ್ತಯ್ಯನವರ ಮುಖ ಸ್ಪಷ್ಟವಾಗಿ ಕಾಣಿಸಿತು.
ಪ್ರಸಾದರಂತೂ ” ಏನ್ರಿ, ನಿನ್ನೆ ಹೊರಡುವ ಮುಂಚೆ ಒಂದ್ಸಾರಿ ಪೋನಾದ್ರೂ ಮಾಡ್ಬಾರದ? ಬೆಳಿಗ್ಗೆ ಇಲ್ಲಿಗೆ ಬರ್ಬೇಕೊ, ಬೇಡ್ಬೊ ಅನುಮಾನದಲ್ಲೆ ಇದ್ವಿ – ಏನೋ, ಕೊನೆಗಳಿಗೆಲಿ ರಿಸ್ಕ್ ತೊಗೊಂಡ್ ಬಂದ್ವಿ..” ಅಂದರು. ಅವರಿಗೆ ನಾವು ಬರುವ ಪ್ರೋಗ್ರಮ್ ಗೊತ್ತಿದ್ದರೂ, ಟಿಕೆಟ್ಟು ಕನ್ಫರ್ಮ್ ಆಗದ ಕಾರಣ, ನಾವು ಅದೇ ಫ್ಲೈಟಿನಲ್ಲಿ ಬರುತ್ತಿದ್ದೆವ ಇಲ್ಲವ ಎಂಬ ಅನುಮಾನ ಕಾಡಿತ್ತು!
ನಿನ್ನೆ ಸಂಜೆಯಿಂದ ನಡೆದೆಲ್ಲಾ ಪ್ರವರಗಳಿಂದ ತಲೆಕೆಟ್ಟಂತಾಗಿದ್ದ ನಾವು ಮಾತಾಡುವ ಸ್ಥಿತಿಯಲ್ಲಿರದೆ ಬರಿ ಪೆಚ್ಚು ನಗೆ ನಕ್ಕೆವಷ್ಟೆ! ಅಂತೂ ಅಲ್ಲಿಗೆಲ್ಲಾ ಸುಖಾಂತವಾಗಿ ಟ್ಯಾಕ್ಸಿ ಹಿಡಿದು ಮನೆ ಸೇರಿದೆವು.
ಹೀಗೆ ಕೆಂಪುಚುಕ್ಕೆಯೂರಿನಲಿ ನಮ್ಮ ಹೊಸ ಜೀವನ ಪಯಣದ ನಾಂದಿ ಈ ರೀತಿಯಲ್ಲಿ ಗಡಿಬಿಡಿಯಿಂದಲೆ ಶುರುವಾಯ್ತು! ಈಗ ವಿಮಾನ ಪ್ರಯಾಣವೆ ಅಲಕ್ಷ್ಯವೆನ್ನುವಷ್ಟರ ಮಟ್ಟಿಗೆ ಓಡಾಡಿ ಪಳಗಿದ್ದೇವೆ. ಆದರೆ, ಆ ಮೊದಲಿನ ಪಯಣದ ಮಧುಚಂದ್ರ ಮಾತ್ರ ಮನದಲಚ್ಚಳಿಯದೆ ಉಳಿದಿದೆ, ಎಂದೆಂದಿಗೂ ಛೇಡಿಸಿ, ಕಾಡಿಸುತ್ತ!!
——————————————————
ನಾಗೇಶ ಮೈಸೂರು, ಸಿಂಗಾಪುರ
——————————————————
Comments
ನಾಗೇಶರವರೇ, ತಮ್ಮ ಪ್ರಥಮ ಬಾನ
ನಾಗೇಶರವರೇ, ತಮ್ಮ ಪ್ರಥಮ ಬಾನ ಯಾಣದ ಸಂಗತಿ ರೋಚಕ! ತುಂಬ ಮನಮೋಹಕ ಬರಹ. ಪ್ರಥಮವಾಗಿ ಪ್ರಯಾಣಿಸುವವರಿಗೆ ಒಳ್ಳೆಯ ಟಿಪ್ಸ್ ನಂತಿದೆ. ಶುಭವಾಗಲಿ
In reply to ನಾಗೇಶರವರೇ, ತಮ್ಮ ಪ್ರಥಮ ಬಾನ by lpitnal@gmail.com
ಲಕ್ಷ್ಮಿಕಾಂತರವರೆ,
ಲಕ್ಷ್ಮಿಕಾಂತರವರೆ,
ತಮ್ಮ ಮೆಚ್ಚುಗೆ ಹಾಗು ಪ್ರತಿಕ್ರಿಯೆಗೆ ಧನ್ಯವಾಧಗಳು. ತುಸು ಹಳೆಯ ನೆನಪಾದರೂ ಸಾಕಷ್ಟು ವಿಷಯಗಳು ಇನ್ನು ಪ್ರಸ್ತುತವೆನಿಸಿ ಬರೆದೆ. ನಿಮಗೆ ಮೆಚ್ಚುಗೆಯಾದದ್ದು ನಿಜಕ್ಕೂ ಖುಷಿ - ಮತ್ತೊಮ್ಮೆ ಧನ್ಯವಾದಗಳು!
- ನಾಗೇಶ ಮೈಸೂರು, ಸಿಂಗಾಪುರದಿಂದ
In reply to ಲಕ್ಷ್ಮಿಕಾಂತರವರೆ, by nageshamysore
ಸ್ವಾರಸ್ಯಕರವಾಗಿದೆ.
ಸ್ವಾರಸ್ಯಕರವಾಗಿದೆ.
In reply to ಸ್ವಾರಸ್ಯಕರವಾಗಿದೆ. by Premashri
ಪ್ರೇಮಾಶ್ರೀರವರೆ,
ಪ್ರೇಮಾಶ್ರೀರವರೆ,
ತಮ್ಮ ಅನಿಸಿಕೆ ಹಾಗೂ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು, ಹಾಗೆಯೆ ಯುಗಾದಿಯ ಶುಭಾಶಯಗಳು ಸಹ
- ಮೈಸೂರು ನಾಗೇಶ, ಸಿಂಗಪುರದಿಂದ.
:) ವ್ಹಾ..ನಾಗೇಶರೆ, ನಿಮ್ಮ ವಿಮಾನ
:) ವ್ಹಾ..ನಾಗೇಶರೆ, ನಿಮ್ಮ ವಿಮಾನ ಪ್ರಯಾಣದ ಅನುಭವ ಆರಂಭದಿಂದ ಕೊನೆಯವರೆಗೂ ಸೂಪರ್ ಆಗಿತ್ತು.
In reply to :) ವ್ಹಾ..ನಾಗೇಶರೆ, ನಿಮ್ಮ ವಿಮಾನ by ಗಣೇಶ
ಗಣೇಶರವರಿಗೆ,
ಗಣೇಶರವರಿಗೆ,
ತಮ್ಮ ಪ್ರತ್ರಿಕ್ರಿಯೆ ಹಾಗು ಮೆಚ್ಚಿಗೆಗೆ ಧನ್ಯವಾದಗಳು . ನಿಮಗೆ ಇಷ್ಟವಾದದಕ್ಕೆ ನಿಜಕ್ಕೂ ಖುಷಿ!
-ನಾಗೇಶ ಮೈಸೂರು, ಸಿಂಗಪುರದಿಂದ.
In reply to ಗಣೇಶರವರಿಗೆ, by nageshamysore
ಬಹು ದೂರ ದೂರ ಹೋಗುವ ಬಾರ
ಬಹು ದೂರ ದೂರ ಹೋಗುವ ಬಾರ ಅಲ್ಲಿಹುದೆಮ್ಮ ಊರ ತೀರ ಎನುವ ಗೀತೆ ನಮ್ಮ ಕಾಲದಲ್ಲಿ ಪ್ರಸಿದ್ಧವಾಗಿತ್ತು. ಅದನ್ನು ಹಾಡಿದವರು, ಎಸ್.ಡಿ.ರಾಮನಾಥನ್ ಎನ್ನುವ ಗಾಯಕರು. ಇದು ಮಾತ್ರ ನನಗೆ ಗೊತ್ತಾಯಿತು. ಲೇಖನ ಚೆನ್ನಾಗಿದೆ.
In reply to ಬಹು ದೂರ ದೂರ ಹೋಗುವ ಬಾರ by venkatesh
ನಮಸ್ಕಾರ ವೆಂಕಟೇಶರವರೆ,
ನಮಸ್ಕಾರ ವೆಂಕಟೇಶರವರೆ,
ತುಂಬಾ ಧನ್ಯವಾದಗಳು. ನೀವು ಹೇಳಿದ ಆ ಹಾಡು ಸಾಕಷ್ಟು ಹೆಸರಾದ, ಸೊಗಸಾದ ಹಾಡು. ನಾನು ಸುಮಾರು ಬಾರಿ ಕೇಳಿದ್ದೇನೆ, ಹಲವಾರು ಗಾಯಕರ ಬಾಯಲ್ಲಿ. ಅಂದಹಾಗೆ, ಈ ಲೇಖನದ ಶೀರ್ಷಿಕೆಯನ್ನು ಕದ್ದಿದ್ದು ಒಂದು ಹಳೆಯ ಕನ್ನಡ ಚಿತ್ರದ ಹಾಡಿನಿಂದ - ರಾಣಿ ಹೊನ್ನಮ್ಮ ಚಿತ್ರದ ಹಾಡಿನ ಮೊದಲ ಸಾಲಾದ ' ಹಾರುತ ದೂರ ದೂರ, ಮೇಲೆರುವ ಬಾರ ಬಾರಾ, ನಾವಾಗುವ ಚಂದಿರ ತಾರಾ, ಕೈಗೂಡಲಿ ಸ್ವೈರವಿಹಾರ'. (ನಿಜಕ್ಕೂ ಸೊಗಸಾದ, ಯಾವುದೊ ಲೋಕಕ್ಕೆ ಕೊಂಡೊಯ್ಯುವ ಹಾಡದು!) :-)
- ನಾಗೇಶ ಮೈಸೂರು, ಸಿಂಗಾಪುರದಿಂದ