" ಐಂದ್ರಜಾಲ "......ಪರಿಷ್ಕೃತ ಕವನ

" ಐಂದ್ರಜಾಲ "......ಪರಿಷ್ಕೃತ ಕವನ


  


ಜಾದು ಪೆಟ್ಟಿಗೆ ಮೇಲೆ
ಕೆಂಪು ವಸ್ತ್ರ್ದದ ಹೊದಿಕೆ
ಅದರ ಮೇಲಿದೆ
ದುಂಡಗಿನ ಭೂಮಿ


ರೆಕ್ಕೆ ಬಿಚ್ಚಿದ ಬಿಳಿ ಪಾರಿವಾಳ
ಹಾರುತಿದೆಯೆ ? ಇಲ್ಲ..!
ಇಳಿಯುತಿದೆಯೆ ? ಒಂದೂ
ತಿಳಿಯುತ್ತಿಲ್ಲ ಬಂಗಾಲಿ
ಜಾದೂಗಾರನೆ ಹೇಳಬೇಕು


ವಿಸ್ತಾರ ವಾಪ್ತಿಯಲಿ
ಹಬ್ಬಿ ಹರಡಿದ
ಆಳ ನೀಲಿಯ ಕಡಲು
ಈಜುತಿರುವಳು ಒಬ್ಬ
'ಜಲಕನ್ಯೆ' ನಗ್ನಳಾಗಿ


ಸುರುಳಿ ಸುತ್ತಿದ ಶಂಖದಿಂದ
ಮೆಲ್ಲಗೆ ಹೊರಬಂದು
ಮುನ್ನಡೆಯುತಿರುವಳು
ಮೈಚಳಿಯ ಬಿಟ್ಟು


ಶಂಖಮುರಿಯಾಕಾರದಲಿ ಸುರುಳಿ
ಸುತ್ತಿ ಬಿರುಗಾಳಿಯಾಗಿ
ಶಾಂತಿ ಸಾಗರದಿ ಅಲೆಗಳ
ಹುಯಿಲೆಬ್ಬಿಸಿ ಅಲ್ಲೋಲ ಕಲ್ಲೋಲ
ಮಾಡಲಿರುವಳೆ ?


ಆಗಲಿವೆಯೆ ನೆಲ ಜಲಗಳು
ಸ್ಮಶಾನ ಸಾದೃಶ್ಯಗಳು
ಜಲಚರ ಸಕಲ ಜೀವ ಜಾತಿಗಳ
ನಿರ್ದಯ ಮಾರಣಹೊಮ


ಇದಕುತ್ತರಬೇಕು ಆ ಐಂದ್ರಜಾಲಿಕ
ಮಾಯಾವಿಯಿಂದ ಇದೊಂದು
ಜಾದೂ ಆಟವೆ ? ಇಲ್ಲ ವಿನಾಶದ
ನಂತರದ ಶಾಂತಿಯೆ ? 


ಬಿಳಿಯ ಪಾರಿವಾಳ
ಜಗದ ಶಾಂತಿಯ ಪ್ರತೀಕ
ಆಕಾಶದೆತ್ತರಕದನು ಹಾರಿಸಿ
ಗುರಿಯಿಟ್ಟು
ತುಪಾಕಿಯನುಡಾಯಿಸಿ
ಹೊಡೆದುರುಳಿಸಿ ಅಟ್ಟಹಾಸವ
ಮೆರೆದು ಜಗಕೆ ತೋರುವ
ರಕ್ತದಾಹದ ಪರಿಚಯವೆ ..?


ಅಕ್ಕಸದ ರಕ್ಕಸ ಗುಣ ತುಂಬಿರುವ
ಆಧುನಿಕ ಜಗದಲ್ಲಿ ಜಗದ
ಶಾಂತಿ ಪ್ರತೀಕ ಶುಭ್ರ ವರ್ಣದ
ಮುದ್ದು ಹಕ್ಕಿಗೆ ತೆರೆ ಮರೆಯಿಂದ
ಮರಸು ಬೇಟೆಯ ಬಳುವಳಿಯೆ ?
ರಕ್ತ ಪಿಪಾಸುತನವೆ ..?


ಕೆಂಪು ಬಿಳಿ ನೀಲಿ ಹಸಿರುಗಳು
ಅಂತರ್ಗತವಾಗಿ
ರಕ್ತ ಶುದ್ಧವಾಗಬೇಕು ಆಗ
ಈ ಜಗವೆಲ್ಲ ಸುಂದರ!
ರಕುತದ ಕೋಡಿ ಹರಿಯಿತೋ
ಅದು ಸಮಾಜ ವಿಕಾರ
ಆಧುನಿಕ ಜಗದ ಅವಿಚಾರ..!


             *


 


 

Rating
No votes yet

Comments

Submitted by lpitnal@gmail.com Wed, 04/10/2013 - 14:18

ಹಿರಿಯರಾದ ಪಾಟೀಲರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಐಂದ್ರಜಾಲ ಕವನ ಚನ್ನಾಗಿ ಸುರುಳಿ ಬಿಚ್ಚಿಕೊಳ್ಳುತ್ತ, ಅಂತರಂಗದಲ್ಲಿ ಹುದುಗಿದ ಭಾವನೆಗಳನ್ನು, ರಕ್ತಪಿಪಾಸುತನವನ್ನು, ಅವಿಚಾರಗಳನ್ನು ಬಿಡಿಸುತ್ತ, ಶಾಂತಿಯ ಪಾರಿವಾಳವನ್ನೂ ಬಿಡದ, ಶಾಂತಿಯ ಮಂತ್ರದಲ್ಲೂ ಮತಿತಾರ್ಥಗಳನ್ನು ಹಿಂದಿನಿಂದ ಬೆಂಬಿಡುತ್ತ, ಸಾಗುತ್ತಿರುವ ಜಗದ ಪರಿ, ಯಾವ ಜಾದೂ ಆಟಕ್ಕೂ ಮಿಗಿಲಾದುದು. ಕವನ ತುಂಬ ಗಹನ. ಉತ್ತಮ ಕವನ ಈಗ ಓದುವಂತಾದುದು ಸಮಾಧಾನ ತಂದಿತು. ಸರಿಪಡಿಸಿ ಸಲ್ಲಿಸಿದ್ದಕ್ಕೆ ಧನ್ಯವಾದಗಳು.

Submitted by H A Patil Thu, 04/11/2013 - 19:39

In reply to by lpitnal@gmail.com

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ದೈನಂದಿನ ಜೀವನದಲ್ಲಿ ಕಾಣ ಬರುವ ಅನೇಕ ಘಟನೆಗಳು, ನಮ್ಮ ಆತ್ಮವಂಚನೆಯ ಬದುಕು ಜಗದ ದ್ವಿಮುಖ ನೀತಿ ಇವೆಲ್ಲ ಕಾಡಿದುದರ ಪರಿಣಾಮ ಈ ಕವನ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by tthimmappa Wed, 04/10/2013 - 20:32

ಕೆಂಪು ಬಿಳಿ ನೀಲಿ ಹಸಿರುಗಳು
ಅಂತರ್ಗತವಾಗಿ
ರಕ್ತ ಶುದ್ಧವಾಗಬೇಕು ಆಗ
ಈ ಜಗವೆಲ್ಲ ಸುಂದರ!
ರಕುತದ ಕೋಡಿ ಹರಿಯಿತೋ
ಅದು ಸಮಾಜ ವಿಕಾರ
ಆಧುನಿಕ ಜಗದ ಅವಿಚಾರ..!
ಸಾರ್.. ತಮ್ಮ ಕವನದ ಆಶಯ ಮಹತ್ವದ್ದಾಗಿದೆ.. ಧನ್ಯವಾದಗಳು..

Submitted by venkatb83 Fri, 04/12/2013 - 12:42

In reply to by ಕೀರ್ತಿರಾಜ್ ಮಧ್ವ

"ಕೆಂಪು ಬಿಳಿ ನೀಲಿ ಹಸಿರುಗಳು
ಅಂತರ್ಗತವಾಗಿ
ರಕ್ತ ಶುದ್ಧವಾಗಬೇಕು ಆಗ
ಈ ಜಗವೆಲ್ಲ ಸುಂದರ!
ರಕುತದ ಕೋಡಿ ಹರಿಯಿತೋ
ಅದು ಸಮಾಜ ವಿಕಾರ
ಆಧುನಿಕ ಜಗದ ಅವಿಚಾರ..!"

ಹಿರಿಯರೇ ಆ ಅಕ್ಷರಗಳ ಸಮಸ್ಯೆ ಪರಿಹಾರವಾಗಿ ಈಗ ಮರಳಿ ಹಾಕಿರುವ ನಿಮ್ಮ ಈ ಬರಹ ಓದಿದೆ-ವಿಜಯನಾಮ ಸಂವತ್ಸರದಲ್ಲಿ ಅದರ ಆಗಮನವನ್ನು ಈ ಹಾಡ- ಮೂಲಕ ಚೆನ್ನಾಗಿ ಸ್ವಾಗತಿಸುತ್ತಿರುವೆವು.
ಬರಹ ದೀರ್ಘವಾದರೂ(ಕವನ) ಅರ್ಥಪೂರ್ಣವಾಗಿದ್ದು ಸರ್ವೇಜನೋ ಸುಖಿನೋ ಭವಂತಿ ಮಂತ್ರವನ್ನು ಸರಳೀಕರಿಸಿ ಹೇಳಿದೆ.

ಸರ್ವರಿಗೂ

ವಿಜಯನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು

ಶುಭವಾಗಲಿ..

\।/

Submitted by H A Patil Fri, 04/12/2013 - 19:07

In reply to by venkatb83

ಸಪ್ತಗಿರಿಯವರಿಗೆ ವಂದನೆಗಳು
ಈ ಕವನ ಕುರ್ಇತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಈ ಕವನದ ಅಕ್ಷರಗಳ ಸಮಸ್ಯೆಗೆ ಪರಿಹಾರ ತೋರಿಸಿದವರು ರಮೇಶ ಕಾಮತರು, ಅವರಿಗೆ ಈ ಕ್ರೆಡಿಟ್ ಸಲ್ಲಬೇಕು. ತಾವು ಕವನವನ್ನು ಅರ್ಥಪೂರ್ಣವಾಗಿ ಗ್ರಹಿಸಿದ್ದೀರಿ, ತಮ್ಮ ಸಹೃದಯತನಕ್ಕೆ ಮತ್ತು ಕವಿ ಹೃದಯಕ್ಕೆ ಮೆಚ್ಚುಗೆಗಳು. ತಮಗೂ ಹಾಗೂ ಎಲ್ಲ ಸಂಪದಿಗರಿಗೂ ಹೊಸ ವಿಜಯನಾಮ ಸಂವತ್ಸರದ ಶುಭಾಶಯಗಳು ( ತಡವಾಗಿ ಶುಭ ಕೋರಿದ್ದಕ್ಕೆ ಕ್ಷಮೆಯಿರಲಿ ) ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by venkatb83 Sat, 04/13/2013 - 13:04

In reply to by H A Patil

ದೈನಂದಿನ ಕೆಲಸಗಳು - ಕಂಪ್ಯೂಟರ್ ಲಭ್ಯತೆ -ವಿದ್ಯುತ ಇತ್ಯಾದಿಯೂ ಬೇಕಲ್ಲವೇ? ಹೀಗಾಗಿ ನೀವ್ ತಡವಾಗಿ ಶುಭಾಶಯಗಳನ್ನು ತಿಳಿಸುತ್ತ ಮಾರುತ್ತರ ನೀಡಿರುವಿರಿ -ಆದರೆ ಬೇಜಾರಿಲ್ಲ ಬಿಡಿ .. ಕ್ಷಮೆ ಮಾತೇಕೆ ..ನಿಮ್ಮಂತ ಹಿರಿಯರ ಅನುಭವಿಗಳ ಆಶೀರ್ವಾದಗಳು ಸದಾ ನಮ್ಮ ಮೇಲಿರಲಿ ..

>>ಹೋದ ವರ್ಷ ನಾನು ಯುಗಾದಿ ವಿಶೇಷಾಂಕದ ಬಗ್ಗೆ ಬರೆದಿದ್ದೆ -ಅದನ್ನು ನೀವೆಲ್ಲ ಓದಿರುವಿರಿ ಪ್ರತಿಕ್ರಿಯಿಸಿರುವಿರಿ
>>> ಈ ಸಾರಿ ಯುಗಾದಿ ವಿಶೇಷಾಂಕ ಕೊಂಡು ತಂದು ಓದಿದರೆ ಏನಿತ್ತು? ಏನಾಯ್ತು ? ಆ ಬಗ್ಗೆ ಒಂದು ಬರಹ ಬರೆದಿರುವೆ ನೋಡಿ ..

ಶುಭವಾಗಲಿ
\।

Submitted by H A Patil Fri, 04/12/2013 - 19:01

In reply to by ಕೀರ್ತಿರಾಜ್ ಮಧ್ವ

ಕೀರ್ತಿರಾಜ ರವರಿಗೆ ವಂದನೆಗಳು
ಈ ಕವನ ಕುರಿತು ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆ ಓದಿದೆ, ಸಂಪದದಲ್ಲಿ ನನಗಿಂತ ಚೆನ್ನಾಗಿ ಕವನ ಬರೆಯುವವರಿದ್ದಾರೆ, ಅವರ ಕೃತಿಗಳನ್ನೂ ಓದಿ ಪ್ರತಿಕ್ರಿಯಿಸಿ, ಕವನದ ಕುರಿತ ಮೆಚ್ಚುಗೆಗೆ ಧನ್ಯವಾದಗಳು.