ವಸಂತ ಬಂದ ನಮ್ಮ ಹಳ್ಳಿಗೆ

ವಸಂತ ಬಂದ ನಮ್ಮ ಹಳ್ಳಿಗೆ

 

                                                               ವಸಂತ ಬಂದ  ನಮ್ಮ ಹಳ್ಳಿಗೆ
 
      ನಮ್ಮ ಸುತ್ತಮುತ್ತಲಿರುವ ಮರ, ಗಿಡ, ಪಶು, ಪಕ್ಷಿ, ಸೂರ್ಯ ಚಂದ್ರ ಎಲ್ಲವೂ ನಿತ್ಯವೂ ಇರುವುದೇ ಎಂದು ಭಾವಿಸದೆ ಅವುಗಳನ್ನು ಗಮನಿಸಿ ನೋಡಿದಾಗ ದಿನದಿನಕ್ಕೂ, ಕಾಲಕಾಲಕ್ಕೂ ಅವುಗಳು ಹೊಸತನವನ್ನು ಪಡೆಯುವುದು ನಮ್ಮ ಅರಿವಿಗೆ ಬರುವುದಲ್ಲದೆ ಮನಸ್ಸಿಗೆ ಮುದನಿಡುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದಲೇ ಪ್ರಕೃತಿಯ ಮಧ್ಯೆ ಪ್ರಕೃತಿಯೊಂದಿಗೆ ಬೆರೆತು ಜೀವಿಸುವವರಿಗೆ ಒಂಟಿತನ, ಬೇಸರ ಕಾಡುವುದಿಲ್ಲ. ಆದರೆ ಇಂದು ನಾಗರಿಕತೆಯ ನೆವದಲ್ಲಿ ನಗರಗಳು ಬೆಳೆಯುತ್ತಾ ಎಲ್ಲೆಲ್ಲೂ ದೊಡ್ಡ ದೊಡ್ಡ ಕಟ್ಟಡಗಳು, ವಾಹನಗಳ ಶಬ್ಧ, ಹೊಗೆ, ವಿದ್ಯುತ್ ದೀಪಗಳ ಬೆಳಕು ಇವುಗಳ ಹಾವಳಿಯಿಂದ ಪ್ರಕೃತಿಯಲ್ಲಾಗುವ ಬದಲಾವಣೆಗಳು, ಅದರ ಸೌಂದರ್ಯ ಆಸ್ವಾದಿಸಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಎಲ್ಲರ ತಲೆಯ ಮೇಲೆ ಆಗಸವಿದ್ದರೂ ರಾತ್ರಿ ನಕ್ಷತ್ರ  ನೋಡಲು, ಸೂರ್ಯೋದಯ ಸೂರ್ಯಾಸ್ತ ನೋಡಲು ಬೇರೆ ಬೇರೆ ಪ್ರದೇಶಗಳಿಗೆ ಹೋಗಬೇಕಾಗಿದೆ.  ಆದರೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಪ್ರಕೃತಿಯ ಸೊಬಗು ನೋಡಲು ಸಾಧ್ಯವಿದೆ. ಆದ್ದರಿಂದಲೇ ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸುವ ಹಬ್ಬಗಳು ಅರ್ಥಪೂರ್ಣವೆನಿಸುತ್ತವೆ.
      ಈಗ ವಸಂತ ಋತು ಆಗಮನವಾಯಿತು. ಚ್ಯೆತ್ರ, ವ್ಯೆಶಾಖ ಮಾಸಗಳಲ್ಲಿ ಬರುವ ಮೊದಲ ಹಬ್ಬವೇ  ಯುಗಾದಿ. ಇದು ಹೊಸ ಸಂವತ್ಸರದ ಮೊದಲ ಹಬ್ಬವೂ ಹೌದು. ಈ ಹೊಸತನ ಪಟ್ಟಣ ನಗರಗಳಲ್ಲಿ ಗೋಚರಿಸುವುದಿಲ್ಲ. ಆದರೆ ನಮ್ಮ ಹಳ್ಳಿಯಲ್ಲಿ ಈ ಹೊಸತನ ಅದೆಷ್ಟು ಸುಂದರವಾಗಿ ಪ್ರಕಟಗೊಳ್ಳುತ್ತದೆ!. ಸೂರ್ಯೋದಯದಿಂದಲೇ ಇದನ್ನು ನಾವು ನೋಡಬಹುದು. ಶುಭ್ರ ಆಗಸದಲ್ಲಿ ಕೆಂಪನೆ ಹೊಳೆಯುವ ಸೂರ್ಯ ದೊಡ್ಡದಾಗಿ ಬೆಚ್ಚನೆಯ ಹಬೆ ನೀಡುತ್ತಾ ಬರುತ್ತಾನೆ. ದೇವಾಲಯದ ಸುಪ್ರಭಾತ, ಮಸೀದಿಯ ಬಾಂಗ್ ನೊಂದಿಗೆ ಕೋಗಿಲೆಯ ಇಂಪಾದ ಕುಹು ಕುಹು ದನಿ ನಮಗೆ ಸುಪ್ರಭಾತ ಹೇಳುತ್ತದೆ. ಎಲೆಯುದುರಿ ಬೋಳಾದ ಗಿಡಮರಗಳಲ್ಲಿ ಬಣ್ಣ ಬಣ್ಣದ ಚಿಗುರು, ಅದನ್ನು ಸವಿಯಲು ಬರುವ ಪುಟ್ಟಪುಟ್ಟ ಕೀಟಗಳು ಅದೆಷ್ಟು ಸುಂದರ. ಮಾವು, ಗೇರು ಮರಗಳು ಕಾಯಿ ಹಣ್ಣುಗಳಿಂದ ತುಂಬಿ ಮೆಲ್ಲನೆ ಬೀಸುವ ಗಾಳಿಗೆ ತೂಗಾಡುವುದು ನಮಗೆ ಚಾಮರ ಬೀಸಿದಂತೆ ಕಾಣುತ್ತದೆ. ಹಲಸು, ಪೇರಲೆ, ಚಿಕ್ಕು ಮರಗಳ ಮೇಲೆ ಚಣಿಲ(ಅಳಿಲು)ಗಳ ಓಡಾಟ ಫಲ ಮಾಗುವ ಸಮಯವಾಗಿದೆ ಎಂದು ತಿಳಿಸುತ್ತದೆ. ಅವು ಸ್ವಲ್ಪ ಕಚ್ಚಿ ರುಚಿನೋಡಿದ್ದಾದರೆ ಆ ಹಣ್ಣಿಗೆ ಮುತ್ತುವ ನುಸಿಗಳು, ಪುಟ್ಟ ಹಕ್ಕಿಗಳು ತಮ್ಮ ತಮ್ಮ ಪಾಲು ತೆಗೆದುಕೊಂಡು ಹೋಗುವ ಗಡಿಬಿಡಿ "ಎಲ್ಲರೂ ಮಾಡುವುದು ಹೊಟ್ಟೆಗಾಗಿ" ಎಂಬ ಮಾತು ನೆನಪಾಗುತ್ತದೆ. ಗದ್ದೆಯ ಮಣ್ಣು ಒಣಗಿ ಧೂಳಾಗಿ ಹಾರುತ್ತಾ "ಬಿಳಿ ಮೋಡಗಳೇ ಕರಿಮೋಡಗಳಾಗಿ ಮಳೆ ಸುರಿಸಿ ನನ್ನನ್ನು ತಂಪುಗೊಳಿಸಿ ಎಂದು ಕೂಗುವಂತೆ ಕಾಣುತ್ತದೆ. ಒಣಗಿದ ಎಲೆಗಳು ಗಾಳಿಗೆ ನೆಲದಿಂದ ಮೇಲೆ ಹಾರುತ್ತಾ, ಓಡುತ್ತಾ ಕುಣಿಯುವುದು ನಮ್ಮನ್ನೂ ಕುಣಿಯಿರಿ ಎಂದು ಹೇಳಿದಂತೆ ಅನ್ನಿಸುತ್ತದೆ.
      ಮಧ್ಯಾಹ್ನದ ಹೊತ್ತಿಗೆ ಸೂರ್ಯನ ಶಾಖ ಹೆಚ್ಚಾಗುತ್ತಿದ್ದಂತೆ ಬಯಲಿನಲ್ಲಿ ಹುಲ್ಲು ಮೇಯುತ್ತಿದ್ದ ದನಕರುಗಳು, ಅಂಡಲೆಯುತ್ತಿದ್ದ ನಾಯಿಗಳು, ನೆರಳಿನಲ್ಲಿ ಮಲಗಿದ್ದ ಬೆಕ್ಕುಗಳು ಎಲ್ಲವೂ ನೀರಿನ ಸೆಲೆಯ ಬಳಿ ಬಂದು ಒಂದಾದ ಮೇಲೆ ಒಂದು ನಿಧಾನವಾಗಿ  ಬಂದು ನೀರು ಕುಡಿಯುವ ಸಂಭ್ರಮ ನೋಡುವುದೇ ನಮಗೊಂದು ಸಂಭ್ರಮ. ಮರದ ನೆರಳಿನಲ್ಲಿ, ಕಟ್ಟಡಗಳ ನೆರಳಿನಲ್ಲಿ, ಮನೆಯ ಅಂಗಳದಲ್ಲಿ ವಿಶ್ರಮಿಸುವ ಪ್ರಾಣಿಗಳು ನಿಶ್ಯಬ್ಧವಾಗಿ ನಮಗೆ ನಿಶ್ಚಲತ್ವದ ಶಬ್ಧ ಕೇಳಲು ಅವಕಾಶ ಮಾಡಿಕೊಡುತ್ತವೆ. ಸಂಜೆಯಾಗುತ್ತಿದ್ದಂತೆ ಸೂರ್ಯನು ಪಶ್ಚಿಮದಡೆಗೆ ನಡೆದಂತೆ ಅದರ ಶಾಖವು ಕಡಿಮೆಯಾಗುತ್ತದೆ ಆಗ ಚಂದ್ರ ಕಾಣಿಸಿಕೊಳ್ಳುತ್ತಾನೆ ಮತ್ತು ಸಮುದ್ರದ ಬದಿಯಿಂದ ಬೀಸುವ ತಣ್ಣನೆ ಗಾಳಿ ಮನಸ್ಸಿಗೆ ಹಿತವಾದ ಅನುಭವ ನೀಡುತ್ತದೆ. ಸೊಳ್ಳೆ ನುಸಿಯಂತಹ ಕೀಟಗಳನ್ನು ಹಿಡಿದು ತಿನ್ನಲು ಭಾರಧ್ವಾಜ (ಡ್ರ್ಯಾಂಗೋ) ಪಕ್ಷಿಯ ಹಾರಾಟ ಪ್ರಾರಂಭವಾಗುತ್ತದೆ. ಕುಪ್ಪಳ(ಕೆಂಬೂತ), ತರಗೆಲೆ ಹಕ್ಕಿ, ಕೊಕ್ಕರೆ,  ಗಿಳಿಗಳು ಮನೆಯ ಅಂಗಳದಲ್ಲಿಟ್ಟ ನೀರು, ಕಾಳುಗಳನ್ನು ಸೇವಿಸಿ ಗೂಡು ಸೇರುವ ತವಕ ನೋಡುವುದೇ ಚಂದ. ಗೇರು, ಮಾವು ಮರಗಳ ಕೆಳಗೆ ಬಿದ್ದ ಹಣ್ಣುಗಳನ್ನು ನವಿಲುಗಳು ಗುಂಪಾಗಿ ಬಂದು ಕೂಗುತ್ತಾ ತಿನ್ನುವುದು ನೋಡುವುದೇ ಚೆಂದ. ಅಂಗಳದಲ್ಲಿರುವ ಮಲ್ಲಿಗೆ ಗಿಡಗಳಲ್ಲಿನ ಮೊಗ್ಗುಗಳ ಪರಿಮಳ ಗಾಳಿಯೊಡನೆ ಬೆರೆತು ಸುತ್ತಲೂ ಸುವಾಸನೆ ಪಸರಿಸಿದಾಗ ಅದೆಷ್ಟು ಸೊಗಸು. ಈ ಗಿಡಗಳಿಗೆ ನೀರುಣಿಸಿದಾಗ ಭೂಮಿ  ನೀರನ್ನು ಹೀರುವ ರಭಸ ನೋಡಿದರೆ ಆಬ್ಬಾ!  ಮಧ್ಯಾಹ್ನದ ಬಿರುಬಿಸಿಲಿಗೆ ಈ ಮಣ್ಣು ಅದೆಷ್ಟು ಬಾಯಾರಿದೆಯೋ ಎಂದು ಅನುಕಂಪ ಮೂಡುತ್ತದೆ. ನೀರು ಕುಡಿದ ಮಣ್ಣು ಹಿತವಾದ ಪರಿಮಳವನ್ನು ಸೂಸಿದಾಗ ನಮಗೆ ಧನ್ಯವಾದ ಹೇಳುತ್ತಿದೆಯೇನೋ ಎಂದೆನಿಸುತ್ತದೆ. ಹೀಗೆ ಸಂಜೆಯ ಸೊಬಗು ಸೂರ್ಯಾಸ್ತದೊಂದಿಗೆ ಮುಗಿದರೆ ಚಂದ್ರೋದಯದೊಂದಿಗೆ ನಿಶೆಯ ಸೊಬಗು ಮೂಡುತ್ತದೆ. ಖಗಗಳ ದನಿ ಅಡಗಿದರೇನು ಮಳೆ ಬರಲಿ ಎಂದು ಕೂಗುವ ಕಪ್ಪೆಗಳು, ನಕ್ಷತ್ರದ ಬೆಳಕಿನೊಂದಿಗೆ ಸ್ಪರ್ಧೆಗಿಳಿಯುವ ಮಿಂಚು ಹುಳುಗಳ ಹಾರಾಟ ತಂಗಾಳಿಯೊಂದಿಗೆ ನಮಗೆ ಸಂಗೀತವಾಗುತ್ತದೆ. ಕತ್ತಲಿನಲ್ಲಿ ತಮ್ಮ ತಮ್ಮ ಆಹಾರ ಹುಡುಕುತ್ತಾ ಹೋಗುವ ಬಾವಲಿಗಳ ಹಾರಾಟದ ಸದ್ದು, ಹಾವುಗಳ ಹರಿದಾಟದ ಸರಪರ ಸದ್ದು ಭಯವಾದರೂ ಅದನ್ನು ನೋಡಿದಾಗ ರೋಮಾಂಚನವಾಗುತ್ತದೆ. ಇದರ ಮಧ್ಯೆ ನಾಯಿಗಳ ಬೊಗಳಿಕೆ, ನರಿಗಳು ಊಳಿಡುವ ಶಬ್ದ ರಾತ್ರಿ ಮನೆಯಿಂದ ಹೊರ ಹೋಗಲು ಎಂತಹ ಧ್ಯೆರ್ಯವಂತರಿಗೂ ಹೆದರಿಕೆಯಾಗುವುದರಲ್ಲಿ ಸಂಶಯವಿಲ್ಲ. 
       ಹೀಗೆ ಚ್ಯೆತ್ರ, ವ್ಯೆಶಾಖ ಮಾಸಗಳು ಸೆಖೆ, ಬಿಸಿಲುಗಳು ನಮ್ಮ ದೇಹವನ್ನು ಬಾಧಿಸಿದರೂ ಸಂಜೆಯ ತಂಪು ಗಾಳಿ, ಪ್ರಕೃತಿಯ ಸೌಂದರ್ಯ, ಪಶುಪಕ್ಷಿಗಳ ಸಂಭ್ರಮ ನಮ್ಮಲ್ಲೂ ಹೊಸ ಚ್ಯೆತನ್ಯ ಮೂಡಿಸುತ್ತದೆ. ನಿಜಕ್ಕೂ ವಸಂತ ಋತು ಋತುಗಳ ರಾಜನೇ ಸರಿ ಎಂದೆನಿಸುತ್ತದೆ. 
 
 

Comments

Submitted by nageshamysore Thu, 04/11/2013 - 11:22

ಶೋಭಾ ಅವರೆ, ತುಂಬಾ ಚಂದದ ಬರಹ - ಪ್ರಕೃತಿಯ ಮಡಿಲಲ್ಲೆ ಮಿಂದು ಮಲಗಿ ವಸಂತನ ಮಡಿಲಲ್ಲಿ ಮೇಲೆದ್ದು ಬಂದಂತಾಯ್ತು! ಧನ್ಯವಾದಗಳು. - ನಾಗೇಶ ಮೈಸೂರು