ಜಯಂತ ಕಾಯ್ಕಿಣಿ, ಇಂದು ನಮ್ಮೊಂದಿಗೆ

ಜಯಂತ ಕಾಯ್ಕಿಣಿ, ಇಂದು ನಮ್ಮೊಂದಿಗೆ

ಚಿತ್ರ

ಜಯಂತ ಕಾಯ್ಕಿಣಿ, ಇಂದು ನಮ್ಮೊಂದಿಗೆ
-    ಲಕ್ಷ್ಮೀಕಾಂತ ಇಟ್ನಾಳ
    ಇಂದು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಮುಂಜಾನೆ ಜಯಂತ್ ಕಾಯ್ಕಿಣಿಯವರ ‘ಟೂರಿಂಗ್ ಟಾಕೀಸ್’ ಪುಸ್ತಕ ಬಿಡುಗಡೆ ಸಮಾರಂಭ.ಹಾಗೂ ರೋಹಿಣಿ ನಿಲೇಕಣಿಯವರ ‘ಸ್ಟಿಲ್ ಬಾರ್ನ’  ಕನ್ನಡಕ್ಕೆ ಅನುವಾದಿತ ಪುಸ್ತಕ, ‘ಸತ್ತುಹುಟ್ಟಿದ್ದು’ ನಮ್ಮವರೇ ಆದ ಆರ್ಯ ಆಚಾರ್ಯರಿಂದ ಅನುವಾದಿತ ಪುಸ್ತಕಗಳು ಕೂಡ ಬಿಡುಗಡೆಹೊಂದಿದವು. ಖ್ಯಾತ ಸಾಹಿತಿ, ಡಾ: ನರಹಳ್ಳಿ ಬಾಲಸುಬ್ರಮಣ್ಯ ಎರಡು ಉತ್ತಮ ಕೃತಿಗಳನ್ನು ಬಿಡುಗಡೆಗೊಳಿಸಿ, ಕೃತಿ ಪರಿಚಯ ಮಾಡಿದರು.ರೋಹಿಣಿ, ನಂದನ ನಿಲೇಕಣಿ ಉಪಸ್ಥಿತಿಯಲ್ಲಿ,
    ಸಮಾರಂಭಕ್ಕೆ ಮುನ್ನ ಜಯಂತ ಅವರು ನಮ್ಮೊಡನೆ  ಸುಮಾರು ಹೊತ್ತು ಕಾಲ ಕಳೆದರು. ಮುಂದಿನ ಸಾಲಿನಲ್ಲಿ ಕುಳಿತು, ಖ್ಯಾತ ಕಥೆಗಾರ್ತಿ ಸುನಂದಾ ಕಡಮೆಯವರ ಜೊತೆ ಕುಳಿತು, ಅದೇನೊ ಹೇಳ್ತಾರಲ್ಲ, ಚೈನಾದಲ್ಲಿ ಬ್ಲಾಕ್ ಬೆಲ್ಟ್, ಬ್ಲೂ ಬೆಲ್ಟ್, ರೆಡ್ ಬೆಲ್ಟ್ ಇತ್ಯಾದಿ, ನಮ್ಮದೂ ‘ಕೋಸ್ಟಲ್ ಬೆಲ್ಟ್’ ಎಂದು ಹಾಸ್ಯಮಾಡಿದಾಗ, ಸಣ್ಣನೆ ನಗೆಯೊಂದು ಅಲ್ಲೆಲ್ಲ ತೇಲಾಡಿತು. ಕೆಲವರು ಚಪ್ಪಾಳೆ ತಟ್ಟಿ ನಕ್ಕರೆನ್ನಿ. ಸಂಘಟಿಗರು ಜಯಂತರನ್ನು ವೇದಿಕೆಯಲ್ಲಿ ಮಾತನಾಡಲು ಆಹ್ಹಾನಿಸುವಾಗ, ಜಯಂತ ಅಂಥವರು ಇಂಥವರು ಎಂದೆಲ್ಲಾ ಹೇಳಿ, ‘ವಾಟ್ ನಾಟ್’ ಎಂದು ಹೇಳಿ ಸಭೆಗೆ ಆಹ್ಹಾನಿಸಿದಾಗ, ಅದೇ ‘ವಾಟ್ ನಾಟ್’ ಪದ ಹಿಡಿದೇ , ಕೀವರ್ಡನಂತೆ ಬಳಸಿಕೊಂಡು ಹಾಸ್ಯಮಯವಾಗಿ, ತಮಾಶೆಯೊಂದಿಗೆ ಪ್ರಾರಂಭಿಸಿದ್ದು ಬಹು ಆಪ್ಯಾಯಮಾನ. ನೆರೆಮನೆಯ ಸಹೃದಯರೊಬ್ಬರ ಮೃದು ಮಾತಿನಂತಿರುತ್ತದೆ ಅವರ ಹೃದಯಸ್ಪರ್ಶಿ ಮಾತುಗಳು.  
   ಪ್ರತಿಯೊಬ್ಬ ಭಾರತೀಯನಿಗೂ ಸಿನಿಮಾ ಎಂಬ ಸಂಗತಿ ನಮ್ಮೆಲ್ಲರ ಜೀವನದಲ್ಲಿ ಅದೆಷ್ಟು ಹಾಸು ಹೊಕ್ಕಾಗಿ ಹೊಕ್ಕಿದೆ ಎಂಬುದನ್ನೆಲ್ಲ ಎಳೆಎಳೆಯಾಗಿ ವಿವರಿಸುತ್ತ, ನವಿರು ಹಾಸ್ಯಮಿಶ್ರಿತ ಧಾಟಿಯಲ್ಲಿ ಉಣಬಡಿಸಿದ್ದು ರಸವತ್ತಾಗಿತ್ತು. ಹಲವಾರು ಉದಾಹರಣೆಗಳನ್ನು ಕೊಡುತ್ತ, ಅಂದಿನ ಸಿನಿಮಾಗಳ ಪೈಕಿ, ‘ದೀವಾರ’ ದಲ್ಲಿ ಅಮಿತಾಭ ‘ಮೇರೆ ಪಾಸ ಗಾಡಿ ಹೈ, ಬಂಗಲಾ ಹೈ, ಬ್ಯಾಂಕ ಬ್ಯಾಲನ್ಸ್ ಹೈ, ತುಮ್ಹಾರೆ ಪಾಸ ಕ್ಯಾ ಹೈ’, ಎಂದಾಗ, ಶಶಿಕಪೂರನ ಆ ಫೇಮಸ್ ಡೈಲಾಗ ಯಾರು ಮರೆತಾರು,  ‘ ಮೇರೆ ಪಾಸ್ ಮಾ ‘ ಹೈ,, ಎನ್ನುವುದನ್ನು. ಇಂದಿನ ಪೀಳಿಗೆಗೆ ಈಗ ಈ ಡೈಲಾಗ ಹೇಳಿದರೆ, ಕೂಡಲೇ ಹುಡುಗಿಯರು, ಅಮಿತಾಭ ಪರವಹಿಸುತ್ತಾರೆ, ಏಕೆಂದರೆ, ಎಲ್ಲಾ ಇದೆ, ಇದರ ಮೇಲೆ ‘ಮಾ ನಹೀಂ ಹೈ’. ಶಶಿಕಪೂರ ಬಹುಶ: ಒಂಟಿಯಾಗುತ್ತಿದ್ದ, ಎಂದೆಲ್ಲ ಬದಲಾದ ದಿನಮಾನಗಳ ವಿಶ್ಲೇಷಣೆ ಹಾಸ್ಯಮಿಶ್ರಿತವಾದರೂ ಅರ್ಥಪೂರ್ಣ.…………….. ಮನೆಮಂದಿಯೆಲ್ಲ ಕುಳಿತು ನೋಡುವ ಸಿನೇಮಾಗಳೇ ಬೇರೆ, ಗೆಳೆಯರೊಂದಿಗೆ ನೋಡುವ ಸಿನೇಮಾಗಳೇ ಬೇರೆ, ಹಾಗೆ ನೋಡಿದಾಗಲೇ ಅದರ ರಸಸ್ವಾದ ಹೆಚ್ಚು ಮೆಲ್ಲಬಹುದು. ಇಲ್ಲದಿದ್ದರೆ ಅದರ ಸವಿ ಸವಿಯಲಾರದೇ ಹೋಗುತ್ತೇವೆ. ಎಂದೆಲ್ಲ ಹೇಳುತ್ತ ಹೋದರು.
    ಕೃತಿ ಪರಿಚಯಿಸಿದ ಡಾ: ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಹೇಳುವಾಗಲೇ ಅದನ್ನು ಓದಲೇಬೇಕೆನಿಸಿದ ಪುಸ್ತಕ ‘ಟೂರಿಂಗ ಟಾಕೀಸ್’ ಎನಿಸಿತ್ತು.  ಈ ಕಾರಣಕ್ಕಾಗಿ ನಮಗೆಲ್ಲ ಬಹುಶ: ಎಲ್ಲರ ಕಥೆ ಅದರಲ್ಲಿ ಅಡಗಿದೆ ಎಂದಿದ್ದು ಸಹಜವೆನಿಸಿತು.  ಸ್ವಲ್ಪೇ ಮಾತನಾಡಿದರೂ ರಸವತ್ತಾಗಿ,  ಮೆಲುಕು ಹಾಕುವಂತಹ ಮಾತುಗಳನ್ನು ಹಂಚಿಕೊಂಡರು ಜಯಂತ್ ಕಾಯ್ಕಿಣಿ,. ಶಿಸ್ತಿನ ಸಭಿಕರಲ್ಲಿ ಚಪ್ಪಾಳೆ ಸಮಯ ಬಿಟ್ಟರೆ,  ಪಿನ್ ಡ್ರಾಪ್ ಸೈಲೆನ್ಸ್, ಎಂದು ಬೇರೆ ಹೇಳಬೇಕೆ?
   ಅಂದಿನ ಬದುಕಿನಲ್ಲಿ ಒಂದೊಂದು ಸಿನಿಮಾ ಒಂದೊಂದು ಇಮೇಜನ್ನು ಜನಮಾನಸದಲ್ಲಿ ಬಿಟ್ಟಿದ್ದು, ಅವುಗಳನ್ನು ಮರೆಯುವುದು ಸಾಧ್ಯವೇ ಇಲ್ಲವೆನ್ನುವುದು ಅನುಭವ ಸತ್ಯವೆಂದು ನಿರೂಪಿಸಿದರು. ಉದಾಹರಣೆಗೆ (ಇದನ್ನು ಬರುವಾಗ ಕಾರಿನಲ್ಲಿ ಹೇಳಿದ್ದು) ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಲೋಕನಾಥರ ಉಪ್ಪಿನಕಾಯಿ ಪ್ರಸಂಗ, ರಾಜಕುಮಾರರ ಎಲ್ಲ ನಡೆನುಡಿಗಳು ಅಂದಿನ ದಿನಗಳಲ್ಲಿ ಮಧ್ಯಮ, ಕೆಳಮಧ್ಯಮವಾದಿಯಾಗಿ ಹೇಗೆ ಸಂಸ್ಕೃತಿಯನ್ನು ನಮ್ಮ ಎದೆಯಾಳದಲ್ಲಿ ಇಳಿಸಿದರು ಎಂದೆಲ್ಲ ವಿವರಿಸಿದರು.
ಅಂದಿನ ದಿನಗಳಲ್ಲಿ ಜಯಂತಗೆ ಸಿನಿಮಾ ಹುಚ್ಚು ಹಿಡಿಸಿದ್ದು, ತಂದೆ ಗೌರೀಶ ಕಾಯ್ಕಿಣಿಯವರು, ಪ್ರತಿ ವಾರ ಸಿನೇಮಾಗೆ ಕುಟುಂಬ ಸಹಿತ ಹೋಗುವವರೆ, ಅವರಿಗೆ ಇದರ ಹುಚ್ಚು ಹಿಡಿಸಿದ್ದು, ಜಯಂತರ ತಾಯಿಯಂತೆ. ಪ್ರತಿ ವಾರ ಕಿರಾಣಿ ದಿನಸಿಯೊಂದಿಗೆ ಅದರ ಪಟ್ಟಿಯಲ್ಲಿ ಸಿನೇಮಾಗೆಂದು ದಿನಸಿ ಅಂಗಡಿಯಲ್ಲಿ ಐದು ರೂಪಾಯಿ ಇಸಿದುಕೊಂಡು ಸಿನೇಮಾ ನೋಡುತ್ತಿತ್ತು ಕಾಯ್ಕಿಣಿ ಕುಟುಂಬ, ಹೀಗಾಗಿ ತಂದೆಯವರೊಂದಿಗೆ, ವೊದಲು ಆ ದಿನಸಿ ಅಂಗಡಿಯವನಿಗೆ ತಮ್ಮ ಸಿನೇಮಾ ಸೇವೆ ಪೂರೈಸುತ್ತಿದ್ದುದಕ್ಕಾಗಿ ಅಭಿನಂದಿಸುತ್ತೇನೆ ಎಂದು ಜಯಂತ ಹೇಳಿದರು. ಹಾಗೆಯೇ ಧಾರವಾಡದ ವಿಜಯಾ, ಲಕ್ಷ್ಮೀ, ಶ್ರೀನಿವಾಸ, ರೀಗಲ್ ಚಿತ್ರಮಂದಿರಗಳಲ್ಲಿ ಬರುತ್ತಿದ್ದ ವಿಶಿಷ್ಟ ಸಿನೇಮಾಗಳನ್ನು ನೋಡಿ ಸವಿದ ಸಿನೇಮಾ ಲಿಸ್ಟಗಳನ್ನೇ ನೀಡಿ ರಂಜಿಸಿದರು.
   ಪುಸ್ತಕ ಕೊಂಡು ಜಯಂತ, ರೋಹಿಣಿ, ನಂದನ ನಿಲೇಕಣಿ ಆಟೋಗ್ರಾಫ್ ಪಡೆದುದನ್ನು ಬೇರೆ ಹೇಳಬೇಕೇ? ಸಮಾರಂಭದ ನಂತರ ರೋಹಿಣಿ ನಿಲೇಕಣಿ, ನಂದನಜಿ ನಿಲೇಕಣಿ, ಜಯಂತ ಕಾಯ್ಕಿಣಿಯವರೊಂದಿಗೆ ಭೋಜನ ಸವಿದು, ರೋಹಿಣಿ, ನಂದನಜಿರವರನ್ನು ಬೀಳ್ಕೊಂಡು, ಜಯಂತರೊಂದಿಗೆ ನಮ್ಮೆಲ್ಲರ ಸವಾರಿ ನಡೆದದ್ದು, ನಮ್ಮ ಮನೆಗೆ. ಆತುರರಾಗಿ ಕಾಯುತ್ತ ನಿಂತಿದ್ದ, ಪತ್ನಿ ಪೂರ್ಣಿಮಾಳನ್ನು, ಮಗಳು ಅನೂಷಾಳೊಂದಿಗೆ ನಗುತ್ತ, ಆತ್ಮೀಯವಾದ ವಾತಾವರಣ ನಿರ್ಮಿಸಿದಾಗ, ನಾಚಿಕೆ ಸ್ವಭಾವದ ಪೂರ್ಣಿಮಾ ಕೂಡ ನಮ್ಮ ಜೊತೆಗೂಡಿ  ಹರಟೆಯಲ್ಲಿ ಭಾಗವಹಿಸಿದ್ದು ಖುಷಿ ತಂದಿತು. ಮನೆಯಲ್ಲಿ ಮನೆಮಂದಿಯೊಂದಿಗೆ ಫೋಟೋ ಪ್ರೋಗ್ರಾಮ ಇಲ್ಲದಿದ್ದರೆ ಹೇಗೆ!, ಸಿನೇಮಾ, ಸಾಹಿತ್ಯಗಳ ಚರ್ಚೆಗಳೊಂದಿಗೆ,  ನನ್ನ ಗುಲ್ಜಾರರ ಎಪ್ಪತ್ತೈದು ಗೀತೆಗಳ ಅನುವಾದಗಳ ಸಂಗ್ರಹಗಳ ಪುಸ್ತಕವನ್ನು ಅವರ ಕೈಗೆ ಕೊಟ್ಟೆ. ಜಯಂತರು ಈ ಕುರಿತು ತುಂಬ ಉತ್ಸಾಹದಿಂದ ಅದನ್ನು ಪರಿಶೀಲಿಸಿ, ಅವುಗಳನ್ನು ಟ್ಯೂನ್ಗೆ ಕೂಡ ಅಳವಡಿಸಿದ್ದುದನ್ನು ಕೇಳಿ ತುಂಬಾ ಖುಷಿಪಟ್ಟರು. ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಅನುವಾದಿಸಿದ್ದುದನ್ನು ತಿಳಿದುಕೊಂಡ ಜಯಂತರು, ಅನುವಾದ ನಿಜವಾಗಿಯೂ ಬಹುಕಷ್ಟದ ಕೆಲಸ. ಅದರಲ್ಲೂ ಗುಲ್ಜಾರರನ್ನು ಅನುವಾದಿಸುವುದು ಆಲಮೋಸ್ಟ ಇಂಪಾಸಿಬಲ್ ಟಾಸ್ಕ, ಎಂದರು, ಅಂತಹ ಗುಣಮಟ್ಟದ ಸಾಹಿತಿ ಗುಲ್ಜಾರರೆಂದು ವಿವರಿಸಿದರು.  ಗುಲ್ಜಾರರೊಂದಿಗೆ ಸಂಪರ್ಕಿಸಿ, ಅನುಮತಿಗೆ ಪ್ರಯತ್ನಿಸುವಾ ಎಂದಾಗ ನಿಜವಾಗಿಯೂ ನನ್ನಂತಹ ಲೇಖಕನೊಂದಿಗೂ ಅವರು ವ್ಯವಹರಿಸುವ ಪರಿಗೆ ಬೆರಗಾದೆ. ಕೆಲವು ಅಮೂಲ್ಯ ಸಲಹೆ ನೀಡಿದರು. ತುಂಬ ಲವಲವಿಕೆಯಿಂದ ಮನೆಮಂದಿಯೊಂದಿಗೆ ಬೆರೆತು, ಕೂತಿರಲು, ಸುತ್ತಮುತ್ತ (ನಮ್ಮ ಮನೆ ಸುತ್ತ ಸಿಇಟಿ ಹುಡುಗರ ದಂಡುಗಳೇ ವಾಸವಾಗಿವೆ, ಕನಿಷ್ಠ ಐದಾರು ಸಾವಿರ ವಿದ್ಯಾರ್ಥಿಗಳಾದರೂ ಇದ್ದಾರು.) ಹುಡುಗರು ನುಗ್ಗಿ ಬಂದು ಅವರನ್ನು ಕಂಡು ಆಟೋಗ್ತಾಫ ಪಡೆದರು. ಇನ್ನು ಹೆಚ್ಚು ಹೊತ್ತು ನಿಂತರೆ, ಹುಡುಗರ ಪಡೆ ಇನ್ನೂ ಹೆಚ್ಚಾದೀತು ಎಂದು ಅವರನ್ನು ಅವರಿಳಿದ ಸ್ಥಳಕ್ಕೆ ಬೀಳ್ಕೊಟ್ಟಾಗ ಧನ್ಯತೆ ಆವರಿಸಿದಂತಾಗಿತ್ತು.
  ಇಂದು ದಿನಪೂರ್ತಿ ನನ್ನೊಡನೆ,  ಕರ್ನಾಟಕದಲ್ಲಿ ಪರ್ಸನಾಲಿಟಿ ಡೆವಲಪ್ಮೆಂಟ್ ಹಾಗೂ ಕರೀಯರ್ ಗೈಡನ್ಸನಲ್ಲಿ ಮನೆಮಾತಾದ, ಲೈಫ್ ಕೋಚ್ ಕ್ಯಾಪ್ಟನ್ ಸಿ ಎಸ್ ಆನಂದ, ಹಿರಿಯ ಗೆಳೆಯ ರಾಮಚಂದ್ರ ಗೆದ್ದಣ್ಣವರ, ಜಯಂತರ ಮುಂಬೈ ರೂಮ್ ಮೇಟ್ ಹಾಗೂ ಇದೇ ಸಮಾರಂಭಕ್ಕೆ ದೂರದ ಗುಲಬರ್ಗಾದಿಂದ ಆಗಮಿಸಿದ ಗೆಳೆಯ ವಿಠಲ ಕಟ್ಟಿ ಇದ್ದರು. ಇವರೆಲ್ಲರಿಲ್ಲದಿದ್ದರೆ  ಈ ಭೇಟಿ ಆ ಸಭೆಯಲ್ಲಿಯೇ ಪರ್ಯಾವಸಾನವಾಗುವುದಿತ್ತು, ಇವರೆಲ್ಲರೂ  ಸೇರಿ ನನ್ನ ಅನುವಾದದ ಪುಸ್ತಕ ತೋರಿಸುವ ಹಂಬಲದಿಂದ ಜಯಂತಜಿ ಯವರನ್ನು ಕರೆತಂದು ಇದನ್ನು ಒಂದು ಅಪೂರ್ವ ದಿನವನ್ನಾಗಿ ಮಾಡಿದ್ದು ನನಗೆ, ಮನೆಯವರಿಗೆಲ್ಲ ಮರೆಯಲಾರದ ದಿನವಾಗಿ ದಾಖಲಾಯಿತು. ಈ ಕಾರಣಕ್ಕಾಗಿ ಗೆಳೆಯರೆಲ್ಲರಿಗೂ ಅಭಿನಂದಿಸದಿದ್ದರೆ ಹೇಗೆ? ಗೆಳೆಯರೇ ನಿಮಗೊಂದು ಆತ್ಮೀಯ ಸಲಾಮ್.
ನಿಮ್ಮೂರಿಗೆ ಜಯಂತ ಬಂದಾಗ ಹೋಗಿ ಭೇಟಿಯಾಗಿ, ಗೆಳೆತನ ಸಂಪಾದಿಸಿ, ಬಹು ಆತ್ಮೀಯ ಅಪರೂಪದ ಜೀವ ಅವರು.  ನಮ್ಮ ಕನ್ನಡದ ಆಸ್ತಿ, ಜಯಂತ ಕಾಯ್ಕಿಣಿಯವರಿಗೆ ಮತ್ತೊಮ್ಮೆ ಕೃತಜ್ಞತಾಪೂರ್ವ ಸಲಾಮ್ ಹೇಳುತ್ತ, ಇಂತೀ……………….

Rating
No votes yet

Comments

Submitted by nageshamysore Sun, 04/14/2013 - 04:02

ಲಕ್ಷ್ಮಿಕಾಂತರವರಿಗೆ,
ಲೇಖನ ತುಂಬಾ ಆತ್ಮೀಯವಾಗಿ ಬಂದಿದೆ. ತುಂಬಾ ಚೆನ್ನಾಗಿ ನಡೆದದ್ದೆಲ್ಲಾ ನಮ್ಮ ಕಣ್ಣ ಮುಂದೆ ನಿಲ್ಲುವಂತೆ ಕಟ್ಟಿಕೊಟ್ಟಿದ್ದೀರಾ. ಧನ್ಯವಾದಗಳು!
- ನಾಗೇಶ ಮೈಸೂರು.

Submitted by swara kamath Sun, 04/14/2013 - 20:35

ಇಟ್ನಾಳರೆ ನಮಸ್ಕಾರಗಳು. ಜಯಂತ ಕಾಯ್ಕಿಣಿ ಅವರ "ಟೂರಿಂಗ ಟಾಕೀಸ್ " ಪುಸ್ತಕ ಬಿಡುಗಡೆ ಸಮಾರಂಭದ ಸಂಕ್ಷಿಪ್ತ ವರದಿ ,ಹಾಗೂ ನೀವು ನಿಮ್ಮ ಕುಟುಂಬದ ಸದಸ್ಯರು ಕಾಯ್ಕಿಣಿ ಕುಟುಂಬದವರೊಂದಿಗೆ ಹಂಚಿಕೋಂಡ ರಸನಿಮಿಷಗಳ ವರದಿಯು ಸಹ ಓದಲು ಹರ್ಷದಾಯಕ ವಾಗಿತ್ತು, ನಮಗೂ ಸಹ (ಪಾಟೀಲ್ ಸರ್ ಸೇರಿ) ಇಂಥಹ ಒಂದು ಅವಕಾಶ ಒದಗಲಿ ಎಂಬ ಅಪೇಕ್ಷೆಯೊಂದಿಗೆ....ಧನ್ಯವಾದಗಳು................ರಮೇಶ್ ಕಾಮತ್.

Submitted by lpitnal@gmail.com Mon, 04/15/2013 - 07:27

In reply to by swara kamath

ಸ್ವರ ಕಾಮತ ರೇ, ತಮ್ಮ ಹಾರೈಕೆ, ಪಾಟೀಲ ಸರ್ ರೊಂದಿಗೆ ಬೇಗ ಈಡೇರಲಿ ಎಂದು ಆಶಿಸುತ್ತೇನೆ , ಅಥವಾ ಮತ್ತೊಮ್ಮೆ ಧಾರವಾಡಕ್ಕೆ ಜಯಂತಜಿ ಬಂದಾಗ, ಆ ಫಂಕ್ಷನ್ ಬಗ್ಗೆ ಮೊದಲೇ ತಿಳಿಸುವೆ, ತಾವು ನಮ್ಮ ಅತಿಥಿಯಾಗಿ ಬನ್ನಿ. ತಮಗೆ ಪರಿಚಯ ಮಾಡಿಸುವಾ, ಮುಂದಿನದು ಅವರಿಗೆ - ನಿಮಗೆ ಬಿಟ್ಟದ್ದು, ಶಿಮಪೂಜೆಯ ಮಧ್ಯೆ ಕರಡಿ ಏತಕ್ಕೇ!
ತಮ್ಮ ಸ್ಪಂದನೆಗೆ ವಂದನೆಗಳು

Submitted by ಗಣೇಶ Sun, 04/14/2013 - 23:17

>>>ನಿಮ್ಮೂರಿಗೆ ಜಯಂತ ಬಂದಾಗ ಹೋಗಿ ಭೇಟಿಯಾಗಿ, ಗೆಳೆತನ ಸಂಪಾದಿಸಿ, ---ಇಟ್ನಾಳರೆ, ಊರಲ್ಲೇನು... ನಮ್ಮ ಮನೆಗೆ ಜಯಂತ್ ಅನೇಕ ಬಾರಿ ಬಂದಿದ್ದರು. ನೀವಂದಂತೆ ಬಹು ಆತ್ಮೀಯ ಅಪರೂಪದ ಜೀವ ಅವರು. ನಗುವಿನಲ್ಲೇ ಎಲ್ಲರ ಮನ ಸೆಳೆಯುವರು. ಮಾತು..ಕೇಳುತ್ತಾ ಇರುವ ಅನಿಸುವುದು.. ನನಗೆ ಮಾತನಾಡಲು ಅವಕಾಶವೇ ಇಲ್ಲ..ಏಕೆಂದರೆ ಅವರನ್ನು ನಮ್ಮ ಮನೆ ಟಿ.ವಿಯೊಳಗೆ, ನನ್ನ ಮೆಚ್ಚಿನ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದಲ್ಲಿ ನೋಡುತ್ತಿದ್ದುದು. :) http://www.youtube.com/watch?v=1cVqNwzEDY8 . ಇಟ್ನಾಳರೆ, ಈ ಕಾರ್ಯಕ್ರಮದ ವಿವರ ಇಂದಿನ ವಿ.ಕ ಪತ್ರಿಕೆಯಲ್ಲಿ ಬೆಳಗ್ಗೆ ನೋಡಿದ್ದು. ನಮ್ಮ ಸಂಪದದಲ್ಲಿ ನಿನ್ನೆಯೇ ವಿವರ ಹಾಕಿದಿರಿ! ಅವರು ಹೇಳಿದ "ದೀವಾರ್" ಸಿನೆಮಾದ ಜೋಕು ಸೂಪರ್. >>>ನನ್ನ ಗುಲ್ಜಾರರ ಎಪ್ಪತ್ತೈದು ಗೀತೆಗಳ ಅನುವಾದಗಳ ಸಂಗ್ರಹಗಳ ಪುಸ್ತಕವನ್ನು ಅವರ ಕೈಗೆ ಕೊಟ್ಟೆ. ಜಯಂತರು ಈ ಕುರಿತು ತುಂಬ ಉತ್ಸಾಹದಿಂದ ಅದನ್ನು ಪರಿಶೀಲಿಸಿ, ಅವುಗಳನ್ನು ಟ್ಯೂನ್ಗೆ ಕೂಡ ಅಳವಡಿಸಿದ್ದುದನ್ನು ಕೇಳಿ ತುಂಬಾ ಖುಷಿಪಟ್ಟರು.--->ಗುಲ್ಜಾರ್ ಅವರು ಬೆಂಗಳೂರಿಗೆ ಬಂದಿದ್ದಾಗ (http://yourstory.in/2012/12/the-downfall-of-regional-cinema-has-given-rise-to-literature-festivals-gulzar-legendary-poet-lyricist-and-director/ ) ನೀವು ಆವರನ್ನು ಭೇಟಿಯಾಗಬಹುದಿತ್ತು ಅಂತ ನನಗನಿಸಿತ್ತು. ಆದರೆ ಅದಕ್ಕಿಂತ ಇದು ಸರಿಯಾದ ದಾರಿ. ಜಯಂತ್ ಅವರ ಮಾತಿಗೆ ಗುಲ್ಜಾರ್ ಅವರು ಒಪ್ಪಿಯಾರು. ಜಯಂತ್ ಕಾಯ್ಕಿಣಿಯವರು ನಿಮ್ಮೊಂದಿಗೆ ಕಳೆದ ಮಧುರ ನೆನಪನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

Submitted by lpitnal@gmail.com Mon, 04/15/2013 - 07:20

ಹೌದು ಗೆಳೆಯ ಗಣೇಶರೇ, ತಮ್ಮ ಮಾತು ನಿಜ. ಅವರು ನಗುತ್ತ ನಮ್ಮನ್ನೆಲ್ಲ ನಗಿಸುತ್ತ, ಹೃದಯಕ್ಕೆ ಹತ್ತಿರವಾಗುತ್ತಾರೆ. ಜೀವನ ಪ್ರೀತಿಯನ್ನು ಅವರಿಂದ ಕಲಿಯಬೇಕು. ಸುತ್ತಲಿನ ಸಿ ಇ ಟಿ ವಿದ್ಯಾರ್ಥಿಗಳು ನುಗ್ಗಿ ಬಂದಾಗ ವಿಚಲಿತರಾಗದೇ, ಅವರೆಲ್ಲರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡದ್ದು, ಅವರಿಗೆಲ್ಲ ಬಹಳ ಸೀರಿಯಸ್ ಓದಬೇಡಿ, ಸರಿಯಾಗಿ ಓದಿ, ಅಷ್ಟೆ. ಫೇಲ್ ಆಗುವ ಎಂಬ ಭಯ ಬೇಡ. ಲೈಫ್ ಇಷ್ಟಕ್ಕೇ ಎಂಡ್ ಅಲ್ಲ,ಮುಗಿಯುವುದಿಲ್ಲ ಅದು, ನೂರಾರು ಅವೆನ್ಯೂ ಗಳು ತೆರೆದುಕೊಳ್ತವೆ. ನಿಮಗೆ ಶುಭವಾಗಲಿ ಎಂದು ಹೇಳುವಾಗ ಮಕ್ಕಳಿಗೆ ಅವರ ಮಾತುಗಳ ಮನವರಿಕೆ ಆಗುತ್ತಿರುವುದನ್ನು ವಿಸ್ಮಿತನಾಗಿ ನೋಡಿದೆ,.ಧನ್ಯತೆಯಿಂದ ಅವರೆಲ್ಲ ಜಯಂತ ಆಟೋಗ್ರಾಫ್ ಪಡೆದು, ಕಾಲು ಬಿದ್ದು ಆಶೀರ್ವಾದ ಪಡೆಯುವಾಗ, ಜಯಂತಗೆ ಇದು ಮುಜುಗುರ ವೆನಿಸಿದರೂ, ಅವರು ಮಗುವಿನ ನಗುವಿನಲ್ಲಿ, ಅವರ ನಗುವೇ ಹಾಗೇ! ಬಾಲ ಶ್ರೀಕೃಷ್ಣ,.ನ ನಗುವಿನಂತಹುದು.,ನಮ್ಮತ್ತ ತಿರುಗಿ, 'ಅವರಿಗೆ ಬೇಜಾರಾಗಬಾರದಲ್ಲ?' ಎಂದದ್ದು, ನಿಜ, ಅವರು ನಿರಾಕರಿಸಿದ್ದರೆ, ಮಕ್ಕಳಿಗೆ ನಿರಾಸೆಯಾಗುವುದಿತ್ತು, ಎಷ್ಟೊಂದು ಸೂಕ್ಷ್ಮ ಮನಸ್ಸಿನವರು ಎನ್ನುವುದಕ್ಕೆ ಸುಮ್ಮೆನೆ ಈ ಉದಾಹರಣೆ. ತಮ್ಮ ಪ್ರೀತಿ ಪೂರ್ವಕ ಪ್ರತಿಕ್ರಿಯಿಗೆ ವಂದನೆಗಳು.

Submitted by ramvani Mon, 04/15/2013 - 12:40

ನಮಸ್ಕಾರ,

ನಿಮ್ಮ ಅನುಭವ ನಮ್ಮೊಡನೆ ಹಂಚಿಕೊಂಡಿದ್ದಕ್ಕಾಗಿ ವಂದನೆಗಳು. ಕಣ್ಣಿಗೆ ಕಟ್ಟಿದಂತೆ ಬರೆದಿದ್ದೀರಿ.

ಸಿಂಗಪುರದಲ್ಲಿ ಜಯಂತ್ ಮತ್ತು ಅವರ ಪತ್ನಿ ಅವರೊಂದಿಗೆ ಕೆಲ ಘಂಟೆಗಳು ಕಳೆಯುವ ಅವಕಾಶ ನಮಗೆ ದೊರಕಿತ್ತು. ಆ ದಂಪತಿಗಳೀರ್ವರೂ ಆತ್ಮೀಯ ಅಪರೂಪದ ಜೀವ. ಜಯಂತ್ ನಮ್ಮ ಕನ್ನಡದ ಆಸ್ತಿ, ಖಂಡಿತವಾಗಿ.
ವಿಶ್ವಾಸದಿಂದ
ವಾಣಿ ರಾಮದಾಸ್.

Submitted by lpitnal@gmail.com Mon, 04/15/2013 - 13:06

In reply to by ramvani

ವಾಣೀಯವರೆ, ವಂದನೆಗಳು. ತಾವೂ ಕೂಡ ಕ್ಷಣ ಗಳಿಗೆಗಳನ್ನು ಕಾಯ್ಕಿಣಿ ಕುಟುಂಬದ ಜೊತೆಗೆ ಸಿಂಗಪೂರ ದಲ್ಲಿ ಕಳೆದ ವಿಷಯ ತಿಳಿದು ಸಂತೋಷವಾಯಿತು. ಮೊದಲನೇ ಭೇಟಿಯಲ್ಲಿಯೇ ಏಕೆ, ಕೆಲ ನಿಮಿಷ ಸಾಕು, ಜಯಂತ ರ ಹೃದಯವಂತಿಕೆ ಹೊರಹೊಮ್ಮಿ ಬಿಡುತ್ತೆ. ಅದನ್ನೊಂದು ಮರೆಯಲಾರದ ಕ್ಷಣವನ್ನಾಗಿ ಮಾಡಿಬಿಡುತ್ತೆ. ಅವರಲ್ಲೊಂದು ಚುಂಬಕ ಶಕ್ತಿ ಇದೆ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Fri, 04/19/2013 - 17:40

ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ ವಂದನೆಗಳು
' ಜಯಂತ ಕಾಯ್ಕಿಣಿ ಇಂದು ನಮ್ಮೊಂದಿಗೆ ' ಲೇಖನ ಅದ್ಭುತವಾಗಿ ಮೂಡಿ ಬಂದಿದೆ, ಕಾರ್ಯಕ್ರಮದಲ್ಲಿ ನಾವೇ ಭಾಗವಹಿಸಿ ಅಲ್ಲಿಯ ನಿಮ್ಮ ರಸಸ್ವಾದನೆ ನಾವೂ ಅನುಭವಿಸಿ ದಂತಾಯಿತು. ಕಾಮತರ ಲ್ಯಾಪ್ ಟಾಪ್ ನಲ್ಲಿ ಜಯಂತ ಕಾಯ್ಕಿಣಿಯವರ ' ಟೂರಿಂಗ್ ಟಾಕೀಸಿನ ' ಅನೇಕ ಭಾಗಗಳನ್ನು ' ಕೆಂಡ ಸಂಪಿಗೆ ' ಯಲ್ಲಿ ಓದಿದ್ದು ನೆನಪಿಗೆ ಬಂತು. ಕಾರ್ಯಕ್ರಮದ ಅತ್ಯತ್ತಮ ವರದಿ ನೀಡಿದ್ದೀರಿ, ಧನ್ಯವಾದಗಳು.

Submitted by lpitnal@gmail.com Fri, 04/19/2013 - 22:41

In reply to by H A Patil

ಆತ್ಮೀಯ ಪಾಟೀಲರವರಿಗೆ ನಮಸ್ಕಾರ. > ' ಜಯಂತ ಕಾಯ್ಕಿಣಿ ಇಂದು ನಮ್ಮೊಂದಿಗೆ ' ಲೇಖನ ಅದ್ಭುತವಾಗಿ ಮೂಡಿ ಬಂದಿದೆ, ಕಾರ್ಯಕ್ರಮದಲ್ಲಿ ನಾವೇ ಭಾಗವಹಿಸಿ ಅಲ್ಲಿಯ ನಿಮ್ಮ ರಸಸ್ವಾದನೆ ನಾವೂ ಅನುಭವಿಸಿ ದಂತಾಯಿತು> ಕಾರ್ಯಕ್ರಮದ ಬರಹವನ್ನು ಮೆಚ್ಚಿ ಪ್ರೋತ್ಸಾಹಕರ ನುಡಿಯಾಡಿದ, ತಮಗೆ ಧನ್ಯವಾದಗಳು..